ಬಿ.ಎಸ್. ಯಡಿಯೂರಪ್ಪ ಅವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿ ಘೋಷಿತರಾದ ಮೇಲೆ ಕರ್ನಾಟಕ ಬಿಜೆಪಿ ಮೇಲೆ ಎಷ್ಟು ಪ್ರಭಾವ ಬೀರಿದ್ದಾರೆ ಎಂಬುದು ಗೊತ್ತಿಲ್ಲ. ಆದರೆ ಕರ್ನಾಟಕ ಪ್ರದೇಶ ಕಾಂಗ್ರೆಸ್ ಮೇಲಂತೂ ವಿಶೇಷವಾಗಿರುವಂಥ ಪರಿಣಾಮವನ್ನು ಉಂಟುಮಾಡಿರುವುದು ಸತ್ಯ.
ಸದ್ಯಕ್ಕೆ ಬಿಜೆಪಿ ರಾಜ್ಯ ಘಟಕದಲ್ಲಿ ಬೇರೇನೂ ವ್ಯತ್ಯಾಸ, ಬದಲಾವಣೆ ಆಗದಿದ್ದರೂ, ಕಾಂಗ್ರೆಸ್‌ನಲ್ಲಂತೂ ವಿಶೇಷ ಬದಲಾವಣೆಯಾಗುವುದಂತೂ ಖಂಡಿತ ಎನ್ನಲಾಗುತ್ತಿದೆ. ಈಗಾಗಲೇ ಹೊಸ ಅಧ್ಯಕ್ಷರಿಗಾಗಿ ಕಾಯುತ್ತಿರುವ ಪ್ರದೇಶ ಕಾಂಗ್ರೆಸ್, ‘ಆ ಅಧ್ಯಕ್ಷರು ಯಾರಾಗಬೇಕು?’ ‘ಅವರು ಯಾತಕ್ಕಾಗಿ ಆಗಬೇಕು?’ ಎಂಬ ಗಾಢ ಚಿಂತನೆಯಲ್ಲಿ ಮುಳುಗಿದಂತಿದೆ.
ಯಡಿಯೂರಪ್ಪನವರಂತೂ ಪಕ್ಷದಲ್ಲೇ ಇರುವ ತಮ್ಮ ವಿರೋಧಿಗಳನ್ನು ಸದ್ಯಕ್ಕೆ ನಿರ್ಲಕ್ಷಿಸುವ ಸಾಧ್ಯತೆ ಇದ್ದು, ಕಾಂಗ್ರೆಸ್ ಸರ್ಕಾರದ ಮೇಲೆ ಸಂಪೂರ್ಣವಾಗಿ ತಮ್ಮ ಗಮನ ಕೇಂದ್ರೀಕರಿಸುವಂತೆ ಕಾಣುತ್ತಿದೆ. ಯಡಿಯೂರಪ್ಪನವರಿಗೆ ಕಾಂಗ್ರೆಸ್‌ನಲ್ಲಿ ವೈಯಕ್ತಿಕವಾಗಿ ಯಾರ ಮೇಲೂ ದ್ವೇಷಕಾರುವಂಥ ಕಾರಣ ಇಲ್ಲವಾದ್ದರಿಂದ ಡಿ.ಕೆ.ಶಿವಕುಮಾರ್, ಆರ್.ವಿ. ದೇಶಪಾಂಡೆ ಮುಂತಾದವರು ನಿಟ್ಟುಸಿರುಬಿಡುತ್ತಿರಬಹುದು.
ಆದರೆ, ಯಡಿಯೂರಪ್ಪ ಅವರಿಗೆ, ಸಿದ್ದರಾಮಯ್ಯನವರ ಬಗ್ಗೆ ವಿಪರೀತ ಅಸಮಾಧಾನ ಇರುವ ಕಾರಣದಿಂದಾಗಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರ ಎಲ್ಲಾ ಬಾಣಗಳು ನೇರವಾಗಿ ಮುಖ್ಯಮಂತ್ರಿಗಳ ಕಡೆಗೇ ಕೇಂದ್ರೀಕೃತವಾಗಬಹುದು.
ಡಿ.ಕೆ.ಶಿವಕುಮಾರ್ ಕೆಪಿಸಿಸಿ ಅಧ್ಯಕ್ಷರಾಗುತ್ತಾರೆ ಎಂಬ ಸುದ್ದಿಯನ್ನು, ಅವರಿಗೆ ಅರಿವಿದ್ದೋ ಅರಿವಿಲ್ಲದೆಯೋ ಮಾಧ್ಯಮದಲ್ಲಿ ಹರಿಬಿಟ್ಟಾದ ನಂತರ, ಈಗ ಅನೇಕ ಕಾಂಗ್ರೆಸ್ಸಿಗರು ವಿಪರೀತ ಚುರುಕುಗೊಂಡು ಎಲ್ಲರಿಗೂ ಸಲ್ಲುವ ಒಬ್ಬ ವ್ಯಕ್ತಿಯ ಹುಟುಕಾಟದಲ್ಲಿ ತೊಡಗಿದ್ದಾರೆ.
ಯಡಿಯೂರಪ್ಪ, ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗಿರುವುದರಿಂದ ತಮ್ಮ ಪಕ್ಷಕ್ಕೇನೂ ಸಮಸ್ಯೆಯಿಲ್ಲ ಎಂದು ಹೇಳುತ್ತಿರುವ ಕಾಂಗ್ರೆಸ್ ನಾಯಕರು, ಅದೇ ಉಸಿರಿನಲ್ಲಿ ಆದಷ್ಟು ಬೇಗ ಮಂತ್ರಿಮಂಡಲದ ಪುನರ್ ರಚನೆ ಆಗಬೇಕು, ಯುವಕರನ್ನು, ಶ್ರಮ ಪಡುವವರನ್ನು, ಜನನಾಯಕರನ್ನು ಮಂತ್ರಿಗಳನ್ನಾಗಿಸಬೇಕು ಎಂದು ರಾಜ್ಯ ಹಾಗೂ ರಾಷ್ಟ್ರ ನಾಯಕರ ಮೇಲೆ ಒತ್ತಡ ಹೇರುತ್ತಿರುವುದರಲ್ಲಿ ಆಶ್ಚರ್ಯವೇನಿಲ್ಲ.
ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಏನೇ ಕೆಲಸ ಮಾಡಿದರೂ ಅದು ನಿದ್ರಾವಸ್ಥೆಯಲ್ಲಿರುವ ಸರ್ಕಾರ ಎಂದು ಲೇವಡಿ ಮಾಡುತ್ತಿದ್ದ ಬಿಜೆಪಿಯವರು, ಈಗ ಯಡಿಯೂರಪ್ಪನವರಿಗೆ ಅಧ್ಯಕ್ಷ ಸ್ಥಾನ ಸಿಗುವುದರೊಂದಿಗೆ ಕಾಂಗ್ರೆಸ್ಸಿನ ನಿದ್ದೆಗೆಡಿಸಿರುವಂತಿದೆ. ವಾರಕ್ಕೆ ಮೂರು ದಿನ ಪ್ರವಾಸ ಮಾಡಲು ಸಜ್ಜಾಗಿರುವ ಯಡಿಯೂರಪ್ಪ ಅವರ ಯೋಜನೆಗೆ ಸವಾಲೊಡ್ಡಲು ನಿದ್ದೆ, ಮುದ್ದೆಯನ್ನೂ ಮರೆತು, ಮುಖ್ಯಮಂತ್ರಿಯಾದಿಯಾಗಿ ಕಾಂಗ್ರೆಸ್ಸಿನ ಎಲ್ಲರೂ ಚುರುಕಾಗಲು ನಿರ್ಧರಿಸಿರುವಂತಿದೆ.
ರಾಜ್ಯ ನಾಯಕರ ವಿರೋಧದ ನಡುವೆಯೂ, ತಮ್ಮ ಮೇಲಿದ್ದ ಕಳಂಕದ ಛಾಯೆಯನ್ನು ಕೂಡ ಮರೆತು ಹೈಕಮಾಂಡ್, ಅಧ್ಯಕ್ಷ ಪಟ್ಟ ನೀಡಿರುವ ಹಿನ್ನೆಲೆಯಲ್ಲಿ ಯಡಿಯೂರಪ್ಪನವರು ಪಕ್ಷಕ್ಕೆ ಚಿರಋಣಿಯಾಗಿರುವ ಸಾಧ್ಯತೆ ಇದ್ದು, ಆ ಋಣವನ್ನು ಪಕ್ಷ ಮತ್ತೆ ಅಧಿಕಾರಕ್ಕೆ ಬರುವಂತೆ ಮಾಡುವುದರೊಂದಿಗೆ ತೀರಿಸುವ ಪಣ ತೊಟ್ಟಂತಿದೆ.
ಸದ್ಯಕ್ಕೆ ಅಧಿಕಾರಾರೂಢರಾಗಿರುವ ಕಾಂಗ್ರೆಸ್ಸಿಗರಿಗೆ ಸ್ವಾಭಾವಿಕವಾಗಿ ಹೋರಾಟ ಮಾಡುವ ಕಾರಣಗಳು ಇಲ್ಲವಾದ್ದರಿಂದ ಅವರು ಬಿಜೆಪಿಯ ಉತ್ಸಾಹದ ಮಟ್ಟಕ್ಕೆ ತಮ್ಮ ಕಾರ್ಯಕರ್ತರನ್ನು ಹುರಿದುಂಬಿಸುವ ಸ್ಥಿತಿಯಲ್ಲಿಲ್ಲ.
ಆ ಕಾರಣ, ಚಾಟಿ ಬೀಸುವ ಧೈರ್ಯವಿರುವ ಮತ್ತು ಸಾಮರ್ಥ್ಯವಿರುವ ಒಬ್ಬ ವ್ಯಕ್ತಿಯನ್ನು ಕೆಪಿಸಿಸಿ ಅಧ್ಯಕ್ಷರನ್ನಾಗಿ ಮಾಡಿದರೆ ಕಾಂಗ್ರೆಸ್‌ಗೆ ಒಳಿತು ಎನ್ನಲಾಗುತ್ತಿದೆ. ‘ಅಧಿಕಾರಕ್ಕೆ ಬಂದಾಗಿನಿಂದ ಒಂದೆರಡು ಬಾರಿ ಮಾತ್ರ ನಮ್ಮೊಂದಿಗೆ ಸಮಾಲೋಚಿಸಲಾಗಿದೆ, ನಮ್ಮ ಅಭಿಪ್ರಾಯ ಪಡೆಯಲಾಗಿದೆ, ನಮ್ಮನ್ನು ಗಣನೆಗೆ ತೆಗೆದುಕೊಳ್ಳಲಾಗಿದೆ’ ಎಂಬ ಆರ್ತನಾದವನ್ನು ಹೊರಬಿಟ್ಟಿರುವ ಕಾಂಗ್ರೆಸ್‌ನ ಹಿರಿತಲೆಗಳು ತಮಗೆ ಒಂದಿಷ್ಟು ಗೌರವ ಕೊಟ್ಟರೆ, ತಾವು ಸರ್ಕಾರಕ್ಕೆ ನೀಡುವ ಕೀಟಲೆಯನ್ನು ನಿಲ್ಲಿಸುತ್ತೇವೆ ಎಂದು ತಮ್ಮ ಆಪ್ತರೊಂದಿಗೆ ಪಿಸುಗುಟ್ಟಿದ್ದಾರೆ. ಆದರೂ, ಸದ್ಯಕ್ಕೆ ಅವಶ್ಯಕತೆ ಇರುವುದು ಒಗ್ಗಟ್ಟು.
ಒಡಕು ಹೆಚ್ಚಾದರೆ ಅಧಿಕಾರವನ್ನು ಹರಿವಾಣದಲ್ಲಿಟ್ಟು ಬಿಜೆಪಿಗೆ ನೀಡುವಂತಾಗುತ್ತದೆ ಎಂದು ಎಲ್ಲರಿಗೂ ಗೊತ್ತು. ‘ಮುಂದೆ ಬಂದರೆ ಹಾಯುವುದಿಲ್ಲ. ಹಿಂದೆ ಬಂದರೆ ಒದೆಯುವುದಿಲ್ಲ, ಸಿಎಂ ನಿಮ್ಮವನೆಂದು ಕಾಣಿರಿ. ಬೇರೆ ಪಕ್ಷದಿಂದ ಬಂದಿರುವೆನು’ ಎಂದು ಮನಸ್ಸಿನಲ್ಲೇ ಹೇಳುತ್ತಾ, ಒಳಗೊಳಗೆ ಇದ್ದ ಅನಿಶ್ಚಿತತೆ ಭಾವನೆಯ ಕಾರಣದಿಂದಾಗಿ ಇಷ್ಟರವರೆಗೆ ಮಂತ್ರಿಗಳ, ಪಕ್ಷದ ಮಹೋದಯರ ಏನೇ ನಡವಳಿಕೆ, ಅಟಾಟೋಪಗಳನ್ನು ಸಹಿಸುತ್ತಾ ಬಂದಿರುವ ಸಿದ್ದರಾಮಯ್ಯನವರು ಇನ್ನು ಮುಂದೆ, ಒಂದಷ್ಟು ನಿಷ್ಠುರವಾಗಿ ನಡೆದುಕೊಳ್ಳುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.
ಮುಖ್ಯಮಂತ್ರಿ ಬಗ್ಗೆ ಸ್ವಪಕ್ಷ ನಾಯಕರಿಂದ, ಜೆಡಿಎಸ್‌ನವರಿಂದ ಮತ್ತು ಬಿಜೆಪಿಯವರಿಂದಲೂ ಕಾಂಗ್ರೆಸ್ ಹೈಕಮಾಂಡ್‌ಗೆ ಎಷ್ಟೇ ದೂರುಗಳು ಹೋದರೂ, ಯಾವ್ಯಾವುದೋ ಸಮೀಕ್ಷೆಗಳಲ್ಲಿ ಮಾತ್ರ ‘ಸರ್ಕಾರ ಬಹಳ ಚೆನ್ನಾಗಿ ಕೆಲಸ ಮಾಡುತ್ತಿದೆ, ಅಭಿವೃದ್ಧಿ ಕೆಲಸ ಕಾರ್ಯ ನಡೆದಿದೆ’ ಎಂಬ ವರದಿಗಳು ಬರುತ್ತಿರುವುದು ಹೈಕಮಾಂಡನ್ನು ಇನ್ನಷ್ಟು ಗೊಂದಲದಲ್ಲಿ ಬೀಳಿಸಿದೆ.
ಸಿದ್ದರಾಮಯ್ಯನವರಿಗೆ ಸದ್ಯಕ್ಕೆ ಪರ್ಯಾಯ ಇಲ್ಲ, ಪರ್ಯಾಯವೆಂದು ಯಾರನ್ನು ಗುರುತಿಸಿದ್ದರೋ ಅವರೇ ಸಿದ್ದರಾಮಯ್ಯನವರ ಸಹಾಯ ಯಾಚಿಸಿ ಅವರ ಮನೆ ಬಾಗಿಲಿಗೆ ಹೋಗಿರುವ ಸಂದರ್ಭದಲ್ಲಿ, ಈಗಂತೂ ಸಿದ್ದರಾಮಯ್ಯನವರು ತಮ್ಮ ನಾಯಕತ್ವವನ್ನು ಗಟ್ಟಿಗೊಳಿಸಿ, ಸಾಬೀತುಗೊಳಿಸಬೇಕಾಗಿದೆ.
ಇದುವರೆಗೆ, ‘ಏನೇ ಆದರೂ ಮೋದಿಯವರು ಯಡಿಯೂರಪ್ಪನವರು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರಾಗದಂತೆ ನೋಡಿಕೊಳ್ಳುತ್ತಾರೆ. ಆಗ ಬಿಜೆಪಿಯಲ್ಲಿ ಭಿನ್ನಮತ ಭುಗಿಲೇಳುತ್ತದೆ, ಯಾರೋ ಅಸಮರ್ಥರು ಬಿಜೆಪಿ ಅಧ್ಯಕ್ಷ ಪಟ್ಟಕ್ಕೇರುತ್ತಾರೆ, ಆಗ ಬಿಜೆಪಿ ಒಡೆದು ಹೋಳಾಗುತ್ತದೆ. ಆ ದುರ್ಬಲ ಬಿಜೆಪಿಯನ್ನು ಗೇಲಿ ಮಾಡುತ್ತಾ, ಕಾಂಗ್ರೆಸ್ ಸರ್ಕಾರ ಅಧಿಕಾರ ಅವಧಿಯನ್ನು ಪೂರ್ಣಗೊಳಿಸಬಹುದು’ ಎಂದು ಅಂದಾಜು ಮಾಡಿದ್ದ ಅನೇಕ ಕಾಂಗ್ರೆಸ್ ನಾಯಕರಿಗೆ ಯಡಿಯೂರಪ್ಪ ಅವರ ಪುನರ್ ಪ್ರತಿಷ್ಠಾಪನೆ ಆಘಾತ ತಂದಿದೆ.
ಕಾಂಗ್ರೆಸ್ ಪಕ್ಷವನ್ನು, ಅದರ ಆಡಳಿತವನ್ನು ಈಗ ಸರಿಪಡಿಸದಿದ್ದರೆ, ಇನ್ನೆಂದೂ ಸರಿಪಡಿಸಲಾಗುವುದಿಲ್ಲ. ಆದ್ದರಿಂದ ಯಾವುದೇ ಅಪ್ರಿಯ ಮತ್ತು ಕಠಿಣ ನಿರ್ಧಾರಕ್ಕೆ ಎಲ್ಲರೂ ಬದ್ಧ, ಯಾವುದೇ ಹೊಂದಾಣಿಕೆಗೂ ಸಿದ್ಧ ಎಂದು ಕಾಂಗ್ರೆಸ್ಸಿಗರೆಲ್ಲ ಒಕ್ಕೊರಲಿನಿಂದ ಹೇಳುತ್ತಿರುವಂತಿದೆ. ಆದರೆ, ಮುತ್ಸದ್ದಿಯಂತೆ ಕಂಡುಬಂದರೂ ಈಗಾಗಲೇ ರಾಜಕೀಯ ವೈರಾಗಿಯಂತೆ ವರ್ತಿಸುತ್ತಿರುವ ಸಿದ್ದರಾಮಯ್ಯ ಅವರ ಮುಂದಿನ ನಡೆಯೇನು ಎಂಬುದೇ ಕುತೂಹಲಕಾರಿ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.