ADVERTISEMENT

ಸೀಟು ಉಚಿತ: ತಾರತಮ್ಯ ಖಚಿತ?

ವಾಸುದೇವ ಶರ್ಮಾ ಎನ್.ವಿ.
Published 1 ಸೆಪ್ಟೆಂಬರ್ 2015, 19:35 IST
Last Updated 1 ಸೆಪ್ಟೆಂಬರ್ 2015, 19:35 IST

ಕೋರಿಕೆ ಈಡೇರಿದರೆ ತನ್ನ ಹೋರಿಯನ್ನು ದೇವಿಗೆ ಕೊಡುವುದಾಗಿ ಒಬ್ಬ ಹರಸಿಕೊಳ್ತಾನೆ. ದೇವಿ, ‘ತಥಾಸ್ತು’ ಅಂತಾಳೆ. ಕೋರಿಕೆ ಈಡೇರುತ್ತದೆ. ಇವ ಹೇಳ್ತಾನೆ, ‘ಹೋರಿ ಕೊಟ್ಟರೆ ನಿನಗೇನು ಉಪಯೋಗ? ಅದನ್ನೇ ಮಾರಿ ದುಡ್ಡು ಹುಂಡಿಗೆ ಹಾಕ್ತೀನಿ’. ದೇವಿ ಅದಕ್ಕೂ ಒಪ್ತಾಳೆ. ಇವನು ಹೋರಿ ಮಾರಾಟಕ್ಕಿಡ್ತಾನೆ. ‘ಹೋರಿಗೆ ಒಂದು ರೂಪಾಯಿ, ಅದರ ಹಗ್ಗಕ್ಕೆ ಸಾವಿರ’. ಮುಂದಿನ ಕತೆ ಹೇಳಬೇಕಿಲ್ಲವಲ್ಲ!

‘ಕರ್ನಾಟಕ ಮಕ್ಕಳ ಉಚಿತ ಮತ್ತು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆ ಜಾರಿ ನಿಯಮ’ದ ಪ್ರಕಾರ ಸರ್ಕಾರೇತರ ಶಾಲೆಗಳಲ್ಲಿ ಶೇ 25ರ ಉಚಿತ ಸ್ಥಾನ ಪಡೆದ ಮಕ್ಕಳ ಕತೆ ಹೀಗೇ ಆಗಿದೆ. ಹೇಳಲಿಕ್ಕೆ ಉಚಿತ ಸೀಟು. ಆದರೆ, ಹೋರಿಯ ಹಗ್ಗದ ಬೆಲೆಯಂತೆ ಪುಸ್ತಕ, ಸಮವಸ್ತ್ರಕ್ಕೆ ಶುಲ್ಕ ಕಟ್ಟಬೇಕು!

ಬಡ, ಹಿಂದುಳಿದ, ಅಲ್ಪಸಂಖ್ಯಾತ ಕುಟುಂಬಗಳ ಮಕ್ಕಳು ಸರ್ಕಾರೇತರ ಶಾಲೆಗಳಲ್ಲಿ ಕಲಿಯಲು ಅವಕಾಶ ಸೃಷ್ಟಿಸಲಾಗಿದೆ ಎಂದು  ಆರ್.ಟಿ.ಇ. ಕಾಯ್ದೆ ಹೇಳುತ್ತದೆ. ಶಿಕ್ಷಣ ಸಂಸ್ಥೆಗಳ ಸಾಮಾಜಿಕ ಜವಾಬ್ದಾರಿ ವಿವರಿಸಿ, ಬಡ ಮಕ್ಕಳಿಗೆ ಉಚಿತ ಶಿಕ್ಷಣ ನೀಡಿದರೆ ಸರ್ಕಾರ ಅವರ ಖರ್ಚನ್ನು ಭರಿಸುತ್ತದೆ ಎಂದು ತಿಳಿಸಿದೆ. ಮೊದಲು ಇದನ್ನು ಹಲವು ಶಾಲೆಗಳು ಒಪ್ಪಿಕೊಂಡರೆ, ಕೆಲವರು ಸೆಟೆದು ನಿಂತು ನ್ಯಾಯಾಲಯಕ್ಕೂ ಹೋದರು. ಪರ– ವಿರೋಧ ಚರ್ಚೆಗಳಾದವು, ಆಂದೋಲನಗಳಾದವು.

ಶೇ 25ರ ಕೋಟಾದಡಿಯಲ್ಲಿ ಪ್ರತಿವರ್ಷ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಸೀಟುಗಳು ಮಕ್ಕಳನ್ನು ಒಂದನೇ ತರಗತಿಗೆ ಸೇರಿಸಲು ಲಭ್ಯವಾಗುತ್ತವೆ. ಕಳೆದ ಮೂರು ವರ್ಷಗಳಲ್ಲಿ 4,50,352 ಸ್ಥಾನಗಳು ಲಭ್ಯವಾಗಿದ್ದು, ಇದರಲ್ಲಿ 3,00,242 ಮಕ್ಕಳು ದಾಖಲಾಗಿದ್ದಾರೆ. ಹೀಗೆ ಮಕ್ಕಳನ್ನು ಸೇರಿಸಿಕೊಂಡ ಶಾಲೆಗಳು, ಸರ್ಕಾರ ಭರಿಸುವುದೆಂದು ಹೇಳಿದ್ದ ಸುಮಾರು ₹11,000 ಮೊತ್ತಕ್ಕೆ, ತಮ್ಮಲ್ಲಿ ಸೇರಿಸಿಕೊಂಡ ಮಕ್ಕಳ ಸಂಖ್ಯೆಯ ಗುಣಾಕಾರ ಮಾಡಿ ಲೆಕ್ಕ ಕೊಟ್ಟರು.

ಸರ್ಕಾರದ ಲೆಕ್ಕಾಚಾರವೆ ಬೇರೆಯಿತ್ತು. ಶಾಲೆಯ ಮೂಲ ಸಂಸ್ಥೆಗಳ ಆಡಿಟ್ ವರದಿ ನೋಡಿ ವಾಸ್ತವವಾಗಿ ಮಕ್ಕಳ ಶಿಕ್ಷಣಕ್ಕಾಗಿ ಮಾಡಿರಬಹುದಾದ ಖರ್ಚನ್ನು ಮುಂದಿಟ್ಟಿತು. ಬಹಳಷ್ಟು ಶಾಲೆಗಳು ನೀಡಿರುವ ಲೆಕ್ಕಪತ್ರದಂತೆ ಪ್ರತಿ ಮಗುವಿಗೆ ಅವರು ಮಾಡಿರುವ ಖರ್ಚು ಸರಾಸರಿ ₹5 ಸಾವಿರಿಂದ ₹9 ಸಾವಿರ. ಆಗ ಶುರುವಾಯಿತು ಸರ್ಕಾರೇತರ ಶಾಲೆಗಳ ಕಸಿವಿಸಿಯಾಟ. ಇವರ ನೆರವಿಗೆ ಈಗ ಬಂದಿರುವುದು ಶಿಕ್ಷಣ ಇಲಾಖೆಯವರೇ ಹೊರಡಿಸಿರುವ ‘ಆರ್.ಟಿ.ಇ. ಕಾಯ್ದೆ ಮಾಹಿತಿ’ ಕೈಪಿಡಿ.

ಮೂಲ ಕಾಯ್ದೆಯ ಪ್ರಕಾರ, ‘ಪ್ರತಿ ಮಗುವಿಗೆ ಸರ್ಕಾರ  ಶಿಕ್ಷಣ ಒದಗಿಸಲು ಎಷ್ಟು ಖರ್ಚು ಮಾಡುತ್ತದೋ ಅಥವಾ ಮಗುವಿಗೆ ಆ ಶಾಲೆ ಎಷ್ಟು ಶುಲ್ಕ ವಿಧಿಸುವುದೋ ಅವುಗಳಲ್ಲಿ ಯಾವುದು ಕಡಿಮೆಯೋ ಅಷ್ಟನ್ನು ಆಯಾ ಶಾಲೆಗೆ ಸರ್ಕಾರ  ನಿಗದಿಪಡಿಸುವ ವಿಧಿವಿಧಾನದಂತೆ ಮರುಪಾವತಿ ಮಾಡಲಾಗುತ್ತದೆ’. ಮಕ್ಕಳಿಗೆ ಶಾಲೆಯಲ್ಲಿ ಸಿಗಬೇಕಾದ ಯಾವುದೇ ಸೌಲಭ್ಯದ ಬಳಕೆ ಕುರಿತು ತಾರತಮ್ಯ ತೋರಬಾರದು ಎಂದು ನಿಯಮ ಹೇಳುತ್ತದೆ.

ಆದರೆ ಇಲ್ಲೇ ‘ಹೋರಿ ಮತ್ತು ಹಗ್ಗ’ದ ಕತೆ ಶುರುವಾಗುವುದು. ಈ ಕಾಯ್ದೆ ಮತ್ತು ನಿಯಮವನ್ನು ವಿವರಿಸುವ ಕೈಪಿಡಿ ಪುಸ್ತಿಕೆ ಇದನ್ನೇ ಮುಂದಿಟ್ಟು ಇಡೀ ಆರ್.ಟಿ.ಇ. ಕಾಯ್ದೆಯ ಸಾಮಾಜಿಕ ಸಮಾನತೆಯ ಅಂಶಕ್ಕೆ ಕೊಡಲಿಪೆಟ್ಟು ಕೊಟ್ಟಿದೆ. ‘ಯಾವುದಾದರೂ ಶಾಲೆಯಲ್ಲಿ ಮಕ್ಕಳಿಗೆ ಉಚಿತ ಪಠ್ಯಪುಸ್ತಕ, ಸಮವಸ್ತ್ರಗಳನ್ನು ನೀಡುವ ಪರಿಪಾಠ ಇದ್ದಲ್ಲಿ ಹಾಗೂ ಶಾಲೆಯ ಆಡಳಿತ ಮಂಡಳಿ ಪಠ್ಯಪುಸ್ತಕ, ಸಮವಸ್ತ್ರದ ಖರ್ಚನ್ನು ಶಾಲೆಯ ಒಟ್ಟು ವೆಚ್ಚದಲ್ಲಿ ಸೇರಿಸಿದ್ದರೆ, ಅದೇ ಪರಿಪಾಠದಂತೆ ಆರ್.ಟಿ.ಇ. ಅಡಿಯಲ್ಲಿ ದಾಖಲಾದ ಮಕ್ಕಳಿಗೂ ಉಚಿತವಾಗಿ ನೀಡಬೇಕು’. ಶೇ 25ರ ಉಚಿತ ಸೀಟಿನ ಆಸೆ ತೋರಿಸಿ ತಂದ ಮಕ್ಕಳು, ಪೋಷಕರನ್ನು ಈ ‘ಪರಿಪಾಠ’ದ ಪಾಠ ಮಾಡಿ ತ್ರಿಶಂಕು ಸ್ಥಿತಿಗೆ ತಳ್ಳಲಾಗಿದೆ. 

ಶಾಲೆಗಳು ಹೇಳುವುದು, ತಮ್ಮಲ್ಲಿ ಬೋಧನಾ ಶುಲ್ಕಕ್ಕೆ ವಿನಾಯಿತಿ, ಉಳಿದೆಲ್ಲಕ್ಕೂ ಹಣ ಕೊಡಿ. ಸಮವಸ್ತ್ರಕ್ಕೆ  ₹3 ಸಾವಿರದಿಂದ ₹12 ಸಾವಿರ. ಪಠ್ಯಪುಸ್ತಕ ಕೈಚೀಲಕ್ಕೆ ಐದಾರು ಸಾವಿರ ರೂಪಾಯಿಯಿಂದ ಹತ್ತು ಸಾವಿರ ರೂಪಾಯಿ. ಇನ್ನಿತರ ಚಟುವಟಿಕೆಗಳಿಗೆ ಬೇರೆ ಶುಲ್ಕ. ಪುಸ್ತಕಕ್ಕೆ ಹಣ ಕೊಟ್ಟಿಲ್ಲ, ಸಮವಸ್ತ್ರವಿಲ್ಲ ಎಂದು ಮಕ್ಕಳನ್ನು ತರಗತಿಗಳಿಂದಾಚೆ ನಿಲ್ಲಿಸಿದ್ದಾರೆ, ಮನೆಗೆ ಚೀಟಿ ಕಳುಹಿಸುತ್ತಾರೆ, ಪರೀಕ್ಷೆ, ಸ್ಪರ್ಧೆಗಳಲ್ಲಿ ತೊಡಗಿಸಿಕೊಂಡಿಲ್ಲ. ಕೆಲವೆಡೆ ಬೇರೆ ತರಗತಿಯಲ್ಲಿ ಕೂಡಿಸುವುದು ಅಥವಾ ಇದ್ದ ತರಗತಿಯಲ್ಲೇ ನೆಲದ ಮೇಲೆ ಕೂರಿಸುವುದು ಇತ್ಯಾದಿ. ಈ ಕುರಿತು ಶಿಕ್ಷಣ ಇಲಾಖೆಗೆ ದೂರು ಕೊಟ್ಟರೆ, ‘ಮಾಹಿತಿ ಪುಸ್ತಕ’ ತೋರಿಸಿದ್ದಾರೆ.

ಬಹಳಷ್ಟು ಪೋಷಕರೀಗ ಇಂತಹ ಶಾಲೆಗಳ ಸಹವಾಸವೇ ಬೇಡವೆಂದು ಪರ್ಯಾಯ ಶಾಲೆಗಳಿಗೆ ಕಡಿಮೆ ಶುಲ್ಕ ಕೊಟ್ಟು ಸೇರಿಸಿದ್ದಾರೆ. ಕೆಲವರು ಹೋರಾಟಕ್ಕೆ ಇಳಿದಿದ್ದಾರೆ. ಇದ್ಯಾಕೆ ಹೀಗೆ ತಾರತಮ್ಯ ಮಾಡಿದ್ದೀರಿ ಎಂದು ಪೋಷಕರೊಬ್ಬರು ಶಿಕ್ಷಣ ಇಲಾಖೆಗೆ ಪ್ರಶ್ನೆ ಮಾಡಿದ್ದಕ್ಕೆ ಸಿಕ್ಕಿರುವ ಉತ್ತರ, ‘ಪೋಷಕರು ಇಚ್ಛೆ ಪಟ್ಟಲ್ಲಿ ಹಣ ಪಾವತಿಸಿ ಸಹ-ಪಠ್ಯೇತರ ಚಟುವಟಿಕೆಗಳಲ್ಲಿ ಮಕ್ಕಳಿಗೆ ಅವಕಾಶ ಕೊಡಬಹುದು’. ತಾರತಮ್ಯರಹಿತ ‘ಉಚಿತ’ ಮತ್ತು ‘ಗುಣಮಟ್ಟ’ದ ಶಿಕ್ಷಣ ನೀಡಿರೆಂದು ಶಿಕ್ಷಣ ಹಕ್ಕಿನಲ್ಲಿ ಹೇಳಲಾಗಿದೆ. ಆದರೆ, ಇಂತಹ ಶಾಲೆಗಳಲ್ಲಿ ಹಣ ನೀಡದಿದ್ದರೆ ‘ತಾರತಮ್ಯ ಖಚಿತ’.

‘ಶಾಲೆಯು ಇತರ ಮಕ್ಕಳಿಗೆ ಸಮವಸ್ತ್ರ, ಪುಸ್ತಕ ಇತ್ಯಾದಿಯನ್ನು ಹಣ ಪಡೆದು ನೀಡಿರುವ ಬಗೆಗೆ ತನ್ನ ಆಯವ್ಯಯ ವರದಿಯಲ್ಲಿ ಉಲ್ಲೇಖಿಸಿದ್ದರೆ, ಆಗ ಶೇ 25ರಡಿ ದಾಖಲಾದ ಮಕ್ಕಳಿಗೆ ಅವನ್ನು ಉಚಿತವಾಗಿ ನೀಡಬೇಕು’. ಹೇಳಿ, ಯಾವ ಶಾಲೆಯವರು ಈಗ ಇಂತಹ ವಾಣಿಜ್ಯ ವ್ಯಾಖ್ಯೆಯ ವ್ಯಾಪ್ತಿಗೆ ಬರುವ ಲೆಕ್ಕ ತೋರಿಸುತ್ತಾರೆ. ಇಲಾಖೆ ಯಾವ ಯುಗದಲ್ಲಿದೆ? ಸರ್ಕಾರ ವರ್ಷಗಳ ಹಿಂದೆಯೇ ಸುತ್ತೋಲೆಗಳನ್ನು ಹೊರಡಿಸಿ, ಎಲ್ಲ ಶಾಲೆಗಳು ಶೇ 25ರಡಿಯಲ್ಲಿ ದಾಖಲಾದ ಮಕ್ಕಳಿಗೆ ಪುಸ್ತಕ ಮತ್ತು ಸಮವಸ್ತ್ರ ನೀಡಿರೆಂದು ಹೇಳಿದೆ. ಆದರೆ, ಇದಕ್ಕೆ ಕವಡೆ ಕಾಸಿನ ಕಿಮ್ಮತ್ತಿಲ್ಲ.

ಎಲ್ಲರೂ ಮಾಹಿತಿ ಪುಸ್ತಕ ತೋರುತ್ತಿದ್ದಾರೆ. ಕಾಯ್ದೆ ನಿಯಮ, ಸುತ್ತೋಲೆಯನ್ನು ಸಮರ್ಪಕವಾಗಿ ಅಧ್ಯಯನ ಮಾಡದ ಅಧಿಕಾರಿಗಳು ವಿತಂಡವಾದದ ವಿಶ್ಲೇಷಣೆ ನೀಡಿರುವ ಮಾಹಿತಿ ಪುಸ್ತಕವನ್ನೇ ಎತ್ತಿ ಹಿಡಿಯುತ್ತಿದ್ದಾರೆ. ಆರ್.ಟಿ.ಇ. ಕಾಯ್ದೆಯ ಜಾರಿಯಲ್ಲಿ ಬರಬಹುದಾದ ಸಮಸ್ಯೆಗಳನ್ನು ಚರ್ಚಿಸಲೆಂದೇ ಇರುವ ಆರ್.ಟಿ.ಇ. ಸೆಲ್ ಈ ದಿಸೆಯಲ್ಲಿ ಏನು ಮಾಡುತ್ತಿದೆ ಎಂದು ಮತ್ತೊಂದು ಪ್ರಶ್ನೆ ಮೂಡುತ್ತದೆ. ಇದಕ್ಕೆ ಸರ್ಕಾರ ಉತ್ತರಿಸಬೇಕಾಗಿದೆ.

ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರ ಏಳಿಗೆಗಾಗಿ ಶಿಕ್ಷಣ ಹಕ್ಕು ಕಾಯ್ದೆ ಜಾರಿ ಮಾಡಲಾಗಿದೆ ಎಂದಿರುವ ಸರ್ಕಾರ ಈಗ ಕಣ್ಣು ಕಿವಿ ಮುಚ್ಚಿಕೊಂಡು ಕುಳಿತಿದೆಯೆ? ಸರ್ಕಾರೇತರ/ಖಾಸಗಿ ಲಾಭಕೋರ ಶಾಲೆಗಳ ತಾಳಕ್ಕೆ ಕುಣಿಯುತ್ತಿದೆಯೆ ಅಥವಾ ಶಿಕ್ಷಣ ಇಲಾಖೆಯ ಅಧಿಕಾರಿಗಳು ನೀಡುವ ವ್ಯಾಖ್ಯಾನಗಳನ್ನು ನಿಯಂತ್ರಿಸುವ ಶಕ್ತಿ ಕಳೆದುಕೊಂಡಿದೆಯೆ?

ಲೇಖಕ ಮಕ್ಕಳ ಹಕ್ಕುಗಳ ಹೋರಾಟಗಾರ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT