ADVERTISEMENT

ಸಂಗತ: ‘ದ್ವಾರಕಾ’ ಖ್ಯಾತಿಯ ಶ್ರೇಷ್ಠ ಪುರಾತತ್ತ್ವಜ್ಞ ಡಾ.ಎಸ್‌.ಆರ್‌. ರಾವ್‌

ಡಾ.ಎಸ್‌.ಆರ್‌. ರಾವ್‌ ಅವರ ಜನ್ಮಶತಮಾನೋತ್ಸವದ ಸ್ಮರಣೆ

ಎಚ್‌.ಎಸ್‌.ಗೋಪಾಲ ರಾವ್‌
Published 30 ಜೂನ್ 2022, 20:30 IST
Last Updated 30 ಜೂನ್ 2022, 20:30 IST
ಎಸ್‌. ಆರ್‌. ರಾವ್‌
ಎಸ್‌. ಆರ್‌. ರಾವ್‌   

ವಿಶ್ವದ ಕೆಲವು ಶ್ರೇಷ್ಠ ಪುರಾತತ್ತ್ವಜ್ಞರನ್ನು ಆದ್ಯತೆಯ ಮೇಲೆ ಪಟ್ಟಿ ಮಾಡಿ ಎಂದರೆ, ಅಗ್ರಪಂಕ್ತಿಯಲ್ಲಿ ನಿಲ್ಲುವ ಕೆಲವರಲ್ಲಿ ಕರ್ನಾಟಕದ ಡಾ. ಎಸ್.ಆರ್.ರಾವ್ ಅವರೂ ಒಬ್ಬರು. ಕರ್ನಾಟಕದ ಬಾದಾಮಿ, ಐಹೊಳೆ ಮತ್ತು ಪಟ್ಟದಕಲ್ಲುಗಳಲ್ಲಿ ಕಾರ್ಯನಿರ್ವಹಿಸಿದವರಷ್ಟೆಅಲ್ಲ; ಭಾರತದ ಪ್ರಮುಖ ಪುರಾತತ್ತ್ವ ನೆಲೆಗಳಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿ ಖ್ಯಾತಿ ಪಡೆದವರು. ಅವರು ಭಾರತೀಯರಾಗಿ ಮಾತ್ರವೇ ಉಳಿಯದೆ ವಿಶ್ವಮಾನ್ಯರಾಗಿದ್ದಾರೆ. 2022ರ ಜುಲೈ 1ನೆಯ ತಾರೀಖು ಅವರ ಜನ್ಮಶತಮಾನೋತ್ಸವದ ಸವಿನೆನಪಿನ ದಿನ.

ಶಿವಮೊಗ್ಗ ಜಿಲ್ಲೆಯ ಶಿಕಾರಿಪುರದ ರಂಗನಾಥ ರಾವ್ ಅವರು ಭಾರತೀಯರಿಗೆ ಮಾತ್ರವಲ್ಲದೆ, ಇಡೀ ವಿಶ್ವಕ್ಕೆ ತಿಳಿದಿರುವುದು ಎಸ್.ಆರ್. ರಾವ್ ಎಂಬ ಹೆಸರಿನಿಂದ. 1922ರ ಜುಲೈ 1ನೆಯ ತಾರೀಖು ಶಿವಮೊಗ್ಗ ಜಿಲ್ಲೆಯ ಸಾಗರ ತಾಲ್ಲೂಕಿನ ಆನಂದಪುರ
ದಲ್ಲಿ ಜನಿಸಿದ ರಾವ್ ಅವರು ಮೈಸೂರು ವಿಶ್ವವಿದ್ಯಾಲಯದಿಂದ ಬಿ.ಎ (ಆನರ್ಸ್) ಪದವಿಯನ್ನೂ, ನಾಗಪುರ ವಿಶ್ವವಿದ್ಯಾಲಯದಿಂದ ಎಂ.ಎ ಪದವಿಯನ್ನೂ ಪಡೆದರು. ಡಿ.ಲಿಟ್ ಪದವಿಯನ್ನು ಪಡೆದದ್ದು ಮೈಸೂರು ವಿಶ್ವವಿದ್ಯಾಲಯದಿಂದ. ಆರಂಭದಲ್ಲಿ ಹಲವಾರು ಉದ್ಯೋಗಗಳಲ್ಲಿ ತೊಡಗಿಕೊಂಡರೂ, ಬಹಳ ಬೇಗ ಭಾರತೀಯ ಪುರಾತತ್ತ್ವ ಇಲಾಖೆಯಲ್ಲಿ ಉದ್ಯೋಗ ಪಡೆದು, ಅಲ್ಲಿಯೇ ಸುಮಾರು 32 ವರ್ಷಗಳ ಕಾಲ ವಿವಿಧ ಹುದ್ದೆಗಳಲ್ಲಿ ಸೇವೆ ಸಲ್ಲಿಸಿ, 1980ರಲ್ಲಿ ನಿವೃತ್ತರಾದರು. ಆನಂತರವೂ ಸಾಗರದಾಳದ ಪುರಾತತ್ತ್ವ ಶೋಧನೆಯಲ್ಲಿ ಬಹಳ ವರ್ಷಗಳ ಕಾಲ ಕಾರ್ಯ ನಿರ್ವಹಿಸಿದರು. ಅವರು ನಿಧನರಾದದ್ದು 2013ರ ಜನವರಿ 3ರಂದು.

ಸ್ವಾತಂತ್ರ್ಯಪೂರ್ವದ ಬರೋಡಾ ಸಂಸ್ಥಾನದ ಪುರಾತತ್ತ್ವ ಇಲಾಖೆಯಲ್ಲಿ ಸಹಾಯಕ ನಿರ್ದೇಶಕರಾಗಿ ವೃತ್ತಿಜೀವನವನ್ನು ಆರಂಭಿಸಿದ ಅವರು, ಪುರಾತತ್ತ್ವಶಾಸ್ತ್ರ, ಶಾಸನಶಾಸ್ತ್ರ, ನಾಣ್ಯಶಾಸ್ತ್ರಗಳಲ್ಲಿ ತರಬೇತು ಪಡೆದು, ಬರೋಡಾ ಸಂಸ್ಥಾನವು ಭಾರತೀಯ ಗಣರಾಜ್ಯದೊಡನೆ ಸೇರಿದ ನಂತರ, ಭಾರತೀಯ ಪುರಾತತ್ತ್ವ ಇಲಾಖೆಯಲ್ಲಿ ಸಹಾಯಕ ಅಧೀಕ್ಷಕರಾಗಿ ನೇಮಕಗೊಂಡರು. ಆಗಿನಿಂದ 1980ರಲ್ಲಿ ನಿವೃತ್ತರಾಗುವವರೆಗೆ ಇಲಾಖೆಯ ವಿವಿಧ ಜವಾಬ್ದಾರಿಗ
ಳನ್ನು ನಿರ್ವಹಿಸಿದರು. ನಿವೃತ್ತಿಯ ನಂತರ, ಭಾರತೀಯ ರಾಷ್ಟ್ರೀಯ ವಿಜ್ಞಾನ ಅಕಾಡೆಮಿಯು ಗೋವಾದಲ್ಲಿ ಸ್ಥಾಪಿಸಿರುವ ಭಾರತೀಯ ಸಾಗರತಳದ ಪುರಾತತ್ತ್ವ ಶೋಧಗಳಲ್ಲಿ ಮುಖ್ಯಸ್ಥರಾಗಿ, ಉತ್ತಮ ಫಲಿತಾಂಶಗಳನ್ನು ನೀಡಿದ್ದಾರೆ.

ADVERTISEMENT

ವಿದ್ಯಾರ್ಥಿಜೀವನದಲ್ಲಿ ಹಲವು ಪ್ರಶಸ್ತಿಗಳನ್ನುಪಡೆದ ರಾವ್ ಅವರು, ಭಾರತದಲ್ಲಿನ ಹಲವು ಪ್ರಮುಖ ಉತ್ಖನನಗಳ ನೇತೃತ್ವ ವಹಿಸಿದ್ದಾರೆ. ಹಲವು ಪ್ರಮುಖ ಐತಿಹಾಸಿಕ ಸ್ಮಾರಕಗಳ ಸಂರಕ್ಷಣೆ ಮಾಡಿದ್ದಾರೆ. ಅವುಗಳಲ್ಲಿ ಉದಾಹರಿಸಲೇಬೇಕಾದ ಕೆಲವು ಕಾರ್ಯಗಳೆಂದರೆ – ತಾಜ್‍ಮಹಲ್‍ನ ತಳಪಾಯ ಮತ್ತು ಕಟ್ಟಡದ ಸಂರಕ್ಷಣೆ, ಅಜಂತಾದಲ್ಲಿನ ಕೆಲವು ಗುಹೆಗಳ ಸಂರಕ್ಷಣೆ, ಎಲ್ಲೋರಾದ ಕೈಲಾಸ ದೇವಾಲಯದ ಸಂರಕ್ಷಣೆ ಇತ್ಯಾದಿಗಳು. ಇವಲ್ಲದೆ ಚಿತ್ತೋರ್‌ಗಡದ ಕೋಟೆ, ಮುಂಬಯಿಯ ಜೋಗೇಶ್ವರಿ, ಪಾತಾಳೇಶ್ವರ, ಕಾರ್ಲೆ, ಎಲಿಫೆಂಟಾ ಗುಹಾಂತರ ದೇವಾಲಯಗಳ ಸಂರಕ್ಷಣೆ, ತಂಜಾವೂರು ಮತ್ತು ಮಹಾಬಲಿಪುರಗಳಲ್ಲಿನ ದೇವಾಲಯಗಳ ಸಂರಕ್ಷಣೆ ಇತ್ಯಾದಿ ಕಾರ್ಯಗಳನ್ನೂ ಯಶಸ್ವಿಯಾಗಿ ನಿರ್ವಹಿಸಿದ್ದಾರೆ.

ಕರ್ನಾಟಕದ ಐಹೊಳೆ, ಪಟ್ಟದಕಲ್ಲು ಮತ್ತು ಬಾದಾಮಿಗಳಲ್ಲಿನ ಬಾದಾಮಿ ಚಾಲುಕ್ಯರ ಕಾಲದ ಗುಹಾಲಯಗಳು ಮತ್ತು ನಿರ್ಮಿತ ದೇವಾಲಯಗಳ ಸಂರಕ್ಷಣೆ, ಬಳ್ಳಿಗಾವೆ, ಲಕ್ಕುಂಡಿ ಮತ್ತು ಚೌಡದಾನಪುರಗಳಲ್ಲಿರುವ ಕಲ್ಯಾಣ ಚಾಲುಕ್ಯರ ಕಾಲದ ದೇವಾಲಯಗಳ ಸಂರಕ್ಷಣೆಯೂ ಸೇರಿವೆ. ಈ ಪಟ್ಟಿಗೆ ಹಳೆಬೀಡು, ಬೇಲೂರು, ಮೊಸಳೆಯ ಹೊಯ್ಸಳರ ಕಾಲದ ನಿರ್ಮಿತಿಗಳು, ಹಂಪಿಯ ವಿಜಯನಗರ ಕಾಲದ ಸ್ಮಾರಕಗಳೂ ಸೇರುತ್ತವೆ. ಇನ್ನೂ ಅನೇಕ ಸ್ಮಾರಕಗಳನ್ನು ವಿಜಯಪುರ, ಬೀದರ್, ಶ್ರೀರಂಗ
ಪಟ್ಟಣ ಮತ್ತು ಇತರೆಡೆಗಳಲ್ಲಿ ಸಂರಕ್ಷಿಸಿದ್ದಾರೆ. ರಾವ್ ಅವರ ಹೆಸರನ್ನು ಸದಾ ಕಾಲ ನೆನಪಿಸುವ ಕೆಲಸಗಳೆಂದರೆ ಲೋಥಾಲ್, ರಂಗಪುರಗಳಲ್ಲಿಅವರಿಂದ ಶೋಧಗೊಂಡ ಹರಪ್ಪೋತ್ತರ ಸಂಸ್ಕೃತಿಯಕುರುಹುಗಳು; ಸಾಗರತಳದ ಉತ್ಖನನ, ಶೋಧಗಳಲ್ಲಿ,
ಗುಜರಾತ್ ಕರಾವಳಿಯ ಬೇಟ್ ದ್ವಾರಕಾದಲ್ಲಿ ದ್ವಾರಕಾಧೀಶ ಮಂದಿರ ಮತ್ತು ಇತರ ಸ್ಮಾರಕಗಳು.

ಭಾರತೀಯ ಪುರಾತತ್ತ್ವ ಇತಿಹಾಸದಲ್ಲಿ ಇಂದಿಗೂ ಸಂಶೋಧಕರಲ್ಲಿ ಸಹಮತ ಇಲ್ಲದಿರುವಂಥವು ಹರಪ್ಪಾಕಾಲೀನ ಲಿಪಿಗಳು. ಮುದ್ರೆಗಳ ಮೇಲಿರುವ ‘ಲಿಪಿ’ಗಳನ್ನು ಎಲ್ಲರೂ ಒಪ್ಪುವಂತೆ ಇನ್ನೂ ಓದಲಾಗಿಲ್ಲ. ಆ ಪ್ರಯತ್ನದಲ್ಲಿ ರಾವ್ ಸ್ವಲ್ಪಮಟ್ಟಿಗೆ
ಸಾಫಲ್ಯ ಪಡೆದಿದ್ದಾರೆ. ವೇದಪೂರ್ವ ಕಾಲದ ಸಂಸ್ಕೃತದಛಾಯೆಯನ್ನು ಹರಪ್ಪಾ ಮುದ್ರೆಗಳ ಮೇಲಿನ ಲಿಪಿಯಲ್ಲಿ ಗುರುತಿಸುವ ಅವರ ಪ್ರಯತ್ನವನ್ನು ಹೆಚ್ಚು ಜನ ವಿದ್ವಾಂಸರು ಒಪ್ಪಿದ್ದಾರೆ ಎಂಬುವುದು ಸಂತೋಷದ ವಿಷಯ. ಈ ಕೆಲಸ ಮುಂದುವರಿದು ಹರಪ್ಪಾ ಲಿಪಿಗಳ ಓದು ಸಾರ್ವತ್ರಿಕವಾಗಿ ಎಲ್ಲ ವಿದ್ವಾಂಸರಿಂದ ಅನುಮೋದನೆಗೊಂಡರೆ ಅದು ಎಸ್.ಆರ್.ರಾವ್ ಅವರಿಗೆ ಸಲ್ಲುವ ಮಹತ್ವದ ಕೊಡುಗೆಯಾಗುತ್ತದೆ.

ಹಲವಾರು ಸಂಘ, ಸಂಸ್ಥೆಗಳೊಡನೆ ನಿಕಟ ಸಂಪರ್ಕವಿರಿಸಿಕೊಂಡಿದ್ದ ಅವರನ್ನು ಹಲವಾರು ಪ್ರಶಸ್ತಿಗಳು ಅರಸಿಕೊಂಡು ಬಂದವು. ಇಲಾಖೆಯ ಉತ್ಖನನ, ಸಂರಕ್ಷಣೆ ಇತ್ಯಾದಿಗಳ ವರದಿಗಳಲ್ಲದೆ, ಹತ್ತು ಗ್ರಂಥಗಳನ್ನು ಮತ್ತು ಎಪ್ಪತ್ತಕ್ಕೂ ಹೆಚ್ಚು ಸಂಶೋಧನ ಲೇಖನಗಳನ್ನು ಪ್ರಕಟಿಸಿರುವ ಎಸ್.ಆರ್. ರಾವ್ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶಕರಾಗಿ ನಮಗೆ ಒದಗುತ್ತಲೇ ಇರುತ್ತಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.