ADVERTISEMENT

ರಾಜ್ಯಭಾಷೆಯಾಗಿ ಕನ್ನಡ ಸಮರ್ಥವಾಗಿ ಬಳಕೆಯಾಗಲಿ

ಡಾ.ಬಿ.ಆರ್.‌ ಸತ್ಯನಾರಾಯಣ
Published 7 ಮೇ 2014, 19:30 IST
Last Updated 7 ಮೇ 2014, 19:30 IST

ಈ ತೀರ್ಪು ಅನಿರೀಕ್ಷಿತವೇನಲ್ಲ. ರಾಜ್ಯ ಸರ್ಕಾರಕ್ಕೆ ಹಗ್ಗ ಕೊಟ್ಟು ಕೈ ಕಟ್ಟಿಸಿಕೊಂಡ ಸ್ಥಿತಿ ಎದುರಾಗಿದೆ. ಹೀಗೇಕೆ ಆಯಿತು? ತಂತ್ರ್ಯಾನಂತರ ಭಾಷೆಗಳ ಆಧಾರದ ಮೇಲೆ ರಾಜ್ಯಗಳು ರೂಪುಗೊಂಡವು. ಭಾಷೆಯೇ ಆಯಾ ರಾಜ್ಯದ ಗುರುತೂ, ಅಸ್ಮಿತೆಯೂ ಆಗಿದ್ದು ಐತಿಹಾಸಿಕ ಸತ್ಯ. ಆಯಾ ಭಾಷೆಯೇ ರಾಜ್ಯದ ರಾಜ್ಯಭಾಷೆ ಅರ್ಥಾತ್ ಆಡಳಿತ ಭಾಷೆಯೂ ಆಗ­­­ಬೇಕಾ­ದುದು ಸಹಜವೂ ಹೌದು. ಆದರೆ ರಾಜ್ಯ ಸರ್ಕಾರಗಳು ತಮ್ಮ ರಾಜ್ಯ­­­ಭಾ­ಷೆಯ ಅಭಿವೃದ್ಧಿಗೆ, ಉಳಿವಿಗೆ ಕೈಗೊಂಡ ಕ್ರಮಗಳು ಮಾತ್ರ ಪ್ರಶ್ನಾರ್ಹ.

ಮಾತೃಭಾಷೆ ಎಂಬುದು ವೈಯಕ್ತಿಕ ನೆಲೆಯಲ್ಲಿ ತೀರ್ಮಾನ­ವಾಗ­ಬೇಕಾದ ವಿಷಯ. ಯಾರು ಬೇಕಾದರೂ ಯಾವ ಭಾಷೆ­ಯನ್ನಾ­ದರೂ ಮಾತೃ­ಭಾಷೆಯನ್ನಾಗಿ ಸ್ವೀಕರಿಸಬಹುದು. ಅದು ಅವರ­ವರ ಆಯ್ಕೆಯ ಸ್ವಾತಂತ್ರ್ಯ. ಆದರೆ ರಾಜ್ಯಭಾಷೆ ಎಂಬುದು ಸಾರ್ವತ್ರಿಕ­ವಾದದ್ದು, ಸಾಮಾ­ಜಿಕ­ವಾದದ್ದು ಹಾಗೂ ಒಂದು ನಾಡಿಗೆ ಸಂಬಂಧ­ಪಟ್ಟದ್ದು. ಕನ್ನಡ ಭಾಷೆ­ಯನ್ನು ಸಾರ್ವತ್ರಿಕ ನೆಲೆಯಲ್ಲಿ ನೋಡದೆ ವೈಯ­ಕ್ತಿಕ­ವಾದ ಮಾತೃ­ಭಾಷೆಯ ನೆಲೆ­ಯಲ್ಲಿ ನೋಡಿದ್ದು ಹಾಗೂ ಅದನ್ನು ಶಿಕ್ಷಣ ಮಾಧ್ಯ­ಮಕ್ಕೆ ತಳುಕು ಹಾಕಿದ್ದು ಈ ಎಲ್ಲಾ ಗೊಂದಲ­ಗಳಿಗೆ ಕಾರಣವೆನ್ನಬಹುದು.
ನ್ಯಾಯಾ­ಲಯದ ತೀರ್ಪು ಹೊರಬಂದ ಮೇಲೆ ಅಧಿಕಾರಸ್ಥರ ಪ್ರತಿಕ್ರಿಯೆ ಗಮ­ನಿಸಿ­ದರೆ ಅವರ ಇಚ್ಛಾಶಕ್ತಿಯ ಕುರಿತು ಅನುಮಾನ ಮೂಡುತ್ತದೆ.

ಸಾಹಿತಿ, ಚಿಂತಕರ ಸಭೆ ಕರೆ­ಯುವ ಮುಖ್ಯಮಂತ್ರಿ ನಿರ್ಧಾರ ಒಂದು ರಾಜಕೀಯ ನಡೆಯೆ ಹೊರತು, ಕಾನೂನು ರೂಪಿಸುವವರ ನಡೆಯಲ್ಲ! ಸಾಹಿತ್ಯಕ ವಲಯದಿಂದ ಎದುರಾಗ­ಬಹು­­­ದಾದ ಸ್ವಲ್ಪಮಟ್ಟಿನ ಪ್ರತಿರೋಧ, ಅದಕ್ಕೆ ಸಿಗುವ ಪ್ರಚಾರ, ಅದರಿಂದ ತಮಗೆ ಉಂಟಾ­­­­ಗುವ ಮುಜುಗರ­ವನ್ನು ತಪ್ಪಿಸಲು ಸಾಹಿತಿಗಳ ಸಭೆ ಕರೆಯಲಾಗಿದೆ, ಅಷ್ಟೆ. ನಾಲ್ಕೈದು ಪುಸ್ತಕ ಬರೆ­ದಾಕ್ಷಣ ಯಾವ ವಿಷಯದ ಬಗ್ಗೆಯಾದರೂ ಸಲಹೆ ಕೊಡು­ವು­ದು ಸಾಹಿತಿಗಳಿಗೆ ಹೇಗೆ ಸಾಧ್ಯ? ಇಂತಹ ವಿಷಯಗಳಲ್ಲಿ ಕರೆಯಬೇಕಾದ್ದು ಸಾಹಿತಿ­ಗಳ ಸಭೆ­­­ಯನ್ನಲ್ಲ; ಸಂವಿ­ಧಾನ ತಜ್ಞರ, ಶಿಕ್ಷಣ ತಜ್ಞರ ಸಭೆ ಎಂಬ ಸಾಮಾನ್ಯ ಜ್ಞಾನ ಕೂಡಾ ನಮ್ಮನ್ನು ಆಳು­ವವರಿಗೆ ಇಲ್ಲವೆ? ಒಂದು ಭಾಷೆಯನ್ನಾಗಿ ಕನ್ನಡವನ್ನು ಸಮರ್ಥ­ವಾಗಿ ಕಲಿಸುವ ಪ್ರಾಥ­ಮಿಕ ಜವಾಬ್ದಾರಿಯನ್ನೂ ಸರಿಯಾಗಿ ನಿಭಾಯಿಸ­ದ­ವರು, ಕನ್ನಡ­ವನ್ನೇ ಶಿಕ್ಷಣ ಮಾಧ್ಯಮ­ವನ್ನಾಗಿ ಮಾಡುವ ಮಾತಾಡುವುದು ಶತ­ಮಾನದ ವ್ಯಂಗ್ಯ!

ಸರ್ವೋಚ್ಚ ನ್ಯಾಯಾಲಯದ  ತೀರ್ಪಿನ ಹಿನ್ನೆಲೆಯಲ್ಲಿ, ಒಂದು ರಾಜ್ಯವಾಗಿ ಕರ್ನಾಟಕ ತನ್ನ ರಾಜ್ಯಭಾಷೆಯ ಅಭಿವೃದ್ಧಿಗಾಗಿ, ತನ್ಮೂಲಕ ಕನ್ನಡ ಭಾಷೆಯ ಉಳಿವಿ­ಗಾಗಿ ಮಾಡಬೇಕಾದ್ದೇನು? ಮಾತೃಭಾಷೆ ಹೇಗೆ ವೈಯಕ್ತಿಕ ಆಯ್ಕೆಯಾಗುತ್ತದೊ ಹಾಗೇ ಶಿಕ್ಷಣ ಮಾಧ್ಯಮ ಕೂಡಾ. ಆದ್ದರಿಂದ, ಸರ್ಕಾರ ಶಿಕ್ಷಣ ಮಾಧ್ಯಮದ ವಿಷಯ­ವನ್ನು ಪಕ್ಕಕ್ಕಿಟ್ಟು, ವಸ್ತುನಿಷ್ಠವಾಗಿ ತನ್ನ ರಾಜ್ಯಭಾಷೆಯನ್ನು ಸಮರ್ಥವಾಗಿ ಬಳಸ­ಬೇಕಾಗಿದೆ.

ಶಿಕ್ಷಣ ಮಾಧ್ಯಮ, ಮಾತೃಭಾಷೆ ಯಾವುದೇ ಇರಲಿ, ತನ್ನ ರಾಜ್ಯದಲ್ಲಿ ಶಿಕ್ಷಣ ಪಡೆಯುವ ಪ್ರತಿಯೊಂದು ಮಗುವೂ ಕನ್ನಡವನ್ನು ಪ್ರಥಮ ಭಾಷೆ­ಯಾಗಿ, ಕನಿಷ್ಠ ಹತ್ತನೇ ತರಗತಿಯವರೆಗೆ ಅಧ್ಯಯನ ಮಾಡಲೇಬೇಕೆಂಬ ಕಟ್ಟು­ನಿಟ್ಟಾದ ಕಾನೂನನ್ನು ರೂಪಿಸಲು ಸಾಧ್ಯವಿದೆ. ಈ ಪತ್ರಿಕೆಯಲ್ಲಿ ಪಡೆಯುವ ಅಂಕ­ಗಳನ್ನು  ಗ್ರೇಡ್, ವರ್ಗ, ಶೇಕಡವಾರು ಲೆಕ್ಕಾಚಾರಕ್ಕೆ ಕಡ್ಡಾಯವಾಗಿ ಸೇರಿಸ­ಲೇ­ಬೇಕು. ಇದರಿಂದ ರಾಜ್ಯದಲ್ಲಿ ನೆಲೆಸುವ ಪ್ರತಿಯೊಬ್ಬರಿಗೂ ರಾಜ್ಯಭಾಷೆಯ ಅರಿವು ಉಂಟಾ­ಗುತ್ತದೆ. ಜೊತೆಗೆ, ಜನರ ಆಯ್ಕೆಯ ಸ್ವಾತಂತ್ರ್ಯವನ್ನು ಗೌರವಿಸಿದಂತೆಯೂ ರಾಜ್ಯ­ಭಾಷೆಯ ಸಮರ್ಥ ಬಳಕೆಗೆ ಅವಕಾಶವನ್ನು ಸೃಷ್ಟಿಸಿಕೊಂಡಂತೆಯೂ ಆಗುತ್ತದೆ.

ರಾಜ್ಯಸರ್ಕಾರದ ಮುಂದಿರುವ ಇನ್ನೊಂದು ಆಯ್ಕೆಯೆಂದರೆ, ಪ್ರಾದೇಶಿಕ ಭಾಷೆ­ಗಳ­ನ್ನಾ­ಡುವ ಜನರನ್ನು ಪ್ರತಿನಿಧಿಸುವ ಎಲ್ಲಾ ರಾಜ್ಯಗಳ ಸಂಸತ್ ಸದಸ್ಯರಲ್ಲಿ ಒಮ್ಮತಾ­ಭಿ­ಪ್ರಾಯ­ವನ್ನು ಮೂಡಿಸಿ, ಸಂಸತ್ತಿನಲ್ಲಿ ಪ್ರಾದೇಶಿಕ ಭಾಷೆಗಳ ಅಭಿವೃದ್ಧಿಗೆ ಸಂಬಂಧಿಸಿ­ದಂತೆ ಪ್ರಬಲ ಕಾನೂನು ರೂಪಿಸಲು ಒತ್ತಡ ಹೇರುವುದು. ಇದರ ಜೊತೆಗೆ, ಪ್ರಾದೇಶಿಕ ಭಾಷೆಗಳ ಉಳಿವಿಗೆ ಬೆಳವಣಿಗೆಗೆ ಸಂಬಂಧಿಸಿದಂತೆ ಮಾರ್ಗದರ್ಶಿ ಸೂತ್ರ­­ಗಳನ್ನು ನೀಡು­ವಂತೆ ಸರ್ವೋಚ್ಚ ನಾಯಾಲಯಕ್ಕೆ ಮೊರೆ ಹೋಗುವುದು. ಈ ನಿಟ್ಟಿ­ನಲ್ಲಿ ಪ್ರಾದೇಶಿಕ ಭಾಷೆಯ ಉಳಿವಿಗಾಗಿ ಶ್ರಮಿಸುತ್ತಿರುವ ಅಂತರಾಷ್ಟ್ರೀಯ ಸಂಸ್ಥೆಗಳ ನೆರವನ್ನೂ ಪಡೆ­ಯ­­­ಬಹುದು. ಮಾತೃಭಾಷೆ, ಶಿಕ್ಷಣ ಮಾಧ್ಯಮ ಇಂತಹ ವೈಯಕ್ತಿಕ ಆಯ್ಕೆಯ ವಿಚಾರ­ಗಳ ಹಕ್ಕನ್ನು ತಂದೆ–ತಾಯಿ, ಪೋಷಕರಿಗೆ ಬಿಟ್ಟು, ರಾಜ್ಯಭಾಷೆಯ ಸಮರ್ಥ ಬಳ­­ಕೆ­ಯ ಹಕ್ಕನ್ನು ರಾಜ್ಯಸರ್ಕಾರ ಪರಿಣಾಮಕಾರಿಯಾಗಿ ಬಳಸುವಂತಹ ಯೋಜನೆ ರೂಪಿಸಲಿ.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.