ADVERTISEMENT

ಹುತಾತ್ಮ ಮತ್ತು ಹಂತಕ: ಗಾಂಧಿ ಹತ್ಯೆಯ ವ್ಯಾಖ್ಯಾನ

ಗಾಂಧಿ ಹತ್ಯೆಯನ್ನು ಪ್ರತ್ಯೇಕ ಘಟನೆ ಎಂದು ಭಾವಿಸದೆ ಅದನ್ನು ಅನಿವಾರ್ಯಗೊಳಿಸಿದಂತಹ ಸಂಗತಿಗಳನ್ನು ವಿಭಿನ್ನ ನೆಲೆಗಳ್ಲ್ಲಲಿ ಗ್ರಹಿಸುವುದು ಮುಖ್ಯ

ರಾಜಾರಾಮ್ ತೋಳ್ಪಾಡಿ
Published 29 ಜನವರಿ 2013, 19:59 IST
Last Updated 29 ಜನವರಿ 2013, 19:59 IST

ಭಾರತದ ಸಂಸ್ಕೃತಿ ಚಿಂತಕ ಆಶೀಷ್ ನಂದಿ ಅನೇಕ ವರ್ಷಗಳ ಹಿಂದೆ ಗಾಂಧಿ ಹತ್ಯೆಯ ಕುರಿತಾಗಿ ಬರೆದ ಒಂದು ಮಾರ್ಮಿಕ ಲೇಖನ ಈ ಬರಹದ ಪ್ರಮುಖ ಸ್ಫೂರ್ತಿ. ಗಾಂಧಿ ಹತ್ಯೆಯ ಕುರಿತಾದ ನಂದಿಯವರ ಈ ಮಾರ್ಮಿಕ ಲೇಖನದ ಪ್ರಮುಖ ವಾದಗಳನ್ನು ಸ್ಥೂಲವಾಗಿ ಅಥವಾ ಯಥಾವತ್ತಾಗಿ ನಿಮ್ಮ ಮುಂದಿಡುವುದು ನನ್ನ ಉದ್ದೇಶವಲ್ಲ. ಬದಲಾಗಿ ಆ ಲೇಖನ ಓದಿದ ನಂತರ ಗಾಂಧಿ ಹತ್ಯೆಯ ಸಂಕೀರ್ಣ ಚಾರಿತ್ರಿಕ  ವಿದ್ಯಮಾನದಲ್ಲಿ ನನಗೆ ಮಹತ್ವವೆಂದು ಅನಿಸಿದ  ಕೆಲವು ಅಂಶಗಳನ್ನು  ಇಲ್ಲಿ ಮುಂದಿಡುತ್ತೇನೆ. (ಈ ಅಂಶಗಳನ್ನು ನಂದಿಯವರು ಪ್ರಸ್ತಾಪಿಸಿರಬಹುದು ಅಥವಾ ಇಲ್ಲದೇ ಇರಬಹುದು).

ನಾವಂದುಕೊಂಡಂತೆ ಗಾಂಧಿ ಹತ್ಯೆ ಒಂದು ಅಚಾನಕ್ ಆಗಿ ನಡೆದ ದುರ್ಘಟನೆಯಾಗಿರದೆ ಆಧುನಿಕ ಭಾರತ ಚಾರಿತ್ರಿಕವಾಗಿ ರೂಪುಗೊಳ್ಳುವ ಪ್ರಕ್ರಿಯೆಯಲ್ಲಿ ಸಂಭವಿಸಿದ ಒಂದು ಅನಿವಾರ್ಯ ಘಟನೆ ಎಂದು ನಂದಿ ಆ ಲೇಖನದಲ್ಲಿ ಪ್ರತಿಪಾದಿಸುತ್ತಾರೆ. ಮೂಲತಃ ಸಾಮಾಜಿಕ ಮನಶಾಸ್ತ್ರದ ನೆಲೆಯಿಂದ ತಮ್ಮ ವಿಚಾರಗಳನ್ನು ಮಂಡಿಸುವ ಆಶೀಷ್ ನಂದಿ ಗಾಂಧಿ ಹತ್ಯೆಯ ದಾರುಣ ವಿದ್ಯಮಾನವನ್ನು ಒಂದು ವಿಸ್ತಾರವಾದ ಚಾರಿತ್ರಿಕ ಹಾಗೂ ಸಾಂಸ್ಕೃತಿಕ ಪರಿಪ್ರೇಕ್ಷದಲ್ಲಿ ವಿಶ್ಲೇಷಿಸುತ್ತಾರೆ. ಬಹುಶಃ ಆ ಲೇಖನದಲ್ಲಿ ನಂದಿಯವರು ಪ್ರಸ್ತಾಪಿಸಿದ ಒಂದು  ಪ್ರಮುಖ ವಿಚಾರದಿಂದ ನಮ್ಮ ಚರ್ಚೆಯನ್ನು ಆರಂಭಿಸಬಹುದು.

ಅವರು ಸ್ಥೂಲವಾಗಿ ಹೀಗೆ ಹೇಳುತ್ತಾರೆ. ಪ್ರತಿಯೊಂದು ಸೈದ್ಧಾಂತಿಕ ರಾಜಕೀಯ ಹತ್ಯೆಯಲ್ಲಿ ಒಂದು ಸಂಯುಕ್ತ ಹೇಳಿಕೆ ಹುದುಗಿಕೊಂಡಿರುತ್ತದೆ. ಈ ಸಂಯುಕ್ತ ಹೇಳಿಕೆಯ ಒಂದು ಮಗ್ಗುಲು ಹುತಾತ್ಮನದ್ದಾದರೆ ಇನ್ನೊಂದು ಮಗ್ಗುಲು ಹಂತಕನದು. ಸೈದ್ಧಾಂತಿಕ ರಾಜಕೀಯ ಹತ್ಯೆಯ ಒಳಗೆ ಅವಿತುಕೊಂಡಿರುವ ಈ ಸಂಯುಕ್ತ ಹೇಳಿಕೆ ಬಹುತೇಕ ಸಂದರ್ಭಗಳಲ್ಲಿ ಅಸ್ಪಷ್ಟವೂ, ಸಂಕೀರ್ಣವೂ ಮತ್ತು ಅನಿರ್ದಿಷ್ಟವೂ ಆಗಿ ಉಳಿದುಬಿಟ್ಟಿರುತ್ತದೆ. ಅದು ಡ್ರಾದಲ್ಲಿ ಅಂತ್ಯಗೊಂಡ ಕ್ರಿಕೆಟ್ ಆಟದ ಬಳಿಕ ಬ್ಯಾಟುಗಾರರಿಬ್ಬರೂ ನಿರ್ಲಿಪ್ತರಾಗಿ ಪೆವಿಲಿಯನ್‌ಗೆ ಮರಳಿದ ತರಹ ಕಾಣಿಸುತ್ತದೆ.

ಸೈದ್ಧಾಂತಿಕ ರಾಜಕೀಯ ಹತ್ಯೆಯ ಅಸಲು ಪ್ರತಿಯಂತೆ ಕಾಣುವ ಗಾಂಧಿಯ ಹತ್ಯೆಯು ಈ ತರಹದ  ಸಂಯುಕ್ತ ಹೇಳಿಕೆಯನ್ನು ತನ್ನಲ್ಲಿ ಬಚ್ಚಿಟ್ಟುಕೊಂಡಿದೆ. ಈ ಹೇಳಿಕೆಯ ಒಂದು ಮಗ್ಗುಲಲ್ಲಿ ಸಾಂಸ್ಕೃತಿಕ ಕಾಳಜಿಗಳಿಂದ ಮೈತಳೆದ ಗ್ರಾಮೀಣ ಭಾರತವನ್ನು ಪ್ರತಿನಿಧಿಸುವ ಗಾಂಧಿ ಕಾಣಿಸಿದರೆ, ಇನ್ನೊಂದು  ಕಡೆ, ಆಧುನಿಕತೆ ಹಾಗೂ ಅಭಿವೃದ್ಧಿಗಳ ಹೊಸ ಆಕಾಂಕ್ಷೆಗಳಲ್ಲಿ ರೂಪುಗೊಳ್ಳುತ್ತಿರುವ ಇಂಡಿಯಾ ಎನ್ನುವ ರಾಷ್ಟ್ರ ಪ್ರಭುತ್ವದ ಹಿತಾಸಕ್ತಿಗಳನ್ನು ಪ್ರತಿನಿಧಿಸುವ ನಾಥೂರಾಮ್ ಗೋಡ್ಸೆ ಹಾಗೂ ಆತನ ಸಂಚುಕೋರ ಸಹಚರರು ಕಾಣಿಸುತ್ತಾರೆ.

ಜೊತೆಯಲ್ಲಿಯೇ, ಹೊಸದಾಗಿ  ರೂಪುಗೊಳ್ಳುತ್ತಿರುವ ಇಂಡಿಯಾದ ಆಡಳಿತ ವರ್ಗ, ನಗರವಾಸಿ ಮಧ್ಯಮವರ್ಗ ಮತ್ತು ರಾಷ್ಟ್ರ ಪ್ರಭುತ್ವದ  ಇತರ ಹಿತಾಸಕ್ತ  ಗುಂಪುಗಳು ಪರೋಕ್ಷವಾಗಿ  ಈ ಸಂಯುಕ್ತ ಹೇಳಿಕೆಯಲ್ಲಿ ಕಾಣಿಸಿಕೊಳ್ಳುತ್ತವೆ. ಆದ್ದರಿಂದ ಗಾಂಧಿಯ ಹತ್ಯೆಯನ್ನು ಒಂದು ಪ್ರತ್ಯೇಕ ಘಟನೆ ಎಂದು ಭಾವಿಸದೆ ಅದನ್ನು ಅನಿವಾರ್ಯಗೊಳಿಸಿದ ಚಾರಿತ್ರಿಕ, ಸಾಂಸ್ಕೃತಿಕ, ಮನೋವೈಜ್ಞಾನಿಕ  ಹಾಗೂ  ರಾಜಕೀಯ ಸಂಗತಿಗಳಾವುವು? ಎನ್ನುವುದನ್ನು ಗಮನಿಸುವುದು ಬಹಳ ಮುಖ್ಯವಾಗುತ್ತದೆ.

ಗಾಂಧೀಜಿ ತನಗಿಂತ ಮೊದಲೇ ಭಾರತದಲ್ಲಿ ಪ್ರವರ್ಧಮಾನಕ್ಕೆ ಬಂದಿದ್ದ ರಾಷ್ಟ್ರೀಯ ಹೋರಾಟದ  ನಾಯಕತ್ವವನ್ನು ಒಂದು ನಿರ್ದಿಷ್ಟ ಕಾಲಘಟ್ಟದಲ್ಲಿ ವಹಿಸಿಕೊಂಡರು ಹಾಗೂ ಹಿಂದೆಂದೂ ಕಂಡರಿಯದ ರೀತಿಯಲ್ಲಿ ಅದರ ಸೈದ್ಧಾಂತಿಕ, ರಾಜಕೀಯ ಮತ್ತು ಸಾಮಾಜಿಕ ರೂಪುರೇಷೆಗಳನ್ನು ಮಹತ್ವಪೂರ್ಣವಾದ ರೀತಿಯಲ್ಲಿ ಬದಲಾಯಿಸಿದರು. ಅಲ್ಲಿಯ ತನಕ ರಾಷ್ಟ್ರೀಯ ಹೋರಾಟದ ನಾಯಕತ್ವವನ್ನು  ವಹಿಸಿಕೊಂಡಿದ್ದ ನಗರವಾಸಿ ಸುಶಿಕ್ಷಿತ ಗಣ್ಯವರ್ಗವನ್ನು ಬದಿಗೆ ಸರಿಸಿ ಈ ರಾಷ್ಟ್ರೀಯ ಹೋರಾಟದ ನಾಯಕತ್ವವನ್ನು ಗ್ರಾಮೀಣ ಭಾರತದ ರೈತ ಮುದಾಯ ಮತ್ತು ಇನ್ನಿತರ ಅಂಚಿನ ಜನವರ್ಗಗಳ ಕಡೆಗೆ ಅವರು ವರ್ಗಾಯಿಸಿದರು.

ಆ ಮೂಲಕ ರಾಷ್ಟ್ರೀಯ ಹೋರಾಟದ ಸೈದ್ಧಾಂತಿಕತೆಯನ್ನು ನಿರ್ಣಾಯಕವಾಗಿ ಕೇಂದ್ರದಿಂದ ಪರಿಧಿಗೆ ಗಾಂಧಿ ಕರೆದೊಯ್ದರು. ಇದು ರಾಷ್ಟ್ರೀಯ ಹೋರಾಟದ ಸಾಂಸ್ಕೃತಿಕ ಸ್ವರೂಪದಲ್ಲಿ ಅವರು ತಂದ ಬಹುದೊಡ್ಡ ಪಲ್ಲಟ. ಹೊಸ ಬಗೆಯ ಸಾಮಾಜಿಕ ಮತ್ತು ರಾಜಕೀಯ ಸಂಘಟನೆ ಹೊಸ ವಿನ್ಯಾಸದ ಸಾಮುದಾಯಿಕ ಸಂವಹನ ಹಾಗೂ ಹೊಸ ರೀತಿಯ ರಾಜಕೀಯ ತಂತ್ರಜ್ಞಾನ ಗಾಂಧಿ ರಾಜಕಾರಣದ ವಿಶೇಷತೆಗಳು. ಇದು ಒಂದು ನಿರ್ಣಾಯಕವಾದ ಅರ್ಥದಲ್ಲಿ  ಆಧುನಿಕ ಭಾರತದಲ್ಲಿ ಕೇಂದ್ರ ಹಾಗೂ ಪರಿಧಿಯ ಕುರಿತಂತೆ ಪ್ರಚಲಿತವಿದ್ದ ಮೇರು ನಿರ್ವಚನವನ್ನು ಗಾಂಧಿ ಪ್ರಶ್ನಿಸಿದ ರೀತಿ.

ಜೊತೆಯಲ್ಲಿಯೇ, ಗಾಂಧೀಜಿ ಈ ಹೊಸ ರಾಜಕೀಯ ಸಂಘಟನೆ, ಸಂವಹನ ಮತ್ತು ತಂತ್ರಜ್ಞಾನಗಳ ಮೂಲಕ  ಭಾರತದ ಮುಖ್ಯವಾಹಿನಿಯಲ್ಲಿ ರೂಢಮೂಲವಾಗಿ  ನೆಲೆಯೂರಿದ್ದ  ಪುರುಷತ್ವ ಹಾಗೂ ಸ್ತ್ರೀತ್ವದ ಕಲ್ಪನೆಗಳನ್ನು ಪಲ್ಲಟಗೊಳಿಸಿದರು. ಈ ಮೂಲಕ ಭಾರತದ ರಾಷ್ಟ್ರೀಯ ಹೋರಾಟದ ಮುಂಚೂಣಿಯಲ್ಲಿ ಮೆರೆದಾಡುತ್ತಿದ್ದ ಪುರುಷ ಪ್ರಾಧಾನ್ಯ ನಿರ್ವಚನವನ್ನು ಅವರು ಪ್ರಶ್ನಿಸಿದರು.

ತನಗಿಂತ ಮೊದಲೇ ಭಾರತದಲ್ಲಿ ಚಾರಿತ್ರಿಕವಾಗಿ ರೂಪುಗೊಂಡ ರಾಷ್ಟ್ರೀಯ ಹೋರಾಟದ ನಾಯಕತ್ವವನ್ನು ವಹಿಸಿಕೊಂಡ ಗಾಂಧಿ ರಾಷ್ಟ್ರೀಯವಾದಿ ಸೈದ್ಧಾಂತಿಕತೆಯನ್ನು ಅಲ್ಲಗಳೆಯುವ, ರಾಷ್ಟ್ರ ಪ್ರಭುತ್ವದ ಮೇರು ವ್ಯಾಖ್ಯಾನಗಳನ್ನು ನಿರಾಕರಿಸುವ ಹಾಗೂ ರಾಷ್ಟ್ರೀಯತೆಯ ತಾತ್ವಿಕತೆಯನ್ನು ಪ್ರಶ್ನಿಸುವ ಎಲ್ಲಾ ತರಹದ ಚಿಂತನೆಯನ್ನು ಮತ್ತು ಕ್ರಿಯಾಚರಣೆಗಳನ್ನು ನಡೆಸಿದರು. ಅವರ ಸ್ವರಾಜ್ಯದ ಕಲ್ಪನೆ ಹಾಗೂ ಸತ್ಯಾಗ್ರಹದ ಕ್ರಿಯಾಚರಣೆ ರಾಷ್ಟ್ರೀಯವಾದದ ಮತ್ತು ರಾಷ್ಟ್ರಪ್ರಭುತ್ವದ ಬೇರುಗಳನ್ನೇ ಕಡಿದು ಹಾಕುವಂತಹುದು.

ಹಾಗಾಗಿ, ಒಂದು ಸರಳವಾದ ಇತಿಹಾಸ  ಕಥನದಲ್ಲಿ ಗಾಂಧೀಜಿ ರಾಷ್ಟ್ರೀಯ ಹೋರಾಟದ ಮಹಾನ್ ನಾಯಕರಾಗಿ ಹಾಗೂ ಭಾರತದ ರಾಷ್ಟ್ರಪ್ರಭುತ್ವದ ಪಿತಾಮಹರಾಗಿ ಕಾಣಿಸಿದರೂ, ಒಂದು ವಿಮರ್ಶಾತ್ಮಕ ದೃಷ್ಟಿಯಲ್ಲಿ ರಾಷ್ಟ್ರಪ್ರಭುತ್ವ ಮತ್ತು ರಾಷ್ಟ್ರೀಯತೆಗಳ ಕಟು ಟೀಕಾಕಾರರಾಗಿ ಅವರು ಕಾಣಿಸುತ್ತಾರೆ. ಆದ್ದರಿಂದಲೇ, ಗ್ರಾಮೀಣ ಭಾರತ ಆಧುನಿಕ ರಾಷ್ಟ್ರವಾಗಿ ರೂಪುಗೊಳ್ಳುತ್ತಿರುವ ಚಾರಿತ್ರಿಕ ಪ್ರಕ್ರಿಯೆಯಲ್ಲಿ ಗಾಂಧೀಜಿ ನಿಧಾನವಾಗಿ, ಹಂತಹಂತವಾಗಿ ಹಾಗೂ ಕ್ರಮಬದ್ಧವಾಗಿ ಅಸಂಗತ ಎಂದೆನಿಸಿಕೊಳ್ಳಲಾರಂಭಿಸಿದರು. ಹಾಗಾಗಿ, ಗಾಂಧಿ ಹತ್ಯೆಯ ಅನೇಕ ವರ್ಷಗಳ ಮೊದಲೇ ಅವರ ಮರಣಶಯ್ಯೆ ಸಿದ್ಧವಾಗತೊಡಗಿತ್ತು.

ಗಾಂಧೀಜಿ ಆಧುನಿಕ ನಾಗರೀಕತೆಯನ್ನು ವಿಮರ್ಶೆಗೆ ಒಳಪಡಿಸಿದ ರೀತಿ, ವಿಜ್ಞಾನ, ತಂತ್ರಜ್ಞಾನಗಳ ಮಾನವ ವಿಮುಖತೆಯನ್ನು ಟೀಕಿಸಿದ ಕ್ರಮ ಮತ್ತು ಅಭಿವೃದ್ಧಿಯ ಕುರಿತು ಅವರು ತಳೆದ ವಿಭಿನ್ನ ಕ್ರಾಂತಿಕಾರಕ ದೃಷ್ಟಿ ಭಾರತದ ರಾಷ್ಟ್ರಪ್ರಭುತ್ವವನ್ನು ಪ್ರತಿನಿಧಿಸುವ ಜನವರ್ಗಗಳಿಗೆ ಅಪ್ಯಾಯಮಾನವಾದುದಾಗಿರಲಿಲ್ಲ. ಹೆಚ್ಚು ಕಮ್ಮಿ 1934ರ ನಂತರದ ಕಾಲಾವಧಿಯಲ್ಲಿ  ಕ್ರಮೇಣವಾಗಿ ಹಾಗೂ ಕ್ರಮಬದ್ಧವಾಗಿ ಕಾಂಗ್ರೆಸ್ ನಾಯಕತ್ವದ ಮೇಲಿನ  ತಮ್ಮ ಹಿಡಿತವನ್ನು ಕಳೆದುಕೊಳ್ಳುತ್ತಾ ಬಂದ ಗಾಂಧೀಜಿ 1947ರ  ವೇಳೆಗೆ ಬಹುತೇಕ  ಕಾಂಗ್ರೆಸ್ ಧುರೀಣರಿಗೆ ಒಂದು ವಿಸಂಗತಿಯಾಗಿ, ರಾಜಕೀಯವಾಗಿ ನಿಭಾಯಿಸಿಕೊಳ್ಳಲಾಗದ ಸರಕಾಗಿ ಕಾಣಿಸಲಾರಂಭಿಸಿದರು.

ಭಾರತ ವಿಭಜನೆಯ ಕಾಲಘಟ್ಟದಲ್ಲಿ ಗಾಂಧೀಜಿ ತಳೆದ ನಿಲುವುಗಳು ಮತ್ತು ನೀಡಿದ ಹೇಳಿಕೆಗಳು ಕಾಂಗ್ರೆಸ್ ನಾಯಕತ್ವಕ್ಕೆ ಹಾಗೂ ರಾಷ್ಟ್ರಪ್ರಭುತ್ವದ ಹಿತಾಸಕ್ತ ವರ್ಗಗಳ ಲೆಕ್ಕಾಚಾರಗಳಿಗೆ ಕಸಿವಿಸಿ ಉಂಟು ಮಾಡುವ ಸಂಗತಿಗಳಾಗಿದ್ದವು.
ಬಹುಶಃ ಧರ್ಮದ ಸ್ವರೂಪಕ್ಕೆ ಸಂಬಂಧಿಸಿದಂತೆ ಗಾಂಧೀಜಿ ನಡೆಸಿದ ವಿಶಿಷ್ಟ ಚಿಂತನೆಗಳು ಹಾಗೂ ಹಿಂದೂಧರ್ಮವನ್ನು ಅವರು ಮೂಲಜಿಜ್ಞಾಸಿಕವಾಗಿ ಪುನರ್‌ವ್ಯಾಖ್ಯಾನಿಸಿದ ರೀತಿ ಅವರ ಹತ್ಯೆಯ ಅನಿವಾರ್ಯತೆಯನ್ನು ಹೆಚ್ಚಿಸಿದವು ಎಂದೇ ಹೇಳಬೇಕು.

ಧಾರ್ಮಿಕತೆಯನ್ನು ಮೂಲತಃ ಸಾಮುದಾಯಿಕ ಜೀವನದ ನೀತಿಶಾಸ್ತ್ರವಾಗಿ ಗ್ರಹಿಸಿದ ಗಾಂಧಿಗೆ ತನ್ನ ಕಾಲದ ನಿರ್ದಿಷ್ಟ ಸವಾಲುಗಳಿಗೆ  ಅನುಗುಣವಾಗಿ ಹಿಂದೂಧರ್ಮವನ್ನು ಮರುನಿರೂಪಿಸುವ ಅವಶ್ಯಕತೆ ಇದ್ದಿತ್ತು. ಈ ಮರುನಿರೂಪಣೆ ಕೇವಲ ಮರುನಿರೂಪಣೆಯಾಗಿರದೆ ಒಂದು ಹೊಸ ಹಿಂದೂಧರ್ಮದ ಆವಿಷ್ಕಾರವೇ ಆಗಿಬಿಟ್ಟಿತ್ತು.

ತನ್ನನ್ನು ಮೂಲಜಿಜ್ಞಾಸಿಕ ಅರ್ಥದಲ್ಲಿ ಸನಾತನಿ ಎಂದು ಕರೆದುಕೊಳ್ಳುತ್ತಿದ್ದ ಗಾಂಧೀಜಿ ತನ್ನ ಅನ್ವೇಷಣೆಯಲ್ಲಿ ಆವಿಷ್ಕಾರಗೊಂಡ ಈ ಹೊಸ ಹಿಂದೂಧರ್ಮವನ್ನು ಹೊಸತೆಂದು ಬಗೆಯದಿದ್ದರೂ, ಆ ವೇಳೆಗಾಗಲೇ ರಾಜಕೀಯವಾಗಿ ಪ್ರಬಲವಾಗಿ ಸಂಘಟಿಸಲ್ಪಡುತ್ತಿದ್ದ ಹಿಂದೂ ಮತೀಯ ಅಸ್ಮಿತೆಗೆ ಗಾಂಧೀಜಿಯ ಹಿಂದೂ ಧರ್ಮ ಸ್ವಾಗತಾರ್ಹವಲ್ಲದ ಹೊಸತಾಗಿ ಅಥವಾ ತಿರಸ್ಕಾರಯೋಗ್ಯ ಪರಕೀಯವಾಗಿ ಕಾಣಿಸಿತು.

ಒಟ್ಟಾರೆ ಸ್ವರೂಪದಲ್ಲಿ ಸಾಮುದಾಯಿಕ ನೆಲೆಗಟ್ಟಿನ ನೀತಿಶಾಸ್ತ್ರದಲ್ಲಿ ಮೈತಳೆದ ಒಂದು ತೆರೆದ ಅಂಚಿನ ಹಿಂದೂ ಧರ್ಮವನ್ನು ಗಾಂಧಿ ಮತೀಯವಾಗಿ ಬೀಭತ್ಸವಾಗಿ ವಿಘಟಿತಗೊಳ್ಳುತ್ತಿರುವ ಭಾರತೀಯ ಸಮಾಜದ ಮುಂದಿರಿಸಿದರು. ಈ ತೆರೆದ ಅಂಚಿನ ಅಥವಾ ಅಂಚು ತೆರೆದ ಹಿಂದೂ ಧರ್ಮ ಕೆಲವೊಮ್ಮೆ ಹೆಚ್ಚು ಕ್ರೈಸ್ತವಾಗಿ ಮತ್ತು  ಕೆಲವೊಮ್ಮೆ ಹೆಚ್ಚು ಜೈನವಾಗಿ, ಇನ್ನೂ ಕೆಲವೊಮ್ಮೆ ಹೆಚ್ಚು ಇಸ್ಲಾಮಿಯವಾಗಿ ಕಾಣಿಸುತ್ತಿತ್ತು. ಹೀಗಾಗಿ, ಈ ಬಗೆಯಾದ ಸಮಾಜ ಸುಧಾರಣಾ ಪ್ರಣೀತ ತೆರೆದ ಅಂಚಿನ ಹಿಂದೂ ಧರ್ಮ ಭಾರತದ ಕರ್ಮಟ ಹಿಂದೂಗಳಿಗೆ ಒಪ್ಪಿಗೆಯಾಗಲಿಲ್ಲ.

ಅಂತೆಯೇ, ಈ ಧರ್ಮದೃಷ್ಟಿಯ ಒಡಲಾಳದಲ್ಲಿ ಕಾಣಿಸಿಕೊಳ್ಳುವ ಬಹುಕೇಂದ್ರೀಯತೆ, ಪ್ರಭುತ್ವ ನಿರಾಕರಣೆ ಹಾಗೂ ನರನಾರಿ ಪರಿಕಲ್ಪನೆಯ ಮೂಲಜಿಜ್ಞಾಸಿಕ ನಿರ್ವಚನ ಇಪ್ಪತ್ತನೆ ಶತಮಾನದಲ್ಲಿ ಪ್ರಖರವಾಗಿ ರೂಪುಗೊಳ್ಳುತ್ತಿದ್ದ ಪ್ರಭುತ್ವವಾದಿ ಹಿಂದುತ್ವದ ಹಿತಾಸಕ್ತ ವರ್ಗಗಳಿಗೂ ಬೇಕಾಗಿರಲಿಲ್ಲ. ಮಾತ್ರವಲ್ಲದೇ, ಅವರ ಆಧುನಿಕತೆಯ ವಿಮರ್ಶೆ, ವಿಜ್ಞಾನ ತಂತ್ರಜ್ಞಾನಗಳ ಪರಾಮರ್ಶೆ ಹಾಗೂ ಅಭಿವೃದ್ಧಿಯ ಬಗೆಗಿನ ಹೊಸ ನೋಟಗಳು ಭಾರತದ ಎಲ್ಲಾ ಎಡಬಲ ಚಿಂತನ ಕ್ರಮಗಳಿಗೆ ಮತ್ತು  ಹಿತಾಸಕ್ತ ವರ್ಗಗಳಿಗೆ ಬೇಡದ ಸರಕಾಯಿತು.

ಈ ಎಲ್ಲದರ  ಹಿನ್ನೆಲೆಯಲ್ಲಿ 125 ವರ್ಷಗಳ ತುಂಬು ಜೀವನವನ್ನು ಬದುಕುತ್ತೇನೆಂದು ಹಂಬಲಿಸುತ್ತಿದ್ದ ಗಾಂಧೀಜಿ 80ರ ಇಳಿ ವಯಸ್ಸಿನ ವೇಳೆಗೆ `ನಾನು ಇನ್ನು ಹೆಚ್ಚು ಕಾಲ ಬದುಕಲಾರೆ' ಅಥವಾ `ಸಾವು  ಸನ್ನಿಹಿತವಾಗುತ್ತಿದೆ' ಎಂದು ಹೇಳಲಾರಂಭಿಸಿದರು. ಬಹುಶಃ ಅಭಿವೃದ್ಧಿ ಎನ್ನುವ ಹೊಸ  ಅಫೀಮಿನ ಸವಿರುಚಿ ಕಂಡ ಇಂಡಿಯಾ ಎನ್ನುವ ಹೊಸ ರಾಷ್ಟ್ರಪ್ರಭುತ್ವವನ್ನು ಪ್ರತಿನಿಧಿಸುವ ಜನವರ್ಗಗಳು ತನ್ನನ್ನು ತ್ಯಾಜ್ಯವೆಂದು ಹಾಗೂ ತನ್ನ  ಕಾರ್ಯಸೂಚಿಯನ್ನು ಅಪ್ರಸ್ತುತವೆಂದು  ಭಾವಿಸುತ್ತಿವೆ  ಎನ್ನುವುದು ಅವರಿಗೆ ಮನವರಿಕೆಯಾಗಿತ್ತು.

1948ರ ಜನವರಿ 30ರಂದು ದೆಹಲಿಯ ಬಿರ್ಲಾ ಮಂದಿರದೆದುರು ಗಾಂಧಿಯನ್ನು ಹತ್ಯೆಗೈದ ನಾಥೂರಾಮ್ ಗೋಡ್ಸೆ ತಾನು ಮಾಡಿದ ಹತ್ಯೆಯ ಬಗೆಗೆ ಅಪರಾಧಿಭಾವದ ಲವಲೇಶವೂ ಇಲ್ಲದೇ ತನ್ನನ್ನು ಪೊಲೀಸರಿಗೆ ಒಪ್ಪಿಸಿಕೊಂಡದ್ದು ಹಾಗೂ ನೆರೆದ ಜನಸಮುದಾಯದೆದುರು ತಾನು, ಗಾಂಧೀಜಿಯವರ ಬಗೆಗಿನ ಎಲ್ಲ ಗೌರವಗಳ ಹೊರತಾಗಿಯೂ, ಅವರನ್ನು ಯಾಕೆ ಹತ್ಯೆಗೈದೆ ಎಂದು ನಿವೇದಿಸಿಕೊಂಡದ್ದು ಚಾರಿತ್ರಿಕವಾಗಿ ದಾಖಲಾಗಿರುವ ಸಂಗತಿ.

ಘಟನೆಗೆ ಸಾಕ್ಷಿಗಳಾಗಿದ್ದ ಹಾಗೂ ಗೋಡ್ಸೆಯ ಸಾರ್ವಜನಿಕ ನಿವೇದನೆಯನ್ನು ಕೇಳಿಸಿಕೊಂಡ ಬಹುತೇಕ ಮಂದಿಗೆ ಗಾಂಧಿಯ ಹತ್ಯೆ ಅನಿವಾರ್ಯವೆಂದು, ಗೋಡ್ಸೆ ನಡೆಸಿದ ಹತ್ಯೆ ಸಾಧುವೆಂದು ಮತ್ತು ಆತ ಕ್ಷಮಾರ್ಹನೆಂದು ಅನಿಸಿತ್ತು. ಗಾಂಧಿ ಹತ್ಯೆಗೊಂಡ ಕೆಲವು ವರ್ಷಗಳ ಬಳಿಕ ಹೊರಬಂದ ತನಿಖಾ ವರದಿಯ ಪ್ರಕಾರ ಗಾಂಧಿ ಹತ್ಯೆಯ ಸಂಚಿನ ಬಗೆಗಿನ ಪೂರ್ವ ಸೂಚನೆಗಳು ಕೇಂದ್ರ  ಹಾಗೂ ಮಹಾರಾಷ್ಟ್ರ ಸರ್ಕಾರಗಳ ಗಮನಕ್ಕೆ ಬಂದಿದ್ದವು. ಹೀಗಿದ್ದೂ ಈ ಬಗ್ಗೆ ಯಾವುದೇ ಮುಂಜಾಗ್ರತಾ ಕ್ರಮವನ್ನು ಇವರು ಯಾರು ತೆಗೆದುಕೊಂಡಿರಲಿಲ್ಲ ಎನ್ನುವುದು ಗಾಂಧಿ ಹೇಗೆ ಯಾರಿಗೂ ಬೇಡವಾಗಿ ಬಿಟ್ಟರು ಎನ್ನುವುದಕ್ಕೆ ಸಾಕ್ಷಿ.

(ಲೇಖಕರು ರಾಜಕೀಯ ಶಾಸ್ತ್ರ ವಿಭಾಗ ಅಧ್ಯಾಪಕರು, ಮಂಗಳೂರು ವಿಶ್ವವಿದ್ಯಾಲಯ)

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.