ADVERTISEMENT

ಸಂಗತ | ಹೊರಗುತ್ತಿಗೆ ಮತ್ತು ಅತಂತ್ರ ಸ್ಥಿತಿ

ಈ ವ್ಯವಸ್ಥೆಯನ್ನು ಸರ್ಕಾರವೇ ಮುಂದುವರಿಸುತ್ತಿರುವುದು ಅಪಾಯಕಾರಿ ಬೆಳವಣಿಗೆ

ಮಲ್ಲಿಕಾರ್ಜುನ ಹೆಗ್ಗಳಗಿ
Published 27 ಮೇ 2024, 1:18 IST
Last Updated 27 ಮೇ 2024, 1:18 IST
   

ವಿವಿಧ ಇಲಾಖೆಗಳಿಗೆ ಹೊರಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಿಸಿಕೊಳ್ಳುವಾಗ ಮೀಸಲಾತಿ ನೀತಿಯನ್ನು ಕಡ್ಡಾಯವಾಗಿ ಪಾಲಿಸಬೇಕು, ಅದರ ಅನ್ವಯ ಮಹಿಳೆಯರಿಗೆ ಶೇಕಡ 33ರಷ್ಟು ಸ್ಥಾನಗಳನ್ನು ಮೀಸಲಿಡಬೇಕು ಎಂದು ರಾಜ್ಯ ಸರ್ಕಾರ ಸುತ್ತೋಲೆ ಹೊರಡಿಸಿದೆ. ಸರ್ಕಾರದ ಈ ನಿರ್ಧಾರದಿಂದ ದುರ್ಬಲ ವರ್ಗಗಳಿಗೆ ಅನುಕೂಲ ಆಗುತ್ತದೆ ಎಂದು ಅರ್ಥೈಸಲಾಗಿದೆ. ಅವಕಾಶ ಕಲ್ಪಿಸುವ ವಿಚಾರಕ್ಕೆ ಸೀಮಿತವಾಗಿ ಹೇಳುವುದಾದರೆ ಈ ವಾದದಲ್ಲಿ ಹುರುಳಿದೆ. ಆದರೆ ಹೊರಗುತ್ತಿಗೆ ನೌಕರಿ ಎಂಬುದು ದುಡಿಯುವ ವರ್ಗದ ಶೋಷಣೆಗಾಗಿಯೇ ರೂಪುಗೊಂಡ ವ್ಯವಸ್ಥೆ ಎಂಬಂತೆ ಇದೆ. ಅಂತಹ ವ್ಯವಸ್ಥೆ ಯನ್ನು ಸರ್ಕಾರವೇ ಉಳಿಸಿ, ಮುಂದುವರಿಸಿಕೊಂಡು ಹೋಗುತ್ತಿರುವುದು ಎಷ್ಟು ಸರಿ? ಈ ಪ್ರಶ್ನೆ ಚರ್ಚೆಗೆ ಒಳಗಾಗಬೇಕಾದ ಅಗತ್ಯ ಇದೆ.

ಅರ್ಹ ನೌಕರರನ್ನು ನೇಮಿಸಿಕೊಂಡು ಅವರಿಗೆ ಸೂಕ್ತ ಸಂಬಳ, ಸೌಲಭ್ಯಗಳನ್ನು ಕೊಟ್ಟು ಗುಣಮಟ್ಟದ ಸೇವೆ ಪಡೆಯುವುದು ಸರ್ಕಾರದ ಹೊಣೆಗಾರಿಕೆ ಆಗಿದೆ. ಉದ್ಯೋಗ ಸೃಷ್ಟಿ, ದುಡಿಯುವ ಕೈಗಳಿಗೆ ಕೆಲಸ ಕೊಡುವುದು ಸರ್ಕಾರದ ಕರ್ತವ್ಯ. ಸಂಬಳದ ಹಣ ಉಳಿಸುವ ಕಾರಣಕ್ಕೆ ಯುವಕರನ್ನು ಹೊರಗುತ್ತಿಗೆಯ ಆಧಾರದಲ್ಲಿ ಕೆಲಸದಲ್ಲಿ ತೊಡಗಿಸುವುದು ಯಾವ ಸರ್ಕಾರಕ್ಕೂ ಭೂಷಣವಲ್ಲ.

ಹೊರಗುತ್ತಿಗೆ ಉದ್ಯೋಗಿಗಳ ಬದುಕು ಅತಂತ್ರ ಸ್ಥಿತಿಯಲ್ಲೇ ಇರುತ್ತದೆ. ಸರ್ಕಾರ ಟೆಂಡರ್ ಕರೆದು ಕೆಲಸ ಗಾರರನ್ನು ಪೂರೈಸುವ ಏಜೆನ್ಸಿಗಳನ್ನು ಗೊತ್ತುಪಡಿಸುತ್ತದೆ. ಟೆಂಡರ್ ಪಡೆಯುವಾಗಲೇ ವ್ಯಾವಹಾರಿಕವಾಗಿ ಪೈಪೋಟಿಗಳು ನಡೆಯುತ್ತವೆ ಎಂಬುದು ಎಲ್ಲರಿಗೂ ತಿಳಿದ ವಿಷಯ.

ADVERTISEMENT

ಏಜೆನ್ಸಿಗಳು ನೌಕರರಿಗೆ ಸರಿಯಾಗಿ ಸಂಬಳ ಕೊಡುವುದಿಲ್ಲ. ಕೈಗೆ ಬಂದ ಸಂಬಳದಲ್ಲಿ ಏಜೆನ್ಸಿಗಳಿಗೆ ಪ್ರತಿ ತಿಂಗಳು ನಿಗದಿತ ಹಣ ಕೊಡಬೇಕು, ಸರ್ಕಾರಿ ನೌಕರರು ಮತ್ತು ಅವರಿಗೆ ಸಮಾನವಾಗಿ ಕೆಲಸ ಮಾಡುವ ಗುತ್ತಿಗೆ ನೌಕರರ ಸಂಬಳದ ನಡುವೆ ದೊಡ್ಡ ಪ್ರಮಾಣದ ವ್ಯತ್ಯಾಸ ಇರುತ್ತದೆ. ಇದು, ಗುತ್ತಿಗೆ ನೌಕರರನ್ನು ಕೀಳರಿಮೆಯಾಗಿ ಕಾಡುತ್ತದೆ. ಉದ್ಯೋಗ ಭದ್ರತೆ ಇಲ್ಲ. ಪ್ರತಿವರ್ಷ ನವೀಕರಿಸಬೇಕು. ಏಜೆನ್ಸಿಗಳ ಬಳಿ ಅಂಗಲಾಚಿ ಪುನಃ ಕೆಲಸ ಪಡೆದುಕೊಳ್ಳಬೇಕು. ಟೆಂಡರ್ ಪ್ರಕ್ರಿಯೆಯಲ್ಲಿ ಏಜೆನ್ಸಿಗಳು ಬದಲಾದರೆ ಕೆಲಸಕ್ಕೆ ಕುತ್ತು. ಇದು ನಾಡಿನ ಉದ್ದಗಲಕ್ಕೂ ಹರಡಿರುವ ಹೊರಗುತ್ತಿಗೆ ನೌಕರರ ಕಣ್ಣೀರಿನ ಕಥೆ.

ಹೊರಗುತ್ತಿಗೆ ನೌಕರರನ್ನು ಕಾಯಂ ನೌಕರಿಗೆ ಪರಿಗಣಿಸುವಂತಿಲ್ಲ ಎಂದು ಮೀಸಲಾತಿ ನಿಗದಿಪಡಿಸಿದ ಆದೇಶದಲ್ಲಿಯೇ ಸರ್ಕಾರ ಸ್ಪಷ್ಟಪಡಿಸಿದೆ. ಹೊರಗುತ್ತಿಗೆ ನೌಕರರು ಸಂಘಟಿತರಾಗಿ, ಸಂಬಳ ಹೆಚ್ಚಿಸುವುದಕ್ಕೆ, ಕೆಲಸ ಕಾಯಂಗೊಳಿಸುವುದಕ್ಕೆ ಹೋರಾಟ ಮಾಡುವುದನ್ನು ತಡೆಯುವ ಉದ್ದೇಶ ಕೂಡ ಈ ಆದೇಶದಲ್ಲಿ ಅಡಗಿದೆ. ಇದು ಹೊರಗುತ್ತಿಗೆ ನೌಕರರನ್ನು ಇನ್ನಷ್ಟು ದುರ್ಬಲಗೊಳಿಸುತ್ತದೆ.

ಸರ್ಕಾರಿ, ಅರೆ ಸರ್ಕಾರಿ, ಖಾಸಗಿ ಮತ್ತು ಸಹಕಾರಿ ಸಂಸ್ಥೆಗಳಲ್ಲಿ ಗುತ್ತಿಗೆ ಆಧಾರದಲ್ಲಿ ನೌಕರರನ್ನು ನೇಮಕ ಮಾಡಿಕೊಳ್ಳುವ ವಿಧಾನವನ್ನು ರದ್ದು ಮಾಡುವ ಉದ್ದೇಶದಿಂದ ರಾಜ್ಯ ಸರ್ಕಾರ ‘ಗುತ್ತಿಗೆ ಪದ್ಧತಿಯ ನಿಯಂತ್ರಣ ಮತ್ತು ರದ್ದತಿ’ ಕಾನೂನನ್ನು 1970ರಲ್ಲಿ ರೂಪಿಸಿದೆ. ಗುತ್ತಿಗೆ ನೇಮಕ ಪದ್ಧತಿಯನ್ನು ಪೂರ್ಣವಾಗಿ ತೊಡೆದುಹಾಕುವುದು ಈ ಕಾನೂನಿನ ಮಹತ್ವದ ಆಶಯವಾಗಿದೆ. ‘ಸಮಾನ ಕೆಲಸಕ್ಕೆ ಸಮಾನ ವೇತನ’ ನೀಡುವ ಹಾಗೂ ‘ಕನಿಷ್ಠ ವೇತನ’ ಒದಗಿಸುವ ಮತ್ತು ‘ವೇತನದಲ್ಲಿ ಅನಧಿಕೃತ ಕಡಿತ’ ತಡೆಯುವ ಕಾನೂನುಗಳು ಜಾರಿಯಲ್ಲಿವೆ. ಹೊರಗುತ್ತಿಗೆ ಸಿಬ್ಬಂದಿ ಈ ಎಲ್ಲ ಕಾನೂನುಗಳಿಂದಲೂ ವಂಚಿತರಾಗಿದ್ದಾರೆ.

‘ಸರ್ಕಾರವೇ ಏಜೆನ್ಸಿಗಳನ್ನು ನೇಮಿಸುತ್ತದೆ. ಅವುಗಳ ಮೂಲಕವೇ ನೌಕರರ ಸಂಬಳ ಬಿಡುಗಡೆ ಮಾಡುತ್ತದೆ. ಜಿಎಸ್‌ಟಿಯನ್ನು ಕೂಡ ಸರ್ಕಾರ ಕಟ್ಟುತ್ತದೆ. ಸರ್ಕಾರವೇ ಪ್ರಧಾನ ಉದ್ಯೋಗದಾತ. ಕಾನೂನಾತ್ಮಕವಾಗಿ ಸರ್ಕಾರವೇ ಗುತ್ತಿಗೆ ನೌಕರರಿಗೂ ನ್ಯಾಯಸಮ್ಮತ ವೇತನ ಒದಗಿಸಬೇಕು. ಇದು ಸರ್ಕಾರದ ನೈತಿಕ ಮತ್ತು ಕಾನೂನಾತ್ಮಕ ಜವಾಬ್ದಾರಿಯಾಗಿದೆ’ ಎಂದು ರಾಜ್ಯ ದಿನಗೂಲಿ ನೌಕರರ ಮಹಾಮಂಡಳದ ಅಧ್ಯಕ್ಷ ಕೆ.ಎಸ್.ಶರ್ಮಾ ಅವರು ಹೇಳುವ ಮಾತು ಸಮರ್ಪಕವಾಗಿದೆ.

ಹೊರಗುತ್ತಿಗೆ ನೌಕರರ ನೇಮಕಾತಿಯಲ್ಲಿ ಮೀಸಲಾತಿ ನಿಗದಿ ಮಾಡಿ ಸಾಮಾಜಿಕ ನ್ಯಾಯ ಒದಗಿಸಲಾಗಿದೆ ಎಂದು ಹೇಳುವ ಸರ್ಕಾರ, ಸಂಬಳ ಕೊಡುವುದಕ್ಕೆ ಸಾಮಾಜಿಕ ನ್ಯಾಯ ಪಾಲಿಸುವುದಿಲ್ಲ. ಸಾಮಾಜಿಕ ನ್ಯಾಯ ಎಂಬುದು ಪೂರ್ಣ ಪ್ರಮಾಣದಲ್ಲಿ ಇರುತ್ತದೆ. ಅದು ವಿಭಜನೆಗೊಂಡು ಭಾಗಶಃ ಇರುವುದಿಲ್ಲ.

ಕೌಟುಂಬಿಕ ರಕ್ಷಣೆ ಮತ್ತು ಸಾಮಾಜಿಕ ಅಭಿವೃದ್ಧಿ ಯನ್ನು ಉತ್ತೇಜಿಸುವಲ್ಲಿ ನ್ಯಾಯಸಮ್ಮತ ವೇತನ ಪಾವತಿ ಮಹತ್ವದ ಪಾತ್ರ ವಹಿಸುತ್ತದೆ. ಸಂಬಳ ಒಂದು ಬಹುದೊಡ್ಡ ಆಕರ್ಷಣೆ. ಕೆಲಸಗಾರ ತನ್ನ ವೈಯಕ್ತಿಕ ಸಂತೋಷದ ಚಟುವಟಿಕೆಗಳನ್ನು ಬದಿಗಿಟ್ಟು, ಬೇಗನೆ ಎದ್ದು, ಎಷ್ಟೋ ಬಾರಿ ಸರಿಯಾಗಿ ಊಟ, ಉಪಾಹಾರವನ್ನೂ ಸೇವಿಸದೆ ಓಡಿಬಂದು ಕೆಲಸಕ್ಕೆ ಹಾಜರಾಗುತ್ತಾನೆ. ಸಂಬಳಕ್ಕಾಗಿ ಅವನು ಇಷ್ಟೆಲ್ಲ ಹೆಣಗುತ್ತಾನೆ ಎಂಬುದನ್ನು ದುಡಿಸಿಕೊಳ್ಳುವವರು ತೆರೆದ ಮನಸ್ಸಿನಿಂದ ಅರಿತುಕೊಳ್ಳಬೇಕು. ಕೂಲಿಯವನ ದುಡಿಮೆಯ ಬೆವರು ಆರುವ ಮೊದಲೇ ಅವನ ಹೊಟ್ಟೆ ತುಂಬುವಷ್ಟು ಕೂಲಿ ಕೊಡಬೇಕು ಎಂದು ಕುರಾನ್ ಹೇಳುತ್ತದೆ. ದುಡಿಸಿಕೊಳ್ಳುವವರೆಲ್ಲರೂ ಈ ನೀತಿ ಮಾತನ್ನು ಪಾಲಿಸುವುದು ಅವಶ್ಯ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.