ಇಂಗ್ಲಿಷ್ ನಾಟಕಕಾರ ವಿಲಿಯಮ್ ಶೇಕ್ಸ್‌ಪಿಯರ್ ಇಂದಿಗೆ (1616, ಏ. 23) ಕೊನೆಯುಸಿರೆಳೆದು 400 ವರ್ಷಗಳು ಕಳೆದಿವೆಯಾದರೂ ಆತ ಇಂದಿಗೂ ಅಜರಾಮರ. ಬೇರಾವ ಲೇಖಕನೂ ಇವನಷ್ಟು ಹತ್ತಿರವಾಗಿ ನಮಗೆ ಕಾಣುವುದಿಲ್ಲ. ಅಲ್ಲದೆ ಶೇಕ್ಸ್‌ಪಿಯರ್ ಈಗ ಕೇವಲ ಒಬ್ಬ ನಾಟಕಕಾರನಾಗಷ್ಟೇ ಉಳಿದಿಲ್ಲ. ಜೀವಂತ ಪರಂಪರೆಯಾಗಿ, ಕಾಲಾಂತರದಲ್ಲಿ ಮಾರ್ಪಾಡುಗಳನ್ನು ಹೊಂದುತ್ತಾ ಅಜರಾಮರ ವಿದ್ಯಮಾನವಾಗಿ ಹೊರಹೊಮ್ಮಿದ್ದಾನೆ. ಅಂದರೆ ಅವನು ರಚಿಸಿದ ನಾಟಕ ಕೃತಿಗಳು ಇಂದಿಗೂ ಜಂಗಮವಾಗಿ, ಹೊಸ ಅರ್ಥ ಸಾಧ್ಯತೆಗಳನ್ನು ಸೃಷ್ಟಿಸುವ, ರೂಪಾಂತರಗಳಿಗೆ ತೆರೆದುಕೊಳ್ಳುವ, ಹೊಸ ಬರವಣಿಗೆಗೆ ಕಾರಣವಾಗುವ ಪಠ್ಯಗಳಾಗಿವೆ. ನಿರಂತರವಾಗಿ ಜಗತ್ತಿನಾದ್ಯಂತ ಶೇಕ್ಸ್‌ಪಿಯರ್‌ನೊಂದಿಗೆ ಒಂದಲ್ಲ ಒಂದು ರೀತಿಯ ಕಲಾತ್ಮಕ ಹಾಗೂ ವಿಮರ್ಶಾತ್ಮಕ ಕೊಡುಕೊಳ್ಳುವಿಕೆ ನಡೆಯುತ್ತಲೇ ಇದೆ.
ಜಗತ್ತು ಶೇಕ್ಸ್‌ಪಿಯರ್‌ನನ್ನು ಸ್ವೀಕರಿಸಿದ ಇತಿಹಾಸವೇ ಕುತೂಹಲಕಾರಿಯಾಗಿದೆ. ತನ್ನ ದೇಶ ಮತ್ತು ಕಾಲ ಅವನನ್ನು ಒಂದು ರೀತಿ ಸ್ವೀಕರಿಸಿದರೆ, ಉಳಿದ ದೇಶ, ಕಾಲಗಳು ಇನ್ನೊಂದು ರೀತಿಯಲ್ಲಿ ಸ್ವೀಕರಿಸಿವೆ. ತನ್ನ ಸಮಕಾಲೀನ ಇಂಗ್ಲೆಂಡಿಗೆ ಅವನೊಬ್ಬ ಪಕ್ಕಾ ವ್ಯಾಪಾರಿ, ರಿಯಲ್ ಎಸ್ಟೇಟ್ ಮನುಷ್ಯ, ಸಾಮಾನ್ಯ ಜನರನ್ನು ರಂಜಿಸುವ ಜನಪ್ರಿಯ ಕಲಾಕಾರ. ಯಾವುದೇ ವಿಶ್ವವಿದ್ಯಾಲಯದ ಮೆಟ್ಟಿಲನ್ನು ಹತ್ತಿರದ ಇವನು ತನ್ನ ಸಮಕಾಲೀನರಾದ, ‘ಯೂನಿವರ್ಸಿಟಿ ವಿಟ್ಸ್’ ಎಂದು ಮಾನ್ಯತೆ ಗಳಿಸಿದ್ದ ವಿದ್ವತ್‌ಪೂರ್ಣ ನಾಟಕಕಾರರಿಗೆ ದೊಡ್ಡ ಸವಾಲಾಗಿದ್ದ. ಅವನ ಸಮಕಾಲೀನನಾದ ಮತ್ತೊಬ್ಬ ನಾಟಕಕಾರ ರಾಬರ್ಟ್ ಗ್ರೀನ್ ಅಸೂಯೆಯಿಂದ ಶೇಕ್ಸ್‌ಪಿಯರ್‌ನನ್ನು ‘ಈಗ ತಾನೇ ಹುಟ್ಟಿದ ಕಾಗೆ ನಮ್ಮ ರೆಕ್ಕೆ ಪುಕ್ಕಗಳನ್ನು ಹಚ್ಚಿಕೊಂಡು ಹಾರುತ್ತಿದೆ’ ಎಂದು ವ್ಯಂಗ್ಯವಾಡಿದ್ದ.
ಕೇವಲ ಲ್ಯಾಟಿನ್ ವ್ಯಾಕರಣ ಶಾಲೆಯವರೆಗೆ ಓದಿದ್ದ ಶೇಕ್ಸ್‌ಪಿಯರ್ ಅದ್ಭುತವಾದ ವಿಶೇಷ ಸಾಮರ್ಥ್ಯವನ್ನು ಹೊಂದಿದ್ದ. ಅದೇನೆಂದರೆ ತಾನು ಗ್ರಹಿಸಿದ ಜಗತ್ತನ್ನು ತನ್ನ ವೈಯಕ್ತಿಕತೆಯ ಛಾಯೆ ಇಲ್ಲದೆ ನಾಟಕಗಳಲ್ಲಿ ಸೃಜನಾತ್ಮಕವಾಗಿ ನಿರೂಪಿಸುವ ಕಲೆ, ಜಗತ್ತಿನ ತನ್ನತನವನ್ನು ತಾನಿರದೇ ಹಂಚುವ ಶಕ್ತಿ. ತನ್ನ ಯಾವ ನಾಟಕಗಳಲ್ಲಿಯೂ ತನ್ನ ವ್ಯಕ್ತಿತ್ವ ಇಣುಕಲು ಬಿಡದೆ, ಪಾತ್ರ ಮತ್ತು ಸಂಭಾಷಣೆಗಳಲ್ಲಿ ಅವನ ಮುದ್ರೆಯನ್ನು ಕಾಣಲಾರದ ಹಾಗೆ ಚಿತ್ರಿಸಿದ್ದಾನೆ. ಬಹುಶಃ ಈ ಕಾರಣಕ್ಕಾಗಿಯೇ ಅವನು ಸಾನೆಟ್ಟುಗಳನ್ನು ಬರೆದಿರಬೇಕು. ಅವುಗಳಲ್ಲಿ ಒಬ್ಬ ವ್ಯಕ್ತಿಯ ವೈಯಕ್ತಿಕ ಪ್ರೀತಿ, ಹತಾಶೆ, ಹಂಬಲವೆಲ್ಲವೂ ಅಭಿವ್ಯಕ್ತಗೊಂಡಿವೆ. ಅಲ್ಲಿ ಮಾತ್ರ ಶೇಕ್ಸ್‌ಪಿಯರ್‌ನನ್ನು ಕಾಣಬಹುದು.
ಅವನ ಕಾಲದ ವಿಪರ್ಯಾಸವೆಂದರೆ, ತನ್ನ ತಾಯ್ನಾಡಿನಲ್ಲಿ ಅವನಿಗಿಂತ ಅವನ ನಾಟಕದಲ್ಲಿ ಪಾತ್ರ ಮಾಡುತ್ತಿದ್ದ ನಟರಿಗೇ ಹೆಚ್ಚಿನ ಮನ್ನಣೆ ಇತ್ತು. ವ್ಯಕ್ತಿಗಳ ಮಹತ್ವವನ್ನು ಅವರ ಸಾವಿನಲ್ಲಿ ಕಾಣುವುದಾದರೆ, ಶೇಕ್ಸ್‌ಪಿಯರ್‌ನ ಸಾವು ಇಂಗ್ಲೆಂಡ್‌ನ ಒಂದು ಸ್ಥಳೀಯ ಘಟನೆ ಮಾತ್ರವಾಗಿತ್ತು. ಅವನ ಮರಣ ಆ ರಾಷ್ಟ್ರದ ಶೋಕವಾಗಿ ಹೊರಹೊಮ್ಮಿರಲಿಲ್ಲ. ಆದರೆ ಅವನ ನಟರ ಸಾವಿಗೆ ಸಾರ್ವಜನಿಕ ಸಂತಾಪ ದೊರಕುತ್ತಿತ್ತು. ಇಂಗ್ಲಿಷ್ ಕವಿಗಳಾದ ಚಾಸರ್ ಮತ್ತು ಸ್ಪೆನ್ಸರ್‌ರಂತಹ ಮಹಾಕವಿಗಳನ್ನು ಸಮಾಧಿ ಮಾಡಿದ ವೆಸ್ಟ್‌ಮಿನಿಸ್ಟರ್ ಅಬೆಯಲ್ಲಿ ಶೇಕ್ಸ್‌ಪಿಯರ್‌ನ ಮಡಿದ ದೇಹಕ್ಕೆ ಜಾಗವಿರಲಿಲ್ಲ.
ಮುಂದೆ, ಪ್ಯುರಿಟನ್‌ರ ಆಡಳಿತದಲ್ಲಿ ಇಂಗ್ಲೆಂಡಿನಲ್ಲಿ ರಂಗಮಂದಿರ ಮುಚ್ಚಿಹೋಯಿತು. ನಂತರ ಎರಡನೇ ಚಾರ್ಲ್ಸ್‌ನ ರಾಜ್ಯಭಾರದಲ್ಲಿ ನಾಟಕಗಳು ಪ್ರಾರಂಭವಾದರೂ ಶೇಕ್ಸ್‌ಪಿಯರ್‌ನ ನಾಟಕಗಳು ಮರುಹುಟ್ಟು ಪಡೆಯಲಿಲ್ಲ. ಸ್ಯಾಮ್ಯುಯಲ್ ಜಾನ್ಸನ್ 18ನೇ ಶತಮಾನದಲ್ಲಿ ಶೇಕ್ಸ್‌ಪಿಯರ್ ನಾಟಕಗಳ ಮರುಮುದ್ರಣಕ್ಕೆ ಸೊಗಸಾದ ಮುನ್ನುಡಿಯನ್ನು ಬರೆದು ಮತ್ತೆ ಶೇಕ್ಸ್‌ಪಿಯರ್ ಮರುಹುಟ್ಟು ಪಡೆದರೂ, ತನ್ನ ನಾಟಕಗಳಲ್ಲಿ ನಾಯಕನ ಪಾತ್ರ ಮಾಡುತ್ತಿದ್ದ ಗ್ಯಾರಿಕ್‌ನಷ್ಟು ಆತ ಪ್ರಸಿದ್ಧಿ ಪಡೆಯಲಿಲ್ಲ.
19ನೇ ಶತಮಾನದ ಹೊತ್ತಿಗೆ ರಾಜಕೀಯವಾಗಿ ಇಂಗ್ಲೆಂಡ್ ತನ್ನ ಸಾಮ್ರಾಜ್ಯವನ್ನು ಹೊರಗಡೆ ವಿಸ್ತರಿಸುತ್ತಿದ್ದರೆ, ಒಳಗಡೆ ಸಾಹಿತ್ಯಿಕವಾಗಿ ಕಾದಂಬರಿಗಳ ವಿಜೃಂಭಣೆ. ಈ ಮಧ್ಯೆ ವಿಕ್ಟೋರಿಯನ್ ಕಾಲದ ಕಾದಂಬರಿಗೆ ಪ್ರತಿಸ್ಪರ್ಧಿಯಾಗದಿದ್ದರೂ, ಸಾಮ್ರಾಜ್ಯಶಾಹಿಯ ವಿಸ್ತರಣೆಯೊಂದಿಗೆ ಶೇಕ್ಸ್‌ಪಿಯರ್ ಮನೆ ಬಿಟ್ಟು ಹೊಸ ಜಗತ್ತನ್ನು ಪ್ರವೇಶಿಸಿದ. ಇದು ಮರಣಾನಂತರ ಶೇಕ್ಸ್‌ಪಿಯರ್ ಮರುಹುಟ್ಟು ಪಡೆದ ಇತಿಹಾಸದಲ್ಲಿ ಅತ್ಯಂತ ಮಹತ್ವದ ತಿರುವು. ಜಗತ್ತಿನಾದ್ಯಂತ ಮರುಜನ್ಮ ಪಡೆದ ಶೇಕ್ಸ್‌ಪಿಯರ್ ಜಗತ್ತು ಈಗಲೂ ಹಿಗ್ಗುತ್ತಲೇ ಇದೆ.
ಸುಮಾರು ನೂರು ಭಾಷೆಗಳಿಗೆ ಶೇಕ್ಸ್‌ಪಿಯರ್ ಕೃತಿಗಳು ತರ್ಜುಮೆಯಾಗಿವೆ. ಜಪಾನಿನ ಅಕೀರಾ ಕುರಸೋವನ ಕೈಯಲ್ಲಿ ಅವನ ‘ಮ್ಯಾಕ್‌ಬೆತ್’ ಬೇರೆ ರೂಪಾಂತರವನ್ನೇ ಕಂಡಿದೆ. ರಷ್ಯಾದ ಮಹಾನ್ ನಟ ಮತ್ತು ನಿರ್ದೇಶಕ ಸ್ಟ್ಯಾನಿಸ್ಲಾವ್‌ಸ್ಕಿಯ ನಾಟಕದ ಸಿದ್ಧಾಂತಕ್ಕೆ ಶೇಕ್ಸ್‌ಪಿಯರ್ ದೊಡ್ಡ ಸವಾಲಾಗಿದ್ದಾನೆ. ಭಾರತದಲ್ಲಿ ಮ್ಯಾಕ್‌ಬೆತ್ ಮಕಬೂಲ್ ಆಗಿ, ಒಥೆಲೋ ಓಂಕಾರವಾಗಿ ರೂಪಾಂತರವಾಗಿವೆ. ವೃತ್ತಿಪರರಿಂದ ಹಿಡಿದು, ಹವ್ಯಾಸಿ ರಂಗಮಂದಿರದಲ್ಲಿ ಅನುಭವವಿಲ್ಲದ ರಂಗನಿರ್ದೇಶಕರೂ, ನಟರೂ, ಭಾಷಾಂತರಕಾರರೂ ಶೇಕ್ಸ್‌ಪಿಯರ್‌ನ ರಂಗ ಜಗತ್ತಿನೊಂದಿಗೆ ತಮ್ಮನ್ನು ತೊಡಗಿಸಿಕೊಂಡಿದ್ದು ಈ ನಾಟಕಕಾರನ ವಿರಾಟ ಸ್ವರೂಪವನ್ನು ತೋರಿಸುತ್ತದೆ. ಶಾಲಾ ಕಾಲೇಜುಗಳ ಪಠ್ಯಕ್ರಮಗಳು, ವಿಶ್ವವಿದ್ಯಾಲಯಗಳ ಸಂಶೋಧನೆ, ಸಾಹಿತ್ಯ ಸಿದ್ಧಾಂತಗಳ ಮೂಲಕವೂ ಶೇಕ್ಸ್‌ಪಿಯರ್ ಸಾಹಿತ್ಯ ಲೋಕ ಸಮಕಾಲೀನ ಸಂದರ್ಭದಲ್ಲಿ ಜೀವಂತವಾಗಿದೆ.
ಕನ್ನಡದ ನೆಲ ಶೇಕ್ಸ್‌ಪಿಯರ್‌ನನ್ನು ಸ್ವೀಕರಿಸಿದ ಇತಿಹಾಸ ಕೂಡ ಕುತೂಹಲಕಾರಿಯಾಗಿದೆ. ಬಸವಪ್ಪ ಶಾಸ್ತ್ರಿ, ಶ್ರೀಕಂಠೇಶ ಗೌಡ, ಮಾಸ್ತಿ, ಕುವೆಂಪು, ತರಾಸು, ಮೂರ್ತಿರಾಯರು, ಭಗವಾನ್, ಕೆ.ವಿ.ಅಕ್ಷರ ಮೊದಲಾದವರ ಭಾಷಾಂತರ ಮತ್ತು ರೂಪಾಂತರಗಳಿಂದ ಹಿಡಿದು ರಂಗಾಯಣ, ನೀನಾಸಂ, ಇನ್ನಿತರ ರಂಗಶಾಲೆ ಮತ್ತು ಗುಂಪುಗಳದು ಒಂದು ಪರಂಪರೆಯಾದರೆ, ಶೇಕ್ಸ್‌ಪಿಯರ್ ನಮ್ಮ ಸ್ಥಳೀಯ ನಾಟಕ ರೂಪಗಳಲ್ಲಿ ನುಸುಳಿದ್ದು ಇನ್ನೊಂದು ಪರಂಪರೆ. ಕೆ.ವಿ.ಅಕ್ಷರ ಅವರು ಹೇಳುವಂತೆ, ದಕ್ಷಿಣ ಕನ್ನಡದ ಯಕ್ಷಗಾನಗಳ ಮೂಲಕ ಶೇಕ್ಸ್‌ಪಿಯರ್ ಹಿಂಬಾಗಿಲಿನಿಂದ ಮೊದಲು ಕನ್ನಡ ರಂಗಭೂಮಿಯನ್ನು ಪ್ರವೇಶ ಮಾಡಿದ್ದು. ಇನ್ನೊಂದು ಕುತೂಹಲಕಾರಿ ಸಂಗತಿ ಎಂದರೆ ಹುಬ್ಬಳ್ಳಿಯ ವ್ಯಾಪಾರಿಯೊಬ್ಬರು, ಕೆಟ್ಟದ್ದಾದರೂ ಅಡ್ಡಿ ಇಲ್ಲ, ನಾನು ಶೇಕ್ಸ್‌ಪಿಯರ್‌ನನ್ನು ಕನ್ನಡಕ್ಕೆ ತರುತ್ತೇನೆಂದು ಹಟ ಹಿಡಿದು ಭಾಷಾಂತರ ಮಾಡಿದ್ದು! ಅಂದರೆ ಒಬ್ಬ ಸಾಮಾನ್ಯ ವ್ಯಾಪಾರಸ್ಥನನ್ನೂ ಈ ನಾಟಕಕಾರ ಕಾಡದೇ ಬಿಟ್ಟಿಲ್ಲ.
ಶೇಕ್ಸ್‌ಪಿಯರ್ ಮತ್ತು ಅವನ ಕೃತಿಗಳು ಇಂದಿಗೂ ನಮ್ಮೊಡನೆ ಬದುಕುತ್ತಿವೆ ಎನ್ನುವುದಕ್ಕೆ ನಟರಾಜ ಹುಳಿಯಾರರ ಇತ್ತೀಚಿನ ‘ಶೇಕ್ಸ್‌ಪಿಯರ್ ಮನೆಗೆ ಬಂದ’ ನಾಟಕವೇ ಸಾಕ್ಷಿ. ಶೇಕ್ಸ್‌ಪಿಯರ್‌ನ ವೈಯಕ್ತಿಕ ಬದುಕು, ಅವನ ನಾಟಕಗಳ ವಿಮರ್ಶೆ, ಜಗತ್ತು ಅವನನ್ನು ಸ್ವೀಕರಿಸಿದ ಪರಿ, ಸ್ಟ್ರ್ಯಾಟ್‌ಫರ್ಡ್-ಅಪಾನ್-ಏವನ್‌ನಲ್ಲಿ ಅವನ ಬರುವಿಕೆಗೆ ಕಾಯುವ ಅವನ ಅಭಿಮಾನಿಗಳ ಸಂಭ್ರಮಗಳೆಲ್ಲವನ್ನೂ ಕೂಡಿ ಹೆಣೆದ ಕಥಾ ಹಂದರವು ಪ್ರಬುದ್ಧ ನಾಟಕವಾಗಿ ಹೊರಹೊಮ್ಮಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.