ADVERTISEMENT

ವಚನ ಸಾಹಿತ್ಯ ಮತ್ತು ವೈದಿಕ ವಿರೋಧ

ಡಾ.ಎಚ್.ಎಲ್.ಪುಷ್ಪ
Published 28 ಮಾರ್ಚ್ 2013, 19:59 IST
Last Updated 28 ಮಾರ್ಚ್ 2013, 19:59 IST

ಎಚ್.ಎಸ್. ಶಿವಪ್ರಕಾಶ್ ಅವರ `ವಚನ ಸಾಹಿತ್ಯ ಮತ್ತು ಜಾತಿ ವಿರೋಧ' ಲೇಖನ ಹಾಗೂ ಆ ಕುರಿತಾದ ಚರ್ಚೆಗಳನ್ನು ಗಮನಿಸಿರುತ್ತೇನೆ. 12ನೇ ಶತಮಾನದಲ್ಲಿ ಆಗಿಹೋದ, ಈಗಲೂ ತನ್ನ ಪ್ರಸ್ತುತತೆಯನ್ನು ಅಲಕ್ಷಿತ ಸಮುದಾಯಗಳಲ್ಲಿ ಉಳಿಸಿಕೊಂಡ ಈ ಚಳವಳಿ ಸಂವಿಧಾನಾತ್ಮಕ ಸ್ವರೂಪವುಳ್ಳದ್ದಾಗಿತ್ತು. ಅಂತ್ಯಜ ಮೊದಲಾಗಿ ವಿಪ್ರರನ್ನು, ಅಲಕ್ಷ್ಯಕ್ಕೆ ಒಳಗಾಗಿದ್ದ ಸ್ತ್ರೀಯರನ್ನು, ದೇವಭಾಷೆಯಾಗಿದ್ದ ಸಂಸ್ಕೃತ ಭಾಷೆಯ ಗರ್ವವನ್ನು, ಅಮಾನವೀಯ ಹಾಗೂ ಜೀವಪರವಲ್ಲದ ವೈದಿಕ ಧರ್ಮವನ್ನು ವಿರೋಧಿಸುವ ಹಾಗೂ ಪರ್ಯಾಯವೊಂದನ್ನು ಕಟ್ಟುವ ನೆಲೆಯನ್ನಾಗಿಯೇ ವಚನ ಚಳವಳಿಯನ್ನು ನೋಡಬೇಕಾದ ಅಗತ್ಯ ನಮಗಿದೆ. ಬಸವಣ್ಣನ ಶತಮಾನಗಳ ಮನ್ನೋಟವುಳ್ಳ ಈ ವ್ಯವಸ್ಥಿತ ಚಳವಳಿಯನ್ನು ಹಲವು ಕಾಲದಲ್ಲಿ ಹಲವು ರೀತಿಯ ಮುಸುಕುಗಳನ್ನು ಹೊದ್ದು ವೈದಿಕ ಧರ್ಮ ನಿರಂತರವಾಗಿ ಆಕ್ರಮಣ ನಡೆಸಿದೆ. ಅದರ ಕೈಯಲ್ಲಿರುವ ಅಸ್ತ್ರಗಳೆಂದರೆ ಗೋಮಾತೆ, ಮಡೆಸ್ನಾನ, ಅಂಬೇಡ್ಕರರ ಸಂವಿಧಾನ ರಚನೆಯನ್ನು ಕುರಿತು ಹರಡುವ ಊಹಾಪೋಹಗಳು ಇತ್ಯಾದಿಗಳು. ಕೆಲವು ಬಾರಿ ಬಸವಣ್ಣನನ್ನು ಬ್ರಾಹ್ಮಣನೆಂದು ಗುರುತಿಸಿಕೊಳ್ಳುವ ಅವಿವೇಕವನ್ನು ಸಹ ವೈದಿಕತೆ ಮಾಡಿದೆ.

ಮೂಲತಃ ಹಲವು ಜಾತಿಗಳನ್ನು ಒಂದೇ ವೈಚಾರಿಕ ನೆಲೆಗಟ್ಟಿನಡಿಯಲ್ಲಿ ಒಂದೇ ದೈವವನ್ನು ಒಪ್ಪಿಕೊಳ್ಳುವ ಮೂಲಕ ಸಂಘಟಿಸಲ್ಪಟ್ಟ ಈ ಚಳವಳಿ ಸಹಜವಾಗಿಯೇ ಜನರಿಂದ, ಜನರಿಗಾಗಿಯೇ ಎಂಬ ಮುಕ್ತತೆಯನ್ನು ಉಳ್ಳದ್ದು. ಸ್ವಾಭಾವಿಕವಾಗಿಯೇ ಈ ಚಳವಳಿಯ ಗಡಿರೇಖೆಗಳು ಜಡವಲ್ಲ, ಚಲನಶೀಲವಾಗಿವೆ. ಯಾರು ಬೇಕಾದರೂ ಬೇಲಿಯನ್ನು ಕಿತ್ತು ಒಳಬರುವ ಹಾಗೂ ಹೊರಹೋಗುವ ಮುಕ್ತ ವೈಚಾರಿಕಾ ಸ್ವಾತಂತ್ರ್ಯವುಳ್ಳದ್ದು. ಈ ಸಮುದಾಯದಲ್ಲಿ ತಾವಾಗಿಯೇ ಉತ್ಸಾಹದಿಂದ ಪ್ರವೇಶಿಸಿದ ಹಲವು ಕಾಯಕ ಜೀವಿಗಳು ತಮ್ಮ ಜಾತಿಗಳನ್ನು ಬದಿಗಿಟ್ಟು ಕಾಯಕಗಳನ್ನು ಉಳಿಸಿಕೊಂಡು ಸ್ವಾಭಿಮಾನದ ಮೇಲುಕೀಳಿಲ್ಲದ ಒಂದು ವಿಶಾಲ ಜನಜೀವನದಲ್ಲಿ ತಮ್ಮ ಅಸ್ತಿತ್ವ ಕಂಡುಕೊಂಡರು. ಹಲವು ದೈವ, ಹಲವು ಸಂಸ್ಕೃತಿಗಳು ಒಂದೆಡೆಯಾದರೆ ಮಾನವೀಯತೆಯನ್ನು ಮರೆತು ಶ್ರೇಷ್ಠತೆಯ ವ್ಯಸನಪೀಡಿತ ವೈದಿಕ ಧರ್ಮ ಜನಸಾಮಾನ್ಯರನ್ನು ಕಾಡಲಾರಂಭಿಸಿದಾಗ ತರತಮಗಳಿಲ್ಲದ ವಚನ ಚಳವಳಿಯ ತೆಕ್ಕೆಗೆ ತಾವಾಗಿಯೇ ತಮ್ಮನ್ನು ಅಲಕ್ಷಿತ ಸಮುದಾಯಗಳು ಅರ್ಪಿಸಿಕೊಂಡವು.

ಹೀಗಾಗಿ ವಚನಕಾರರು ಜಾತಿಯ ಪರ ಅಥವಾ ಬ್ರಾಹ್ಮಣ ಪರವಾಗಿದ್ದರು ಎಂಬ ಮಾತೇ ತರ್ಕರಹಿತವಾಗಿದ್ದು ತಮ್ಮನ್ನು ಶತಮಾನಗಳಿಂದ ಉಸಿರುಗಟ್ಟಿಸಿದ್ದ ವರ್ಣವ್ಯವಸ್ಥೆಯಿಂದ ಹೊರಬಂದರು ಎಂಬುದಷ್ಟೇ ಮುಖ್ಯವಾಗುತ್ತದೆ. ತಮ್ಮ ತಮ್ಮ ವಚನಗಳಲ್ಲಿ ತಮ್ಮ ಮುಂದಿನ ನಡೆನುಡಿ ಹೇಗಿರಬೇಕೆಂಬುದು ಅವರ ಆಲೋಚನೆಯಾಗಿತ್ತೆ ವಿನಾ ಜಾತಿಯ ಪರವಾಗಿ ಅಥವಾ ಬ್ರಾಹ್ಮಣರ ವಿರೋಧವಾಗಿ ಇರಬೇಕೆಂಬುದರ ಕಡೆಗೆ ಅವರ ಗಮನವಿರಲಿಲ್ಲ. ಈ ವಿಚಾರಗಳನ್ನು ಕುರಿತು ಅವರು ಹೆಚ್ಚು ವಚನಗಳಲ್ಲಿ ಪ್ರತಿಕ್ರಿಯಿಸಿಲ್ಲ ಎಂಬ ಅಲಕ್ಷಿತ ವಿಚಾರವನ್ನೇ ಹಿಡಿದು ಚಳವಳಿಯೊಂದು ಜಾತಿ ವಿರೋಧಿಯಾಗಿರಲಿಲ್ಲ ಎಂಬ ಸಿದ್ಧಾಂತ ರೂಪಿಸ ಹೊರಟಿರುವುದು ಹಲವು ಹುನ್ನಾರಗಳನ್ನು ಎತ್ತಿ ಹಿಡಿಯುತ್ತದೆ. ಈ ಹುನ್ನಾರಿನ ಹಿಂದೆ ವೈದಿಕ ಧರ್ಮದ ಎದುರುನಿಂತ ಜೀವರಪರವಾದ ಸಂಘಟನಾ ರೂಪದ ಸಮಾಜವೊಂದನ್ನು ತುಳಿಯುವ ಅಥವಾ ಜೀವ ವಿರೋಧಿಯಾದ ಕೊಳೆತುಹೋದ ವ್ಯವಸ್ಥೆಯೊಂದನ್ನು ಮರುಸ್ಥಾಪಿಸುವ ಬಲವಾದ ವಿಚಾರಗಳು ಸ್ಪಷ್ಟವಾಗಿಯೇ ಕಂಡುಬರುತ್ತದೆ.

ಒಂದು ಸುಳ್ಳನ್ನು ಹತ್ತು ಬಾರಿ ಹೇಳುತ್ತಲೇ ಹೋದರೆ ಅದು ಸತ್ಯವಾಗುವ ಸಾಧ್ಯತೆಗಳು ಇರುವುದರಿಂದ ಸುಳ್ಳನ್ನು ಅದರ ಮೊಳಕೆಯ ರೂಪದಲ್ಲಿ ನಿವಾರಿಸಬೇಕಾದ ಅಗತ್ಯವೂ ಈ ಹಿನ್ನೆಲೆಯಲ್ಲಿ ನಮಗಿದೆ.ಹನ್ನೆರಡನೇ ಶತಮಾನದ ವಚನಕಾರರು ಸಾಮಾಜಿಕ ವ್ಯವಸ್ಥೆಯ ಒಂದು ಲಕ್ಷಣವಾದ `ಜಾತಿ'ಯನ್ನು ಒಟ್ಟು ಮಾನವ ಕುಲ ಎಂಬ ವಿಸ್ತಾರವಾದ ಅರ್ಥದಲ್ಲಿ ಬಳಸಿದ್ದಾರೆ. ಮಾನವನ ವ್ಯಕ್ತಿತ್ವಕ್ಕೆ ಮಾರಕವಾಗುವ ಸೀಮಿತಾರ್ಥದ ಜಾತಿಗಿಂತ `ಶರಣಕುಲ'ವೊಂದೇ ಒಪ್ಪಿತವಾದದ್ದು ಎಂಬ ಅಭಿಪ್ರಾಯ ಬಹುತೇಕ ವಚನಕಾರರಲ್ಲಿ ಕಂಡುಬರುತ್ತದೆ. ಕುಲಕ್ಕಿಂತ ನಡೆನುಡಿ ಮುಖ್ಯವಾದುದು, ಕೆಳಕುಲದಲ್ಲಿ ಹುಟ್ಟಿಯೂ ಹಿರಿಮೆಯನ್ನು ಕಂಡ ಶರಣರನ್ನು ಹೇಗೆ ನೋಡಬೇಕು ಎನ್ನುವುದನ್ನು ಸಿದ್ಧರಾಮೇಶ್ವರ ತನ್ನ ಒಂದು ವಚನದಲ್ಲಿ ಸೂಚಿಸುತ್ತಾನೆ.

ಕುಲವೆಂದು ಹೋರಾಡುವ ಅಣ್ಣಗಳಿರಾ, ಕೇಳಿರೊ;/ ಕುಲವೇ ಡೋಹರನ? ಕುಲವೇ ಮಾದಾರನ?/ ಕುಲವೇ ದೂರ್ವಾಸನ?ಕುಲವೇ ವ್ಯಾಸನ? ಕುಲವೇ ವಾಲ್ಮೀಕನ? ಕುಲವೇ ಕೌಂಡಿಲ್ಯನ?/ ಕುಲವ ನೋಳ್ಪಡೆ ಹುರುಳಿಲ್ಲ; ಅವರ ನಡೆಯ ನೋಳ್ಪಡೆ ಹುರುಳಿಲ್ಲ;/ ಅವರ ನಡೆಯ ನೋಳ್ಪಡೆ ನಡೆಯುವವರು ತ್ರಿಲೋಕದಲ್ಲಿಲ್ಲ/ಕಪಿಲಸಿದ್ಧಮಲ್ಲಿಕಾರ್ಜುನಾ. ನೋಡಾ,ಹೀಗೆ ಕನಿಷ್ಠತೆಯಲ್ಲಿ ಇರುವ ಶ್ರೇಷ್ಠತೆಯನ್ನು ಎತ್ತಿ ಹಿಡಿಯುವ, ಆ ಮೂಲಕ ಈಗಾಗಲೇ ಇರುವ ವ್ಯವಸ್ಥೆಯೊಂದಕ್ಕೆ ಪ್ರತಿಯಾಗಿ ಶ್ರಮಜೀವಿಗಳ ಹೊಸ ವರ್ಗವೊಂದನ್ನು ರೂಪಿಸುವ ಛಾಂಛೆ ಎಲ್ಲ ವಚನಕಾರರಲ್ಲೂ ಕಂಡುಬರುತ್ತದೆ. ಬಸವಣ್ಣನಂತಹ ಮೇಲ್ವರ್ಗದ ವಚನಕಾರರು ತಮ್ಮನ್ನು ಅಪವರ್ಗೀಕರಣಗೊಳಿಸುವ ಮೂಲಕ ಈ ಆಶಯಗಳನ್ನು ವ್ಯಕ್ತಪಡಿಸುತ್ತಾರೆ. ತಮ್ಮ ತಮ್ಮ ಆಹಾರ ಪದ್ಧತಿಗಳು, ಕಾಯಕಗಳ ಬಗ್ಗೆ ದಿಟ್ಟತನವಾಗಿಯೇ ಪ್ರಸ್ತಾಪಿಸುವ ಕೆಳವರ್ಗದ ವಚನಕಾರ/ಕಾರ್ತಿಯರ ಬಗ್ಗೆ ಎಲ್ಲೂ ಜಾತಿ ಪರವಾದ, ಬ್ರಾಹ್ಮಣರ ಬಗ್ಗೆ ಮೃದುವಾದ ಭಾವನೆಗಳು ಕಂಡುಬರುವುದಿಲ್ಲ.

ADVERTISEMENT

ಬಿಡಾಡಿ ಎಂಬ ಅಂಕಿತದಿಂದ ಕೆಲವೇ ವಚನಗಳನ್ನು ಬರೆದ ಬೊಂತಾದೇವಿ `ಬಯಲು' ಎಂಬುದನ್ನು ನಿರ್ವಾಣ ಎಂಬ ಅರ್ಥದಲ್ಲಿ ಬಳಸುತ್ತಾ `ಎಲ್ಲ ಲೌಕಿಕದ ಹಂಗಿನಿಂದ ಹೊರನಿಂತ ಬಯಲಿಗೆ ಜಾತಿಯ ಹಂಗುಂಟೆ' ಎಂದು ಪ್ರಶ್ನಿಸುತ್ತಾಳೆ. ಶ್ರೇಷ್ಠರಿಗೊಂದು, ಕನಿಷ್ಠರಿಗೊಂದು ಬಯಲಿನ ಕಲ್ಪನೆಯಿದೆಯೇ ಎಂಬ ತರ್ಕವನ್ನು ಆಕೆ ನಡೆಸುತ್ತಾಳೆ.ಊರ ಒಳಗಣ ಬಯಲು, ಊರ ಹೊರಗಣ ಬಯಲೆಂದುಂಟೆ?/ಊರೊಳಗೆ ಬ್ರಾಹ್ಮಣ ಬಯಲು, ಊರ ಹೊರಗೆ ಹೊಲೆ ಬಯಲೆಂದುಂಟೆ?/ಎಲ್ಲಿ ನೋಡಿದೆಡೆ ಬಯಲೊಂದೆ;......ಹೀಗೆ ಜಾತಿ ಕಾರಣದಿಂದಾಗಿಯೇ ಇರುವ `ಬ್ರಾಹ್ಮಣ'ನೆಂಬ ಮೇಲ್ಮೆಯನ್ನು ಧಿಕ್ಕರಿಸುತ್ತಾ, ಪಕ್ಕಕ್ಕೆ ಸರಿಸುತ್ತಾ ನಡೆದ ವಚನಕಾರರ ನಡೆಯಲ್ಲಿ ಹೊಸ ಸಮಾಜ ನಿರ್ಮಾಣದ ಕನಸಿದೆ, ಆ ಕನಸಿನೊಂದಿಗೆ ಒಟ್ಟಾಗಿ ನಡೆಯುವ ಛಲವಿದೆ.

ಮುಂದೆ ದಾಸಪರಂಪರೆಯಲ್ಲಿ ಬಂದ ಕನಕದಾಸನ `ರಾಮಧಾನ್ಯ ಚರಿತೆ' ಅಕ್ಕಿ ರಾಗಿಗಳ ವಾಗ್ವಾದದಂತೆ ತೋರಿದರೂ ಅದು ಮೇಲ್ವರ್ಗದ ನಿಸ್ಸಾರತೆ, ನಿರ್ದಯತೆಯನ್ನು ಸಾರುತ್ತಾ ಕೆಳವರ್ಗದವರ ಸರ್ವಶಕ್ತತೆಯನ್ನು ಎತ್ತಿಹಿಡಿದ ಕಾವ್ಯ. ಹೀಗೆ ತಮ್ಮ ತಮ್ಮ ಕಾವ್ಯಗಳಲ್ಲಿ ಕವಿಗಳು ತಾವು ಯಾವ ಯುಗಕ್ಕೇ ಸೇರಿರಲಿ ಭ್ರಷ್ಟವಾದ ಜಾತಿವ್ಯವಸ್ಥೆಯನ್ನು ಖಂಡಿಸುತ್ತಾ ಬಂದಿದ್ದಾರೆ. ನೇರವಾಗಿ ಖಂಡಿಸುವ ಧೈರ್ಯ ತೋರಿದವರು ಚಳವಳಿಯ ಚೌಕಟ್ಟಿನಲ್ಲಿ ನಿಂತ ವಚನಕಾರರು. ವಚನಗುಮ್ಮಟವೆಂದೇ ಕರೆಸಿಕೊಂಡ ಫ.ಗು. ಹಳಕಟ್ಟಿಯವರು ವಚನಗಳ ಸಂಪಾದನಾ ಕಾರ್ಯದಲ್ಲಿ ಪ್ರಕಟಣೆಗಾಗಿ ಆಂಗ್ಲ ಸರ್ಕಾರವನ್ನು ಕೋರಿದಾಗ ತಮ್ಮ ಧರ್ಮದಲ್ಲೂ, ವಚನಕಾರರಲ್ಲೂ ಇರುವ ಏಕದೇವತಾ ಉಪಾಸನಾ ಕಾರಣಕ್ಕಾಗಿಯೇ ನಿರಾಕರಿಸಲ್ಪಡುತ್ತಾರೆ.

ವೀರಶೈವ ಧರ್ಮವನ್ನು ತಮ್ಮ ಧರ್ಮಕ್ಕೆ ಪ್ರತಿಸ್ಪರ್ಧಿ ಎಂದು ಪ್ರಕಟಣೆಯ ನೆರವನ್ನು ನಿರಾಕರಿಸುತ್ತಾರೆ. ಚರಿತ್ರೆಯೇ ಒಪ್ಪಿಕೊಂಡಂತೆ, ಅಲಕ್ಷಿತ ಬಹುಸಮುದಾಯಗಳು ಒಪ್ಪಿಕೊಂಡಂತೆ ವಚನ ಚಳವಳಿ ಮಾನವತೆಗೆ ಕೊಡಲಿ ಪೆಟ್ಟಿನಂತಿದ್ದ ವೈದಿಕ ಧರ್ಮವನ್ನು ನಿರಾಕರಿಸಿಯೇ ತನ್ನ ನಡೆಯನ್ನು ಕಂಡುಕೊಂಡಿದೆ. ಈಗ ವಿವಿಧ ಕಾರ್ಯಕ್ಕೆ ಸೇರಿದ ಜನಾಂಗಗಳು ತಮ್ಮ ತಮ್ಮ ಕುಲದ ಅಭಿಮಾನಗಳಂತೆ ಆ ಚಳವಳಿಯಲ್ಲಿ ಸೇರಿಹೋದವರ ವಚನಗಳನ್ನು ಅಭ್ಯಸಿಸುವ ಕ್ರಮವೂ ಚಾಲ್ತಿಯಲ್ಲಿದೆ. ಈ ನಿಲುವು ವಸಾಹತುಶಾಹಿ ಒತ್ತಡಗಳ ಸಂದರ್ಭದಲ್ಲಿ ವೀರಶೈವರು ತಮ್ಮ ಜಾತಿಯ ಮೇಲ್ಮೆಯನ್ನು ಎತ್ತಿಹಿಡಿದರು ಎನ್ನುವುದಕ್ಕಿಂತ ಕೆಳವರ್ಗಕ್ಕೆ ಸೇರಿದವರು ಚರಿತ್ರೆಯಲ್ಲಿ ತಮ್ಮ ಸ್ಥಾನ ಗುರುತಿಸಿಕೊಳ್ಳಲು ಮಾಡಿದ ಹುಡುಕಾಟವೆನ್ನುವುದು ಸೂಕ್ತವಾದೀತು.

ಕೆಳವರ್ಗದ ವಚನಕಾರರನ್ನು ಕುರಿತಂತೆ ನಡೆದಿರುವ ಸಂಶೋಧನೆಗಳು, ರಚಿತವಾದ ನಾಟಕಗಳು ಹಾಗೂ ಕವಿತೆಗಳು ಈ ಅಭಿಪ್ರಾಯವನ್ನು ದೃಢಪಡಿಸುತ್ತವೆ. ಹೀಗಾಗಿ ಝಳಕಿ ಹಾಗೂ ಬಾಲಗಂಗಾಧರ ಅವರ ವಚನಕಾರರು ಹಾಗೂ ಜಾತಿ ಕುರಿತಾದ ಅಭಿಪ್ರಾಯಗಳು ಒಂದು ನಿರ್ದಿಷ್ಟ ಗುರಿಯನ್ನು ಇರಿಸಿಕೊಂಡು ಕಟ್ಟಲ್ಪಟ್ಟ ವಾದಗಳಾಗಿವೆ. ಚರಿತ್ರೆಯಲ್ಲಿ ಮುಂಬಾಗಿಲಿನಿಂದ ತಳ್ಳಲ್ಪಟ್ಟು ಬಹು ಸಮುದಾಯದಿಂದ ದೂರಾದವರು ಹಿಂಬಾಗಿಲಿನಿಂದ ಪ್ರವೇಶಿಸಲು ಕೈಯಲ್ಲಿ ಹಿಡಿದ ಅಸ್ತ್ರಗಳಾಗಿಯೇ ಈ ವಾದಗಳು ತೋರುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.