ADVERTISEMENT

ಭಗವದ್ಗೀತೆ: ಪರಕೀಯ ನಿರೂಪಣೆಗಳ ಗೊಂದಲ

ಚರ್ಚೆ

ಡಾ.ಪ್ರವೀಣ್ ಟಿ.ಎಲ್., ಶಿವಮೊಗ್ಗ
Published 24 ಡಿಸೆಂಬರ್ 2014, 19:30 IST
Last Updated 24 ಡಿಸೆಂಬರ್ 2014, 19:30 IST

ಭಗವದ್ಗೀತೆಯು ಸದಾ ಚರ್ಚೆಯಲ್ಲಿರುವ ವಸ್ತುವಿಷಯ. ಕೇಂದ್ರ ಸರ್ಕಾರ ಅದ­ನ್ನೊಂದು ರಾಷ್ಟ್ರೀಯ ಗ್ರಂಥ ಮಾಡುವ ಆಶಯ ವ್ಯಕ್ತಪಡಿಸಿದ ಕಾರಣಕ್ಕಾಗಿ ಚರ್ಚೆಗೆ ಗ್ರಾಸ­ವಾಗಿದೆ. ಕಳೆದ ಬಾರಿ ಅದನ್ನು ಶಾಲೆಯಲ್ಲಿ ಬೋಧಿಸುವ ಸಲು­ವಾಗಿ  ಚರ್ಚೆಯಾಗಿತ್ತು.  ಈ ಕುರಿತು ಮುಖ್ಯವಾಗಿ ‘ಸಂಗತ’­ದಲ್ಲಿ ಪ್ರಕಟವಾದ ಪ್ರೊ.ಕೆ.ಎಸ್‌. ಭಗವಾನ್‌ ಅವರ ಲೇಖನಕ್ಕೆ ಪ್ರತಿಕ್ರಿಯೆಯಾಗಿದೆ ಈ ಬರಹ.

ಭಗವದ್ಗೀತೆ ರಾಷ್ಟೀಯ ಧರ್ಮ ಗ್ರಂಥವಾಗ­ಬೇಕೆಂಬ ಆಶಯ ನನ್ನದಲ್ಲ. ಬದಲಾಗಿ ಭಗ­ವದ್ಗೀತೆಯು ಜಾತಿ ವ್ಯವಸ್ಥೆ­ಯನ್ನು ಪ್ರತಿಪಾದಿ­ಸುವ ಒಂದು ಅಪಾಯಕಾರಿ ಕೃತಿ ಎನ್ನುವ ಹಾಗೂ ಧರ್ಮಗ್ರಂಥ ಮಾಡಬೇಕೆನ್ನುವ ಎರಡೂ ವಾದಗಳು ಹೇಗೆ ನಮಗೆ ಪರಕೀಯ­ವಾಗಿವೆ ಎಂಬುದನ್ನು ತೋರಿಸುವುದು ಉದ್ದೇಶ. ಲೇಖಕರು ತಮ್ಮ ವಾದದ ಸಮರ್ಥನೆಗೆ ನೀಡಿದ ಅಂಶಗಳು ಭಗವದ್ಗೀತೆಯು ಜಾತಿ ವ್ಯವಸ್ಥೆ­ಯನ್ನು ಪ್ರತಿಪಾದಿ­ಸಿದೆ ಎಂಬುದನ್ನು ಸಾಬೀತು­ಪಡಿಸಲು ಯಶಸ್ವಿಯಾಗಿಲ್ಲ. 

* ಗೀತೆಯಲ್ಲಿ ಉಲ್ಲೇಖವಾಗಿರುವ ನಿರ್ವಾಣ ಎಂಬ ಪದದ ಬಳಕೆ. ಕುರಿತು ಹೇಳುವಾಗ ಗೀತೆಗಿಂತ ಹಿಂದೆ ಬ್ರಾಹ್ಮಣ ಗ್ರಂಥ­ದಲ್ಲಿ ಈ ಪದದ ಉಲ್ಲೇಖ ಇಲ್ಲವೆನ್ನುತ್ತಾರೆ, ಆದರೆ ಗೀತೆಯಲ್ಲಿ ಅದನ್ನು ಪದೇಪದೇ ಬಳಸಲಾಗಿದೆ ಎನ್ನುತ್ತಾರೆ. ಗೀತೆ ಬ್ರಾಹ್ಮ­ಣರು ರಚಿಸಿದ್ದಲ್ಲ ಎನ್ನುವ ತೀರ್ಮಾನವನ್ನು ಒಪ್ಪುವ ಲೇಖಕರು, ಅದರಲ್ಲಿ ಬಳಕೆಯಾಗುವ ಪದ ಜಾತಿ­ವ್ಯವಸ್ಥೆ­ಯನ್ನು ಸಮರ್ಥಿಸುತ್ತದೆ ಎಂದು ಹೇಗೆ ತೀರ್ಮಾ­ನಿಸಿದರು? ಹಾಗೂ ಗೀತೆಯು ಬೌದ್ಧರ ವಿರು­ದ್ಧದ ವೈದಿಕರ ಹೋರಾಟಕ್ಕೆ ಪ್ರಣಾಳಿಕೆಯಾಗಿ ಕೆಲಸ ಮಾಡಿದ್ದು ಹೇಗೆ? 

* ವರ್ಣಸಂಕರವನ್ನು ತಡೆಯುವ ಉದ್ದೇಶ­-ದಿಂದ ಅರ್ಜು­ನನು ಯುದ್ಧ ಮಾಡಲು ನಿರಾಕರಿ­ಸಿದ ಎಂದು ಅಭಿಪ್ರಾಯ­ಪಡುವ ಲೇಖಕರು ಆ ನಂತರ ಅರ್ಜುನ ಯುದ್ಧ ನೆರವೇರಿಸಿ­ದ್ದನ್ನು ಪರಿ­ಗಣಿಸುವುದಿಲ್ಲ. ಜೊತೆಗೆ ಯುದ್ಧವನ್ನು ನಿರಾಕರಿ­ಸಲು ಆತ ನೀಡಿದ ಕಾರಣವೇ ಬೇರೆ. ಕೆ.ಎಸ್‌. ಭಗವಾನ್ ಅವರು ನೀಡುವ ಕಾರಣವೇ ಬೇರೆ. ಭೀಷ್ಮ-, ದ್ರೋಣಾ­ಚಾರ್ಯರ ವಿರುದ್ಧ ಹೋರಾ­ಡುವುದು ಅರ್ಜುನನ ಮನಸಿಗೆ ದುಃಖವ­ನ್ನುಂಟು ಮಾಡುತ್ತದೆ ಎಂಬುದು ನಿಜವಾದ ಕಥೆ­ಯಾ­ದರೆ, ಲೇಖಕರು ಜಾತಿ ವ್ಯವಸ್ಥೆಯ ಪೋಷ­ಣೆ­­ಗಾಗಿ ಅರ್ಜುನ ಯುದ್ಧ­ವನ್ನು ನಿರಾಕರಿಸಿದ ಎಂದು ತಿರುಚಿದ್ದಾರೆ.

* ಅರ್ಜುನ ಯುದ್ಧ ಮಾಡುವುದಿಲ್ಲ ಎಂದು ಹೇಳಿದ್ದು,  ಕೃಷ್ಣ ಆತನನ್ನು ಯುದ್ಧ ಮಾಡು­ವಂತೆ ಪ್ರೇರೇ­ಪಿ­ಸಿದ್ದು ಎರಡೂ  ಏಕಕಾಲದಲ್ಲಿ ಜಾತಿ ವ್ಯವಸ್ಥೆಯ ಪ್ರತಿ­ಪಾದ­ನೆಗೆ ಸಾಕ್ಷಿಗಳಾಗು­ವುದು ಹೇಗೆ? ಲೇಖಕರು ಕೃಷ್ಣ ಬೋಧಿ­ಸುವ ಸ್ವಧರ್ಮದ ಪ್ರತಿ­ಪಾದ­ನೆ­ಯನ್ನು ತಮ್ಮ ವಾದಕ್ಕೆ ಸಮ­ರ್ಥನೆ­ಯಾಗಿ ಬಳಸು­ತ್ತಾರೆ. ಸ್ವಧರ್ಮ ಎಂದರೆ ತನ್ನ ಕರ್ತವ್ಯ­ಗಳನ್ನು ನೆರವೇರಿಸು ಎಂದರ್ಥ. ಕೃಷ್ಣ, ಅರ್ಜುನನಿಗೆ ಕ್ಷತ್ರಿಯ­ನಾಗಿ ನೀನು ನಿನ್ನ ಕರ್ತವ್ಯ ಪಾಲಿಸಬೇಕೇ ಹೊರತು ನಿನ್ನ ಕುಲ, ಪಂಗಡ, ಹಿರಿಯ-–ಕಿರಿಯ, ಸಂಬಂಧಿ ಇದ್ಯಾ­ವುದೂ ಮುಖ್ಯ­ವಲ್ಲ ಎನ್ನುವ ಅರ್ಥ ಆ ಪ್ರಸಂಗದಲ್ಲಿ ಕಂಡುಬಂದರೆ, ಲೇಖ­ಕರು ಇದನ್ನು ಜಾತಿ ವ್ಯವಸ್ಥೆಯ ಪ್ರತಿಪಾದನೆ ಎನ್ನುತ್ತಾರೆ. ಅಂದರೆ ತದ್ವಿರುದ್ಧವಾದ ನಿರ್ಣಯಕ್ಕೆ ಬರಲು ಏನು ಕಾರಣ?  

* ಕೃಷ್ಣನು ಆಧ್ಯಾತ್ಮಿಕನೂ ಅಲ್ಲ, ಜ್ಞಾನಿಯೂ ಅಲ್ಲ, ಆತನಿಗೆ ದೇವರಾಗುವ ಅರ್ಹತೆಗಳಿಲ್ಲ ಎಂದು ಕೃಷ್ಣನನ್ನು ರಾಮಕೃಷ್ಣ ಪರಮಹಂಸ ಮತ್ತು ವಿವೇಕಾನಂದರಿಗೆ ಹೋಲಿಸುತ್ತಾರೆ. ಅಂದರೆ ಕೃಷ್ಣನನ್ನು ಐತಿಹಾಸಿಕ (historical) ವ್ಯಕ್ತಿಯೆಂದು ಪರಿಗಣಿಸುವ ಮೂಲಭೂತ ತಪ್ಪನ್ನು ಅವರು ಮಾಡುತ್ತಾರೆ. ಮಾತ್ರವಲ್ಲ ಕೃಷ್ಣನು ಕೊಲೆಗೆ ಪ್ರೇರೇಪಿಸುವವನು ಹಾಗಾಗಿ ಆತ ತಪ್ಪಿತಸ್ಥ, ಅಪರಾಧಿ ಎಂದು ಆಗ್ರಹಿ­ಸು­ತ್ತಾರೆ. ಅದೇನೇ ಇರಲಿ ಕೃಷ್ಣ ಜ್ಞಾನಿಯಾಗಿರದೇ ಇರುವುದು ಜಾತಿ ವ್ಯವಸ್ಥೆಯ ಪ್ರತಿ ಪಾದನೆ­ಯಾಗುವುದು ಹೇಗೆ?

* ಭಗವದ್ಗೀತೆಯ ರಚನೆಯಲ್ಲಿ ಹಾಗೂ ಅಲ್ಲಿನ ಪ್ರಮುಖ ಪಾತ್ರಗಳಲ್ಲಿ ಬ್ರಾಹ್ಮಣರ ಪಾತ್ರ ಇಲ್ಲವೆನ್ನುವ ಅವರೇ ಗೀತೆ­ಯಲ್ಲಿ ತುಂಬಿ­ರುವುದೆಲ್ಲಾ ಬ್ರಾಹ್ಮಣ ಮತವೇ ಹೊರತು ಬೇರಾ­ವುದೂ ಅಲ್ಲ ಎಂಬ ತೀರ್ಮಾನಕ್ಕೆ ಬರು­ತ್ತಾರೆ. ಈ ತೀರ್ಮಾನಕ್ಕೆ ಭಗವದ್ಗೀತೆ­ಯಲ್ಲಿ ಸಾಕ್ಷಿ­ಗಳಿಲ್ಲ. ಹಾಗಾದರೆ ಈ ತೀರ್ಮಾನದ ಮೂಲ ಎಲ್ಲಿದೆ?  ಒಟ್ಟಾರೆ ಈ ಮೇಲಿನ ಅಂಶಗಳು ಲೇಖನ­ದಲ್ಲಿನ ಗೊಂದಲ­ಗಳನ್ನು ತೋರ್ಪಡಿಸುತ್ತದೆ  ಹಾಗೂ ಲೇಖನ ತನ್ನ ವಾದವನ್ನು ಸಮರ್ಥಿಸುವ ಸಣ್ಣ ಪ್ರಯತ್ನವನ್ನೂ ಮಾಡದೇ ಇರುವುದು ಕಾಣುತ್ತದೆ.

ಜಾತಿ ವ್ಯವಸ್ಥೆಯನ್ನು ಪ್ರತಿ­ಪಾದಿಸಿದ ಕೃತಿ­ಯೊಂದು ಗಾಂಧಿ, ಕುವೆಂಪು­ರವರಿಗೆ ಪ್ರೇರಕ ಶಕ್ತಿಯಾದು­ದಾದರೂ ಹೇಗೆ? ಲೇಖಕರು ಭಗವ­ದ್ಗೀತೆ­ಯಲ್ಲಿ ಏನಿದೆ ಎಂಬುದನ್ನು ಗ್ರಹಿಸು­ವಲ್ಲಿ ಸಂಪೂರ್ಣವಾಗಿ ವಿಫಲ­ವಾ­ಗಿ­­ದ್ದರೂ, ಅದೊಂದು ಅಪಾಯ­ಕಾರಿ ಗ್ರಂಥ ಎಂದು ತೀರ್ಪಿ­ಡುತ್ತಾರೆ. ಇವರು ಯಾವುದೇ ಸಂಗತಿ, ಪಠ್ಯ, ವ್ಯಕ್ತಿ­ಯನ್ನು ಅರ್ಥ ಮಾಡಿ­ಕೊಳ್ಳಲು ಜಾತಿ ವ್ಯವಸ್ಥೆಯನ್ನೇ ಮಾಪನ­ವಾಗಿ­ಟ್ಟು­ಕೊಂಡಿರು­ವುದು ದುರಂತ. ಹಾಗಾಗಿ ಲೇಖನದಲ್ಲಿ ಜಾತಿ ವ್ಯವ­ಸ್ಥೆಯ ಕುರಿತೂ ಸ್ಪಷ್ಟತೆ ಕಾಣುವುದಿಲ್ಲ, ಭಗವದ್ಗೀತೆ­ಯಲ್ಲಿ ಏನಿದೆ ಎಂಬುದರ ಪರಿ­ಚ­ಯವೂ ಆಗುವುದಿಲ್ಲ.

ಹಾಗಿ­ದ್ದರೂ ಭಗವದ್ಗೀ­ತೆಯು ಜಾತಿ ವ್ಯವಸ್ಥೆಯನ್ನು ಪ್ರತಿ­ಪಾದಿಸು­ತ್ತದೆ ಎಂದು ಹೇಗೆ ನಿರ್ಣಯಿ­ಸಿ­ದರು? ಬಹುಶಃ ಗೀತೆ ಸಂಸ್ಕೃತ ಗ್ರಂಥ ಹಾಗೂ ಹಿಂದೂ ಧರ್ಮ­ಗ್ರಂಥ ಎನ್ನುವ ಪೂರ್ವಗ್ರಹದ ಮೇಲೆ ಹುಟ್ಟಿದ ನಿರ್ಣಯ. ಸಂಸ್ಕೃತ ಬ್ರಾಹ್ಮಣ ಪುರೋಹಿತರ ಭಾಷೆ ಹಾಗೂ ಹಿಂದೂ ಧರ್ಮವು ಜಾತಿವ್ಯವಸ್ಥೆಯನ್ನು ಹುಟ್ಟುಹಾಕು­ತ್ತದೆ ಎಂಬ ವಸಾಹತು ತಿಳಿವಳಿಕೆಯ ಬೇರು ಲೇಖಕರ  ವಾದದಲ್ಲಿದೆ.

ಭಗವದ್ಗೀ­ತೆಯು ಹಿಂದೂಗಳ ಧರ್ಮಗ್ರಂಥ ಎಂಬ ಪೂರ್ವಗ್ರಹವೇ, ಅದನ್ನೊಂದು ರಾಷ್ಟ್ರೀಯ ಗ್ರಂಥ ಮಾಡ­ಬೇಕೆನ್ನುವ ಕೇಂದ್ರ ಸರ್ಕಾರದ ನಿಲುವಿಗೆ ಕಾರಣ ವಾದರೆ, ಅದೇ ಅಂಶವೇ ಲೇಖಕರ ಈ ವಾದಕ್ಕೂ ಕಾರಣ­ವಾಗಿದೆ. ಹಾಗಾಗಿ ಸರ್ಕಾರದ ನಿಲುವಿಗೂ, ಲೇಖಕರ ವಾದಕ್ಕೂ ಮೂಲಭೂತವಾಗಿರುವ ಸಾಮ್ಯತೆ ಇದೆ. ಎರಡೂ ವಾದಗಳಿಗೂ ವಸಾಹತು ಚಿಂತ­ನೆಯೇ ಮಾನ­ದಂಡವಾಗಿದ್ದು, ಈ ವಾದಗಳು ಭಗವದ್ಗೀತೆಯ ಜೊತೆಗೆ ಯಾವ ಸಂಬಂಧ­ವನ್ನೂ ಹೊಂದಿಲ್ಲದಿರುವುದು ವಿಪರ್ಯಾಸ. 
 
ಭಗವದ್ಗೀತೆಯನ್ನು ಜನಸಾಮಾನ್ಯರು ರಿಲಿ­ಜ­ನ್ನಿನ ಗ್ರಂಥ­ವೆಂದಾಗಲೀ, ಜಾತಿವ್ಯವಸ್ಥೆಯ ಪಠ್ಯ­ವೆಂದಾಗಲೀ ನೋಡುವು­ದಿಲ್ಲ. ಅದರ ಜೊತೆ­ಗಿನ ನಮ್ಮ ಸಂಬಂಧವು ತೀರಾ ಭಿನ್ನವಾಗಿ­ರುತ್ತದೆ. ಗಾಂಧಿಗೆ ಒಂದು ರೀತಿಯಲ್ಲಿ ಪ್ರೇರಣೆಯನ್ನು ನೀಡಿ­ದರೆ, ಕುವೆಂಪು ಅವರಿಗೆ ಮತ್ತೊಂದು ರೀತಿ­ಯಲ್ಲಿ ಪ್ರೇರಕ ಶಕ್ತಿ­ಯಾಗಿತ್ತು. ಹೀಗೆ ಬೇರೆ ಬೇರೆ­ಯವರು ತಮ್ಮದೇ ಆದ ರೀತಿಯ ಸಂಬಂಧವನ್ನು ಗೀತೆಯೊಂದಿಗೆ ಹೊಂದಿರು­ತ್ತಾರೆ. ಹಾಗೆಂದು ಎಲ್ಲರೂ ಸಂಬಂಧ ಹೊಂದಿರಲೇ­ಬೇಕಾಗಿಯೂ ಇಲ್ಲ.

ಅದರ ಜೊತೆಗೆ ಯಾವುದೇ ಸಂಬಂಧವಿಲ್ಲದ ಜನ­ಸಮುದಾಯಗಳೂ ಇವೆ. ಕೆಲ­ವ­ರಿಗೆ ಕೇವಲ ಕಥೆ­ಯಾಗಿಯೂ, ಇನ್ನು ಕೆಲವರಿಗೆ ಆಧ್ಯಾ­ತ್ಮಿಕ ಸಾಧನ­ವಾಗಿಯೂ, ಮತ್ತೆ ಹಲವರಿಗೆ ಜೀವನದ ಸಮಸ್ಯೆ­­ಗಳ ಪರಿ­ಹಾರಕ್ಕೆ ನಿರ್ದೇಶನಗಳಾಗಿಯೂ ಇದೆ. ಹೀಗಿರು­ವಾಗ ಇದ­ನ್ನೊಂದು ಧರ್ಮ­ಗ್ರಂಥ­ವೆಂದು ಹೇಳುವ ಮತ್ತು ಜಾತಿ ವ್ಯವಸ್ಥೆ ಪ್ರತಿಪಾದಿಸುತ್ತದೆ ಎನ್ನುವ ಎರಡೂ ವಾದಗಳೂ ನಮಗೆ ಪರಕೀಯವಾಗಿ ಕಾಣುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.