ಅಧಿಕೃತವಾಗಿಯೇ ಕನ್ನಡ ಭಾಷೆಯ ರಾಜ್ಯವಾಗಿರುವ ಕರ್ನಾಟಕದ ಸಾರ್ವಜನಿಕ ಜೀವನದಲ್ಲಿ ಕನ್ನಡ ಭಾಷಾ ಬಳಕೆಯ ಪ್ರಮಾಣ ಮತ್ತು ಗುಣಮಟ್ಟಗಳೆರಡೂ ಅವನತಿಯ ಹಾದಿ ಹಿಡಿದಿವೆ. ಇತ್ತೀಚಿನ ದಿನಗಳಲ್ಲಿ ಕೇಂದ್ರ ಸರ್ಕಾರದ ಕುಮ್ಮಕ್ಕಿನಲ್ಲಿ ಎಲ್ಲ ಕಡೆಗಳಿಂದ ಹಿಂದಿ ಹೇರಿಕೆಯೂ ನಡೆದಿದ್ದು ರಾಜ್ಯದಲ್ಲಿ ಭಾಷಾ ಪರಿಸ್ಥಿತಿ ಇನ್ನಷ್ಟು ಹದಗೆಡತೊಡಗಿದೆ.
ಕನ್ನಡದ ಮಕ್ಕಳಿಗೆ ಕರ್ನಾಟಕದಲ್ಲಿಯೇ ಪ್ರಾಥಮಿಕ ಶಿಕ್ಷಣವನ್ನಾದರೂ ಕನ್ನಡ ಮಾಧ್ಯಮದ ಮೂಲಕ ಒದಗಿಸಲಾಗದ ದುಃಸ್ಥಿತಿ ನಮ್ಮ ಸರ್ಕಾರಕ್ಕೆ ಎದುರಾಗಿದೆ. ಕನ್ನಡವು ಕನ್ನಡದ ಮಕ್ಕಳಿಗೆ ಲೋಕದ ಪ್ರಾಥಮಿಕ ಅರಿವನ್ನು ಔಪಚಾರಿಕ ಮಾದರಿಯಲ್ಲಿ ಒದಗಿಸುವ ಸಾಮರ್ಥ್ಯವನ್ನೂ ಪಡೆದಿಲ್ಲ ಎಂಬ ಸಂದೇಶವನ್ನು ಸಾರ್ವತ್ರಿಕವಾಗಿ ಮತ್ತು ವಿಶೇಷವಾಗಿ ನಮ್ಮ ಎಳೆಯ ಮಕ್ಕಳ ಮನಸ್ಸಿನಲ್ಲಿ ಬಿತ್ತುವುದಾದರೆ ಕನ್ನಡ ಒಂದು ಜೀವಂತ ಭಾಷೆಯಾಗಿ ಉಳಿದು ಬೆಳೆಯುವುದಾದರೂ ಹೇಗೆ?
ಕರ್ನಾಟಕ ಸರ್ಕಾರ ಹೊರಡಿಸಿದ ಶಿಕ್ಷಣ ಮಾಧ್ಯಮ ಕುರಿತ ಆಜ್ಞೆಯನ್ನು, ಎರಡೂವರೆ ವರ್ಷಗಳ ಹಿಂದೆ ಸರ್ವೋಚ್ಚ ನ್ಯಾಯಾಲಯವು ಪ್ರಜೆಗಳ ಮೂಲಭೂತ ಹಕ್ಕಿನ ಹೆಸರಲ್ಲಿ ಅಸಿಂಧುಗೊಳಿಸಿದೆ. ಹಾಗಾಗಿ ಕನ್ನಡಿಗರನ್ನು ಪ್ರತಿನಿಧಿಸುವ ಕರ್ನಾಟಕ ಸರ್ಕಾರದ ಮೊದಲ ಆದ್ಯತೆ, ಈ ಸಾಂವಿಧಾನಿಕ ಸಂಕಷ್ಟದಿಂದ ಕನ್ನಡವನ್ನು ಹೇಗೆ ಪಾರು ಮಾಡುವುದು ಎಂಬ ಪ್ರಶ್ನೆಗೆ ಉತ್ತರವನ್ನು ಕಂಡುಕೊಳ್ಳುವುದು ಆಗಿರಬೇಕಿತ್ತು.
ಆದರೆ ನ್ಯಾಯಾಲಯದ ತೀರ್ಪು ಬಂದ ಹೊಸತರಲ್ಲಿ, ಅದಕ್ಕೆ ಪರಿಹಾರ ರೂಪಿಸುವ ಪ್ರಯತ್ನಗಳ ಬಗ್ಗೆ ಔಪಚಾರಿಕ ಮಾತುಗಳನ್ನಾಡಿದ ಸರ್ಕಾರ ಈಗ ಕನ್ನಡಿಗರನ್ನು ಗಾಬರಿಪಡಿಸುವಂತಹ ಮೌನವನ್ನು ತಳೆದಿದೆ. ಕನ್ನಡ ಪ್ರಾಥಮಿಕ ಶಿಕ್ಷಣ ಎಂದರೆ ಕನ್ನಡ ಸಂಸ್ಕೃತಿಯ, ಪ್ರಜ್ಞೆಯ ಅಡಿಗಲ್ಲು ಇದ್ದಂತೆ. ಆದರೆ ಅದಕ್ಕೇ ಧಕ್ಕೆ ಒದಗಿರುವಾಗ ಆ ಬಗ್ಗೆ ಕಾಳಜಿಯನ್ನೇ ವಹಿಸದೆ ಸರ್ಕಾರ ಈಗ ವಿಶ್ವ ಕನ್ನಡ ಸಮ್ಮೇಳನವನ್ನು ಅದ್ಧೂರಿಯಾಗಿ ಆಚರಿಸಲು ಹೊರಟಿರುವುದು ವಿಪರ್ಯಾಸದ ವಿಷಯವೇ ಆಗಿದೆ. ಅಂದರೆ, ಪ್ರಾಥಮಿಕ ಶಿಕ್ಷಣದ ಮಾಧ್ಯಮವಾಗಿ ಕನ್ನಡವನ್ನು ಮರೆಯುವುದೇ ಲೇಸೆಂದು ಸರ್ಕಾರ ತೀರ್ಮಾನಿಸಿದೆಯೇ? ಹಾಗಿದ್ದಲ್ಲಿ ಇದು ಸಾಂಸ್ಕೃತಿಕವಾಗಿ ಅತ್ಯಂತ ಬೇಜವಾಬ್ದಾರಿ ನಡೆ ಎಂದು ನಾವು ವಿಷಾದದಿಂದ ಹೇಳಬೇಕಿದೆ.
ಕನ್ನಡಕ್ಕೆ ಕುತ್ತು ತಂದಿರುವ ಸಾಂವಿಧಾನಿಕ ಅಂಶಗಳನ್ನು ನಿವಾರಿಸಿಕೊಳ್ಳಲು ಅಗತ್ಯವಾದ ಕ್ರಮಗಳ ಬಗ್ಗೆ ಸರ್ಕಾರ ಕೂಡಲೇ ಸಕ್ರಿಯ ಆಲೋಚನೆಗೆ ತೊಡಗಬೇಕಿದೆ. ಅಗತ್ಯವಾದರೆ ಸಂವಿಧಾನ ತಿದ್ದುಪಡಿಗಾಗಿ ಸೂಕ್ತ ಮುಂದಡಿಗಳನ್ನು ಇಡಬೇಕಿದೆ. ಇತರ ರಾಜ್ಯ ಸರ್ಕಾರಗಳು ಮತ್ತು ಕೇಂದ್ರ ಸರ್ಕಾರದೊಡನೆ ಸಮಾಲೋಚನೆಗಳನ್ನು ಆರಂಭಿಸಬೇಕಿದೆ. ಏಕೆಂದರೆ ಇದು ಕನ್ನಡ ಭಾಷೆಯ, ಸಂಸ್ಕೃತಿಯ, ಪರಂಪರೆಯ ಸಾವು-ಬದುಕಿನ ಪ್ರಶ್ನೆ. ಆದರೆ ಈ ದಿಕ್ಕಿನಲ್ಲಿ ಯಾವ ಗಂಭೀರ ಪ್ರಯತ್ನವನ್ನೂ ಮಾಡದಂತೆ ತೋರುವ ರಾಜ್ಯ ಸರ್ಕಾರ, ಅತ್ಯುತ್ಸಾಹದಿಂದ ಜಾಗತಿಕ ಕನ್ನಡ ಸಂಸ್ಕೃತಿ ಹಬ್ಬ ಆಚರಿಸಹೊರಟಿರುವುದು ಕನ್ನಡಿಗರ ಸಾಂಸ್ಕೃತಿಕ ಸಂವೇದನೆಯ ಗಾಯದ ಮೇಲೆ ಬರೆ ಎಳೆದಂತಾಗಿದೆ.
ಜೊತೆಗೆ, ಕಣ್ಣುಮುಚ್ಚಾಲೆ ಆಡುತ್ತಿರುವ ಮಳೆಯಿಂದಾಗಿ ರಾಜ್ಯ ಸತತ ಬರದ ಸಂಕಷ್ಟದ ಭೀತಿಯಿಂದ ಇನ್ನೂ ಹೊರಬಂದಿಲ್ಲ. ರೈತರ ಆತ್ಮಹತ್ಯೆಗಳು ನಿರಂತರವಾಗಿ ನಡೆದೇ ಇವೆ. ಹಲವು ಕಡೆ ನೀರಿಗಾಗಿ ಹಾಹಾಕಾರ ಇನ್ನೂ ನಿಲ್ಲದಾಗಿದೆ. ಇದರ ಹಿಂದೆ ಜೀವಪರಿಸರ ನಿರ್ವಹಣೆಯಲ್ಲಿನ ದೂರದೃಷ್ಟಿಯ ಕೊರತೆ ಮತ್ತು ರಾಜಕೀಯ ಹಸ್ತಕ್ಷೇಪಗಳ ದೊಡ್ಡ ಚರಿತ್ರೆಯೇ ಇದೆ. ಕನ್ನಡ ಶಾಲೆಗಳು ಒಂದೇ ಸಮನೆ ಮುಚ್ಚತೊಡಗಿವೆ. ಉನ್ನತ ಶಿಕ್ಷಣ ಅವನತಿಯ ಹಾದಿಯಲ್ಲಿದೆ. ಪದವಿ ಮಟ್ಟದಲ್ಲಿ ಭಾಷಾ ಶಿಕ್ಷಣ ಅನಗತ್ಯ ಎಂಬ ಮೂರ್ಖ ಅಭಿಪ್ರಾಯವನ್ನೂ ಇಲಾಖೆಯೇ ಈಗ ಕ್ರೋಡೀಕರಿಸುತ್ತಿರುವ ಸುದ್ದಿ ಇದೆ. ಹೀಗಾಗಿ ಸರ್ಕಾರ ಆದ್ಯತೆಯ ಮೇಲೆ ಗಮನ ಹರಿಸಬೇಕಾದ ವಿಷಯಗಳು ಅನೇಕವಿವೆ.
ಭಾಷೆ, ಸಂಸ್ಕೃತಿ ಮತ್ತು ಲೌಕಿಕ ಬದುಕಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ಪರಿಸ್ಥಿತಿ ಹೀಗಿರುವಾಗ ಸರ್ಕಾರವು ಕೋಟ್ಯಂತರ ರೂಪಾಯಿಗಳ ವೆಚ್ಚದ ಸಂಸ್ಕೃತಿ ಹಬ್ಬವನ್ನು ಆಚರಿಸುವುದು ರಾಜ್ಯದ ಜನರ ಭಾವನೆಗಳಿಗೆ ನೋವುಂಟು ಮಾಡುವ, ಸರ್ಕಾರಕ್ಕೆ ಸದ್ಯಕ್ಕಾದರೂ ಶೋಭೆ ತರದ ನಿರ್ಧಾರವೆನಿಸಿಕೊಳ್ಳುತ್ತದೆ. ಆದುದರಿಂದ ಸರ್ಕಾರ ಮೊದಲು, ನಿರ್ದಿಷ್ಟವಾಗಿ ಪ್ರಾಥಮಿಕ ಶಿಕ್ಷಣದ ಮಾಧ್ಯಮವನ್ನಾಗಿಯಾದರೂ ಕನ್ನಡವನ್ನು ಉಳಿಸಿಕೊಳ್ಳುವ ಮೂಲಕ ಕನ್ನಡ ಶಾಲೆಗಳು ಮುಚ್ಚುವುದನ್ನು ತಡೆಯುವ, ಹಿಂದಿಯನ್ನು ನಮ್ಮ ಮೇಲೆ ಹೇರುವ ಕೇಂದ್ರದ ಪ್ರಯತ್ನಗಳನ್ನು ಪ್ರತಿರೋಧಿಸುವ ಹಾಗೂ ಸಾರ್ವತ್ರಿಕವಾಗಿ ಕನ್ನಡ ಜನರ ಲೌಕಿಕ ಬದುಕನ್ನು ಬಾಧಿಸುತ್ತಿರುವ ಸಂಕಷ್ಟಗಳಿಂದ ಪಾರು ಮಾಡುವ ಜವಾಬ್ದಾರಿಗಳತ್ತ ಗಮನ ಹರಿಸಿ ಸದ್ಯಕ್ಕಾದರೂ ವಿಶ್ವ ಕನ್ನಡ ಸಮ್ಮೇಳನವೆಂಬ ಸಲ್ಲದ ಬಡಿವಾರ ಪ್ರದರ್ಶನವನ್ನು ರದ್ದುಗೊಳಿಸಬೇಕೆಂದು ವಿವಿಧ ಕ್ಷೇತ್ರಗಳಲ್ಲಿ ಕನ್ನಡದ ಕೆಲಸ ಮಾಡುತ್ತಿರುವ ನಾವು ಈ ಮೂಲಕ ಆಗ್ರಹಿಸುತ್ತೇವೆ.
ದೇವನೂರ ಮಹಾದೇವ, ಎಸ್. ಆರ್. ಹಿರೇಮಠ, ಗಿರೀಶ್ ಕಾಸರವಳ್ಳಿ, ಸಾರಾ ಅಬೂಬಕ್ಕರ್, ವೈದೇಹಿ, ಕೆ.ವಿ. ತಿರುಮಲೇಶ್, ಸಿದ್ಧಲಿಂಗ ಪಟ್ಟಣಶೆಟ್ಟಿ, ಎಚ್.ಎಸ್. ಶಿವಪ್ರಕಾಶ್, ಲಕ್ಷ್ಮೀಶ ತೋಳ್ಪಾಡಿ, ನಾಗೇಶ ಹೆಗಡೆ, ಪಿ. ಶೇಷಾದ್ರಿ, ಜಿ. ರಾಜಶೇಖರ, ಡಿ.ಎಸ್. ನಾಗಭೂಷಣ, ಓ.ಎಲ್. ನಾಗಭೂಷಣ ಸ್ವಾಮಿ, ಎಚ್.ಎಸ್. ರಾಘವೇಂದ್ರ ರಾವ್, ಫಕೀರ್ ಮಹಮ್ಮದ್ ಕಟ್ಪಾಡಿ, ಪುರುಷೋತ್ತಮ ಬಿಳಿಮಲೆ, ನರಹಳ್ಳಿ ಬಾಲಸುಬ್ರಹ್ಮಣ್ಯ, ರಾಘವೇಂದ್ರ ಪಾಟೀಲ, ಕೃಷ್ಣಮೂರ್ತಿ ಹನೂರು, ಕೆ. ಸತ್ಯನಾರಾಯಣ, ವಿನಯಾ ವಕ್ಕುಂದ, ತಾರಿಣಿ ಶುಭದಾಯಿನಿ, ಸಿ. ಚನ್ನಬಸವಣ್ಣ, ವೆಂಕಟೇಶ ಮಾಚಕನೂರ, ರವಿಕೃಷ್ಣಾ ರೆಡ್ಡಿ, ಹಸನ್ ನಯೀಂ ಸುರಕೋಡ, ನಿತ್ಯಾನಂದ ಬಿ. ಶೆಟ್ಟಿ, ಎಸ್. ರಘುನಂದನ, ಎಂ.ಬಿ. ನಟರಾಜ್, ಕೆ.ಪಿ. ನಟರಾಜ, ಟಿ.ಎನ್. ವಾಸುದೇವಮೂರ್ತಿ
(ಈ ಹೇಳಿಕೆಗೆ ಇವರೆಲ್ಲರೂ ಇ–ಮೇಲ್ ಅಥವಾ ದೂರವಾಣಿ ಕರೆಗಳ ಮೂಲಕ ಒಪ್ಪಿಗೆ ಸೂಚಿಸಿದ್ದಾರೆ)
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.