ADVERTISEMENT

ಮಾನವೀಯತೆಯ ಅಧಃಪತನವೇ?

ಕಲೆ, ಸಾಹಿತ್ಯ, ಪುಸ್ತಕ, ವಿಜ್ಞಾನ, ಕೃಷಿ ಇತ್ಯಾದಿಗಳ ವಿಚಾರವೇ ಇಲ್ಲದೆ ಮಕ್ಕಳು ಬೆಳೆಯುತ್ತಿದ್ದರೆ, ಅವರ ಮನಸ್ಸನ್ನು ಮೌಢ್ಯ ಕವಿಯುತ್ತದೆ

ಕೆ.ಟಿ.ಗಟ್ಟಿ
Published 13 ನವೆಂಬರ್ 2018, 20:28 IST
Last Updated 13 ನವೆಂಬರ್ 2018, 20:28 IST
   

ಅಪ್ಪ ಅಮ್ಮ ನಗರದವರಾಗಿರಲಿ, ಹಳ್ಳಿಯವರಾಗಿರಲಿ, ಪೂರ್ಣ ವಿದ್ಯಾವಂತರಾಗಿರಲಿ, ಅರೆ ವಿದ್ಯಾವಂತರಾಗಿರಲಿ, ಅವರ ಮಕ್ಕಳು ಮೇಧಾವಿಗಳಾಗಿರಲಿ, ಸಾಮಾನ್ಯ ಬುದ್ಧಿವಂತರಾಗಿರಲಿ, ಅಪ್ಪ ಅಮ್ಮನ ಕೈತುಂಬಾ ಹಣ ಓಡಾಡುತ್ತಿದೆಯೆಂದಾದರೆ, ಅವರ ಮಕ್ಕಳು ಉತ್ತಮ ವ್ಯಕ್ತಿಗಳಾಗಿ ಬೆಳೆಯುವ ಅವಕಾಶದಿಂದ ವಂಚಿತರಾಗುತ್ತಾರೆ. ಇದೆಂಥ ವಿಪರ್ಯಾಸದ ಮಾತು ಎಂದು ಯಾರಿಗಾದರೂ ಅನಿಸಬಹುದು. ಆದರೆ ಇದು ಸತ್ಯ ಎಂದು ತಿಳಿಯಬೇಕಾಗುತ್ತದೆ. ಯಾಕೆಂದರೆ, ವೀಕ್ಷಕರ ಮನಸ್ಸನ್ನು ಹಿಡಿದಿಟ್ಟುಕೊಳ್ಳುವ ವಾಟ್ಸ್‌ಆ್ಯಪ್, ಫೇಸ್‌ಬುಕ್, ಸ್ಮಾರ್ಟ್‌ಫೋನ್, ಇಂಟರ್‌ನೆಟ್ ಇತ್ಯಾದಿಗಳಿಂದಾಗಿ ಇವತ್ತು ಮನುಷ್ಯನಿಗೆ ಒಂದೆಡೆ ಕುಳಿತು ಸತ್ಚಿಂತನೆಯನ್ನು ಮಾಡುವ ಮನಸ್ಸು ಇಲ್ಲವಾಗಿದೆ. ಹದಿಹರೆಯದ ಬಾಲಕ– ಬಾಲಕಿಯರಿಗೆ ಸತ್ಚಿಂತನೆಯೆಂದು ತಿಳಿಸಬೇಕಾದ, ಕಲಿಸಬೇಕಾದ ತಾಯಿತಂದೆ ಅವರಿಗೆ ಕೊಡಿಸುವುದು ಮೊಬೈಲ್, ಸ್ಮಾರ್ಟ್‌ಫೋನ್‌ ಮತ್ತು ಸ್ವಲ್ಪ ದೊಡ್ಡವರಾದರೆ ಮೋಟರ್ ಬೈಕ್. ಆಪ್ಪ ಅಮ್ಮನ ಈ ಬಗೆಯ ಪ್ರೀತಿ ಮಕ್ಕಳನ್ನು ಸರಿದಾರಿಯಲ್ಲಿ ಒಯ್ದೀತೆ?

ಮನುಷ್ಯನಿಗೆ ಏಕಾಂತ ಬೇಕಾಗುತ್ತದೆ. ಮುಖ್ಯವಾಗಿ ನಗರದ, ನಾನಾ ಶಬ್ದಗಳಿಂದ ದೂರ ಹೋಗಿ ಮರಗಿಡಗಳ ನಡುವೆ ಅಥವಾ ಹೂದೋಟದಲ್ಲಿ ಕುಳಿತು ಕಣ್ಣಿಗೆ ತಂಪು ಮತ್ತು ಮೌನದಲ್ಲಿರುವ ಆನಂದವನ್ನು ಅನುಭವಿಸುವ ಬಯಕೆ ಮನುಷ್ಯನಿಗೆ ಇರುತ್ತದೆ. ಆದರೆ ನಗರದ ಶಬ್ದ ಸಾಗರದಿಂದಾಗಿ ಮನುಷ್ಯ ತನ್ನ ಮನೆಯೆಂಬ ಗೂಡಿನಲ್ಲೇ ಕುಳಿತುಕೊಳ್ಳುತ್ತಾನೆ. ತತ್ಪರಿಣಾಮವಾಗಿ ಏನೇನೋ ದೈಹಿಕ ಯಾತನೆ, ಮಾನಸಿಕ ಅಸ್ವಾಸ್ಥ್ಯ ಉಂಟಾಗುತ್ತದೆ.

ಅಂತರ್ಜಾಲದಲ್ಲಿ ಬೇಕಾದುದರ ಜೊತೆಗೆ ಮನಸ್ಸನ್ನು ಕಲುಷಿತಗೊಳಿಸುವ ಚಿತ್ರಗಳು ಮತ್ತು ಮಾಹಿತಿಗಳಿಗೆ ಮನುಷ್ಯನ ಅಂತರಂಗ ಶುದ್ಧಿಯನ್ನು ಕದಡುವ ಸಾಮರ್ಥ್ಯವಿದೆ. ಪರಿಣಾಮವಾಗಿ ಪುಸ್ತಕದ ಓದು ಮತ್ತು ಸದ್ವಿಚಾರಗಳನ್ನು ಚರ್ಚಿಸುವ ಮನಸ್ಸು ಇಲ್ಲವಾಗುತ್ತದೆ. ಅಪ್ಪ ಅಮ್ಮ ಯಾವ ಪ್ರಯೋಜನಕ್ಕಾಗಿ ಮಕ್ಕಳಿಗೆ ಮೊಬೈಲ್ ಕೊಡುತ್ತಾರೆ ಎಂಬ ಪ್ರಶ್ನೆಗೆ ಯಾರಲ್ಲೂ ಉತ್ತರವಿಲ್ಲ. ಇಡೀ ದಿನ, ಒಂದಲ್ಲ ಒಂದು ರೀತಿಯಲ್ಲಿ ಮೊಬೈಲ್ ಜೊತೆ ಹೊರಳಾಡುವ ಮಕ್ಕಳಲ್ಲಿ ಕೆಲವು ಬುದ್ಧಿವಂತ ಮಕ್ಕಳು ಪರೀಕ್ಷೆಯಲ್ಲಿ ಒಳ್ಳೆಯ ಅಂಕ ಗಳಿಸಿ ಎಂಜಿನಿಯರಿಂಗ್ ಓದಿ ಹುಟ್ಟುನೆಲ ಬಿಟ್ಟ ಮೇಲೆ ಕ್ರಮೇಣ ಪರದೇಶಿಗಳೇ ಆಗಿ ಒಂದಷ್ಟು ಗಳಿಸುತ್ತಾರೆ ಎಂಬುದು ನಿಜ. ಆದರೆ ಅವರಲ್ಲಿ ಅದೆಷ್ಟೋ ಮಂದಿಗೆ ಹುಟ್ಟಿದ ನೆಲಕ್ಕೆ ಮರಳುವ ಬಯಕೆ ಇಲ್ಲವಾಗುತ್ತದೆ ಎಂಬುದು ಕೂಡ ನಿಜ. ಕೆಲವರು ಎಂದಾದರೊಮ್ಮೆ ಬಂದು ಅಪ್ಪ ಅಮ್ಮನಿಗೆ ಮುಖ ತೋರಿಸಿ ಹೋಗುತ್ತಾರೆ. ಕೆಲವರು ಹೊಸ ಮನೆ ಕಟ್ಟಿಸಿಕೊಳ್ಳಬಹುದು. ಅಪ್ಪ ಅಮ್ಮನಿಗೆ ಬೇಕಾದುದೇನನ್ನಾದರೂ ಕೊಡಿಸಬಹುದು. ಆದರೆ ಈ ವ್ಯವಹಾರದಲ್ಲಿ ಪ್ರೀತಿ ಎಲ್ಲಿದೆ, ಸಂಬಂಧ ಎಲ್ಲಿದೆ ಎಂಬುದು ತೀರಾ ಅಸ್ಪಷ್ಟ.

ADVERTISEMENT

ಡಾಲರ್ ಸಂಪಾದಿಸುವ ಎಷ್ಟೋ ಮಕ್ಕಳಿಗೆ ತಾಯಿತಂದೆ ಮತ್ತು ಹುಟ್ಟುನೆಲ ಬೇಡವಾಗಿರುವುದು ತೀರಾ ಸಾಮಾನ್ಯ. ನೂರಾರು ವರ್ಷಗಳಿಂದ ನಾವು ತಿನ್ನುತ್ತಿದ್ದ ಶ್ರೇಷ್ಠ ಆಹಾರವನ್ನು ದೂರ ತಳ್ಳಿ ಜಂಕ್ ಆಹಾರಕ್ಕೆ ಶರಣಾಗುವವರ ಆರೋಗ್ಯ ಚೆನ್ನಾಗಿರುವುದಾದರೂ ಹೇಗೆ? ಈಗ ಮುಖಾಮುಖಿ ಮಾತು, ಸಂವಹನ ಇಲ್ಲವಾಗಿರುವುದು, ಮಾತು ಸಾವಿರಾರು ಮೈಲಿಗಳ ನಡುವೆ ನಡೆಯುವುದು, ನಡುವೆ ಮಾತ್ರವೇ ನಡೆಯಬೇಕಾಗಿರುವುದು, ವಿದೇಶವೇ ಸ್ವದೇಶಕ್ಕಿಂತ ಪ್ರಿಯವಾಗಿರುವುದು, ಎಲ್ಲದಕ್ಕೂ ಕಾರಣ ಹಣವಾಗಿರಬಹುದೆ? ಈ ಬದುಕು ಮನುಷ್ಯನನ್ನು ಎಲ್ಲಿಗೆ ಒಯ್ಯುತ್ತಿದೆ? ಚಿಂತನೆ ಇಲ್ಲ. ಮಾತಾಡಿದರೂ ಬರೀ ವಿಚಾರರಹಿತ ವಾದ. ಮನುಷ್ಯನಿಗೆ ನಿಸರ್ಗ, ಮರ, ಅರಣ್ಯ ಬೇಡವಾಗಿರುವುದು ಮನುಷ್ಯನ ಮನಸ್ಸು ಮತ್ತು ಬದುಕು ಬರಡಾಗುತ್ತಿರುವುದರ ಲಕ್ಷಣವೆಂದು ತಿಳಿಯಬೇಕಾಗುತ್ತದೆ. ಮನುಷ್ಯನ ಬದುಕಿನಲ್ಲಿ ಮರದ ಪಾತ್ರವೇನು ಎಂದು ಪ್ರತಿಯೊಬ್ಬನೂ ತಿಳಿದುಕೊಳ್ಳಬೇಕು. ಕೊನೆಗೆ ಮನುಷ್ಯನನ್ನು ಮನುಷ್ಯನಾಗಿಯೇ ಇಡಲು ಉಳಿಯುವುದೇನು? ಮಕ್ಕಳ ಜೇಬಿನಲ್ಲಿ ಇರುವ ಹಣ ಮತ್ತು ಇಂಟರ್‌ನೆಟ್‌ಗೆ ಅವರನ್ನು ಶ್ರೇಷ್ಠ ವ್ಯಕ್ತಿಗಳಾಗಿ ರೂಪಿಸುವ ಶಕ್ತಿ ಇದೆಯೇ?

ನಮ್ಮ ಬದುಕು ನಿಧಾನವಾಗಿ ಹಾಗೂ ವೇಗವಾಗಿ ಬರಡಾಗುತ್ತಿರುವಂತೆ ತೋರುತ್ತದೆ. ಎಲ್ಲರೂ ಹಣ ಗಳಿಕೆಯ ಬಗ್ಗೆ, ಐಷಾರಾಮ ಒದಗಿಸುವ ಸಾಧನಗಳ ಬಗ್ಗೆ ಮಾತಾಡುತ್ತಿರುತ್ತಾರೆ.

ಕಲೆ, ಸಾಹಿತ್ಯ, ಪುಸ್ತಕ, ವಿಜ್ಞಾನ, ಕೃಷಿ ಇತ್ಯಾದಿಗಳ ವಿಚಾರವೇ ಇಲ್ಲದೆ ಮಕ್ಕಳು ಬೆಳೆಯುತ್ತಿದ್ದರೆ, ಅವರ ಮನಸ್ಸನ್ನು ಮೌಢ್ಯ ಕವಿಯುತ್ತದೆ. ಮನುಷ್ಯ ಬೆಳೆಯುವುದು, ಅವನ ಮನಸ್ಸು ವಿಕಾಸಗೊಳ್ಳುವುದು ನಿಸರ್ಗದ ಮಡಿಲಲ್ಲಿ, ಪುಸ್ತಕಗಳ ಸಂಪರ್ಕದಲ್ಲಿ. ಕೇವಲ ತಿನ್ನುವ ಉಣ್ಣುವ ಮನುಷ್ಯ, ಮಾನವೀಯವಾದ ಮಾತಿನ ಮಹತ್ವ ಅರಿಯದ ಮನುಷ್ಯ, ಸಂಸ್ಕೃತಿ ಎಂದರೇನೆಂಬುದನ್ನು ಪೂರ್ಣವಾಗಿ ತಿಳಿದುಕೊಳ್ಳದ ಮನುಷ್ಯ ಪ್ರೀತಿಯೆಂದರೇನೆಂದು ಅನುಭವದ ಮೂಲಕ ಅರ್ಥ ಮಾಡಿಕೊಳ್ಳುವ ಬದಲು ಭೌತಿಕ ಸಾಧನಗಳನ್ನು ಅಥವಾ ಒಂದಷ್ಟು ಭೂಮಿ, ಒಂದಷ್ಟು ಹಣ ಕೂಡಿಟ್ಟು ಅದರಲ್ಲಿ ಸಂತೋಷವನ್ನು ಕಾಣಬಯಸುವ ಮನುಷ್ಯ ಮೌಲ್ಯಯುತವಾದುದನ್ನು ಎಂದೂ ಗುರುತಿಸಲಾರ. ಸಂತೋಷವಾಗಿ ಬದುಕಲಾಗದೆ, ಸಂತೋಷವಾಗಿ ಸಾಯಲಾಗದೆ, ಬದುಕು ಇನ್ನೂ ಇದೆ ಎಂಬ ಭ್ರಮೆಯಲ್ಲಿ ಬದುಕು ಮತ್ತು ಸಾವಿನ ನಡುವೆ ವ್ಯತ್ಯಾಸವನ್ನೇ ಕಾಣದೆ ಕೊನೆಯನ್ನು ಕಾಣುತ್ತಾನೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.