ADVERTISEMENT

ವಿಸ್ತಾರಗೊಳ್ಳುತ್ತಿದೆ ಮೌಢ್ಯದ ನೆಲೆ

ಎಲ್ಲರೊಳಗೂ ಅರಿವಿನ ಹೊಸ ನೆಲೆಗಳು ರೂಪುಗೊಂಡಂತೆ, ಮೌಢ್ಯದ ನೆಲೆಗಳೂ ವಿಸ್ತಾರಗೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತೆ?

​ಪ್ರಜಾವಾಣಿ ವಾರ್ತೆ
Published 10 ಏಪ್ರಿಲ್ 2017, 19:30 IST
Last Updated 10 ಏಪ್ರಿಲ್ 2017, 19:30 IST
l ಎಚ್.ಕೆ. ಶರತ್
ಒಂದೂವರೆ ವರ್ಷದ ನಂತರ ಅಚಾನಕ್ಕಾಗಿ ಸಿಕ್ಕಿದ ಕಾಲೇಜು ದಿನಗಳ ಸ್ನೇಹಿತ, ಉಭಯಕುಶಲೋಪರಿಯ ನಂತರ ‘ನಾಲ್ಕು ತಿಂಗಳ ಹಿಂದೆ ನಮ್ಮಪ್ಪ ತೀರಿಕೊಂಡಾಗಿನಿಂದಲೂ ನನಗೆ ಒಂದಲ್ಲ ಒಂದು ತಾಪತ್ರಯ. ಇವೆಲ್ಲದರಿಂದ ಮೊದಲು ಬಿಡಿಸಿಕೊಂಡು ಹೊರ ಬಂದರೆ ಸಾಕೆನಿಸಿದೆ.
 
ನಿನಗೂ ತಿಳಿದಿರುವಂತೆ, ಪ್ರಾಧ್ಯಾಪಕರಾಗಿದ್ದ ನಮ್ಮಪ್ಪ ಗೊಡ್ಡು ಸಂಪ್ರದಾಯ ಮತ್ತು ಆಚರಣೆಗಳಿಂದ ದೂರ ಉಳಿದವರು. ಸಾಯುವ ಮುನ್ನ ಕೂಡ ಯಾವುದೇ ಕಾರಣಕ್ಕೂ ತನ್ನ ತಿಥಿ ಸೇರಿದಂತೆ ಅದಕ್ಕೆ ಸಂಬಂಧಿಸಿದ ಯಾವುದೇ ಕಾರ್ಯವನ್ನು ನೆರವೇರಿಸಬಾರದೆಂದು ಸೂಚಿಸಿದ್ದರು.
 
ನಾನು ಸಹ ಸಂಬಂಧಿಕರ ವಿರೋಧದ ನಡುವೆಯೂ ಅಪ್ಪನ ನಿಲುವು ಗೌರವಿಸಿ, ಅವರ ಬಯಕೆಯಂತೆಯೇ ಯಾವುದೇ ಕಾರ್ಯ ನೆರವೇರಿಸುವ ಗೋಜಿಗೆ ಹೋಗಲಿಲ್ಲ. ಆದರೆ, ಇದೀಗ ಹೊಸ ಸಮಸ್ಯೆಯೊಂದು ಸೃಷ್ಟಿಯಾಗಿದೆ. ನಮ್ಮಪ್ಪ ಗಾಳಿಯಾಗಿ ಹತ್ತಿರದ ಸಂಬಂಧಿಯೊಬ್ಬರ ಮೈ ಹೊಕ್ಕಿದ್ದಾರಂತೆ. ಇದಕ್ಕೆಲ್ಲ ನಾನು ತಿಥಿ ನೆರವೇರಿಸದೆ ಇರುವುದೇ ಕಾರಣವಂತೆ’ ಅಂತ ತನ್ನ ದುಗುಡ ತೋಡಿಕೊಂಡ.
 
‘ತಮ್ಮ ಬದುಕಿನುದ್ದಕ್ಕೂ ವಿದ್ಯಾರ್ಥಿಗಳಿಗೆ ವೈಚಾರಿಕತೆಯ ಪಾಠ ಬೋಧಿಸಿದ ನಮ್ಮಪ್ಪನಿಗೆ ಇದೀಗ ದೆವ್ವದ ಪಟ್ಟ ಕಟ್ಟಿಬಿಟ್ಟಿದ್ದಾರೆ; ತಿಥಿ ಮಾಡಲಿಲ್ಲವೆಂಬ ಒಂದೇ ಕಾರಣಕ್ಕೆ! ಇದಕ್ಕೆಲ್ಲ ಏನು ಹೇಳೋದು’ ಅಂತ ಪ್ರಶ್ನಿಸಿದ. ಅವನ ಸಮಸ್ಯೆ ಪರಿಹರಿಸುವ ದಾರಿ ನನಗೂ ಹೊಳೆದಂತೆ ತೋರಲಿಲ್ಲ.
 
ಮಾತು ಮುಂದುವರಿಸಿದ ಅವನು, ‘ಇಪ್ಪತ್ತೈದು ವರ್ಷಗಳ ಹಿಂದೆಯೇ ಅಂತರ್ಧರ್ಮೀಯ ವಿವಾಹವಾದ ನಮ್ಮ ಸಂಬಂಧಿಯೊಬ್ಬರಿದ್ದಾರೆ. ಅವರು ಸಿಟಿಯಲ್ಲಿರೋದ್ರಿಂದ ಈಗಲೂ ನೆಮ್ಮದಿಯಿಂದಿದ್ದಾರೆ. ಒಂದು ವೇಳೆ ಮದುವೆ ನಂತರ ಹಳ್ಳಿಯಲ್ಲಿ ಬದುಕು ಕಟ್ಟಿಕೊಂಡಿದ್ದರೆ ಆಗ ಸಮಸ್ಯೆಗಳ ಅಸಲಿ ಮುಖದ ಪರಿಚಯ ಅವರಿಗೂ ಆಗುತ್ತಿತ್ತು.

ಸಿಟಿಯಲ್ಲಿದ್ದುಕೊಂಡು ವಿಚಾರವಾದ ಮಂಡಿಸುವುದು, ಮೂಢನಂಬಿಕೆಗಳ ವಿರುದ್ಧ ಸಮರ ಸಾರುತ್ತಿದ್ದೇವೆಂದು ಬೀಗುವುದು ಸುಲಭ. ಆದ್ರೆ ಹಳ್ಳಿಗಳಲ್ಲಿ ಬೇರೂರಿರುವ ಸಂಪ್ರದಾಯ, ಆಚರಣೆಗಳ ಬೇರು ತುಂಡರಿಸುವುದು ಅಸಾಧ್ಯ’ ಅಂತ ವಾದಿಸಿದ.
 
ಸ್ನೇಹಿತ ಹೇಳಿದ್ದು ನಿಜವೇ ಎಂದು ಪರಿಶೀಲಿಸಲು ಹೊರಟ ನನ್ನ ಮನಸ್ಸಿನೆದುರು ಮತ್ತೊಂದಿಷ್ಟು ಪ್ರಸಂಗಗಳು ಹಾದು ಹೋಗಲಾರಂಭಿಸಿದವು. ಸದ್ಯ ನಮ್ಮ ಮನೆಯಲ್ಲಿ ಬಾಡಿಗೆಗಿರುವವರು ಬಂದ ಆರು ತಿಂಗಳಿಗೇ ಮನೆ ಖಾಲಿ ಮಾಡಲು ನಿರ್ಧರಿಸಿದ್ದಾರೆ.

ಈಗಿರುವ ಮನೆಗೆ ಅವರು ಬಂದ ಮೇಲೆ ಮೂರು ಲಕ್ಷ ರೂಪಾಯಿ ಸಾಲ ಮಾಡಿಕೊಂಡರಂತೆ, ಊರಿನಲ್ಲಿರುವ ಅವರ ಕುಟುಂಬ ಸದಸ್ಯರೊಬ್ಬರ ಆರೋಗ್ಯ ಹದಗೆಡಲು ಕೂಡ ನಮ್ಮ ಮನೆಯ ವಾಸ್ತು ಸರಿ ಇಲ್ಲದಿರುವುದೇ ಕಾರಣವಂತೆ. ಹಾಗಾಗಿ ಬೇರೆ ಮನೆಗೆ ಹೋಗುವ ನಿರ್ಧಾರ ಕೈಗೊಂಡಿರುವುದಾಗಿ ಯಾವುದೇ ಮುಲಾಜೂ ಇಲ್ಲದೆ ಹೇಳುತ್ತಿದ್ದಾರೆ. ಅಂದಹಾಗೆ ನಮ್ಮ ಮನೆ ಇರುವುದು ಸಿಟಿಯಲ್ಲೇ. ವಾಸ್ತುದೋಷದ ನೆಪವೊಡ್ಡಿ ಮನೆ ಖಾಲಿ ಮಾಡುತ್ತಿರುವವರು ಕೂಡ ನಗರವಾಸಿಗಳೇ. 
 
ಮನೆ ನಿರ್ಮಿಸಲು ಯೋಜನೆ ಸಿದ್ಧಪಡಿಸುವ ಸಿವಿಲ್ ಎಂಜಿನಿಯರ್ ಆಗಿರುವ ಮತ್ತೊಬ್ಬ ಸ್ನೇಹಿತ, ‘ಟಿ.ವಿಗಳಲ್ಲಿ ಕಾಣಿಸಿಕೊಳ್ಳುವ ಸ್ವಯಂಘೋಷಿತ ವಾಸ್ತುತಜ್ಞರ ದೆಸೆಯಿಂದಾಗಿ, ವಾಸ್ತುವಿಗಿರುವ ಬೆಲೆ ಹೋಗುತ್ತಿದೆ. ನಮ್ಮ ಪ್ರಕಾರ ಗಾಳಿ ಬೆಳಕು ಹೆಚ್ಚು ಲಭ್ಯವಾಗುವಂತೆ ಮನೆ ವಿನ್ಯಾಸ ಮಾಡುವುದು ವಾಸ್ತು.
 
ಆದ್ರೆ ಇವ್ರು ಜನರ ತಲೆಗೆ ಏನೇನೊ ತುಂಬಿ, ಜನ ಸಿವಿಲ್ ಎಂಜಿನಿಯರ್‌ಗಳ ಮಾತು ಕೇಳದ ಹಾಗೆ ಮಾಡಿಬಿಟ್ಟಿದ್ದಾರೆ’ ಅಂತ ತಾನು ಎಂಜಿನಿಯರಿಂಗ್ ವಿದ್ಯಾರ್ಥಿಯಾಗಿದ್ದಾಗ ಅಸಮಾಧಾನ ವ್ಯಕ್ತಪಡಿಸುತ್ತಿದ್ದ.

ಆದರೆ ಇದೀಗ ತನ್ನ ಗಿರಾಕಿಗಳನ್ನು ಉಳಿಸಿಕೊಳ್ಳುವ ಅಥವಾ ಆಕರ್ಷಿಸುವ ಸಲುವಾಗಿ ವಾಸ್ತು ಪ್ರಕಾರ ಮನೆ ವಿನ್ಯಾಸ ಮಾಡಿಕೊಡುವ ಆಶ್ವಾಸನೆ ನೀಡುವುದೂ ಅಲ್ಲದೆ, ಗಾಳಿ ಬೆಳಕಿನ ಆಚೆಗೂ ವಿಸ್ತರಿಸಿಕೊಂಡಿರುವ ವಾಸ್ತು ಜ್ಞಾನ ಅರಿಯತೊಡಗಿದ್ದಾನೆ.
 
ಮೊದಲೆಲ್ಲ ಸೀಮಿತ ಪರಿಧಿಯಲ್ಲಿ  ಕೆಲವು ಉಳ್ಳವರನ್ನಷ್ಟೇ ಬಾಧಿಸುತ್ತಿದ್ದ ವಾಸ್ತು, ಟಿ.ವಿ ವಾಹಿನಿಗಳ ಮೂಲಕ ವೇಗವಾಗಿ ಎಲ್ಲರನ್ನೂ ತಲುಪಲಾರಂಭಿಸಿದ ಮೇಲೆ, ಮನೆ ಮನಸ್ಸುಗಳ ಮೇಲೆ ಬೀರಲಾರಂಭಿಸಿರುವ ತೀವ್ರ ಅಡ್ಡಪರಿಣಾಮ ನಿರ್ಲಕ್ಷಿಸುವ ಮಟ್ಟದಲ್ಲಿದೆಯೇ? ಎಲ್ಲ ಸಮಸ್ಯೆಗಳಿಗೂ ವಾಸ್ತು ಮೂಲಕ ಪರಿಹಾರ ಹುಡುಕುವ ಮತ್ತು ಹಾಗೆ ಹುಡುಕುವವರ ಅಗತ್ಯವನ್ನೇ ಬಂಡವಾಳವಾಗಿಸಿಕೊಂಡು ಬಲಿಯುವ ವಾಸ್ತುಶಾಸ್ತ್ರಜ್ಞರನ್ನು ಆಧುನಿಕ ಮೌಢ್ಯದ ರಾಯಭಾರಿಗಳೆಂದು ಕರೆಯಬಹುದು.
 
ವಾಸ್ತು ಹೆಸರಿನ ನಂಬಿಕೆಗೆ ಸಂಬಂಧಿಸಿದ ಮತ್ತೊಂದು ಹಿಮ್ಮುಖ ಚಲನೆ ಮಹಾನಗರಗಳಲ್ಲೇ ಆರಂಭಿಕ ಹೆಜ್ಜೆಗಳನ್ನಿರಿಸಿ, ನಗರ, ಪಟ್ಟಣಗಳ ಹಾದಿ ಸವೆಸಿ ಇದೀಗ ಹಳ್ಳಿಗಳಲ್ಲಿ ಮೇಲೇರುತ್ತಿರುವ ಹೊಸ ಮನೆಗಳ ತಳಪಾಯದವರೆಗೂ ಚಾಚಿಕೊಂಡಿರುವುದು ಏನನ್ನು ಸೂಚಿಸುತ್ತದೆ? ಸ್ನೇಹಿತ ನನ್ನೆದುರು ಮಂಡಿಸಲು ಮುಂದಾದ ಹಳ್ಳಿಗಳಷ್ಟೇ ಮೌಢ್ಯದ ಕೂಪಗಳೆಂಬ ವಾದವನ್ನು ವಾಸ್ತು ದಕ್ಕಿಸಿಕೊಂಡ ಹಿಮ್ಮುಖ ಚಲನೆ ಅಲ್ಲಗಳೆಯುವುದಿಲ್ಲವೇ?
 
ವೃತ್ತಿಯಲ್ಲಿ ಸಾಫ್ಟ್‌ವೇರ್ ಎಂಜಿನಿಯರ್ ಆಗಿ ಬೆಂಗಳೂರಿನಲ್ಲಿ ನೆಲೆನಿಂತಿರುವ ಸ್ನೇಹಿತನೊಬ್ಬ ಇತ್ತೀಚೆಗೆ ಅನ್ಯಜಾತಿಯ ಹುಡುಗಿಯನ್ನು ಪ್ರೀತಿಸುತ್ತಿದ್ದ ವಿಚಾರವನ್ನು ತನ್ನ ಮನೆಯವರಿಗೆ ತಿಳಿಸಿದ ಸಂದರ್ಭದಲ್ಲಿ, ಅವನ ಪೋಷಕರು ಕೂಡ ಮತ್ತೆ ಹಳ್ಳಿಯತ್ತಲೇ ಬೊಟ್ಟು ಮಾಡಿದ್ದರು. ‘ಸಿಟಿಯಲ್ಲಿ ಬದುಕುತ್ತಿರುವ ನಿಂಗೆ ಜಾತಿ ಅನ್ನೋದು ಈಗೆಲ್ಲಿದೆ ಅನ್ನಿಸಬಹುದು.
 
ಆದ್ರೆ ಹಳ್ಳಿಯಲ್ಲಿರುವ ನಮ್ಮ ಸಂಬಂಧಿಕರೆಲ್ಲ ಜಾತಿಗೆ ಎಷ್ಟು ಬೆಲೆ ಕೊಡ್ತಾರೆ ಅನ್ನೋದು ನಿಂಗೆ ಗೊತ್ತಿಲ್ಲ. ಹಾಗೇನಾದ್ರೂ ನೀನು ಬೇರೆ ಜಾತಿ ಹುಡ್ಗೀನ ಮದ್ವೆ ಆದ್ರೆ ಊರ್ ಕಡೆ ಮುಖ ಎತ್ತಿಕೊಂಡು ತಿರುಗೋಕ್ಕಾಗುತ್ತಾ? ನೀನೂ ಮುಂದೆ ಸಾಕಷ್ಟು ಸಮಸ್ಯೆ ಅನುಭವಿಸಬೇಕಾಗುತ್ತೆ. ಸುಮ್ನೆ ನಾವು ತೋರ್ಸೊ ಹುಡ್ಗೀನ ಮದ್ವೆ ಮಾಡ್ಕೊ, ಇಲ್ಲಾಂದ್ರೆ ನಮ್ ಜಾತಿ ಹುಡ್ಗಿನೇ ಪ್ರೀತ್ಸಿ ಮದ್ವೆಯಾಗೋದಾದ್ರೂ ನಮ್ಮದೇನೂ ಅಭ್ಯಂತರಇಲ್ಲ’ ಎಂಬ ಬುದ್ಧಿ ಮಾತು ಹೇಳಿದ್ದರು.
 
ಅದುವರೆಗೂ ಮದುವೆ ವಿಚಾರ ತನಗೆ ಮತ್ತು ಮನೆಯವರಿಗೆ ಮಾತ್ರ ಸಂಬಂಧಿಸಿದ್ದೆಂದು ಭಾವಿಸಿದ್ದ ಸ್ನೇಹಿತನಿಗೆ, ಅಪರೂಪಕ್ಕೊಮ್ಮೆ ಒಡನಾಡುವ ಹಳ್ಳಿ ಮತ್ತು ಅಲ್ಲಿನ ಜನರೂ ತನ್ನ ಮದುವೆ ಕುರಿತು ಇಷ್ಟೆಲ್ಲ ತಲೆ ಕೆಡಿಸಿಕೊಳ್ಳುವರೇ ಎಂದು ಹುಬ್ಬೇರಿಸುವಂತಾಗಿದೆ. ತನ್ನ ತಂದೆ-ತಾಯಿ ತಮ್ಮೊಳಗೂ ಸುಪ್ತವಾಗಿರುವ ಜಾತಿಪ್ರಜ್ಞೆಯನ್ನು ಮುನ್ನೆಲೆಗೆ ತಂದು ವಾದಿಸುವ ಬದಲಿಗೆ, ಹಳ್ಳಿಯನ್ನು ಊರುಗೋಲಾಗಿ ಎಳೆತಂದಿರುವುದು ಅವನಿಗೂ ತಿಳಿಯದ ವಿಚಾರವೇನಲ್ಲ.
 
ಪ್ರಗತಿಪಥದತ್ತ ದಾಪುಗಾಲಿಡುತ್ತಿರುವ ನಗರ ಮತ್ತು ಅದರ ರಾಯಭಾರಿಗಳಾದ ನಗರವಾಸಿಗಳು ಸ್ವತಃ ತಾವೇ ಕೊಟ್ಟುಕೊಳ್ಳುತ್ತಿರುವ, ತಾವು ವಿಚಾರವಂತರು, ಜಾತಿ ಧರ್ಮಗಳ ಕಟ್ಟುಪಾಡುಗಳನ್ನು ತೊರೆದವರೆಂಬ ಬಿರುದು ನಂಬಲರ್ಹವೇ? ಹಳ್ಳಿಗಳಷ್ಟೇ ಚಲನೆ ದಕ್ಕಿಸಿಕೊಳ್ಳಲು ಸೋತು ಇನ್ನೂ ಮೌಢ್ಯದ ಕೂಪಗಳಾಗಿವೆ ಎಂದು ವಾದಿಸಲು ಹೊರಡುವುದು ಸಮಂಜಸವೇ?
 
ಹಳ್ಳಿ ಇರಲಿ ದಿಲ್ಲಿಯೇ ಆಗಿರಲಿ, ಅಕ್ಷರ ಬಲ್ಲವನಾಗಿರಲಿ ಅನಕ್ಷರಸ್ಥನೇ ಇರಲಿ ಎಲ್ಲರೊಳಗೂ ಅರಿವಿನ ಹೊಸ ನೆಲೆಗಳು ರೂಪುಗೊಂಡಂತೆ, ಮೌಢ್ಯದ ನೆಲೆಗಳೂ ವಿಸ್ತಾರಗೊಳ್ಳುತ್ತಿರುವುದನ್ನು ಅಲ್ಲಗಳೆಯಲಾದೀತೇ? ಹೊರ ಮೈಗೆ ಬಹುಬೇಗ ನವನವೀನ ರಂಗು ಬಳಿದುಕೊಳ್ಳುವ ನಗರ ಮತ್ತು ಅದರ ವಾಸಿಗಳು, ಅದೇ ವೇಗದಲ್ಲಿ ತಮ್ಮ ಸುಪ್ತಪ್ರಜ್ಞೆಯೊಳಗೆ ಬೇರೂರಿರುವ ಸಂಪ್ರದಾಯದ ಟ್ಯಾಗನ್ನು ತೂಗು ಹಾಕಿಕೊಂಡಿರುವ ಮನುಷ್ಯಘನತೆಗೆ ಕುಂದು ತರುವ ಆಚಾರ, ನಿಲುವುಗಳಿಗೆ ಕಸದ ಬುಟ್ಟಿಯಲ್ಲಿ ಜಾಗ ಕಲ್ಪಿಸಲಾರಂಭಿಸಿರುವರೇ? ಹಳ್ಳಿಗಳಷ್ಟೇ ಇನ್ನೂ ‘ತಿಪ್ಪೆಗುಂಡಿ’ಗಳಾಗಿವೆ ಎಂದು ಬೊಟ್ಟು ಮಾಡುವವರ ಮನಸ್ಸು ಸ್ವಚ್ಛವಾಗಿದೆಯೇ?
 
ಹೊಸ ದಿರಿಸು ತೊಟ್ಟು ಬದಲಾದ ರೂಪದಲ್ಲಿ ದರುಶನ ಕರುಣಿಸುವ ನಂಬಿಕೆಗೆ ಸಂಬಂಧಿಸಿದ ವಿಚಾರಗಳೆಲ್ಲವೂ ಇನ್ನುಳಿದವರ ಬದುಕಿನ ಘನತೆಗೆ ಯಾವುದೇ ಚ್ಯುತಿ ಬಾರದಂತೆ ಸುಮ್ಮನಿದ್ದು ಬಿಡುವ ವ್ಯವಧಾನ ದಕ್ಕಿಸಿಕೊಂಡಿವೆಯೇ? ಮುಂದಾದರೂ ದಕ್ಕಿಸಿಕೊಳ್ಳಲು ಸಾಧ್ಯವೇ? ಯಾರನ್ನೂ ಶೋಷಿಸದ, ಯಾರನ್ನೂ ಮೇಲಕ್ಕೇರಿಸದೆ ಎಲ್ಲರನ್ನೂ ಸಮಾನರಾಗಿ ಕಾಣುವ, ಆರ್ಥಿಕವಾಗಿ, ನೈತಿಕವಾಗಿ ಯಾರಿಗೂ ವಂಚಿಸದ ನಂಬಿಕೆಗಳೇನಾದರೂ ಸಂಪ್ರದಾಯದ ಮಗ್ಗುಲಲ್ಲೇ ಇದ್ದರೆ ಅವು ಹಾಗೆಯೇ ಇದ್ದುಬಿಡಲಿ. ಉಳಿದವಕ್ಕಾದರೂ ಮೂಢನಂಬಿಕೆಯ ಪಟ್ಟ ದಯಪಾಲಿಸಬಾರದೇ? ಹಾಗೆ ಮಾಡುವುದೂ ಅಪರಾಧವೇ?
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.