1818ರಲ್ಲಿ ಮಹಾರಾಷ್ಟ್ರದ ಪುಣೆ ಬಳಿಯ ಕೋರೆಗಾಂವ್‌ನ ಭೀಮಾ ನದಿಯ ದಡದ ಮೇಲೆ ಚಿತ್ಪಾವನ ಬ್ರಾಹ್ಮಣ ಪಂಗಡದ ಪೇಶ್ವೆ ಎರಡನೇ ಬಾಜೀರಾಯನ ಸೇನೆಯ ವಿರುದ್ಧ ಬ್ರಿಟಿಷ್ ಸೇನೆ ಯುದ್ಧ ನಡೆಸಿತು. ಬ್ರಿಟಿಷ್ ಸೈನ್ಯದಲ್ಲಿ ಮಹಾರ್ ಸಮುದಾಯದ ಸೈನಿಕರೂ ಇದ್ದರು. 1818ರ ಜನವರಿ 1ರಂದು ಪೇಶ್ವೆ ಬಾಜೀರಾಯನ ಸೇನೆಯ ವಿರುದ್ಧ ಮಹಾರ್ ರೆಜಿಮೆಂಟ್ ಹೋರಾಡಿ ಬಾಜೀರಾಯನನ್ನು ಸೋಲಿಸಿತು.
ಇತಿಹಾಸದಲ್ಲಿ ಧರ್ಮಕ್ಕಾಗಿ, ರಾಜ್ಯಕ್ಕಾಗಿ, ಸಿಂಹಾಸನಕ್ಕಾಗಿ ಯುದ್ಧಗಳು ನಡೆದರೆ, ಕೋರೆಗಾಂವ್ ಯುದ್ಧವು ದಲಿತರ ಘನತೆಗಾಗಿ, ಆತ್ಮಗೌರವಕ್ಕಾಗಿ,
ಬ್ರಾಹ್ಮಣ್ಯದ ಜಾತೀಯತೆಯ ವಿರುದ್ಧ ನಡೆದ ಯುದ್ಧವಾಗಿತ್ತು. ಶತಮಾನಗಳಿಂದ ಅನುಭವಿಸಿದ ಅವಮಾನ, ಶೋಷಣೆಯ ವಿರುದ್ಧ ದಲಿತರು ಸಾರಿದ ಯುದ್ಧವಾಗಿತ್ತು. ಬ್ರಿಟಿಷರ ಸಾಮ್ರಾಜ್ಯಶಾಹಿಗಿಂತಲೂ ನೂರಾರು ವರ್ಷಗಳಿಗೂ ಮೊದಲು ದಲಿತರು ಈ ಬ್ರಾಹ್ಮಣ ಫ್ಯೂಡಲಿಸಂನ ಗುಲಾಮರಾಗಿದ್ದರು.
ಶೋಷಣೆಯಿಂದ ತಮಗೆ ಬಿಡುಗಡೆ ದೊರಕಬಹುದೇನೋ ಎನ್ನುವ ಆಶಾಭಾವನೆ ಬ್ರಿಟಿಷರ ಆಡಳಿತದ ಸಂದರ್ಭದಲ್ಲಿ ದಲಿತರಲ್ಲಿ ಮೂಡಿತ್ತು. ಆಧುನಿಕ ಶಿಕ್ಷಕಿ, ವಿಮೋಚಕಿ ಸಾವಿತ್ರಿಬಾಯಿ ಫುಲೆ ಅವರು ಬರೆದ ಕವಿತೆಯಲ್ಲಿ, ‘ಮನುಧರ್ಮದ ಅನುಯಾಯಿಗಳಾದ ಪೇಶ್ವೆಗಳು ಸತ್ತು ನಾಶವಾಗಿದ್ದಾರೆ, ಈ ಮನುವೇ ನಮ್ಮನ್ನು ಶಿಕ್ಷಣದಿಂದ ವಂಚಿತರನ್ನಾಗಿ ಮಾಡಿದ್ದ, ಜ್ಞಾನವನ್ನು ಧಾರೆಯೆರೆಯಲು ಬ್ರಿಟಿಷರು ನಮ್ಮಲ್ಲಿಗೆ ಬಂದಿದ್ದಾರೆ’ ಎನ್ನುವ ಸಾಲುಗಳು ಬರುತ್ತವೆ.
ಸಾವಿತ್ರಿಬಾಯಿ ಅವರ ಶಾಲೆಯಲ್ಲಿ ಓದಿದ 11 ವರ್ಷ ವಯಸ್ಸಿನ ಮುಕ್ತಾಬಾಯಿ, 1855ರಲ್ಲಿ ಬರೆದ ಪ್ರಬಂಧದ ಕೆಲ ಸಾಲುಗಳು ಹೀಗಿವೆ: ‘ಬಾಜೀರಾವ್ ಪೇಶ್ವೆಯವರ ಕಾಲದಲ್ಲಿ ನಮ್ಮನ್ನು ಕತ್ತೆಗಿಂತಲೂ ಕೀಳಾಗಿ ಕಂಡಿದ್ದರು. ಆಗ ದಲಿತರೇನಾದರೂ ಗರಡಿಮನೆಯ ಮುಂದೆ ಸಾಗಿದರೆ ಅವರ ತಲೆಯನ್ನು ಕಡಿದು ಬ್ಯಾಟ್ ಮತ್ತು ಬಾಲ್ ಆಟವನ್ನು ಆಡುತ್ತಿದ್ದರು. ಇಲ್ಲಿ ಕಡಿದ ರುಂಡವು ಬಾಲ್ ಆಗಿ ಬಳಕೆಯಾಗುತ್ತಿತ್ತು. ನಾವು ಅವರ ಮನೆಯ ಮುಂದೆ ನಡೆದಾಡಿದ್ದಕ್ಕೇ ಶಿಕ್ಷೆ ಅನುಭವಿಸುವಂತಾದರೆ ಇನ್ನು ನಮಗೆ ಶಿಕ್ಷಣವೆಲ್ಲಿದೆ? ಮಾಂಗ್ ಮತ್ತು ಮಹರ್ ಸಮುದಾಯದವರೇನಾದರೂ ಶಿಕ್ಷಣ ಪಡೆದು
ಕೊಂಡಿದ್ದು ಬಾಜೀರಾಯ ಪೇಶ್ವೆಯ ಕಿವಿಗೆ ಬಿದ್ದರೆ ಆತ, ‘ಈ ಮಾಂಗ್ ಮತ್ತು ಮಹರ್ ಸಮುದಾಯದವರು ಶಿಕ್ಷಣ ಪಡೆದರೆ ಬ್ರಾಹ್ಮಣರಿಗೆ ಕೆಲಸ ದೊರಕುವುದಿಲ್ಲ. ಈ ದಲಿತರಿಗೆ ಅಷ್ಟೊಂದು ಧೈರ್ಯವೆಲ್ಲಿಂದ ಬಂತು? ಬ್ರಾಹ್ಮಣರು ಇವರಿಗೆ ತಮ್ಮ ನೌಕರಿಗಳನ್ನು ದಾನವಾಗಿ ಕೊಟ್ಟುಬಿಡುತ್ತಾರೆಯೇ?’ ಎಂದು ಹೇಳುತ್ತಿದ್ದ ಮತ್ತು ದಲಿತರನ್ನು ಶಿಕ್ಷಿಸುತ್ತಿದ್ದ’. ಕೋರೆಗಾಂವ್ ಯುದ್ಧವು ಪೇಶ್ವೆಗಳ ಈ ಶೋಷಣೆಯ ವಿರುದ್ಧ ನಡೆದ ಕದನವಾಗಿತ್ತು.
ಮೂವತ್ತು- ನಲವತ್ತರ ದಶಕದಲ್ಲಿ ಅಂಬೇಡ್ಕರ್ ಅವರು ಕಟ್ಟಿದ ಸಮತಾ ಸೈನಿಕ ದಳವು ಭೀಮಾ ಕೋರೆಗಾಂವ್ ವಿಜಯದ ದಾರ್ಶನಿಕತೆಯನ್ನು ಪಡೆದುಕೊಂಡಿತ್ತು. ಆ ನಲವತ್ತರ ದಶಕದಲ್ಲಿಯೂ ಮೇಲ್ಜಾತಿಗಳು ಮತ್ತು ಮಾಧ್ಯಮಗಳು ಅಂಬೇಡ್ಕರ್ ಅವರ ಸಮತಾ ಸೈನಿಕ ದಳದ ತತ್ವಗಳನ್ನು ಟೀಕಿಸಿದ್ದವು. ಹೋರಾಟಗಾರ ರಾಹುಲ್ ಸೋನ್ಪಿಂಪಲ್ ಅವರು, ‘ಸಮತಾ ಸೈನಿಕದಳದ ವಿರುದ್ಧ ಹಿಂಸೆ ಕುರಿತಾದ ಆರೋಪವನ್ನು ಅಂಬೇಡ್ಕರ್ ತಿರಸ್ಕರಿಸಿದ್ದರು ಮತ್ತು 1942ರ ಜುಲೈ 20ರ ಭಾಷಣದಲ್ಲಿ ಅಹಿಂಸೆ ಮತ್ತು ತಾಳ್ಮೆಯ ನಡುವಿನ ಗುರುತರವಾದ ವ್ಯತ್ಯಾಸವನ್ನು ವಿವರಿಸಿದ್ದರು’ ಎಂದು ಬರೆಯುತ್ತಾ, ‘ಅಂಬೇಡ್ಕರ್ ಅವರಿಗೆ ದಲಿತರಿಗೆ ಇತಿಹಾಸವು ಭವಿಷ್ಯವನ್ನು ನಿರ್ಮಿಸಲು ಅಗತ್ಯವಾದ ಕಾನೂನು ಹಕ್ಕುಗಳು ಮಾತ್ರವಾಗಿರಲಿಲ್ಲ, ಜೊತೆಗೆ ಐತಿಹಾಸಿಕ ಲೆಗಸಿಯ ಮೇಲೆ ಕಟ್ಟಲಾದ ಮುಂದಾಲೋಚನೆಯೂ ಆಗಿತ್ತು’ ಎಂದು ಹೇಳುತ್ತಾರೆ.
ಆದರೆ ಅಂಬೇಡ್ಕರ್ ಕಾಲಕ್ಕೂ ಆದಂತೆ ಇಂದಿಗೂ ಭೀಮಾ ಕೋರೆಗಾಂವ್ ವಿಜಯವನ್ನು ಮುಖ್ಯವಾಹಿನಿಯ ಮಾಧ್ಯಮಗಳು ಪರಿಗಣಿಸುತ್ತಲೇ ಇಲ್ಲ. ಅಂಬೇಡ್ಕರ್‌ವಾದಿಗಳ ಪ್ರಜ್ಞೆಯ ಭಾಗವಾಗಿದ್ದ ಭೀಮಾ ಕೋರೆಗಾಂವ್ ಯುದ್ಧವು ಮುಖ್ಯವಾಹಿನಿಯ ಮಾಧ್ಯಮಗಳಿಗೆ ಅಸಡ್ಡೆಯ, ನಿರ್ಲಕ್ಷಿತ ಘಟನೆಯಾಗಿತ್ತು. ಶ್ರೇಣೀಕೃತ ಜಾತಿ ವ್ಯವಸ್ಥೆಯ ವಿರುದ್ಧ ನಡೆದ ಯುದ್ಧವಾಗಿದ್ದ ಭೀಮಾ ಕೋರೆಗಾಂವ್ ಇತಿಹಾಸದ ಪುಟಗಳಲ್ಲಿಯೂ ತಕ್ಕ ಸ್ಥಾನ ಪಡೆಯಲಿಲ್ಲ. ಮೂಲಭೂತವಾಗಿ ಶೋಷಿತ ಮಹಾರ್ ಸಮುದಾಯ ಮತ್ತು ಶೋಷಕ ಪೇಶ್ವೆಗಳ ನಡುವೆ ನಡೆದ ಕೋರೆಗಾಂವ್ ಯುದ್ಧವನ್ನು ಅಂದಿಗೂ ಮತ್ತು ಇಂದಿಗೂ ಬ್ರಿಟಿಷರು ಮತ್ತು ಭಾರತದ ಆಡಳಿತಗಾರರ ನಡುವೆ ನಡೆದ ಯುದ್ಧವೆಂದು ತಪ್ಪಾಗಿ ಅರ್ಥೈಸಲಾಗುತ್ತಿದೆ.
ಇದೇ ಮಾದರಿಯಲ್ಲಿ ಬಲಪಂಥೀಯ ಗುಂಪುಗಳಾದ ಅಖಿಲ ಭಾರತೀಯ ಬ್ರಾಹ್ಮಣ ಮಹಾಸಭಾ, ಹಿಂದೂ ಅಗಾಡಿ ಮತ್ತು ಪೇಶ್ವೆಯ ವಂಶಸ್ಥರಿಗೆ, ಭೀಮಾ ಕೋರೆಗಾಂವ್ ವಿಜಯವು ಮುನ್ನೆಲೆಗೆ ಬರುತ್ತಿರುವುದು, ತನ್ನ ಅಸ್ತಿತ್ವವನ್ನು ಕಂಡುಕೊಳ್ಳುತ್ತಿರುವುದು ಸಹಿಸಲು ಸಾಧ್ಯವಾಗುತ್ತಿಲ್ಲ. ಈ ಬಲಪಂಥೀಯ ಮತಾಂಧರು ಮೊನ್ನೆ ಜನವರಿ 1ರಂದು ಭೀಮಾ ಕೋರೆಗಾಂವ್ ವಿಜಯೋತ್ಸವ ಆಚರಿಸಲು ಬರುತ್ತಿದ್ದ ಅಂಬೇಡ್ಕರ್ ವಾದಿಗಳ ಮೇಲೆ ಪುಣೆಯ ಬಳಿ ಹಲ್ಲೆ ನಡೆಸಿದ್ದಾರೆ. ದೌರ್ಜನ್ಯ ಎಸಗಿದ್ದಾರೆ. ರಕ್ತಪಾತ ನಡೆಸುತ್ತಿದ್ದಾರೆ. ರಾಷ್ಟ್ರೀಯತೆಯನ್ನು ಮತಾಂಧತೆಗೆ ಗಂಟು ಹಾಕಿದ ಬಲಪಂಥೀಯರು ಇಂದು ಚರಿತ್ರೆಯನ್ನು ತಿರುಚಲು ಯತ್ನಿಸುತ್ತಿದ್ದಾರೆ. ಸದಾ ವಿನಾಶವನ್ನು ಬಯಸುವ ಗುಂಪುಗಳೇ ಇಂದು ಭೀಮಾ ಕೋರೆಗಾಂವ್ ವಿಜಯೋತ್ಸವವನ್ನು ಆಚರಿಸುತ್ತಿರುವ ದಲಿತರ ಮೇಲೆ ದಾಳಿ ನಡೆಸುತ್ತಿವೆ.
ಇಂದು ಭೀಮಾ ಕೋರೆಗಾಂವ್ ವಿಜಯವು ಅಂಬೇಡ್ಕರ್‌ವಾದಿಗಳ ತಳಮಟ್ಟದ ಹೋರಾಟಕ್ಕೆ ನೈತಿಕವಾಗಿ ಶಕ್ತಿ ತುಂಬುವ ಪರ್ಯಾಯ ನೆಲ ಸಂಸ್ಕೃತಿಯಾಗಿದೆ. ದಲಿತ ಕಥನವಾಗಿದೆ. ಇಲ್ಲಿನ ಕಾನೂನು, ಶಾಸಕಾಂಗ, ಕಾರ್ಯಾಂಗಗಳು ದಲಿತರ ಹಿತಾಸಕ್ತಿಯನ್ನು, ಆತ್ಮಗೌರವವನ್ನು ಕಾಪಾಡಲು ಸೋತಾಗ ಭೀಮಾ ಕೋರೆಗಾಂವ್ ಕಥನ ವಿಮೋಚನೆಯ ದಾರಿಯಾಗಿ ಉಳಿದುಕೊಳ್ಳುತ್ತದೆ. ಭೀಮಾ ಕೋರೆಗಾಂವ್ ವಿಜಯೋತ್ಸವವು ಬಲಪಂಥೀಯ ರಾಷ್ಟ್ರೀಯವಾದಿಗಳ ಮತಾಂಧತೆಗೆ, ಬ್ರಾಹ್ಮಣ್ಯ- ಫ್ಯೂಡಲಿಸಂ ಪ್ರಾಬಲ್ಯಕ್ಕೆ ಭೌತಿಕವಾಗಿ ಮತ್ತು ತಾತ್ವಿಕವಾಗಿ ಪ್ರತಿರೋಧ ಒಡ್ಡಿದ ದಲಿತ ಕಥನವಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.