ಎಂತಹ ವಿಪರ್ಯಾಸ! ಒಂದು ಸಮಾಜಕ್ಕೆ ಬೇಕಾದ ಸಂಗತಿಯನ್ನು ನಾಲ್ಕೈದು ಮಂದಿ ‘ಮನುಷ್ಯ’ ನ್ಯಾಯಮೂರ್ತಿಗಳು ನಿರ್ಧರಿಸುವುದೆಂದರೇನು? ಪ್ರಜಾಪ್ರಭುತ್ವದ ಲಕ್ಷಣವೇ ಅಥವಾ ಅವಲಕ್ಷಣವೇ? ಬೆತ್ತ ಕೊಟ್ಟು ಪೆಟ್ಟು ತಿನ್ನುವುದು ಎಂದರೆ ಇದೇ. ನ್ಯಾಯವನ್ನೂ, ಮೌಲ್ಯಗಳನ್ನೂ ಬಿಟ್ಟು ಸರ್ಕಾರವನ್ನೂ, ಜನರನ್ನೂ ವಂಚಿಸಿದ ಕರ್ನಾಟಕದ ಶಿಕ್ಷಣ ಇಲಾಖೆ ಕನ್ನಡದ ಹಡಗಿಗೆ ತೂತುಗಳನ್ನು ಕೊರೆದಿದೆ. ಈ ಆಪಾದನೆ ಮಾಡುವಾಗ ಆ ಇಲಾಖೆಯಲ್ಲಿ ಪ್ರಾಮಾಣಿಕ ಕಾಳಜಿಯಿಂದ ದುಡಿಯುವವರ ನೆನಪಾಗುತ್ತದೆ. ಆದರೆ ಅವರು ನಿರ್ಧಾರಾತ್ಮಕ ಹುದ್ದೆಗಳಲ್ಲಿ ಇಲ್ಲ. ಇರುವವರು ತಮ್ಮ ಲಾಭದ ಮುಂದೆ ಭಾಷಾ ಮಾಧ್ಯಮವನ್ನು ಸಾಮಾಜಿಕ, ಸಾಂಸ್ಕೃತಿಕ ಅಗತ್ಯವೆಂದು ಪರಿಗಣಿಸಿಲ್ಲ. ಹಾಗಾಗಿ ಹಡಗು ಮುಳುಗತೊಡಗಿದೆ. ಇನ್ನು ಆಳ ಸಮುದ್ರಕ್ಕಿಳಿದು ಅವಶೇಷಗಳನ್ನು ಹುಡುಕಿದರೂ ಸಿಕ್ಕುವುದು ಭಗ್ನಾವಶೇಷಗಳೇ.
ಸುಪ್ರೀಂಕೋರ್ಟ್‌ನ ತೀರ್ಪಿನಿಂದಾಗಿ ಇನ್ನು ಅನುದಾನರಹಿತ ಖಾಸಗಿ ಶಾಲೆಗಳು ಒಂದನೇ ತರಗತಿಯಿಂದ ಇಂಗ್ಲಿಷನ್ನು ಕದ್ದು ಮುಚ್ಚಿ ಕಲಿಸಬೇಕಾಗಿಲ್ಲ. ಹಾಗೆಯೇ ಕನ್ನಡವನ್ನು ನಿರ್ಲಕ್ಷಿಸಬಹುದು. ಅಲ್ಲಿಗೆ ಕನ್ನಡದ ನಿರ್ಗತೀಕರಣಕ್ಕೆ ರಾಜಮಾರ್ಗವೇ ತೆರೆದಂತಾಯಿತು.
ಇಲ್ಲಿ ಮೂರು ವಿಷಯಗಳಿವೆ. ಒಂದನೆಯದು, ಶಿಕ್ಷಣ ನೀತಿ ನಿರೂಪಿಸುವಲ್ಲಿ ಸರ್ಕಾರ ಆಸಕ್ತಿ ತೋರದಿರುವುದು. ಎರಡನೆಯದು, ಶಾಲೆಗಳಲ್ಲಿ ಒಂದರಿಂದ ನಾಲ್ಕನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬ ನೀತಿಯನ್ನು ಪಾಲಿಸುವಲ್ಲಿ ಉದ್ದೇಶಪೂರ್ವಕವಾಗಿ ಕುರುಡಾಗಿರುವುದು. ಮೂರನೆಯದು, ಖಾಸಗಿ ಶಿಕ್ಷಣ ಸಂಸ್ಥೆಗಳ ಕಣ್ಣಲ್ಲಿ ಶಿಕ್ಷಣವೆಂಬುದು ಕಲಿಕಾ ಪ್ರಕ್ರಿಯೆಯಾಗಿ ಉಳಿಯದೆ ಉದ್ಯಮವಾಗಿರುವುದು. ಉದ್ಯಮವೆಂದ ಬಳಿಕ ಅಲ್ಲಿ ಬಳಕೆಯಾಗುವುದು ವ್ಯಾಪಾರಿ ನೀತಿ ತಾನೆ? ಅಲ್ಲಿ ವಂಚನೆಯೂ ಒಂದು ನೀತಿಯೇ! ಅದೇ ಇಲ್ಲಿ ನಡೆದದ್ದು.
ಗಾಂಧೀಜಿ ಹೇಳಿದ ಏಳು ಸಾಮಾಜಿಕ ಪಾತಕಗಳಲ್ಲಿ ‘ಶೀಲವಿಲ್ಲದ ಶಿಕ್ಷಣ’ ಕೂಡ ಸೇರಿದೆ. ಅವರು ಹೇಳಿದ್ದು ಎಂತಹ ಅದ್ಭುತ ಸತ್ಯ ಎಂದು ಕಂಡುಕೊಳ್ಳುವ ದಿನಗಳು ಈಗಾಗಲೇ ಬಂದಿವೆ. ಶೀಲವಿಟ್ಟುಕೊಂಡವರು ಸಂಕಟಪಡುತ್ತಿರುವ ಸರ್ಕಾರಿ ಶಿಕ್ಷಣ ವ್ಯವಸ್ಥೆಯಲ್ಲಿ ಗಾಂಧೀಜಿ ಪೂಜೆಗೆ ಮಾತ್ರವೇ ಸೀಮಿತವಾಗಿದ್ದಾರೆ. ಆದರೆ ಗಾಂಧೀಜಿಯವರು ‘ತ್ಯಾಗವಿಲ್ಲದ ಪೂಜೆ’ ಎಂಬ ಇನ್ನೊಂದು ಪಾತಕವನ್ನೂ ಹೇಳಿದ್ದಾರೆ. ಸ್ವಾರ್ಥ ಸಾಧಕರ ಪೂಜೆಯಲ್ಲಿ ತ್ಯಾಗದ ತುಣುಕು ಸಿಕ್ಕೀತೇ?
ಮೊದಲನೇ ಸಮಸ್ಯೆ ಶಿಕ್ಷಣ ನೀತಿಯದ್ದು. ಶಿಕ್ಷಣವೆಂಬುದು ಸಾಮಾಜಿಕ ಸಮಾನತೆಗೆ ಸಾಗುವ ಒಂದು ಮಾರ್ಗ. ಹಾಗಾಗಿ ಪ್ರತಿಯೊಬ್ಬನಿಗೂ ಗುಣಮಟ್ಟದ ಶಿಕ್ಷಣ ನೀಡುವುದು ಸರ್ಕಾರದ ಆದ್ಯತೆಯಾಗಬೇಕು. ಅದಕ್ಕಾಗಿ ಸರ್ಕಾರಿ ಶಾಲೆಗಳನ್ನು ಸಶಕ್ತಗೊಳಿಸಬೇಕೆಂಬುದೇ ನೀತಿಯಾಗಬೇಕು. ಶಿಕ್ಷಕರ ನೇಮಕಾತಿಯೊಂದಿಗೆ ಶಾಲೆಗಳಲ್ಲಿ ಮಾನವ ಸಂಪನ್ಮೂಲವನ್ನು ವೃದ್ಧಿಸಬೇಕು. ಶಾಲಾ ಪರಿಸರವನ್ನು ಸ್ವಚ್ಛ-ಸುಂದರ ತಾಣವಾಗಿ ರೂಪಿಸುವ ಹೊಣೆ ಶಿಕ್ಷಕ ವೃಂದದ್ದಾಗಬೇಕು. ವಿದ್ಯಾರ್ಥಿಗಳ ಆಕರ್ಷಣೆಗೂ ಹೆತ್ತವರ ವಿಶ್ವಾಸ ಗಳಿಕೆಗೂ ಇದೇ ಸಾಕು. ಇದಕ್ಕೆ ಹಣಕಾಸಿನ ನೆಪ ಅಡ್ಡ ಬರಬಾರದು. ಎಂಥೆಂಥ ಲಕ್ಷ-ಕೋಟಿ ರೂಪಾಯಿಗಳಿರುವ ಹಗರಣಗಳಾಗುವ ಈ ದೇಶದಲ್ಲಿ ಶಿಕ್ಷಣ ಕ್ಷೇತ್ರಕ್ಕೆ ಹಣ ತೊಡಗಿಸುವುದು ದೊಡ್ಡ ವಿಷಯವಲ್ಲ. ಆದರೆ ಅದಕ್ಕೆ ಮನಸ್ಸು ಹಾಗೂ ಆದರ್ಶಮಯ ನೀತಿ ನಿರೂಪಣೆ ಬೇಕು. ಅದಿಲ್ಲದ ಕಾರಣದಿಂದಾಗಿ ಸರಿಯಾದ ಕಟ್ಟಡ, ಶಿಕ್ಷಕರು, ಆಸನಗಳು, ನೀರು, ಶೌಚ ವ್ಯವಸ್ಥೆ, ಆವರಣ ಇತ್ಯಾದಿಗಳು ಯಾವುವೂ ಇಲ್ಲದೆ ಸರ್ಕಾರಿ ಶಾಲೆಗಳೆಂದರೆ ಬಡವರ ಮಕ್ಕಳ ಬಾಲ್ಯವನ್ನು ಕೊಳೆಸುವ ತಾಣಗಳಾಗಿವೆ. ಇದು ಸರ್ಕಾರದಲ್ಲಿರುವ ಎಲ್ಲರಿಗೂ ಗೊತ್ತು. ಅವರು ದುಡ್ಡಿಲ್ಲದೆ ಸಮಸ್ಯೆ ಉಳಿಸಿಕೊಂಡಿರುವುದಲ್ಲ. ಇದಕ್ಕೆ ಸರ್ವಶಿಕ್ಷಾ ಅಭಿಯಾನಕ್ಕೆ ತೊಡಗಿಸಿದ ದುಡ್ಡೇ ಸಾಕಿತ್ತು. ಆದರೆ ಅದು ಎಲ್ಲಿಗೋ ಹೋಗಿ ಯಾವುದೋ ಕಿಸೆಗಳಲ್ಲಿ ಸೇರಿಕೊಂಡಿತು. ಆ ಹಣದ ವಿನಿಯೋಗಕ್ಕೆ ಸರಿಯಾದ ಯೋಜನೆ ಮಾಡಿದ್ದರೆ ಶಾಲೆಗಳು ಶ್ರೀಮಂತವಾಗುತ್ತಿದ್ದುವು. ಶಿಕ್ಷಣ ಇಲಾಖೆಯ ಕಾರ್ಪೊರೇಟ್ ಮಾದರಿಯ ನವೀಕರಣದ ಕೆಲಸದಲ್ಲಿ ಯಾರೋ ದಳ್ಳಾಳಿಗಳು ಲಾಭಮಾಡುವುದು ತಪ್ಪುತ್ತಿತ್ತು.
ಎರಡನೆಯದು ನೀತಿಯ ಪಾಲನೆ. ನಮ್ಮಲ್ಲಿ ಒಂದು ನೀತಿ ಇತ್ತು. ಕನಿಷ್ಠ ಅದನ್ನು ಪಾಲಿಸಿದ್ದರೂ ಸಾಕಿತ್ತು. ಪ್ರಾಥಮಿಕ ಶಾಲೆಗಳಲ್ಲಿ ಒಂದರಿಂದ ನಾಲ್ಕನೇ ತರಗತಿಯ ತನಕ ಕನ್ನಡ ಮಾಧ್ಯಮದಲ್ಲೇ ಶಿಕ್ಷಣ ನೀಡಬೇಕೆಂಬ ನೀತಿ ಅದು. ಆದರೆ ಇಲಾಖೆಯು ಉದ್ದೇಶಪೂರ್ವಕವಾಗಿ ಕುರುಡಾದದ್ದೇ ಪ್ರಸ್ತುತ ದುರಂತಕ್ಕೆ ಮೂಲ. ಅಂದರೆ ಇಲಾಖಾಧಿಕಾರಿಗಳ ಆಶ್ರಯದಲ್ಲೇ ಖಾಸಗಿ ಶಾಲೆಗಳವರು ಈ ನೀತಿ ಮುರಿದರು. ಕನ್ನಡ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುತ್ತೇವೆಂದು ಛಾಪಾ ಕಾಗದದಲ್ಲಿ ಬರೆದುಕೊಟ್ಟು ನಿರ್ಭಿಡೆ ಯಿಂದ ಇಂಗ್ಲಿಷ್ ಮಾಧ್ಯಮದಲ್ಲಿ ಶಾಲೆಯನ್ನು ನಡೆಸುತ್ತಿದ್ದರು. ಈ ಕುರಿತು ಇಲಾಖೆಯ ಜಾಣ ನಿರ್ಲಕ್ಷ್ಯಕ್ಕಾಗಿ ಅವರಿಗೆ ಸಿಗಬೇಕಾದ್ದು ಸಿಗುತ್ತಿತ್ತು. ಅದು ಹಣದ ರೂಪದಲ್ಲಿಯೂ ಇರಬಹುದು, ರಾಜಕೀಯ ಮುಂದಾಳುಗಳ ಶಾಲೆಗಳಾದರೆ ರಾಜಾಶ್ರಯದ ಲಾಭವೂ ಇರಬಹುದು, ಜಾತಿ ಅಥವಾ ಮತೀಯ ಶಾಲೆಗಳಾದರೆ ಭಾವನಾತ್ಮಕ ಲಾಭಗಳೂ ಇದ್ದಿರಬಹುದು. ಅಂತೂ ತಮ್ಮ ಕೃತ್ಯ ಒಂದು ಭಾಷೆಯ ಅಂತ್ಯಕ್ಕೆ ನಾಂದಿಯಾಗುತ್ತದೆಂಬುದು ಇವರಿಗೆ ಹೊಳೆಯಲೇ ಇಲ್ಲ. ‘ಕುಸ್ಮಾ’ ಎಂಬ ಸಂಘಟನೆ ಮಾಡಿದ ಖಾಸಗಿ ಶಾಲೆಗಳವರು ಇನ್ನು ಶಿಕ್ಷಣ ಇಲಾಖೆಯನ್ನು ಲೆಕ್ಕಿಸಬೇಕಿಲ್ಲ. ಅವರು ರಾಜಾರೋಷವಾಗಿಯೇ ಆಂಗ್ಲಮಾಧ್ಯಮದಲ್ಲಿ ಶಾಲೆಗಳನ್ನು ನಡೆಸಬಹುದು. ಇನ್ನು ಇಲಾಖೆಯವರು ತಮ್ಮ ಹಂಗು ಸೃಷ್ಟಿಸುವ ಹೊಸ ದಾರಿಗಳನ್ನು ಹುಡುಕಬೇಕಷ್ಟೇ. ಈಗಾಗಲೇ ತಮ್ಮ ಕೈಯಲ್ಲಿರುವ ‘ಶಾಲೆಯ ಮಾನ್ಯತೆ’ ಎಂಬ ಪಾಶಕ್ಕೆ ಇನ್ನೂ ಎರಡೆಳೆ ಸೇರಿಸುತ್ತಾರಷ್ಟೇ. ಇದರಿಂದ ಬಳಲುವವರು ಯಾರೆಂದರೆ ವಿದ್ಯಾರ್ಥಿಯ ಸರ್ವತೋಮುಖ ಬೆಳವಣಿಗೆಯನ್ನು ಗಮನದಲ್ಲಿಟ್ಟುಕೊಂಡು ಅನುದಾನ ರಹಿತವಾಗಿ ಕನ್ನಡ ಮಾಧ್ಯಮದ ಪ್ರಾಥಮಿಕ ಶಾಲೆಯನ್ನು ನಡೆಸುವ ನನ್ನಂಥವರು ಮಾತ್ರ.
ಮೂರನೆಯದಾಗಿ, ಕೆಲವೇ ಅಪವಾದಗಳ ಹೊರತಾಗಿ, ಖಾಸಗಿ ಶಿಕ್ಷಣ ಸಂಸ್ಥೆಗಳ ಕಣ್ಣಲ್ಲಿ ಶಿಕ್ಷಣವೆಂಬುದು ಒಂದು ಪ್ರಕ್ರಿಯೆಯಾಗಿ ಉಳಿದಿಲ್ಲ. ಒಂದು ಉದ್ಯಮವಾಗಿಯೇ ಅದನ್ನು ಪರಿಭಾವಿಸಲಾಗುತ್ತದೆ. ಹಾಗಾಗಿ ವಿದ್ಯಾರ್ಥಿಗಳ ಹೆತ್ತವರನ್ನು ಅರ್ಥಾತ್ ಗಿರಾಕಿಗಳನ್ನು ಆಕರ್ಷಿಸುವ ಉಪಾಯಗಳನ್ನು ಮಾಡುತ್ತಾರೆ. ಇಂಗ್ಲಿಷ್ ಮೀಡಿಯಂ ಎಂಬ ಫಲಕದಡಿಯಲ್ಲಿ ಭೌತಿಕ ಸೌಲಭ್ಯಗಳು, ತರಗತಿಗೊಬ್ಬ ಶಿಕ್ಷಕರು, ಶಾಲಾ ವಾಹನಗಳು, ಯೂನಿಫಾರಂ, ಸಾಕಷ್ಟು ಹೋಂ ವರ್ಕ್, ಸೆಂಟ್ರಲ್ ಸಿಲಬಸ್ ಮುಂತಾಗಿ ಸ್ಪರ್ಧಾತ್ಮಕ ಆಕರ್ಷಣೆಗಳಿಗೆ ತಕ್ಕಂತೆ ಹೆತ್ತವರಿಂದ ಹಣ ಪೀಕಿಸುತ್ತಾರೆ. ಇನ್ನು, ಉತ್ತಮ ಶಿಕ್ಷಣ ಬೇಕಾದರೆ ಇದೆಲ್ಲಾ ಮಾಡಲೇಬೇಕು ಎಂಬ ಸ್ವಯಂಪ್ರೇರಿತ ಒತ್ತಡಕ್ಕೆ ಒಳಗಾಗುವ ಹೆತ್ತವರು ಶಾಲೆಯಲ್ಲಿ ಕಲಿಕಾ ಪ್ರಕ್ರಿಯೆ ಹೇಗಿದೆ ಎಂದು ನೋಡಲೂ ಹೋಗುವುದಿಲ್ಲ. ಬದಲಾಗಿ ತಮ್ಮ ಕೈಮೀರಿ ಸಂತತಿಯ ಉದ್ಧಾರ ಮಾಡುತ್ತಿದ್ದೇವೆಂಬ ಆತ್ಮ ಸಂತೃಪ್ತಿಗೆ ಒಳಗಾಗುತ್ತಾರೆ. ಈ ಮಿಥ್ಯಾ ಸಂತೋಷದ ಲಾಭ ಪಡೆಯುವ ಭರದಲ್ಲಿ ಭಾಷೆ-, ಸಂಸ್ಕೃತಿಯ ಮೂಲಕ ಸಾಧಿತವಾಗುವ ಮಕ್ಕಳ ವ್ಯಕ್ತಿತ್ವ ವಿಕಸನದ ಅಗತ್ಯತೆ ಗೋಚರಿಸದೆ ಹೋಗುವುದು ದುರಂತವಲ್ಲದೆ ಮತ್ತೇನು?
ಮುಂದೇನು?: ಭಯಕ್ಕೆ ಕಾರಣವಿಲ್ಲ ಎನ್ನುವವರು ತುಂಬಾ ಮಂದಿ ಇದ್ದಾರೆ. ಆದರೆ ಪರಿಹಾರಕ್ಕೆ ತೊಡಗುವವರು ಕಡಿಮೆ ಇದ್ದಾರೆ. ಬೆಂಗಳೂರಿನಲ್ಲಿರುವ ಸಾಹಿತಿಗಳನ್ನು ಕರೆದು ಸಭೆ ಮಾಡಿ ಸರ್ಕಾರ ಸ್ವಂತ ಕಣ್ಣೊರಸಿಕೊಳ್ಳುವ ಕಾರ್ಯ ಮಾಡಬಹುದು.
ಪ್ರಾಕ್ಟಿಕಲ್ ಆಗಿ ಶಿಕ್ಷಣದ ಮೂಲಕ ಕನ್ನಡದ ಉಳಿವಿಗೆ ದುಡಿದ ನಮ್ಮಂತಹವರಿಗೆ ಅದಕ್ಕೆ ಆಮಂತ್ರಣ ಸಿಗಲಾರದು. ಅದನ್ನು ಬಿಡೋಣ. ಶಿಕ್ಷಣ ಇಲಾಖೆ ಮತ್ತು ಮಕ್ಕಳ ಕಲ್ಯಾಣ ಇಲಾಖೆಗಳ ಮುಖ್ಯಸ್ಥರು, ತಮಗೆ ಬಂದ ಸಲಹೆಗಳ ಪತ್ರಗಳನ್ನು ಓದಿ ಉತ್ತರಿಸುವ ಸೌಜನ್ಯವನ್ನೂ ತೋರದಿರುವ ಅನುಭವ ನಮ್ಮದು. ಹೀಗಿರುವಾಗ ಈ ಇಲಾಖೆಗಳಲ್ಲಿ ನಿಜವಾದ ಚುರುಕುತನವನ್ನು ತಾರದ ಹೊರತು ಈಗ ಇದ್ದದ್ದು ಇನ್ನೂ ಹಾಳಾಗುವ ಸಂಭವವೇ ಹೆಚ್ಚು. ಇವರ ಕೃಪಾಶ್ರಯದಲ್ಲಿ ಅಲ್ಲಲ್ಲಿ ಇನ್ನೂ ಹೊಸ ಆಂಗ್ಲ ಮಾಧ್ಯಮ ಶಾಲೆಗಳು ಹುಟ್ಟಬಹುದು. ಹೆದರಿಕೊಂಡಾದರೂ ಕನ್ನಡ ಮಾಧ್ಯಮದ ಪುಸ್ತಕಗಳನ್ನೂ ತರಿಸಿ ಎರಡನ್ನೂ ಓದಿಸುತ್ತಿದ್ದ ಎಡಬಿಡಂಗಿ ಶಾಲೆಗಳು ಇನ್ನು ಕನ್ನಡವನ್ನು ಬದಿಗಿಟ್ಟಾವು.
ಸದ್ಯಕ್ಕೆ ನನ್ನ ಸಲಹೆ ಇಷ್ಟೇ: ಮತ್ತೊಮ್ಮೆ ಸುಪ್ರೀಂ ಮೆಟ್ಟಿಲೇರುವುದು ಪ್ರಯೋಜನವಿಲ್ಲ. ಕೇವಲ ಕಾಲಹರಣ ಅಷ್ಟೇ. ಅದರ ಬದಲು ಕನ್ನಡ ಮಾಧ್ಯಮದ ಅನುಮತಿಯನ್ನು ಪಡೆದು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡುತ್ತಿದ್ದ ಶಾಲೆಗಳಿಗೆ ಈಗ ಅಕ್ರಮ-ಸಕ್ರಮ ನೀತಿಯ ಅವಕಾಶ ನೀಡಿ ತಮ್ಮದು ಇಂಗ್ಲಿಷ್ ಮಾಧ್ಯಮದ ಶಾಲೆ ಎಂಬ ನೋಂದಣಿಗೆ ಸರ್ಕಾರ ಆಹ್ವಾನಿಸಬೇಕು. ಅದಕ್ಕಾಗಿ ಪ್ರಸ್ತುತ ಶಾಲೆಯಲ್ಲಿರುವ ವಿದ್ಯಾರ್ಥಿಗಳ ಸಂಖ್ಯೆಯ ಆಧಾರದಲ್ಲಿ ಕನಿಷ್ಠ ಒಂದು ಲಕ್ಷಕ್ಕಿಂತ ಹೆಚ್ಚು ಶುಲ್ಕ ವಿಧಿಸಬಹುದು. ಇದಕ್ಕೆ ಅಲ್ಪಸಂಖ್ಯಾತರ ಶಾಲೆ ಎಂಬ ವಿನಾಯಿತಿ ನೀಡಬೇಕಾಗಿಲ್ಲ. ಏಕೆಂದರೆ ಎಲ್ಲರ ಗುರಿಯೂ ಒಂದೇ. ಹೀಗೆ ಸಂಗ್ರಹವಾದ ಹಣವನ್ನು ಒಂದು ಪ್ರತ್ಯೇಕ ಫಂಡ್ ಆಗಿ ಸ್ಥಾಪಿಸಿ ಸರ್ಕಾರವು ಅದಕ್ಕೆ ತನ್ನ ಕೊಡುಗೆ ಸೇರಿಸಿ ಶೀಘ್ರವಾಗಿ ಸರ್ಕಾರಿ ಶಾಲೆಗಳನ್ನು ಸರ್ವ ಸಂಪನ್ನಗೊಳಿಸಬೇಕು. ಮೊತ್ತ ಮೊದಲಾಗಿ ಶಿಕ್ಷಕರ ನೇಮಕಾತಿ ಮಾಡಬೇಕು. ಕನ್ನಡ ಮಾಧ್ಯಮದೊಂದಿಗೆ ಒಂದನೇ ತರಗತಿಯಿಂದಲೇ ನೀಡುವ ಇಂಗ್ಲಿಷ್ ಶಿಕ್ಷಣವನ್ನು ವ್ಯವಸ್ಥಿತಗೊಳಿಸಬೇಕು. ಗೆಲ್ಲುವ ಮತ್ತು ಕನ್ನಡ ಉಳಿಸುವ ದಾರಿ ಇದು. ಇನ್ನೂ ಮಾಡಬೇಕಾದ ಕೆಲಸಗಳಿವೆ. ಸದ್ಯ ಇಷ್ಟಾಗಲಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.