ADVERTISEMENT

ಶಾಸ್ತ್ರೀಯ ಕನ್ನಡಕ್ಕೆ ನೆಲೆ ಸಿಗುತ್ತಿಲ್ಲವೇಕೆ?

ಡಾ.ಚಂದ್ರಶೇಖರ ದಾಮ್ಲೆ
Published 8 ಜನವರಿ 2017, 19:30 IST
Last Updated 8 ಜನವರಿ 2017, 19:30 IST

ಕನ್ನಡ ಸಾಹಿತ್ಯ ಚರಿತ್ರೆಯ ಆರಂಭದಿಂದ ತೊಡಗಿ ಎರಡು–ಮೂರು ದಶಕಗಳ ಹಿಂದಿನವರೆಗೂ ಕನ್ನಡದ ಸಾಹಿತಿಗಳು ಪ್ರಬುದ್ಧ ಸಾಹಿತ್ಯದ ಓದುವಿಕೆ, ಸೃಜನಶೀಲ ಕೃತಿಗಳ ರಚನೆ ಮತ್ತು ಪ್ರಕಟಣೆಗಳಲ್ಲಿ ತೊಡಗಿರುತ್ತಿದ್ದರು. ಅವರ ದೃಷ್ಟಿಯಲ್ಲಿ ರಾಜಕಾರಣಿಗಳು ತಮ್ಮ ಎದುರು ಕುಳಿತುಕೊಳ್ಳಬೇಕಾದವರು, ತಮ್ಮ ಜೊತೆಯಲ್ಲಿ ಅಲ್ಲ.

ಅವರಿಗೆ ಸಾಹಿತ್ಯ ಮುಖ್ಯವಾಗಿತ್ತೇ ಹೊರತು ರಾಜಕಾರಣ ಅಲ್ಲ. ಹಾಗಾಗಿ ಅವರ ಕೈಯಲ್ಲಿ ಕನ್ನಡವು ಶಾಸ್ತ್ರೀಯ ವಾಗಿ ಬೆಳೆದಿತ್ತು. ಹೀಗೆ ಬೆಳೆಸಿಕೊಟ್ಟ ಶಾಸ್ತ್ರೀಯ ಕನ್ನಡದ ಉತ್ತರಾಧಿಕಾರಿಗಳಾಗಿ ಇಂದಿನ ಸಾಹಿತಿಗಳಿದ್ದಾರೆ. ಕೆಲವೊಂದು ಅಪವಾದಗಳನ್ನು ಬಿಟ್ಟರೆ ಇವರಲ್ಲಿ ಓದುವಿಕೆ ಇಲ್ಲ. ಆದರೆ ಪ್ರಕಟಿಸಿದ ಕೃತಿಗಳ ಪಟ್ಟಿ ಇದೆ. ಹಾಗಾಗಿ ಅವರು ರಾಜಕಾರಣಿಗಳ ಸುತ್ತ ಸುತ್ತುತ್ತಿದ್ದಾರೆ.

ಈಗ ಇವರು ಶಾಸ್ತ್ರೀಯ ಕನ್ನಡದ ಕೇಂದ್ರವನ್ನು ಸ್ಥಾಪಿಸಲು ಜಾಗ ಹಿಡಿಯುವವರಾಗಿದ್ದಾರೆ. ಇವರ ಈ ಯತ್ನದಲ್ಲಿ ಮೈಸೂರಲ್ಲೋ ಬೆಂಗಳೂರಲ್ಲೋ ಎಂಬ ಜಗಳ ಶುರುವಾಗಿದೆ. ಅದರಲ್ಲಿ ಕನ್ನಡದ ಆಸಕ್ತಿಗಿಂತ ಹೆಚ್ಚು ಸ್ವಹಿತಾಸಕ್ತಿ ಇರುವುದು ಎದ್ದು ಕಾಣುವ ಅಂಶ ವಾಗಿದೆ. ತಕ್ಷಣ ನಿರ್ಧಾರ ತೆಗೆದುಕೊಳ್ಳಬೇಕಾದ ಸರ್ಕಾರ ನಿಧಾನ ಗತಿಯಲ್ಲಿರುವುದು ಸಮಸ್ಯೆ ಉಲ್ಬಣಗೊಳ್ಳಲು ಕಾರಣವಾಗುತ್ತಿದೆಯೇ ಹೊರತು ತಣ್ಣಗಾಗಲು ಅಲ್ಲ.

ತಮಿಳು ಭಾಷೆಗೆ ಕೇಂದ್ರ ಸರ್ಕಾರವು ಶಾಸ್ತ್ರೀಯ ಸ್ಥಾನಮಾನ ನೀಡಿರುವುದನ್ನು ಹಾಗೂ ತಮಿಳು ಭಾಷಾ ಅಧ್ಯಯನ ಮತ್ತು ಅಭಿವೃದ್ಧಿಗೆ ಅಪಾರವಾಗಿ ಅನುದಾನ ಕೊಡುತ್ತಿರುವುದನ್ನು ಕಂಡಾಗ ನಮ್ಮ ಸಾಹಿತಿಗಳಲ್ಲಿ ‘ಕನ್ನಡವೇನು ಕಡಿಮೆ’ ಎಂಬ ಪ್ರಶ್ನೆ ಸಹಜವಾಗಿಯೇ ಮೂಡಿತು. ಪಂಚದ್ರಾವಿಡ ಭಾಷೆಗಳಲ್ಲಿ ಒಂದಾದ ಕನ್ನಡ ಭಾಷೆಯ ಪ್ರಾಚೀನತೆ, ಸಮೃದ್ಧ ಸಾಹಿತ್ಯದ ಚರಿತ್ರೆ ಹಾಗೂ ಶಾಸ್ತ್ರೀಯ ಭಾಷೆಯೆಂಬ ಮನ್ನಣೆಯ ಅವಶ್ಯಕತೆಯನ್ನು ಪ್ರತಿಪಾದಿಸಿದ ಸಾಹಿತಿಗಳ ಹೋರಾಟ ಯಶಸ್ವಿಯಾಯಿತು.

2008ರ ನವೆಂಬರ್ 1, ಕನ್ನಡ ರಾಜ್ಯೋತ್ಸವದ ದಿನ ಕೇಂದ್ರ ಸರ್ಕಾರವು ಕನ್ನಡ ಭಾಷೆಗೂ ಶಾಸ್ತ್ರೀಯ ಸ್ಥಾನಮಾನ ಪ್ರಕಟಿಸಿತು. ಎಲ್ಲರೂ ಸಿಹಿ ಹಂಚಿ ಸಂಭ್ರಮಿಸಿದ್ದಾಯ್ತು. ಈಗ 8 ವರ್ಷ ಕಳೆದು 2016ರ ರಾಜ್ಯೋತ್ಸವ ಮುಗಿಯಿತು. ಈ ನಡುವೆ ನಡೆದ ವಿದ್ಯಮಾನಗಳ ವೇಗ ಗಮನಿಸಿದರೆ ಸರ್ಕಾರಕ್ಕೆ ಕನ್ನಡದ ಬಗ್ಗೆ ಎಂತಹ ಅಸಡ್ಡೆ ಇದೆ ಎಂಬುದು ಸ್ಪಷ್ಟವಾಗುತ್ತದೆ.

ಶಾಸ್ತ್ರೀಯ ಸ್ಥಾನಮಾನಕ್ಕಾಗಿ ನಡೆಸಿದ ಹೋರಾಟದಲ್ಲಿ ಗೆದ್ದ ಗುಂಗಿನಲ್ಲಿ ಮುಂದಿನ ಕೆಲಸವನ್ನು ನಮ್ಮ ಸಾಹಿತಿಗಳು ಮರೆತರು. ಆ ಕ್ಷಣವೇ ರಾಜ್ಯ  ಸರ್ಕಾರವನ್ನು ಎಚ್ಚರಿಸಿ ಶಾಸ್ತ್ರೀಯ ಕನ್ನಡದ ಅಧ್ಯಯನ ಕೇಂದ್ರವನ್ನು ಸ್ಥಾಪಿಸುವ ನಿಟ್ಟಿನಲ್ಲಿ ಹೆಜ್ಜೆ ಇಡಬೇಕಿತ್ತು. ತಮಿಳರು ಮಾನ್ಯತೆ ಸಿಕ್ಕಿದ ಕೂಡಲೇ ಸ್ವಾಯತ್ತವಾದ ಶಾಸ್ತ್ರೀಯ ತಮಿಳಿನ ಕೇಂದ್ರ ಸಂಸ್ಥೆ ‘Central Institute of Classical Tamil’ ಸ್ಥಾಪಿಸಿ ಪ್ರತಿವರ್ಷ ಕೇಂದ್ರ ಸರ್ಕಾರದಿಂದ ₹ 10 ಕೋಟಿ ನೆರವು ಪಡೆದಿದ್ದು, 7 ವರ್ಷಗಳ ಅವಧಿಯಲ್ಲಿ  ₹ 70 ಕೋಟಿ ಪಡೆದಿದ್ದಾರೆ.

ಆದರೆ ಕನ್ನಡಕ್ಕೆ ನೀಡಿರುವ 2011ರ ಸಾಲಿನ ಮೊದಲ ಆರು ಕೋಟಿ ರೂಪಾಯಿ ಅನುದಾನವು 2016ರ ಏಪ್ರಿಲ್ ತನಕವೂ ಖರ್ಚಾಗದೆ ಉಳಿದಿದೆ ಎಂದರೆ ಅದು ಕನ್ನಡಿಗರ ಜಾಡ್ಯದ ಮಾಪಕವೇ? ಶಾಸ್ತ್ರೀಯ ಭಾಷೆಯ ಮಾನ್ಯತೆ ಬೇಕೆಂಬ ಹೋರಾಟಕ್ಕೆ ಮಾದರಿಯಾದ ತಮಿಳು ಸಾಹಿತಿಗಳು, ಅಧ್ಯಯನ ಕೇಂದ್ರ ಸ್ಥಾಪನೆಗೆ ರೂಪಿಸಬೇಕಾದ ಹೋರಾಟಕ್ಕೆ ಏಕೆ  ಮಾದರಿಯಾಗಿಲ್ಲ?

ಸಮಾರಂಭಗಳ ಸಂಭ್ರಮ ಮತ್ತು ಘೋಷಣೆಗಳ ಅಬ್ಬರದಿಂದ ಹೊರಬಂದು ಮೌನವಾಗಿ ಕೆಲಸ ನಡೆಸುವ ಶಿಸ್ತಿಗೆ ಕನ್ನಡ ಸಾಹಿತಿಗಳೂ ಸರ್ಕಾರವೂ ಒಳಪಡಬೇಕಾದ ಅಗತ್ಯ ಇದೆ. 2011ರಲ್ಲಿ ಕೇಂದ್ರ ಸರ್ಕಾರದ ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವಾಲಯವು ಕನ್ನಡದ ಶಾಸ್ತ್ರೀಯ ಭಾಷಾ ಅಧ್ಯಯನ ಕೇಂದ್ರದ (Centre of Excellence for Studies on Classical Kannada) ಯೋಜನಾ ನಿರ್ದೇಶಕರ ಹುದ್ದೆಗೆ ಜಾಹೀರಾತು ಪ್ರಕಟಿಸಿತು.

ಆದರೆ ಆ ನೇಮಕವಾಗಿದ್ದು 2014ರ ಏ. 1ರಂದು. ಇಷ್ಟೊಂದು ತಡವಾಗಿದ್ದರ ಹಿಂದಿನ ಕಾರಣಗಳು ಏನು? ಕೊನೆಗೂ ನೇಮಕಗೊಂಡ ಎಚ್.ಎಂ. ಮಹೇಶ್ವರಯ್ಯರಿಗೆ ಕರ್ನಾಟಕದ ಕೇಂದ್ರೀಯ ವಿಶ್ವವಿದ್ಯಾಲಯದ ಕುಲಪತಿ  ಹುದ್ದೆಯನ್ನು ಏಕೆ ನೀಡಬೇಕಿತ್ತು? ಕೇವಲ ಹದಿನೇಳೇ ದಿನಗಳಲ್ಲಿ (2014ರ ಏಪ್ರಿಲ್ 17ರಂದು) ಮಹೇಶ್ವರಯ್ಯ ಹುದ್ದೆ ತೊರೆದರು.

ಮಹೇಶ್ವರಯ್ಯ ಅವರ ಸ್ಥಾನಕ್ಕೆ ತಕ್ಷಣಕ್ಕೆ ನೇಮಕ ಮಾಡಲು ಯಾರೂ ಸಿಗಲಿಲ್ಲವೇ? ಪ್ರಸ್ತುತ ನಿರ್ದೇಶಕರಾಗಿರುವ ಪಿ.ಕೆ. ಖಂಡೋಬ ಅವರನ್ನು ನೇಮಿಸಲು ಭರ್ತಿ ಒಂದೂ ಮುಕ್ಕಾಲು ವರ್ಷ ಏಕೆ ಬೇಕಾಯಿತು? ಈ ವಿದ್ಯಮಾನಗಳು ಹೇಗಿವೆಯೆಂದರೆ ‘ದೇವರು ಕೊಟ್ಟರೂ ಪೂಜಾರಿ ಬಿಡ’ ಎಂಬಂತಿದೆ. ಕೇಂದ್ರ ಸರ್ಕಾರವು ಶಾಸ್ತ್ರೀಯ ಭಾಷೆಯ ಮಾನ್ಯತೆ ನೀಡಿದ್ದು, ಈಗ ಅನುದಾನ ನೀಡಲು ಸಿದ್ಧವಿದ್ದರೂ ನಮ್ಮ ಸರ್ಕಾರದಿಂದ ಅದನ್ನು ಗಿಟ್ಟಿಸಿಕೊಳ್ಳಲು ಆಗದ ಸ್ಥಿತಿ ನಮ್ಮದು.

ಭಾರತೀಯ ಭಾಷಾ ಸಂಸ್ಥಾನದಿಂದ ಹೊರಗೆ ಬಂದು ಸ್ವಾಯತ್ತ ನೆಲೆ ಕಾಣಬೇಕು ಎಂಬ ಸಾಹಿತಿಗಳ ಆಶಯದ ಹಿಂದೆ  ಕನ್ನಡದ  ಅಭಿವೃದ್ಧಿಯೇ ಗುರಿಯಾಗಿತ್ತು. ಆದರೆ ಈಗ ಅದನ್ನು ಬೆಂಗಳೂರಿಗೆ ಸ್ಥಳಾಂತರಿಸಬೇಕು ಎಂಬುದರ ಹಿಂದೆ ಕನ್ನಡದ ಅಭಿವೃದ್ಧಿಯ ಚಿಂತನೆ ಇದೆಯೇ ಎಂಬುದು ಪ್ರಶ್ನಾರ್ಹವಾಗುತ್ತದೆ.

ಮೈಸೂರಿನಲ್ಲಿ ಜಾಗವಿಲ್ಲದೆ ಅಧ್ಯಯನದ ಸಂಪನ್ಮೂಲಗಳಿಲ್ಲದೆ ಇದ್ದಿದ್ದರೆ ಈ ಕುರಿತಾಗಿ ಚಿಂತಿಸುವ ಅಗತ್ಯವಿತ್ತು. ಆದರೆ ಮೈಸೂರು ವಿಶ್ವವಿದ್ಯಾಲಯವು ಜಾಗ ಕೊಡಲು ಸಿದ್ಧವಿರುವಾಗ, ನೆರೆಹೊರೆಯಲ್ಲಿ ಗ್ರಂಥಾಲಯಗಳ  ಸೌಲಭ್ಯವಿರುವಾಗ, ಈಗಾಗಲೇ ಕೆಲವು ಯೋಜನೆಗಳ ಕಾರ್ಯ ಆರಂಭವಾಗಿರುವಾಗ ಅದನ್ನು ಮೈಸೂರಿನಲ್ಲೇ ನೆಲೆಗೊಳಿಸುವುದು ಸೂಕ್ತವೆಂದು ಸರ್ಕಾರಕ್ಕೆ ಏಕೆ ಅನ್ನಿ ಸುತ್ತಿಲ್ಲ?

ತಡ ಮಾಡಿದಷ್ಟೂ ಹೊಸ ಅನುದಾನಗಳು ಸಿಕ್ಕ ದಿರುವುದು, ಯೋಜನೆಗಳ ಮುಂದುವರಿಕೆಗೆ ಆತಂಕ, ಅವುಗಳಲ್ಲಿ ದುಡಿಯುತ್ತಿರುವವರ ಉದ್ಯೋಗದ ಅಭದ್ರತೆ ಹಾಗೂ ದೀರ್ಘಕಾಲೀನ ಯೋಜನೆಗಳ ಆರಂ ಭಕ್ಕೆ ತೊಡಕಾಗುತ್ತಿರುವುದನ್ನು ಸರ್ಕಾರವೇಕೆ ಲಕ್ಷಿಸು ತ್ತಿಲ್ಲ?

ಸ್ವತಃ ಮುಖ್ಯಮಂತ್ರಿಗಳು ಮೈಸೂರಿನವರಾಗಿದ್ದು ಅದು ಅಲ್ಲಿಯೇ ಇರಲಿ ಎಂಬ ಒಳಅಭಿಪ್ರಾಯ ಹೊಂದಿ ದ್ದಾರೆಂಬುದು ನಿಜವಾದರೆ ವಿಳಂಬವೇಕೆ? ಕನ್ನಡದ ಹಿತ ದೃಷ್ಟಿಯಿಂದಲಾದರೂ ಮೈಸೂರಿನಲ್ಲಿ ಅದಕ್ಕೊಂದು ನೆಲೆ ಒದಗಿಸುವ ತುರ್ತು ಸರ್ಕಾರದ ಮುಂದೆ ಇದೆ.

ರಾಯಚೂರಿನಲ್ಲಿ ನಡೆದ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿಯೂ ಈ ತುರ್ತಿನ ಪ್ರಸ್ತಾಪವಾ ಯಿತು. ಅಧ್ಯಕ್ಷರಾಗಿದ್ದ ಬರಗೂರು ರಾಮಚಂದ್ರಪ್ಪ  ‘ಎಲ್ಲಾದರೂ ಸರಿ, ಒಮ್ಮೆ ಅದನ್ನು ಸ್ವಾಯತ್ತ ಸಂಸ್ಥೆಯ ನ್ನಾಗಿ ನೆಲೆಗೊಳಿಸಿ’ ಎಂದಿದ್ದಾರೆ.

ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್‌ ಅವರೂ ಶಾಸ್ತ್ರೀಯ ಕನ್ನಡ ಅಧ್ಯಯನ ಸಂಸ್ಥೆಯ ಸ್ಥಾಪನೆಗೆ ಎಲ್ಲಿ ಜಾಗ ಮತ್ತು ಕಟ್ಟಡ ಸಿಗುತ್ತದೋ ಅಲ್ಲಿ ಬೇಗನೇ ಮಾಡಿ ಎಂಬ ಒತ್ತಾ ಯವನ್ನು ಮುಖ್ಯಮಂತ್ರಿಗಳ ಎದುರೇ ಮಾಡಿದ್ದಾರೆ. ಹೀಗಾಗಿ ಬೆಂಗಳೂರೇ ಆಗಬೇಕೆಂಬ ಒತ್ತಡ ಸಡಿಲವಾ ಗಿದ್ದು ಮೈಸೂರಿನಲ್ಲಿ ಜಾಗ ಲಭ್ಯತೆ ಇರುವಾಗ ಸರ್ಕಾರದ ಮಟ್ಟದಲ್ಲಿ ನಿರ್ಧಾರ ತೆಗೆದುಕೊಳ್ಳುವುದರಲ್ಲಿ ಮತ್ತೂ ತಡವಾಗದಿದ್ದರೆ ಕನ್ನಡಕ್ಕೆ ಒಳಿತಾಗುತ್ತದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.