ADVERTISEMENT

ಸರ್ಕಾರಿ ಶಾಲೆಗಳ ಗತಿ ಏನು?

ಡಾ.ಚಂದ್ರಶೇಖರ ದಾಮ್ಲೆ
Published 7 ಮೇ 2014, 19:30 IST
Last Updated 7 ಮೇ 2014, 19:30 IST

೨೦೧೪ ರ ಮೇ ೬ – ದೇಸಿ ಸಾಂಸ್ಕೃತಿಕ ಸಾಮಾಜಿಕ  ಇತಿಹಾಸದಲ್ಲಿ  ಒಂದು ಕರಾಳ ದಿನ. ಈ ದಿನ ದೇಶದ ಅತ್ಯುನ್ನತ ನ್ಯಾಯಾ­ಲಯವು ಒಂದು ಸಂಕಟದ ತೀರ್ಪು ನೀಡಿದೆ. ಅದು ಶಿಕ್ಷಣ ಮಾಧ್ಯಮದ ಆಯ್ಕೆಯ ಹಕ್ಕನ್ನು ಹೆತ್ತವರಿಗೆ ಮುಕ್ತಗೊಳಿಸಿದೆ. ಇನ್ನು ಮುಂದೆ ಇಂಗ್ಲಿಷ್ ಮಾಧ್ಯಮದಲ್ಲಿ ಅನುದಾನರಹಿತವಾಗಿ ಶಾಲೆ­­ಗಳನ್ನು ನಡೆಸುತ್ತಿರುವವರು ಕಳ್ಳತನ ಮಾಡ­ಬೇಕಾಗಿಲ್ಲ. ಇಂಗ್ಲಿಷ್ ಮಾಧ್ಯಮದಲ್ಲಿ ಪಾಠ­ಮಾಡಿ ಕನ್ನಡದಲ್ಲಿ ಶಾಲೆ ನಡೆಸುತ್ತಿದ್ದೇವೆಂದು ಇಲಾ­ಖೆಯ ದಾಖಲೆ­ಗಳಲ್ಲಿ ಸುಳ್ಳು ಹೇಳ­ಬೇಕಾ­ಗಿಲ್ಲ.

ಸುಪ್ರೀಂ ಕೋರ್ಟ್‌ನ ಈ ತೀರ್ಪು ದೇಸಿ ಭಾಷೆಗಳಿಗೆ ಮಾರಕವೆಂಬ ಸಂಗತಿಯ ಪರಿಣಾಮ ಅನುಭವಕ್ಕೆ ಬರು­ವಾಗ ಕಾಯಿಲೆ ಉಲ್ಬಣವಾಗಿದೆ.  ಈಗ ಎಲ್ಲರ ಆತಂಕ ಒಂದೇ. ಇನ್ನು ಇಂಗ್ಲಿಷೇ ಹರಡಿ ಬಿಡು­ತ್ತ­ದೇನೋ ಎಂಬುದು. ಆದರೆ ಜೀವ ಕೈಯಲ್ಲಿ ಹಿಡಿ­ದಿ­ರುವ ಕನ್ನಡ ಮಾಧ್ಯಮದ ಸರ್ಕಾರಿ ಶಾಲೆಗಳ ಹಾಗೂ ಅನುದಾನಿತ ಮತ್ತು ಅನುದಾನ­ರಹಿತ ಕನ್ನಡ ಶಾಲೆಗಳ ಗತಿ ಏನು ಎಂದು ಚಿಂತಿಸುವ­ವ­ರಿಲ್ಲ. ನಿಜ­ಕ್ಕೂ ಚಿಂತನೆ ನಡೆಯಬೇಕಾದ್ದು ಆ ದಿಸೆ­ಯಲ್ಲಿ. ಅದೂ ಬಹಳ ಹಿಂದಿನಿಂದಲೇ ಆಗ­ಬೇಕಾ­ಗಿತ್ತು.  ಈಗಲಾದರೂ ಆಗಲೇಬೇಕು.

ಈ ರಾಜ್ಯದ ಶಿಕ್ಷಣ ವ್ಯವಸ್ಥೆಗೆ ಗಟ್ಟಿ ಬುನಾದಿ ಹಾಕುವ ಹೊಣೆಯನ್ನು ಶಿಕ್ಷಣ ಇಲಾಖೆ ನಿಷ್ಠೆಯಿಂದ ನಿರ್ವ­ಹಿಸಿದ್ದರೆ ಇಂದಿನ ಪರಿಸ್ಥಿತಿ ಉಂಟಾ­ಗುತ್ತಿರಲಿಲ್ಲ. ಶಿಕ್ಷಣ ಸಚಿವಾಲಯದಿಂದ ಹಿಡಿದು ಕ್ಷೇತ್ರ ಸಂಪ­ನ್ಮೂಲ ಕೇಂದ್ರಗಳ ವರೆಗೆ ವ್ಯಾಪಿಸಿರುವ ನಮ್ಮ ಶಿಕ್ಷಣ ಇಲಾಖೆಯ ಅಧಿಕಾರಶಾಹಿ ವರ್ಗ ಈ ಬಗ್ಗೆ ಹೊಣೆ ಹೊರಬೇಕಿದೆ. ಈ ವರ್ಗದಲ್ಲಿ ಆಲ್ಲಲ್ಲಿ ನಿಜ­ವಾದ ಕಾಳಜಿ ಉಳ್ಳ ಅಧಿಕಾರಿಗಳೂ ಗುಮಾಸ್ತರೂ ಇರುವುದು ನನ್ನ ಅರಿವಿನಲ್ಲಿದೆ. ಆದರೆ ಉಸಿರು­­ಗಟ್ಟಿಸುವ ವಾತಾವರಣದಲ್ಲಿ ತಾವು ದುಡಿ­ಯುತ್ತಿ­ರುವ ಬಗ್ಗೆ ಅವರಿಗೆ ವಿಷಾದವೂ ಇದೆ. 

ನನ್ನ ಸ್ನೇಹಿತರೊಡಗೂಡಿ ಕನ್ನಡ ಮಾಧ್ಯಮದ ಒಂದು ಶಾಲೆಯನ್ನು ಅನುದಾನ ರಹಿತವಾಗಿ ಸ್ಥಾಪಿಸ­ದಿರುತ್ತಿದ್ದರೆ ನನಗೆ ಶಿಕ್ಷಣ ಇಲಾಖೆಯ ಬಗ್ಗೆ ಏನೂ ಗೊತ್ತಾಗುತ್ತಿರಲಿಲ್ಲ. ಸದ್ಯ ಅಧಿಕಾರಶಾಹಿಯ ಸಮಸ್ಯೆ­ಗಳ ಬಗ್ಗೆ ತಿಳಿದಿದ್ದ ನನ್ನ ಸೈದ್ಧಾಂತಿಕ ಅರಿವಿಗೆ  ಪ್ರಾಯೋಗಿಕ ಅನುಭವವೂ ಸೇರಿತು. ಸುಮಾರು ನಾಲ್ಕು ದಶಕಗಳ ಹಿಂದೆ ಸರ್ಕಾರಿ ಶಾಲೆಗಳು ಚೆನ್ನಾಗಿ­ದ್ದುವು. ಶಿಕ್ಷಕರಿಗೆ ಕರ್ತವ್ಯ ಪ್ರಜ್ಞೆ ಇರುತ್ತಿತ್ತು. ಅಂಥಲ್ಲಿ ಇಂದು ನಮ್ಮ ಸರ್ಕಾರಿ ಶಾಲೆಗಳು ಇಷ್ಟೊಂದು ಕಳೆಗೆಟ್ಟು ಸಾರ್ವ­ತ್ರಿಕ­­ವಾಗಿ ತಾತ್ಸಾರಕ್ಕೊಳಗಾದುದರ ಹಿಂದೆ ಇಲಾ­ಖೆ­ಯ ಆಯಕಟ್ಟಿನ ಹುದ್ದೆಗಳಲ್ಲಿರುವವರ ಭ್ರಷ್ಟ­ತನವೇ ಕಾರಣ. ನಾನು ಕೆಲವೊಂದು ಸಾಕ್ಷಿ ಕೊಡ­ಲಾ­ಗದ ಆದರೆ ವಾಸ್ತವದ ಸಂಗತಿಗಳನ್ನು ಇಲ್ಲಿ ಮುಂದಿಡುತ್ತೇನೆ.

ಖಾಸಗಿ ಅನುದಾನರಹಿತ ಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಸ್ಥಾಪಿ­ಸು­ವುದೆಂದರೆ ಶಿಕ್ಷಣ ಇಲಾಖೆ­ಯಲ್ಲಿ ಅದೊಂದು ನಂಬಲಸಾಧ್ಯ ಸಂಗತಿ­ಯಾಗಿ­ದ್ದುದು ನನ್ನ ಅರಿವಿಗೆ ಬಹು ಬೇಗನೇ ಬಂತು. ಒಬ್ಬ ಜಿಲ್ಲಾ ಮಟ್ಟದ ಅಧಿಕಾರಿಯಂತೂ ‘ನೀವ್ಯಾಕೆ ಕನ್ನಡ ಮಾಧ್ಯಮದಲ್ಲಿ ಶಾಲೆ ಮಾಡು­ತ್ತೀರಿ? ಕನ್ನಡಕ್ಕೆ ಸರ್ಕಾರಿ ಶಾಲೆಗಳುಂಟಲ್ಲಾ?’ ಎಂದರು. ‘ನಮ್ಮ ಉದ್ದೇಶವೇ ಭಾಷೆ ಮತ್ತು ಸಂಸ್ಕೃತಿಗೆ ಸಂಬಂಧಿಸಿದ್ದು. ಅಲ್ಲದೆ ಇಂಗ್ಲಿಷ್ ಮಾಧ್ಯಮ­ದಲ್ಲಿ ಶಾಲೆ ಆರಂಭಿ­ಸಲು ಕಾನೂನು ಪ್ರಕಾರ ಅನುಮತಿ ಇಲ್ಲವಲ್ಲ?’ ಎಂದೆ. ‘ಅದರ ಚಿಂತೆ ನೀವು ಬಿಡಿ. ಅದನ್ನು ನಾವು ಕೊಡ್ತೇವೆ. ನೀವು ಮಾಡೋದಾದ್ರೆ ಹೇಳಿ’ ಎಂದರು. ನಾನು ನಿರಾಕರಿಸಿ ಹೊರಗೆ ಬಂದೆ.

ನಮ್ಮ ಶಾಲೆಗೆ ಐದನೇ ತರಗತಿಯಿಂದ ತರಗತಿ ತೆರೆಯಲು ಅನುಮತಿ ಬೇಕಿತ್ತು. ಇದನ್ನು ಪಡೆಯಲು  ಕನಿಷ್ಠ ಹತ್ತು ಬಾರಿ ಬೆಂಗಳೂರಿಗೆ ಅಲೆಯಬೇಕಾ­ಯಿತು. ಲಂಚ ಕೊಡದೆ ಕೆಲಸ ಮಾಡಿಸಿಕೊಳ್ಳಲು  ರಾಜಕೀಯ ಪ್ರಭಾವವನ್ನು ಉಪಯೋಗಿಸ­ಲೇ­ಬೇಕಾಯ್ತು. ಇದಕ್ಕೆ ಒಂದೇ ಕಾರಣವೆಂದರೆ ಗುಮಾ­ಸ್ತ­­ರಾ­ದಿಯಾಗಿ ಅಧಿಕಾರಿಗಳ ವರೆಗೂ ಯಾರಿಗೂ ‘ಖಾಸಗಿಯಾಗಿ ಕನ್ನಡ ಮಾಧ್ಯಮದ ಶಾಲೆ ನಡೆಸುತ್ತೇವೆಂದರೆ’ ಅವರಿಗೆ ನಂಬುವುದು ಕಷ್ಟವಾಗುತ್ತಿತ್ತು.

ನನ್ನ ಅನುಭವಗಳಷ್ಟೇ ಅಲ್ಲ, ನಮ್ಮಂತೆಯೇ ಕನ್ನಡ ಮಾಧ್ಯಮ ಶಾಲೆಗಳನ್ನು ಆರಂಭಿಸಿದವರು ನೋಂದಣಿ, ಮಾನ್ಯತೆ, ಮಾನ್ಯತೆಯ ನವೀ­ಕರಣ ಮುಂತಾಗಿ ಪಟ್ಟ ಪಾಡಿನ ಚಿತ್ರಣ  ಗೊತ್ತಿರು­ವಂತ­ಹದ್ದೆ.  ಅದನ್ನು ಹೇಳಿ ಪ್ರಯೋಜನವೂ ಇಲ್ಲ. ಮೇಲಿನ ಅನುಭವಗಳ ಒಟ್ಟು ತಾತ್ಪರ್ಯ ಏನೆಂದರೆ ಶಿಕ್ಷಣ ಇಲಾಖೆಗೆ ಸರ್ಕಾರಿ ಶಾಲೆಗಳಿಗಿಂತ ಅನುದಾನ ರಹಿತ ಆಂಗ್ಲ ಮಾಧ್ಯಮದ ಶಾಲೆಗಳೇ ಪ್ರಿಯ.

‘ಏಕೆ?’ ಎಂಬುದನ್ನು ಶಬ್ದಗಳಲ್ಲಿ ನಮೂ­ದಿಸ­ಬೇಕಾಗಿಲ್ಲ. ಇಂತಹ ಶಾಲೆಗಳಿಗೇ ಇಲಾ­ಖೆಯ ಅಧಿ­ಕಾರಿ­ಗಳೂ, ಗುಮಾಸ್ತರೂ, ಸರ್ಕಾರಿ ಶಾಲಾ ಶಿಕ್ಷ­ಕರೂ ತಮ್ಮ ಮಕ್ಕಳನ್ನು ಕಳಿಸು­ತ್ತಾರೆ. ಹಾಗಾಗಿ ಕನ್ನಡ ಮಾಧ್ಯ­ಮದ ನೋಂದಣಿ ಇರುವ ಶಾಲೆಯೂ ತಮ್ಮದು ಆಂಗ್ಲ ಮಾಧ್ಯಮವೆಂದು ಹೇಳಿ­ದರೂ ನಡೆ­ಯುತ್ತದೆ.

ಏಕೆಂ­ದರೆ ಶಿಕ್ಷಣ ಇಲಾಖಾ­ಧಿಕಾರಿ­ಗಳೇ ಮಕ್ಕಳನ್ನು ಸೇರಿಸಿದ್ದಾ­ರೆಂದ ಬಳಿಕ ಇನ್ನು ಆಂಗ್ಲ ಮಾಧ್ಯಮ­ದಲ್ಲಿ ಶಾಲೆ ನಡೆ­ಸಲು ಪರವಾನಗಿ ಇದೆಯೇ ಅಂತ ಕೇಳು­ವುದ­­ಕ್ಕೇನಿದೆ? ಶಿಕ್ಷಣ ಇಲಾಖೆಯವ­ರಷ್ಟೇ ಅಲ್ಲ, ಕಂದಾಯ, ವೈದ್ಯ­ಕೀಯ, ಕೃಷಿ ಮುಂತಾದ ಬಹು­­ತೇಕ ಬಿಳಿಕಾಲರಿನ ಹುದ್ದೆ­ಯಲ್ಲಿ­ರು­ವವರು ಮಕ್ಕ­ಳನ್ನು ಕಳಿ­ಸು­­ತ್ತಿ­ರು­ವುದು ಇಂತಹ ಶಾಲೆಗಳಿಗೇ. ಹಾಗಾಗಿ ಸಾಮಾ­­ಜಿಕ­ವಾಗಿ ಆ ಶಾಲೆಗಳ ಗೌರವ ಹೆಚ್ಚಿದೆ. ಪರಿ­ಣಾ­ಮ­ವಾಗಿ ಸರ್ಕಾರಿ ಶಾಲೆ­ಗಳಿಗೆ ಶಿಕ್ಷಣ ಇಲಾ­­ಖೆಯೇ ಮಲ­ತಾಯಿ­ಯಂ­ತಾ­ಯಿತು. ಆ ಶಾಲೆಗಳು ಸೊರ­ಗಿ­­ದುವು,  ಕೆಲವು ಕಣ್ಮುಚ್ಚಿ­ದುವು, ಇನ್ನುಳಿ­ದುವು ಸಾವಿನ ಸರದಿಗಾಗಿ ಕಾದಿವೆ.

ಇಂತಹ ಪರಿಸ್ಥಿತಿಯಲ್ಲಿ ಯಾವ ಸಾಹಿತಿ­ಗಳಿಂ­ದಲೂ ಪರಿಹಾರ ಸೂಚಿಸಲು ಸಾಧ್ಯವಿಲ್ಲ. ಮುಖ್ಯ­ಮಂತ್ರಿ­ಗಳು ಸಭೆ ನಡೆಸಿದರೆ ಖರ್ಚು ಬರೆದಿಡ­ಬಹುದು. ಬದಲಾಗಿ ತಕ್ಷಣವೇ ಶಿಕ್ಷಣ ಇಲಾಖೆಯ ಕಾರ್ಯ­ವೈಖರಿಯ ಬಗ್ಗೆ ಆಮೂಲಾಗ್ರ ತನಿಖೆ ನಡೆಸ­ಬೇಕು. ಕೋಟಿಗಟ್ಟಲೆ ಹಣ ಸರ್ವ ಶಿಕ್ಷಣ ಅಭಿಯಾನ­ಕ್ಕಾಗಿ ಬಂದದ್ದು ಸರ್ಕಾರಿ ಶಾಲೆಗಳ ಗುಣಮಟ್ಟದ ಹೊರ­­ತಾಗಿ ಯಾವ ಉದ್ದೇಶಗಳಿಗೆ ಮುಗಿಯಿತು? ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದ ದುಡ್ಡಿಗೆ ಯಾವ ಯೋಜನೆಗಳನ್ನು ರೂಪಿಸಲಾಗಿದೆ? ಇದಿ­ಷ್ಟನ್ನು ತನಿಖೆಗೆ ಒಳಪಡಿಸಿದರೆ ಜೊತೆಯಲ್ಲಿ ಇನ್ನು­ಳಿದ ಅನೇಕ ಕ್ರಿಯಾಲೋಪಗಳು ಬೆಳಕಿಗೆ ಬರಲಿವೆ.

ಈಗ ನಾವು ಸುಪ್ರೀಂ ಕೋರ್ಟ್ ಆದೇಶವನ್ನು ಗುಣಾತ್ಮಕವಾಗಿ ನೋಡೋಣ. ಅದು ಹೇಳಿದ್ದೇನೆ­ಂ­ದರೆ ಶಿಕ್ಷಣ ಮಾಧ್ಯಮದ ಹಕ್ಕು ಹೆತ್ತವರ ಆಯ್ಕೆಗೆ ಬಿಟ್ಟ ವಿಚಾರ. ಇದರ ಅರ್ಥ ಆಂಗ್ಲ ಮಾಧ್ಯ­ಮವೇ ಎಂದೇ­ನಲ್ಲ. ಅದು ಕನ್ನಡವೂ ಆಗ­ಬಹುದು. ನಾವೀಗ ಕನ್ನಡ ಮಾಧ್ಯಮಕ್ಕೆ ಹೆತ್ತ­ವರನ್ನು ಆಕರ್ಷಿಸು­ವಂತೆ ಸರ್ಕಾರಿ ಶಾಲೆಗಳನ್ನು ಗುಣಾತ್ಮಕ­ವಾಗಿ ಸಮೃದ್ಧಿ­ಗೊಳಿ­ಸೋಣ. ಅವುಗಳನ್ನೇ ಆಯ್ಕೆ ಮಾಡು­ವಂತೆ ಉನ್ನತೀಕರಿಸೋಣ.  ಸದ್ಯದ ಪರಿಸ್ಥಿತಿಗೆ ಒಂದು ಪೂರ್ಣ ತಿರುವು ಕೊಡೋಣ. ಯಾಕಾಗದು? ಆದೀತು, ಆದರೆ ಶಿಕ್ಷಣ ಇಲಾಖೆಯ ಕಾರ್ಯವೈಖರಿ­ಯಲ್ಲಿ ವ್ಯಾಪಕ ಸುಧಾರಣೆಗಳಾಗಬೇಕು. ಕನ್ನಡದಲ್ಲಿ ಕಲಿತ­ವರಿಗೆ ಉದ್ಯೋಗಗಳಲ್ಲಿ ಮೀಸಲಾತಿ ಹೆಚ್ಚಿಸು­ವುದು ಒಳ್ಳೆಯದೇ. ಆದರೆ ಅದಷ್ಟೇ ಸಾಲದು. ಸುಧಾ­ರಣೆಯೂ ಅಗತ್ಯವಾಗಿ ಆಗಬೇಕು.
 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.