ADVERTISEMENT

ಸ್ವಯಂಕೃತ ವಿನಾಶದತ್ತ ಇಸ್ರೇಲ್

ಥಾಮಸ್ ಎಲ್ ಫ್ರೀಡ್ಮನ್
Published 30 ಮೇ 2016, 19:30 IST
Last Updated 30 ಮೇ 2016, 19:30 IST

ಇಸ್ರೇಲ್‌ ಇತ್ತೀಚೆಗೆ ಜಾಗತಿಕ ಮಟ್ಟದಲ್ಲಿ ಭಾರಿ ಟೀಕೆಗೊಳಗಾಗಿದೆ. ‘ಬಹಿಷ್ಕರಿಸಿ, ಹೂಡಿಕೆ ಹಿಂಪಡೆಯಿರಿ, ಕಡಿವಾಣ ಹೇರಿ’ ಎಂಬಂತಹ, ಕಾಲೇಜು ಆವರಣಗಳಲ್ಲಿ ಹುಟ್ಟಿದ ಬೇಡಿಕೆಗಳು ರಾಜಕೀಯ ಟೀಕೆಯ ಮುಖವಾಡ ಹೊತ್ತಿವೆ.

ಆದರೆ ಅವು ಇಸ್ರೇಲ್‌ ಅನ್ನು ವಿನಾಶದತ್ತ ದೂಡುವಂತಿವೆ. ಬಹುತೇಕ ಟೀಕೆಗಳು ಹುಟ್ಟಿಕೊಳ್ಳುವುದಕ್ಕೆ ತನ್ನನ್ನು ತಾನೇ ನಾಶಪಡಿಸಿಕೊಳ್ಳುವ ಇಸ್ರೇನ್‌ನ ಅಪೇಕ್ಷೆಯೂ ಒಂದು ಕಾರಣ. ಇದಲ್ಲದೆ ಪಶ್ಚಿಮ ದಂಡೆಯಲ್ಲಿ ಪ್ಯಾಲೆಸ್ಟೀನಿಯನ್ನರಿಂದ  ಇಸ್ರೇಲ್‌ ತನ್ನನ್ನು ಬೇರ್ಪಡಿಸಿಕೊಳ್ಳುವ ಯಾವುದೇ ಸಾಧ್ಯತೆಯನ್ನು ಸದಾ ಹೊಸಕಿಹಾಕುವ ಪ್ರಧಾನಿ ಬೆಂಜಮಿನ್ ನೆತನ್ಯಾಹು ಅವರ ನಡೆಯೂ ಬಹಳಷ್ಟು ಟೀಕೆಗಳು ಹುಟ್ಟಿಕೊಳ್ಳುವುದಕ್ಕೆ ಕಾರಣವಾಗಿದೆ.

ನೆತನ್ಯಾಹು ಎಂತಹ ವ್ಯಕ್ತಿ ಎಂದರೆ, ರೂಬಿಕಾನ್‌ ನದಿಯ ಮಧ್ಯದಲ್ಲಿ ಶ್ವಾನಶೈಲಿಯಲ್ಲಿ ಈಜುತ್ತಾ, ಎಂದೂ ದಡ ಸೇರದೆ, ನಿಮ್ಮನ್ನು (‘ನಾನು ನಿಮ್ಮತ್ತಲೇ ಬರುತ್ತಿದ್ದೇನೆ, ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತೇನೆ’ ಎಂಬಂತಹ ಮಾತುಗಳಿಂದ) ರೇಗಿಸುತ್ತಾ, ಮೊದಲಿದ್ದ ಜಾಗದಲ್ಲೇ ಇದ್ದು, ತಮ್ಮ ವೈರಿಗಳನ್ನೆಲ್ಲ ನಿಭಾಯಿಸುತ್ತಾ, ತಾವೊಬ್ಬರೇ ಬದುಕುಳಿಯುವಂತೆ ನೋಡಿಕೊಳ್ಳುವ ಸ್ವಭಾವದವರು.

ನೆತನ್ಯಾಹು ಅವರ ಆಡಳಿತದಲ್ಲಿ ಇಸ್ರೇಲ್ ಕೆಟ್ಟ ಪರಿಸ್ಥಿತಿಯಿಂದ ಅತಿ ಕೆಟ್ಟ ಪರಿಸ್ಥಿತಿಯತ್ತ ಜಾರಿದೆ. ಈಗ ತಾನೆ ಅವರು ರಕ್ಷಣಾ ಮಂತ್ರಿ ಮೊಶೆ ಯಾಲನ್‌ ಅವರನ್ನು ಒತ್ತಾಯಪೂರ್ವಕವಾಗಿ ಹೊರಹಾಕಿದ್ದಾರೆ. ಸೇನೆಯ ಹಿಂದಿನ ಮಹಾದಂಡನಾಯಕರಾಗಿದ್ದ ಯಾಲನ್ ಬಹಳ ಸಭ್ಯರು. ಇಸ್ರೇಲ್ ಸೇನೆಯು ಪ್ರಜೆಗಳ ಸೇನೆಯಾಗಿಯೇ ಉಳಿದು, ಅಪಾಯಕಾರಿ ನೆರೆಹೊರೆಯ ಮಧ್ಯದಲ್ಲಿಯೂ ತನ್ನ ನಿಯತ್ತನ್ನು ಉನ್ನತ ಮಟ್ಟದಲ್ಲಿ ಉಳಿಸಿಕೊಳ್ಳಬೇಕು ಎಂದು ಪ್ರತಿಪಾದಿಸುವ ಮನುಷ್ಯ.

ಯಾಲನ್ ಅವರ ಸ್ಥಾನಕ್ಕೆ ತೀವ್ರ ಬಲಪಂಥೀಯ ಅವಿಗ್ಡರ್‍ ಲಿಬರ್‍ಮನ್ ಅವರನ್ನು ತರುವ ಉದ್ದೇಶ ನೆತನ್ಯಾಹು ಅವರಿಗಿದೆ. ‘ಬೀಬಿ (ನೆತನ್ಯಾಹು) ಅವರ ತಂಡವೇ ಇತ್ತೀಚೆಗೆ ಲಿಬರ್‍ಮನ್ ಅವರನ್ನು ಬಾಲಿಶ ಮಾತಿನ ಮಲ್ಲ ಎಂದೂ, ಸೇನೆಯ ಬಗ್ಗೆ ವಿಮರ್ಶೆ ಮಾಡಲೂ ಅನರ್ಹ, ಟೆನಿಸ್‌ ಚೆಂಡಿನಿಂದ ತಪ್ಪಿಸಿಕೊಂಡಿದ್ದೇ ಅವರು ಮಾಡಿದ ಮಹಾ ಯುದ್ಧ ಎಂದೂ ಹೇಳಿತ್ತು’ ಎಂದು ‘ಹಾರೆಜ್’ ಪತ್ರಿಕೆ ವರದಿ ಮಾಡಿದೆ.

ಲಂಚದ ಪ್ರಕರಣಗಳಲ್ಲಿ ತನಿಖೆ ಎದುರಿಸುವ ಸಂದರ್ಭ ಬಿಟ್ಟು ಉಳಿದಂತೆ ಲಿಬರ್‍ಮನ್ ಅನೇಕ ಮಾತುಗಳನ್ನಾಡಿದ್ದಾರೆ. ಅವರು ಈಜಿಪ್ಟ್‌ನ ಅಸ್ವಾನ್ ಡ್ಯಾಮ್‌ ಸ್ಫೋಟಿಸುವುದಾಗಿ ಹೇಳಿದ್ದಾರೆ; ಪಶ್ಚಿಮ ದಂಡೆಯಿಂದ ಇಸ್ರೇಲ್ ಹೊರಗೆ ಬರಬೇಕೆಂದು ಹೇಳುವ ಇಸ್ರೇಲಿಯರನ್ನು ದೇಶದ್ರೋಹಿಗಳೆಂದು ಕರೆದಿದ್ದಾರೆ.

ಅಲ್ಲದೆ, ಗಾಯಗೊಂಡು ವೈದ್ಯಕೀಯ ಚಿಕಿತ್ಸೆಯ ನಿರೀಕ್ಷೆಯಲ್ಲಿ ನೆಲದ ಮೇಲೆ ಬಿದ್ದಿದ್ದ ಪ್ಯಾಲೆಸ್ಟೀನಿ ಆಕ್ರಮಣಕಾರನೊಬ್ಬನನ್ನು ಇಸ್ರೇಲಿ ಸೈನಿಕ ಸಾರ್ಜೆಂಟ್ ಎಲೋರ್‍ ಅಜಾರಿಯಾ ತಲೆಗೆ ಗುಂಡು ಹೊಡೆದು ಸಾಯಿಸಿದ್ದನ್ನು ಲಿಬರ್‍ಮನ್ ಹೊಗಳಿದ್ದರು.

ಈ ಇಡೀ ಪ್ರಕರಣ ಆರಂಭಗೊಂಡಿದ್ದು ಮಾರ್ಚ್‌ 24ರಂದು. ಸೇನೆಯಲ್ಲಿ ವೈದ್ಯಕೀಯ ಕೆಲಸ ಮಾಡುವ ಅಜಾರಿಯ, ಗಾಯಗೊಂಡ ಪ್ಯಾಲೆಸ್ಟೀನ್ ದೇಶದವನಿಗೆ ಗುಂಡು ಹೊಡೆಯುವ ವಿಡಿಯೊ ಚಿತ್ರ ಬಯಲಿಗೆ ಬಂತು.

ಚಾಕು ಹಿಡಿದುಕೊಂಡಿದ್ದ ಇಬ್ಬರು ಪ್ಯಾಲೆಸ್ಟೀನಿಯನ್ನರಲ್ಲಿ ಒಬ್ಬನು ಇಸ್ರೇಲಿ ಸೈನಿಕನಿಗೆ ತಿವಿದು ಸ್ವಲ್ಪ ಮಟ್ಟಿಗೆ ಗಾಯ ಮಾಡುತ್ತಾನೆ. ಆಗ ಅಜಾರಿಯ ಆತನನ್ನು ಕೊಲ್ಲುವ ನಿರ್ಣಯವನ್ನು ತೆಗೆದುಕೊಂಡುಬಿಡುತ್ತಾನೆ.

ಇದಕ್ಕೆ ತಕ್ಷಣ ಪ್ರತಿಕ್ರಿಯಿಸಿದ ಯಾಲನ್ ಮತ್ತು ಸೇನಾ ಮುಖ್ಯಸ್ಥ ಲೆಫ್ಟಿನೆಂಟ್‌ ಜನರಲ್‌ ಗಡಿ ಐಸೆಂಕೋ ‘ಇಸ್ರೇಲಿ ಸೇನೆ ಇದನ್ನು ಒಪ್ಪುವುದಿಲ್ಲ’ ಎಂದು ಪ್ರತಿಕ್ರಿಯಿಸಿದರು.

ಮಾನವ ಹತ್ಯೆ ಮತ್ತು ಅಸಮಂಜಸ ಸೇನಾ ವರ್ತನೆಯ ಪ್ರಕರಣಗಳು ಅಜಾರಿಯ ವಿರುದ್ಧ ದಾಖಲಾದವು. ಆತನ ವರ್ತನೆ ಸೇನೆಯ ಮೌಲ್ಯಗಳ ಉಲ್ಲಂಘನೆಯಾಗಿದೆ ಎಂದು ಮೊದಲು ಹೇಳಿದ್ದ ನೆತನ್ಯಾಹು, ತಮ್ಮ ಬೆಂಬಲಿಗರು ಈ ಹತ್ಯೆಯ ಪರ ನಿಂತಾಗ ತಮ್ಮ ನಿಲುವು ಬದಲಾಯಿಸಿದರು. ನ್ಯಾಯಾಲಯ ಏನು ನಡೆದಿದೆ ಎಂಬುದನ್ನು  ತೂಗಿ ನೋಡಿ ನಿರ್ಣಯ ತೆಗೆದುಕೊಳ್ಳಬೇಕು ಎಂದರು. ಲಿಬರ್‍ಮನ್ ನ್ಯಾಯಾಲಯಕ್ಕೆ ಹೋಗಿ ಅಜಾರಿಯಗೆ ಬೆಂಬಲ ವ್ಯಕ್ತಪಡಿಸಿದರು.

ಇದನ್ನೆಲ್ಲ ನೋಡಿ ಯಾಲನ್ ಮತ್ತು ಸೇನಾ ನಾಯಕರು ತೀವ್ರ ಸಂಕಟಪಟ್ಟರು. ಸಾಮೂಹಿಕ ಹತ್ಯಾಕಾಂಡದ ಸ್ಮರಣಾ ದಿನಾಚರಣೆಯಂದು ಈ ವಿಷಯ ಸ್ಫೋಟಗೊಂಡಿತು.

ಸೇನೆಯ ಉಪ ಮಹಾದಂಡನಾಯಕ ಮೇಜರ್‌ ಜನರಲ್‌ ಯಾಯಿರ್‍ ಗೋಲನ್ ರಾಷ್ಟ್ರವನ್ನುದ್ದೇಶಿಸಿ, ‘ಯುರೋಪ್‌ನಲ್ಲಿ ಘಟಿಸಿದ ಆಘಾತಕಾರಿ ಬೆಳವಣಿಗೆಗಳು ಇಲ್ಲೂ ಘಟಿಸಲಾರಂಭಿಸಿದ್ದು ಭಯ ಹುಟ್ಟಿಸುತ್ತವೆ’ ಎಂದರು.  ಗೋಲನ್‌ರನ್ನು ನೆತನ್ಯಾಹು ತರಾಟೆಗೆ ತೆಗೆದುಕೊಂಡರು. ಆದರೆ ಯಾಲನ್‌ ಸೇನೆಯ ಉನ್ನತ ಜನರಲ್‌ಗಳನ್ನುದ್ದೇಶಿಸಿ ‘ನಿಮ್ಮ ಮಾನವೀಯತೆ, ಆತ್ಮಸಾಕ್ಷಿ ಮತ್ತು ನೈತಿಕ ಅಳತೆಗೋಲುಗಳ ಆಣತಿಯಂತೆಯೇ ಸದಾ ನಡೆದುಕೊಳ್ಳಿ. ಗಾಳಿ ಬಂದ ಕಡೆ ತೂರಿಕೊಳ್ಳಬೇಡಿ’ ಎಂದು ಹೇಳಿದರು.

ಗಾಳಿ ಬಂದ ಕಡೆ ತೂರಿಕೊಳ್ಳುವ ಸ್ವಭಾವದ ನೆತನ್ಯಾಹು, ಯಾಲನ್‌ರನ್ನು ಕೈಬಿಟ್ಟರು. ಹೀಬ್ರ್ಯೂ ವಿಶ್ವವಿದ್ಯಾಲಯದ ಧಾರ್ಮಿಕ ತತ್ವಜ್ಞಾನಿ ಮೊಶೆ ಹಲ್ಬರ್ಟಲ್ ಇದನ್ನು ವಿವರಿಸುತ್ತ, ‘ಸಮರಪ್ರೇಮಿ ರಾಷ್ಟ್ರೀಯ ಪಕ್ಷವೊಂದು ತನ್ನ ಮೊದಲಿನ ಮಾನವೀಯ ಮತ್ತು ಪ್ರಜಾಸತ್ತಾತ್ಮಕ ಅಡಿಪಾಯ ತೊರೆದು ರಾಷ್ಟ್ರೀಯತೆಯನ್ನು ಅತಿಯಾಗಿ ಅಪ್ಪಿಕೊಳ್ಳುತ್ತಿರುವ ಪಕ್ಷವಾಗಿ ಪರಿವರ್ತನೆಯಾಗುತ್ತಿರುವುದನ್ನು ನಾವಿಂದು ಇಸ್ರೇಲ್‌ನ ಆಡಳಿತ ಪಕ್ಷದಲ್ಲಿ ಕಾಣುತ್ತಿದ್ದೇವೆ’ ಎನ್ನುತ್ತಾರೆ.

‘ಅದು ಈಗ ದೇಶದ ಒಳಗಿರುವ ಶತ್ರುಗಳನ್ನು, ಅಂದರೆ ತನ್ನ ನ್ಯಾಯಾಲಯಗಳು, ಸ್ವಯಂ ಸೇವಾ ಸಂಸ್ಥೆಗಳು, ಶಿಕ್ಷಣ ಕ್ಷೇತ್ರ, ಅಲ್ಪಸಂಖ್ಯಾತ ಅರಬ್ಬರು  ಮತ್ತು ಸೇನೆ ಇವುಗಳಲ್ಲಿ ಶತ್ರುಗಳನ್ನು ಕಂಡು ಅವರ ವಿರುದ್ಧ ತಿರುಗಿ ಬಿದ್ದಿದೆ.  ಪಶ್ಚಿಮ ದಂಡೆಯನ್ನು ಶಾಶ್ವತವಾಗಿ ವಶಪಡಿಸಿಕೊಳ್ಳುವ ತನ್ನ ಯೋಜನೆಗೆ ಅಡ್ಡ ಬರುವ ಎಲ್ಲರ ವಿರುದ್ಧ ನಿಂತಿದೆ.

ಹೊರಗಿನ ಶತ್ರುಗಳಿಗೆ ಸರಿಯಾದ ಉತ್ತರ ಕೊಡಲು ವಿಫಲವಾಗಿರುವ ಲಿಕುಡ್‌ ಪಕ್ಷ ಈಗ ಆಂತರಿಕ ಶತ್ರುಗಳತ್ತ ಗಮನ ಹರಿಸಿದೆ. ಇಸ್ರೇಲ್‌ನಲ್ಲಿ ಇದು ಮಹತ್ತರ ಪರಿವರ್ತನೆ ಮತ್ತು ಇದನ್ನು ವ್ಯಾಕುಲಚಿತ್ತದಿಂದ ನೋಡಬೇಕಾಗಿದೆ’ ಎಂದು ಅವರು ಹೇಳುತ್ತಾರೆ.

‘ಸೇನೆಯ ನಾಯಕತ್ವ ಮಾತ್ರ, ಎಲ್ಲರೂ ಎಲ್ಲರ ವಿರುದ್ಧ ನಿಲ್ಲುವಂತೆ ಮಾಡುವ ಈ ಯುದ್ಧವನ್ನು ಮೀರಿ ಮತ್ತು ಸಂಕುಚಿತ ರಾಜಕೀಯ ಲಾಭಗಳ ಜ್ವಾಲೆಯನ್ನು ದಮನಿಸಿ ನೈತಿಕ ಸಹಜತೆ ತರಲು ಯತ್ನಿಸುತ್ತಿದೆ’ ಎಂದೂ ಅವರು ಹೇಳುತ್ತಾರೆ. ನೆತನ್ಯಾಹು ಇದಕ್ಕೆ ತದ್ವಿರುದ್ಧವಾಗಿ ಕೆಲಸ ಮಾಡುತ್ತಾರೆ. ಇಸ್ರೇಲ್‌ನ ಭವಿಷ್ಯದ ಬಗ್ಗೆ ಕಾಳಜಿ ಇರುವ ನಮ್ಮಂತಹವರಿಗೆ, ಇದು ಕಗ್ಗತ್ತಲು ಕವಿದಿರುವ ಗಳಿಗೆ.
(ದಿ ನ್ಯೂಯಾರ್ಕ್ ಟೈಮ್ಸ್)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.