ADVERTISEMENT

ಶಿಕ್ಷಣ: ಅಧಿಕಾರ ಮತ್ತು ಜ್ಞಾನ

ಡಾ.ಬಿ.ಎಂ.ಪುಟ್ಟಯ್ಯ
Published 21 ಜುಲೈ 2017, 19:30 IST
Last Updated 21 ಜುಲೈ 2017, 19:30 IST
ಶಿಕ್ಷಣ: ಅಧಿಕಾರ ಮತ್ತು ಜ್ಞಾನ
ಶಿಕ್ಷಣ: ಅಧಿಕಾರ ಮತ್ತು ಜ್ಞಾನ   

ಇಪ್ಪತ್ತೊಂದನೇ ಶತಮಾನದ ಮುಖ್ಯ ಆದ್ಯತೆಗಳಲ್ಲಿ ಶಿಕ್ಷಣವೂ ಒಂದು. ಎಲ್ಲರಿಗೂ ಶಿಕ್ಷಣ, ಕಡ್ಡಾಯ ಶಿಕ್ಷಣ, 14 ವರ್ಷದವರೆಗಿನ ಮಕ್ಕಳಿಗೆ ಉಚಿತ ಮತ್ತು ಕಡ್ಡಾಯ ಶಿಕ್ಷಣ, ಖಾಸಗಿ ಶಿಕ್ಷಣ, ಸರ್ಕಾರಿ ಶಿಕ್ಷಣ, ತಾಂತ್ರಿಕ ಮತ್ತು ವೈದ್ಯಕೀಯ ಶಿಕ್ಷಣ- ಮುಂತಾದ ಹಲವು ವಿಷಯಗಳನ್ನು ಕುರಿತು ಚರ್ಚಿಸಲಾಗುತ್ತಿದೆ.

ಶಿಕ್ಷಣ ನಮ್ಮ ಹಕ್ಕು, ಶಿಕ್ಷಣದಿಂದ ಜ್ಞಾನಾರ್ಜನೆ, ಶಿಕ್ಷಣದಿಂದ ನೈತಿಕತೆಯ ನಿರ್ಮಾಣ, ಶಿಕ್ಷಣದಿಂದ ವಿಮೋಚನೆ, ಶಿಕ್ಷಣದಿಂದ ಸಮಾಜದ ಸುಧಾರಣೆ ಮತ್ತು ಬದಲಾವಣೆ - ಇಂತಹ ಚರ್ಚೆಗಳೂ ಸಾಗಿವೆ. ಶಿಕ್ಷಣ ಒಳ್ಳೆಯ ಗುಣಮಟ್ಟದ್ದಾಗಿರಬೇಕು ಎಂಬ ಅಭಿಪ್ರಾಯವನ್ನು ಗಟ್ಟಿಗೊಳಿಸಲಾಗಿದೆ.

ಹಾಗಾಗಿ ಶಿಕ್ಷಣದಲ್ಲಿ ಗುಣಮಟ್ಟವನ್ನು ವೃದ್ಧಿಸುವ ಪ್ರಯತ್ನಗಳು ನಡೆಯುತ್ತಿವೆ. ಇದಕ್ಕೆ ವಿವಿಧ ಕಾರ್ಯಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ. ಆಕರ್ಷಕ ಕಟ್ಟಡ, ಆಧುನಿಕ ಸೌಲಭ್ಯ ಮತ್ತು ಶೈಕ್ಷಣಿಕ ಮಾರುಕಟ್ಟೆಯಲ್ಲಿ ‘ಬ್ರ್ಯಾಂಡ್’ ಗಳಿಸಿ, ಪ್ರಸಿದ್ಧಿ ಪಡೆದಿರುವ ಶಿಕ್ಷಣ ಸಂಸ್ಥೆಗಳು ಗುಣಮಟ್ಟದ ಶಿಕ್ಷಣದ ಹೆಸರಿನಲ್ಲಿ ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಸೆಳೆಯುತ್ತಿವೆ.

ADVERTISEMENT

ಅಂಕಗಳನ್ನು ಆಧರಿಸಿ ಶಿಕ್ಷಣದ ಗುಣಮಟ್ಟವನ್ನು ಅಳೆಯಲಾಗುತ್ತಿದೆ. ಒಬ್ಬ ವ್ಯಕ್ತಿಯ ಎತ್ತರ ಮತ್ತು ಆತನ ತೂಕ ಭೌತಿಕ ಸಂಗತಿ. ಹಾಗೆಯೇ ಹಾಳೆಯಲ್ಲಿ ಪ್ರಿಂಟ್ ಮಾಡಿಕೊಡುವ ಅಂಕಗಳೂ ಕೂಡ ಭೌತಿಕ ಸಂಗತಿಗಳಾಗಿವೆ. ವಿದ್ಯಾರ್ಥಿಯೊಬ್ಬ ಶೇಕಡ 100 ಅಂಕ ಗಳಿಸಿದನೆಂಬ ಸೂಚನೆ, ಶೈಕ್ಷಣಿಕ ಸಂಸ್ಥೆಯೊಂದು ಶೇಕಡ 100ರಷ್ಟು ಫಲಿತಾಂಶ ಪಡೆಯಿತೆಂಬ ಸೂಚನೆ ಈ ಎರಡೂ ಅಂಕಗಳನ್ನೇ ಆಧರಿಸಿವೆ.

ನಾವು ತಿನ್ನುವ, ಕುಡಿಯುವ ಪದಾರ್ಥಗಳನ್ನು ಮತ್ತು ಉಟ್ಟುಕೊಳ್ಳುವ ಹಾಗೂ ಬಳಸುವ ವಸ್ತುಗಳನ್ನು ಚೆನ್ನಾಗಿವೆ, ಚೆನ್ನಾಗಿಲ್ಲ ಎನ್ನುತ್ತೇವೆ. ಇದನ್ನೇ ಒಳ್ಳೆಯ ಗುಣಮಟ್ಟದವು, ಕಳಪೆ ಗುಣಮಟ್ಟದವು ಎನ್ನುತ್ತೇವೆ. ಕೆಲವೊಮ್ಮೆ ಕಳಪೆ ಎನಿಸಿದವನ್ನು ಬಿಸಾಡುವುದೂ ಇದೆ.  ಇದು ಏನೇ ಇದ್ದರೂ, ಇದೆಲ್ಲವೂ ವಸ್ತುಗಳಿಗೇ ಸಂಬಂಧಿಸಿದ್ದು. ಅಂದರೆ ಅಂಕಪಟ್ಟಿಯನ್ನು ಆಧರಿಸಿದ ಶಿಕ್ಷಣದಲ್ಲೂ ಇದೇ ನಂಬಿಕೆಯನ್ನು ಬೆಳೆಸಲಾಗಿದೆ.

ಶಿಕ್ಷಣವು ಜ್ಞಾನ, ಅರಿವು, ವಿವೇಕ- ಇವನ್ನು ಸೃಷ್ಟಿ ಮಾಡುತ್ತಾ, ಇವನ್ನು ವ್ಯಕ್ತಿಗತ ಮಾಡುತ್ತಾ ಸಾಗಬೇಕು. ಬದುಕಿನ ಕುಂದುಕೊರತೆಗಳನ್ನು ನೀಗಿಸುತ್ತಾ, ಅದನ್ನು ಬದಲಾಯಿಸುತ್ತಾ ಸಾಗಬೇಕು. ಇದು ನಿರಂತರವಾಗಿ ನಡೆಸಬೇಕಾದ ಕೆಲಸ. ಇಲ್ಲಿ ವ್ಯಕ್ತಿಗತ ಮನೋಧರ್ಮ ಹಾಗೂ ಸ್ವಭಾವಗಳು ಕೆಲಸ ಮಾಡಬೇಕು. ಇದನ್ನು ಅಂಕಗಳ ಮೂಲಕ ಮಾಡಲು ಆಗುವುದಿಲ್ಲ.

ಆದರೆ ಜ್ಞಾನ, ಅರಿವು ಮತ್ತು ವಿವೇಕಗಳನ್ನು ಬಿಟ್ಟುಕೊಟ್ಟ ಶಿಕ್ಷಣವು ಅಂಕಪಟ್ಟಿಗೆ ಸೀಮಿತವಾಗುತ್ತದೆ. ಶಿಕ್ಷಣದ ಗುಣಮಟ್ಟವನ್ನು ಹೆಚ್ಚಿಸುತ್ತೇವೆಂಬ ಹೆಸರಿನಲ್ಲಿ ದಿನಕ್ಕೊಂದು, ಅಷ್ಟೇಕೆ ಗಂಟೆಗೊಂದು ಯೋಜನೆಯನ್ನು ಎಸೆಯುತ್ತಾ ಹೋಗುವುದು ಬಹಳ ಸುಲಭ. ಯಾಕೆಂದರೆ ಇದು ಕೇವಲ ಯಾಂತ್ರಿಕ ಕೆಲಸ. ಉನ್ನತ ಶಿಕ್ಷಣದಲ್ಲಿ ಇಂತಹ ಯಾಂತ್ರಿಕ ಯೋಜನೆಗಳನ್ನು ಜಾರಿಗೊಳಿಸಲಾಗುತ್ತಿದೆ.

ಶಾಲಾ–ಕಾಲೇಜುಗಳಿಗೆ ಇನ್ನೂ ಕನಿಷ್ಠ ಭೌತಿಕ ಅಗತ್ಯಗಳನ್ನು ಪೂರೈಸಲು ಆಗಿಲ್ಲ. ಕಟ್ಟಡಗಳಿಲ್ಲದ, ನೀರು, ಕರೆಂಟು, ಶೌಚಾಲಯಗಳಿಲ್ಲದ ಶಾಲಾ ಕಾಲೇಜುಗಳೆಷ್ಟೋ ಇವೆ. ಕಾಲೇಜುಗಳಲ್ಲಿ ಅಧ್ಯಾಪಕರ ಕೊರತೆ ಇರುವುದು ಹೊಸ ವಿಷಯವಲ್ಲ. ಅತಿಥಿ ಉಪನ್ಯಾಸಕರನ್ನು ಕಾಯಂಗೊಳಿಸುವ ಇಚ್ಛೆ ಇಲ್ಲ. ಅವರನ್ನು ಪ್ರತೀ ವರ್ಷ ಅಭದ್ರತೆಯಿಂದ ಮತ್ತೆ ಅಭದ್ರತೆಯಲ್ಲೇ ಇಡಲಾಗುತ್ತಿದೆ. ಮಾನಸಿಕ-ಭಾವನಾತ್ಮಕ ಸಮಾಧಾನವೇ ಇಲ್ಲದ ಇವರು ಹಿಂಸೆ ಪಟ್ಟುಕೊಂಡು, ಕಣ್ಣೀರನ್ನು ನುಂಗಿಕೊಂಡು ಪಾಠ ಮಾಡಬೇಕಾಗಿದೆ.

ಅಧ್ಯಾಪಕರಿಗೆ ಪಾಠ ಮಾಡುವುದರ ಜೊತೆಗೆ ಬೇರೆ ಹತ್ತಾರು ಕೆಲಸಗಳನ್ನು ಕೊಡಲಾಗಿದೆ. ಕೆಲಸದಲ್ಲಿ ಇವರು ಆ ಕಡೆ ಅರ್ಧ; ಈ ಕಡೆ ಅರ್ಧ ಆಗಿದ್ದಾರೆ. ಇಂತಿಷ್ಟು ಗಂಟೆ ಪಾಠ ಮಾಡಬೇಕು ಎಂದು ಇವರ ಕೆಲಸವನ್ನು ಗಂಟೆಗಳಲ್ಲಿ ಅಳೆಯಲಾಗುತ್ತಿದೆ. ಇವರು ಇಂತಹ ಬಟ್ಟೆ ತೊಡಬೇಕು; ಇಂತಹ ಬಟ್ಟೆ ತೊಡಬಾರದು ಎಂದು ನಿರ್ಧರಿಸಲಾಗುತ್ತಿದೆ. ಬೆಳಿಗ್ಗೆ 8 ಗಂಟೆಯಿಂದಲೇ ಕಾಲೇಜುಗಳು ಶುರುವಾಗಬೇಕು ಎಂಬ ಆದೇಶ ಬರುತ್ತಿದೆ.

ರಾಜ್ಯದಲ್ಲಿ ಪ್ರಥಮ ದರ್ಜೆ ಕಾಲೇಜುಗಳು ಸಾಮಾನ್ಯವಾಗಿ ಜಿಲ್ಲಾ ಮತ್ತು ತಾಲ್ಲೂಕು ಕೇಂದ್ರಗಳಲ್ಲಿವೆ. ಹಳ್ಳಿಗಳಿಂದ ವಿದ್ಯಾರ್ಥಿಗಳು ಇಲ್ಲಿಗೆ ಬರಬೇಕು. ಅನೇಕ ವಿದ್ಯಾರ್ಥಿಗಳು ಬಸ್ ಹತ್ತಲು ಅರ್ಧ– ಮುಕ್ಕಾಲು ಗಂಟೆ ನಡೆದುಕೊಂಡು ಬರಬೇಕು. ಎಷ್ಟೋ ಹಳ್ಳಿಗಳಿಗೆ ಬಸ್ ಬರುವುದೇ ಬೆಳಿಗ್ಗೆ 8 ಗಂಟೆ ನಂತರ. ಇನ್ನು ಆ ಬಸ್ ಜಿಲ್ಲೆ ಅಥವಾ ತಾಲ್ಲೂಕು ಕೇಂದ್ರ ತಲುಪುವುದು 9–9.30ರ ನಂತರವೇ. ಬೆಂಗಳೂರಿನಂತಹ ಮಹಾನಗರದಲ್ಲೂ ಇದು ಕಷ್ಟವಾಗುತ್ತದೆ.

ಪರಿಸ್ಥಿತಿ ಹೀಗಿರುವಾಗ ಬೆಳಿಗ್ಗೆ 8 ಗಂಟೆಗೆ ವಿದ್ಯಾರ್ಥಿಗಳು ಕಾಲೇಜಿಗೆ ಬರುವುದಾದರೂ ಹೇಗೆ? ಸಮಯಕ್ಕೆ ಸರಿಯಾಗಿ ತರಗತಿಗೆ ಬರಲಿಲ್ಲವೆಂದು ಅವರನ್ನು ಶಿಕ್ಷಣದಿಂದಲೇ ಹೊರದಬ್ಬುವಂತಾದರೆ? ಕಾಲೇಜಿನಲ್ಲಿ ಹಾಜರಾತಿ ಕಡಿಮೆಯಾಯಿತು ಎಂದು ಅಧ್ಯಾಪಕರ ಮೇಲೆ ಕ್ರಮ ಕೈಗೊಳ್ಳುವಂತಾದರೆ?

ಅಧಿಕಾರವು ಎಂದೂ ಜ್ಞಾನವನ್ನು ಸೃಷ್ಟಿ ಮಾಡಿರುವ ಉದಾಹರಣೆ ಇಲ್ಲ. ಬುದ್ಧ ಅಧಿಕಾರದ ಪರಿವಾರದಿಂದಲೇ ಹೊರಬಂದು ಜ್ಞಾನಿಯಾದ. ಬಸವಣ್ಣ, ಡಾ. ಬಿ.ಆರ್. ಅಂಬೇಡ್ಕರ್‌ ಅವರದು ಇದೇ ದಾರಿ. ಸಂತರು, ಸೂಫಿಗಳು, ಅನುಭಾವಿಗಳು, ತತ್ವಪದಕಾರರು, ಜನಪದರು ಈ ದಾರಿಯಲ್ಲೇ ಅಪಾರವಾದ ಜ್ಞಾನಸಂಪತ್ತನ್ನು ಸೃಷ್ಟಿಸಿದರು. ಸಾಮಾಜಿಕ ಪರಿಸ್ಥಿತಿಯ ಬಗೆಗಿನ ಕನಿಷ್ಠ ಜ್ಞಾನ, ಅರಿವು ಮತ್ತು ವಿವೇಕಗಳ ಗೈರುಹಾಜರಿಯು ಗುಣಮಟ್ಟದ ಶಿಕ್ಷಣಕ್ಕೆ ಮುಂದಾಗಿರುವುದು ದೊಡ್ಡ ದುರಂತ.
ಲೇಖಕ: ಪ್ರಾಧ್ಯಾಪಕ, ಕನ್ನಡ ವಿಶ್ವವಿದ್ಯಾಲಯ, ಹಂಪಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.