‘ಶಾಲಾ ಆವರಣದಲ್ಲಿ ಪುಸ್ತಕ, ಸಮವಸ್ತ್ರ ಮಾರಾಟ ಸಲ್ಲ’ ಎಂಬ ಶೀರ್ಷಿಕೆಯಡಿ ಪ್ರಕಟವಾದ ಹೈಕೋರ್ಟ್ ಆದೇಶ (ಪ್ರ.ವಾ., ಮೇ 3) ಕುರಿತು ಓದಿದಾಗ ಎಂಬತ್ತರ ದಶಕದಲ್ಲಿ ಶುರುವಾದ ಶಿಕ್ಷಣ ಸಂಸ್ಥೆಗಳ ಈ ಬಿಸಿನೆಸ್ ನೆನಪಿಗೆ ಬಂತು.
ಸುಮಾರು 25-30 ವರ್ಷಗಳ ಹಿಂದಿನ ಘಟನೆಗಳವು. ನಮ್ಮದೊಂದು ಪುಟ್ಟ ಪುಸ್ತಕ ಮತ್ತು ಸ್ಟೇಷನರಿ ಮಳಿಗೆ. ಮೇ ತಿಂಗಳ ಕೊನೆಯ ವಾರ, ಜೂನ್ ತಿಂಗಳೆಂದರೆ ಸಂಜೆಯ ನಾಲ್ಕೈದು ತಾಸು ಅಂಗಡಿಯ ಮುಂದೆ ಮಕ್ಕಳ ಕಲರವ. ಅಂಗಡಿಯವರೊಂದಿಗೆ ಅಮ್ಮಂದಿರ ಚೌಕಾಸಿ, ಜೇಬಿನಿಂದ ಹಣ ತೆಗೆಯಲು ಅಪ್ಪಂದಿರ ಹಿಂದೇಟು…
‘ಈ ಬಣ್ಣದ ಪುಸ್ತಕ ಬೇಡ, ಆ ಬಣ್ಣದ್ದು ಕೊಡಿ’, ‘ಈ ಚಿತ್ರ ಬೇಡ, ಬೇರೆ ಚಿತ್ರದ್ದು ಕೊಡಿ…’ ಒಂದೊಂದು ವಸ್ತು ಆರಿಸುವಾಗಲೂ ಹಿಂದೆ ಮುಂದೆ ತಿರುಗಿಸಿ ತಿರುಗಿಸಿ ನೋಡಿ, ಅದರ ಗುಣಮಟ್ಟ ಪರಿಶೀಲನೆ, ಬೆಲೆ ಚೌಕಾಸಿ ಮಾಡುವುದಲ್ಲದೆ ಒಟ್ಟು ಲೆಕ್ಕದಲ್ಲೂ ಎಳೆದಾಟ ನಡೆಯುತ್ತಿತ್ತು.
ಇಷ್ಟಾದ ಮೇಲೂ ‘ಬೈಂಡಿಂಗ್ ಪೇಪರ್ ಫ್ರೀ ಕೊಡಿ’, ‘ಬುಕ್‌ಗೆ ಅಂಟಿಸುವ ಲೇಬಲ್ ಕೊಡಿ’ ಎಂಬ ಒತ್ತಾಯ. ಮನೆಕೆಲಸ, ಕೂಲಿನಾಲಿ ಮಾಡುವ ಅಮ್ಮಂದಿರು ಸೀರೆಯ ಬಾಳೆಕಾಯಿಯ ಒಳಗಿಂದ ಸುರುಳಿ ಸುತ್ತಿ ಮುದುಡಿಕೊಂಡ ನೋಟುಗಳನ್ನು ಬಿಡಿಸಿ ಬಿಡಿಸಿ ತೆಗೆದು ಅದಷ್ಟರಲ್ಲಿ ತೀರಾ ಅವಶ್ಯಕವಿರುವ ಪುಸ್ತಕಗಳನ್ನು ಮಾತ್ರ ಕೊಡಿಸುತ್ತಿದ್ದರು. ಇನ್ನುಳಿದದ್ದು ಮುಂದಿನ ತಿಂಗಳು.
ಆಗೆಲ್ಲ ಪಠ್ಯಪುಸ್ತಕಗಳು ಅಂಗಡಿಗಳಲ್ಲಿ ಮಾತ್ರ ದೊರೆಯುತ್ತಿದ್ದವು. ಪಠ್ಯಪುಸ್ತಕ ಮಾರಾಟದ ಜೊತೆಗೆ ಒಂದು ಮಗು ಶಾಲೆಗೆ ಹೋಗಲು ಬೇಕಾದ ಸಾಮಾನುಗಳೆಲ್ಲವನ್ನೂ ಅಂದರೆ ನೋಟ್ ಪುಸ್ತಕ, ಬೈಂಡಿಂಗ್ ಪೇಪರ್, ಅವಕ್ಕೆ ಅಂಟಿಸುವ ಲೇಬಲ್, ಜಾಮೆಟ್ರಿ ಬಾಕ್ಸ್, ಪೆನ್ನು, ಪೆನ್ಸಿಲ್ಲು…. (ಸಮವಸ್ತ್ರ, ಶೂ– ಸಾಕ್ಸ್ ಬಿಟ್ಟು) ಮಾರಾಟ ಮಾಡುತ್ತಿದ್ದೆವು.
ಪಠ್ಯಪುಸ್ತಕಗಳಿದ್ದರೆ ಅದರ ಜೊತೆಗೆ ಬೇರೆ ವ್ಯಾಪಾರವೂ ನಡೆಯುತ್ತಿದ್ದರಿಂದ ಕಷ್ಟವಾದರೂ ಪುಸ್ತಕ ವ್ಯಾಪಾರಿಗಳ್ಯಾರೂ ಪಠ್ಯಪುಸ್ತಕ ವ್ಯಾಪಾರ ಬಿಡುತ್ತಿರಲಿಲ್ಲ. ನಿಗದಿತ ಬ್ಯಾಂಕಿನಲ್ಲಿ ಮುಂಚಿತವಾಗಿ ಹಣ ಕಟ್ಟಿ ಡಿ.ಡಿ. ತಂದು, ಸರ್ಕಾರಿ ಮುದ್ರಣಾಲಯಕ್ಕೆ ಕೊಟ್ಟು ಪುಸ್ತಕಗಳ ಇಂಡೆಂಟ್ ಹಾಕಬೇಕು. ಅಂದು ಹಾಕಿದ ಇಂಡೆಂಟಿನಲ್ಲಿ ಲಭ್ಯವಿರುವ ಪುಸ್ತಕ ದೊರೆಯುತ್ತಿದ್ದವು.
ಅಂದು ಸಿಕ್ಕದೇ ಹೋದರೆ ಮರುದಿನ ಮತ್ತೆ ಬೇರೆ ಇಂಡೆಂಟ್ ಹಾಕಬೇಕು. ನೂರಾರು ಸಾರೆ ಮುದ್ರಣಾಲಯಕ್ಕೆ ಅಲೆಯಬೇಕು. ಆಗ, ಮಾರಾಟಗಾರರಿಗೆ ಸರ್ಕಾರ ಕೊಡುತ್ತಿದ್ದ ಕಮಿಷನ್ ತುಂಬ ಕಡಿಮೆ ಇತ್ತು.
ಪುಸ್ತಕ ಮಾರಾಟಗಾರರಿಗೆ ಕೊಡುತ್ತಿದ್ದ ಕಮಿಷನ್ ಹೆಚ್ಚಿಸಬೇಕೆಂಬ ಬೇಡಿಕೆಗೆ ಸರ್ಕಾರ ಮಣಿಯದಿದ್ದಾಗ ಅಂಗಡಿಗಳವರು ತಾತ್ಕಾಲಿಕವಾಗಿ ಪಠ್ಯಪುಸ್ತಕ ಮಾರಾಟವನ್ನು ನಿಲ್ಲಿಸಿದರು. ಸರ್ಕಾರ ಬಗ್ಗದೇ ಪಠ್ಯಪುಸ್ತಕಗಳನ್ನು ಸಹಕಾರಿ ಸಂಘಗಳಲ್ಲಿ ಮಾರುವ ವ್ಯವಸ್ಥೆ ಮಾಡಿತು. ನಂತರ ಆಯಾ ಶಾಲೆಯವರೇ ತಮ್ಮ ವಿದ್ಯಾರ್ಥಿಗಳಿಗೆ ಬೇಕಾಗುವಷ್ಟು ಪಠ್ಯ ಪುಸ್ತಕಗಳನ್ನು ಸರ್ಕಾರಿ ಮುದ್ರಣಾಲಯದಿಂದ ಖರೀದಿಸಿ ತಂದು ಮಕ್ಕಳಿಗೆ ವಿತರಿಸಬೇಕು ಎಂದು ಆದೇಶ ಹೊರಡಿಸಿತು.
ಒಂದು– ಎರಡನೇ ತರಗತಿ ಮಕ್ಕಳಿಗೆ ವರ್ಷಕ್ಕೆ ಮೂರ್ನಾಲ್ಕು ಸಾರೆ ಪುಸ್ತಕ ಖರೀದಿಸಿಕೊಟ್ಟರೂ ಪರೀಕ್ಷೆಯ ಹೊತ್ತಿಗೆ ಪುಸ್ತಕಗಳು ಚಿಂದಿಯಾಗುತ್ತವೆ ಇಲ್ಲವೇ ಕಳೆದುಹೋಗಿರುತ್ತವೆ. ಅಂಥ ಮಕ್ಕಳ ಪಾಲಕರದು ಪಡಿಪಾಟಲು. ಇಡೀ ಪುಸ್ತಕವನ್ನೇ ಜೆರಾಕ್ಸ್ ಮಾಡಿಸುವ ವಿಚಾರ ಪ್ರಚಲಿತದಲ್ಲಿ ಇಲ್ಲದ ದಿನಗಳವು.
ಶಾಲಾ ಆವರಣದಲ್ಲಿ ಒಂದು ರೀತಿಯಲ್ಲಿ ವ್ಯಾಪಾರ ಶುರುವಾಗಲು ಈ ಬೆಳವಣಿಗೆ ಮುಖ್ಯ ಕಾರಣವಾಯಿತು. ಪ್ರಮುಖ ಶಿಕ್ಷಣ ಸಂಸ್ಥೆಗಳು ಮಗುವಿನ ಶಾಲಾ ಪ್ರವೇಶ ಪ್ರಕ್ರಿಯೆ ಜೊತೆಗೆ, ಆರಂಭದಲ್ಲಿ ಆಯಾ ತರಗತಿಯ ಮಗುವಿನ ಪಠ್ಯಪುಸ್ತಕದ ವ್ಯಾಪಾರವನ್ನೂ ಶುರು ಮಾಡಿದವು.
ನಂತರ ಒಂದೊಂದಾಗಿ ನೋಟ್ ಪುಸ್ತಕ, ಬೈಂಡಿಂಗ್ ಪೇಪರ್, ಲೇಬಲ್, ಪೆನ್ನು– ಪೆನ್ಸಿಲ್ ಅಲ್ಲದೇ ಶೂ, ಸಾಕ್ಸ್, ಸಮವಸ್ತ್ರ ಹಾಗೂ ಬ್ಯಾಗುಗಳನ್ನೂ ಕಡ್ಡಾಯವಾಗಿ ಅಲ್ಲೇ ಖರೀದಿಸಬೇಕು ಎಂದು ಎಲ್ಲದರ ಹಣವನ್ನೂ ಒಟ್ಟಿಗೇ ವಸೂಲಿ ಮಾಡತೊಡಗಿದವು.
ಆಯಾ ತರಗತಿಯ ಮಗುವಿಗೆ ರೆಡಿಯಿರುವ ಬಂಡಲ್‌ಗೆ ಎಷ್ಟು ಹೇಳುತ್ತಾರೋ ಅಷ್ಟು ಹಣ ತೆತ್ತು ಎತ್ತಿಕೊಂಡು ಬಂದರಾಯ್ತು. ಯಾವುದಕ್ಕೆ ಎಷ್ಟು ಎಂದು ಕೇಳುವಂತಿಲ್ಲ, ಆರಿಸುವಂತಿಲ್ಲ, ಚೌಕಾಸಿ ಮಾಡುವಂತಿಲ್ಲ. ಮನೆಗೆ ಬಂದು ಬಿಚ್ಚಿ ನೋಡಿದಾಗಲೇ ಗೊತ್ತಾಗಬೇಕು- ಯಾವುದಾದರೂ ಪುಸ್ತಕ ಕೈಬಿಟ್ಟು ಹೋಗಿದೆಯಾ ಅಥವಾ ಡ್ಯಾಮೇಜ್ ಪುಸ್ತಕ ಬಂದಿದೆಯಾ ಎಂದು.
ಅಂಗಡಿ ಅಂಗಡಿ ಸುತ್ತುವ ಕೆಲಸ ತಪ್ಪಿತೆಂದು ಮೊದಮೊದಲು ಎಷ್ಟೋ ಪಾಲಕರು ಇದನ್ನು ಸ್ವಾಗತಿಸಿದರು ಕೂಡಾ. ಆದರೆ ಒಮ್ಮೆಗೇ ಎಲ್ಲ ಪುಸ್ತಕ- ನೋಟುಪುಸ್ತಕಗಳನ್ನು ಖರೀದಿಸುವ ಸಾಮರ್ಥ್ಯ ಇಲ್ಲದವರು ಬಹಳ ಕಷ್ಟಪಡಬೇಕಾಯಿತು. ಅಂಗಡಿಯಿಂದ ಖರೀದಿಸಿ ತರುವಾಗ ತೀರಾ ಅವಶ್ಯಕವಿರುವಷ್ಟನ್ನು ಮಾತ್ರ ಜೂನ್ ತಿಂಗಳಲ್ಲಿ ಕೊಡಿಸಿ, ಮಿಕ್ಕಿದ್ದನ್ನು ಜುಲೈ ತಿಂಗಳಲ್ಲಿ ಹಣ ಹೊಂದಿಸಿ ತರುತ್ತಿದ್ದರು ಬಡವರು. ಶಾಲೆಗಳಲ್ಲಿ ವ್ಯಾಪಾರ ಶುರುವಾದ ಮೇಲೆ ಇವಕ್ಕೆಲ್ಲ ಪೂರ್ಣ ವಿರಾಮ.
ಕೂಲಿನಾಲಿ ಮಾಡುವವರು ಕೂಡಾ, ತಮ್ಮ ಮಗು ಚೆನ್ನಾಗಿ ಓದಬೇಕೆಂದು ಹೊಟ್ಟೆಬಟ್ಟೆ ಕಟ್ಟಿ ದೊಡ್ಡದೊಡ್ಡ ಶಾಲೆಗಳಿಗೆ ಸೇರಿಸುತ್ತಾರೆ. ಯಾವ ಶಾಲೆಯ ಮಗುವಿನ ಚೀಲದಲ್ಲಿ ಹೆಚ್ಚು ಪುಸ್ತಕಗಳಿರುತ್ತವೋ, ಹೆಚ್ಚು ಹೋಮ್ ವರ್ಕ್ ಯಾವ ಶಾಲೆಯಲ್ಲಿ ಕೊಡುತ್ತಾರೋ, ಯಾವ ಶಾಲೆಯ ಆವರಣದಲ್ಲಿ ಇಂಗ್ಲಿಷ್‌ನಲ್ಲಿ ಮಾತ್ರ ಮಾತಾಡಬೇಕೆಂಬ ಆದೇಶವಿರುತ್ತದೋ ಆ ಶಾಲೆ ದೊಡ್ಡ ಶಾಲೆ, ಒಳ್ಳೆಯ ಶಾಲೆ; ಅಲ್ಲಿ ತಮ್ಮ ಮಗುವನ್ನು ಸೇರಿಸಿದರೆ ಜೀವನ ಸಾರ್ಥಕವಾದಂತೆ ಎಂಬ ಭ್ರಮೆ ಎಷ್ಟೋ ಹೆತ್ತವರಿಗೆ.
ಇದನ್ನೇ ಶಿಕ್ಷಣ ಸಂಸ್ಥೆಗಳು ಬಂಡವಾಳ ಮಾಡಿಕೊಳ್ಳುತ್ತಿವೆ, ಮಾಡಿಕೊಳ್ಳುತ್ತಲೇ ಇವೆ. ಇಂದು ಶಿಕ್ಷಣ ಸಂಸ್ಥೆಗಳನ್ನು ನಡೆಸುವುದಕ್ಕಿಂತ ದೊಡ್ಡ ಬಿಸಿನೆಸ್ ಬೇರೆ ಯಾವುದೂ ಇಲ್ಲ ಎನ್ನುವಂತಾಗಿದೆ.
ಮೊದಮೊದಲು ಸಿಬಿಎಸ್‌ಇ ಪಠ್ಯಕ್ರಮ ಇರುವ ಶಾಲೆಗಳಲ್ಲಿ, ಸಿರಿವಂತರ ಹಿಡಿತದಲ್ಲಿದ್ದ ಕಾನ್ವೆಂಟ್‌ಗಳಲ್ಲಿ ಮಾತ್ರ ಇದ್ದ ಈ ವ್ಯಾಪಾರ, ನಂತರದ ದಿನಗಳಲ್ಲಿ ಎಲ್ಲ ಇಂಗ್ಲಿಷ್ ಶಾಲೆಗಳಲ್ಲೂ ಕಡ್ಡಾಯವಾಯಿತು. ಗಲ್ಲಿಗಳಲ್ಲಿರುವ ಬಡ ಕನ್ನಡ ಶಾಲೆಗಳೂ ‘ನಾವೂ ಏಕೆ ಮಾಡಬಾರದು’ ಎಂದು ಮೈಚಳಿ ಬಿಟ್ಟು ವ್ಯಾಪಾರಕ್ಕೆ ಇಳಿದವು.
ಈ ಬೆಳವಣಿಗೆಯಿಂದ ಪಠ್ಯಪುಸ್ತಕ ಮಾರಾಟದ ಜೊತೆಗೆ ಶಾಲಾ ಮಕ್ಕಳಿಗೆ ಬೇಕಾದ ಸ್ಟೇಷನರಿ ಮತ್ತಿತರ ಸಾಮಾನುಗಳನ್ನು ಮಾರಾಟ ಮಾಡಿ ಜೀವನ ನಡೆಸುತ್ತಿದ್ದ ವ್ಯಾಪಾರಿಗಳು ಅಕ್ಷರಶಃ ಸಂಕಷ್ಟಕ್ಕೀಡಾದರು. ಜೀವನೋಪಾಯಕ್ಕೆ ಬೇರೆ ವ್ಯಾಪಾರದ ಜೊತೆ ಹೆಣಗಾಡಬೇಕಾಯಿತು.
ಈಗ ಎರಡು ವಾರಗಳ ಹಿಂದೆಯೇ ಕೇಂದ್ರೀಯ ಶಿಕ್ಷಣ ಮಂಡಳಿ ‘ಶಾಲಾ ಆವರಣದೊಳಗೆ ಪುಸ್ತಕ, ಸಮವಸ್ತ್ರ ಮಾರಾಟ ಮಾಡುವಂತಿಲ್ಲ’ ಎಂಬ ಆದೇಶವನ್ನು ನೀಡಿದರೂ ಪಾಲನೆಯಾಗುತ್ತಿಲ್ಲ.
ಮಗುವನ್ನು ಹೊಸದಾಗಿ ಶಾಲೆಗೆ ಸೇರಿಸಲು ಹೋದವರು ಅಥವಾ ಮುಂದಿನ ತರಗತಿಗೆ ಮಗುವಿನ ಮರುಪ್ರವೇಶ ಮಾಡಿಸಲು ಹೋದವರು ಎರಡೂ ಕೈಯಲ್ಲೂ ಹೊರುವಷ್ಟು ಪುಸ್ತಕ ಇನ್ನಿತರ ಸಾಮಾನುಗಳೊಂದಿಗೆ ಹೊರಬರುತ್ತಿದ್ದಾರೆ. ಸಿಬಿಎಸ್‌ಇಯ ಆದೇಶವನ್ನು ಎತ್ತಿಹಿಡಿದ ಹೈಕೋರ್ಟ್ ಆದೇಶದಿಂದಲಾದರೂ ಪರಿಸ್ಥಿತಿ ಬದಲಾಗುತ್ತದೆಯೇ?
‘ರಾಜ್ಯ ಪಠ್ಯಕ್ರಮ ಇರುವ ಶಾಲೆಗಳಲ್ಲೂ ಇಂಥ ವ್ಯಾಪಾರ ನಡೆಸಬಾರದು’ ಎಂದು ರಾಜ್ಯ ಸರ್ಕಾರ ಕೂಡ ಆದೇಶ ಹೊರಡಿಸಿದರೆ ಬಡ ಪಾಲಕರು ನಿಟ್ಟುಸಿರುಬಿಟ್ಟಾರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.