ADVERTISEMENT

ಮತಾಂತರವೂ, ಘರ್ ವಾಪಸಿಯೂ

ಡಾ.ಮೂಡ್ನಾಕೂಡು ಚಿನ್ನಸ್ವಾಮಿ
Published 30 ಡಿಸೆಂಬರ್ 2014, 19:30 IST
Last Updated 30 ಡಿಸೆಂಬರ್ 2014, 19:30 IST

ಮತಾಂತರವನ್ನು ಇದುವರೆಗೆ ಯಾರು ತೀವ್ರವಾಗಿ ವಿರೋಧಿಸುತ್ತಿದ್ದರೋ ಅವರೇ ಮಹಾ ಮತಾಂತರಕ್ಕೆ ಮುಂದಾಗಿದ್ದಾರೆ. ಅದನ್ನು ಅವರು ಮರು ಮತಾಂತರ ಅಥವಾ ‘ಮರಳಿ ಮನೆಗೆ’ (ಘರ್ ವಾಪಸಿ) ಎಂದು ಕರೆದುಕೊಳ್ಳುತ್ತಿದ್ದಾರೆ. ಅವರಿಗೆ ಹಿಂದೆ ಆಗಿ­ಹೋದ ಮತಾಂತರಕ್ಕೆ ಕಾರಣಗಳು ತಿಳಿದಿಲ್ಲ­ವೆಂದೇ­ನಲ್ಲ. ಆದರೂ ಅವರು ಕೊಡುವ ಈಗಿನ ಕಾರಣಗಳು ಬೇರೆ.

ಮುಸ್ಲಿಮರು ನಮ್ಮನ್ನು ಆಳಿದರು, ದಬ್ಬಾಳಿಕೆ ನಡೆಸಿದರು, ಕತ್ತಿಯ ಮೊನೆಯಲ್ಲಿ ನಮ್ಮನ್ನು ಮತಾಂತರಗೊಳಿಸಿದರು ಎಂಬ ಹುಯಿಲು ಅವ­ರದು. ಸ್ವಾಮಿ ವಿವೇಕಾನಂದರು ಇದಕ್ಕೆ ಬಹಳ ಹಿಂದೆಯೇ ಉತ್ತರ ನೀಡಿದ್ದಾರೆ: ‘ಯಾಕೆ ಭಾರ­ತದ ಬಡಜನರಲ್ಲಿ ಬಹಳ ಮಂದಿ ಮಹ­ಮದೀ­ಯ­ರಾಗಿರುತ್ತಾರೆ? ಅವರನ್ನು ಕತ್ತಿಯ ಅಲುಗಿ­ನಲ್ಲಿ ಮತಾಂತರಗೊಳಿಸಲಾಗಿದೆ ಎಂದು ದೂರು­ವುದು ತಿಳಿಗೇಡಿತನ. ಜಮೀನ್ದಾರರು ಮತ್ತು ಪುರೋಹಿತರಿಂದ ಮುಕ್ತಿ ಪಡೆಯುವುದಕ್ಕೆ ಅವರು ಮುಸ್ಲಿಮರಾದರು’.

ತೆಲುಗಿನಲ್ಲಿರುವ ‘ಮೈ ಫಾದರ್ ಬಾಲಯ್ಯ’ ಎಂಬ ವೈ.ಬಿ. ಸತ್ಯನಾರಾಯಣ ಅವರ ಆತ್ಮಕತೆ ಇತ್ತೀಚೆಗೆ ಕನ್ನಡಕ್ಕೆ ಬಂದಿದೆ. ಅಲ್ಲಿನ ಒಂದು ಘಟನೆ ಹೀಗಿದೆ: ಸಮಗಾರನಾದ ಅವರ ಅಜ್ಜನು ನಿಜಾಮ ದೊರೆಗೆ ಎಳೆಗರುವಿನ ಚರ್ಮದಿಂದ ಒಂದು ಜತೆ ಚಪ್ಪಲಿಯನ್ನು ಮಾಡಿಕೊಡು­ತ್ತಾನೆ. (ಈ ಘಟನೆ ಹರಳಯ್ಯ ದಂಪತಿ ತಮ್ಮ ತೊಡೆಯ ಚರ್ಮದಿಂದ ಬಸವಣ್ಣನವರಿಗೆ ಪಾದು­ಕೆಗಳನ್ನು ಮಾಡಿಕೊಟ್ಟ ಘಟನೆಯನ್ನು ನೆನಪಿಸುತ್ತದೆ). ಅದನ್ನು ಮೆಟ್ಟಿ ಸಂತುಷ್ಟನಾದ ನಿಜಾಮ ಆ ಅಜ್ಜನಿಗೆ 50 ಎಕರೆ ಹೊಲವನ್ನು ಬಳುವಳಿ­ಯಾಗಿ ಕೊಡುತ್ತಾನೆ. ಆದರೆ ಹಳ್ಳಿಯ ಜಮೀ­ನ್ದಾರ ಎಲ್ಲವನ್ನೂ ತನ್ನ ಹೆಸರಿಗೆ ಬರೆಸಿ­ಕೊಂಡು ಇವನಿಗೆ ಎರಡು ಎಕರೆ ಮಾತ್ರ ಬಿಡು­ತ್ತಾನೆ! ಅದು ಆ ಶ್ರಮಿಕ ಅಜ್ಜನ ಸೇವಾ­ನಿಷ್ಠೆಯ ಪರಾ­ಕಾಷ್ಠೆ. ಆದರೆ ಜಮೀನ್ದಾರನ ಕುಟಿಲತೆ ಜಾತಿ ನೀತಿಯ ಕ್ರೌರ್ಯದ ಪರಾಕಾಷ್ಠೆಯೂ ಹೌದು.

ಇವತ್ತಿನ ಪರಿಸ್ಥಿತಿ ನೋಡಿದರೂ ಜಮೀ­ನ್ದಾರರು, ಪುರೋಹಿತರು ಬದಲಾಗಿದ್ದಾರೆಯೇ? (ಅಪವಾದಗಳನ್ನುಳಿದು) ಜಾತಿ ವ್ಯವಸ್ಥೆ ಸುಭದ್ರವಾಗಿರುವ ಗ್ರಾಮೀಣ ಭಾಗದಲ್ಲಿ ಕೆಳ ಜಾತಿಗಳು ಮತ್ತು ದಲಿತರ ಮೇಲೆ ನಿರಂತರ­ವಾಗಿ ದಬ್ಬಾಳಿಕೆ, ಶೋಷಣೆ ನಡೆಯು­ತ್ತಲೇ ಇದೆ. ನಮ್ಮ ಶಿಕ್ಷಣದ ಹೂರಣ ಜಾತಿ ವ್ಯವಸ್ಥೆಯ ಬಗ್ಗೆ ಮಗುಮ್ಮಾಗಿದೆ. ಸಂವಿಧಾ­ನಾತ್ಮಕ­ವಾಗಿ ರಾಜಕೀಯ ಪ್ರಾತಿನಿಧ್ಯ ದೊರೆತಿ­ದ್ದರೂ ಅವರೆಲ್ಲರೂ ಹಲ್ಲು ಕಿತ್ತ ಹಾವಿನಂತೆ ಆಗಿರುತ್ತಾರೆ (ಪೂನಾ ಒಪ್ಪಂದದ ಪರಿಣಾಮ)! ಮುಂದಿನ ಬಾರಿಯೂ ಮೇಲ್ಜಾತಿ ಜನರಿಂದಲೇ ಆರಿಸಿ ಬರಬೇಕಾಗಿರುವುದರಿಂದ ಹಳ್ಳಿಗಳಲ್ಲಿ ಜಾತಿ ವ್ಯವಸ್ಥೆಯ ಬರ್ಬರತೆಯ ಬಗ್ಗೆ ಚಕಾರ ಎತ್ತಲಾರರು. ಇತ್ತೀಚೆಗೆ ಮೈಸೂರು ಜಿಲ್ಲೆಯ ಕುಪ್ಪೆಗಾಲದ ಶಾಲೆಯಲ್ಲಿ ದಲಿತ ಮಕ್ಕಳೊಂದಿಗೆ ಬಿಸಿಯೂಟ­ವನ್ನು ನಿರಾಕರಿಸಿದ ಪೋಷಕರ ವರ್ತನೆ­ಯನ್ನು ದಲಿತ, -ಹಿಂದುಳಿದವರೂ ಸೇರಿ­ದಂತೆ ಯಾವ ರಾಜಕಾರಣಿಯೂ ಖಂಡಿಸಲು ಮುಂದಾಗದಿ­ದ್ದುದು ಇದಕ್ಕೆ ಸಾಕ್ಷಿ.

ಇನ್ನು ಆರ್ಥಿಕ ಪ್ರಗತಿಗೆ ಅನೇಕ ಅಡಚಣೆ­ಗಳಿವೆ. ಸ್ವಾತಂತ್ರ್ಯ ಬಂದ 67 ವರ್ಷಗಳಿಂದಲೂ ಪರಿಶಿಷ್ಟರಿಗೆ ಇಂತಿಷ್ಟು ಹಣವನ್ನು ಆಯವ್ಯಯ­ದಲ್ಲಿ ಮೀಸಲಿರಿಸಲಾಗುತ್ತದೆ. ಅದು ಪೂರ್ಣ­ವಾಗಿ ಖರ್ಚಾಗದೇ ಉಳಿಯುತ್ತದೆ. ಯಾಕೆಂದರೆ ದಲಿತನೊಬ್ಬ ಹಳ್ಳಿಯಲ್ಲಿ ಕಿರಾಣಿ  ಅಂಗಡಿ ಇಟ್ಟುಕೊಂಡರೆ ಸವರ್ಣೀಯರು ಯಾರೂ ಕೊ­ಳ್ಳಲು ಬರುವುದಿಲ್ಲ. ಹಸುಗಳ ಹಾಲು ಕರೆದು ಮಾರುವಂತಿಲ್ಲ. ಇನ್ನು ಹೋಟೆಲಿನ ಒಳಗ­ಡೆಯೇ ಸೇರಿಸದಿರುವಾಗ ದಲಿತರು ಹೋಟೆಲ್‌ ನಡೆ­ಸುವ ಮಾತು ದೂರವೇ ಉಳಿಯಿತು. ಅವರಿಗೆ ಮೀನು ಹಿಡಿಯಲು ಕಲಿಸಿದರೆ ಕೆರೆಗೆ ಇಳಿಯ­ಬೇಕು. ಇಳಿಯಲು ಬಿಟ್ಟರೆ ಕೆರೆ ಮೈಲಿ­ಗೆಯಾ­ಗುತ್ತದೆ!

ಆಗ ಮೇಲ್ವರ್ಗದವರನ್ನು ಎದುರು ಹಾಕಿಕೊಳ್ಳ­ಬೇಕು. ಆದಕಾರಣ ರೂಪಾ­ಯಿ­­­ಗೊಂದು ಮೀನು ಕೊಟ್ಟು ಕೈತೊಳೆದುಕೊಳ್ಳು­ವುದೇ ವಾಸಿ ಎಂಬುದು ಆಳುವವರ ನಿಲುವು. ಇಂಥ ಉದಾಹರಣೆಗಳು ಅನೇಕ.
ಸರ್ಕಾರಿ ವಲಯದಲ್ಲಿ ಮಾತ್ರ ಮೀಸಲಾತಿ ಲಾಭ ದೊರಕುತ್ತಿದೆ. ಅದು ಒಟ್ಟಾರೆ ಉದ್ಯೋಗ ಸೃಷ್ಟಿಯ ಶೇ 5ಕ್ಕಿಂತಲೂ ಕಡಿಮೆಯಿದೆ. ಅದರಲ್ಲಿ ದಲಿತರ ಪಾಲು ಎಷ್ಟು? ಅವರ ಆರ್ಥಿಕ ಬೆಳವಣಿಗೆ ಹೇಗೆ?
ನಮ್ಮದು ಸಮಾಜವಾದಿ ಪ್ರಜಾಪ್ರಭುತ್ವ­ವೆಂದು ಹೇಳಿಕೊಂಡರೂ ಬಂಡವಾಳಶಾಹಿಯತ್ತ ಹೆಚ್ಚು ವಾಲಿಕೊಂಡಿರುವ ಆರ್ಥಿಕತೆಯಲ್ಲಿ ದಲಿತ ಮತ್ತು ಹಿಂದುಳಿದವರಿಗೆ ಜಾಗವೇ ಇಲ್ಲ­ದಂತಾಗಿದೆ. ಹೀಗಿರುವಾಗ ಕೇವಲ ಬಡಜನರ ಮರುಮತಾಂತರ ಯಾರ ಒಳಿತಿಗಾಗಿ?

ಅಂಬೇಡ್ಕರ್ ಪ್ರತಿಪಾದಿಸಿದಂತೆ ಸ್ವಾಭಿಮಾನ­ಕ್ಕಾದರೂ ಹೇಳಿಕೊಳ್ಳುವಂಥ ಒಂದು ಮತ ಈ ಜನರಿಗೆ ಬೇಕು. ಘರ್‌ ವಾಪಸಿಯ ನೆಪದಲ್ಲಿ ಅದನ್ನೂ ಕಸಿದುಕೊಳ್ಳಲಾಗುತ್ತಿದೆ. ಮೇಲಾಗಿ ವಾಪಸು ಬಂದವರು ತಮ್ಮ ಮೂಲ ಜಾತಿಗ­ಳನ್ನು ಹೇಳಿಕೊಳ್ಳಬೇಕಂತೆ! ಮತ್ತೆ ಅವರಿಗೆ ಜಾತಿ ಹೇಳಿಕೊಳ್ಳಲು ಅವಮಾನದಿಂದ ಕುಗ್ಗಿಹೋಗುವ ಮುಜುಗರ. ಮನೆ ಬಾಡಿಗೆ ಪಡೆಯಲು ಅದನ್ನು ಮುಚ್ಚಿಡುವ ಸಾಹಸ. ಇಲ್ಲಿ ರವೀಂದ್ರನಾಥ ಟ್ಯಾಗೋರರ ಒಂದು ಮಾತು ಉಲ್ಲೇಖನೀಯ: ‘ಮತಾಂತರವೆಂದರೆ ತನ್ನ ಯಜಮಾನನ ಚಹಾ ತೋಟಗಳಿಗೆ ಕೂಲಿ ಕಾರ್ಮಿಕರನ್ನು ಒಟ್ಟುಗೂ­ಡಿಸಿ ತರುವ ಗುತ್ತಿಗೆದಾರನ ಕೆಲಸವಲ್ಲ’. ನಮಗೆ ಬೇಕಾದ ಸಿದ್ಧಾಂತವನ್ನು ಒಪ್ಪಿ ಕೊಳ್ಳಬೇಕೆಂದು ಬಲವಂತ ಪಡಿಸುವುದರಲ್ಲಿ ಧರ್ಮಕ್ಕೂ ಒಳಿ­ತಾಗುವುದಿಲ್ಲ, ಸಮಾಜಕ್ಕೂ ಒಳಿತಾಗುವುದಿಲ್ಲ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.