ADVERTISEMENT

ಭಾಷೆ– ಸಂಸ್ಕೃತಿ ಮತ್ತು ಕೌಶಲಾಭಿವೃದ್ಧಿ

ಡಾ.ಆರ್.ಜಿ.ಹೆಗಡೆ
Published 5 ಏಪ್ರಿಲ್ 2018, 19:40 IST
Last Updated 5 ಏಪ್ರಿಲ್ 2018, 19:40 IST

‘ಇಂಗ್ಲಿಷ್‌ ಭಾಷೆ ಕ್ರಮೇಣ ಕುಸಿಯಲಿದ್ದು, ಕನ್ನಡ ಉನ್ನತಿಯತ್ತ ಮುನ್ನಡೆಯಲಿದೆ’ ಎಂದು ಭಾಷಾವಿದ್ವಾಂಸ ಗಣೇಶ ದೇವಿ ಅವರು ಹೇಳಿರುವುದು ಇತ್ತೀಚೆಗೆ ಪತ್ರಿಕೆಗಳಲ್ಲಿ ವರದಿಯಾಗಿತ್ತು. ಅದೇ ದಿನ ಕೇಂದ್ರ ಕೌಶಲಾಭಿವೃದ್ಧಿ ಸಚಿವ ಅನಂತಕುಮಾರ ಹೆಗಡೆ, ‘ಕೌಶಲಾಭಿವೃದ್ಧಿಗೆ ಇಂಗ್ಲಿಷ್‌ ಅನಿವಾರ್ಯವಲ್ಲ’ ಎಂದಿರುವ ಸುದ್ದಿಯೂ ಪ್ರಕಟವಾಗಿತ್ತು. ವಿಜಯಪುರದ ಅಕ್ಕಮಹಾದೇವಿ ವಿಶ್ವವಿದ್ಯಾಲಯದ ಘಟಿಕೋತ್ಸವದಲ್ಲಿ ಯು.ಜಿ.ಸಿ. ಉಪಕಾರ್ಯದರ್ಶಿ ಪಂಕಜಾ ಮಿಠ್ಠಲ್, ‘ಮುಂದಿನ ದಿನಗಳಲ್ಲಿ ಜಗತ್ತಿಗೆ ಬೇಕಾಗುವ ಕೌಶಲಗಳು ಬೇರೆ ರೀತಿಯವು. ಬದಲಾಗುತ್ತಿರುವ ಜಗತ್ತಿಗೆ ಹೊಂದಿಕೊಳ್ಳಲು ಅಗತ್ಯವಿರುವ ಆನ್‌ಲೈನ್ (ಇಂಗ್ಲಿಷ್) ಕೋರ್ಸ್‌ಗಳನ್ನು ಹೆಚ್ಚು ಹೆಚ್ಚು ಜನ ಪಡೆದುಕೊಳ್ಳಬೇಕು’ ಎಂದಿದ್ದೂ ಸುದ್ದಿಯಾಗಿತ್ತು.

ಹೀಗೆ, ವಿಭಿನ್ನ ಹಿನ್ನೆಲೆಯುಳ್ಳ ಗಣ್ಯರು ಬೇರೆಬೇರೆ ಕಡೆಗಳಲ್ಲಿ ಹೇಳಿದ ಮೇಲಿನ ಮಾತುಗಳಲ್ಲಿ ಎದ್ದು ಕಾಣುವುದು ‘ಭಾಷೆ ಮತ್ತು ಕೌಶಲಾಭಿವೃದ್ಧಿ’ ಕುರಿತ ವಿಚಾರವೇ. ಈ ವಿಷಯಗಳನ್ನು ಕುರಿತು ಯೋಚಿಸುತ್ತ ಹೋದಾಗ ಹಲವು ವಿಚಾರಗಳು ಮನಸ್ಸನ್ನು ತುಂಬಿಕೊಂಡವು.

ಹಿಂದೆ ನಮ್ಮ ಸಮಾಜದಲ್ಲಿ ವರ್ಣಾಶ್ರಮ ಪದ್ಧತಿ ಜಾರಿಯಲ್ಲಿತ್ತು. ತಮ್ಮ ಪರಂಪರೆಗೆ ಅನುಗುಣವಾದ, ತಮ್ಮ ವರ್ಣಾಶ್ರಮಕ್ಕೆ ಗುರುತಿಸಲಾದ ವೃತ್ತಿಗೆ ಹುಟ್ಟಿನಿಂದಲೇ ಮಕ್ಕಳನ್ನು ರೂಢಿಸಲಾಗುತ್ತಿತ್ತು. ಪ್ರಾಯ ಬಂದಂತೆ ಅವರಿಗೆ ಆ ವೃತ್ತಿಗಳಲ್ಲಿ ಹೆಚ್ಚಿನ ತರಬೇತಿ ನೀಡಿ ಉದ್ಯೋಗದಲ್ಲಿ ತೊಡಗಿಸಲಾಗುತ್ತಿತ್ತು (ಅದು ಅನಿಷ್ಠ ಪದ್ಧತಿಯಾಗಿತ್ತು ಬಿಡಿ). ಇಲ್ಲಿ ಗಮನಿಸಬೇಕಾದ ವಿಷಯವೆಂದರೆ, ಈ ಪದ್ಧತಿಯಲ್ಲಿ ಶಿಕ್ಷಣ ಹೊರಗಿನಿಂದ ಅಥವಾ ಯಾರೋ ತಯಾರಿಸಿದ ಪಠ್ಯದ ಮೂಲಕ ಬರುತ್ತಿರಲಿಲ್ಲ. ಬದಲಿಗೆ ಒಂದು ಪರಂಪರೆಯಿಂದ, ಸಾಮಾಜಿಕ ಅಗತ್ಯಗಳಿಂದಲೇ ಉದ್ಭವವಾಗಿ ಬರುತ್ತಿತ್ತು. ಶಿಕ್ಷಣವು ಮಾತೃಭಾಷೆಯಲ್ಲಿ ಅಥವಾ ಪರಿಸರದ ಭಾಷೆಯ ಮೂಲಕ ಬರುತ್ತಿತ್ತು. ಮಕ್ಕಳಿಗೆ ಹಲವು ಕೌಶಲಗಳು ಪರಂಪರಾಗತವಾಗಿ ಬಂದುಬಿಡುತ್ತಿದ್ದವು.

ADVERTISEMENT

ನಂತರದ ದಿನಗಳಲ್ಲಿ ವರ್ಣಾಶ್ರಮ ಪದ್ಧತಿ ಶಿಥಿಲವಾದರೂ ಕೌಟುಂಬಿಕವಾಗಿ ಬಂದಿದ್ದ ಹಲವು ಕೌಶಲಗಳು ಕುಟುಂಬ ವಾಹಿನಿಯಲ್ಲಿ ಮುಂದುವರೆಯುತ್ತಲೇ
ಹೋಗಿರುವುದನ್ನು ಈಗಲೂ ಗಮನಿಸಬಹುದು. ಕಾಶ್ಮೀರದ ಕೇಸರಿ ಬೆಳೆಯಿಂದ ಹಿಡಿದು ಕಾಂಜೀವರಂ ಸಿಲ್ಕ್‌ ಸೀರೆಗಳ ತಯಾರಿಕೆಯವರೆಗೆ ಇದಕ್ಕೆ ಸಾಕಷ್ಟು
ಉದಾಹರಣೆಗಳು ಲಭಿಸುತ್ತವೆ. ಬೇರೆ ಬೇರೆ ಸಾಂಸ್ಕೃತಿಕ, ಭಾಷಾ ಹಿನ್ನೆಲೆಯಿಂದ ಬಂದ ಸಮುದಾಯಗಳಿಗೆ ಬೇರೆ ಬೇರೆ ರೀತಿಯ ‘ದೇಸಿ’ ಕೌಶಲಗಳು ಗೊತ್ತಿದ್ದವು. ಸಮುದ್ರ ತೀರದ, ಆದರೆ ತುಸು ಮಲೆನಾಡಿನ ವಾತಾವರಣವನ್ನೂ ಹೊಂದಿದ ಹಳ್ಳಿಯಲ್ಲಿ ಕಲಿತ ನನ್ನ ಸ್ನೇಹಿತರಿಗೆ ಹೈಸ್ಕೂಲ್‌ನಲ್ಲಿ ಇರುವಾಗಲೇ ಮೀನು ಹಿಡಿಯುವು
ದರಿಂದ ದೋಣಿ ನಡೆಸುವುದು, ದೋಣಿ ತಯಾರಿಕೆಯವರೆಗೆ ಹಲವು ಕೌಶಲಗಳು ಗೊತ್ತಿದ್ದವು. ಹೀಗೆ ನಮ್ಮ ದೇಶದಲ್ಲಿ ಲಕ್ಷಾಂತರ ಕೌಶಲಗಳು ಅಡಗಿರುವುದು ಭಾಷೆ
ಗಳಲ್ಲಿ, ಉಪಭಾಷೆಗಳಲ್ಲಿ. ಪ್ರಾದೇಶಿಕ ಭಾಷೆಗಳು ಅಭಿವೃದ್ಧಿಗೊಂಡರೆ ಅಲ್ಲಿಯ ವಿಶಿಷ್ಟ ಕೌಶಲಗಳು ಸಹ ಅಭಿವೃದ್ಧಿ ಹೊಂದುತ್ತವೆ ಅಥವಾ ಆ ಕೌಶಲಗಳನ್ನು ಎತ್ತಿ ಹಿಡಿದರೆ ಆಯಾ ಭಾಷೆಗಳೂ ಜೀವಂತವಾಗಿರುತ್ತವೆ.

ನಮ್ಮ ದೇಶದಲ್ಲಿ ಪ್ರಾದೇಶಿಕ ಭಾಷೆ, ಸಂಸ್ಕೃತಿ, ಕೌಶಲಗಳು ಹೇಗೆ ಚಾರಿತ್ರಿಕವಾಗಿ ಕಳೆದ ಕೆಲವು ಶತಮಾನಗಳ ಕಾಲ ಸಾಮರ್ಥ್ಯ ಕಳೆದುಕೊಂಡು ಮೂಲೆಗೆ ಬಿದ್ದಿದ್ದವು ಎನ್ನುವುದನ್ನೂ ಅರಿತುಕೊಳ್ಳಬೇಕು. ಗಣೇಶದೇವಿಯವರು ತಮ್ಮ ಪ್ರಸಿದ್ಧ  ಕೃತಿ ‘After Amnesia’ ದಲ್ಲಿ ಹೇಳಿರುವಂತೆ, ಬ್ರಿಟಿಷ್‍ ವಸಾಹತುಶಾಹಿ ಭಾರದಲ್ಲಿ ಸ್ಥಾಪನೆಗೊಂಡು ಇಂಗ್ಲಿಷ್‌ ಭಾಷೆ ವಿಜೃಂಭಿಸಿದ ನಂತರ ದೇಶಕ್ಕೆ ಒಂದು ರೀತಿಯ ‘ವಿಸ್ಮರಣೆ’ ಬಂದು ಹೋಯಿತು. ವಸಾಹತುಶಾಹಿ ಸಂಸ್ಕೃತಿಯ ಪಾದದಡಿಯಲ್ಲಿ ಶರಣಾಗಿ ಹೋಗುವ ಎಲ್ಲ ಸಂಸ್ಕೃತಿಗಳಿಗೂ ಹೀಗೆಯೇ ಆಗುತ್ತದೆ. ವಸಾಹತುಶಾಹಿ ಸಂಸ್ಕೃತಿ ಮತ್ತು ಭಾಷೆಯು ‘ದೇಸಿ’ ಸಂಸ್ಕೃತಿಗಳ ಮನಸ್ಸುಗಳೊಳಗೆ ಕೀಳರಿಮೆಯ ಭಾವನೆ
ಯನ್ನು ಹುಟ್ಟು ಹಾಕುತ್ತವೆ. ಹೀಗೆ ಕೀಳರಿಮೆಯಲ್ಲಿ ನರಳುವ ಸಂಸ್ಕೃತಿಗಳು ಕ್ರಮೇಣ ತಮ್ಮ ಸಂಸ್ಕೃತಿ, ಮೌಲ್ಯ, ಭಾಷೆ, ಕೌಶಲಗಳನ್ನು ಕಳೆದುಕೊಂಡು ‘ಪರಕೀಯ’ ವಾಗುತ್ತವೆ ಅಥವಾ ‘ಅನ್ಯ’ವಾಗುತ್ತವೆ. ನಮ್ಮ ದೇಶದಲ್ಲಿ ಆಗಿದ್ದೂ ಇದೇ. ಜನರು ತಮ್ಮ ಸಂಸ್ಕೃತಿಯಿಂದ ವಿಮುಖರಾದಂತೆ ಹಳ್ಳಿ ಹಳ್ಳಿಗಳ ಮೂಲೆಗಳಲ್ಲಿ ತುಂಬಿಕೊಂಡಿದ್ದ ಲಕ್ಷಾಂತರ ಕೌಶಲಗಳು ‘ವಿಸ್ಮೃತಿ’ ಹೊಂದುತ್ತ ವಿನಾಶದತ್ತ ಹೋದವು.

ಇಲ್ಲಿ ಸ್ಪಷ್ಟವಾಗುವ ವಿಷಯವೆಂದರೆ ಭಾಷೆ ಮತ್ತು ಕೌಶಲಕ್ಕೆ ನೇರ ಸಂಬಂಧವಿದೆ. ಕರ್ನಾಟಕದಲ್ಲಿ ಕೌಶಲಾಭಿವೃದ್ಧಿ ಸಾಧ್ಯವಾಗುವುದು ಕನ್ನಡ ಭಾಷೆಯ ಹಾಗೂ ಕನ್ನಡ ಉಪಭಾಷೆಗಳ ಅಭಿವೃದ್ಧಿಯಿಂದ ಮಾತ್ರ. ಭಾಷೆ ಅಭಿವೃದ್ಧಿಗೊಂಡರೆ ಕೌಶಲಗಳು ಅಭಿವೃದ್ಧಿಗೊಳ್ಳುತ್ತವೆ ಮತ್ತು ಜನರು ಆತ್ಮವಿಶ್ವಾಸ ಬೆಳೆಸಿಕೊಂಡರೆ ಆ ಪ್ರದೇಶದ ಭಾಷೆ ಅಭಿವೃದ್ಧಿಗೊಳ್ಳುತ್ತದೆ. ಸರ್ಕಾರಗಳು ಪ್ರಾದೇಶಿಕ ಕೌಶಲಗಳಿಗೆ ಪ್ರಾಮುಖ್ಯ ನೀಡುತ್ತ ಹೋದಂತೆ ಆ ಕೌಶಲಗಳು ತಮ್ಮ ಹಿಂದಿರುವ ಭಾಷೆಯನ್ನು ಜಾಗೃತಗೊಳಿಸಿಕೊಳ್ಳುತ್ತಲೇ ಹೋಗುತ್ತವೆ. ಪ್ರಸ್ತುತ ಸಂದರ್ಭದಲ್ಲಿ ಇದು ಬಹಳ ಮಹತ್ವವಾದದ್ದು ಕೂಡ.

ಗ್ರಾಮೀಣ ಕೌಶಲಗಳ ಮತ್ತು ಉಪಕೌಶಲಗಳ ಗುರುತಿಸುವಿಕೆಯನ್ನು ಆಂದೋಲನದ ರೀತಿಯಲ್ಲಿ ಹಮ್ಮಿಕೊಂಡು ‘ದೇಸಿ’ ಕೌಶಲಗಳ ರಾಷ್ಟ್ರೀಯ ರಿಜಿಸ್ಟರ್ ಒಂದನ್ನು ಸರ್ಕಾರಗಳು ಆಂದೋಲನದ ರೂಪದಲ್ಲಿ ಸಿದ್ಧಗೊಳಿಸಬೇಕಾಗಿದೆ. ಕೌಶಲ ಸಚಿವಾಲಯ ನಿಜಕ್ಕೂ ಸಂಸ್ಕೃತಿ ಮತ್ತು ಭಾಷೆಗಳ ಸಚಿವಾಲಯವಾಗಿ ಕೆಲಸ ಮಾಡಬೇಕಾಗುತ್ತದೆ.

ವಸಾಹತುಶಾಹಿ ಸಂಸ್ಕೃತಿಯಿಂದ ಅಥವಾ ವಸಾಹತುಶಾಹಿ ಸಂಸ್ಕೃತಿಯನ್ನು ದೇಶಕ್ಕೆ ತಂದ ಮಾಧ್ಯಮವಾದ ಇಂಗ್ಲಿಷ್‌ ಭಾಷೆಯಿಂದ ಆಗಿದ್ದೆಲ್ಲವೂ ಕೆಟ್ಟದ್ದೇ ಎಂದು ಭಾವಿಸಬೇಕಿಲ್ಲ. ಇಂಗ್ಲಿಷ್‌ ನಮಗೆ ನಗರೀಕರಣ ಮತ್ತು ಜಾಗತೀಕರಣಕ್ಕೆ ಸಂಬಂಧಿಸಿದ ಕೌಶಲಗಳನ್ನು ತಂದುಕೊಟ್ಟಿದೆ. ಪಂಕಜಾ ಮಿಠ್ಠಲ್ ಹೇಳುವಂತೆ ಅಂತರರಾಷ್ಟ್ರಿಯ ಕೌಶಲಗಳು ಇಂಗ್ಲಿಷ್‌ ಭಾಷೆಯ ಜೊತೆಗಿವೆ. ಅವು ಕೂಡ ನಮಗೆ ಬೇಕು.

ಇನ್ನೊಂದು ವಿಷಯ ಗಮನಾರ್ಹವಾದುದು. ಅದೆಂದರೆ ಕನ್ನಡವಾಗಲೀ, ಇಂಗ್ಲಿಷ್‌ ಆಗಲೀ ನಮ್ಮಲ್ಲಿ ಭಾಷೆಯನ್ನು ಅತ್ಯಂತ ಸತ್ವಹೀನವಾಗಿ ಕಲಿಸಲಾಗುತ್ತದೆ. ಇದೇ ಸ್ಥಿತಿ ಮುಂದುವರಿದರೆ ಕನ್ನಡ ಸಂಸ್ಕೃತಿಗೆ ಸಂಬಂಧಪಟ್ಟ ಇದ್ದಬಿದ್ದ ಕೌಶಲಗಳೂ ನಾಶವಾಗುತ್ತವೆ. ಇದೇ ಸ್ಥಿತಿಯನ್ನು ಬಹುಶಃ ದೇಶದ ಎಲ್ಲ ಭಾಷೆಗಳೂ ಎದುರಿಸುತ್ತಿವೆ. ಕೌಶಲಾಭಿವೃದ್ಧಿಯ ಸಂದರ್ಭದಲ್ಲಿ ಕನ್ನಡ (ಪ್ರಾದೇಶಿಕ ಭಾಷೆ) ಮತ್ತು ಇಂಗ್ಲಿಷ್‌ ಎರಡನ್ನೂ ನಾವು ಸತ್ವಯುತವಾಗಿ ಬೋಧಿಸಬೇಕಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.