ADVERTISEMENT

ಭಾರತ–ಬ್ರಿಟನ್‌ ನಡುವೆ ‘ಸಜೀವ ಸೇತುವೆ’

ಬ್ರಾಂಡನ್ ಲೆವಿಸ್
Published 12 ಡಿಸೆಂಬರ್ 2017, 20:03 IST
Last Updated 12 ಡಿಸೆಂಬರ್ 2017, 20:03 IST
ಬ್ರಾಂಡನ್ ಲೆವಿಸ್
ಬ್ರಾಂಡನ್ ಲೆವಿಸ್   

ಒಂದು ವರ್ಷದ ಹಿಂದೆ, ತೆರೆಸಾ ಮೇ ಭಾರತಕ್ಕೆ ಭೇಟಿ ನೀಡಿದ್ದರು. ಪ್ರಧಾನಿಯಾದ ಬಳಿಕ ಯುರೋಪ್‍ನ ಹೊರಗಿನ ದೇಶವೊಂದಕ್ಕೆ ಅವರು ನೀಡಿದ ಮೊದಲ ಭೇಟಿ ಇದು. ಭಾರತದ ಜತೆ ಬ್ರಿಟನ್ ಹೊಂದಿರುವ ಐತಿಹಾಸಿಕ ಸಂಬಂಧವನ್ನು ಈ ಸಂದರ್ಭದಲ್ಲಿ ಅವರು ಸ್ಮರಿಸಿದರು; ಭದ್ರತೆ ಮತ್ತು ವಲಸೆಗೆ ಸಂಬಂಧಿಸಿ ಇನ್ನೂ ಹೆಚ್ಚಿನ ಸಹಕಾರದ ಅಗತ್ಯ ಇದೆ ಎಂದು ಅವರು ಪ್ರತಿಪಾದಿಸಿದರು.

ಭಾರತದ ಜತೆಗಿನ ಸಂಬಂಧಕ್ಕೆ ಬ್ರಿಟನ್ ಎಷ್ಟು ಮಹತ್ವ ಕಲ್ಪಿಸುತ್ತಿದೆ ಎಂಬುದನ್ನು ಈ ಭೇಟಿಯೇ ತೋರಿಸಿಕೊಡುತ್ತದೆ. ಐರೋಪ್ಯ ಒಕ್ಕೂಟದ ಹೊರಗೆ ಬ್ರಿಟನ್ ಹೊಸ ಸಹಕಾರ ಪಥವೊಂದನ್ನು ಸೃಷ್ಟಿಸಲು ಬಯಸುತ್ತಿರುವ ಈ ಸಂದರ್ಭದಲ್ಲಿ ಈ ಭೇಟಿ ಇನ್ನೂ ಹೆಚ್ಚಿನ ಮಹತ್ವ ಪಡೆದುಕೊಳ್ಳುತ್ತದೆ.

ಈ ಅತ್ಯಾಕರ್ಷಕ ದೇಶದಲ್ಲಿ ಸ್ವಲ್ಪ ಸಮಯ ಕಳೆಯುವ ಸದವಕಾಶ ಈ ತಿಂಗಳ ಆರಂಭದಲ್ಲಿ ನನಗೂ ಒದಗಿಬಂತು. ನಾವು ಹೆಚ್ಚು ನಿಕಟವಾಗಿ ಕೆಲಸ ಮಾಡುತ್ತಿರುವ ಕೆಲವು ಮಹತ್ವದ ಕ್ಷೇತ್ರಗಳಲ್ಲಿ ಕಳೆದ ಒಂದು ವರ್ಷದಲ್ಲಿ ಆಗಿರುವ ಗಣನೀಯ ಪ್ರಗತಿ ನನಗೆ ಬಹಳ ಖುಷಿ ಕೊಟ್ಟಿದೆ.

ADVERTISEMENT

ಎರಡೂ ದೇಶಗಳು ಹೊಂದಿರುವ ಸಮಾನ ಹಿತಾಸಕ್ತಿಗಳನ್ನು ಇನ್ನಷ್ಟು ಮುಂದಕ್ಕೆ ಒಯ್ಯುವುದಕ್ಕಾಗಿ ಬ್ರಿಟನ್ ಮತ್ತು ಭಾರತ ಸರ್ಕಾರಗಳು ನಿಯಮಿತ ಸಂವಾದದ ವ್ಯವಸ್ಥೆಯನ್ನು ಸ್ಥಾಪಿಸಿವೆ.

ವೀಸಾ ಪ್ರಕ್ರಿಯೆಯನ್ನು ಸರಳಗೊಳಿಸುವುದು, ವೀಸಾ ಅವಧಿ ಮುಗಿದ ಬಳಿಕವೂ ಪರಸ್ಪರರ ದೇಶಗಳಲ್ಲಿಯೇ ಉಳಿದಿರುವ ವ್ಯಕ್ತಿಗಳ ಹಸ್ತಾಂತರ, ಗಡಿ ಮತ್ತು ವಲಸೆ ವ್ಯವಸ್ಥೆಯನ್ನು ಇನ್ನಷ್ಟು ಸುಧಾರಿಸುವುದರ ಬಗ್ಗೆ ನಿಯಮಿತ ಸಂವಾದಗಳು ನಡೆಯುತ್ತಿವೆ.

ಈ ಕೆಲಸ ಗಮನಾರ್ಹ ಫಲಿತಾಂಶಗಳನ್ನು ನೀಡಿದೆ: ಎರಡೂ ದೇಶಗಳಲ್ಲಿ ಪ್ರವಾಸೋದ್ಯಮ ಗರಿಗೆದರಿದ್ದು, ಭಾರತದ ಪ್ರವಾಸಿಗರು ಹಿಂದೆಂದಿಗಿಂತಲೂ ಹೆಚ್ಚಿನ ಪ್ರಮಾಣದಲ್ಲಿ ಬ್ರಿಟನ್‌ಗೆ ಭೇಟಿ ನೀಡುತ್ತಿದ್ದಾರೆ. ಕಳೆದ ವರ್ಷ 4.15 ಲಕ್ಷ ಭಾರತೀಯರಿಗೆ ಬ್ರಿಟನ್ ಭೇಟಿಗೆ ವೀಸಾ ನೀಡಲಾಗಿದೆ. ಅದರ ಹಿಂದಿನ ವರ್ಷಕ್ಕೆ ಹೋಲಿಸಿದರೆ ಇದು ಶೇ 8ರಷ್ಟು ಹೆಚ್ಚು. ಇದಲ್ಲದೆ, ಬ್ರಿಟನ್‍ನ ಜಾಗತಿಕ ಮಟ್ಟದ ವಿಶ್ವವಿದ್ಯಾಲಯಗಳಲ್ಲಿ ಕಲಿಯುವುದನ್ನು ಆಯ್ಕೆ ಮಾಡಿಕೊಂಡ ಭಾರತದ ವಿದ್ಯಾರ್ಥಿಗಳ ಪ್ರಮಾಣ ಕಳೆದ ವರ್ಷ ಶೇ 10ರಷ್ಟು ಏರಿಕೆಯಾಗಿತ್ತು. ಬ್ರಿಟನ್‍ನ ಚೀವ್‌ನಿಂಗ್‌ ವಿದ್ಯಾರ್ಥಿವೇತನಗಳ ಪ್ರಯೋಜನವನ್ನು ಈ ವಿದ್ಯಾರ್ಥಿಗಳು ಪಡೆದುಕೊಂಡಿದ್ದಾರೆ.

ಬ್ರಿಟನ್‍ನಲ್ಲಿ ಕಲಿಯುತ್ತಿರುವ ಭಾರತದ ನೂರಾರು ವಿದ್ಯಾರ್ಥಿಗಳಿಗೆ ಚೀವ್‌ನಿಂಗ್‌ ಕಾರ್ಯಕ್ರಮ ಮೂಲಕ ಲಕ್ಷಾಂತರ ಪೌಂಡ್ ಹಣ ನೀಡಲಾಗಿದೆ. ಬ್ರಿಟನ್‍ನಲ್ಲಿ ಕಲಿತು, ಕೌಶಲ ರೂಢಿಸಿಕೊಂಡು ಹಿಂದಿರುಗುವ ಭಾರತೀಯ ವಿದ್ಯಾರ್ಥಿಗಳು ಭಾರತದ ಸಮೃದ್ಧಿಗೆ ಕೊಡುಗೆ ನೀಡುತ್ತಾರೆ. ಒಟ್ಟಿನಲ್ಲಿ, ಕಳೆದ ವರ್ಷ ಐದು ಲಕ್ಷಕ್ಕೂ ಹೆಚ್ಚು ಭಾರತೀಯರಿಗೆ ಬ್ರಿಟನ್ ವೀಸಾ ನೀಡಲಾಗಿದೆ. ಈ ಬೃಹತ್ ಸಂಖ್ಯೆಯೇ ಎರಡೂ ದೇಶಗಳ ನಡುವಣ ಸಂಬಂಧದ ಬಲವನ್ನು ತೋರಿಸಿಕೊಡುತ್ತದೆ.

ಚಾರಿತ್ರಿಕವಾಗಿ ಬಲವಾಗಿರುವ ನಮ್ಮ ನಡುವಣ ಸಂಬಂಧವನ್ನು ಇನ್ನಷ್ಟು ಬೆಳೆಸಿಕೊಂಡು ಹೋಗಲು ವಲಸೆ ಸಹಕಾರ ಎಷ್ಟು ಮಹತ್ವದ್ದು ಎಂಬುದು ವಲಸೆ ಸಚಿವನಾಗಿರುವ ನನಗೆ ಬಹಳ ಸ್ಪಷ್ಟವಾಗಿ ತಿಳಿದಿದೆ. ಹಾಗಾಗಿಯೇ, ಬಹಳ ಮಹತ್ವದ ನಗರವಾಗಿರುವ ಬೆಂಗಳೂರಿನಲ್ಲಿ ವೀಸಾ ಅರ್ಜಿ ಕಚೇರಿ ತೆರೆಯಲು ನನಗೆ ಬಹಳ ಸಂತೋಷವಾಗಿತ್ತು.

ಭಾರತದ ತಂತ್ರಜ್ಞಾನ ಮತ್ತು ಮಾಹಿತಿ ತಂತ್ರಜ್ಞಾನ ಕೇಂದ್ರವಾಗಿರುವ ಬೆಂಗಳೂರಿನ ವೈಟ್‍ಫೀಲ್ಡ್‌ನ ಕೇಂದ್ರ ಭಾಗದಲ್ಲಿ ನಮ್ಮ ವೀಸಾ ಕೇಂದ್ರ ಇದೆ. ಇಲ್ಲಿಯೇ ಇನ್ಫೊಸಿಸ್ ಮತ್ತು ಟಿಸಿಎಸ್‍ನಂತಹ ಕಂಪೆನಿಗಳೂ ಇವೆ. ಈ ಕಂಪೆನಿಗಳು ಪ್ರತಿವರ್ಷ ಸಾವಿರಾರು ಸಿಬ್ಬಂದಿಯನ್ನು ಬ್ರಿಟನ್‍ಗೆ ಕಳುಹಿಸುತ್ತಿವೆ. ಬ್ರಿಟನ್ ಕೊಡುವ ಒಟ್ಟು ಕೆಲಸದ ವೀಸಾಗಳಲ್ಲಿ ಅರ್ಧದಷ್ಟನ್ನು ಭಾರತಕ್ಕೆ ನೀಡಲಾಗುತ್ತಿದೆ.

ಬ್ರಿಟನ್‍ಗೆ ಈ ಉದ್ಯಮ ಮತ್ತು ಭಾರತವು ಎಷ್ಟು ಮಹತ್ವದ್ದು ಎಂಬುದು ಇದರಿಂದ ಸ್ಪಷ್ಟವಾಗುತ್ತದೆ. ಭಾರತದ ಪ್ರತಿಭಾವಂತ ಮತ್ತು ಅತ್ಯುತ್ತಮ ಕೆಲಸಗಾರರು ಬ್ರಿಟನ್‍ಗೆ ಬರುವುದನ್ನು ನಮ್ಮ ಹೊಸ ವೀಸಾ ಕೇಂದ್ರವು ಈಗ ಹಿಂದೆಂದಿಗಿಂತಲೂ ಹೆಚ್ಚು ಸುಲಭವಾಗಿಸಿದೆ.

ಜಗತ್ತಿನ ಬೇರೆ ಯಾವುದೇ ದೇಶದಲ್ಲಿ ಇರುವುದಕ್ಕಿಂತ ಹೆಚ್ಚು ವೀಸಾ ಕೇಂದ್ರಗಳು ಈಗ ಭಾರತದಲ್ಲಿ ಇವೆ. ಎರಡು ಮಹತ್ವದ ದೇಶಗಳ ನಡುವೆ ಜನರು, ಚಿಂತನೆಗಳು, ಸಂಸ್ಥೆಗಳು ಮತ್ತು ತಂತ್ರಜ್ಞಾನದ ‘ಸಜೀವ ಸೇತುವೆ’ ಕಟ್ಟಲು ನಾವು ಎಷ್ಟು ಬದ್ಧರಾಗಿದ್ದೇವೆ ಎಂಬುದನ್ನು ಇದು ತೋರಿಸುತ್ತದೆ.

ನಮ್ಮ ನಡುವಣ ಸಂಬಂಧಕ್ಕೆ ನಾವು ಎಷ್ಟು ಬೆಲೆ ಕೊಡುತ್ತಿದ್ದೇವೆ ಎಂಬುದಕ್ಕೆ ಹೊಸ ವೀಸಾ ಕೇಂದ್ರವು ಒಂದು ನಿದರ್ಶನವಾಗಿದೆ. ಅಷ್ಟೇ ಅಲ್ಲದೆ, ಇದು ನಮ್ಮ ಗ್ರಾಹಕರ ಬಗ್ಗೆ ನಾವು ಹೊಂದಿರುವ ಬದ್ಧತೆಗೂ ಉದಾಹರಣೆಯಾಗಿದೆ. ಬ್ರಿಟನ್‍ನ ಉದ್ಯೋಗ ವೀಸಾ ವ್ಯವಸ್ಥೆಯು ಜಗತ್ತಿನಲ್ಲಿಯೇ ಅತ್ಯಂತ ಪಾರದರ್ಶಕ ಮತ್ತು ಬಳಕೆದಾರಸ್ನೇಹಿ ಎಂದು ಉದ್ಯಮ ಸಂಸ್ಥೆಗಳು ನಮಗೆ ಹೇಳಿವೆ. ಅನುಕೂಲಕರ ಸ್ಥಳಗಳಲ್ಲಿ ಇನ್ನಷ್ಟು ವೀಸಾ ಕೇಂದ್ರಗಳನ್ನು ತೆರೆಯುವ ಮೂಲಕ ಬ್ರಿಟನ್ ವೀಸಾ ಪಡೆಯುವ ಪ್ರಕ್ರಿಯೆಯನ್ನು ಇನ್ನೂ ಸುಲಭಗೊಳಿಸಲಿದ್ದೇವೆ.

ಭಾರತಕ್ಕೆ ಭೇಟಿ ನೀಡಿದ್ದಾಗ, ದೇಶದ ವಿವಿಧ ಭಾಗಗಳ ಉದ್ಯಮಿಗಳ ಜತೆ ಮಾತುಕತೆ ನಡೆಸಲು ನನಗೆ ಸಾಧ್ಯವಾಗಿದೆ. ಭಾರತೀಯ ಕೈಗಾರಿಕಾ ಸಂಸ್ಥೆ ಮತ್ತು ಭಾರತೀಯ ವಾಣಿಜ್ಯ ಮತ್ತು ಕೈಗಾರಿಕಾ ಒಕ್ಕೂಟದ ಪ್ರತಿನಿಧಿಗಳನ್ನೂ ನಾನು ಭೇಟಿಯಾಗಿದ್ದೇನೆ. ಜಿ20 ರಾಷ್ಟ್ರಗಳ ಪೈಕಿ ಕಳೆದ ದಶಕದಲ್ಲಿ ಭಾರತದಲ್ಲಿ ಅತಿ ಹೆಚ್ಚು ಹೂಡಿಕೆ ಮಾಡಿರುವ ದೇಶ ಬ್ರಿಟನ್.

ಭಾರತದ ಕೆಲಸಗಾರರ ಕೌಶಲ ವೃದ್ಧಿಯಲ್ಲಿ ಬ್ರಿಟನ್ ಮಹತ್ವದ ಪಾತ್ರ ವಹಿಸುತ್ತಿದೆ ಎಂಬುದೂ ನನಗೆ ಖುಷಿಯ ವಿಚಾರ. ಆದರೆ, ಯಾವುದೇ ರೀತಿಯಲ್ಲಿಯೂ ಇದು ಒಮ್ಮುಖವಾದುದಲ್ಲ: ಭಾರತವು ಈಗ ಬ್ರಿಟನ್‍ನ ನಾಲ್ಕನೇ ಅತಿ ದೊಡ್ಡ ಹೂಡಿಕೆದಾರ ಮತ್ತು ಎರಡನೇ ಅತಿ ದೊಡ್ಡ ಉದ್ಯೋಗ ಸೃಷ್ಟಿಕರ್ತ ದೇಶವಾಗಿದೆ. ಈ ಮೂಲಕ ನಮ್ಮ ದೇಶಕ್ಕೆ ನಿರ್ಣಾಯಕವಾದ ಅವಕಾಶಗಳನ್ನು ಭಾರತ ಸೃಷ್ಟಿಸುತ್ತಿದೆ.

ಇದು ನಾವು ಹೆಮ್ಮೆಪಡಬೇಕಾದ ವಿಷಯ. ಬ್ರಿಟನ್ ಮತ್ತು ಭಾರತವನ್ನು ಇನ್ನೂ ಹತ್ತಿರ ತರುವುದಕ್ಕಾಗಿ ಕೆಲಸ ಮಾಡಲು ನಾನು ಬದ್ಧನಾಗಿದ್ದೇನೆ. ನಮ್ಮ ನಡುವಣ ವಾಣಿಜ್ಯ, ಸಾಂಸ್ಕೃತಿಕ ಮತ್ತು ಚಾರಿತ್ರಿಕ ಸಂಬಂಧಗಳು ಭಾರಿ ಮಹತ್ವದ್ದಾಗಿವೆ; ಈ ಸಂಬಂಧಕ್ಕೆ ನಾವು ಎಷ್ಟು ಬದ್ಧತೆ ಹೊಂದಿದ್ದೇವೆ ಎಂಬುದನ್ನು ಇದು ತೋರಿಸುವುದರ ಜತೆಗೆ, ನಮ್ಮ ದೇಶವನ್ನು ನಿಜವಾದ ಅರ್ಥದಲ್ಲಿ ‘ಜಾಗತಿಕ ಬ್ರಿಟನ್’ ಎಂಬ ಸ್ಥಾನದಲ್ಲಿ ಕೂರಿಸುತ್ತದೆ.

–ಲೇಖಕ ಬ್ರಿಟನ್‌ನ ಗೃಹ ಸಚಿವಾಲಯದಲ್ಲಿ ವಲಸೆ ಸಚಿವ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.