ADVERTISEMENT

ಹೋರಾಟ ವ್ಯಕ್ತಿಗತವಾದರೆ...

ದೀಪಕ್ ತಿಮ್ಮಯ
Published 10 ಏಪ್ರಿಲ್ 2016, 19:30 IST
Last Updated 10 ಏಪ್ರಿಲ್ 2016, 19:30 IST

ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಅವರು ಕಾಂಗ್ರೆಸ್‌ ಉಪಾಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಪತ್ರ ಬರೆದಿದ್ದಾರೆ. ಆ ಪತ್ರವನ್ನು ಒಂದು ಸಾಮಂತ ಪಕ್ಷದ ಅಧ್ಯಕ್ಷರ ಮನವಿಯಂತೆ ಬರೆದಿದ್ದಾರೋ ಇಲ್ಲ ಒಂದು ಸಣ್ಣ ಪಕ್ಷದ ಪ್ರತಿನಿಧಿ ಅಂಗಲಾಚಿದಂತೆ ಬರೆದಿದ್ದಾರೋ, ಅಥವಾ ‘ನಮ್ಮ ಕೈಲಿ ಮಾಡೋಕೆ ಸಾಧ್ಯವಿಲ್ಲ, ನೀವಾದರೂ ಮಾಡಿ’ ಎಂದು ದಯನೀಯ ರೋದನದಂತೆ ಬರೆದಿದ್ದಾರೋ ಗೊತ್ತಿಲ್ಲ. ಆದರೂ, ಕುಮಾರಸ್ವಾಮಿ ಅವರು, ರಾಹುಲ್ ಗಾಂಧಿಗೆ ಪತ್ರ ಬರೆದೇಬಿಟ್ಟಿದ್ದಾರೆ.


ಈ ಪತ್ರ, ಲೋಕಾಯುಕ್ತ ಸಂಸ್ಥೆಯ ಉಳಿವಿಗಾಗಿ ಹಾಗೂ ಎಸಿಬಿ ರದ್ದತಿಗಾಗಿ ಎಂದು ಕಂಡುಬಂದರೂ, ಇದು ಮೇಲ್ನೋಟಕ್ಕೆ ಸಿದ್ದರಾಮಯ್ಯ ಅವರ ವಿರುದ್ಧ ಚಾಡಿ ಹೇಳಲೆಂದೇ ಬರೆದ ಹಾಗೆ, ಸಾಮಾನ್ಯರಿಗೂ ಕಂಡು ಬಂದರೆ ಆಶ್ಚರ್ಯವೇನೂ ಇಲ್ಲ.

ಬಿಜೆಪಿ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ, ಬಿ.ಎಸ್.ಯಡಿಯೂರಪ್ಪ ಮೇಲೆ ಆಗಾಗ ಮುಗಿಬೀಳುತ್ತಿದ್ದ ಕುಮಾರಸ್ವಾಮಿ, ಸಿದ್ದರಾಮಯ್ಯ ಅಧಿಕಾರಕ್ಕೆ ಬಂದಾಗಿನಿಂದಲೇ, ಅವರ ಮೇಲೆ ಅಸಮಾಧಾನ ಇರುವಂತೆ ವರ್ತಿಸುತ್ತಿರುವುದಂತೂ ಜಗಜ್ಜಾಹೀರಾಗಿರುವ ವಿಷಯ.

ಜನಾನುರಾಗಿಯೂ, ಉತ್ತಮ ಆಡಳಿತಗಾರನಾಗಿಯೂ ಹೆಸರು ಪಡೆದಿರುವ ಕುಮಾರಸ್ವಾಮಿ,  ಜೆಡಿಎಸ್ ಪಕ್ಷದ ಆಧಾರಸ್ತಂಭವೆಂದೇ ಬಿಂಬಿತರಾಗಿದ್ದಾರೆ. ಅಷ್ಟೊಂದು ರಾಜಕೀಯ ಹಿನ್ನೆಲೆಯಿದ್ದರೂ, ವೈಯಕ್ತಿಕವಾಗಿ ಅಷ್ಟೇನೂ ರಾಜಕೀಯದ ಅನುಭವವಿಲ್ಲದೆ, ಏಕಾಏಕಿ ಎನ್ನುವಂತೆ, ರಾಜಕೀಯ ರಂಗಕ್ಕೆ ಇಳಿದು ಪ್ರಬಲರಾಗಿ ಮುಖ್ಯಮಂತ್ರಿಯೂ ಆಗಿಬಿಟ್ಟ ಕುಮಾರಸ್ವಾಮಿ, ತಮ್ಮ ನಡೆ-ನುಡಿ ಮೂಲಕ ತಮ್ಮ ಅನುಯಾಯಿಗಳಿಗೆ ತೆರೆದ ಪುಸ್ತಕದಂತೆ ಕಂಡುಬಂದಿದ್ದಾರೆ.

ಸಿದ್ದರಾಮಯ್ಯನವರು, ಧರ್ಮಸಿಂಗ್ ನೇತೃತ್ವದ ಸರ್ಕಾರದಲ್ಲಿ ಉಪಮುಖ್ಯಮಂತ್ರಿಯಾಗಿದ್ದಾಗಲೇ ಕುಮಾರಸ್ವಾಮಿ ಅವರಿಗೆ ಸಿದ್ದರಾಮಯ್ಯನವರ ಬಗ್ಗೆ ಅಸಮಾಧಾನವಿತ್ತು.  ಸಿದ್ದರಾಮಯ್ಯನವರು, ಒಂದಿಷ್ಟೂ ಹೋರಾಡದೆ, ಪಕ್ಷವನ್ನೂ ನಿಭಾಯಿಸದೆ ಪದವಿ ಗಿಟ್ಟಿಸಿಕೊಳ್ಳುತ್ತಾರೆ ಎಂದು ಆರೋಪಿಸುತ್ತಿದ್ದ ಕುಮಾರಸ್ವಾಮಿ, ತಮ್ಮ ಬೇಸರವನ್ನು ಆಪ್ತರ ಮುಂದೆ ವ್ಯಕ್ತಪಡಿಸಿದ್ದಿದೆ. ಅನೇಕ ಬಾರಿ, ಸಿದ್ದರಾಮಯ್ಯ ವಿರುದ್ಧ ಸಿಟ್ಟನ್ನು ಹೊರಹಾಕಿದ್ದಿದೆ. ತಮ್ಮ ತಂದೆ ದೇವೇಗೌಡರಿಗೆ ಸಿದ್ದರಾಮಯ್ಯನವರು ಗೌರವ ಕೊಡುವುದಿಲ್ಲ.  ಪ್ರಧಾನಿಯಾಗಿದ್ದವರ ಮುಂದೆ ಕಾಲ ಮೇಲೆ ಕಾಲು ಹಾಕಿಕೊಂಡು ದರ್ಪ ತೋರಿಸುತ್ತಾರೆ ಎಂಬ ಅಸಮಾಧಾನವೂ ಕುಮಾರಸ್ವಾಮಿ ಅವರ ಈ ಸಿಟ್ಟಿಗೆ ಇನ್ನೊಂದು ಕಾರಣವಾಗಿತ್ತು.

ಆದರೆ, ತದನಂತರದ ಬೆಳವಣಿಗೆ ಪರಿಣಾಮವಾಗಿ ಕುಮಾರಸ್ವಾಮಿ, ಮುಖ್ಯಮಂತ್ರಿಯಾಗಿ ಆಡಳಿತ ನಡೆಸುವ ಸಂದರ್ಭ ಬಂತು. ಆಗ, ಅವರು ತಮ್ಮ ಪಕ್ಷವನ್ನು ನಿಭಾಯಿಸುವುದರ ಜೊತೆಗೆ, ಬಿಜೆಪಿ ಜೊತೆಗಿನ ಮೈತ್ರಿಯನ್ನು ಸಲಹಿಕೊಂಡು ಹೋಗುವ ಕಸರತ್ತನ್ನೂ ಮಾಡುತ್ತಾ ಸಿದ್ದರಾಮಯ್ಯನವರನ್ನು ಕೊಂಚ ಕಾಲ ಮರೆತಂತಿತ್ತು.

ಸಿದ್ದರಾಮಯ್ಯನವರು, ಜೆಡಿಎಸ್ ಬಿಟ್ಟುಹೋಗಿ ಕಾಂಗ್ರೆಸ್ ಪಕ್ಷ ಸೇರಿದರು. ಮುಖ್ಯಮಂತ್ರಿಯಾದರು. ಇದರ ನಡುವೆ ಜೆಡಿಎಸ್ ಎರಡು ಬಾರಿ ಕೆಟ್ಟ ಸೋಲನ್ನು ಅನುಭವಿಸಿತು. ಇವೆಲ್ಲಾ ಆದಮೇಲೆ, ಕುಮಾರಸ್ವಾಮಿ, ಸಿದ್ದರಾಮಯ್ಯನವರ ವಿರುದ್ಧ ವೈಯಕ್ತಿಕ ದ್ವೇಷ ಕಾರಲು ಆರಂಭಿಸಿದರಾ ಅನ್ನುವ ಪ್ರಶ್ನೆ ರಾಜಕೀಯ ವಿಶ್ಲೇಷಕರ ಮನಸ್ಸಿನಲ್ಲಿ ಮೂಡುತ್ತಿದೆ.

ಹಾಗೆ ನೋಡಿದರೆ, ದೇವೇಗೌಡರ ಕುಟುಂಬದಲ್ಲಿ ಸಿದ್ದರಾಮಯ್ಯ ಬಗ್ಗೆ ಅಂಥ ದ್ವೇಷ ಹಾಗೂ ಅಸಮಾಧಾನ ಬೇರೆ ಯಾರಿಗೂ ಇಲ್ಲ. ಕೆಲವೊಮ್ಮೆ ಸಿದ್ದರಾಮಯ್ಯ ನೇತೃತ್ವದ ಸರ್ಕಾರದ ಬಗ್ಗೆ ಬೇಸರದ ಮಾತುಗಳಾಡಿದರೂ, ಚುನಾವಣೆಯಲ್ಲಿ ಸೋಲಾದಾಗ ವ್ಯಂಗ್ಯವಾಗಿ ಟೀಕಿಸಿದರೂ  ದೇವೇಗೌಡರು, ಸಿದ್ದರಾಮಯ್ಯ ವಿರುದ್ಧ ದ್ವೇಷ ಸಾಧಿಸಿದಂತೆ ಕಂಡುಬರುವುದಿಲ್ಲ.  ಎಚ್‌.ಡಿ.ರೇವಣ್ಣ ಅವರು ಹಿಂದಿನಂತೆಯೇ ಈಗಲೂ ಸಿದ್ದರಾಮಯ್ಯ ಅವರೊಂದಿಗೆ ನಿಕಟ ಹಾಗೂ ಸೌಹಾರ್ದ ಸಂಬಂಧವನ್ನೇ ಹೊಂದಿದ್ದಾರೆ. ರೇವಣ್ಣ, ಜೆಡಿಎಸ್ ಕಚೇರಿಗಿಂತ ಹೆಚ್ಚಾಗಿ ಮುಖ್ಯಮಂತ್ರಿ ಕಚೇರಿಯಲ್ಲೇ ಕಾಲ ಕಳೆಯುತ್ತಾರೆ ಎಂದು ಜೆಡಿಎಸ್ ಪಕ್ಷದವರೇ ಛೇಡಿಸುತ್ತಾರೆ. ಇದಕ್ಕೆ ಸರಿಯಾಗಿ ರೇವಣ್ಣ ಅವರಿಗೆ ಅಂಗರಕ್ಷಕರನ್ನು, ಪೊಲೀಸ್ ಮರ್ಯಾದೆಯನ್ನು ಮತ್ತು ಸರ್ಕಾರಿ ಕಾರನ್ನೂ ಕೊಟ್ಟು ಸಿದ್ದರಾಮಯ್ಯ, ರೇವಣ್ಣ ಬಗೆಗಿನ ತಮ್ಮ ಪ್ರೀತಿಯನ್ನು ತೋರಿದ್ದಾರೆ. ಈ ಕಾರಣದಿಂದ ಸಿದ್ದರಾಮಯ್ಯ ಬಗ್ಗೆ, ಅವರ ಸಂಪುಟದ ಕೆಲ ಸಹೋದ್ಯೋಗಿಗಳಿಗೆ ಅನುಮಾನ ಮತ್ತು ಬೇಸರವಿದೆ.  ಆದರೆ, ರೇವಣ್ಣ ಮತ್ತು ಸಿದ್ದರಾಮಯ್ಯ ನಡುವಿನ ಸಂಬಂಧದ ಮೇಲೆ ಇತ್ತೀಚೆಗೆ ವಿರಸದ ಛಾಯೆ ಮೂಡಿದೆಯೇ ಎಂದು ಅನೇಕರು ಅನುಮಾನಿಸುತ್ತಿರುವಾಗಲೇ, ಹಾಸನದಲ್ಲಿ ನಡೆಯುತ್ತಿರುವ ರಾಜಕೀಯ ಚಟುವಟಿಕೆಗೆ ಕಾಂಗ್ರೆಸ್ ಪಕ್ಷದ ಎ.ಮಂಜು ಕಾರಣವೇ ಹೊರತು ಸಿದ್ದರಾಮಯ್ಯ ಅಲ್ಲ ಎಂದು ಜೆಡಿಎಸ್‌ನ ಅನೇಕರು ತಮಗೆ ತಾವೇ ಸಮಾಧಾನ ಹೇಳಿಕೊಳ್ಳುತ್ತಿದ್ದಾರೆ.

ಇತ್ತ ಜೆಡಿಎಸ್ ಪಕ್ಷದಲ್ಲೂ ಇನ್ನೂ ಅನೇಕ ಮಂದಿಗೆ ಸಿದ್ದರಾಮಯ್ಯ ಬಗ್ಗೆ ಪ್ರೀತಿಯಿದೆ. ಒಳಗೊಳಗೇ ಉತ್ತಮ ಸಂಬಂಧ ಇಟ್ಟುಕೊಂಡಿದ್ದಾರೆ. ಈ ಕಾರಣದಿಂದಾಗಿ, ಅನೇಕರು ಕುಮಾರಸ್ವಾಮಿ ಸಿಟ್ಟಿಗೂ ಕಾರಣರಾಗಿದ್ದಾರೆ. ಹಾಗಾಗಿ, ಒಂದು ರೀತಿಯಲ್ಲಿ ಸಿದ್ದರಾಮಯ್ಯ ವಿರುದ್ಧದ ಹೋರಾಟದಲ್ಲಿ ಕುಮಾರಸ್ವಾಮಿ ಏಕಾಂಗಿಯಾಗಿಬಿಟ್ಟಿದ್ದಾರೆ. ಅಸಹಾಯಕರಾಗಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ವಿರುದ್ಧ ಏನೇ ಸಿಗಲಿ, ಅದು ವಾಚೇ ಆಗಿರಲಿ, ಹುಲ್ಲುಕಡ್ಡಿಯೇ ಆಗಿರಲಿ ಅದನ್ನು ಬಳಸಿಕೊಂಡು, ಅದೇ ಅಂತಿಮ ಹೋರಾಟ ಅನ್ನುವ ರೀತಿಯಲ್ಲಿ ವರ್ತಿಸುವುದು ಏಕೆಂದು ಈಗ ಎಲ್ಲರಿಗೂ ಅರ್ಥವಾಗುತ್ತಿದೆ.

ಈ ಕಾರಣದಿಂದಲೇ, ಎಸಿಬಿ ವಿಚಾರವನ್ನು ಮುಂದಿಟ್ಟುಕೊಂಡು ರಾಹುಲ್ ಗಾಂಧಿಗೆ ಪತ್ರ ಬರೆದಿರುವ ಕುಮಾರಸ್ವಾಮಿ, ಸಿದ್ದರಾಮಯ್ಯ ಅವರಿಗೆ ತೊಂದರೆ ಆಗುತ್ತದೆ ಅಂತಾದರೆ, ಪ್ರಧಾನಿ ನರೇಂದ್ರ ಮೋದಿ ಅವರಿಗೂ ಪತ್ರ ಬರೆಯಬಹುದು ಅಥವಾ ಬಿಜೆಪಿ ಅಧ್ಯಕ್ಷ ಅಮಿತ್ ಷಾ ಅವರಿಗೂ ಪತ್ರ ಬರೆಯಬಹುದು ಎಂದು  ಕಾಂಗ್ರೆಸ್‌ನಲ್ಲಿ ಕೆಲವರು ಹೇಳುತ್ತಾರೆ.

ಈ ಮಟ್ಟದ ವೈಯಕ್ತಿಕ ಹೋರಾಟಕ್ಕೆ ಕುಮಾರಸ್ವಾಮಿ ಇಳಿದಿರುವುದರಿಂದ ಸಿದ್ದರಾಮಯ್ಯಗೆ ಯಾವುದೇ ಹಾನಿ ಆಗದು. ಆದರೆ ಅದು ಹಾನಿ ಮಾಡಿದರೆ, ಜೆಡಿಎಸ್ ಪಕ್ಷಕ್ಕೇ ಎಂದು ಜೆಡಿಎಸ್‌ನ ಕೆಲ ಹಿರಿಯರು ಹೇಳುತ್ತಾರೆ. ಮುಳುಗುತ್ತಿರುವ ಹಡಗಿನಂತಾಗಿರುವ ಜೆಡಿಎಸ್, ಈ ರಾಜ್ಯವನ್ನು ಆಳಿದ ಪಕ್ಷ, ದೇವೇಗೌಡರನ್ನು ರಾಷ್ಟ್ರಕ್ಕೆ ಪ್ರಧಾನಿಯಾಗಿ ನೀಡಿದ ಪಕ್ಷ. ಈ ಪಕ್ಷದ ಸಂಘಟನೆ ಬಗ್ಗೆ, ಸಬಲೀಕರಣದ ಬಗ್ಗೆ ಮತ್ತು ಮುಂದಿನ ಚುನಾವಣೆ ತಯಾರಿ ಬಗ್ಗೆ ಕುಮಾರಸ್ವಾಮಿ, ತಮ್ಮ ಸಂಪೂರ್ಣ ಶಕ್ತಿ ವ್ಯಯಿಸಬೇಕೆ ವಿನಾ, ಪ್ರಯೋಜನಕ್ಕೆ ಬಾರದ ವೈಯಕ್ತಿಕ ಹೋರಾಟಗಳಿಗಲ್ಲ ಎಂದು ಕುಮಾರಸ್ವಾಮಿ ಹಿತಚಿಂತಕರು ಪಿಸುಧ್ವನಿಯಲ್ಲಿ ಹೇಳುತ್ತಿದ್ದಾರೆ. ಇದಕ್ಕೆ ಕುಮಾರಸ್ವಾಮಿ ಹೇಗೆ ಪ್ರತಿಕ್ರಿಯಿಸುತ್ತಾರೋ ಗೊತ್ತಿಲ್ಲ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.