ADVERTISEMENT

ಮಹಿಳೆಯರಿಗೇಕೆ ಭೈರಪ್ಪನವರ ಮೇಲೆ ಮುನಿಸು?

ಚಂದ್ರಕಾಂತ ಪೋಕಳೆ
Published 4 ಫೆಬ್ರುವರಿ 2015, 19:30 IST
Last Updated 4 ಫೆಬ್ರುವರಿ 2015, 19:30 IST

‘ತನ್ನ ಮುಂದೆ ಕುಳಿತ ಲೇಖಕನನ್ನು  ಗೌರ­ವಿಸದ ಮತ್ತು... ಮಹಿಳೆ­ಯ­ರನ್ನು ಗೌರ­ವಿ­ಸದವರನ್ನು ಲೇಖಕ ಎಂದು ಒಪ್ಪಿ­ಕೊಳ್ಳ­ಲಾ­ಗದು. ಅಂಥವರು  ಮನುಷ್ಯರೇ ಅಲ್ಲ’ ಎಂಬ ವರದಿ­ಯನ್ನು ಓದಿದೆ (ಪ್ರ.ವಾ., ಫೆ. 3).
­­­­ಇತ್ತೀಚೆಗೆ ವಿಮ­­­­­­­­­­­­­ರ್ಶಾ ವಲ­­-­­ಯದಲ್ಲಿ ಇಂಥ ಸಂಕು­ಚಿತ ಮನೋಭಾವ ಏಕೆ ಬೆಳೆ­­ಯುತ್ತಿದೆ? ಅರ್ಥವಾಗುತ್ತಿಲ್ಲ. ಒ­­­­­­ಬ್ಬ ಲೇಖಕರನ್ನು ‘ಮನು­ಷ್ಯರೇ ಅಲ್ಲ’ ಎನ್ನುವುದು ಅತಿರೇಕ ಅಲ್ಲವೇ? ವಿಮರ್ಶೆ ಕೃತಿನಿಷ್ಠವಾಗಿರುವುದರ ಬದಲು ವ್ಯಕ್ತಿ­ನಿಷ್ಠ ಏಕಾಗುತ್ತಿದೆ? ‘ಭೈರಪ್ಪ ಕಾದಂಬರಿ­ಕಾರರು ಅಲ್ಲವೇ ಅಲ್ಲ’ ಎಂದು ಅವರ ‘ಆವರಣ’ ಬಂದ ಸಂದರ್ಭದಲ್ಲಿ ಯು.ಆರ್‌. ಅನಂತಮೂರ್ತಿ ಪ್ರತಿಕ್ರಿಯಿಸಿದ್ದು ಪತ್ರಿಕೆಯಲ್ಲಿ ಓದಿದ ನೆನಪು.

ಭೈರಪ್ಪನವರು ಎಡಪಂಥೀಯರನ್ನು ತರಾಟೆಗೆ ತೆಗೆದುಕೊಂಡಾಗಲೂ ಇಂಥದ್ದೇ ವಿರೋಧ ಮೂಡಿ­ಬಂದಿತ್ತು. ಕನ್ನಡದ ಓದುಗರು ಭೈ­ರಪ್ಪ­ನವರ ಕಾದಂಬ­ರಿ­ಗಳನ್ನು ಇಂದಿಗೂ ಮೆಚ್ಚು­ತ್ತಾರೆ. ವಿಮರ್ಶಾ ವಲ­ಯ ಮಾತ್ರ ವಿರೋಧಿ­ಸುತ್ತದೆ. ಅವರ ವಿರೋಧ ತಾತ್ವಿಕವಾಗಿ ಸರಿಯಿರಲೂಬಹುದು. ಆದರೆ ‘ಅವರು ಲೇಖಕರೇ ಅಲ್ಲ. ಮನು­ಷ್ಯರೇ ಅಲ್ಲ’ ಎಂಬ ಮಾತು ಮಾತ್ರ ಹದ್ದು ಮೀರಿದ ಮಾತು ಎಂದೆನಿಸುತ್ತದೆ.

ಕೆಲವು ತಿಂಗಳ ಹಿಂದೆ ಮರಾಠಿಯ ಖ್ಯಾತ ಲೇಖಕರೊಬ್ಬರು ಬೆಳಗಾವಿಗೆ ಬಂದಾಗ, ‘ಭೈರಪ್ಪ­­ನ­ವರ ಅನುವಾದಿತ ಕೃತಿಯನ್ನು ನೀವು ಓದಿದ್ದೀರಾ?’ ಎಂದು ಕೇಳಿ, ‘ಹೇಗನಿಸಿತು’ ಎಂದು ಪ್ರಶ್ನಿಸಿದೆ. ಆಗವರು ‘‘ನನಗೆ  ‘ಆವರಣ’  ಮೆಚ್ಚುಗೆಯಾಗಲಿಲ್ಲ’’ ಎಂದರು. ಉಳಿದ  ಮರಾಠಿ ಗೆಳೆಯರನ್ನು ಕೇಳಿದೆ. ‘ನೀವೇಕೆ ಭೈರಪ್ಪ ಕೃತಿಗಳನ್ನು ಮೆಚ್ಚುತ್ತೀರಿ?’ ಆಗ ಅವರು ಉತ್ತರಿಸಿದ್ದು ಹೀಗೆ. ‘‘ನಾವು ಕಳೆದುಕೊಂಡ ಹಿಂದೂ ಧರ್ಮ, ಸಂಸ್ಕೃತಿಯ ಪರವಾಗಿ ಅವರು ಬರೆಯುತ್ತಾರೆ. ಅಂಥಾ ಕೃತಿಗಳನ್ನು ಓದಿಗಾಗಿ ನಮಗೆ ‘ಕಳಕೊಂಡ’ ಸಂಸ್ಕೃತಿಯನ್ನು ಮರಳಿ ಪಡೆದ ಅನುಭವವಾಗುತ್ತದೆ’’ ಎಂದರು.

ಇದೇನೂ ಮರಾಠಿ ಓದುಗರ ಸಾರ್ವತ್ರಿಕ ಅನು­ಭವವಲ್ಲ. ‘ಮಹಾರಾಷ್ಟ್ರೀಯರು ಮೆಚ್ಚಿದ ಭೈರಪ್ಪನವರ ಕಾದಂಬರಿಗಳು’ ಎಂಬ ಕೃತಿಯನ್ನು ವಿರೂ­ಪಾಕ್ಷ ಕುಲಕರ್ಣಿ ಮತ್ತು ಉಮಾ ಕುಲ­ಕರ್ಣಿ ಹೊರತಂದಿದ್ದಾರೆ. ಅಲ್ಲೂ ಹಲವು ವಿಮರ್ಶಕರು ಭೈರಪ್ಪನವರ ಕೃತಿ ಪರೀಕ್ಷೆಯನ್ನು ಕೈಗೊಂಡಿದ್ದಾರೆ. ಅಲ್ಲೂ ಹಿಂದೂವಾದಿಗಳು, ಕನ್ನಡ­ದಲ್ಲಿದ್ದಂತೆ ಅವರ ಕೃತಿಗಳನ್ನು ತುಂಬ ಮೆಚ್ಚಿ­ಕೊಂಡಿರುವುದು ಕಂಡು ಬರುತ್ತದೆ. ಇಂದು ಮಹಾರಾಷ್ಟ್ರದಲ್ಲಿ ತುಂಬಾ ಬೇಡಿಕೆಯಿರುವ ಲೇಖಕ ಎಂದರೆ ಭೈರಪ್ಪ ಎಂದರೆ ಬೆರಗಾಗದೆ ಇರದು. ಮರಾಠಿಯಲ್ಲಿ ಬ್ರಾಹ್ಮಣರೇ ಪುಸ್ತಕ­ಗಳನ್ನು ಹೆಚ್ಚು ಕೊಂಡು ಓದುತ್ತಾರೆ. ಹೀಗಾಗಿ ಅವರು ಭೈರಪ್ಪ ಅವರನ್ನು ಒಪ್ಪಿದರೆ – ಮೆಚ್ಚಿ­ದರೆ ಅಚ್ಚರಿ ಪಡಬೇಕಿಲ್ಲ – ಎಂದರು ಗೆಳೆಯರು.

ವಿಚಿತ್ರವೆಂದರೆ ದೇವನೂರ ಮಹಾದೇವ ಅವರ ‘ಕುಸುಮ ಬಾಲೆ’ಯೂ ಮರಾಠಿಗೆ ಭಾಷಾಂತ­ರ­ಗೊಂಡಿದೆ. ನೇಮಾಡೆ ಅದಕ್ಕೆ ಮುನ್ನುಡಿಯನ್ನೂ ಬರೆದಿದ್ದಾರೆ. ಆದರೆ ‘ಕುಸುಮಬಾಲೆ’, ಭೈರಪ್ಪ­ನವರ ಕೃತಿಗಳಷ್ಟು ಚರ್ಚೆಗೆ ಒಳಗಾಗಿಲ್ಲ ಎಂಬ ಕಟು ಸತ್ಯವನ್ನು ಅವರೂ ಒಪ್ಪಿಕೊಳ್ಳುತ್ತಾರೆ. ಮರಾಠಿಯಲ್ಲಿ ಭೈರಪ್ಪ, ಕಾರ್ನಾಡ್‌, ಅನಂತ­ಮೂರ್ತಿ, ವೈದೇಹಿ, ಸುಧಾಮೂರ್ತಿ ತುಂಬಾ ಜನಪ್ರಿಯ ಕನ್ನಡ ಲೇಖಕರು. ಇವರೆಲ್ಲ ಯಾವ ವರ್ಗಕ್ಕೆ ಸೇರಿದವರೆಂದು ಬಿಡಿಸಿ ಹೇಳಬೇಕಾಗಿಲ್ಲ. ‘ಆವರಣ’ ಮತ್ತು ‘ಕವಲು’ ಕನ್ನಡದಲ್ಲಿ ತುಂಬಾ  ವಿರೋಧವನ್ನು ಎದುರಿಸಬೇಕಾಯಿತು. ಆದರೆ ಮರಾಠಿಯಲ್ಲಿ ಯಾವ ವಿರೋಧವೂ ನನ್ನ ಗಮನಕ್ಕೆ ಬಂದಿಲ್ಲ. ಬಂದರೂ ಕನ್ನಡದಷ್ಟು ಉಗ್ರವಾದ ರೀತಿಯಲ್ಲಿ ಇಲ್ಲ. ಅದೇನೇ ಇದ್ದರೂ ಭೈರಪ್ಪ, ಕಾರ್ನಾಡ್‌ ಮರಾಠಿಗರಿಗೆ ಮೆಚ್ಚುಗೆ­ಯಾ­ಗಿದ್ದು ಮಾತ್ರ ಸತ್ಯ.  ಮರಾಠಿಗರಿಗೆ ಕನ್ನಡದ ಲೇಖಕರ ಬಗೆಗೆ ಅಪಾರ ಗೌರವವಿದೆ.

ಭೈರಪ್ಪನವರನ್ನು  ಶ್ರೇಷ್ಠ ಲೇಖಕ ಅಷ್ಟೇ ಅಲ್ಲ, ‘ಮನುಷ್ಯ’ರೆಂದೂ ಅಲ್ಲಿನವರು ಗೌರವಿಸಿದ್ದಾರೆ. ಕನ್ನಡದ ಮಹತ್ವದ ಲೇಖಕರನ್ನು, ಸಂಗೀತ­ಗಾರರನ್ನು, ವಿಜ್ಞಾನಿಗಳನ್ನು ಕಣ್ತುಂಬ ನೋಡಿ ಸಂತೋಷಪಡಲು ಅನ್ಯಭಾಷಿಕರು ಈಗಲೂ ಮುಂದಾಗುವುದು ಕಂಡುಬರುತ್ತದೆ. ಕನ್ನಡದಲ್ಲಿ ಭೈರಪ್ಪನವರ ಪರ ಮತ್ತು ವಿರೋಧದ ಗುಂಪುಗಳು ಒಂದೋ ಹೊಗಳುವ, ಇಲ್ಲವೇ ತೆಗಳುವ ಕೆಲಸವನ್ನು ಈಗಲೂ ಮಾಡು­ತ್ತಿವೆ. ಪತ್ರಿಕೆಗಳಲ್ಲೂ ಇಂಥ ಗುಂಪುಗಾರಿಕೆಯಿದೆ.

ಚಂದ್ರಶೇಖರ ಕಂಬಾರರಿಗೆ ಜ್ಞಾನಪೀಠ ಪ್ರಶಸ್ತಿ ಬಂದಾಗ,  ಮರಾಠಿಗರ ವಿರುದ್ಧ ಅವರು ಮಾತಾಡಿದರೆಂದು ಬೆಳಗಾವಿಯ ಮರಾಠಿ ವಲಯ ಅವರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿತ್ತು.  ಆದರೆ ಮರಾಠಿಯ ವಿಮರ್ಶಕರು ಮಾತ್ರ ಕಂಬಾರರಿಗೆ ಬೆಂಬಲ ಸೂಚಿಸಿ ‘ಕಂಬಾರರ ಮಾತು ಮುಖ್ಯವಲ್ಲ, ಅವರ ಸಾಹಿತ್ಯ ನಮಗೆ ಮುಖ್ಯ’ ಎಂದದ್ದು ನನಗೆ ಈಗಲೂ ನೆನಪಿದೆ.

ಸಾಹಿತ್ಯದಲ್ಲಿರುವ ಗುಂಪುಗಾರಿಕೆಯಿಂದ ಸಾಮಾನ್ಯ ಓದುಗರು ದಿಕ್ಕು ತಪ್ಪುವಂತಾಗುತ್ತಿದೆ. ಇದರಿಂದ ಬಿಡುಗಡೆಯಿಲ್ಲವೇ? ಪ್ರಾಜ್ಞರು ಯೋಚಿಸು­ವಂತಾಗಲಿ. ವೈರುಧ್ಯವನ್ನು ಸಹ  ಮಾನವೀಯ ನೆಲೆಯಲ್ಲಿ ನೋಡುವುದು ಆರೋಗ್ಯಕರ ಲಕ್ಷಣ. ಇದು ಒಬ್ಬ ಓದುಗನಾಗಿ ನನ್ನ ಪ್ರತಿಕ್ರಿಯೆ, ವಿಮರ್ಶಕನಾಗಿ ಅಲ್ಲ. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT