ಇಪ್ಪತ್ತು ವರ್ಷಗಳ ಹಿಂದೆ ವಿಪರೀತ ಬೆನ್ನುನೋವಿನಿಂದ ಗೋಳಾಡುತ್ತಿದ್ದೆ. ರಾತ್ರಿ ಮಲಗಲಾಗದೆ ಕುರ್ಚಿ ಮೇಲೆ ಕುಳಿತು ತೂಕಡಿಸುತ್ತ ರಾತ್ರಿ ಕಳೆಯುತ್ತಿದ್ದೆ. ಆಯುರ್ವೇದ, ಹೋಮಿಯೊಪಥಿ ಚಿಕಿತ್ಸೆಗಳು ಫಲಕಾರಿಯಾಗಲಿಲ್ಲ. ಕೊನೆಯದಾಗಿ ಅಲೊಪಥಿಗೆ ಶರಣಾದೆ. ಫಿಜಿಯೊತೆರಪಿ ಮಾಡಿದರೂ ಪ್ರಯೋಜನವಾಗದಿದ್ದಾಗ ಶಸ್ತ್ರಚಿಕಿತ್ಸೆಯಾ ಗಬೇಕೆಂದು ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಯ ಅಲೋಪಥಿ ವೈದ್ಯರೊಬ್ಬರು ನಿರ್ಧರಿಸಿಬಿಟ್ಟಿದ್ದರು. ಆಗ ಯೋಗ ನನ್ನ ನೆರವಿಗೆ ಬಂತು, ಶಸ್ತ್ರಚಿಕಿತ್ಸೆ ತಪ್ಪಿತು. ಐದಾರು ತಿಂಗಳಲ್ಲಿ ನಾನು ಆರೋಗ್ಯವಂತನಾದೆ.
ವಿಶ್ವಮಾನ್ಯತೆ ಪಡೆದಿರುವ ಯೋಗ ವಿವಾದದ ಸುಳಿಗೆ ಸಿಕ್ಕಿದೆ. ಕೇಂದ್ರ ಸರ್ಕಾರ ಅಂತರರಾಷ್ಟ್ರೀಯ ಯೋಗ ದಿನ (ಜೂನ್ 21) ಆಚರಣೆಗಳಲ್ಲಿ ಸೂರ್ಯನಮಸ್ಕಾರವನ್ನು ಕಡ್ಡಾಯಗೊಳಿಸಿತ್ತು. ಅಖಿಲ ಭಾರತ ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ ಅದರ ವಿರುದ್ಧ ದೇಶದಾದ್ಯಂತ ಪ್ರತಿಭಟನೆಗೆ ಕರೆಕೊಟ್ಟ ನಂತರ ಇದು ಕಡ್ಡಾಯ ವಲ್ಲವೆಂದು ಕೇಂದ್ರ ಸರ್ಕಾರ ಹೇಳಿದೆ. ಓಂ ಎಂದು ಹೇಳುವುದು ಬಿಡುವುದು, ಅಥವಾ ಸೂರ್ಯನಮಸ್ಕಾರ ಮಾಡುವುದು ಬಿಡುವುದು ಭಾಗಿಯಾಗುವವರ ಆಯ್ಕೆಗೆ ಬಿಟ್ಟ ವಿಷಯವೆಂದು ಸ್ಪಷ್ಟಪಡಿಸಿದೆ. ಆದರೂ ಅಸ ಮಾಧಾನದ ಹೊಗೆಯಾಡುತ್ತಿದೆ.
ಯೋಗವನ್ನೇ ಒಟ್ಟಾರೆಯಾಗಿ ಕೆಲವು ಮುಸ್ಲಿಂ ಸಂಘಟನೆಗಳು ವಿರೋಧಿಸಿದರೆ, ಕೆಲವು ಸಂಘಟನೆಗಳು ಸೂರ್ಯನಮಸ್ಕಾರವನ್ನು ಮಾತ್ರ ವಿರೋಧಿಸುತ್ತಿವೆ. ತಮಿಳುನಾಡಿನಲ್ಲಿ 33 ಮುಸ್ಲಿಂ ಸಂಘಟನೆಗಳು ಯೋಗ ದಿನ ಆಚರಿಸಲು ನಿರ್ಧರಿಸಿವೆ. ಇದಲ್ಲದೆ ತಿಂಗಳು ಕಾಲ ಯೋಗ ಶಿಬಿರಗಳನ್ನು ನಡೆಸಲು ಮುಂದಾಗಿವೆ. ಗಮನಿಸ ಬೇಕಾದ ಅಂಶವೆಂದರೆ, ಯೋಗದಿಂದ ಆಸನಗಳನ್ನು ಬೇರ್ಪಡಿಸಿ ನೋಡಲಾಗದು. ಸೂರ್ಯನಮಸ್ಕಾರ ಎಂದರೆ ಆಸನಗಳ ಒಂದು ಸರಣಿ ಮಾತ್ರ ಎಂತಲೇ ನನ್ನ ಅನಿಸಿಕೆ. ತೊಂದರೆ ಇರುವುದು ಹೆಸರಿನಲ್ಲಿ ಮಾತ್ರ. ಇದರಿಂದಾಗಿಯೇ ವಿರೋಧ ಎದುರಾಗಿರಬಹುದು.
ಇದನ್ನು ಗಮನಿಸಿ ಸರ್ಕಾರ ಕೂಡ ಸ್ವಲ್ಪ ಸೂಕ್ಷ್ಮತೆ ಪ್ರದರ್ಶಿಸಬಹುದಿತ್ತು. ವಿವಾದ ಸೃಷ್ಟಿಯಾದನಂತರ ಸ್ಪಷ್ಟೀ ಕರಣ ನೀಡುವುದಕ್ಕಿಂತ ಮೊದಲೇ ಇದಕ್ಕೆಲ್ಲ ಆಸ್ಪದ ವಿಲ್ಲದಂತೆ ಯೋಗದಿನ ಆಚರಣೆಯ ನಿರ್ದೇಶನ ಕೊಡ ಬಹುದಿತ್ತು. ಇನ್ನೊಂದೆಡೆ ಕೆಲವು ಮುಸ್ಲಿಂ ಸಂಘಟನೆ ಗಳು ವಿವಾದ ಸೃಷ್ಟಿಸುವ ಬದಲು ಇದನ್ನು ಒಂದು ಆರೋಗ್ಯಕ್ಕೆ ಸಂಬಂಧಿಸಿದ ವಿಷಯವೆಂದು ಮಾತ್ರ ಪರಿ ಗಣಿಸಬಹುದಿತ್ತು. ಆದರೆ ಇದು ಹೇಳಿದಷ್ಟು ಸುಲಭವಲ್ಲ ಎಂಬುದು ಸರ್ವವಿದಿತ. ಏಕೆಂದರೆ ಯೋಗ ಹಿಂದೂ ಸಂಸ್ಕೃತಿಯ ಕೊಡುಗೆ. ಧಾರ್ಮಿಕ ಸಾಮರಸ್ಯದ ಕೊರತೆ ಇರುವ ನಾಡಿನಲ್ಲಿ ಒಂದು ಧರ್ಮದ ಕೊಡುಗೆಯನ್ನು ಇನ್ನೊಂದು ಧರ್ಮದವರು ಸ್ವೀಕರಿಸುವುದು ಕಷ್ಟ.
ಆದರೂ ವಸ್ತುಸ್ಥಿತಿ ಎಂದರೆ ವಿಶ್ವದಾದ್ಯಂತ ಧರ್ಮ ವನ್ನು ಮೀರಿ ಇಂದು ಯೋಗ ಬೆಳೆದಿದೆ. ಹಿಂದೂಗಳು, ಮುಸ್ಲಿಮರು, ಕ್ರೈಸ್ತರು ಹಾಗೂ ಇತರ ಧರ್ಮಗಳವರು ಯೋಗವನ್ನು ಅಳವಡಿಸಿಕೊಂಡಿದ್ದಾರೆ. ಯೋಗಕ್ಕೆ ದೊಡ್ಡ ಮಾರುಕಟ್ಟೆ ಸೃಷ್ಟಿಯಾಗಿ, ಅದು ನಾನಾ ರೂಪ ಪಡೆ ಯುತ್ತಿದೆ. ಯೋಗದಲ್ಲಿ ಅನೇಕ ಉತ್ತಮ ಅಂಶಗಳಿವೆ. ಉದಾಹರಣೆಗೆ ಅದು ಮಾನಸಿಕ ನೆಮ್ಮದಿಗೆ, ದೇಹದ ಆಂತರಿಕ ವಿಷಯಗಳಿಗೆ ಹೆಚ್ಚು ಒತ್ತು ಕೊಡುತ್ತದೆ. ಆಂತ ರಿಕ ಶುದ್ಧೀಕರಣದಿಂದ ಸ್ನಾಯುಗಳನ್ನು ಸಡಿಲಗೊಳಿಸಿ ಕೊಳ್ಳುವ ಮೂಲಕ ನಮ್ಮ ನೋವುಗಳನ್ನು ನಾವೇ ಕಡಿಮೆ ಮಾಡಿಕೊಳ್ಳಲು ಕಲಿಸುತ್ತದೆ. ಔಷಧಿಗಳಿಂದ ದೂರವಿರಲು ಸಹಾಯ ಮಾಡುತ್ತದೆ. ನಿತ್ಯ ಯೋಗದಿಂದ ಆರೋಗ್ಯವರ್ಧನೆ ಸಾಧ್ಯ. ಯೋಗ್ಯ ಗುರುವಿರಬೇಕಷ್ಟೆ.
ವೈಜ್ಞಾನಿಕ ಯೋಗದ ಮೂಲಪುರುಷ ಎನಿಸಿಕೊಂಡ ಪತಂಜಲಿ, ರಾಗ ದ್ವೇಷಗಳು ಯೋಗಸಾಧನೆಗೆ ತೊಡಕು ಗಳೆಂದು ಪಟ್ಟಿಮಾಡಿದ್ದಾರೆ. ಯೋಗಿಯು ಪಾಲಿಸ ಬೇಕಾದ ಯಮ-ನಿಯಮಗಳನ್ನು ಹೇಳುತ್ತ ಅವರು ಅಹಿಂಸೆ, ಸತ್ಯ, ಅಸ್ತೇಯ (ಅನ್ಯರ ವಸ್ತುಗಳನ್ನು ಬಯಸ ದಿರುವುದು), ಅಪರಿಗ್ರಹ (ಬೇಡದ ವಸ್ತುಗಳನ್ನು ಸಂಗ್ರಹಿ ಸದಿರುವುದು), ಪಂಚೇಂದ್ರಿಯಗಳ ಹತೋಟಿ ಇವುಗಳ ಮಹತ್ವ ಹೇಳಿದ್ದಾರೆ. ಸ್ವಾಧ್ಯಾಯವನ್ನು ಯೋಗ ಹೇಳುತ್ತದೆ. ಕೆಲವು ಯೋಗ ಗುರುಗಳು ಇದನ್ನು ಒಳ್ಳೆಯ ಪುಸ್ತಕಗಳನ್ನು ಓದುವುದು, ಒಳ್ಳೆಯವರ ಸಂಗ ಕಟ್ಟಿ ಕೊಳ್ಳುವುದು ಎಂದು ಅರ್ಥೈಸಿದ್ದಾರೆ. ಹಾಗೆಂದು ಯೋಗ ವನ್ನು ಒತ್ತಾಯದಿಂದ ಹೇರುವುದು ಸರಿಯಲ್ಲ. ಇಚ್ಛೆ ಇದ್ದವರು ಯೋಗ ದಿನದ ಆಚರಣೆಯಲ್ಲಿ ಪಾಲ್ಗೊಳ್ಳಲಿ. ಹಾಗೆ ಮಾಡದಿರುವವರಿಗೆ ಯಾವುದೇ ರೀತಿಯ ತೊಂದರೆ, ಹಿಂಸೆ ಆಗದಂತೆ ನೋಡಿಕೊಳ್ಳಬೇಕು.
ಯೋಗ ಹಿಂದೂ ಸಂಸ್ಕೃತಿಯ ಕೊಡುಗೆ ನಿಜ. ಹಾಗೆಂದು ಅದು ಹಿಂದುತ್ವದ ಪ್ರಸಾರಕರ ತಂತ್ರವಾಗ ಬಾರದು. ಕೆಲವು ಯೋಗ ಸಂಸ್ಥೆಗಳಲ್ಲಿ ಚಿಕಿತ್ಸೆ ಪಡೆಯಲು ಎಲ್ಲರಿಗೂ ಮುಕ್ತ ಅವಕಾಶವಿದೆಯಾದರೂ ಅವುಗಳ ಆರವಣಗಳಲ್ಲಿ ಹಿಂದುತ್ವದ ಗಾಳಿ ಹರಿದಾಡುತ್ತಿರುತ್ತದೆ. ಹಾಗಾದಾಗ ಯೋಗ ಒಂದು ಧರ್ಮಕ್ಕೆ ಸೀಮಿತವಾಗುವ ಅಪಾಯವಿದೆ. ಪಾಶ್ಚಿಮಾತ್ಯ ದೇಶಗಳಲ್ಲಿ ಅದು ಪ್ರಬಲ ವಾಗಿ ಬೆಳೆಯುತ್ತಿರುವಾಗ ಇಲ್ಲಿ ಒಂದು ಹೆಜ್ಜೆ ಹಿಂದೆ ಹೋಗಬಾರದು. ಬಿಜೆಪಿ ಮುಖಂಡ ಮುರಳಿ ಮನೋ ಹರ ಜೋಷಿ, ಯೋಗವನ್ನು ಧರ್ಮಕ್ಕೆ ತಳಕು ಹಾಕಬಾ ರದು ಎಂದಿದ್ದು ಹಿಂದೂಗಳಿಗೂ ಅನ್ವಯವಾಗಬೇಕು.
ಯೋಗದ ಬಗೆಗಿನ ಕೆಸರೆರಚಾಟದಿಂದ ಸದ್ಯ ಅಂತರ ರಾಷ್ತ್ರೀಯ ಮಟ್ಟದಲ್ಲಿ ಭಾರತದ ಹೆಸರು ಕೆಡುತ್ತಿದೆ. ಅಂತರರಾಷ್ಟ್ರೀಯ ಯೋಗ ದಿನ ಭಾರತದಲ್ಲಿ ಶಾಂತಿ, ಸಹಬಾಳ್ವೆಗೆ ದಾರಿ ಮಾಡಿಕೊಡಬೇಕಿತ್ತು. ಆದರೆ ಹಾಗೆ ಆಗುತ್ತಿಲ್ಲ ಎಂದು ಬಿಂಬಿಸಲಾಗುತ್ತಿದೆ.
ಒಟ್ಟು 193 ಸದಸ್ಯರಿರುವ ವಿಶ್ವಸಂಸ್ಥೆ ಕಳೆದ ಡಿಸೆಂ ಬರ್‌ನಲ್ಲಿ ಒಕ್ಕೊರಳಿನಿಂದ ಜೂನ್ 21, ಅಂತರ ರಾಷ್ಟ್ರೀಯ ಯೋಗ ದಿನ ಎಂದು ಘೋಷಿಸುವ ನಿರ್ಣಯ ಕೈಗೊಂಡಿತು. 177 ದೇಶಗಳು ಈ ನಿರ್ಣಯವನ್ನು ಸಹ ಪ್ರಾಯೋಜಿಸಿದ್ದವು. ಈ ಸಂದರ್ಭದಲ್ಲಿ ಯೋಗದ ಬಗ್ಗೆ ಬೇರೆ ಬೇರೆ ದೇಶದ ಪ್ರತಿನಿಧಿಗಳು ಅತೀವ ಮೆಚ್ಚುಗೆಯ ಮಾತುಗಳನ್ನೇ ಹೇಳಿದ್ದರು. ಅವರು ‘ಯೋಗದಿಂದ ಆರೋಗ್ಯ ವರ್ಧಿಸುವುದು ಮಾತ್ರವಲ್ಲ ಭವಿಷ್ಯದ ಕನಸುಗಳನ್ನು ಕಾಣಲು ಮತ್ತು ಅವುಗಳನ್ನು ನನಸಾಗಿಸಲು ಇದರಿಂದ ಸಹಕಾರಿ’ ಎಂದಿದ್ದರು. ಅಷ್ಟೆ ಅಲ್ಲದೆ ನಮ್ಮಲ್ಲಿನ ವೈರುಧ್ಯಗಳು ತಂದೊಡ್ಡುವ ಗೊಂದಲಗಳನ್ನು ಹೋಗಲಾಡಿಸಲು ಸಹಾಯ ಮಾಡುತ್ತದೆ ಎಂದಿದ್ದರು. ವಿಶ್ವಸಂಸ್ಥೆಯ ಮುಖ್ಯಸ್ಥ ಬಾನ್ ಕಿ-ಮೂನ್ ಅಂತರ ರಾಷ್ಟ್ರೀಯ ಯೋಗ ದಿನ ಘೋಷಿಸುವಾಗ ‘ಯೋಗ, ಅಭಿವೃದ್ಧಿ–ಶಾಂತಿಗೆ ಸಹಾಯ ಮಾಡುತ್ತದೆ’ ಎಂದಿದ್ದರು.
ಆದರೆ ಈಗ ಈ ವಿಷಯ ಬಲಪಂಥೀಯರ ದಾಳ ವಾಗಿ ಪರಿಣಮಿಸಿದ್ದು ಸ್ಪಷ್ಟವಿದೆ. ಕೆಲವು ಮುಸ್ಲಿಂ ಸಂಘಟ ನೆಗಳು ಸೂರ್ಯನಮಸ್ಕಾರ ಹಾಗೂ ಇತರೆ ಕೆಲವು ಯೋಗಾಭ್ಯಾಸ ಧರ್ಮ-ವಿರೋಧಿಯೆಂದು ಸಾರಿದರೆ ಹಿಂದೂ ಧುರೀಣರೊಬ್ಬರು ಸೂರ್ಯ ನಮಸ್ಕಾರ ಮಾಡ ದವರು ಸಮುದ್ರಕ್ಕೆ ಬೀಳಲಿ ಎಂದು ಆಜ್ಞಾಪಿಸಿದ್ದಾರೆ! ವಿಶ್ವಸಂಸ್ಥೆಯಲ್ಲಿ ಮಾಡಿದ ತಮ್ಮ ಪ್ರಥಮ ಭಾಷಣದಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ‘ಯೋಗವು ಒಬ್ಬನು ತನ್ನನ್ನು ಪ್ರಕೃತಿ ಮತ್ತು ವಿಶ್ವದೊಡನೆ ಒಂದುಮಾಡಿಕೊಳ್ಳಲು ಸಹಕಾರಿ’ ಎಂದಿದ್ದರು. ಯೋಗದ ವಿಷಯದಲ್ಲಿ ಎಲ್ಲರನ್ನೂ ತಮ್ಮ ತೋಳ್ತೆಕ್ಕೆಗೆ ಸೆಳೆದುಕೊಂಡು ಈ ಆಶಯವನ್ನು ಈಡೇರಿಸುವ ಕಾಲ ಈಗ ಬಂದಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.