ಪ್ರಿಯ ಡಾ. ಕಸ್ತೂರಿರಂಗನ್,
ಪಶ್ಚಿಮಘಟ್ಟಗಳ ಅಧ್ಯಯನದ `ಉನ್ನತ ಮಟ್ಟದ ಕಾರ್ಯತಂಡ'ದ ವರದಿಯನ್ನು ತಯಾರಿಸುವಲ್ಲಿ ನೀವೂ ಭಾಗಿಯಾಗಿದ್ದೀರಿ ಎಂದರೆ ನಂಬಲು ಸಾಧ್ಯವಾಗುತ್ತಿಲ್ಲ. ಆದರೆ ವಾಸ್ತವ ಅದೆಷ್ಟೊ ಬಾರಿ ನಾವು ಊಹಿಸಿದ್ದಕ್ಕಿಂತ ವಿಲಕ್ಷಣದ್ದಾಗಿರುತ್ತದೆ. ಅದನ್ನೇ ಹೇಳಿಲ್ಲವೆ ಜೆ.ಬಿ.ಎಸ್ ಹಾಲ್ಡೇನ್?
ನಾವು ಸಲ್ಲಿಸಿದ್ದ ವರದಿಯಲ್ಲಿ ಪಶ್ಚಿಮ ಘಟ್ಟಗಳನ್ನು ಮೂರು ಶ್ರೇಣಿಗಳನ್ನಾಗಿ ವಿಂಗಡಿಸಿದ್ದೆವು. ಪರಿಸರದ ದೃಷ್ಟಿಯಿಂದ ತೀರ ಸೂಕ್ಷ್ಮವಾದ ಪ್ರದೇಶಗಳನ್ನು ಸಂರಕ್ಷಿಸುವುದು ಹೇಗೆಂಬ ಬಗ್ಗೆ ಸ್ಥಳೀಯ ಹುಲ್ಲುಬೇರಿನ ಮಟ್ಟದ ಜನರೊಡನೆ ಸಮಾಲೋಚಿಸಿ ಹೆಜ್ಜೆ ಇಡೋಣವೆಂದು ನಾವು ಸಲಹೆ ಮಾಡಿದ್ದೆವು. ಈ ವಿಂಗಡನೆಯನ್ನು ನೀವು ತಳ್ಳಿ ಹಾಕಿದ್ದೀರಿ. ಅದರ ಬದಲಿಗೆ ಇಡೀ ಘಟ್ಟ ಪ್ರದೇಶದ ಮೂರನೆಯ ಒಂದು ಭಾಗ ಮಾತ್ರ ಸೂಕ್ಷ್ಮ ಪ್ರದೇಶವೆಂದು ಹೇಳಿ, ಇನ್ನುಳಿದ ಭಾಗವನ್ನು ಜನರ ಓಡಾಟವಿರುವ ಸ್ಥಳಗಳನ್ನೆಲ್ಲ `ಸಾಂಸ್ಕೃತಿಕ ಭೂಚಿತ್ರಣ'ವೆಂದು ಹೆಸರಿಸಿ ಅದನ್ನೆಲ್ಲ ಅಭಿವೃದ್ಧಿಗೆ ಬಳಸಬಹುದೆಂದು ಶಿಫಾರಸು ಮಾಡಿದ್ದೀರಿ. ಅಭಿವೃದ್ಧಿ ಎಂದರೆ ಗೋವಾದಲ್ಲಿ ಕಂಡಂಥ 35 ಸಾವಿರ ಕೋಟಿ ರೂಪಾಯಿಗಳ ಕಾನೂನುಬಾಹಿರ ಗಣಿ ಅಗೆತದ ಹಗರಣವೂ ಆಗಬಹುದು. ಅದರ ಪರಿಣಾಮ ಏನಾಗುತ್ತದೆ ಗೊತ್ತೆ? ಜೀವಜಾಲವೆಲ್ಲ ಧ್ವಂಸವಾಗಿ ಮರುಭೂಮಿಯಂತಾಗಿ ಅದರ ನಡುವೆ ಅಲ್ಲಲ್ಲಿ ಅಭಯಾರಣ್ಯಗಳ ಓಯಸಿಸ್ ಮಾತ್ರ ಕಾಣುತ್ತದೆ. ಅರಣ್ಯ ಪ್ರದೇಶಗಳು ಹೀಗೆ ಛಿದ್ರವಾಗುತ್ತಿದ್ದರೆ ಮರುಭೂಮಿಗಳು ಓಯಸಿಸ್‌ಗಳನ್ನೂ ನುಂಗಿಹಾಕುತ್ತವೆ ಎಂದು ನಾವು ಇಕಾಲಜಿ ಪಾಠಗಳಲ್ಲಿ ಓದಿದ್ದೆವು. ವನ್ಯಜೀವಿಗಳ ಆವಾಸಸ್ಥಾನಗಳು ಒಂದಕ್ಕೊಂದು ಜೋಡಿಸಿದಂತಿರಬೇಕಾದುದು ಮುಖ್ಯ. ಹಾಗೆಯೇ ವನ್ಯಜೀವಿಗಳ ದೀರ್ಘಾವಧಿ ಸಂರಕ್ಷಣೆಗೆ ಆಶಿಸುವುದಾದರೆ ಅವುಗಳೊಂದಿಗೆ ಮನುಷ್ಯರ ಮಿತ್ರಭಾವದ ಸಂಬಂಧವಿರಬೇಕಾದುದೂ ಅಷ್ಟೇ ಮುಖ್ಯ. ನಮ್ಮ ವರದಿಯಲ್ಲಿ ನಾವು ಇದನ್ನೇ ಒತ್ತಿ ಹೇಳಿದ್ದೆವು.
ಪಶ್ಚಿಮಘಟ್ಟಗಳಲ್ಲಿ ವನ್ಯ ಜೀವಿವೈವಿಧ್ಯಕ್ಕಿಂತ ಹೆಚ್ಚಾಗಿ ಜಲ ಜೀವಿವೈವಿಧ್ಯಕ್ಕೆ ಭಾರಿ ಕಂಟಕ ಬಂದೊದಗಿದೆ. ನದಿ ಜಲಾಶಯಗಳೆಲ್ಲ ನೀವು ಹೇಳುವ `ಸಾಂಸ್ಕೃತಿಕ ಭೂಚಿತ್ರಣ'ದಲ್ಲೇ ಬರುತ್ತವೆ. ಬಹಳಷ್ಟು ಶ್ರಮಿಕರು ತಮ್ಮ ಬದುಕಿನ ಆಸರೆಗೆ ಹಾಗೂ ಊಟಕ್ಕೆ ಅಲ್ಲಿನ ಜಲಜೀವಿವೈವಿಧ್ಯವನ್ನೇ ನಂಬಿಕೊಂಡಿದ್ದಾರೆ. ಇವೆಲ್ಲ ಹೇಗೆ ಧ್ವಂಸವಾಗುತ್ತವೆಂದು ತೋರಿಸಲೆಂದೇ ನಾವು ಮಹಾರಾಷ್ಟ್ರದ ರತ್ನಾಗಿರಿ ಜಿಲ್ಲೆಯಲ್ಲಿ ಸ್ಥಾಪಿಸಲಾದ ಲೋಟೆ ಕೆಮಿಕಲ್ ಉದ್ಯಮ ಸಂಕೀರ್ಣದ ಉದಾಹರಣೆಯನ್ನು ನಮ್ಮ ವರದಿಯಲ್ಲಿ ಕೊಟ್ಟಿದ್ದೆವು. ಅಲ್ಲಿ ಜಲಮಾಲಿನ್ಯ ಮಟ್ಟ ಎಲ್ಲ ಕಾನೂನುಮಿತಿಗಳನ್ನು ಮೀರಿ ಹೆಚ್ಚಾಗಿದ್ದು, ಮೀನುಗಾರಿಕೆಯಿಂದ ಬದುಕುತ್ತಿದ್ದ 20 ಸಾವಿರ ಜನರು ಕೆಲಸ ಕಳೆದುಕೊಂಡಿದ್ದಾರೆ. ಉದ್ಯಮ ಸಂಕೀರ್ಣದಲ್ಲಿ 11 ಸಾವಿರ ಜನರು ಮಾತ್ರ ಉದ್ಯೋಗ ಪಡೆದಿದ್ದಾರೆ. ಹೀಗಿದ್ದರೂ ಅಲ್ಲಿನ ಸರ್ಕಾರ ಇನ್ನಷ್ಟು ಮತ್ತಷ್ಟು ಉದ್ಯಮಗಳನ್ನು ಅಲ್ಲಿಯೇ ನೆಲೆಗೊಳಿಸುವ ಹುನ್ನಾರ ನಡೆಸಿದೆ. ಯಾವ ಪ್ರದೇಶದಲ್ಲಿ ಎಷ್ಟು ಉದ್ಯಮಗಳಿರಬೇಕೆಂಬ ತನ್ನದೇ ಸೂತ್ರವನ್ನು ಅದುಮಿಟ್ಟು ಹೊಸ ಉದ್ಯಮಗಳಿಗೆ ಜಾಗ ಕಲ್ಪಿಸುತ್ತಿದೆ.
ಆರ್ಥಿಕ ನಿರ್ಧಾರ ಕೈಗೊಳ್ಳುವಲ್ಲಿ ಸ್ಥಳೀಯ ಜನರ ಪಾತ್ರ ಇರಬೇಕಿಲ್ಲವೆಂದು ಬರೆದು ನೀವೊಂದು ಆಘಾತಕಾರಿ ಧೋರಣೆಯನ್ನು ಪ್ರದರ್ಶಿಸಿದ್ದೀರಿ. ಪ್ರಜೆಗಳಿಗೆ ತಮ್ಮ ಭವಿಷ್ಯವನ್ನು ತಾವೇ ನಿರ್ಧರಿಸುವ ಹಕ್ಕನ್ನು ಸಂವಿಧಾನವೇ ನೀಡಿದೆ. ಲೋಟೆ ಕಾರ್ಖಾನೆಗಳಿಂದ ಉಂಟಾದ ಮಾಲಿನ್ಯದ ನಿವಾರಣೆಗೆ ಸರ್ಕಾರ ಯಾವ ಕ್ರಮವನ್ನೂ ಕೈಗೊಂಡಿಲ್ಲ. ಆದರೆ 2007-09ರ ನಡುವಣ 600 ದಿನಗಳಲ್ಲಿ ಜಲಮಾಲಿನ್ಯದ ವಿರುದ್ಧ ಸ್ಥಳೀಯ ಜನರು 180 ದಿನ ನ್ಯಾಯಬದ್ಧ ಹಾಗೂ ಶಾಂತಿಯುತ ಪ್ರತಿಭಟನೆ ಮಾಡುತ್ತಿದ್ದಾಗ ಅದನ್ನು ಹತ್ತಿಕ್ಕಲೆಂದು ಸರ್ಕಾರ ಪೊಲೀಸ್ ಬಲವನ್ನು ಬಳಸಿಕೊಂಡಿತು.
ಭಾರತದ ಸಾಂಸ್ಕೃತಿಕ ಭೂಚಿತ್ರಣಗಳಲ್ಲೂ ಜೀವಿವೈವಿಧ್ಯದ ಅನೇಕ ಘಟಕಗಳ ಮಹತ್ವದ ಸಂಗತಿಗಳಿವೆ. ಪಶ್ಚಿಮ ಘಟ್ಟಗಳನ್ನು ಬಿಟ್ಟರೆ ಜಗತ್ತಿನ ಬೇರೆಲ್ಲೂ ಕಾಣಸಿಗದ ಸಿಂಗಳೀಕ (ಸಿಂಹಬಾಲದ ಕಪಿ)ಗಳ ಶೇಕಡಾ 75 ಕುಟುಂಬಗಳು ಚಹತೋಟಗಳಲ್ಲೇ ವಾಸಿಸುತ್ತಿವೆ. ನಾನಿರುವ ಪುಣೆಯ ನಿವಾಸದ ಸುತ್ತ ಅಶ್ವತ್ಥ, ಆಲ, ಅತ್ತಿ, ಗೋಣಿ ವೃಕ್ಷಗಳಿವೆ. `ಫೈಕಸ್' ಕುಟುಂಬಕ್ಕೆ ಸೇರಿದ ಇವು ಆಧುನಿಕ ಜೀವಜಾಲ ವಿಜ್ಞಾನದಲ್ಲಿ `ಕೀಲಿಕಲ್ಲಿನ ಪ್ರಭೇದ' ಎಂತಲೇ ಮಹತ್ವ ಪಡೆದಿವೆ. ಏಕೆಂದರೆ ಇವನ್ನು ಬೀಳಿಸಿದರೆ ಈ ಮರಗಳನ್ನೇ ಆಧರಿಸಿದ ಅಸಂಖ್ಯ ಇತರ ಜೀವಿಗಳೂ ನಾಶವಾಗುತ್ತವೆ. ನಾನಿರುವ ಬಡಾವಣೆಯಲ್ಲಿ ಸಂಜೆಯ ವೇಳೆ ನವಿಲುಗಳ ಕೂಗನ್ನು ಕೇಳಬಹುದು; ಛಾವಣಿ ಏರಿದರೆ ಅವುಗಳ ನಾಟ್ಯವನ್ನೂ ನೋಡಬಹುದು. ನಿಸರ್ಗವನ್ನು ಗೌರವಿಸುವ ಭಾರತದ ಬಲವಾದ ಸಾಂಸ್ಕೃತಿಕ ಪರಂಪರೆಯಲ್ಲಿ ಬೆಳೆದು ಬಂದ ನಮ್ಮ ಜನಸಾಮಾನ್ಯರು ಇವನ್ನೆಲ್ಲ ಪೂಜ್ಯಭಾವದಿಂದ ಸಂರಕ್ಷಿಸುತ್ತಿರುವುದರಿಂದಲೇ ನಮ್ಮಲ್ಲಿ ದೇವರ ಕಾಡುಗಳು, ಆಲ-ಅಶ್ವತ್ಥ, ಕಪಿ ಮತ್ತು ನವಿಲುಗಳು ಇಂದಿಗೂ ಸುರಕ್ಷಿತವಾಗಿವೆ.
ಇವೆಲ್ಲವೂ ಹೋದರೆ ಹೋಗಲಿ ಎಂಬ ಧೋರಣೆ ಬೆಳೆಯುತ್ತಿದೆಯೇನೊ. ಬ್ರಿಟಿಷ್ ವಸಾಹತುಶಾಹಿಯ ಕಂಠೋಕ್ತ ದಲ್ಲಾಳಿ ಎನಿಸಿದ್ದ ಫ್ರಾನ್ಸಿಸ್ ಬುಕಾನನ್ ನನಗೆ ನೆನಪಾಗುತ್ತಾನೆ. ಈಸ್ಟ್ ಇಂಡಿಯಾ ಕಂಪೆನಿಗೆ ತನ್ನಹಕ್ಕಿನದಾಗಿರುವ ಗಿಡಮರಗಳು ಸಿಗದಂತಾಗಲೆಂಬ ಸಂಚಿನಲ್ಲೇ ಭಾರತೀಯರು `ದೇವರ ಕಾಡು'ಗಳನ್ನು ಸೃಷ್ಟಿ ಮಾಡಿದ್ದಾರೆಂದು 1801ರಲ್ಲಿ ಆತ ಬರೆದಿದ್ದಾನೆ.
ನಾವೀಗ ಬ್ರಿಟಿಷರಿಗಿಂತ ಬಲವಾದ ಬ್ರಿಟಿಷರಾಗಿದ್ದೇವೆಂದು ನನಗೆ ಅನ್ನಿಸುತ್ತಿದೆ. ಭೂಮಂಡಲೀಕರಣಗೊಂಡ ಜಗತ್ತಿನ ಧನಿಕರು ಮತ್ತು ಶಕ್ತಿಶಾಲಿಗಳು ಕಾನೂನನ್ನು ಗೌರವಿಸದ, ಉದ್ಯೋಗಗಳನ್ನು ಸೃಷ್ಟಿಸದ ತಮ್ಮ ಆರ್ಥಿಕ ಅಭಿವೃದ್ಧಿಯ ಧಾವಂತದಲ್ಲಿ ಮನಸೋಇಚ್ಛೆ ಇಲ್ಲಿನ ಭೂಮಿಯನ್ನೂ ನೀರನ್ನೂ ಹೀರಿ ಕೊಳಕೆಬ್ಬಿಸಬಂದಾಗ ಇಲ್ಲಿನ ಸಾಂಸ್ಕೃತಿಕ ಭೂಪ್ರದೇಶದಲ್ಲಿರುವ ಜನರ ನಿಸರ್ಗಪ್ರೀತಿಯ ಸಂಕೇತಗಳೆಲ್ಲ ಒಂದು ರೀತಿಯ ಸಂಚೆಂದೇ ಹೇಳಲುಹೊರಟಿದ್ದೇವೆ. ವಾಸ್ತವ ನಿಜಕ್ಕೂ ನಾವು ಊಹಿಸಿದ್ದಕ್ಕಿಂತ ವಿಲಕ್ಷಣದ್ದಾಗಿರುತ್ತದೆ!
ಇತಿ ನಿಮ್ಮ,
ಮಾಧವ ಗಾಡ್ಗೀಳ್
(ಪಶ್ಚಿಮಘಟ್ಟ ಸಂರಕ್ಷಣೆಗೆಂದು ನಿಯೋಜಿತವಾಗಿದ್ದ ಮಾಧವ ಗಾಡ್ಗೀಳ್ ಸಮಿತಿಯ ವರದಿಯನ್ನು ಕೇಂದ್ರ ಸರ್ಕಾರ ಹತ್ತಿಕ್ಕಿ ಅದರ ಬದಲಿಗೆ ಕಸ್ತೂರಿರಂಗನ್ ಸಮಿತಿಯ ವರದಿಯನ್ನು ಮುಂದಿಟ್ಟಿದೆ. ಈ ವಿವಾದದ ಹಿನ್ನೆಲೆ ಕುರಿತು ನಾಗೇಶ ಹೆಗಡೆ ಬರೆದ ಲೇಖನ ನಿನ್ನೆ `ಪ್ರಜಾವಾಣಿ'ಯಲ್ಲಿ ಪ್ರಕಟವಾಗಿದೆ -
ಸಂ )
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.