‘ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸಫರ್’ಇದು ಡಾ ಯು.ಆರ್.ಅನಂತಮೂರ್ತಿಯವರ ಮಾತು. ಕೇರಳದ ಕೊಟ್ಟಾಯಂ ವಿವಿ ಕುಲಪತಿಯಾಗಿದ್ದ ಸಂದರ್ಭದಲ್ಲಿ ‘ಟ್ರೆಡಿಶನ್ ಆ್ಯಂಡ್ ಕ್ರಿಯೇಟಿವಿಟಿ’ ವಿಷಯವನ್ನು ಕುರಿತು ಮಾಡಿದ ಭಾಷಣದಲ್ಲಿ ಅವರು ಈ ಮಾತನ್ನು ಹೇಳಿದ್ದಾರೆ. ಈ ಭಾಷಣ ಚಿನ್ಮಯ ಇಂಟರ್ನ್ಯಾಷನಲ್ ಫೌಂಡೇಶನ್ ರಿಸರ್ಚ್ ಇನ್ಸ್ಟಿಟ್ಯೂಟ್ ಪ್ರಕಟಿಸಿದ (೨೦೧೨) ‘ಧೀಮಹಿ’ ಹೆಸರಿನ ವಿಶೇಷ ಸಂಚಿಕೆಯಲ್ಲಿ ಪ್ರಕಟವಾಗಿದೆ. ಹೀಗೆ ಬಸವಣ್ಣನವರನ್ನು ಅಗೌರವಿಸಿದವರಿಗೆ ಆಯ್ಕೆ ಸಮಿತಿ ಬಸವಪುರಸ್ಕಾರ ನೀಡಿ ಗೌರವಿಸಿದೆ.
ತಪ್ಪು ಮಾಡಿದವರು ತೆಪ್ಪಗಿರಬೇಕು. ಆದರೆ ತಪ್ಪು ಮಾಡಿಯೂ ಸಮರ್ಥಿಸಿಕೊಳ್ಳುವುದೆಂದರೆ ಅವರು ಇನ್ನೊಂದು ತಪ್ಪು ಮಾಡಿದಂತೆಯೇ ಸರಿ. ಈ ಮಾತಿಗೆ ಉದಾಹರಣೆ, ನನ್ನ ಅಭಿಪ್ರಾಯಕ್ಕೆ ಆಯ್ಕೆ ಸಮಿತಿಯ ನಾಲ್ವರು ‘ಪ್ರಜಾವಾಣಿ’ಯಲ್ಲಿ (ಮೇ. ೨೯) ಬರೆದ ಪ್ರತಿಕ್ರಿಯೆ.
*ಈ ಪುರಸ್ಕಾರದ ನಿಯಮಗಳನ್ನು ಕಲಬುರ್ಗಿ ಗಮನಿಸಲಿ ಎಂದು ಇವರು ತಮ್ಮ ಪ್ರತಿಕ್ರಿಯೆಯಲ್ಲಿ ಹೇಳಿದ್ದಾರೆ. ಆದರೆ ಇವರಿಗಿಂತ ಮೊದಲು ಈ ಆಯ್ಕೆಸಮಿತಿಯ ಸದಸ್ಯನಾಗಿ, ಅಧ್ಯಕ್ಷನಾಗಿ ನಾನು ಈ ನಿಯಮಗಳನ್ನು ಓದಿದ್ದೇನೆ. ಅಷ್ಟೇ ಅಲ್ಲ, ಈ ನಿಯಮದಂತೆ ನಡೆದುಕೊಂಡು ಸಾಹಿತಿಯಲ್ಲದ ‘ನರ್ಮದಾ ಬಚಾವೋ’ ಹೋರಾಟಗಾರ್ತಿ ಮೇಧಾ ಪಾಟ್ಕರ್ ಅವರನ್ನು ಈ ಪುರಸ್ಕಾರಕ್ಕೆ ಆಯ್ಕೆ ಮಾಡಿದವನಾಗಿದ್ದೇನೆ. ಹೀಗಾಗಿ ಇವರು ನಿಯಮಗಳನ್ನು ಕಲಬುರ್ಗಿ ಗಮನಿಸಲಿ ಎಂದು ಬರೆಯುವ ಬದಲು, ಇವರೇ ಸರಿಯಾಗಿ ಗಮನಿಸಿದ್ದರೆ ಈ ಹಗರಣ ಸೃಷ್ಟಿಯಾಗುತ್ತಿರಲಿಲ್ಲ.
*ಸರ್ವಧರ್ಮ ಸಮಾನತೆಗಾಗಿ ತಮ್ಮ ತನು-ಮನ ಅರ್ಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳಿಗೆ ಈ ಪುರಸ್ಕಾರ ನೀಡಬೇಕೆಂಬ ನಿಯಮವಿಲ್ಲಿದೆ. ಈ ವರ್ಷ ಪ್ರಶಸ್ತಿ ಪಡೆದ ಸಾಹಿತಿ ಅನಂತಮೂರ್ತಿ ಅವರು ಈ ನಿಯಮಕ್ಕೆ ಅರ್ಹರೇ? ತಕ್ಕ ಮಟ್ಟಿಗೆ ಅರ್ಹರಾಗಿದ್ದ ಕಾರಣ ಈ ಮೊದಲು ಸರಸ್ವತಿ ಗೋರಾ, ಅಬ್ದುಲ್ ಕಲಾಂ ಮೊದಲಾದವರಿಗೆ ಈ ಪುರಸ್ಕಾರ ಪ್ರಾಪ್ತವಾಗಿದ್ದಿತು. ಅನಂತಮೂರ್ತಿ-ಯವರನ್ನು ಈ ಸಾಧಕರ ಸಾಲಿನಲ್ಲಿ ಪರಿಗಣಿಸಬಹುದೆ? ಇವರ ಕಲ್ಪಿತಸಾಹಿತ್ಯದಲ್ಲಿ, ಲೇಖನಗಳಲ್ಲಿ ಕೆಲವೊಮ್ಮೆ ಕವಿಸಹಜ ಸಮಾಜವಾದ ಹಣಿಕಿ ಹಾಕಿದ್ದರೂ, ಉದ್ದಕ್ಕೂ ಆಳುವ ವರ್ಗದ ಜೊತೆ ನಿಲ್ಲುತ್ತ ಬಂದ ಇವರ ದ್ವಂದ್ವ ನಿಲುವು ಪುರಸ್ಕಾರಕ್ಕೆ ಹೊಂದಿಕೆಯಾಗುವುದೆ?
*‘ಅನಂತಮೂರ್ತಿಯವರು ಸುತ್ತೂರುಮಠ ಪ್ರಕಟಿಸಿದ ‘ವೀರಶೈವ ಧರ್ಮದರ್ಶನ’ ಕೃತಿಯ ಪ್ರಧಾನ ಸಂಪಾದಕರಾಗಿರುವರು’ ಎಂದು ಈ ನಾಲ್ವರು ಹೇಳಿದ್ದಾರೆ. ಇದು ಬೇರೆ ಬೇರೆಯವರ ಪ್ರಕಟಿತ ಲೇಖನಗಳ ಸಂಗ್ರಹ. ಇವುಗಳನ್ನು ಸಂಗ್ರಹಿಸಿ ಇಡೀ ಪುಸ್ತಕವನ್ನು ಸಿದ್ಧಪಡಿಸಿದವರು ಡಾ ಎನ್. ಎಸ್. ತಾರಾನಾಥ. ಮೂರು ಪುಟದ ಪ್ರಸ್ತಾವನೆಗೆ ಅನಂತಮೂರ್ತಿಯವರ ಹೆಸರಿದ್ದರೂ ಬಹುಶಃ ಅದನ್ನು ಬೇರೆಯವರು ಬರೆದಿದ್ದಾರೆ. ಈ ಕೃತಿ ಬೆಂಗಳೂರಿನಲ್ಲಿ ಬಿಡುಗಡೆಯಾದರೂ ಅನಂತಮೂರ್ತಿಯವರು ಆ ಸಮಾರಂಭಕ್ಕೆ ಬಂದಿರಲಿಲ್ಲ. ಇದೆಲ್ಲವನ್ನು ನೋಡಿದರೆ, ಕೇವಲ ಗೌರವದೃಷ್ಟಿಯಿಂದ ಇಲ್ಲಿ ಅವರ ಹೆಸರು ಬಳಕೆಯಾದುದು ಸ್ಪಷ್ಟವಾಗುತ್ತಿದ್ದು, ಇಂತಹ ಮಿಥ್ಯಾನಾಮಧೇಯ ಕೃತಿಯನ್ನು ತಮ್ಮ ನಿರ್ಣಯದ ಸಮರ್ಥನೆಗಾಗಿ ಇವರು ‘ಪ್ರಜಾವಾಣಿ’ ಪತ್ರದಲ್ಲಿ ಉಲ್ಲೇಖಿಸಿದುದು ಸರಿಯಲ್ಲ. ಮೇಲಾಗಿ ಇದು ಅಂತಹ ಮಹತ್ವದ ಸಂಕಲನವೂ ಅಲ್ಲ.
*ಬಸವಣ್ಣ ನನ್ನ ಮೇಲೆ ಪ್ರಭಾವ ಬೀರಿದ್ದಾನೆ ಎಂದು ಅನಂತಮೂರ್ತಿಯವರು ಎಂದೋ ಒಮ್ಮೆ ಆನುಷಂಗಿಕವಾಗಿ ಹೇಳಿದುದನ್ನು ಇವರು ಎತ್ತಿ ಹಿಡಿದಿದ್ದಾರೆ. ಕನ್ನಡ ಸಾಹಿತ್ಯ ಪರಂಪರೆಯ ಯಾವುದೇ ಅಭ್ಯಾಸಿ ಪಂಪ, ಬಸವಣ್ಣ, ಕುಮಾರವ್ಯಾಸರ ಪ್ರಭಾವ ಹೇಳುವುದು ಸಹಜ. ಹೀಗಾಗಿ ಅನಂತಮೂರ್ತಿಯವರ ಈ ಒಣ ಹೇಳಿಕೆಯಲ್ಲಿ ವಿಶೇಷತೆ ಏನಿದೆ? ನಿಜವಾಗಿಯೂ ಬಸವಣ್ಣನ ಪ್ರಭಾವಕ್ಕೆ ಒಳಗಾಗಿದ್ದರೆ ಅವನ ತತ್ವಜ್ಞಾನ ‘ನಾನ್‌ಸೆನ್ಸ್’ ಎಂದು ಇವರು ಭಾಷಣದಲ್ಲಿ ಹೇಳುತ್ತಿರಲಿಲ್ಲ.
*‘ಬಸವ ಪುರಸ್ಕಾರ’ದ ನಿಯಮದಂತೆ ಸರ್ವಧರ್ಮ ಸಮಾನತೆಗಾಗಿ ತನುಮನ ಅರ್ಪಿಸಿಕೊಂಡ ವಿಶಿಷ್ಟ ವ್ಯಕ್ತಿಗಳು ಇಂದಿನ ದಿನಮಾನದಲ್ಲಿ ಸಿಗುವುದು ದುರ್ಲಭ. ಹೀಗಿದ್ದೂ ಈ ನಿಯಮದ ಸಮೀಪ ಬದುಕಿದ ಕೆಲವರಿಗೆ ಈ ಪ್ರಶಸ್ತಿಯನ್ನು ಮೊದಮೊದಲು ಕೊಡಲಾಗಿದೆ. ಬಳಿಕ ಬಸವಸಾಹಿತ್ಯಸೇವೆ ಮಾಡಿದವರಿಗೂ ಕೊಡಲು ಆರಂಭಿಸಿ (ಉದಾ: ದರ್ಗಾ ಇತ್ಯಾದಿ), ಈಗ ಕೇವಲ ಸಾಹಿತ್ಯಸೇವೆ ಮಾಡಿದ ಅನಂತಮೂರ್ತಿಯವರಿಗೆ ಕೊಡುವುದೆಂದರೆ, ಈ ಪ್ರಶಸ್ತಿಯನ್ನು ನಿಧಾನವಾಗಿ ಸಾಮಾಜಿಕ ನೆಲೆಯಿಂದ ಸಾಹಿತ್ಯದ ನೆಲೆಗೆ ಎಳೆದು ತಂದುದಾಗಿದೆ. ಹೀಗೆಯೇ ಮುಂದುವರಿದರೆ, ಮುಂದೊಂದು ದಿನ ಬಸವಣ್ಣನವರನ್ನು ಕುರಿತು ಒಂದು ನಾಟಕ ಬರೆದವರಿಗೂ, ಒಂದು ಕವಿತೆ ಬರೆದವರಿಗೂ ಈ ಪ್ರಶಸ್ತಿ ಪ್ರಾಪ್ತವಾಗಬಹುದೇನೋ. ಒಟ್ಟಾರೆ, ಈ ಪ್ರಶಸ್ತಿಯು ಮೂಲ ಉದ್ದೇಶದಿಂದ ದೂರ ಸರಿಯುತ್ತ ಬಂದಿದೆ, ಈಗ ‘ಬಸವ ಈಜ್ ಎ ನಾನ್‌ಸೆನ್ಸ್ ಫಿಲಾಸಫರ್’ ಎಂದು ಬರೆದವರಿಗೂ ಸಂದಿದೆ.
*ನಾನು ಆಯ್ಕೆ ಸಮಿತಿಯವರ ವಿಷಯದಲ್ಲಿ ‘ಹಗರಣ’, ಸರ್ಕಾರದ ವಿಷಯದಲ್ಲಿ ‘ಬೇಜವಾಬ್ದಾರಿ’ ಶಬ್ದ ಬಳಸಿದುದನ್ನು ಇವರು ಆಕ್ಷೇಪಿಸಿದ್ದಾರೆ. ಈ ಎರಡೂ ನೆಲೆಗಳಲ್ಲಿ ಜರುಗಿದ ಕ್ರಿಯೆಗಳನ್ನು ಗಮನಿಸಿ ಬಳಸಿದ ಈ ಶಬ್ದಗಳಿಗೆ ನಾನು ಈಗಲೂ ಬದ್ಧನಾಗಿದ್ದೇನೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.