ಅಕ್ಷರಜ್ಞಾನ ಇಲ್ಲದ, ಬುದ್ಧಿಮಾಂದ್ಯ, ಮಾತು ಬಾರದ, ಒಂದು ಕಣ್ಣು ಕಾಣದ ಮಹಿಳೆ ಅವಳು. ಬದುಕುವ ಮಾರ್ಗ ಭಿಕ್ಷೆ. ಅವಳ ತಂದೆ-ತಾಯಿ, ಮೂಲ ಯಾವುದೂ ಗೊತ್ತಿಲ್ಲ. ಆದರೆ ಅವಳು ಗರ್ಭಿಣಿಯಾಗಲು ಇದ್ಯಾವುದೂ ಅಡ್ಡಿಯಾಗಲಿಲ್ಲ. ಗರ್ಭಿಣಿಯಾಗಲು ಕಾರಣನಾದ ಕಾಮುಕ ಯಾರೆಂದು ಯಾರಿಗೂ ತಿಳಿಯದು. ರಾತ್ರಿ ಗಸ್ತಿನ ಪೊಲೀಸ್ ಅಧಿಕಾರಿಯೊಬ್ಬರ ಸಹಾಯದಿಂದ ಜಿಲ್ಲಾ ಆಸ್ಪತ್ರೆಗೆ ಸೇರಿದ ಇವಳು 1990–91ರಲ್ಲಿ ಗಂಡು ಮಗುವಿಗೆ ಜನ್ಮ ನೀಡುತ್ತಾಳೆ. ಆ ಮಗುವೆ ಈಗ ಜಾತಿ ಬೇಡುತ್ತಿರುವ ಪರದೇಶಿ ರಘು!
ತಾಯಿ–ಮಗು ಮಂಡ್ಯ ಜಿಲ್ಲಾ ಆಸ್ಪತ್ರೆಯಿಂದ ದಾವಣಗೆರೆ ಸ್ತ್ರೀ ಸ್ವೀಕಾರ ಕೇಂದ್ರಕ್ಕೆ ವರ್ಗಾವಣೆ. ಅಲ್ಲಿಂದ ಬಳ್ಳಾರಿಯ ಅಂತಹುದೇ ಕೇಂದ್ರಕ್ಕೆ, ತದನಂತರ ಕಲಬುರ್ಗಿಯಲ್ಲಿರುವ ರಾಜ್ಯ ಮಹಿಳಾ ನಿಲಯಕ್ಕೆ ವರ್ಗಾವಣೆ. 1ನೇ ತರಗತಿಯಿಂದ 4ರವರೆಗೆ ರಘು ವಿದ್ಯಾಭ್ಯಾಸ ಬಳ್ಳಾರಿಯ ದೇವಿನಗರದಲ್ಲಿರುವ ಸರ್ಕಾರಿ ಬಾಲ ಮಂದಿರದಲ್ಲಿ. ನಂತರ ಬಳ್ಳಾರಿಯ ಪಾರ್ವತಿ ನಗರದಲ್ಲಿರುವ ಸರ್ಕಾರಿ ಶಾಲೆಯಲ್ಲಿ 5ನೇ ತರಗತಿ ವಿದ್ಯಾಭ್ಯಾಸ. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಸಹಾಯ ಹಸ್ತದಿಂದ ಸರ್ಕಾರಿ ಬಾಲಕರ ಬಾಲಮಂದಿರದಲ್ಲಿ 6 ಮತ್ತು 7ನೇ ತರಗತಿಯವರೆಗೆ ಅವಕಾಶವಿದ್ದು, ಅದನ್ನು ಮುಗಿಸುತ್ತಾನೆ. 8, 9ನೇ ತರಗತಿಗಳನ್ನು ಬಳ್ಳಾರಿಯ ಕೌಲ್ ಬಜಾರ್ ರೇಡಿಯೊ ಪಾರ್ಕ್ ಸರ್ಕಾರಿ ಪ್ರೌಢಶಾಲೆಯಲ್ಲಿ ಮುಗಿಸಿದ. ಅಲ್ಲಿಗೆ ರಘು ವಿದ್ಯಾಭ್ಯಾಸ ಮೊಟಕು. ಆಗ ಈತನ ವಯಸ್ಸು 16. ಶಾಲಾ ದಾಖಲಾತಿಗಳಲ್ಲಿ ‘ಹಿಂದೂ’ ಎಂದಷ್ಟೇ ನಮೂದಾಗಿದೆ. ಜಾತಿ ಪದ್ಧತಿಯ ಮೂಲ ಸಾರಾಂಶ ಪ್ರತ್ಯೇಕತೆ, ಸಾಮಾಜಿಕ ಶ್ರೇಣೀಕರಣ. ಜಾತಿಯ ಅರಿವು ಮೂಡುವುದು ಭೇದ-ಭಾವ ಅಥವಾ ಅಸ್ಪೃಶ್ಯತೆಯ ಮುಖಾಂತರ.
ತನಗೆ ಜಾತಿ ಇಲ್ಲ, ಸಂಬಂಧಪಟ್ಟ ಅಧಿಕಾರಿಗಳು ಜಾತಿ ಪ್ರಮಾಣ ಪತ್ರ ನೀಡುತ್ತಿಲ್ಲ ಎನ್ನುವುದು ಈತನ ಅಳಲು. ಅದಿಲ್ಲದೆ ಸರ್ಕಾರದ ಸೌಲಭ್ಯ ಮತ್ತು ಶಿಕ್ಷಣ ಯಾವುದೂ ಸಿಕ್ಕುವುದಿಲ್ಲ. ಇಲ್ಲಿ ಅರ್ಥವಾಗುತ್ತೆ ಜಾತಿ ವ್ಯವಸ್ಥೆಯ ಆಳ, ಲಾಭ-ನಷ್ಟ. ಇದರಿಂದ ಜಾತಿಯ ಸಂಕೀರ್ಣತೆ ಹಾಗೂ ಸೂಕ್ಷ್ಮತೆ ಎಷ್ಟೆಂಬುದು ಯಾರಿಗೂ ಅರ್ಥವಾಗದೇ ಇರದು.
ರಘು ತನ್ನ ಜಾತಿಯನ್ನು ಹುಡುಕುತ್ತಿರುವುದು ತಪ್ಪು ಎಂದು ಹೇಳುವುದಿಲ್ಲ. ಅದರಿಂದ ಜಾತಿ ವ್ಯವಸ್ಥೆ ಇನ್ನಷ್ಟು ಭದ್ರವಾಗುತ್ತದೆ ಎಂತಲೂ ಒಪ್ಪುವುದಿಲ್ಲ. ಕಾರಣ, ರಘು ವಿದ್ಯಾಭ್ಯಾಸ ಹಾಗೂ ಬದುಕುವ ದಾರಿಗೆ ಜಾತಿ ಬೇಕೇ ಬೇಕು. ಅದಕ್ಕೆ ಲಭ್ಯವಾಗುವ ಮೀಸಲಾತಿ ಸೌಲಭ್ಯಗಳೂ ಬೇಕು. ಸಮಾಜದಲ್ಲಿ ಜಾತಿ ಜಾತಿಗಳ ಮಧ್ಯೆ ಸಮಾನತೆ ಬರುವವರೆಗೆ ಇದು ಮುಂದುವರಿಯಬೇಕು.
ಅಂದಹಾಗೆ, ರಘುಗೆ ಬೇಕಾದ ಜಾತಿ ಯಾವುದು? ಆತನ ಮನವಿಯ ಪ್ರಕಾರ ಆದಿ ಕರ್ನಾಟಕ ಅಥವಾ ಆದಿ ದ್ರಾವಿಡ. ಎರಡೂ ಪರಿಶಿಷ್ಟ ಜಾತಿಗೆ ಸೇರಿವೆ. ಮನವಿಗೆ ಸಕಾರಣವೂ ಇದೆ. ಸಂವಿಧಾನದ ಅಡಿ 1950ರಲ್ಲಿ ಪ್ರದತ್ತವಾದ ಅಧಿಕಾರ ಚಲಾಯಿಸಿ ರಾಷ್ಟ್ರಪತಿ ಪ್ರತಿ ರಾಜ್ಯಕ್ಕೆ ಪ್ರತ್ಯೇಕವಾದ ಪರಿಶಿಷ್ಟ ಜಾತಿಗಳ ಪಟ್ಟಿಯನ್ನು ನಿರ್ಧರಿಸಿ ಪ್ರಕಟಿಸುತ್ತಾರೆ. ಅದು ಅಂತಿಮ. 1950ರ ಆದೇಶದ ಉಪ ಕಲಂ ಮೂರರಲ್ಲಿ ಹೇಳುವುದೇನೆಂದರೆ ಪರಿಶಿಷ್ಟ ಜಾತಿಯವನಾಗಬೇಕಾದರೆ, ಹಿಂದೂ ಅಥವಾ ಸಿಖ್ (1990ರಿಂದ ಬೌದ್ಧ ಧರ್ಮವೂ ಸೇರಿದೆ) ಧರ್ಮವನ್ನು ಬಹಿರಂಗವಾಗಿ ಒಪ್ಪಿಕೊಂಡಿರಬೇಕಷ್ಟೆ, ಹುಟ್ಟಿನಿಂದ ಹಿಂದೂ, ಸಿಖ್, ಬೌದ್ಧ ಧರ್ಮದವನಾಗಬೇಕಿಲ್ಲ.
ರಘುವಿನ ಧರ್ಮ ಹಿಂದೂ ಎಂಬ ಬಗ್ಗೆ ಯಾವುದೇ ಭಿನ್ನಾಭಿಪ್ರಾಯಗಳಿಲ್ಲ. ವೈ.ಮೋಹನ್ ರಾವು ಅವರ ಮೊಕದ್ದಮೆಯಲ್ಲಿ (1976) ಪರಿಶಿಷ್ಟ ಜಾತಿಗೆ ಸೇರಲು ಬೇಕಾಗಿರುವುದು ಪರಿಶಿಷ್ಟ ಜಾತಿ ಸಮೂಹದ ಒಪ್ಪಿಗೆ ಮಾತ್ರ ಎಂದಿದೆ ಸರ್ವೋಚ್ಚ ನ್ಯಾಯಾಲಯ. ಒಬ್ಬ ವ್ಯಕ್ತಿ ಯಾವುದೇ ಜಾತಿ ಸಮೂಹಕ್ಕೆ ಸೇರಲು ತೀರ್ಮಾನಿಸುವ ಸಂಪೂರ್ಣ ನಿರ್ಣಯ ಆ ಜಾತಿ ಸಮೂಹದ್ದೇ. ಈ ವಿಷಯಕ್ಕೆ ಸಂಬಂಧಪಟ್ಟಂತೆ ಜಾತಿ ಸಮೂಹವೇ ಸರ್ವೋಚ್ಚ ಎಂದು 1939ರಲ್ಲಿ ಗೂನ ದುರ್ಗಾಪ್ರಸಾದ್ ಮೊಕದ್ದಮೆಯಲ್ಲಿ ಕೋರ್ಟ್ ಹೇಳಿತ್ತು. ಈ ತೀರ್ಪನ್ನು ಮೋಹನ್ ರಾವು ಪ್ರಕರಣದಲ್ಲಿ ಉಲ್ಲೇಖಿಸಿ ಅನುಕರಿಸಲಾಗಿದೆ.
ಈ ಅಂಶಗಳನ್ನು ಗಮನಿಸಿ ಸರ್ವೋಚ್ಚ ನ್ಯಾಯಾಲಯ ವಲ್ಸಮ್ಮ ಪಾಲ್ ಪ್ರಕರಣದಲ್ಲಿ (1996) ತೀರ್ಪು ನೀಡಿರುತ್ತದೆ. ಈ ತೀರ್ಪು ಸರ್ವೋಚ್ಚ ನ್ಯಾಯಾಲಯದ ಮಂಡಲ್ ಪ್ರಕರಣದ ತೀರ್ಪನ್ನು (1992) ಅನುಕರಿಸಿದೆ. ಮಂಡಲ್ ಪ್ರಕರಣದಲ್ಲಿ, ‘ಜಾತಿ ಹುಟ್ಟಿನಿಂದಲೇ ಬರುತ್ತದೆ, ಜಾತಿ ಸದಸ್ಯತ್ವ ಆನುವಂಶಿಕ’ ಎಂದು ಹೇಳಲಾಗಿದೆ. ಹೀಗಿದ್ದೂ, ಮಂಡಲ್ ಪ್ರಕರಣದಲ್ಲಿ ಹೇಳಿದ ಮೋಹನ್ ರಾವು ತೀರ್ಪನ್ನು ನೇರವಾಗಿ ಅಲ್ಲಗಳೆದಿಲ್ಲ. ಏನೇ ಇರಲಿ, ಮಂಡಲ್ ತೀರ್ಪು ಮೋಹನ್ ರಾವು ತೀರ್ಪಿನ ನಂತರದ ತೀರ್ಪಾಗಿರುವುದರಿಂದ, ಮಂಡಲ್ ತೀರ್ಪನ್ನೇ ಅನುಸರಿಸಬೇಕಾಗುತ್ತದೆ.
ರಘುವಿಗೆ ಪರಿಶಿಷ್ಟ ಜಾತಿಗೆ ಪ್ರವೇಶ ಸಿಗದಿದ್ದಲ್ಲಿ ಯಾವ ಜಾತಿಗೂ ಸೇರಿಸಲಾಗುವುದಿಲ್ಲ. ಅಷ್ಟೇ ಅಲ್ಲ, ಜಾತಿಯನ್ನಾಧರಿಸಿದ ಯಾವ ಮೀಸಲಾತಿ ಪ್ರವರ್ಗದಲ್ಲೂ ಸೇರಿಸಿ ಮೀಸಲಾತಿ ನೀಡಲಾಗದು. ಹಾಗಾದಲ್ಲಿ ನಿಜವಾಗಿಯೂ ಜಾತಿ ಗುರುತಿಸಲಾಗದ ಹಿಂದುಳಿದ ರಘು ಅಂತಹವರಿಗೆ ಕಾನೂನು ಚೌಕಟ್ಟಿನಲ್ಲಿ ಪರಿಹಾರವಿಲ್ಲವೇ?
ಜಾತಿ, ಉದ್ಯೋಗ, ಬಡತನ, ಅಸಮಾನತೆ ಇವುಗಳಿಗೆ ಬಹಳ ಹತ್ತಿರ ಸಂಬಂಧವಿರುವುದು ನಿಜ. ಈ ಹುಡುಗನ ಜೀವನದ ಹಿನ್ನೆಲೆ ಲಭ್ಯವಾಗಿರುವ ದಾಖಲೆಗಳ ಮೂಲಕ ನೋಡಿದರೆ ಎಲ್ಲಾ ಸಾಮಾಜಿಕ ಕ್ಷೇತ್ರಗಳಲ್ಲೂ ಹಿಂದುಳಿದಿದ್ದಾನೆ. ಆದರೆ ಅದಕ್ಕೆ ಆತನ ಜಾತಿ ಕಾರಣವಲ್ಲ. ಇಂತಹವರಿಗೆ ವಿಶೇಷವಾದ ಮೀಸಲಾತಿ ಸೌಲಭ್ಯಗಳನ್ನು ಸಂವಿಧಾನದ ಅನುಚ್ಛೇದ 14, 15(1) ಮತ್ತು 16(1)ರ ಅಡಿಯಲ್ಲಿ ದೊರಕಿಸಿಕೊಡಬಹುದು. ಉದಾ: ಅಂಗವಿಕಲರು, ತೃತೀಯಲಿಂಗ ಸಮುದಾಯ, ಮಾಜಿ ಸೈನಿಕರಿಗೆ ಜಾತಿ ಕಾರಣವಲ್ಲದೆ ಮೀಸಲಾತಿ ಇದೆ. ಇಲ್ಲಿ ಗಮನಿಸಬೇಕಾದ ಮತ್ತೊಂದು ಅಂಶವೆಂದರೆ, ವ್ಯಕ್ತಿಗತ ಮೀಸಲಾತಿಗೆ ಸಂವಿಧಾನದಲ್ಲಿ ಅವಕಾಶವಿಲ್ಲ. ಅದು ವರ್ಗ ಆಧಾರಿತವಾಗಿರಬೇಕು. ಇಂತಹ ಸಂದರ್ಭಗಳಿಗೆ ಡಾ. ಅಂಬೇಡ್ಕರ್ ನೀಡಿರುವ ಎಚ್ಚರಿಕೆಯ ಮಾತುಗಳೆಂದರೆ, ‘ಈ ವಿಶೇಷ ಸಂದರ್ಭದ ಮೀಸಲಾತಿಗಳು ಸಾಂವಿಧಾನಿಕ ಇತರೇ ಮೀಸಲಾತಿಗಳನ್ನೇ ತಿಂದು ಹಾಕಬಾರದು’ ಎಂದು.
ಈ ಹುಡುಗ ಮುಂದುವರಿದ ಜಾತಿಯಲ್ಲಿ ಹುಟ್ಟಿದ್ದಾನೆ ಎಂಬುದಕ್ಕೆ ದಾಖಲೆಗಳಿಲ್ಲ. ದಾಖಲೆಗಳ ಪ್ರಕಾರ, ಕೊಳೆಗೇರಿಯಲ್ಲಿ ಬೇಡಿ ಬದುಕಿದ ಮಹಿಳೆಗೆ ಮಗನಾಗಿ ಹುಟ್ಟಿದ ಈ ಹುಡುಗ ತನಗೆ ಆದಿ ಕರ್ನಾಟಕ– ಆದಿ ದ್ರಾವಿಡ ಜಾತಿ ಪ್ರಮಾಣ ಪತ್ರ ಬೇಕು ಎಂದು ಒತ್ತಾಯಿಸುತ್ತಿದ್ದಾನೆ. ಪರಿಶಿಷ್ಟ ಜಾತಿಯ ಮೀಸಲಾತಿಗೋಸ್ಕರವೂ ಇರಬಹುದು ಎಂದು ಅನುಮಾನ ಕೆಲವರಿಗಾದರೂ ಬರುವುದು ಸಹಜ. ಯಾಕೆಂದರೆ ಸಂವಿಧಾನದ ಅಡಿ ಪರಿಶಿಷ್ಟ ಜಾತಿಗೆ ವಿದ್ಯಾಭ್ಯಾಸ, ಉದ್ಯೋಗ, ರಾಜಕೀಯ ಮೀಸಲಾತಿಗಳಿವೆ. ಈವರೆಗಿನ ವರದಿಗಳ ಆಧಾರದ ಮೇಲೆ ಆತನ ಹಿನ್ನೆಲೆಯನ್ನು ಕಾಣುವ ಪ್ರಯತ್ನವಾಗಬೇಕು. ಜೊತೆಗೆ ಈ ಹುಡುಗನಿಗೆ ವಿದ್ಯಾಭ್ಯಾಸ, ಜೀವನಕ್ಕೆ ಒಂದು ಉದ್ಯೋಗಕ್ಕಾದರೂ ಮೀಸಲಾತಿಯ ಅವಶ್ಯಕತೆ ಇದೆ. ಇಂತಹ ನಿರ್ಗತಿಕ ನಿರಾಶ್ರಿತರಿಗೆ ಸ್ವತಂತ್ರವಾಗಿ ಬದುಕಲು ವಿದ್ಯಾಭ್ಯಾಸ ಉತ್ತಮ ಮಾರ್ಗ. ವಿದ್ಯಾಭ್ಯಾಸವಿಲ್ಲದೆ ಎಷ್ಟೇ ಭದ್ರವಾಗಿದ್ದರೂ, ಜೀವನ ಅತಂತ್ರವೇ ಸರಿ.
-ಲೇಖಕ ಕರ್ನಾಟಕ ರಾಜ್ಯ ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.