ಕರ್ನಾಟಕದ ರಂಗಭೂಮಿ, ಸುಗಮಸಂಗೀತ, ಜಾನಪದ ಹಾಗೂ ಇನ್ನಿತರ ಪ್ರದರ್ಶಕ ಕಲೆಗಳ ನಿರಂತರ ಒಡನಾಟ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ನಿರ್ದೇಶಕನಾಗಿ ಸಲ್ಲಿಸಿದ ದೀರ್ಘ ಸೇವೆಯ ಅನುಭವದ ಹಿನ್ನೆಲೆಯಲ್ಲಿ ರಂಗಾಯಣದ ಪ್ರಸ್ತುತ ಸಂಘರ್ಷದ ಸಮಯದಲ್ಲಿ ನನ್ನ ಸ್ಪಷ್ಟ ಮತ್ತು ನಿಷ್ಠುರವಾದ ಅಭಿಪ್ರಾಯಗಳನ್ನು ಹೇಳಬಯಸುತ್ತೇನೆ. ಯಾಕೆಂದರೆ ರಂಗಾಯಣ ಭಾರತದ ರಂಗಭೂಮಿಯ ಸಂದರ್ಭದಲ್ಲಿ ಒಂದು ಮಹತ್ತರ ಸಂಸ್ಥೆಯಾಗಬೇಕೆಂಬ ಕನಸು ಕಂಡು ಹಲವಾರು ಗುಣಾತ್ಮಕ ಕ್ರಮಗಳನ್ನು ಕೈಗೊಂಡವರಲ್ಲಿ ನಾನೂ ಒಬ್ಬ. ಹಾಗೆ ನೋಡಿದರೆ ನನ್ನ ದೀರ್ಘವಾದ ಸೇವಾವಧಿಯಲ್ಲಿ ನಾನು ಹೆಚ್ಚು ಗಮನ ಕೊಟ್ಟದ್ದು ರಂಗಾಯಣಕ್ಕೆ. ಅದರಲ್ಲೂ ರಂಗಾಯಣದ ಕಲಾವಿದರ ಕ್ಷೇಮಾಭಿವೃದ್ಧಿ ಮತ್ತು ಅದರ ಚಟುವಟಿಕೆಗಳಿಗೆ.
ಕನ್ನಡ ರಂಗಭೂಮಿಗೆ ಹೊಸ ಆಯಾಮ ನೀಡುವ ಆಶಯದೊಂದಿಗೆ 1989ರಲ್ಲಿ ಆರಂಭವಾದ ಕರ್ನಾಟಕ ನಾಟಕ ರಂಗಾಯಣ ಇಂದು ಕೆಲವರ ಗಂಜಿ ಕೇಂದ್ರವಾಗಿ ಮೈಸೂರಿಗೆ ಸೀಮಿತವಾಗಿರುವುದು ವಿಪರ್ಯಾಸ. ದೇಶವಿದೇಶಗಳನ್ನು ಸುತ್ತಿದ ರಂಗಾಯಣದ ಆರಂಭದ ನಿರ್ದೇಶಕ ಆಧುನಿಕ ರಂಗಭೂಮಿಯ ಭೀಷ್ಮ ಬಿ.ವಿ.ಕಾರಂತರು ತಮ್ಮ ಹೊಸ ಆಲೋಚನೆಗಳಿಂದ ರಂಗಭೂಮಿ ಹಾಗೂ ಕಲಾವಿದ ನಿಂತ್ಲ್ಲಲಿ ನಿಲ್ಲದೆ ಚಲನಶೀಲವಾಗಬೇಕೆಂದು ಬಯಸಿದವರು. ಇಲ್ಲಿರುವ ರಂಗಾಯಣದ ಕಲಾವಿದರು ಒಂದೆಡೆ ಕೊಳೆಯದೆ, ರಂಗಾಯಣದಿಂದ ರಂಗಭೂಮಿಯ ವಿವಿಧ ಮಜಲುಗಳ ಪರಿಣತಿ ಪಡೆದು, ಕನ್ನಡ ರಂಗಭೂಮಿಗೆ ಹೊಸ ಹೊಳಹು ನೀಡುವ ಬೆಳಕಾಗಬೇಕೆಂದು ಬಯಸಿದವರು.
ರಂಗಾಯಣ ಸ್ಥಾಪಿಸಿದ ಕರ್ನಾಟಕ ಸರ್ಕಾರದ ಆಶಯವೂ ಇದೇ ಆಗಿತ್ತು. ಆದರೆ, ಅಷ್ಟರಲ್ಲಿಯೇ ಒಂದೆಡೆ ಬೇರುಬಿಟ್ಟ ಕಲಾವಿದರ ಪಡೆ ಹೊಸ ಪ್ರಯೋಗಗಳ ಮೂಲಕ ಕಲಾರಸಿಕರ ಹೃದಯಕ್ಕೆ ಲಗ್ಗೆ ಹಾಕುವುದರ ಜೊತೆಗೆ, ಒಂದೆಡೆ ನೆಲೆ ನಿಲ್ಲಬೇಕೆಂಬ ನಿಲುವಿಗೆ ಬದ್ಧವಾದರು. ಇದನ್ನು ವಿರೋಧಿಸಿದ ಕಾರಂತರನ್ನೇ ಧಿಕ್ಕರಿಸಿದಂತ ಪ್ರಸಂಗಗಳ ಬಗ್ಗೆ ಕಾರಂತರೇ ತಮ್ಮ ನೋವನ್ನು ಹಂಚಿಕೊಂಡಿದ್ದಾರೆ. ಈ ನಿಟ್ಟಿನಲ್ಲಿ ನಮ್ಮ ರಂಗಾಯಣದ ಕಲಾವಿದರು ಕೆಲವು ಸ್ಥಳೀಯರ ಒಲವನ್ನು ಗಳಿಸುತ್ತಾ, ಮುಂದೆ ತಾವು ಮಾಡಿದ ತಪ್ಪುಗಳಿಗೆಲ್ಲಾ ಅವರ ಶ್ರಿರಕ್ಷೆಯನ್ನು ಪಡೆಯುವುದೇ ಅವರ ನಿರಂತರ ಗುರಿಯಾಗಿದೆ. ಪರಿಣಾಮವಾಗಿ, ಇಂದು ಮೈಸೂರಿನ ರಂಗಾಯಣದ ಕಲಾವಿದರು ಹೊಸ ಬಗೆಯ ಪ್ರಯೋಗಗಳಿಂದ ಸುದ್ದಿಯಾಗುವ ಬದಲು, ವಿವಿಧ ವಿವಾದಗಳಿಂದ ಸುದ್ದಿಯಾಗುತ್ತಿದ್ದಾರೆ.
ಅಷ್ಟೇ ಅಲ್ಲ, ಆನೆ ನಡೆದದ್ದೇ ದಾರಿ, ತಾವು ಮಾಡಿದ್ದೇ ನಿಯಮ ಎಂಬ ಮನೋಭಾವ ಬೆಳೆಸಿಕೊಂಡು, ತಾವೇ ರಂಗಾಯಣದ ಆಸ್ತಿ ಎಂಬ ಭ್ರಮೆಯಲ್ಲಿ ಕಾಲದೂಡುತ್ತಿರುವ ಪರಿಣಾಮವೇ ಇಂದು ಮೈಸೂರು ರಂಗಾಯಣದಲ್ಲಿ ಸರ್ಕಾರ ನೇಮಕಮಾಡುವ ನಿರ್ದೇಶಕರೊಬ್ಬರೇ ನಿರ್ದೇಶಕರಾಗಿರದೆ, ಬರೋಬ್ಬರಿ 18 ಜನ ಕಲಾವಿದರೂ ತಾವೂ ಕೂಡ ಸ್ವತಂತ್ರವಾಗಿ ನಿರ್ದೇಶಕರಂತೆ ವರ್ತಿಸುತ್ತಿದ್ದಾರೆ. ಒಬ್ಬ ಕ್ರಿಯಾಶೀಲ ರಂಗಭೂಮಿ ಕಲಾವಿದ/ನಿರ್ದೇಶಕರಾಗಿ ಬಿ.ವಿ.ರಾಜಾರಾಂ ಅವರು, ಮೈಸೂರು ರಂಗಾಯಣದ ಕಲಾವಿದರನ್ನು ತಮ್ಮ ಪ್ರತಿಭೆಯಿಂದ ನಿಯಂತ್ರಿಸಲಾಗದೆ, ಅಸಹಾಯಕರಾಗಿ ರಂಗಾಯಣವನ್ನೇ ಅವರ ಕೈಗೊಪ್ಪಿಸಿ, ತಾನು ಪೂರ್ಣಾವಧಿ ನಿರ್ದೇಶಕರಾಗಿ ನೇಮಕಗೊಂಡರೂ, ವಿಸಿಟಿಂಗ್ ಡೈರಕ್ಟರ್ ಆಗಿ ಕಲಾವಿದರ ಮುಂದೆ ಮಂಡಿಯೂರಿದ್ದು ಶೋಚನೀಯ.
ಬಿ.ವಿ.ಕಾರಂತರ ಕಾಲದಿಂದಲೂ, ರಂಗಾಯಣದ ನಿರ್ದೇಶಕರೆಲ್ಲರೂ ನಾಟಕ ಸಿದ್ಧತೆ, ಪ್ರದರ್ಶನಕ್ಕೆ ಬದ್ದರಾಗಿ, ಜೊತೆಗೆ ರಂಗಚಟುವಟಿಕೆಗಳಿಗೆ ಪೂರಕವಾಗಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದರ ಪರಿಣಾಮವೇ ರಂಗಾಯಣ ರೆಪರ್ಟರಿ, ಕರ್ನಾಟಕದ ಬೇರಾವ ಸಂಸ್ಥೆಗಳೂ ಮಾಡದಂತಹ ಕ್ಲಾಸಿಕ್ ನಾಟಕಗಳನ್ನು, ಬಹುರೂಪಿ, ಚಿಣ್ಣರಮೇಳದಂತಹ ಕಾರ್ಯಕ್ರಮಗಳನ್ನು ನಾಡಿಗೆ ನೀಡಲು ಸಾಧ್ಯವಾಗಿದೆ. ಆದರೆ, ಇಂದಿನವರು ತಮ್ಮ ಅವಧಿಯಲ್ಲಿ ರಂಗಾಯಣದಲ್ಲಿ ಯಾವುದೇ ಗಲಾಟೆಗಳಿಲ್ಲದೆ, ವ್ಯವಸ್ಥಿತವಾಗಿ ರಂಗಾಯಣ ಮುನ್ನಡೆಸಿಕೊಂಡು ಹೋದರೆಂಬ ಕೀರ್ತಿಗೆ ಪಾತ್ರರಾಗಲು ಕಲಾವಿದರ ನಿಯೋಜನೆಯನ್ನು ಒಂದೆಡೆ ವಿರೋಧಿಸಿದರೆ, ಮತ್ತೊಂದೆಡೆ ಅದೇ ಕಲಾವಿದರ ನಿಯೋಜನೆಯೆಂಬ ತೂಗುಗತ್ತಿಯನ್ನು ಅವರ ನೆತ್ತಿಯ ಮೇಲಾಡಿಸುತ್ತಾ, ತಾವು ರಂಗಾಯಣದಲ್ಲಿಲ್ಲದಿದ್ದರೂ ದೈನಂದಿನ ಕಾರ್ಯಚಟುವಟಿಕೆಯನ್ನು ಕಲಾವಿದರು ತುಟಿಪಿಟಕ್ ಎನ್ನದೆ ಮುಂದುವರಿಸಿಕೊಂಡು ಹೋಗುವಂತೆ ಮಾಡಿದ್ದಾರೆ.
ಇಷ್ಟೆಲ್ಲಾ ಆದರೂ ಸರ್ಕಾರೇತರ ಅಕಾಡೆಮಿಕ್ ಸಂಸ್ಥೆಗಳ ಮುಖ್ಯಸ್ಥರಿಗೆ ಆಡಳಿತ ಹಾಗೂ ಹಣಕಾಸಿನ ಅಧಿಕಾರ ಹಿಂದೆ ಹೇಗೆ ಬಂದಿತ್ತು, ಈಗ ಯಾಕೆ ಅದು ಅಪ್ರಸ್ತುತ ಹಾಗೂ ರಾಜಾರಾಂಗೆ ಅದು ಏಕೆ ಬೇಕಾಗಿತ್ತು, ಮತ್ತು ಹೀಗೆ ಅಧಿಕಾರ ಮರಳಿ ಪಡೆಯಲು ರಂಗಾಯಣದ ಕೆಲವೇ ಕೆಲವು ಕಲಾವಿದರು ರಾಜಾರಾಂ ಬೆನ್ನಿಗೆ ನಿಂತಿದ್ದು ಏಕೆ ಎಂದು ಯಾರೂ ತಲೆ ಕೆಡಿಸಿಕೊಳ್ಳದೆ, ಗುಂಪಿನಲ್ಲಿ ಗೋವಿಂದ ಎಂದು ಸಿಕ್ಕಿದ್ದೇ ಛಾನ್ಸ್ ಎಂದು ಕೆಲವರು ಸರ್ಕಾರಕ್ಕೆ ಧಿಕ್ಕಾರ ಕೂಗಿ ಫೋಟೋಗೆ ಪೋಸ್ ಕೊಟ್ಟದ್ದು ವಿಪರ್ಯಾಸ. ಸ್ವಾತಂತ್ರ್ಯ ಬೇಕೆಂದಾಗ ಕಲಾವಿದರಾಗಿ, ಸೌಲಭ್ಯ ಬೇಕೆಂದಾಗ ಸರ್ಕಾರಿ ನೌಕರರಂತೆ ವರ್ತಿಸುವ ರಂಗಾಯಣದ ಕಲಾವಿದರು, ನಿಯಮಗಳ ಹಂಗಿಲ್ಲದೆ, ಇಷ್ಟ ಬಂದ ಹಾಗೆ ಇರಲು ಸರ್ಕಾರಿ ಅಧಿಕಾರಿಗಳಿಗಿಂತ ನಿಗದಿತ ಅವಧಿಗೆ ನೇಮಕಗೊಂಡಿರುವ ಸರ್ಕಾರೇತರ ನಿರ್ದೇಶಕರೇ ವಾಸಿ, ಅವರೇ ತಮ್ಮ ನಿಯಂತ್ರಣಾಧಿಕಾರಿ, ಉಪನಿರ್ದೇಶಕರಿಗೂ ತಮಗೂ ಸಂಬಂಧವೇ ಇಲ್ಲವೆಂದು ವರ್ತಿಸುತ್ತಿರುವುದೇ ರಂಗಾಯಣದ ಇಂದಿನ ಅಶಿಸ್ತಿಗೆ ಕಾರಣ. ಇದನ್ನು ಪ್ರಶ್ನಿಸಿದ ಹಿಂದಿನ ಉಪನಿರ್ದೇಶಕರೊಬ್ಬರನ್ನು ಇದೇ ಕಲಾವಿದರು ಕೊರಳಪಟ್ಟಿ ಹಿಡಿದು ಹೊಡೆಯಲು ಹೋದದ್ದು, ರಂಗಾಯಣದಲ್ಲಿ ಶಿಸ್ತು ತರಲು ಪ್ರಯತ್ನಿಸಿದ ಬಿ. ಜಯಶ್ರಿಯವರಿಗೆ ಇನ್ನಿಲ್ಲದ ಕಿರುಕುಳ ನೀಡಿ, ಅವಮಾನಿಸಿ, ಅವರಾಗಿಯೇ ರಾಜೀನಾಮೆ ನೀಡುವಂತೆ ಮಾಡಿದ್ದು, ನಮಗೆಲ್ಲರಿಗೂ ತಿಳಿದಿರುವ ವಿಷಯ.
ಯಾವುದೇ ಅನುದಾನಿತ ಸಂಸ್ಥೆಯ ಮುಖ್ಯಸ್ಥರಿಗೆ ಆಡಳಿತ ಹಾಗೂ ಹಣಕಾಸಿನ ಅಧಿಕಾರವನ್ನು ವಹಿಸಿಕೊಡುವುದು ಆರ್ಥಿಕ ಸಂಹಿತೆಗೆ ಅನುಗುಣವಾದುದಲ್ಲ ಹಾಗೂ ಅದು ಅಸಿಂಧು. ಈ ಕಾರಣದಿಂದ ಸಹಜವಾಗಿಯೇ ರಂಗಾಯಣದ ನಿರ್ದೇಶಕರಿಗೆ ನೀಡಿದ್ದ, ಆಡಳಿತಾತ್ಮಕ ಹಾಗೂ ಹಣಕಾಸಿನ ಅಧಿಕಾರವನ್ನು ಹಿಂಪಡೆಯಲಾಗಿದೆ. ಹಾಗೆ ನೋಡಿದರೆ ಒಬ್ಬ ಅಕಾಡೆಮಿಕ್ ವ್ಯಕ್ತಿಯನ್ನು ಕ್ರಿಯಾಶೀಲವಾಗಿ ಕೆಲಸ ಮಾಡಲು ಮುಕ್ತಗೊಳಿಸಿದೆ. ನಿಜವಾಗಿಯೂ ರಂಗಾಯಣಕ್ಕೆ ಒಂದಿಷ್ಟು ಕನಸುಗಳನ್ನು ಹೊತ್ತುಕೊಂಡು ಬರುವ ಕ್ರಿಯಾಶೀಲ ನಿರ್ದೇಶಕ ಸರ್ಕಾರದ ಕಟ್ಟುಪಾಡುಗಳ ಗೊಡವೆಗೆ ಹೋಗದೆ, ಕನಸುಗಳನ್ನು ನನಸಾಗಿಸುವ ಪ್ರಯತ್ನವನ್ನಷ್ಟೆ ಮಾಡುತ್ತಾರೆ. ಹಿಂದೆ ಬಿ.ವಿ. ಕಾರಂತರ ಆದಿಯಾಗಿ ಕೆಲವು ನಿರ್ದೇಶಕರು ಮಾಡಿದ್ದು ಹಾಗೆಯೇ.
ಅದಕ್ಕೆ ಅವರ ಅವಧಿಯಲ್ಲಿ ಸಾಂಸ್ಕೃತಿಕವಾಗಿ ರಂಗಾಯಣಕ್ಕೊಂದು ಭದ್ರ ಅಡಿಪಾಯ ಸಿಕ್ಕಿದೆ. ಹೀಗಿದ್ದೂ, ದಕ್ಷಿಣ ಭಾರತದ ಉತ್ತಮ ಏಕೈಕ ರೆಪರ್ಟರಿ ಹಾಗೂ ಅದ್ಭುತ ಕಲಾಪಡೆ ಇದ್ದರೂ, ಕಳೆದ ಒಂದೂವರೆ ವರ್ಷದಲ್ಲಿ ಯಾಕೆ ಹೊಸ ನಾಟಕಗಳಾಗಲಿಲ್ಲ? ರಾಜರಾಂ ಅವರಿಗೆ ಈ ಬಗ್ಗೆ ಮನಸ್ಸು ಹಾಗೂ ಪುರುಸೊತ್ತು ಯಾಕೆ ಸಿಗಲಿಲ್ಲವೋ ಗೊತ್ತಿಲ್ಲ. ಅವರ ನಿರ್ದೇಶನದಲ್ಲಿ ಪ್ರದರ್ಶನಗೊಂಡ `ಶಿಖರ ಸೂರ್ಯ' ನಾಟಕ ಕೇವಲ ಎರಡೇ ಪ್ರದರ್ಶನಗಳಿಗೆ `ಶಿಖರ ತಲುಪದ ಸೂರ್ಯ' ಎಂಬ ಠೀಕೆಗೆ ಗುರಿಯಾಗಿ ಮಖಾಡೆ ಮಲಗಿತು. ಈ ಕಾರಣವೇ ಇರಬಹುದು ರಾಜಾರಾಂ ಅವರು ಅಲ್ಲಿಂದ ಇಲ್ಲಿಯವರೆಗೆ ನಿರ್ದೇಶನದ ಸಹವಾಸಕ್ಕೆ ಹೋಗಲಿಲ್ಲವೇನೊ. ಅಷ್ಟೇ ಅಲ್ಲ, ತಾವಿದ್ದು ಬೇರೊಬ್ಬ ನಿರ್ದೇಶಕರಿಂದ ನಾಟಕ ಮಾಡಿಸುವುದು ಬೇಡವೆಂದು, ನಾಟಕ ಮಾಡಿಸಲು ಹಿಂಜರಿದು ಹೊಸ ನಾಟಕಗಳ ಸಹವಾಸವನ್ನೇ ಬಿಟ್ಟರು.
ರಂಗಾಯಣ-25ರ ವಿಚಾರ ಸಂಕಿರಣದಲ್ಲಿ ಮುಂಬರುವ ದಿನಗಳಲ್ಲಿ ರಂಗಾಯಣ ಶಿಥಿಲಗೊಳ್ಳಲು ಬಿಡದೆ, ಉಳಿಸಿಕೊಳ್ಳುವುದು ಹೇಗೆಂಬ ಬಗ್ಗೆ ಚರ್ಚೆಯಾಗಬೇಕಿತ್ತು. ಆದರೆ, ಅಲ್ಲಿಯೂ ಮುಖ್ಯವಾಗಿ ಚರ್ಚೆಯಾಗಿದ್ದು ಅಧಿಕಾರ ಹಂಚಿಕೆಯ ವಿಚಾರವೇ. ರಾಜಾರಾಂ ಆಹ್ವಾನಿಸಿದ್ದು, ಅಂಥವರನ್ನೇ. ರಂಗಾಯಣ ಕಟ್ಟಿ ಬೆಳಸಿದ್ದ ಎಲ್ಲಾ ಮಾಜಿ ನಿರ್ದೇಶಕರನ್ನು ಆಹ್ವಾನಿಸಬೇಕಾಗಿದ್ದ ರಾಜಾರಾಂ, ಕೇವಲ ಒಬ್ಬಿಬ್ಬರನ್ನು ಮಾತ್ರ ಆಹ್ವಾನಿಸಿದ್ದು ಯಾಕೆ? ಮಾಜಿ ನಿರ್ದೇಶಕರುಗಳಾದ ಬಸವಲಿಂಗಯ್ಯ ಹಾಗೂ ಬಿ. ಜಯಶ್ರಿಯವರನ್ನು ಕೈಬಿಟ್ಟಿದ್ದು ಯಾಕೆ? ಜೊತೆಗೆ ರಂಗಾಯಣವು ರೂಪುಗೊಳ್ಳಲು ಕಾರಣರಾದ ರಂಗಾಯಣಕ್ಕೆ ಹತ್ತಿರದಲ್ಲಿದ್ದ ನನ್ನನ್ನೂ ಒಳಗೊಂಡಂತೆ, ಮಾಜಿ ಅಧಿಕಾರಿಗಳಾದ ಚಿರಂಜೀವಿಸಿಂಗ್. ಐ.ಎಂ.ವಿಠಲಮೂರ್ತಿ, ಸಿ.ಎಸ್.ಕೇದಾರ್ ಇವರುಗಳನ್ನು ಆಹ್ವಾನಿಸಿ ಅವರುಗಳ ಸಲಹೆಗಳನ್ನು ಪಡೆಯಬಹುದಾಗಿತ್ತು.
ರಂಗಾಯಣದ ಕಲಾವಿದರ ವರ್ಗಾವಣೆ ಸಲ್ಲದು ಎಂದು ಬೊಬ್ಬೆ ಹೊಡೆಯುವ ರಂಗ ಪ್ರೇಮಿಗಳು, ರಂಗಾಯಣದ ಭವಿಷ್ಯದ ಬಗ್ಗೆ ಸರಿಯಾಗಿ ಚಿಂತನೆ ನಡೆಸುವ ಅಗತ್ಯವಿದೆ. ಕಳೆದ 25 ವರ್ಷಗಳಿಂದ ಸರ್ಕಾರ ಕೋಟ್ಯಂತರ ರೂಪಾಯಿಗಳ ವೆಚ್ಚದಲ್ಲಿ ದೇಶವಿದೇಶಗಳ ರಂಗತಜ್ಞರಿಂದ ತರಬೇತಿ ನೀಡಿದ್ದು, ಅಪಾರ ಅನುಭವ ಗಳಿಸಿರುವ ಪ್ರತಿಭಾವಂತ ರಂಗಾಯಣದ ಕಲಾವಿದರು, ತಮ್ಮ ಅನುಭವಗಳನ್ನು ಹೊಸಬರೊಂದಿಗೆ ಹಂಚಿಕೊಳ್ಳದೆ, ಹೊಸಕಲಾವಿದರ ಪಡೆಯನ್ನು ಸಿದ್ಧಪಡಿಸದೆ, ತಮ್ಮ ಪ್ರತಿಭೆಯನ್ನು ತಮ್ಮಂದಿಗೆ ಇಟ್ಟುಕೊಂಡು ನಿವೃತ್ತಿಯಾದರೆ, ರಂಗಾಯಣಗಳಿಗೇನು ಪ್ರಯೋಜನ? ರಂಗಭೂಮಿಗೇನು ಪ್ರಯೋಜನ? ಇನ್ನು ಐದು ವರ್ಷಗಳಲ್ಲಿ ಎಲ್ಲಾ ಕಲಾವಿರು ನಿವೃತ್ತಿಯಾಗುತ್ತಾರೆ. ಮೈಸೂರಿನಲ್ಲಿಯೇ ಇದ್ದು ನಿವೃತ್ತರಾದರೆ, ಆಗ ಸರ್ಕಾರ ರಂಗಾಯಣದ ಬಾಗಿಲಿಗೆ ಬೀಗ ಜಡಿಯಬೇಕೆ? ಈಗಲೇ ಎಲ್ಲಾ ರಂಗಾಯಣಗಳಿಗೆ ಈ ಕಲಾವಿದರು ಹೋಗಿ ತಮ್ಮ ಅನುಭವಗಳನ್ನು ಧಾರೆ ಎರೆಯುತ್ತಲೇ ಹೊಸಬರೊಂದಿಗೆ ಪ್ರಯೋಗಶೀಲ ನಾಟಕಗಳನ್ನು ಆಡಿದರೆ, ಮೈಸೂರಿಗೆ ಸೀಮಿತವಾಗಿದ್ದ ರಂಗಾಯಣ ಇಡೀ ನಾಡಿಗೆ ತಲುಪಿದಂತಾಗುವುದಿಲ್ಲವೇ? ರಂಗಸಮಾಜದಲ್ಲಿರುವವರೂ ರಂಗತಜ್ಞರೇ, ಅವರಿಗೂ ರಂಗಾಯಣ ಮತ್ತು ಕನ್ನಡ ರಂಗಭೂಮಿಯ ಉಳಿವಿನ ಕಾಳಜಿ ಇದೆ ಎಂದು ಯಾಕೆ ಅನಿಸುವುದಿಲ್ಲ?
ನಾಡಿನ ಪ್ರತಿಯೊಬ್ಬ ರಂಗಾಸಕ್ತನಿಗೂ ರಂಗಾಯಣ ಉಳಿಯಬೇಕು.ಉಳಿಯುವುದು ಮಾತ್ರವಲ್ಲ ಕಾರಂತರಿಂದ ತರಬೇತಿ ಪಡೆದು ಪರಿಣಿತರಾಗಿರುವ ಕಲಾವಿದರಿಂದಲೇ ಆ ಮಹಾನ್ ಚೇತನ ಕನಸು ಕಂಡ ಧಾರವಾಡ, ಶಿವಮೊಗ್ಗ, ಗುಲ್ಬರ್ಗಾ, ಕೆಂದ್ರಗಳು ಸೇರಿದಂತೆ ರಂಗಾಯಣ, ಕರ್ನಾಟಕದ ಮೂಲೆ ಮೂಲೆಗೂ ತಲುಪುವುದರ ಮೂಲಕ ಕಾರಂತರ ಕನಸನ್ನು ನನಸು ಮಾಡಬೇಕು. ಇಲ್ಲದೆ ವಾದ ವಿವಾದಗಳಲ್ಲಿ ಮುಳುಗಿ, ಕಾರಂತರ ಭಾವಚಿತ್ರ ಹಿಡಿದು ಸುದ್ದಿ ಮಾಡುವವರೂ ಸೇರಿದಂತೆ, ನಾವೆಲ್ಲರೂ ಸೇರಿ ಕಾರಂತರಿಗೆ `ಕ್ಷಮಿಸಿ ಕಾರಂತರೆ ನಿಮಗೆ ದ್ರೋಹ ಮಾಡುತ್ತಿದ್ದೇವೆ?' ಎಂದು ಹೇಳಬೇಕಲ್ಲವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.