ಯಾವುದೇ ದೇಶದ ಪ್ರಗತಿಗೆ, ಅಂತರ ರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ಲಭ್ಯವಾಗುವ ಗೌರವಕ್ಕೆ ಹಾಗೂ ಆರ್ಥಿಕಾಭಿವೃದ್ಧಿಗೆ ವಿಜ್ಞಾನ-, ತಂತ್ರಜ್ಞಾನ ಕ್ಷೇತ್ರದ ಮುನ್ನಡೆಯೇ ಕಾರಣ. ಆದರೆ ಜನರಲ್ಲಿ, ಅದರಲ್ಲೂ ಹೆಚ್ಚಾಗಿ ನಮ್ಮ ಮಕ್ಕಳಲ್ಲಿ ವೈಜ್ಞಾನಿಕ ದೃಷ್ಟಿಕೋನದ ಕೊರತೆ ಎದ್ದು ಕಾಣುತ್ತಿದೆ.
ಎಸ್ಸೆಸ್ಸೆಲ್ಸಿ, ಪಿ.ಯು.ಸಿ ದಿನಗಳಲ್ಲಿ ಉತ್ಸಾಹದಿಂದ ವಿಜ್ಞಾನ ಕಲಿಯುವ ಮಕ್ಕಳು ಮುಂದೆಯೂ ಆ ವಿಷಯದಲ್ಲಿ ಆಸಕ್ತಿ ಉಳಿಸಿಕೊಳ್ಳುತ್ತಾರೆಯೇ? ಕನಿಷ್ಠ ತಮ್ಮ ದೃಷ್ಟಿಕೋನವನ್ನಾದರೂ ವೈಜ್ಞಾನಿಕವಾಗಿ ಬದಲಿಸಿಕೊಳ್ಳುತ್ತಾರೆಯೇ? ಟಿ.ವಿ ಕಾರ್ಯಕ್ರಮಗಳು ಮೌಢ್ಯದ ಸರಕನ್ನು ಎಗ್ಗಿಲ್ಲದೇ ಬಿತ್ತರಿಸುತ್ತಿರುವುದನ್ನು ನೋಡಿದರೆ, ಹಿಂದೆ ಕಲಿತ ವಿಜ್ಞಾನ ನಮ್ಮ ವಿದ್ಯಾರ್ಥಿಗಳನ್ನು ಎಚ್ಚರಿಸಿದಂತೆ ಕಾಣುವುದಿಲ್ಲ.
ಆಸಕ್ತಿಗೊ, ನೌಕರಿಯ ಹಿತದೃಷ್ಟಿಗೊ, ಪಾರಂಪರಿಕ ಕೌಶಲ ಅಥವಾ ಉದ್ದಿಮೆಯ ಅಭಿವೃದ್ಧಿಗಾಗಿಯೊ ಎಸ್ಸೆಸ್ಸೆಲ್ಸಿ, ಪಿ.ಯು.ಸಿ ನಂತರದ ಮಕ್ಕಳ ಓದು ಬೇರೆ ಬೇರೆ ವಿಷಯಗಳತ್ತ ಬದಲಾಗುತ್ತದೆ. ಆದರೆ ಎಲ್ಲೇ ಇರಲಿ, ಹೇಗೇ ಇರಲಿ ಎಂದೆಂದಿಗೂ ತಮ್ಮ ಜೀವನಶೈಲಿಯನ್ನು ವೈಜ್ಞಾನಿಕ ದೃಷ್ಟಿಕೋನದಿಂದ ನೋಡಬಲ್ಲ ಆಸಕ್ತಿಯನ್ನು ಅವರಲ್ಲಿ ಬೆಳೆಸುವುದು ಹೇಗೆ?
ದೂರಸಂಪರ್ಕ ತಂತ್ರಜ್ಞಾನದಲ್ಲಿ ದೇಶದ ಸಾಧನೆ ಜಗತ್ತಿನ ಬೆರಳೆಣಿಕೆಯ ದೇಶಗಳಿಗೆ ಸರಿಸಮಾನ. ನಾವೇ ಅಭಿವೃದ್ಧಿಪಡಿಸಿದ ಕೃತಕ ಉಪಗ್ರಹಗಳನ್ನು, ನಮ್ಮದೇ ದೇಶ ನಿರ್ಮಿಸಿದ ಉಡ್ಡಯಣಾ ನೌಕೆಗಳ ಮೂಲಕ ನಿರ್ದಿಷ್ಟ ಕಕ್ಷೆಗೆ ಸೇರಿಸಿ, ದೇಶದ ಮೂಲೆ ಮೂಲೆಯ ಜನರಿಗೂ ನೂರಾರು ಟಿ.ವಿ ವಾಹಿನಿಗಳು, ಸಾಮಾನ್ಯರೂ ಎಗ್ಗಿ-ಲ್ಲದೇ ಬಳಸಬಹುದಾದ ಅಗ್ಗದ ಮೊಬೈಲ್ ಫೋನ್ ಸಂಪರ್ಕಗಳು, ಉದ್ದಿಮೆಗಳಿಗೆ ವಿದೇಶಗಳೊಡನೆ ಸಾಫ್ಟ್‌ವೇರ್ ವ್ಯವಹಾರ, ಆ ಮೂಲಕ ನಮ್ಮ ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಕೈ ತುಂಬಾ ಸಂಬಳ ಕೊಡುವ ಉದ್ಯೋಗ... ಎಲ್ಲವೂ ಲಭ್ಯವಾಗುವಂತೆ ಮಾಡಿದ್ದೇವೆ. ಆದರೆ, ಅವುಗಳಿಂದ ಆಗುತ್ತಿರುವ ‘ವೈಜ್ಞಾನಿಕ ಲಾಭ’ಗಳೆಷ್ಟು ಎಂದು ಪಟ್ಟಿ ಮಾಡಿ ನೋಡಿ.
ಇದುವರೆಗೂ ಹೆಂಗಳೆಯರ ಕಣ್ಣುಗಳಲ್ಲಿ ಧಾರಾಕಾರವಾಗಿ ಕಣ್ಣೀರು ಸುರಿಸುವ ಧಾರಾವಾಹಿಗಳನ್ನೇ ಬಂಡವಾಳ ಮಾಡಿಕೊಂಡಿದ್ದ ಟಿ.ವಿ ವಾಹಿನಿಗಳು ಇದೀಗ ‘ಭೀತಿ’ಯನ್ನೇ ವಾಣಿಜ್ಯ ಸರಕನ್ನಾಗಿಸಿಕೊಂಡಿವೆ. ಯಾವುದೋ ದೇಶದಲ್ಲಿ ಹಿಡಿಯುವ ಪಾರ್ಶ್ವ ಗ್ರಹಣಗಳಿಂದ ಹಿಡಿದು ಮಂಗಳವಾರದಂದೇ ಬಂದ ಸಂಕಷ್ಟ ಹರ ಚತುರ್ಥಿಯ ಫಲಾಫಲದವರೆಗಿನ ಸುದ್ದಿಗಳನ್ನು ಪೈಪೋಟಿಗೆ ಬಿದ್ದು ಬಿತ್ತರಿಸುತ್ತವೆ. ಈ ಪ್ರಸಂಗಗಳನ್ನು ವಿಶೇಷವಾಗಿ ಪ್ರಸ್ತಾಪಿಸುವುದಕ್ಕೆ ಕಾರಣ ಇದೆ.
ಜಗತ್ತಿನ ನಾಲ್ಕೈದು ಪ್ರಮುಖ ರಾಷ್ಟ್ರಗಳ ಸಾಲಿನಲ್ಲಿ ಭಾರತವನ್ನು ತಂದು ನಿಲ್ಲಿಸಿರುವ ಬಾಹ್ಯಾಕಾಶ ತಂತ್ರಜ್ಞಾನದ ಕಾರಣದಿಂದಲೇ ಮೊಬೈಲ್ ಫೋನ್, ಬಹು ಚಾನೆಲ್‌ಗಳ ಟಿ.ವಿ ಹಾಗೂ ಅಂತರ್ಜಾಲದ ಮೂಲಕ ಜನ್ಮಾಂತರದ ಮೌಢ್ಯವನ್ನು, ಪ್ರಳಯಾಂತಕ ಭವಿಷ್ಯವನ್ನು ಹಾಗೂ ಲೈಂಗಿಕ ಕ್ರೌರ್ಯದ ಮನರಂಜನೆಯನ್ನು ಕ್ಷಣಾರ್ಧದಲ್ಲಿ ಪಸರಿಸುವ ಕೆಲಸ ಇಂದು ಸುಲಭವಾಗಿದೆ.ಯಾವ ಯಾವ ಗ್ರಹಗಳು ನಿಮಗೆ ಯಾವ ಅವಧಿಯಲ್ಲಿ ಕಾಟ ಕೊಡಲು ಸಿದ್ಧವಾಗಿವೆ ಎಂದು ಇಂಗ್ಲಿಷ್ ವರ್ಷದ ಆರಂಭ, ಸಂಕ್ರಾಂತಿ, ಯುಗಾದಿಯಂಥ ವಿಶೇಷ ದಿನಗಳಂದು ಫರ್ಮಾನುಗಳು ಹೊರಬೀಳುತ್ತವೆ.
ಇನ್ನು ಸಂಖ್ಯಾಶಾಸ್ತ್ರಜ್ಞರ ಕಲ್ಪನೆಗಳಿಗೆ ಲೆಕ್ಕವೇ ಇಲ್ಲ. ಹುಟ್ಟಿದ ದಿನ, ತಿಂಗಳು, ವರ್ಷಗಳನ್ನು ಕೂಡಿ, ಬಂದ ಉತ್ತರದ ಸಂಖ್ಯೆಯನ್ನು ಒಂದಕ್ಕೊಂದು ಸೇರಿಸಿ ನಿಮ್ಮ ಅದೃಷ್ಟ ಸಂಖ್ಯೆಗೆ ಅದು ತಾಳೆಯಾಗುತ್ತದೆಯೇ ಎಂದು ಪರಿಶೀಲಿಸುತ್ತಾರೆ. ಇನ್ನೂ ಒಂದು ಹೆಜ್ಜೆ ಮುಂದೆ ಹೋದವರು, ಇಂಗ್ಲಿಷ್ ವರ್ಣಮಾಲೆಯಲ್ಲಿ ನಿಮ್ಮ ಹೆಸರಿನ ಅಕ್ಷರಗಳು ಯಾವ ಅನುಕ್ರಮದಲ್ಲಿ ಬರುತ್ತವೆಯೋ ಅದಕ್ಕೊಂದು ಸಂಖ್ಯೆ ನೀಡಿ, ಅವುಗಳೆಲ್ಲವನ್ನೂ ಮತ್ತೆ ಮತ್ತೆ ಕೂಡಿ ಮ್ಯಾಜಿಕ್ ಸಂಖ್ಯೆಯೊಂದನ್ನು ಲಗತ್ತಿಸಿ, ಅದು ನಿಮ್ಮ ರಾಶಿ, -ನಕ್ಷತ್ರಕ್ಕೆ ಸರಿ ಹೊಂದುವುದೋ ಇಲ್ಲವೋ ಎಂದು ತನಿಖೆ ಮಾಡಿಕೊಡುತ್ತಾರೆ.
ಚುನಾವಣೆ ಹತ್ತಿರ ಬಂದರೆ ರಾಜಕಾರಣಿಗಳ ಹುಟ್ಟಿದ ದಿನಾಂಕಗಳ ಜೊತೆಗೆ, ಅವರ ಜನ್ಮರಾಶಿಯನ್ನು ಸ್ವಯಂಘೋಷಿತ ಲೆಕ್ಕಾಚಾರ ಶಾಸ್ತ್ರಜ್ಞರಿಗೆ ಕೊಟ್ಟು, ಯಾರಿಗೆ ‘ರಾಜಯೋಗ’ವಿದೆ, ಮತ್ಯಾರಿಗೆ ‘ಅಮರ ಯೋಗ’ವಿದೆ ಎಂಬುದನ್ನು ತಿಳಿಸಿ ವೀಕ್ಷಕರನ್ನು ‘ಮಂಗ’ ಮಾಡುತ್ತಾರೆ. ಬ್ರಹ್ಮಾಂಡವನ್ನೇ ಅರಗಿಸಿಕೊಂಡ ಕಂಟಕರಂತೂ ‘ಚೂಡಿದಾರ್ ಹಾಕ್ಕೊಂಡ್ರೆ ಸರ್ವಿಕಲ್ ಕ್ಯಾನ್ಸರ್ ಬರೋದು ಗ್ಯಾರಂಟಿ’ ಎಂದು ಘಂಟಾಘೋಷವಾಗಿ ನಿಮ್ಮ ಮೆದುಳನ್ನು ಕಲಸಿಹಾಕಿಬಿಡುತ್ತಾರೆ.
ಉಳಿದಂತೆ ಫುಟ್ಪಾತ್ನಲ್ಲಿ ಕವಡೆ ಹಾಕುತ್ತಿದ್ದವರೂ ಲ್ಯಾಪ್‌ಟಾಪ್, ಕಂಪ್ಯೂಟರ್ ಮುಂದಿಟ್ಟುಕೊಂಡು, ನೀವು ಪ್ರಶ್ನೆ ಕೇಳಿದ ಸಮಯ, ನಿಮ್ಮ ಹುಟ್ಟಿದ ದಿನಾಂಕ, ಊರಿನ ಅಕ್ಷಾಂಶ -ರೇಖಾಂಶ ಎಲ್ಲವನ್ನೂ ಒಳಗೊಂಡ ಕಲಸುಮೇಲೋಗರಕ್ಕೆ ಒಂದು ವ್ಯಾಖ್ಯಾನ ನೀಡುತ್ತಾರೆ. ಯಾವ ರತ್ನದ ಉಂಗುರವನ್ನು ಯಾವ ಬೆರಳಿಗೆ ಹಾಕಿಕೊಂಡು, ಯಾರ ಜಪ ಮಾಡಿದರೆ ನಿಮಗೆ ಉದ್ಯೋಗ, ವಿವಾಹ, ಮಕ್ಕಳು, ಮನೆ, ರೋಗ ನಿವಾರಣೆ ಭಾಗ್ಯ ಲಭ್ಯವಾಗುತ್ತದೆ ಎಂದು ಹೇಳುತ್ತಾ ಸುಲಭ ಪರಿಹಾರಗಳನ್ನು ನೀಡುವ ಪಂಡಿತರಂತೆ ಪೋಸು ಕೊಡುತ್ತಾರೆ.
ಯಾವ ಅಂಗಡಿಯಲ್ಲಿ ಯಾವ ಉಂಗುರ ಖರೀದಿಸುವುದು ಉತ್ತಮ ಎಂಬ ಸಲಹೆಯನ್ನೂ ನೀಡುತ್ತಾರೆ. ಅಪ್ಪಟ ಜಾಹೀರಾತಿನ ಯುಗದಲ್ಲಿ ಈ ಕಾರ್ಯಕ್ರಮಗಳನ್ನು ಹಾಕಿದರೆ ಟಿ.ವಿ ವಾಹಿನಿಗಳ ಟಿ.ಆರ್.ಪಿ ಹೆಚ್ಚುವುದಂತೂ ನಿಶ್ಚಿತ. ಅದ್ಯಾವ ಗಳಿಗೆಯಲ್ಲಿ ಈ ‘ವಾಟ್‌ಆ್ಯಪ್’ ಎನ್ನುವ ಸೌಲಭ್ಯ ಬಂತೋ, ದುರದೃಷ್ಟದ ದಿನಗಳು ನಮ್ಮನ್ನು ಸತತವಾಗಿ ಕಾಡತೊಡಗಿವೆ. ಪುಕ್ಕಟೆ ಎಸ್ಸೆಮ್ಮೆಸ್‌ಗಳ ಮೂಲಕ ಹಳಸಲು ಜೋಕು-ಗಳ ಚಿತ್ರಾನ್ನ ಬಡಿಸುತ್ತಿದ್ದವರೆಲ್ಲರೂ ಜಾಗೃತಗೊಂಡಿದ್ದಾರೆ. ‘ಬಿ.ಬಿ.ಸಿ ವರದಿ ಮಾಡಿದೆ. ನಾಸಾ ವೆಬ್ಸೈಟಲ್ಲಿ ಬೇಕಿದ್ರೆ ನೋಡಿ.
ಇಂಥ ಗ್ರಹದಿಂದ ಹೊರಟ ವಿಕಿರಣ ಇಷ್ಟು ಹೊತ್ತಿಗೆ ಭೂಮಿಯನ್ನು ಅಪ್ಪಳಿಸುತ್ತದೆ. ಮಕ್ಕಳನ್ನು ಆಚೆ ಕಳುಹಿಸಬೇಡಿ’ ಎಂಬ ಸುಳ್ಳು ಸಂದೇಶ ಒಬ್ಬರ ಮೊಬೈಲ್ ಫೋನಿಗೆ ಬಂದರೂ ಸಾಕು. ಅದನ್ನು ಪೂರ್ತಿ ಓದದೆಯೇ ನೂರು ಜನರಿಗೆ ನೂರಕ್ಕೂ ಕಡಿಮೆ ನಿಮಿಷದಲ್ಲಿ ರವಾನಿಸಲು ಹೊರಡುತ್ತಾರೆ.‘ವಿಕಿರಣ ಹಾಗೆಲ್ಲ ಇಷ್ಟು ದೂರ ಬರಲು ಸಾಧ್ಯವಿಲ್ಲ’ ಎಂಬುದನ್ನು ತಿಳಿದ ವಿಜ್ಞಾನ, ತಂತ್ರಜ್ಞಾನದ ವಿದ್ಯಾರ್ಥಿಗಳು, ಸಾಫ್ಟ್‌ವೇರ್ ಕಂಪೆನಿ ಗಳ ಉದ್ಯೋಗಿಗಳು ಸಹ ಇಂತಹ ನಂಬಿಕೆಗೆ ಹೊರತಾಗುವುದಿಲ್ಲ.
ಯಾವುದೋ ಧಾರ್ಮಿಕ ಸ್ಥಳದಲ್ಲಿ ಕಾಣಿಸಿಕೊಂಡ ಎರಡು ತಲೆಯ ಹಾವಿನ ಬೋಗಸ್ ಡಿಜಿಟಲ್ ಚಿತ್ರವನ್ನು ಹತ್ತಾರು ಜನರಿಗೆ ರವಾನಿಸಿ ‘ಸರ್ಪ ಸಂಸ್ಕಾರ ದೋಷ’ವನ್ನು ಪರಿಹರಿಸಿಕೊಂಡು ಬಿಡುವವರಿದ್ದಾರೆ ಉಳಿದಂತೆ, ‘ಇದು ಮೈಕ್ರೊಸಾಫ್, ಹಾಟ್ಮೇಲ್, ಯಾಹೂ, ಜೀಮೇಲ್... ಕಂಪೆನಿಗಳು ನಡೆಸುತ್ತಿರುವ ಸಮೀಕ್ಷೆ, ಇದರಲ್ಲಿ ಭಾಗಿಯಾಗುವ ಪ್ರತಿ ಸಾವಿರದ ವ್ಯಕ್ತಿಗೆ ಒಂದು ಲ್ಯಾಪ್‌ಟಾಪ್, ಕಂಪ್ಯೂಟರ್ ಇಲ್ಲವೇ ಸ್ಮಾರ್ಟ್ ಫೋನ್ ಕೊಡುಗೆಯಾಗಿ ಬರುತ್ತದೆ.
ಮೇಲ್ ಅನ್ನು ಮರು ರವಾನಿಸಿ’ ಎನ್ನುವ ಪತ್ರ ಇ–-ಮೇಲ್ ಖಾತೆಗೆ ಬಂದೊಡನೆಯೇ ಉನ್ನತ, ಮಹೋನ್ನತ, ಅತ್ಯುನ್ನತ ವಿಜ್ಞಾನ-–ತಂತ್ರಜ್ಞಾನ ಸಂಶೋಧನಾ ಸಂಸ್ಥೆ, ಕಂಪೆನಿಗಳ ‘ವಿಜ್ಞಾನ ಕಲಿತವರು’ ಚಕಚಕನೆ ಪರಿಚಿತರಾದ ನೂರಾರು ಜನರಿಗೆ ಅದನ್ನು ಫಾರ್ವರ್ಡ್ ಮಾಡುತ್ತಾರೆ.ಥೇಟ್, ‘ಸಂಗವ್ವಕ್ಕನ ಮುದ್ದಿನ ಸೊಸಿ ಬಸಿರಾದ ಸುದ್ದಿ’ಯ ರೀತಿ ಕಾಳ್ಗಿಚ್ಚಿನಂತೆ ಅದು ಊರ ತುಂಬೆಲ್ಲ ಹಬ್ಬುತ್ತದೆ.
ನಮ್ಮ ಸಾಧನೆ ಕೇವಲ ವಿಜ್ಞಾನ ಕಲಿಯುವುದಷ್ಟೇ ಅಲ್ಲ, ಉತ್ತಮ ಅಂಕಗಳನ್ನು ಪಡೆದು, ಉನ್ನತ ಪದವಿಗಳನ್ನು ಗಳಿಸಿ, ಪರಮೋಚ್ಚ ಉದ್ಯೋಗ ಹಿಡಿಯುವುದಷ್ಟೇ ಅಲ್ಲ. ಅವೆಲ್ಲವನ್ನೂ ಮೀರಿ ಸಮುದಾಯದ ಪ್ರಗತಿಯತ್ತ ಸಾಗಬೇಕು. ಮೌಢ್ಯವನ್ನು ನಮ್ಮ ಮೆದುಳಿನಿಂದಲೇ ಮೊದಲು ಅಳಿಸಿ, ಪರಿಸರದಲ್ಲಿನ ಮೌಢ್ಯವನ್ನು ಚೊಕ್ಕಟ ಮಾಡುತ್ತಾ ವಿಜ್ಞಾನ ಕಲಿಯಲು, ಅರಿಯಲು ಅವಕಾಶ ಇರದವರನ್ನು ಜಾಗೃತಗೊಳಿಸುವಂತೆ ಆಗಬೇಕು.
ಗಾಂಧೀಜಿ ಹೇಳುತ್ತಿದ್ದರಂತೆ ‘ನಮ್ಮ ದೇಶಕ್ಕೆ ನಿಜವಾದ ಸ್ವಾತಂತ್ರ್ಯ ಬಂದಿದೆ ಎಂದು ಖಚಿತವಾಗುವುದು ನಡುರಾತ್ರಿಯಲ್ಲಿ ಮಹಿಳೆಯೊಬ್ಬಳು ಮಹಾನಗರದಲ್ಲಿ ಸುರಕ್ಷಿತವಾಗಿ ಅಡ್ಡಾಡುವ ದಿನ ಬಂದಾಗ’ ಎಂದು. ಆ ಮಾತನ್ನು ಕೊಂಚ ಬದಲಿಸಿ ‘ನಮ್ಮ ಹೆಣ್ಣು ಮಕ್ಕಳು ಮೌಢ್ಯ ಬಿತ್ತುವ ಟಿ.ವಿ ಕಾರ್ಯಕ್ರಮಗಳು ಯಾವುದೇ ಸಮಯದಲ್ಲಿ ಬಿತ್ತರವಾದರೂ ಚಕ್ಕೆಂದು ಆರಿಸಿ, ಗಂಡ, ಮಕ್ಕಳನ್ನು ಬೇರೆ ಕಾರ್ಯಕ್ರಮಗಳತ್ತ ಗಮನ ಹರಿಸುವಂತೆ ಮಾಡುವ ದಿನ ಬಂದಾಗಲಷ್ಟೇ ನಮಗೆ ನಿಜವಾದ ಸ್ವಾತಂತ್ರ್ಯ ಬಂದಂತೆ’ ಎನ್ನಬಹುದು.
ಇಲ್ಲಿ ವಿಶೇಷವಾಗಿ ಹೆಣ್ಣು ಮಕ್ಕಳನ್ನು ಪ್ರಸ್ತಾಪಿಸುವುದಕ್ಕೆ ಒಂದು ಕಾರಣ ಇದೆ. ಎಸ್ಸೆಸ್ಸೆಲ್ಸಿ ಅಥವಾ ಪಿ.ಯು.ಸಿ ಪರೀಕ್ಷೆಗಳ ಫಲಿತಾಂಶ ಪ್ರಕಟವಾದಾಗಲೆಲ್ಲ ಸಾಮಾನ್ಯವಾಗಿ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿರುತ್ತಾರೆ. ಅದರಲ್ಲೂ ವಿಜ್ಞಾನಕ್ಕೆ ಸಂಬಂಧಿಸಿದ ವಿಷಯಗಳಲ್ಲಿ ಜಿದ್ದಿಗೆ ಬಿದ್ದವರಂತೆ ಅತ್ಯುನ್ನತ ಶ್ರೇಣಿ ಪಡೆದವರಲ್ಲೂ ಇವರೇ ಮುಂದಿರುತ್ತಾರೆ. ಹೀಗಾಗಿ ವೈಜ್ಞಾನಿಕ ದೃಷ್ಟಿಕೋನದಲ್ಲೂ ಸಬಲೀಕರಣದ ದಿನಗಳು ಹತ್ತಿರವಾದರೆ, ಮೌಢ್ಯ ತೊಡೆಯುವ ಆಶಯಕ್ಕೆ ಇನ್ನಷ್ಟು ಬಲ ಬಂದಂತಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.