ಎಂ. ಎಂ. ಕಲಬುರ್ಗಿಯವರು ತಮ್ಮ ಪ್ರತಿಕ್ರಿಯೆಯಲ್ಲಿ ಭಾರತೀಯ ಇತಿಹಾಸವನ್ನು ಆಧಾರವಾಗಿ ತೋರಿಸಿ ವಚನ ಚಳವಳಿಗಳ ಸಿದ್ಧಾಂತವು ಜಾತಿವಿನಾಶವೇ ಆಗಿದೆ ಎನ್ನುತ್ತಾರೆ. ಅವರ ಪ್ರಕಾರ ಬಾಲಗಂಗಾಧರ ಹಾಗೂ ನಾವು ಇದನ್ನು ಅಲ್ಲಗಳೆಯುತ್ತಿರುವುದು ಕನ್ನಡ ಸಂಸ್ಕೃತಿಗೆ ಒಳ್ಳೆಯದಲ್ಲ.
ಕಲಬುರ್ಗಿಯವರ ಪ್ರಕಾರ ವಚನಗಳು ಜಾತಿವಿರೋಧಿ ಎಂದರೇನೇ ಕನ್ನಡ ಸಂಸ್ಕೃತಿಗೆ ಒಳ್ಳೆಯ ಹೆಸರು ಬರುತ್ತದೆ. ಆದರೆ ನಮ್ಮ ಪ್ರಕಾರ ಕನ್ನಡಿಗರು ಒಂದು ಒಳ್ಳೆಯ ಸಂಶೋಧನೆಯನ್ನು ಮಾಡುವುದರಿಂದ ಹಾಗೂ ಅದನ್ನು ಕನ್ನಡದಲ್ಲಿ ಬರೆಯುವುದರಿಂದ ಕನ್ನಡದ ಸ್ಥಾನಮಾನವು ಜಾಗತಿಕ ಮಟ್ಟದಲ್ಲಿ ನಿಜವಾಗಿಯೂ ಹೆಚ್ಚುತ್ತದೆಯೇ ಹೊರತು ಯಾವುದಾದರೂ ಐಡಿಯಾಲಜಿಯನ್ನು ಸಮರ್ಥಿಸುವುದರಿಂದಲ್ಲ.
ಒಂದು ಕಾಲದ ಇತಿಹಾಸವನ್ನು ತಿಳಿದುಕೊಳ್ಳದಿದ್ದರೆ ಆ ಕಾಲದ ಸಾಹಿತ್ಯವು ಅರ್ಥವಾಗುವುದಿಲ್ಲವೆಂಬುದು ಎಷ್ಟು ನಿಜವೊ, ಅಷ್ಟೇ ನಿಜ, ಸಾಹಿತ್ಯವನ್ನು ಸರಿಯಾಗಿ ಓದದಿದ್ದರೆ ಅದೇ ಇತಿಹಾಸವನ್ನು ಸರಿಯಾಗಿ ತಿಳಿದುಕೊಳ್ಳಲೂ ಸಾಧ್ಯವಿಲ್ಲ ಎಂಬುದು. ಏಕೆಂದರೆ ಇತಿಹಾಸ ರಚನೆಗೆ ಸಾಹಿತ್ಯವು ಆಧಾರವಲ್ಲವೆ? ಕಲಬುರ್ಗಿಯವರ ಪ್ರತಿಕ್ರಿಯೆಯಲ್ಲಿ ಏನಾಗಿದೆಯೆಂದರೆ ವಸಾಹತು ಕಾಲದಲ್ಲಿ ಭಾರತದಲ್ಲಿ ರಿಲಿಜನ್ನುಗಳಿವೆ ಎಂಬ ತಪ್ಪು ತಿಳಿವಳಿಕೆಯಿಂದ ಬರೆದ ಇತಿಹಾಸವನ್ನೇ ಅವರು ನಮಗೆ ತಿಳಿಸುತ್ತಾರೆ.
ಅದೇ ಇತಿಹಾಸವು ವಚನ ಚಳವಳಿಯು ಜಾತಿ ವ್ಯವಸ್ಥೆಯ ವಿರುದ್ಧದ ಹೋರಾಟ ಎನ್ನುತ್ತದೆ. ಅದು ವಚನ ಸಾಹಿತ್ಯವನ್ನು ಅಧ್ಯಯನ ಮಾಡಿ ಕಂಡುಕೊಂಡ ಸತ್ಯವಲ್ಲ, ಬದಲಾಗಿ ಪ್ರೊಟೆಸ್ಟಾಂಟ್ ಪೂರ್ವಗ್ರಹಗಳಿಂದ ಹುಟ್ಟಿಕೊಂಡ ಇತಿಹಾಸ ಹಾಗೂ ಪಾಶ್ಚಾತ್ಯರು ಭಾರತಕ್ಕೆ ಬಂದು ವಚನಗಳನ್ನು ಓದುವುದಕ್ಕೆ ಮೊದಲೇ ಹುಟ್ಟಿಕೊಂಡ ಇತಿಹಾಸ ಎಂಬುದನ್ನು ಡಂಕಿನ್ ಸ್ಪಷ್ಟವಾಗಿ ತೋರಿಸಿದ್ದಾರೆ. ಆ ಇತಿಹಾಸವನ್ನು ಇಟ್ಟುಕೊಂಡೇ ವಚನ ಸಾಹಿತ್ಯವನ್ನು ನಾವು ಓದತೊಡಗಿದೆವು.
ಈಗ ವಚನ ಸಾಹಿತ್ಯವನ್ನು ಮರು ಓದಿಗೆ ಒಳಪಡಿಸಿ ಸರಿಯಾದ ಇತಿಹಾಸದ ರಚನೆಗೆ ಬುನಾದಿಯನ್ನು ಹಾಕಬೇಕೆಂಬುದು ನಮ್ಮ ಒತ್ತಾಸೆ. ಹಾಗಾಗಿ ಕಲಬುರ್ಗಿಯವರು ನೀಡುವ ಇತಿಹಾಸ ನಮಗೆ ಪ್ರಸ್ತುತವಲ್ಲ.
ಜಾತಿ ವಿನಾಶವೇ ವಚನ ಚಳವಳಿಗಳ ಸೈದ್ಧಾಂತಿಕ ಹಿನ್ನೆಲೆ ಎಂಬ ವಾದವನ್ನು ಸಮರ್ಥಿಸಬೇಕಾದರೆ ಈ ಮುಂದಿನ ವಾಕ್ಯಗಳು ಅನಿವಾರ್ಯ ಎಂಬುದನ್ನು ಈ ಕುರಿತ ಚರ್ಚೆಗಳು ತೋರಿಸಿಕೊಟ್ಟಿವೆ. `ನಮಗೆ ಸಿಗದಿರುವ ಇನ್ನೂ ಎಷ್ಟೋ ವಚನಗಳಿರಬಹುದು' , `ವಚನಗಳಲ್ಲಿ ಶಬ್ದಗಳು ಇಲ್ಲದಿದ್ದರೂ ಅವುಗಳ ಧ್ವನಿ ಹಾಗಿದೆ' , `0.3% ವಚನಗಳಲ್ಲಿ ಇರುವ ವಿಚಾರವನ್ನೇ ಅವರೇಕೆ ಪ್ರತಿಪಾದಿಸಿರಬಾರದು? ಇದನ್ನೆಲ್ಲ ಅಂಕಿ ಅಂಶದಿಂದ ಹೇಳಲು ಸಾಧ್ಯವಿಲ್ಲ' , ಇತ್ಯಾದಿ.
ಅಂದರೆ ಅವರೆಲ್ಲರೂ ತಮ್ಮ ಜಾತಿ ವಿನಾಶದ ಸಿದ್ಧಾಂತವು ಲಭ್ಯವಿರುವ ವಚನಗಳನ್ನಾಧರಿಸಿಲ್ಲ ಹಾಗೂ ಆಧರಿಸಬಾರದು ಎಂಬ ಅಭಿಪ್ರಾಯವನ್ನು ಸ್ಪಷ್ಟವಾಗಿ ತಿಳಿಸುತ್ತಿದ್ದಾರೆ. ಅದೇ ರೀತಿಯಲ್ಲಿ 0.3% ವಚನಗಳಲ್ಲಿ ಬರುವ ಬ್ರಾಹ್ಮಣರ ಆಚರಣೆಗಳ ಹಾಗೂ ಗ್ರಂಥಗಳ ಟೀಕೆ, ಜಾತಿ ಮದ, ಭೇದಗಳ ಟೀಕೆ, ಇತ್ಯಾದಿಗಳೇ ಈ ವಾದಕ್ಕೆ ಬುನಾದಿ ಎಂಬುದೂ ಧೃಡಪಡುತ್ತದೆ. ಇಂಥ ಸಾಲುಗಳಿಗೆಲ್ಲ ಜಾತಿ ವಿನಾಶಕ್ಕಿಂತಲೂ ಸೂಕ್ತವಾದ ವಿವರಣೆಯನ್ನು ನೀಡಿದಲ್ಲಿ ಈ ಮೇಲಿನ ಅಂತೆ ಕಂತೆಗಳ ಸಂತೆ ಮಾಯವಾಗುವುದರಲ್ಲಿ ಸಂದೇಹವೇ ಇಲ್ಲ.
ಬಾಲಗಂಗಾಧರರು ಅಂಥದ್ದೊಂದು ವಾದವನ್ನು ಇಡುತ್ತಾರೆ. ವಚನಗಳ ಸಿದ್ಧಾಂತವನ್ನು ಜಾತಿ ವಿರೋಧದ ನೆಲೆಯಿಂದ ತೆಗೆದು ಆಧ್ಯಾತ್ಮಿತೆಯ ನೆಲೆಯಲ್ಲಿ ಇಡಿರಿ. ಈ ಮೇಲಿನ ಸಮಸ್ಯೆಗಳೆಲ್ಲ ಪರಿಹಾರವಾಗಿ ಬಿಡುತ್ತವೆ. ನಮ್ಮ ಆಧ್ಯಾತ್ಮಿಕ ಮಾರ್ಗಗಳನ್ನೆಲ್ಲ ನಾವು ಸಾಮಾಜಿಕ ಚಳವಳಿಗಳನ್ನಾಗಿ ಮಾಡಿಟ್ಟಿದ್ದು ನಮ್ಮ ಸಾಂಸ್ಕೃತಿಕ ವಿಸ್ಮತಿಗಳಲ್ಲೊಂದು. ಅದು ಪ್ರೊಟೆಸ್ಟಾಂಟ್ ಲೋಕದೃಷ್ಟಿಯ ಕೊಡುಗೆ. ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಉಪನಿಷತ್ತುಗಳ ಕಾಲದಿಂದಲೂ ಜಾತಿ, ಅಂತಸ್ತು, ಐಶ್ವರ್ಯ ಇತ್ಯಾದಿಗಳು ಅಹಂಕಾರರೂಪದಲ್ಲಿ ಆತ್ಮಜ್ಞಾನಕ್ಕೆ ಅಡ್ಡಿಯಾಗಿವೆ ಎಂಬುದಾಗಿಯೇ ಪ್ರತಿಪಾದಿಸಲಾಗಿದೆ.
ಆತ್ಮಜ್ಞಾನಿಗೆ ಇದಾವುದೂ ಇರುವುದಿಲ್ಲ. ಅದು ಪರಮಾನಂದದ ಸ್ಥಿತಿ. ಹಾಗಾಗುವುದೆಂದರೆ ಜನನ ಮರಣಗಳ ಚಕ್ರದಿಂದ ಮುಕ್ತಿ ಹೊಂದಿದಂತೆಯೇ. ಅದನ್ನೇ ಅವರು ಮೋಕ್ಷ ಎನ್ನುತ್ತಾರೆ. ವರ್ಣಧರ್ಮದಲ್ಲಿ ಶ್ರದ್ಧೆ ಇಟ್ಟವರು, ಪ್ರಾಪಂಚಿಕ ಅರ್ಥ ಸಿದ್ಧಿಗಾಗಿ ದೇವತೆಗಳು ಹಾಗೂ ಪೂಜೆಯಲ್ಲಿ ಶ್ರದ್ಧೆ ಇಟ್ಟವರು ಮುಕ್ತಿಯನ್ನು ಪಡೆಯುವುದರ ಬದಲಾಗಿ ಈ ಸಂಸಾರಚಕ್ರದಲ್ಲೇ ಸುತ್ತುತ್ತಿರುತ್ತಾರೆ ಎಂಬುದಾಗಿ ಉಪನಿಷತ್ತುಗಳೂ, ಅವುಗಳ ಭಾಷ್ಯಕಾರರೂ ಒತ್ತಿ ಹೇಳಿದ್ದಾರೆ.
ಸಾಂಸಾರಿಕ ಉಪಾಧಿಗಳಿಂದ ಬಿಡುಗಡೆ ಪಡೆಯುವುದಕ್ಕಾಗಿ ಭಾರತೀಯ ಆಧ್ಯಾತ್ಮಿಕ ಪರಂಪರೆಯು ಸನ್ಯಾಸ, ಶ್ರಮಣ ಇತ್ಯಾದಿ ವೈವಿಧ್ಯಪೂರ್ಣವಾದ ವಿರಕ್ತ ಮಾರ್ಗಗಳನ್ನು ಬೆಳೆಸಿತು. ಈ ವಿರಕ್ತ ಪರಂಪರೆಯೇ ಬೌದ್ಧ, ಜೈನರಲ್ಲೂ ಇರುವುದರಿಂದ ಸಂಸಾರ ಚಕ್ರದಿಂದ ಬಿಡುಗಡೆಯನ್ನು ಹೊಂದುವುದೇ ನಿಜವಾದ ಮೋಕ್ಷ ಎಂಬುದಾಗಿ ಅವರೂ ಪ್ರತಿಪಾದಿಸುತ್ತಾರೆ. ಸಂಸಾರಸ್ಥರು ಮುಖ್ಯ ಎಂಬುದಾಗಿ ಭಾವಿಸಿಕೊಂಡ ಅನೇಕ ಪದ್ಧತಿಗಳನ್ನು ಹಾಗೂ ಆಚರಣೆಗಳನ್ನು ಆಧ್ಯಾತ್ಮ ಜ್ಞಾನಕ್ಕೆ ಅಡ್ಡಿಗಳೆಂಬುದಾಗಿ ಅವರು ಭಾವಿಸಿದರು.
ವರ್ಣ, ಜಾತಿಭೇದ ಅದರಲ್ಲಿ ಮುಖ್ಯವಾದುದು. ಬ್ರಾಹ್ಮಣರು ಸನ್ಯಾಸ ಸ್ವೀಕರಿಸಬೇಕಾದರೆ ವರ್ಣದ ಸಂಕೇತವಾದ ಜನಿವಾರವನ್ನೂ, ಕರ್ಮಗಳನ್ನೂ ತ್ಯಜಿಸಿ ತಮ್ಮ ಶ್ರಾದ್ಧವನ್ನೂ ಮಾಡಿಕೊಳ್ಳವುದು ಇವತ್ತಿಗೂ ಪ್ರಚಲಿತದಲ್ಲಿರುವ ಆಚರಣೆ. ಶಿವ ಶರಣರು ಶಿವಭಕ್ತಿಯನ್ನು ಆಧ್ಯಾತ್ಮಿಕ ಮಾರ್ಗವನ್ನಾಗಿ ಭಾವಿಸಿದವರು. ಇಲ್ಲಿ ಮುಕ್ತಿ ಎಂಬುದು ಈಶ್ವರ ಸಾಯುಜ್ಯದ ರೂಪದಲ್ಲಿ ಇದೆ. ಹಾಗಾಗಿ ಬ್ರಾಹ್ಮಣ ಜಾತಿಯನ್ನು ವಿರೋಧಿಸಲಿಕ್ಕೆ ಬಸವಣ್ಣನು ಜನಿವಾರವನ್ನು ಕಿತ್ತು ಹಾಕಿದ ಎಂಬುದೇ ಪ್ರೊಟೆಸ್ಟಾಂಟ್ ವಿವರಣೆ.
ಇವರೆಲ್ಲ ತಮ್ಮ ಮಾರ್ಗವನ್ನು ತುಳಿಯುವವರಿಗೆ ಮಾತ್ರವೇ ಅಂಥ ಜೀವನವನ್ನು ವಿಧಿಸಿದ್ದರು ಎಂಬುದನ್ನು ಮರೆಯಬಾರದು. ಸಂಸಾರವೆಂದರೆ ಈ ಭೇದಗಳೆಲ್ಲ ಇರುವವೇ, ಆದರೆ ಅದರಿಂದ ಮುಕ್ತಿಯನ್ನು ಪಡೆಯಲು ಬಯಸುವವರು ಈ ಭೇದಗಳನ್ನು ಮರೆಯಬೇಕು. ವಚನಗಳು ಕೂಡ ಶಿವ ಶರಣರಲ್ಲಿ ಜಾತಿ ಭೇದ ಎಣಿಸಬಾರದು ಎಂದು ನಿರ್ದಿಷ್ಟವಾಗಿ ಹೇಳುತ್ತಿವೆ ಎಂಬುದನ್ನು ತರ್ಕಬದ್ಧವಾಗಿ ತೋರಿಸಬಹುದು.
ಅವರು ಜಾತಿಗಳೇ ಹೋಗಬೇಕು ಎಂಬುದಾಗಿಯೂ ಹೇಳುತ್ತಿರಲಿಲ್ಲ ಅಥವಾ ಇಲ್ಲದ ಜಾತಿ ವ್ಯವಸ್ಥೆಯ ಕುರಿತೂ ಹೇಳುತ್ತಿರಲಿಲ್ಲ. ಜಾತಿವಿನಾಶ ಚಳವಳಿಯನ್ನು ಮಾಡುತ್ತಿರುವ ಆಧುನಿಕರು ತಾವು ಇಂಥವರ ಜೊತೆಗೆ ಎಲ್ಲಿಯವರೆಗೆ ನಿಲ್ಲುತ್ತೇವೆಂಬುದನ್ನು ಸರಿಯಾಗಿ ನೋಡಿಕೊಳ್ಳಬೇಕು. ನೀವು ಜಾತಿಯನ್ನು ತಲೆಯೊಳಗಿಟ್ಟುಕೊಂಡಿರೆಂದರೆ ಅವರ ಲೋಕವನ್ನು ತ್ಯಜಿಸಿದಂತೆಯೇ. ` ಪರಚಿಂತೆ ಎನಗೇಕಯ್ಯ' , `ಲೋಕದ ಡೊಂಕ ನೀವೇಕೆ ತಿದ್ದುವಿರಯ್ಯ' ಇಂಥ ವಚನಗಳನ್ನು ಸಾಮಾಜಿಕ ಹೋರಾಟಗಾರರು ರಚಿಸಲು ಸಾಧ್ಯವಿಲ್ಲ.
ಆಧ್ಯಾತ್ಮ ಸಂಪ್ರದಾಯಗಳು, ಬ್ರಾಹ್ಮಣ ಆಚರಣೆಗಳು, ಯಜ್ಞಯಾಗಾದಿಗಳು, ಮಂತ್ರ ತಂತ್ರಗಳು, ದೇವಾಲಯ, ಪೂಜೆ ಇತ್ಯಾದಿಗಳನ್ನೇ ಕೇಂದ್ರವಾಗಿಟ್ಟುಕೊಂಡು ಟೀಕೆಗಳನ್ನು ಮಾಡಲೂ ಒಂದು ಕಾರಣವಿದೆ. ಇವೂ ಕೂಡ ಆಧ್ಯಾತ್ಮ ಮಾರ್ಗಗಳೇ. ಆದರೆ ಈ ಆಚರಣೆಗಳಿಂದ ಹುಟ್ಟಿದ ಅಹಂಕಾರ, ಮೋಹ, ಇತ್ಯಾದಿಗಳೇ ಆತ್ಮಜ್ಞಾನಕ್ಕೆ ಅಡ್ಡಿಯಾಗುತ್ತವೆ ಎಂಬುದನ್ನು ಈ ಟೀಕೆಗಳು ತಿಳಿಸುತ್ತಿವೆ.
ಅಂದರೆ ಹೆಚ್ಚೆಂದರೆ ಒಂದು ರೀತಿಯಲ್ಲಿ ಆಧ್ಯಾತ್ಮ ಮಾರ್ಗವನ್ನಿಟ್ಟುಕೊಂಡು ದಾರಿ ತಪ್ಪಿಸುವವರ ಖಂಡನೆ ಎಂಬುದಾಗಿ ಇಂಥ ಟೀಕೆಗಳನ್ನು ಪರಿಗಣಿಸಬಹುದು. ಇಂಥ ಟೀಕೆಗಳು ಆಯಾ ಸಂಪ್ರದಾಯಗಳಿಗೆ ಆಂತರಿಕವಾದವುಗಳು ಎಂಬುದನ್ನೂ ಗಮನಿಸಬೇಕು. ಉದಾಹರಣೆಗೆ ಇಡೀ ವಚನ ಸಾಹಿತ್ಯದಲ್ಲಿ ಯಾವುದನ್ನು ಕ್ರಾಂತಿಕಾರಕ ವಿಷಯ ಎನ್ನುತ್ತಾರೋ ಅವೆಲ್ಲವೂ ಸಂಸ್ಕೃತ ಆಗಮಗಳಲ್ಲಿ ಬಂದಿರುವ ವಿಚಾರಗಳ ಕನ್ನಡ ರೂಪಗಳೇ ಆಗಿವೆ ಎಂಬುದು ಸ್ಪಷ್ಟ.
ಶಿವಶರಣರ ಮಾರ್ಗವನ್ನು ಭಾರತೀಯ ಆಧ್ಯಾತ್ಮಿಕ ಪರಂಪರೆಯ ಅಖಂಡತೆಯಲ್ಲಿ ಇಟ್ಟರೆ ಮಾತ್ರವೇ ಅಲ್ಲಿ ನಾವು ಯಾವ ಪ್ರಶ್ನೆಗಳನ್ನು ಕೇಳಬೇಕು, ಉತ್ತರವನ್ನು ಹೇಗೆ ಪಡೆಯಬೇಕು ಎಂಬುದಕ್ಕೆ ವಿಧಾನಗಳು ಸಿಗುತ್ತವೆ. ಬದಲಾಗಿ ಈ ಜಾತಿವಿರೋಧದ ಸಿದ್ಧಾಂತವು ಭಾರತೀಯ ಆಧ್ಯಾತ್ಮಿಕ ಪರಂಪರೆಯನ್ನು ಬ್ರಾಹ್ಮಣ, ಬ್ರಾಹ್ಮಣೇತರ ಎಂಬುದಾಗಿ ಜಾತಿಯನ್ನೇ ಆಧಾರವಾಗಿಟ್ಟುಕೊಂಡು ವಿಭಾಗಿಸುವುದರ ಮೂಲಕ ಅದನ್ನು ತಿಳಿವಳಿಕೆಗೆ ದಕ್ಕದಂತೆ ಮಾಡುತ್ತದೆ. ವಚನ ಚಳವಳಿ ಇದಕ್ಕೊಂದು ಜ್ವಲಂತ ಉದಾಹರಣೆ.
ವಚನಕಾರರು ಜಾತಿವಿರೋಧಿ ಸಿದ್ಧಾಂತವನ್ನು ಪ್ರತಿಪಾದಿಸಿದ್ದರು ಎಂದು ವಾದಿಸುವವರು ಈ ಮುಂದಿನ ಕೆಲಸವನ್ನು ಮಾಡಲೇಬೇಕು:
1) 0.3% ವಚನಗಳಲ್ಲಿ ಏನು ಹೇಳುತ್ತಾರೊ ಅವು ಭಾರತೀಯ ಆಧ್ಯಾತ್ಮಿಕ ಪರಂಪರೆಯಲ್ಲಿ ಸಾಮಾನ್ಯವಾಗಿ ಕಾಣಿಸುವಂಥ ಪ್ರತಿಪಾದನೆಗಳಲ್ಲ ಎಂಬುದನ್ನು ತೋರಿಸಬೇಕು.
2) ಅಷ್ಟರ ನಂತರ ಅದು ಜಾತಿ ವಿರೋಧ ಹಾಗೂ ಜಾತಿ ವ್ಯವಸ್ಥೆಯ ವಿರೋಧ ಹೇಗಾಗುತ್ತದೆ ಎಂಬುದನ್ನು ಪ್ರತ್ಯೇಕವಾಗಿ ತೋರಿಸಬೇಕು. ಈ ಎರಡು ಹೆಜ್ಜೆಗಳನ್ನು ಇಡದೇ ಹೇಳಿದ ಮಾತುಗಳೆಲ್ಲ ಪ್ರೊಟೆಸ್ಟಾಂಟ್ ಪೂರ್ವಗ್ರಹಗಳೇ ಹೊರತೂ ಬೇರೇನೂ ಆಗಲು ಸಾಧ್ಯವಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.