ADVERTISEMENT

ಸಂಗತ

​ಪ್ರಜಾವಾಣಿ ವಾರ್ತೆ
Published 20 ಮಾರ್ಚ್ 2011, 19:30 IST
Last Updated 20 ಮಾರ್ಚ್ 2011, 19:30 IST

ಅತ್ತ ಯಡಿಯೂರಪ್ಪ ಪ್ರತ್ಯೇಕ ಕೃಷಿ ಬಜೆಟ್ ಮಂಡಿಸಿ ತಮ್ಮ ಬೆನ್ನನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇತ್ತ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಸರ್ಕಾರಿ ಭೂಮಿಯಲ್ಲಿ ಆಕ್ರಮಣ ಮಾಡಿ ಅಲ್ಲಿ ಕೃಷಿ ನಡೆಸಿದ ರೈತರ ಯಾದಿಯನ್ನು ಕಂದಾಯ ಅಧಿಕಾರಿಗಳ ಮೂಲಕ ತರಿಸಿಕೊಂಡು ಅಂತಹ ರೈತರಿಗೆಲ್ಲ ಭೂಮಿ ಬಿಟ್ಟುಕೊಡಲು ನೋಟಿಸು ನೀಡುತ್ತಿದ್ದಾರೆ.
 

ಒಂದೆಡೆ ಕೃಷಿಯೇ ಬೇಡ ಎಂದು ರೈತವರ್ಗ ಗುಳೆ ಹೋಗುತ್ತಿರುವಾಗ ಇನ್ನೊಂದೆಡೆ ಪರಂಪರಾಗತ ಕೃಷಿಯನ್ನು ಬಿಡಲಾಗದೆ, ಕೂಲಿ ಸಮಸ್ಯೆ, ಕಾಡುಪ್ರಾಣಿಗಳ ಹಾವಳಿಯಿಂದ ದಿಕ್ಕೆಟ್ಟಿರುವ ಸಹಸ್ರಾರು ರೈತರಿಗೆ ಜಿಲ್ಲಾಧಿಕಾರಿಗಳ ಈ ಮುತುವರ್ಜಿಯಿಂದ ಕೃಷಿಯೇ ದಿಕ್ಕೆಟ್ಟು ಹೋಗಿದೆ. ರೈತರೆಲ್ಲ ಒಂದುಗೂಡಿ ವಿಧಾನಸೌಧ ಚಲೋ ಎನ್ನಲು ಸನ್ನದ್ಧರಾಗುತ್ತಿದ್ದಾರೆ.

ರೈತರು ಕೃಷಿ ಮಾಡುವ ಸ್ವಂತ ಭೂಮಿಗೆ ಅನುಕೂಲಕರವಾಗಿ ಸರ್ಕಾರದ ಭೂಮಿಯನ್ನು ನಿಯಮಿತ ಪ್ರಮಾಣದಲ್ಲಿ ಆತನಿಗೆ ಒದಗಿಸಿದ್ದು ಸ್ವತಂತ್ರ ಭಾರತ ಅಲ್ಲವೇ ಅಲ್ಲ. ಬ್ರಿಟಿಷರು ಕರಾವಳಿಯಲ್ಲಿ ನೆಲೆಯೂರುವ ಮೊದಲೇ ಆಳುತ್ತಿದ್ದ ಅರಸರು ನೀಡಿದ ಕೊಡುಗೆ ಅದು. 1874ರಲ್ಲಿ ದಕ್ಷಿಣ ಕನ್ನಡ ಜಿಲ್ಲಾಧಿಕಾರಿಯಾಗಿದ್ದ ವೆಬ್‌ಸ್ಟರ್ ಹೊರಡಿಸಿದ ಆದೇಶದಲ್ಲಿ ರೈತರ ಕೃಷಿಭೂಮಿಗೆ ಹೊಂದಿಕೊಂಡು 100 ಗಜ ವಿಸ್ತೀರ್ಣದ ರೆವಿನ್ಯೂ ಭೂಮಿಯನ್ನು ಕಟ್ಟಿಗೆ, ತರಗೆಲೆ, ನೀರು ಮತ್ತು ಮಣ್ಣಿಗಾಗಿ ಕೊಡಬೇಕೆಂದು ತಿಳಿಸಲಾಗಿದೆ.

ರೈತರು ಅದರಲ್ಲಿ ಕೃಷಿ ಮಾಡಿ, ಮನೆ ಕಟ್ಟಿದರೆ ದಂಡನಾ ಶುಲ್ಕ ವಿಧಿಸಿ ಈ ಭೂಮಿಯ ಹಕ್ಕನ್ನು ಅವರಿಗೇ ನೀಡಬೇಕೆಂದು ಸ್ಪಷ್ಟಪಡಿಸಲಾಗಿದೆ.ಈ ಹೆಚ್ಚುವರಿ ಭೂಮಿಗೆ ದಕ್ಷಿಣ ಕನ್ನಡದಲ್ಲಿ ಕುಮ್ಮಿ ಎಂದು ಹೆಸರಿದೆ. ಉತ್ತರ ಕನ್ನಡದಲ್ಲಿ ಸೊಪ್ಪಿನಬೆಟ್ಟ, ಕೊಡಗಿನಲ್ಲಿ ಕಾನ, ಬಾಣೆ ಇತ್ಯಾದಿ ಹೆಸರುಗಳಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT