ಒಂದೆಡೆ ಸರ್ಕಾರದ ಬಳಿ ಸಾಕಷ್ಟು ಆಹಾರಧಾನ್ಯಗಳ ದಾಸ್ತಾನು ಇದ್ದೂ, ಇನ್ನೊಂದೆಡೆ ಸಮರ್ಪಕವಾದ ಆಹಾರದ ಕೊರತೆಯಿಂದ ಮಕ್ಕಳು ಬಳಲುತ್ತಿವೆ ಮತ್ತು ಅಸುನೀಗುತ್ತಿವೆ. ಚಿಲಿ ದೇಶದ ಕವಿಯೊಬ್ಬರು ಹೇಳಿದಂತೆ, ಮಕ್ಕಳಿಗೆ ನಾಳೆಯೆಂಬುದ್ಲ್ಲಿಲ, ಅವರಿಗೆ ಈ ದಿನ ಮಾತ್ರ. ಅವರ ಎಲುಬು, ರಕ್ತ, ಮನಸ್ಸು ಬೆಳೆಯಬೇಕು. ನಾಳೆಯೆಂದು ಕಾದುಕೂರಲು ಸಾಧ್ಯವೇ? ಈ ಸಮಸ್ಯೆಯಿಂದ ಕರ್ನಾಟಕ ರಾಜ್ಯ ಕೂಡ ಹೊರತಾಗಿಲ್ಲ.
ನಮ್ಮ ರಾಜ್ಯದಲ್ಲಿ ಸಾವಿರಾರು ಮಕ್ಕಳು ಪೌಷ್ಟಿಕ ಆಹಾರ ಕೊರತೆಯಿಂದ ತೀವ್ರವಾಗಿ ಬಳಲುತ್ತಿರುವ ಸಮಸ್ಯೆಗೆ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಲು, ಆದೇಶಿಸುವಂತೆ ಕೋರಿ ಅಥಣಿಯ ವಿಮೋಚನಾ ಸಂಘವೊಂದು ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಗೆ 2011ರ ಅಕ್ಟೋಬರ್‌ನಲ್ಲಿ ದೀರ್ಘ ಪತ್ರವೊಂದನ್ನು ಬರೆಯಿತು.
ಈ ಪತ್ರವನ್ನೇ ಸಾರ್ವಜನಿಕ ಮೊಕದ್ದಮೆಯೆಂದು ಪರಿಗಣಿಸಿ, ವಿಚಾರಣೆಯ ಸಂದರ್ಭಗಳಲ್ಲಿ, ಅರ್ಜಿದಾರರು ನ್ಯಾಯಾಲಯದಲ್ಲಿ ಹಾಜರಿರತಕ್ಕದ್ದೆಂದು, ನ್ಯಾಯಾಲಯವು ಅರ್ಜಿದಾರರಿಗೆ ತಿಳಿಸಿತು. ಅಷ್ಟೇ ಅಲ್ಲದೇ, ಸಂಬಂಧಪಟ್ಟ ಮಾಹಿತಿಗಳನ್ನು ಸಂಗ್ರಹಿಸುವ ಜವಾಬ್ದಾರಿಯನ್ನು ಸರ್ಕಾರಕ್ಕೆ ವಹಿಸಿತು; ಸದ್ಯದಲ್ಲಿಯೇ ತೀರ್ಪು ಕೂಡ ಹೊರಬೀಳಲಿದೆಯೆಂಬ ಆಶಾಭಾವನೆಯಿದೆ.
ಅಂತೆಯೇ, ಉದ್ಯಾನನಗರಿ ಎಂದೇ ಖ್ಯಾತಿಗೊಳಗಾದಂಥ ಬೆಂಗಳೂರು, ಮೂರುನಾಲ್ಕು ತಿಂಗಳ ಹಿಂದೆ ಕಸದ ರಾಶಿಯಿಂದ ತುಂಬಿ ತುಳುಕುತ್ತಿತ್ತು. ನಗರದ ಕಸ ವಿಲೇವಾರಿ ಅವ್ಯವಸ್ಥೆಯನ್ನು ಸಹಿಸಲಾಗದೆ, ಬೆಂಗಳೂರು ಮಹಾನಗರ ಸಭೆ ತ್ಯಾಜ್ಯ ವಿಲೇವಾರಿಯನ್ನು ತ್ವರಿತ ಹಾಗೂ ಸಮರ್ಪಕವಾಗಿ ನಿರ್ವಹಿಸುವಂತೆ ಆದೇಶ ನೀಡುವಂತೆ ನಗರದ ನಾಗರಿಕರೊಬ್ಬರು ಹೈಕೋರ್ಟಿನಲ್ಲಿ ಸಾರ್ವಜನಿಕ ಹಿತಾಸಕ್ತಿ ದಾವೆಯನ್ನು ಹೂಡಿದ್ದರು. ನ್ಯಾಯಾಲಯವು ವಿಚಾರಣೆಯನ್ನು ನಡೆಸುತ್ತಿದೆ; ನಗರಸಭೆ ಚುರುಕಾಗಿದೆ.
ನಾಗರಿಕರಿಗೊದಗಿದ ಸಮಸ್ಯೆಗಳಿಗೆ ಉತ್ತರ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳಿಂದ ದೊರಕಿವೆ. ಯಾವುದೇ ವ್ಯಕ್ತಿಗೆ ಆರ್ಥಿಕವಾಗಿ, ಸಾಮಾಜಿಕವಾಗಿ ತೊಂದರೆ ಅಥವಾ ಹಾನಿಯಾದಾಗ, ಆ ವ್ಯಕ್ತಿಗೆ ನ್ಯಾಯ ಸಿಗದಿದ್ದಲ್ಲಿ, ತೊಂದರೆಗೊಳಗಾದವನು ನ್ಯಾಯಾಲಯದ ಮೊರೆ ಹೋಗುವುದು ಸಾಮಾನ್ಯ.
ಜನಸಮುದಾಯದ ತೊಂದರೆಗಳಿಗೆ, ಪರಿಹಾರ ಸಿಗದಿದ್ದಾಗ, ಯಾವುದೇ ಮೂರನೇ ವ್ಯಕ್ತಿ /ನಾಗರಿಕ ಅಥವಾ ಸಂಘಸಂಸ್ಥೆಗಳು ಕೂಡ ಆ ತೊಂದರೆಗೆ ಜವಾಬ್ದಾರರಾದವರ ವಿರುದ್ಧ ನ್ಯಾಯಾಲಯದಲ್ಲಿ ಮೊಕದ್ದಮೆಯನ್ನು ಹೂಡಬಹುದು. ತೊಂದರೆಯನ್ನು ಅನುಭವಿಸುವ ವ್ಯಕ್ತಿಯೇ ಖಟ್ಲೆ ಹಾಕಬೇಕೆಂದಿಲ್ಲ.
ಮೂಲೋದ್ದೇಶ ಸಾರ್ವಜನಿಕರ ಹಿತರಕ್ಷಣೆಯಾಗಿರುವುದು ಅಗತ್ಯ. ಈ ರೀತಿಯ ದಾವೆಯನ್ನು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಎನ್ನುತ್ತೇವೆ (ಪಬ್ಲಿಕ್ ಇಂಟರೆಸ್ಟ್ ಲಿಟಿಗೇಷನ್, ಪಿಐಎಲ್).
ಮೂಲಭೂತ ಹಕ್ಕುಗಳ ಉಲ್ಲಂಘನೆಯಾದಾಗ, ಸರ್ಕಾರಿ ನೀತಿ ಅಥವಾ ಕಾರ್ಯಾಚರಣೆ ಜನಸಾಮಾನ್ಯರ ಹಿತಕ್ಕೆ ವಿರುದ್ಧವಾದಾಗ, ಸ್ಥಳೀಯ ಸಂಸ್ಥೆಯಿಂದ ನಾಗರಿಕ ಸೌಲಭ್ಯಗಳು ಒದಗಬೇಕಾದರೆ ಈ ರೀತಿಯ ದಾವೆ ಹಾಕಬಹುದು. ಮೊಕದ್ದಮೆಯ ಉದ್ದೇಶ ಸೀಮಿತವಾಗಿರದೆ, ಒಟ್ಟಾರೆ ಸ್ಥಳೀಯ, ರಾಜ್ಯದ ಅಥವಾ ರಾಷ್ಟ್ರದ ಜನತೆಯ ಹಿತಾಸಕ್ತಿಯೇ ಮುಖ್ಯವಾಗಿರುವುದು ಅವಶ್ಯ.
ಸರ್ಕಾರ, ಲೋಕಸಭೆ, ರಾಜ್ಯಸರ್ಕಾರ ಅಥವಾ ವಿಧಾನಸಭೆ, ಸ್ಥಳೀಯ ಸರ್ಕಾರ ಅಥವಾ ಯಾವುದೇ ಸರ್ಕಾರದ ಅಂಗಸಂಸ್ಥೆಗಳ ವಿರುದ್ಧ ಮೊಕದ್ದಮೆಯನ್ನು ಹೂಡಬಹುದು. ಹೈಕೋರ್ಟ್ ಅಥವಾ ಸುಪ್ರೀಂ ಕೋರ್ಟಿನಲ್ಲಿಯೇ ನಿವೇದನೆ (ರಿಟ್ ಪೆಟಿಷನ್) ಸಲ್ಲಿಸುವುದು ಅನಿವಾರ್ಯ.
1980 ರ ಪೂರ್ವದಲ್ಲಿ ಈ ರೀತಿಯ ಮೊಕದ್ದಮೆಗಳಿಗೆ ಅವಕಾಶವಿರಲಿಲ್ಲ. 1977ರ ತುರ್ತುಪರಿಸ್ಥಿತಿಯಲ್ಲಿ, ಸರ್ಕಾರದ ದಮನಕಾರಿ ಪ್ರವೃತ್ತಿಯಿಂದಾಗಿ, ಅರಾಜಕತೆ ಎಲ್ಲೆಲ್ಲೂ ತಾಂಡವವಾಡುತ್ತಿದ್ದ ಕಾಲದಲ್ಲಿ, ಅಮಾಯಕರು, ರಾಜಕೀಯ ವಿರೋಧಿಗಳು, ಸಾಮಾಜಿಕ ಕಾರ್ಯಕರ್ತರು ನಾಗರಿಕ ಹಕ್ಕಿನಿಂದ ವಂಚಿತರಾಗಿದ್ದರು.
ತುರ್ತುಪರಿಸ್ಥಿತಿ ನಂತರದಲ್ಲಿ, ಸರ್ವೋಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳು ನಾಗರಿಕ ಹಕ್ಕಿನಿಂದ ವಂಚಿತರಾದ ಶ್ರೀಸಾಮಾನ್ಯರಿಗೆ ನ್ಯಾಯ ಒದಗಿಸಲು ಮುಂದಾದರು. ಜನಸಾಮಾನ್ಯರಿಗೂ ತುರ್ತು ಪರಿಸ್ಥಿತಿಯ ಬಿಸಿಯ ನೆನಪು ಮಾಸಿರಲಿಲ್ಲ. ನ್ಯಾಯಾಧೀಶರುಗಳು, ತನಿಖಾ ಪತ್ರಿಕೋದ್ಯಮ, ಮಾಧ್ಯಮಗಳು, ಸಾರ್ವಜನಿಕರ ಸಾಮಾಜಿಕ ಕಳಕಳಿಯಿಂದಾಗಿ, ಪಿಐಎಲ್‌ಗೆ ಒಂದು ಸ್ಪಷ್ಟ ರೂಪ ಬಂದಿತು. ಈಗಲೂ, ಸಂವಿಧಾನಾತ್ಮಕ ಸಾಮಾಜಿಕ ಮತ್ತು ಆರ್ಥಿಕ ಹಕ್ಕುಗಳಿಗಾಗಿ ದಾವೆ ಹೂಡಲು ಯಾವುದೇ ಶಾಸನವಿಲ್ಲ, ಆದರೂ ಉಚ್ಚ ನ್ಯಾಯಾಲಯವು ಜನತೆಗೆ ಅವರ ಹಕ್ಕುಗಳಿಗಾಗಿ ದಾವೆ ಹೂಡಲು ಅವಕಾಶ ಮಾಡಿಕೊಟ್ಟಿದೆ. ಅದರ ಫಲವೇ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ.
ಉದಾಹರಣೆಗೆ, ಸಂವಿಧಾನದ ಅನುಚ್ಛೇದ 21ರಲ್ಲಿ ಬದುಕುವ ಹಕ್ಕನ್ನು ವಿಸ್ತರಿಸಿ, ಗೌರವದಿಂದ ಬದುಕುವುದು, ವಿದ್ಯಾಭ್ಯಾಸದ ಹಕ್ಕು, ಉಚಿತ ಕಾನೂನು ಹಕ್ಕು, ಕೆಲಸ ಮಾಡುವ ಹಕ್ಕು, ಹಿಂಸೆಯಿಂದ ಮುಕ್ತಿ, ಇಂತಹ ಹಲವಾರು ವಿಷಯಗಳನ್ನು ಮುಂದಿಟ್ಟುಕೊಂಡು ಶ್ರೀಸಾಮಾನ್ಯರು ತಮ್ಮ ಹಕ್ಕಿಗಾಗಿ ಹೋರಾಡುವ ಮಾರ್ಗವನ್ನು ನ್ಯಾಯಾಲಯವು ತೋರಿಸಿಕೊಟ್ಟಿದೆ.
ಈ ಮೊಕದ್ದಮೆಗಳು ಮಾನವೀಯ ಮತ್ತು ಬಳಕೆದಾರರ ಹಕ್ಕುಗಳ ಹಾಗೂ ವನ್ಯಜೀವಿ ಮತ್ತು ಪರಿಸರ ಸಂರಕ್ಷಣೆಯಲ್ಲಿ ಪ್ರಮುಖ ಪಾತ್ರವಹಿಸಿತು. ನೊಂದ, ಬೆಂದ ನಾಗರಿಕರಿಗೆ ನ್ಯಾಯ ಸಮ್ಮತವಾದ ಪರಿಹಾರೋಪಾಯ ಕಡಿಮೆ ಖರ್ಚಿನಲ್ಲಿ ದೊರಕಿದಂತಾಯಿತು.
1979ರಲ್ಲಿ ಪ್ರಪ್ರಥಮವಾದ ಪಿಐಎಲ್ ಕೇಸ್ ಆದದ್ದು ಹುಸ್ಸೈನಾರಾ ಖತೂನ್ ಮತ್ತು ಬಿಹಾರ ರಾಜ್ಯ ಸರ್ಕಾರಗಳ ನಡುವೆ. ಪತ್ರಿಕಾ ವರದಿಯನ್ನು ಆಧರಿಸಿ, ಯಾವುದೇ ವಿಚಾರಣೆಯಿಲ್ಲದೆ, ಅಮಾನವೀಯ ಸ್ಥಿತಿಯಲ್ಲಿ ಸಾವಿರಗಟ್ಟಲೆ ಜನರು ಕಾರಾಗೃಹಗಳಲ್ಲಿ ಬಂದಿಗಳಾಗಿ ಆಯುಷ್ಯ ಸವೆಸುತ್ತಿದ್ದಾರೆಂದು ವಕೀಲರೊಬ್ಬರು ದಾವೆ ಹಾಕಿದರು. ಈ ಪ್ರಕ್ರಿಯೆಯಿಂದಾಗಿ 40 ಸಾವಿರ ಬಂಧಿತರ ಬಿಡುಗಡೆಯಾಯಿತು.
ಯಾವುದೇ ಜನಪರ ಕಾನೂನು ಅಥವಾ ಶಾಸನಗಳ ಸೌಲಭ್ಯಗಳು ಬಂದರೂ, ಅದರ ದುರುಪಯೋಗವಾಗುವುದು ಸಾಮಾನ್ಯ. ಇದಕ್ಕೆ ಪಿಐಎಲ್ ಪರಿಕಲ್ಪನೆ ಹೊರತಾಗಿಲ್ಲವೆಂಬುದು ವಿಷಾದನೀಯ. ಪಿಐಎಲ್ ಕಡಿಮೆ ಖರ್ಚಿನಲ್ಲಿ ಲಾಭ ಮಾಡಿಕೊಳ್ಳುವ ಅಸ್ತ್ರವಾಗಿ ಪರಿಣಮಿಸಿತು.
ಅನೇಕರು, ಕ್ಷುಲ್ಲಕ ವಿಚಾರವನ್ನು ಸಾರ್ವಜನಿಕ ಹಿತಾಸಕ್ತಿಯಂತೆ ಬೆಳೆಸಿ, ಪಿಐಎಲ್ ಗಳನ್ನು ಬಳಸಿ, ಅದರಿಂದ ಲಾಭ ಪಡೆಯತೊಡಗಿದರು. ಖಾಸಗಿ ವಿಚಾರವನ್ನು ಸಾರ್ವಜನಿಕರಿಗೆ ತೊಂದರೆಯಾದಂತೆ ತೋರಿಸುವ ಮೊಕದ್ದಮೆಗಳು ಹೆಚ್ಚಾದವು. ನ್ಯಾಯಾಲಯಗಳು ಪಿಐ ದಾವೆಗಳನ್ನು ಸಂಶಯದಿಂದ ನೋಡುವಂತಹ ಸ್ಥಿತಿ ನಿರ್ಮಾಣವಾಯಿತು. ಪಿಐಎಲ್ ಗಳ ದುರ್ಬಳಕೆಯನ್ನು ನಿಯಂತ್ರಿಸುವುದಕ್ಕಾಗಿ, ನ್ಯಾಯಾಲಯವು ಕೆಲವು ಮಾರ್ಗದರ್ಶಿ ಸೂತ್ರಗಳನ್ನು ಸಿದ್ಧಪಡಿಸಿತು.
ನ್ಯಾಯಾಲಯವು ಅರ್ಜಿದಾರನು ನಂಬಿಕೆಗೆ ಯೋಗ್ಯನಾದವನು, ಯಾವುದೇ ವೈಯಕ್ತಿಕ ಲಾಭ ದೃಷ್ಟಿಯಿಲ್ಲದೇ ಅಥವಾ ರಾಜಕೀಯ ಆಸಕ್ತಿಯಿಲ್ಲದೆ, ಸಾರ್ವಜನಿಕ ಹಿತವನ್ನೇ ಗಮನದಲ್ಲಿಟ್ಟುಕೊಂಡಿದ್ದಾನೆಂದು ಖಚಿತ ಪಡಿಸಿಕೊಳ್ಳುತ್ತದೆ. ಆ ರೀತಿಯ ಮೊಕದ್ದಮೆಗಳಿಂದಾಗಿ ಯಾವುದೇ ಜನಪರ ಯೋಜನೆಗಳು ಸ್ಥಗಿತಗೊಂಡು, ಮೊಕದ್ದಮೆಗೆ ಸೋಲಾದರೆ, ಯೋಜನೆ ವಿಳಂಬಗೊಳ್ಳುವುದರಿಂದುಂಟಾಗುವ ಹಾನಿಯನ್ನು ಅರ್ಜಿದಾರನು ತುಂಬಿಕೊಡಬೇಕೆಂದು ನ್ಯಾಯಾಲ ತನ್ನ ಮಾರ್ಗದರ್ಶಿಯಲ್ಲಿ ಸೂಚಿಸಿತು.
ಇದರಿಂದಾಗಿ ನ್ಯಾಯಸಮ್ಮತವಾದ ಕಾರಣಗಳಿದ್ದರೂ, ಜನರು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಹೂಡಲು ಹಿಂಜರಿಯುತ್ತಿದ್ದಾರೆ. ಬಹುಶಃ ಈ ಕಾರಣದಿಂದಾಗಿಯೋ ಏನೋ ವಿಶೇಷ ಆರ್ಥಿಕ ವಲಯಗಳನ್ನು ಸ್ಥಾಪಿಸುವಾಗ, ಅನೇಕರು ತೊಂದರೆಗೊಳಗಾಗಿದ್ದರೂ ಕೂಡ ಪಿಐಎಲ್ ನ ಮೊರೆಹೋಗಲಿಲ್ಲ.
ನ್ಯಾಯಾಲಯವು ಅರ್ಜಿದಾರನ ಒಂದು ಪತ್ರವನ್ನು ಸಹ ಪಿಐಎಲ್ ಎಂದು ಪರಿಗಣಿಸಿ, ವಿಚಾರಣೆ ನಡೆಸಬಹುದೆಂಬುದನ್ನು ಮೇಲಿನ ನಿದರ್ಶನದಲ್ಲಿ ನೋಡಿದ್ದೇವೆ. ಆದರೆ ಪತ್ರವನ್ನು ಹಾನಿಗೊಳಗಾದ ವ್ಯಕ್ತಿ ಅಥವಾ ಸಾರ್ವಜನಿಕ ಹಿತರಕ್ಷಣೆಯಲ್ಲಿ ಅತೀವ ಆಸಕ್ತಿಯುಳ್ಳ ವ್ಯಕ್ತಿ ಅಥವಾ ಸಾಮಾಜಿಕವಾಗಿ ಅಥವಾ ಆರ್ಥಿಕವಾಗಿ ಅನುಕೂಲವಾಗಿಲ್ಲದ ಮತ್ತು ನ್ಯಾಯಾಲಯದ ಮೊರೆಹೋಗಲಾಗದಂತವರ ಪರವಾಗಿ, ಯಾವುದೇ ಸಾಮಾಜಿಕ ಕಳಕಳಿಯುಳ್ಳ ಸಂಘಸಂಸ್ಥೆ ಬರೆದಿರಬೇಕು. ಅಂತಹವನ್ನು ನ್ಯಾಯಾಲಯ ಪಿಐಎಲ್ ಎಂದು ಪರಿಗಣಿಸುತ್ತದೆ.
ಅನಾಥ ಮಕ್ಕಳು, ದಿನಗೂಲಿ ಕೆಲಸಗಾರರ ಶೋಷಣೆ, ಆಹಾರ ಕಲಬೆರಕೆ, ಪರಿಸರ ಮಾಲಿನ್ಯ, ಪರಿಸರ ಆಸಮತೋಲನ, ಜೀವರಕ್ಷಕ ಔಷಧಿಗಳು, ಸಂಸ್ಕೃತಿ, ದೊಂಬಿಯಲ್ಲಿ ಅಥವಾ ಮತೀಯ ಗಲಭೆಗಳಲ್ಲಿ ಹಾನಿಗೊಳಗಾದವರು ಈ ಎಲ್ಲ ವಿಷಯಗಳಿಗೆ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಒಂದು ಆಶಾಕಿರಣವಲ್ಲವೇ? ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ, ಎಲ್ಲವುದಕ್ಕಿಂತ ಮಿಗಿಲಾಗಿರಬೇಕಾದುದು, ನಿಷ್ಕಪಟವಾದ ಜನಸಾಮಾನ್ಯರ ಒಳಿತನ್ನು ಬಯಸುವ ಉದ್ದೇಶ.
ಪಿಐಎಲ್ ಹಾಕುವ ವಿಧಾನ
1.ಮೊಕದ್ದಮೆ ಹೂಡುವ ವಿಚಾರವನ್ನು ಪಕ್ಕಾ ಮಾಡಿರಿ
2.ಸಂಬಂಧಪಟ್ಟ ಅಥವಾ ತೊಂದರೆಗೊಳಗಾದ ಗುಂಪಿನೊಂದಿಗೆ ಕೂಲಂಕಷವಾಗಿ ಚರ್ಚಿಸಿರಿ
3.ದಾವೆ ಹಾಕುವಾಗ ಈ ಕೆಳಗಿನ ವಿಷಯಗಳ ಬಗ್ಗೆ ಸಾಕಷ್ಟು ಗಮನವಿಡಿ: ಮೊಕದ್ದಮೆ ತೀರ ದುಬಾರಿಯಾದೀತು ಹಾಗೂ ಕಾಲ ವಿಳಂಬವಾಗಬಹುದು, ಮೊಕದ್ದಮೆ ಮುಂದುವರಿಸುವುದರಿಂದ ಗುಂಪಿನ ಸಾಮರ್ಥ್ಯ ಕುಂದತೊಡಗಬಹುದು, ಪ್ರತಿಕೂಲ ತೀರ್ಮಾನವು ಚಳವಳಿಯ ಬಲವನ್ನು ಕುಂಠಿತಗೊಳಿಸಬಹುದು, ಮೊಕದ್ದಮೆಯಲ್ಲಿ ತೊಡಗಿಕೊಳ್ಳುವುದರಿಂದ ಸಮುದಾಯದ ಗಮನ ಮುಖ್ಯ ವಿಷಯದಿಂದ ವಿಮುಖಗೊಳ್ಳಬಹುದು,
4.ಒಮ್ಮೆ ದಾವೆ ಹಾಕುವುದರ ಬಗ್ಗೆ ತೀರ್ಮಾನಿಸಿದ ಮೇಲೆ, ವಿಷಯಕ್ಕೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಂಗ್ರಹಿಸಿರಿ, ಮುಖ್ಯ ವಿಷಯಕ್ಕೆ ಅವಶ್ಯವಾದ ಎಲ್ಲಾ ಸೂಕ್ಷ್ಮ ವಿಚಾರಗಳನ್ನ ಕಲೆಹಾಕಿರಿ, ಫೋಟೊ ಅಗತ್ಯವಿದ್ದಲ್ಲಿ, ನೆಗೆಟಿವ್‌ಗಳನ್ನು ನಿಮ್ಮ ಬಳಿಯಲ್ಲಿಟ್ಟುಕೊಳ್ಳಿ, ಪೋಟೊಗ್ರಾಫರ್‌ರಿಂದ ಅಫಿಡವಿಟ್ ತೆಗೆದುಕೊಳ್ಳಿ, ಸಂಬಂಧಪಟ್ಟ ಎಲ್ಲಾ ಅಧಿಕಾರಿಗಳಿಗೆ ಬರೆಯಿರಿ. ಹಾಗೂ ನಿಮ್ಮ ಬೇಡಿಕೆಯ ಬಗ್ಗೆ ಸ್ಪಷ್ಟತೆಯಿರುವುದು ಅತ್ಯವಶ್ಯ. ದಾಖಲೆಗಳನ್ನ ವ್ಯವಸ್ಥಿತವಾಗಿಡಿ. ನ್ಯಾಯವಾದಿಗಳೊಂದಿಗೆ ಚರ್ಚಿಸಿ.
ಅನುಭವವುಳ್ಳ ವಕೀಲರನ್ನು ನೇಮಿಸಿ, ನೀವೇ ಕೇಸನ್ನ ದಾಖಲಿಸುವುದಾದರೆ, ಸಮರ್ಪಕವಾದ ಒಕ್ಕಣೆ ತಯಾರಿಸಿರಿ. ಸಂಬಂಧಪಟ್ಟ ಎಲ್ಲರಿಗೂ ನೋಟಿಸನ್ನು ಜಾರಿಮಾಡುವುದಗತ್ಯ. ಸರ್ಕಾರಿ ಇಲಾಖೆಯ ವಿರುದ್ಧ ದಾವೆ ಹಾಕುವುದಿದ್ದರೆ, ಸಂಬಂಧಪಟ್ಟ ಅಧಿಕಾರಿಗೆ ಎರಡು ತಿಂಗಳು ಮುಂಚಿತವಾಗಿಯೇ ನೋಟಿಸನ್ನು ಜಾರಿಮಾಡುವುದು ಅವಶ್ಯ.
5.ನೋಂದಾಯಿಸಿದ ಸಂಸ್ಥೆಯು ದಾವೆಯನ್ನು ಹೂಡಬಹುದು. ಇಲ್ಲವಾದಲ್ಲಿ, ಸಕ್ರಿಯ ಸದಸ್ಯನು ವೈಯಕ್ತಿಕವಾಗಿ ದಾವೆ ಹಾಕಬಹುದು.
6.ವಕೀಲರಿಗೆ ವಿಷಯದ ಮಹತ್ವವನ್ನು ಅರಿವುಂಟುಮಾಡುವುದು ಬಹಳ ಮುಖ್ಯ. ಸಮಸ್ಯೆಯನ್ನು ಅನೇಕ ದೃಷ್ಟಿಕೋನ ಅಥವಾ ಹೊಸ ಆಯಾಮದಿಂದ ನೋಡಿ, ಸಮಸ್ಯೆಯ ಆಳವನ್ನು ವಕೀಲರಿಗೆ ಮನದಟ್ಟು ಮಾಡಿಕೊಡಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.