ADVERTISEMENT

ಸಾಂಸ್ಕೃತಿಕ ಪರಿಭಾಷೆಯಾಗಿ ಧರ್ಮ

ಕೆ.ಸತ್ಯನಾರಾಯಣ
Published 27 ಮಾರ್ಚ್ 2016, 19:30 IST
Last Updated 27 ಮಾರ್ಚ್ 2016, 19:30 IST

ಹುಸಿ ಮತ್ತು ಗೊಡ್ಡು ಧಾರ್ಮಿಕ ರಾಜಕಾರಣವನ್ನು ಗಾಂಧಿವಾದದ ಮೂಲಕ ಎದುರಿಸಬಹುದು, ಎದುರಿಸಬೇಕು ಎಂಬ  ಪ್ರಸನ್ನರ ವಿಚಾರವನ್ನು ಸ್ವಾಗತಿಸುತ್ತಲೇ (ವಿಶ್ಲೇಷಣೆ, ಪ್ರ.ವಾ., ಮಾರ್ಚ್‌ 12) ನಮ್ಮ ಬಹುತೇಕ ರಾಜಕೀಯ ಪಕ್ಷಗಳು, ಚಿಂತಕರು, ಸಾಂಸ್ಕೃತಿಕ ಲೋಕದ ವಕ್ತಾರರು ಧರ್ಮ, ಸಂಸ್ಕೃತಿ, ರಾಜಕಾರಣ ಹಾಗೂ ಸಾಮಾಜಿಕ ಜೀವನದ ನಡುವೆ ಇರುವ ಸಂಬಂಧವನ್ನು ಗ್ರಹಿಸಲು ಎಲ್ಲಿ, ಹೇಗೆ ವಿಫಲರಾದರು ಎಂಬುದನ್ನು ಚರ್ಚಿಸುವುದು ಹೆಚ್ಚು  ಪ್ರಯೋಜನಕಾರಿಯಾಗಬಲ್ಲದೇನೋ?
ಪ್ರಗತಿಪರರಲ್ಲಿ ಬಹುಪಾಲು ಚಿಂತಕರು ಧರ್ಮ– ಸಂಸ್ಕೃತಿ ಪರಿಕಲ್ಪನೆಗಳನ್ನು ಜಡವಾಗಿ ಗ್ರಹಿಸಿದರು. ಧರ್ಮದ ಸಾಂಸ್ಥಿಕ ಮತ್ತು ಗ್ರಾಂಥಿಕ ರೂಪಕ್ಕೆ ಮಾತ್ರ ಪ್ರತಿಕ್ರಿಯಿಸಿದರು.

ಧರ್ಮ ಮತ್ತು ಸಂಸ್ಕೃತಿಯೆಂಬುದು ಒಂದು ದೇಶದ ಜೀವನದಲ್ಲಿ ಆಚರಣೆಯಾಗಿ, ನಂಬಿಕೆಯಾಗಿ, ಹಬ್ಬ ಹರಿದಿನವಾಗಿ, ನೈತಿಕ ಪ್ರೇರಣೆಯಾಗಿ, ಕಲೆ ಮತ್ತು ಸೌಂದರ್ಯದ ಪ್ರೇರಣೆಯಾಗಿಯೂ ಕೆಲಸ ಮಾಡುತ್ತಾ ನಾನಾ ರೀತಿಯಲ್ಲಿ, ನಾನಾ ಸ್ತರಗಳಲ್ಲಿ ಹಾಸುಹೊಕ್ಕಾಗಿರುತ್ತದೆಂಬುದನ್ನು ಗ್ರಹಿಸುವಲ್ಲಿ ವಿಫಲರಾದರು. ಗ್ರಹಿಸಿದವರು ಕೂಡ ಅಧ್ಯಯನದ ಮಟ್ಟಿಗೆ ಒಂದು ವಿಚಾರವಾಗಿ, ಒಳನೋಟವಾಗಿ ಗ್ರಹಿಸುತ್ತಿದ್ದರೇ ಹೊರತು ಸಮಕಾಲೀನ ಬದುಕಿನಲ್ಲಿ ಈ ಪ್ರೇರಣೆಗಳೆಲ್ಲ ಹೇಗೆ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿವೆ ಎಂಬ ದಿಕ್ಕಿನಲ್ಲಿ ಯೋಚಿಸಲಿಲ್ಲ.

20ನೇ ಶತಮಾನದ ರಾಜಕೀಯ ನಾಯಕರಲ್ಲಿ ಗಾಂಧೀಜಿ ಮತ್ತು ರಾಮಮನೋಹರ ಲೋಹಿಯಾ ಇವರಿಬ್ಬರ ಚಿಂತನೆಗಳಲ್ಲಿ ಇಂತಹ ಪ್ರೇರಣೆಗಳನ್ನು ಗಾಢವಾಗಿ ಅರ್ಥ ಮಾಡಿಕೊಂಡು ಹೊಸ ಸಮಾಜವನ್ನು, ನಾಗರಿಕತೆಯನ್ನು ಕುರಿತು ಯೋಚಿಸಿರುವುದನ್ನು ಕಾಣುತ್ತೇವೆ. ಗಾಂಧಿ ನೈತಿಕ, ಆಧ್ಯಾತ್ಮಿಕ ಪ್ರೇರಣೆ ಮತ್ತು ಆಯಾಮಗಳ ಕಡೆಗೇ ಹೆಚ್ಚು ಗಮನ ಕೊಟ್ಟರೆ, ಲೋಹಿಯಾ ಅವರಲ್ಲಿ ಧರ್ಮ, ಸಂಸ್ಕೃತಿಯ ಸಾಂಸ್ಕೃತಿಕ, ಸೌಂದರ್‍ಯಾತ್ಮಕ ಪ್ರೇರಣೆ, ಆಯಾಮಗಳ ಕಡೆ ವಿಶೇಷ ಗಮನವಿರುವುದನ್ನು ನೋಡಬಹುದು.

ಇವರಿಬ್ಬರಿಗೂ ಸಮಾನವಾದ ಒಂದು ಅಂಶವೆಂದರೆ, ಧರ್ಮ ಮತ್ತು ಸಂಸ್ಕೃತಿಯಲ್ಲಿ ಸಾತತ್ಯದ ಪಾತ್ರ ಕುರಿತು ಇದ್ದ ಖಚಿತವಾದ ತಿಳಿವಳಿಕೆ. ಧರ್ಮ, ಸಂಸ್ಕೃತಿ ಮತ್ತು ಬದುಕಿನ ನಡುವೆ ಇರುವ ಸಂಬಂಧವನ್ನು ಈ ಇಬ್ಬರು ಚಿಂತಕರು ವಿವೇಕಾನಂದರಿಗಿಂತಲೂ ಹೆಚ್ಚು ಸಂಕೀರ್ಣವಾಗಿ ಗ್ರಹಿಸಿದ್ದರು ಎಂಬುದನ್ನು ಕೂಡ ಮರೆಯಬಾರದು.

ಗಾಂಧಿಯವರ ನಾಗರಿಕತೆಯ ಕಲ್ಪನೆ ಮತ್ತು ಚಿಂತನೆಗಳನ್ನು ಕಾಂಗ್ರೆಸ್‌ ಪಕ್ಷವಾಗಲಿ ನಮ್ಮ ಸಮಾಜವಾಗಲಿ ಎಂದೂ ಅಂತರಂಗದೊಳಕ್ಕೆ ತೆಗೆದುಕೊಳ್ಳದೆ ಇದ್ದುದರಿಂದ ಗಾಂಧಿ ರಾಜಕಾರಣವನ್ನು ಗ್ರಹಿಸುತ್ತಿದ್ದ ಧಾರ್ಮಿಕ,  ಸಾಂಸ್ಕೃತಿಕ ಪರಿಭಾಷೆಯಿಂದ ದೇಶವು ದೂರ ಸರಿದದ್ದನ್ನು ಸ್ವಲ್ಪವಾದರೂ ಅರ್ಥ ಮಾಡಿಕೊಳ್ಳಬಹುದು. ಲೋಹಿಯಾ ಅವರ ಬದುಕು ಮತ್ತು ಚಿಂತನೆಯಲ್ಲಿ ಅವರ ಪಕ್ಷ  ಮತ್ತು ಅನುಯಾಯಿಗಳು ‘ರಾಜಕೀಯ ಲೋಹಿಯಾ’ರನ್ನು ಮುನ್ನೆಲೆಗೆ ತಂದು ಬಳಸಿಕೊಂಡಷ್ಟು ‘ಸಾಂಸ್ಕೃತಿಕ ಲೋಹಿಯಾ’ರನ್ನು ಮುನ್ನೆಲೆಗೆ ತರಲಿಲ್ಲ.

ಇವತ್ತು ಯಾರೊಬ್ಬರೂ ‘ಸಾಂಸ್ಕೃತಿಕ ಲೋಹಿಯಾ’ರ ಆಯಾಮಗಳ ಕುರಿತು ಹೆಚ್ಚಾಗಿ ಮಾತನಾಡುವುದೂ ಇಲ್ಲ. ಹೀಗಾಗಿ ಧರ್ಮ ಮತ್ತು ಸಂಸ್ಕೃತಿ ಒಂದು ದೇಶದ ಬದುಕಿನಲ್ಲಿ ಪ್ರಕಟಗೊಳ್ಳುವ ಸಾಂಸ್ಕೃತಿಕ ಪರಿಭಾಷೆಯ ಎರಡು ಮುಖ್ಯ ನುಡಿಗಟ್ಟುಗಳನ್ನು ನಾವು ಸರಿಯಾಗಿ ಬಳಸಿಕೊಳ್ಳದೆ, ಅನ್ವಯಿಸಿಕೊಳ್ಳದೆ ಹೋದದ್ದರಿಂದ ನಿರ್ಮಾಣವಾದ ಶೂನ್ಯವನ್ನು ಜಗದ್ಗುರುಗಳು, ಮಠಮಾನ್ಯಗಳು, ಹುಸಿ ಧಾರ್ಮಿಕ ವಕ್ತಾರರು ಮತ್ತು ಇಂತಹವರೆಲ್ಲ ಬೆಂಬಲಿಸುವ ರಾಜಕೀಯ ಪಕ್ಷಗಳು, ಸಾಂಸ್ಕೃತಿಕ ಸಂಘಟನೆಗಳು ಕ್ರಮೇಣವಾಗಿ, ಸುಲಭವಾಗಿ ಆಕ್ರಮಿಸಿಕೊಂಡವು. ಇವತ್ತಿನ ದಿನಮಾನದಲ್ಲಿ ಧರ್ಮ ಮತ್ತು ಸಂಸ್ಕೃತಿ ಕುರಿತು ಈ ವರ್ಗದ ಜನರು ಮಾತನಾಡುತ್ತಿರುವುದೇ ನಿಜವೆಂದು ಭಾವಿಸಿರುವ ಜನವರ್ಗ ಕೂಡ ಸಂಖ್ಯೆಯಲ್ಲೂ, ಪ್ರಭಾವದಲ್ಲೂ ಹೆಚ್ಚುತ್ತಲೇ ಇದೆ.

ಕನ್ನಡ ಲೇಖಕರಲ್ಲೂ, ಚಿಂತಕರಲ್ಲೂ ಈ ದೃಷ್ಟಿಯಿಂದ ಕಂಡುಬರುವ ಬರವಣಿಗೆ ಕುತೂಹಲಕಾರಿಯಾದದ್ದು. ಡಿವಿಜಿಯವರು 1908 ಮತ್ತು 1909ರಷ್ಟು ಹಿಂದೆಯೇ Religion and Nationalism in India ಮತ್ತು Vedanta and Nationalism ಎಂಬ ಪುಸ್ತಕಗಳನ್ನು ಪ್ರಕಟಿಸಿದ್ದರು. ರಾಷ್ಟ್ರೀಯತೆ, ದೇಶಪ್ರೇಮದಂತಹ ಪರಿಕಲ್ಪನೆಗಳನ್ನು ಸಾಂಸ್ಕೃತಿಕ ಮತ್ತು ವೇದಾಂತದ ಪರಿಭಾಷೆಯಲ್ಲಿ ಮಂಡಿಸುತ್ತಾ ರಾಷ್ಟ್ರೀಯತೆ, ರಾಷ್ಟ್ರಭಕ್ತಿಯೆಂಬುದು ಆತ್ಮವಿಕಾಸ, ಆತ್ಮ ವಿಸ್ತರಣೆಯಲ್ಲಿ ಒಂದು ಹಂತ ಮಾತ್ರ, ರಾಷ್ಟ್ರೀಯತೆಯು ಸಕಾರಾತ್ಮಕವಾಗಿಯೂ, ಪರಿಶುದ್ಧವಾಗಿಯೂ ಉಳಿಯಬೇಕಾದರೆ ಮಾನವತಾವಾದ ಮತ್ತು ಅಂತರರಾಷ್ಟ್ರೀಯತೆಯಿಂದ ಪ್ರೇರಣೆ ಪಡೆಯಲೇಬೇಕು ಎಂದು ಅವರು ಸೂಚಿಸುತ್ತಾರೆ. ಯುರೋಪಿನ ರಾಷ್ಟ್ರೀಯತೆಯು ಮಾನವತಾವಾದ, ಅಂತರರಾಷ್ಟ್ರೀಯತೆಯಿಂದ ಪ್ರೇರಣೆ ಪಡೆಯದೆ ಹೋದದ್ದರಿಂದಲೇ ಅದು ಶ್ವೇತ ಜನಾಂಗದ ಪ್ರೇಮವಾಗಿ ಮಾತ್ರ ಬೆಳೆಯುತ್ತಾ ಹೋಯಿತು ಎಂಬ ಅಭಿಪ್ರಾಯವನ್ನೂ ಉಲ್ಲೇಖಿಸುತ್ತಾರೆ.

ಧರ್ಮ, ಸಂಸ್ಕೃತಿಯ ಭಿನ್ನ ಮತ್ತು ಆಳವಾದ ಪ್ರೇರಣೆಗಳನ್ನು ಸರಿಯಾಗಿ ಗುರುತಿಸಿದ್ದರಿಂದಲೇ ಡಿವಿಜಿಯಂಥವರಿಗೆ ವೇದಾಂತ ಮತ್ತು ಧಾರ್ಮಿಕ ನುಡಿಗಟ್ಟಿನಲ್ಲಿ ಯೋಚಿಸುತ್ತಾ ಕೂಡ ರಾಷ್ಟ್ರೀಯತೆ, ರಾಷ್ಟ್ರಪ್ರೇಮದ ವಿಪರೀತಗಳ ಹಾನಿಯನ್ನು ಗುರುತಿಸಲು ಒಂದು ಶತಮಾನದ ಹಿಂದೆಯೇ ಸಾಧ್ಯವಾಯಿತು. ಇವತ್ತಿನ ಧಾರ್ಮಿಕ ಧುರೀಣರಿಗೆ ಧರ್ಮದ ಸಾಂಸ್ಕೃತಿಕ ಪರಿಭಾಷೆಯನ್ನು ಇಷ್ಟು ಸೂಕ್ಷ್ಮವಾಗಿ ಅರ್ಥಮಾಡಿಕೊಳ್ಳಲು ಸಾಧ್ಯವಾಗಬಹುದೇ? ಪ್ರಯತ್ನ ಕೂಡ ಆ ದಿಕ್ಕಿನಲ್ಲಿ ಇಲ್ಲವೆನಿಸುತ್ತದೆ (ಮಾರ್ಚ್‌ 17, ಡಿವಿಜಿಯವರ 129ನೇ ಹುಟ್ಟುಹಬ್ಬ).

ಕುವೆಂಪುರವರಲ್ಲಿ ಧರ್ಮವು  ಒಂದು ಸಾಂಸ್ಕೃತಿಕ ಪರಿಭಾಷೆಯಾಗಿ ಪ್ರಕಟಗೊಳ್ಳುವ ಎಲ್ಲ ವೈವಿಧ್ಯಮಯ ಆಯಾಮಗಳನ್ನೂ ನಾವು ಕಾಣಬಹುದು. ಒಂದು ಸಮಾಜದ ಬೇರೆ ಬೇರೆ ಜನಾಂಗಗಳ ಮತ್ತು ಬೇರೆ ಬೇರೆ ತಲೆಮಾರುಗಳ ಮೇಲೆ ಗಾಢವಾಗಿ ಪರಿಣಾಮ ಬೀರುವ ಹಾಗೆ ಸಾಂಸ್ಕೃತಿಕ ಪರಿಭಾಷೆಯಲ್ಲಿ ಕುವೆಂಪುವಿನ ಹಾಗೆ ಬರೆಯಬಲ್ಲವರು ಎಲ್ಲ ಕಾಲದಲ್ಲೂ ಎಲ್ಲ ಸಂಸ್ಕೃತಿಯಲ್ಲೂ ಕಡಿಮೆಯೇ.

ದಲಿತ ಬಂಡಾಯ ಮನೋಧರ್ಮದ ಲೇಖಕರು ಧರ್ಮದ ಸಾಂಸ್ಕೃತಿಕ ಪರಿಭಾಷೆಯ ಸ್ವರೂಪವನ್ನು ಕುವೆಂಪು ಗ್ರಹಿಸಿದಷ್ಟು ಗಾಢ, ವೈವಿಧ್ಯಮಯವಾಗಿ ಗ್ರಹಿಸಲಿಲ್ಲವೆನಿಸುತ್ತದೆ. ತಡವಾಗಿಯಾದರೂ ದೇವನೂರ ಮಹಾದೇವರಂತಹ ಲೇಖಕರು ಈಚಿನ ಜನನುಡಿ ಸಮ್ಮೇಳನದಲ್ಲಿ ಧರ್ಮ ಮತ್ತು ಸಂಸ್ಕೃತಿ ಕುರಿತಂತೆ ಕುವೆಂಪು ಅವರ ಪ್ರತಿಮಾತ್ಮಕ ಗ್ರಹಿಕೆಯ ಸ್ವರೂಪದ ಬಗ್ಗೆ ಗಮನ ಸೆಳೆದಿದ್ದಾರೆ. ಇದೇ ತಲೆಮಾರಿನ ಮಾಸ್ತಿ ಮತ್ತು ಬೇಂದ್ರೆ ಧರ್ಮದ, ಸಂಸ್ಕೃತಿಯ ಸಾಂಸ್ಕೃತಿಕ ಪರಿಭಾಷೆಯನ್ನು ಗ್ರಹಿಸುವ ಕ್ರಮದಲ್ಲಿ ಬೇರೆ ಬೇರೆ ಸಾಧ್ಯತೆ ಗಳನ್ನು ತೋರಿಸಿ ಕೊಡುತ್ತಾರೆ. ಈ ಟಿಪ್ಪಣಿಗಿರುವ ಉದ್ದೇಶದ ಹಿನ್ನೆಲೆಯಲ್ಲಿ ಅದನ್ನು ಇಲ್ಲಿ ಚರ್ಚಿಸುತ್ತಿಲ್ಲ.

ನವ್ಯರಲ್ಲಿ ಸಾಮಾಜಿಕತೆ, ಮೂರ್ತಿ ಭಂಜಕತೆಗೇ ಹೆಚ್ಚು ಪ್ರಾಮುಖ್ಯವಿದ್ದುದರಿಂದ ಧರ್ಮ, ಸಂಸ್ಕೃತಿಯ ಸಾಂಸ್ಥಿಕ, ಗ್ರಾಂಥಿಕ ಸ್ವರೂಪಗಳ ಬಗ್ಗೆಯೇ ಹೆಚ್ಚು ಗಮನ ಕೇಂದ್ರೀಕೃತವಾಗಿ ಪ್ರತಿಭಟನೆಯ ಸೆಲೆಗಳು ಮುನ್ನೆಲೆಗೆ ಬಂದವು. ಈ ಪ್ರತಿಭಟನೆ,  ವಿರೋಧಗಳಿಂದಾಗಿ ಸಾಮಾಜಿಕವಾಗಿ ಒಳ್ಳೆಯ ಪರಿಣಾಮಗಳಾಗಿರಬಹುದಾದರೂ ಧರ್ಮ ಮತ್ತು ಸಂಸ್ಕೃತಿಯ ಪ್ರೇರಣೆಗಳು ನಮ್ಮ ಜೀವನದಲ್ಲಿ ಹೇಗೆ ಹಾಸುಹೊಕ್ಕಾಗಿವೆ ಎಂಬುದನ್ನು ಅರ್ಥೈಸಿಕೊಳ್ಳುವುದು ಕೂಡ ಸಾಂಸ್ಕೃತಿಕ ಪ್ರಜ್ಞೆಯ ಒಂದು ಮುಖ್ಯ ಮಾನದಂಡವೆನ್ನುವುದಾದರೆ ನವ್ಯ ಗ್ರಹಿಕೆಯ ಸೀಮಿತ ವ್ಯಾಪ್ತಿ ಸ್ಪಷ್ಟವಾಗುತ್ತದೆ. ಈ ಮಿತಿಯ ಅರಿವು ಮತ್ತು ಅದರಿಂದ ಹೊರಬರುವುದಕ್ಕಾಗಿ ಬೇಕಾದ ಸೃಜನಶೀಲ ಚಡಪಡಿಕೆ ಎರಡನ್ನೂ ಲಂಕೇಶ್‌ ಅವರ ಕೊನೆ ಘಟ್ಟದ ಕತೆಗಳಲ್ಲಿ ಕಾಣಬಹುದು.

ಬೇರೆ ಬೇರೆ ತಲೆಮಾರಿನ ಮನೋಧರ್ಮದ ಚಿಂತಕರನ್ನು, ಲೇಖಕರನ್ನು ಇಲ್ಲಿ ಸಂಕ್ಷಿಪ್ತವಾಗಿ ಪ್ರಸ್ತಾಪಿಸಿರುವ ಉದ್ದೇಶವಿಷ್ಟೆ. ಧರ್ಮ ಮತ್ತು ಸಂಸ್ಕೃತಿಯನ್ನು ಒಂದು ಪರಿಭಾಷೆಯೆಂದು ಭಾವಿಸುವುದಾದರೆ ಆ ಪರಿಭಾಷೆಯ ನುಡಿಗಟ್ಟು ವೈವಿಧ್ಯ, ಶ್ರೀಮಂತಿಕೆ ಹಾಗೂ ಪ್ರಸ್ತುತತೆಯ ಬಗ್ಗೆ ನಮ್ಮ ಗಮನ ಉದ್ದೇಶಪೂರ್ವಕವಾಗಿಯೇ ಹರಿದಿಲ್ಲ. ಈ ಪರಿಭಾಷೆಯನ್ನು ಸರಿಯಾಗಿ ಗ್ರಹಿಸಿ ನಮ್ಮದನ್ನಾಗಿ ಮಾಡಿಕೊಳ್ಳುವತನಕ, ಧರ್ಮ, ಸಂಸ್ಕೃತಿ, ಜನಜೀವನದೊಡನೆ ಹಾಸುಹೊಕ್ಕಾಗಿರುವ ಸಂಬಂಧದ ಸ್ವರೂಪ ಕೂಡ ಗೊತ್ತಾಗುವುದಿಲ್ಲ. ಈ ತಿಳಿವಳಿಕೆ ಅಭಾವದಿಂದ ಉಂಟಾಗುವ ಶೂನ್ಯದ ನಾಯಕತ್ವವನ್ನು ಸಹಜವಾಗಿಯೇ ಗೊಡ್ಡು ಮತ್ತು  ಹುಸಿ ಧಾರ್ಮಿಕ ನಾಯಕರು ವಹಿಸುತ್ತಾರೆ. ಇನ್ನು ಗಾಂಧಿ ಮಾರ್ಗವನ್ನು, ಹಿಂದ್‌ ಸ್ವರಾಜ್‌ ಆಶಯಗಳನ್ನು ಪ್ರಸ್ತುತಗೊಳಿಸುವುದಂತೂ ಸದ್ಯಕ್ಕಾದರೂ ಹಗಲುಗನಸಾಗಿಯೇ ಉಳಿಯುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.