ADVERTISEMENT

ಸೌರ ವಿದ್ಯುತ್ ಖರೀದಿ ಗೊಂದಲ

ಅನುಪಮ್ ಮಣೂರ್
Published 11 ಡಿಸೆಂಬರ್ 2015, 19:30 IST
Last Updated 11 ಡಿಸೆಂಬರ್ 2015, 19:30 IST

ಮನೆಯ ಮೇಲ್ಚಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಿ ಸೌರ ವಿದ್ಯುತ್‌ ಉತ್ಪಾದಿಸುತ್ತಿರುವವರಿಂದ ಖರೀದಿಸುವ ವಿದ್ಯುತ್‌ಗೆ ನೀಡುತ್ತಿರುವ ದರ ಕಡಿತ ಮಾಡಲು ಉದ್ದೇಶಿಸಿರುವುದಾಗಿ ಕರ್ನಾಟಕ ವಿದ್ಯುತ್‌ ನಿಯಂತ್ರಣ ಆಯೋಗದ (ಕೆಇಆರ್‌ಸಿ) ಅಧಿಕಾರಿಗಳು ಹೇಳಿರುವುದು, ರಾಜ್ಯದಲ್ಲಿ ಸೌರ ವಿದ್ಯುತ್‌ ಉತ್ಪಾದನೆ ಮೇಲೆ ವ್ಯತಿರಿಕ್ತ ಪರಿಣಾಮ ಬೀರಲಿದೆ. ಚಾವಣಿ ಮೇಲೆ  ವಿದ್ಯುತ್‌ ಉತ್ಪಾದಿಸಿ ಗೃಹ ಬಳಕೆಗೆ ಬಳಸಿದ ನಂತರ ಉಳಿಯುವ ಹೆಚ್ಚುವರಿ ವಿದ್ಯುತ್‌ ಅನ್ನು  ‘ಬೆಸ್ಕಾಂ’ಗೆ ಮಾರಾಟ ಮಾಡುವವರಿಗೆ  ಕೆಇಆರ್‌ಸಿ ನಿರ್ಧಾರ ತೀವ್ರ ನಿರಾಶೆ ಮೂಡಿಸಿದೆ.
ರಾಜ್ಯದಲ್ಲಿ ವಿದ್ಯುತ್‌ನ ತೀವ್ರ ಕೊರತೆ ಉದ್ಭವಿಸಿದೆ. ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಅನಿಯಮಿತವಾಗಿ ವಿದ್ಯುತ್‌ ಕಡಿತ ಮಾಡಲಾಗುತ್ತಿದೆ. ಎಲ್ಲೆಡೆ ವಿದ್ಯುತ್‌ ಕ್ಷಾಮಕ್ಕೆ ಕೊನೆಮೊದಲು ಇಲ್ಲದಿರುವಾಗಲೇ ಈ ಬೆಳವಣಿಗೆ ನಡೆದಿದೆ.

ಮನೆಯ ಚಾವಣಿ ಮೇಲೆ ಸೌರ ಫಲಕಗಳನ್ನು ಅಳವಡಿಸಿಕೊಂಡು ತಮ್ಮ ಮನೆಯ ಅಗತ್ಯಗಳಿಗಾಗಿ ಸೌರ ವಿದ್ಯುತ್‌  ಉತ್ಪಾದಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಸಾರ್ವಜನಿಕರಿಗೆ ಸಾಕಷ್ಟು ಉತ್ತೇಜನ ನೀಡುತ್ತಿವೆ. ಉತ್ಪಾದನೆಯಾಗುವ ಹೆಚ್ಚುವರಿ ವಿದ್ಯುತ್‌ ಅನ್ನು ಪೂರ್ವನಿಗದಿತ ದರಕ್ಕೆ ವಿದ್ಯುತ್‌ ಜಾಲಕ್ಕೆ ಮಾರಾಟ ಮಾಡಲು ಅವಕಾಶ ಕಲ್ಪಿಸಲಾಗಿದೆ. ಆರಂಭದಲ್ಲಿ ಇದಕ್ಕೆ ಜನರ ಪ್ರತಿಕ್ರಿಯೆ  ನಿರಾಶಾದಾಯಕವಾಗಿತ್ತು. ಕ್ರಮೇಣ ಜನಪ್ರಿಯತೆ ಗಳಿಸುತ್ತಿರುವ ಹಂತದಲ್ಲಿ ಈ ಬೆಳವಣಿಗೆ ನಡೆದಿದೆ.

2014ರಲ್ಲಿ ಕೆಇಆರ್‌ಸಿ – ಕರ್ನಾಟಕ ಸೌರ ವಿದ್ಯುತ್‌ ನೀತಿ ಪ್ರಕಟಿಸಿತ್ತು. ವಿದ್ಯುತ್‌ ಜಾಲಕ್ಕೆ (ಗ್ರಿಡ್‌ಗೆ) ಚಾವಣಿ ಸೌರ ವಿದ್ಯುತ್‌ನಿಂದ ಪೂರೈಸುವ ವಿದ್ಯುತ್‌ ಪ್ರಮಾಣವನ್ನು 2018ರ ಹೊತ್ತಿಗೆ ಕನಿಷ್ಠ 400 ಮೆಗಾವಾಟ್‌ಗೆ ಮತ್ತು  ಗ್ರಿಡ್‌ ಸಂಪರ್ಕಿತ  ಬಳಕೆ ಪ್ರಮಾಣವನ್ನು 1,600 ಮೆಗಾವಾಟ್‌ಗೆ ಹೆಚ್ಚಿಸಲು ಗುರಿ ನಿಗದಿಪಡಿಸಲಾಗಿತ್ತು.

2014–15 ಮತ್ತು 2015–16ನೇ ಸಾಲಿಗೆ ತಲಾ 100 ಮೆಗಾವಾಟ್‌ನಷ್ಟು ಉತ್ಪಾದನೆ ನಿಗದಿಪಡಿಸಲಾಗಿದೆ. ಸದ್ಯಕ್ಕೆ ರಾಜ್ಯದಲ್ಲಿ ಕೇವಲ 144 ಗ್ರಾಹಕರು ಸೌರ ವಿದ್ಯುತ್‌ ಉತ್ಪಾದಿಸುತ್ತಿದ್ದು, ಒಟ್ಟು ಉತ್ಪಾದನೆ ಪ್ರಮಾಣವು ಕೇವಲ 2.4 ಮೆಗಾವಾಟ್‌ನಷ್ಟಿದೆ.
ಈ ಹಂತದಲ್ಲಿ, ಸೌರ ವಿದ್ಯುತ್‌ ಖರೀದಿಗೆ ನೀಡಲಾಗುತ್ತಿರುವ ದರವನ್ನು ಕಡಿಮೆ ಮಾಡಲು ಹೊರಟಿರುವುದು ಉತ್ಪಾದಕರನ್ನು ತಬ್ಬಿಬ್ಬುಗೊಳಿಸಿದೆ.

ಆರಂಭದಲ್ಲಿ ಪ್ರತಿ ಯೂನಿಟ್‌ಗೆ ₹ 10.5ರಂತೆ ದರ ವಿಧಿಸಲಾಗುತ್ತಿತ್ತು. ಆನಂತರ ಅದನ್ನು ₹ 9.51ಕ್ಕೆ ಇಳಿಸಲಾಗಿತ್ತು.  ಈಗ ಅದನ್ನು ₹ 6.50ಕ್ಕೆ ಇಳಿಸಲು ಉದ್ದೇಶಿಸಲಾಗಿದೆ.

ಸೌರ ಫಲಕಗಳನ್ನು ಅಳವಡಿಸುವ ವೆಚ್ಚ ಕಡಿಮೆಯಾಗಿರುವುದರಿಂದ ಖರೀದಿ ದರ ಕಡಿಮೆ ಮಾಡಲು ಉದ್ದೇಶಿಸಲಾಗಿದೆ ಎಂದು ಕಾರಣ ನೀಡಲಾಗಿದೆ.

ಪ್ರತಿಯೊಬ್ಬ ಗ್ರಾಹಕ ಉತ್ಪಾದಿಸುವ ಸೌರ ವಿದ್ಯುತ್‌ ಪ್ರಮಾಣದ ಮೇಲೆ ಮಿತಿ ವಿಧಿಸುವುದು ಕೆಇಆರ್‌ಸಿಯ ಇನ್ನೊಂದು ಗೊಂದಲಕಾರಿ ತೀರ್ಮಾನವಾಗಿದೆ.

ಕೆಇಆರ್‌ಸಿಯು ಸಾರ್ವಜನಿಕರ ಚರ್ಚೆಗೆ ಬಿಡುಗಡೆ ಮಾಡಿರುವ ಹೇಳಿಕೆಯಲ್ಲಿ, ಅನುಮತಿ ನೀಡಿದ ಪ್ರಮಾಣಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಸೌರ ವಿದ್ಯುತ್‌ ಉತ್ಪಾದಿಸುವುದಕ್ಕೆ ಉತ್ತೇಜನ ನೀಡಬಾರದು ಎಂದು ಅಭಿಪ್ರಾಯಪಡಲಾಗಿದೆ.

ಪ್ರತಿದಿನ 8 ಗಂಟೆಗಳಷ್ಟು ಕಾಲ ವಿದ್ಯುತ್‌ ಕಡಿತ ಸಾಮಾನ್ಯ ನೋಟವಾಗಿರುವ ರಾಜ್ಯದಲ್ಲಿ, ಹೆಚ್ಚುವರಿ ಸೌರ ವಿದ್ಯುತ್‌
Z ಉತ್ಪಾದನೆ ಬೇಡ ಎಂದು ಪ್ರತಿಪಾದಿಸುತ್ತಿರುವುದು ಗೊಂದಲವನ್ನು ಇನ್ನಷ್ಟು ಹೆಚ್ಚಿಸಿದೆ.

ಪ್ರತಿ ಯೂನಿಟ್‌ಗೆ ₹ 9.51ರಂತೆ ವಿದ್ಯುತ್‌ ಖರೀದಿಸಲು ‘ಬೆಸ್ಕಾಂ’ ಬಳಿ ಹಣ ಇಲ್ಲದಿರುವುದೇ, ಹೆಚ್ಚುವರಿ ವಿದ್ಯುತ್‌ ಉತ್ಪಾದನೆ ಬೇಡ ಎಂದು ಪ್ರತಿಪಾದಿಸುವುದಕ್ಕೆ ಮುಖ್ಯ ಕಾರಣವಾಗಿದೆ.

ನಾವು ಇಲ್ಲಿ, ಸದ್ಯದ ವಿದ್ಯುತ್‌ ವೆಚ್ಚವನ್ನು ಪರಿಗಣಿಸಿದರೆ, ನಗರದ ಸಾಮಾನ್ಯ ಬಳಕೆದಾರನೊಬ್ಬ 30 ಯೂನಿಟ್‌ಗಳವರೆಗೆ ₹ 2.70 ದರ ಪಾವತಿಸುತ್ತಾನೆ. 31ರಿಂದ 100 ಯೂನಿಟ್‌ ಬಳಕೆಗೆ ₹ 4 ಮತ್ತು 200 ಯೂನಿಟ್‌ಗಳಾಚೆ  ಗರಿಷ್ಠ ₹ 6.25 ಪಾವತಿಸುತ್ತಾನೆ.
ಹೈಟೆನ್ಶನ್‌ ವಾಣಿಜ್ಯ ಬಳಕೆದಾರರೂ  ಪ್ರತಿ ಯೂನಿಟ್‌ಗೆ ಗರಿಷ್ಠ ₹ 7.65ರಂತೆ 2 ಲಕ್ಷ ಯೂನಿಟ್‌ಗಳವರೆಗೆ ಪಾವತಿಸುತ್ತಾರೆ. ಇಂತಹ ಪರಿಸ್ಥಿತಿಯಲ್ಲಿ  ‘ಬೆಸ್ಕಾಂ’, ಪ್ರತಿ ಯೂನಿಟ್‌ಗೆ ₹9.50ರ ದರದಲ್ಲಿ ಹೇಗೆ ವಿದ್ಯುತ್‌ ಖರೀದಿಸುತ್ತದೆ ಎಂಬ  ಪ್ರಶ್ನೆ ಉದ್ಭವಿಸುತ್ತದೆ. ಇದೇ ಕಾರಣಕ್ಕೆ ಖರೀದಿ ದರ ಕಡಿಮೆ ಮಾಡಲು ಮುಂದಾಗಿದೆ. ಹೆಚ್ಚುವರಿ ವಿದ್ಯುತ್‌ ಉತ್ಪಾದನೆಯ ವಿತರಣೆಯೂ ಹೊರೆಯಾಗಲಿದೆ ಎಂದೇ ‘ಬೆಸ್ಕಾಂ’ ಪರಿಗಣಿಸಿದೆ.

ಸೌರ ವಿದ್ಯುತ್‌ ಉತ್ಪಾದಕರಿಗೆ ಕಡಿಮೆ ದರ ಪಾವತಿಸುವುದು ಈ ಸಮಸ್ಯೆಗೆ ಪರಿಹಾರವಾಗಲಾರದು. ಸೌರ ವಿದ್ಯುತ್‌ ಉತ್ಪಾದನೆಗೆ ಸಾಕಷ್ಟು ವೆಚ್ಚ ಮಾಡಿರುವ ಗ್ರಾಹಕರಿಗೆ, ಕಡಿಮೆ ದರ ಪಾವತಿಸುವುದರಿಂದ ಸೌರ ವಿದ್ಯುತ್‌  ಉತ್ಪಾದನೆ ಮತ್ತು ಬಳಕೆಗೆ ಹಿನ್ನಡೆಯಾಗಲಿದೆ.

ಬಹುತೇಕ ಬಳಕೆದಾರರು ಪರಿಸರ ಕಾಳಜಿಗಿಂತ  ಗರಿಷ್ಠ ದರದಲ್ಲಿ ವಿದ್ಯುತ್‌ ಖರೀದಿಯ ಕಾರಣಕ್ಕೆ ಸೌರ ವಿದ್ಯುತ್‌ ಉತ್ಪಾದಿಸುತ್ತಿದ್ದಾರೆ. ಈ ದರವೂ ಸೌರ ಫಲಕ ಅಳವಡಿಕೆಯ ವೆಚ್ಚವನ್ನು ದೀರ್ಘಾವಧಿಯಲ್ಲಿ ತುಂಬಿಕೊಡಲಿದೆಯಷ್ಟೆ.

ಬೆಂಗಳೂರು ಸೇರಿದಂತೆ ದೇಶದಲ್ಲಿ  ವಿದ್ಯುತ್‌ ಬೆಲೆಯು ಮಾರುಕಟ್ಟೆ ದರಕ್ಕಿಂತ ಕಡಿಮೆ ಇದೆ. ಇದೇ ಕಾರಣಕ್ಕೆ ವಿದ್ಯುತ್‌ ಪೂರೈಕೆ ಸಂಸ್ಥೆಗಳು (ಎಸ್ಕಾಂಗಳು) ಹಣಕಾಸಿನ ಬಿಕ್ಕಟ್ಟು ಎದುರಿಸುತ್ತಿವೆ.  ವಿದ್ಯುತ್‌ ದರ ಹೆಚ್ಚಳದಿಂದ ಮಾತ್ರ ‘ಎಸ್ಕಾಂ’ಗಳ ವರಮಾನ ಹೆಚ್ಚಳಗೊಂಡು, ಅಡೆತಡೆ ಇಲ್ಲದೆ ವಿದ್ಯುತ್‌ ಪೂರೈಸಲು ಸಾಧ್ಯವಾಗಲಿದೆ.

ವಿದ್ಯುತ್‌ ವಲಯದಲ್ಲಿ ಕೆಇಆರ್‌ಸಿ ಈಗ ಸ್ಪರ್ಧಾತ್ಮಕತೆ ಹೆಚ್ಚಿಸಲು ಗಮನ ಕೇಂದ್ರೀಕರಿಸಬೇಕಾಗಿದೆ. ಮಾರುಕಟ್ಟೆ ಪ್ರವೇಶಿಸಲು ಖಾಸಗಿಯವರಿಗೆ ಅವಕಾಶ ಮಾಡಿಕೊಡಬೇಕಾಗಿದೆ. ಖಾಸಗಿಯವರು ಮಾರುಕಟ್ಟೆ ದರಗಳಲ್ಲಿ ನಿರಂತರವಾಗಿ ವಿದ್ಯುತ್‌ ಪೂರೈಕೆ ಮಾಡುತ್ತಾರೆ. ಮುಂಬೈ ಮಹಾನಗರದ ಉದಾಹರಣೆ ತೆಗೆದುಕೊಂಡರೆ, ಅಲ್ಲಿ ವಿದ್ಯುತ್‌ ಅಭಾವ ಅಪರೂಪಕ್ಕೆ ಸೃಷ್ಟಿಯಾಗುತ್ತದೆ. ಇದಕ್ಕೆ ಅಲ್ಲಿ ಮೂರು ವಿದ್ಯುತ್‌ ಪೂರೈಕೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿರುವುದೇ ಮುಖ್ಯ ಕಾರಣ. ಟಾಟಾ, ರಿಲಯನ್ಸ್‌ ಮತ್ತು ‘ಬೆಸ್ಟ್‌’ ಸಂಸ್ಥೆಗಳು ವಿದ್ಯುತ್‌ ಪೂರೈಕೆಯ ಹೊಣೆಯನ್ನು ಸಮರ್ಥವಾಗಿ ನಿಭಾಯಿಸುತ್ತಿವೆ.

ಈ ಸಂಸ್ಥೆಗಳು  ಗ್ರಾಹಕರ ಮನಗೆಲ್ಲಲು ಸ್ಪರ್ಧಾತ್ಮಕ ದರದಲ್ಲಿ ವಿದ್ಯುತ್‌ ಪೂರೈಸುತ್ತಿವೆ.  ಖಾಸಗಿ ವಿದ್ಯುತ್‌ ಪೂರೈಕೆದಾರರು ಮತ್ತು ರಾಜ್ಯ ವಿದ್ಯುತ್‌ ಮಂಡಳಿ ಮಧ್ಯದ ಸ್ಪರ್ಧೆಯ ಫಲವಾಗಿ ಗೃಹಬಳಕೆ, ವಾಣಿಜ್ಯ ಮತ್ತು ಕೈಗಾರಿಕಾ ಉದ್ದೇಶದ ಘಟಕಗಳಿಗೆ  ನಿರಂತರವಾಗಿ ವಿದ್ಯುತ್‌ ಪೂರೈಕೆಯಾಗುತ್ತಿದೆ.

ಲೇಖಕ ಸಾರ್ವಜನಿಕ ನೀತಿಗೆ ಸಂಬಂಧಿಸಿದ ಸ್ವತಂತ್ರ ಚಿಂತಕರ ಚಾವಡಿ ತಕ್ಷಶಿಲಾ ಇನ್‌ಸ್ಟಿಟ್ಯೂಷನ್‌ನ ವಿಶ್ಲೇಷಕ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT