ಚಲನಚಿತ್ರದ ಶೂಟಿಂಗ್ ಚಿತ್ತೋರ್‌ನಲ್ಲಿ ಆರಂಭವಾದಂದಿನಿಂದ ತೊಡಗಿ ಇಡೀ ವರ್ಷ ಎಲ್ಲೆಂದರಲ್ಲಿ ಶ್ರೀ ರಜಪೂತ ಕರ್ಣಿ ಸೇನೆಯ ಪುಂಡಾಟ, ಧಮಕಿ, ಹಲ್ಲೆ, ಗಲಭೆಗಳ ನಡುವೆಯೂ ‘ಪದ್ಮಾವತ್’ ಬಿಡುಗಡೆಯಾಯ್ತು. ಇದರ ಮುನ್ನಾದಿನ ದೆಹಲಿ ಬಳಿ ಗುರುಗ್ರಾಮದ ಶಾಲಾ ಬಸ್ಸಿನ ಮೇಲೆ ಪುಂಡರು ಕಲ್ಲು ತೂರಿ ಹಲ್ಲೆ ನಡೆಸಿದ ಹೀನ ಕಾರ್ಯದಿಂದ ಮಕ್ಕಳಿರುವ ಮನೆಗಳಲ್ಲಿ ಆತಂಕ ಹುಟ್ಟಿದೆ. ದೆಹಲಿಯ ಮುಖ್ಯಮಂತ್ರಿ ಅರವಿಂದ ಕೇಜ್ರಿವಾಲ್ ಅವರು ಗಣರಾಜ್ಯೋತ್ಸವದ ನಿಮಿತ್ತ ಜನರನ್ನುದ್ದೇಶಿಸಿ– ‘ಅವರು ಮುಸಲ್ಮಾನರನ್ನು ಕೊಂದರೂ ನಾವು ಸುಮ್ಮನಿದ್ದೆವು, ಅವರು ದಲಿತರನ್ನು ಕೊಂದರೂ ಸುಮ್ಮನಿದ್ದೆವು. ಅವರೀಗ ನಮ್ಮ ನಮ್ಮ ಮನೆಯೊಳಗೆ ನುಗ್ಗಿ ನಮ್ಮ ಮಕ್ಕಳ ಮೇಲೆ ಕೈಯೆತ್ತುವ ಮಟ್ಟಕ್ಕೆ ಬಂದಿದ್ದಾರೆ. ಈಗ ಸುಮ್ಮನಿರಬೇಡಿ, ದನಿಯೆತ್ತಿರಿ’ ಎಂದು ಜನರನ್ನು ಬಡಿದೆಬ್ಬಿಸಿದ್ದಾರೆ.
ಹಿಟ್ಲರನ ಕಾಲದಲ್ಲಿ ಪ್ರೊಟೆಸ್ಟಂಟ್ ಚರ್ಚಿನ ಧರ್ಮಗುರು ಮಾರ್ಟಿನ್ ನಿಮೊಲ್ಲರ್ ಎಂಬುವರು ನಾಜಿಗಳ ಹೀನಕೃತ್ಯಗಳನ್ನು ಖಂಡಿಸಿ ಆಡಿದ ಮಾತುಗಳು ನೆನಪಾಗುತ್ತವೆ…
ಮೊದಲು ಅವರು ಎರಗಿ ಬಂದರು, ಸಮಾಜವಾದಿಗಳ ಕೊರಳಿಗಾಗಿ, ಪ್ರತಿಭಟಿಸಿ ನಾನು ದನಿಯೆತ್ತಲಿಲ್ಲ, ಯಾಕೆಂದರೆ ನಾನು ಸಮಾಜವಾದಿ ಆಗಿರಲಿಲ್ಲ.
ಬಳಿಕ ಅವರು ಬಡಿಯಲು ಬಂದದ್ದು ಕಾರ್ಮಿಕ ನಾಯಕರನ್ನು, ಆಗಲೂ ನಾನು ತುಟಿ ಬಿಚ್ಚಲಿಲ್ಲ. ಯಾಕೆಂದರೆ, ನಾನು ಕಾರ್ಮಿಕ ನಾಯಕ ಆಗಿರಲಿಲ್ಲ.
ತರುವಾಯ ಅವರು ಬಲಿ ಹೊಡೆಯಲು ಬಂದರು ಯಹೂದಿಗಳನ್ನು. ಅವರಿಗೆ ತಡೆಯೊಡ್ಡಲಿಲ್ಲ, ನಾನು ಬಾಯಿ ತೆರೆಯಲಿಲ್ಲ. ಯಾಕೆಂದರೆ ನಾನು ಯಹೂದಿ ಆಗಿರಲಿಲ್ಲ.
ಕಡೆಗೆ ಅವರು ಏರಿ ಬಂದದ್ದು ನನ್ನದೇ ತಲೆ ತೆಗೆಯಲು. ಅಷ್ಟೊತ್ತಿಗೆ ಬೇರೆ ಯಾರೂ ಬದುಕುಳಿದಿರಲಿಲ್ಲ, ಬೇಡವೆಂದು ತಡೆಯಲು ನನ್ನ ಕೊರಳು ಉಳಿಸಲು.
ಹಿಟ್ಲರ್ ಹುಟ್ಟುಹಾಕಿದ್ದ ಭಯಾನಕ ಅಂಧಯುಗದಲ್ಲಿ ವಿಸ್ಮೃತಿಗೆ ಬಲಿಯಾಗಿ ಆತ್ಮಸಾಕ್ಷಿಯನ್ನೇ ಕಳೆದುಕೊಂಡಿದ್ದ ಜರ್ಮನ್ನರನ್ನು ಬಡಿದೆಬ್ಬಿಸುವಂತೆ ಸಾವಿನ ಭೀತಿಯನ್ನೂ ತೊರೆದು ಮಾರ್ಟಿನ್ ನಿಮೊಲ್ಲರ್ ಆಡಿದ ಸುಡು ಬೆಳಕಿನ ಕಿಡಿಗಳಂಥ ಮಾತುಗಳು ಈಗಲೂ ಪ್ರಸ್ತುತವಾಗಿವೆ.
ಸ್ಕೂಲ್ ಮಕ್ಕಳ ಮೇಲಿನ ಹಲ್ಲೆ ಯಾರೂ ಕ್ಷಮಿಸದ ಹೇಯ ಕೃತ್ಯ. ಹದಿನೆಂಟು ಮಂದಿ ಹಲ್ಲೆಕೋರರನ್ನು ಹರಿಯಾಣ ಪೊಲೀಸರು ಬಂಧಿಸಿದ್ದಾರೆ. ಚರಿತ್ರೆ, ಸಂಪ್ರದಾಯದ ಸಂಗತಿಗಳನ್ನು ಮುಂದಿಟ್ಟುಕೊಂಡು ಪ್ರತಿಭಟನೆ, ವಿರೋಧದ ಹೆಸರಿನಲ್ಲಿ ಕರ್ಣಿ ಸೇನೆ ಹಾನಿಯನ್ನುಂಟು ಮಾಡುತ್ತಿದೆ. ಕೋರ್ಟ್ ತೀರ್ಪನ್ನೂ ಅಲ್ಲಗಳೆಯುವಷ್ಟು ಭಂಡತನವನ್ನು ಅದು ತೋರುತ್ತಿರುವುದಾದರೂ ಏಕೆ? ತಡೆಯುವ ಶಕ್ತಿಗಳಿಗೆ ‘ರಜಪೂತ ಜಾಟ್ ಬಹುದೊಡ್ಡ ವೋಟ್ ಬ್ಯಾಂಕ್’! ತಮ್ಮ ಬೇಳೆ ಬೇಯಿಸಿಕೊಳ್ಳುವ ದೂರದೃಷ್ಟಿ.
ರಜಪೂತರ ಯಾವ ಮಾನ, ಗೌರವ ಪ್ರತಿಷ್ಠೆಯನ್ನು ‘ಪದ್ಮಾವತ್’ ಹರಾಜು ಹಾಕಿತು? ಆನ್..ಬಾನ್..ಶಾನ್ ಎಂದು ಬೊಬ್ಬೆ ಹಾಕುತ್ತಿದ್ದ ಕರ್ಣಿ ಸೇನೆಯು ಬಿದ್ದರೂ ಮೀಸೆ ಮಣ್ಣಾಗಲಿಲ್ಲವೆನ್ನುವಂತೆ ಈಗ ‘ಘೂಮರ್’ ಹಾಡಿನ ಹಿಂದೆ ಬಿದ್ದಿದೆ. ಮದುವೆಗಳಲ್ಲಿ ರಜಪೂತ್, ಜಾಟ್, ಗುಜ್ಜರ ಹೆಣ್ಣುಮಕ್ಕಳು ಮುಖವನ್ನು ಘೂಂಘಟ್‌ನಿಂದ ಮುಚ್ಚಿಕೊಂಡೇ ನರ್ತಿಸುತ್ತಾರೆ. ಅದು ಸಂಪ್ರದಾಯ. ನಮ್ಮ ಪರಿಚಯದ ಪಂಡಿತಾನಿಯೊಬ್ಬಳು ಬೀಡಿಯನ್ನೂ ಸೇದುತ್ತಿದ್ದಳು. ಅದೇ ರೀತಿ ಬೀಡಿ ಸೇದುವ ಜಾಟ್ ಮುದುಕಿಯರನ್ನೂ ಕಂಡಿದ್ದೇನೆ. ಅದನ್ನು ಯಾರೂ ವಿರೋಧಿಸುವುದನ್ನು ನೋಡಿಲ್ಲ. ಪರಂಪರೆ ಹಾಳಾಯಿತೆಂದು ಗೊಣಗುವವರನ್ನೂ ಕಂಡಿಲ್ಲ. ಇದೇ ಜನ ಚಿತ್ರದ ನಟಿ ದೀಪಿಕಾ ಪಡುಕೋಣೆಯನ್ನು ‘ನಾಚನೇವಾಲಿ’ (ಕುಣಿತದವಳು) ಎಂದು ಅನಾದರ ತೋರಿದ್ದನ್ನು ಯಾರೂ ಪ್ರತಿಭಟಿಸಲಿಲ್ಲವೇಕೋ!
ಇದೆಲ್ಲದರ ನಡುವೆಯೂ ತಮಾಷೆಯೆಂದರೆ, ಬಂಧನಕ್ಕೊಳಗಾದ ಭೋಂದಸಿ ಗ್ರಾಮದ 18 ಮಂದಿ ಆಪಾದಿತರ ಕುಟುಂಬದವರಿಗೆ ಈ ‘ಕರ್ಣಿ ಸೇನೆ’ಯ ಹೆಸರೇ ಗೊತ್ತಿಲ್ಲ. ತಮ್ಮ ಹುಡುಗರು ಇಂಥ ಕೃತ್ಯದಲ್ಲಿ ಭಾಗಿಯಾಗಿದ್ದಾರೆಂದೇ ಆ ಜನಕ್ಕೆ ನಂಬಲಾಗುತ್ತಿಲ್ಲ.
ರಾಜಸ್ಥಾನದಲ್ಲಿ 1987ರಲ್ಲಿ ರೂಪ್ ಕನ್ವರ್ ಎನ್ನುವ ಯುವತಿ, ಪ್ರಾಚೀನ ಮಧ್ಯಯುಗದ ಸಂಪ್ರದಾಯದಂತೆ ಪತಿಯ ಚಿತೆಯೇರಿ ‘ಸಹಗಮನ’ ಮಾಡಿದ ಸುದ್ದಿ ದೇಶದ ಜನರನ್ನು ಬೆಚ್ಚಿ ಬೀಳಿಸಿತ್ತು. ಅದು ತಮ್ಮ ಪ್ರತಿಷ್ಠೆಯ ಸಂಗತಿಯೆಂದು ರಜಪೂತರು ಸಮರ್ಥಿಸಿಕೊಂಡಿದ್ದರು. ಆಗ ಹುಟ್ಟಿದ್ದೇ ಶ್ರೀ ರಜಪೂತ್ ಕರ್ಣಿ ಸೇನೆ. ಕರ್ಣಿ ಮಾತಾ, ರಜಪೂತರ ಆರಾಧ್ಯ ದೇವತೆ. ದುರ್ಗೆಯ ಅಪರಾವತಾರ. ಜೋಧಪುರ್, ಬೀಕಾನೇರ್ ರಾಜಮನೆತನಗಳ ಕುಲದೇವತೆ.
‘ಸತಿ’ ಪ್ರಕರಣ ಅಂತರರಾಷ್ಟ್ರೀಯ ಗಮನ ಸೆಳೆದಿತ್ತು. ಆಗ ಕೋರ್ಟ್‌ನಲ್ಲಿ 100 ರಜಪೂತ ಪುರುಷರು ಮತ್ತು ಮಹಿಳೆಯರ ಮೇಲೆ ರೂಪ್ ಕನ್ವರಳ ‘ಕೊಲೆ’ ಆರೋಪವನ್ನು ಹೊರಿಸಲಾಗಿತ್ತು. ಅನಾಗರಿಕ ಆಚರಣೆಗಳನ್ನೇ ಬಂಡವಾಳವಾಗಿಟ್ಟುಕೊಂಡು ದೇಶದಲ್ಲಿ ಆತಂಕಹುಟ್ಟು
ಹಾಕುವುದೇ ಈ ಮೂಲಭೂತವಾದಿಗಳ ಹುನ್ನಾರ. ‘ಪದ್ಮಾವತ್’ ಬಿಡುಗಡೆಯಾದರೆ ತಾವು ಸಾಮೂಹಿಕವಾಗಿ ‘ಜೌಹರ್’ ಮಾಡಿಕೊಳ್ಳುತ್ತೇವೆ ಎಂದ ಕ್ಷತ್ರಾಣಿ ಮಂಚದ ಮುಖಿಯಾ ಮೊನ್ನೆ ‘ನಾನು ನನ್ನ ಮನೆಯಲ್ಲಿದ್ದೇನೆ... ಯಾರಾದರೂ ಜೌಹರ್ ಮಾಡಿಕೊಂಡರೆ ನಾನು ಜವಾಬ್ದಾರಳಲ್ಲ, ನೋಡಿ ಈ ಪೋಲಿಸ್ ನನ್ನನ್ನು ಕಟ್ಟಿ ಹಾಕಿದ್ಡಾರೆ’ ಎನ್ನುವಾಗ, ಹತ್ತಿರದಲ್ಲಿದ್ದ ಮಹಿಳಾ ಪೋಲಿಸ್– ‘ಈಕೆ ಸುಳ್ಳು ಹೇಳುತ್ತಿದ್ದಾಳೆ, ನಾನು ಇಲ್ಲಿಗೆ ಬಂದು ಹತ್ತು ನಿಮಿಷವಾಯಿತಷ್ಟೇ’ ಎನ್ನುವ ಪ್ರಹಸನ ನೋಡಿದೆ. ಅಬ್ಬಾ… ಕ್ಷತ್ರಾಣಿಯರೇ, ರಜಪೂತಾಣಿಯರೇ... ಎಚ್ಚೆತ್ತುಕೊಳ್ಳಿ ಇನ್ನಾದರೂ! ಪ್ರಶ್ನಿಸುವುದನ್ನು ಕಲಿಯಿರಿ. ಒಣ ಆನ್, ಬಾನ್, ಶಾನ್‌ಗೆ ನಿಮ್ಮನ್ನು ನೀವು ಮಾರಿಕೊಳ್ಳದಿರಿ!
ಇಂಥ ಹಿಂಸಾಕೃತ್ಯಗಳಲ್ಲಿ ತೊಡಗಿರುವವರೆಲ್ಲ ರಜಪೂತರೋ ಕ್ಷತ್ರಿಯರೋ ಗೊತ್ತಿಲ್ಲ. ಮನುಷ್ಯರಂತೂ ಅಲ್ಲವೆನಿಸುತ್ತದೆ. ನಿನ್ನೆ ಬಸ್ಸು, ಆಟೊಗಳಲ್ಲಿ ಜನರ ಆಕ್ರೋಶ ನೋಡುವಂತಿತ್ತು. ಒಬ್ಬ ಹಿರಿಯರಂತೂ ‘ಕರ್ಣಿಸೇನಾ, ಭರಣಿಸೇನಾ ಅನ್ನುವ ಗೂಂಡಾಗಳ ಗುಂಪಿನಲ್ಲಿರುವ ಯಾವೊಬ್ಬನಿಗೂ ಆಫೀಸಿಗೆ ಹೋಗಬೇಕು ಅನ್ನೊ ದರ್ದು ಇಲ್ಲ! ಎಲ್ಲಿಂದಲೋ ಹರಾಮದ ರೊಕ್ಕ ಬರುತ್ತದೆ, ಹಲ್ಲೆ ಮಾಡಿ, ದೊಂಬಿ ಮಾಡಿ, ಕುಡಿದು ಕುಣಿದು ದಿನಗಳೆಯುತ್ತಾರೆ. ಇವರ ತಂದೆ ತಾಯಿಯರಿಗೆ ತಮ್ಮ ಮಕ್ಕಳು ಮಾಡುವ ಕೃತ್ಯಗಳು ಗೊತ್ತೇ ಇರುವುದಿಲ್ಲ...’ ಎಂದು ತಮ್ಮ ಆಕ್ರೋಶವನ್ನು ಜನರ ಮುಂದೆ ಹಂಚಿಕೊಳ್ಳುತ್ತಿದ್ದರು.
ನಿತ್ಯವೂ ಒಂದಲ್ಲಾ ಒಂದೆಡೆ ನಡೆಯುವ ಅತ್ಯಾಚಾರದ ವಿರುದ್ಧ ಯಾವ ಸೇನೆಯೂ ಬೀದಿಗಿಳಿದು ಹೋರಾಡುವುದಿಲ್ಲ. ಮಧ್ಯ ಯುಗದ ಪಳೆಯುಳಿಕೆಯಂತಿರುವ ಬಾಲ್ಯವಿವಾಹ, ಜೌಹರ್‌ಗಳಂಥ ಮೌಢ್ಯಗಳನ್ನು ಈಗಲೂ ತಮ್ಮ ಪ್ರತಿಷ್ಠೆಯ ಸಂಗತಿ ಎನ್ನುವವರು ಯಾವ ಯುಗದಲ್ಲಿದ್ದಾರೆಂದು ಅಚ್ಚರಿಯಾಗುತ್ತದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.