ADVERTISEMENT

ಸಂಗತ: ಜಲ ಸಂಸತ್– ಗದ್ದಲವಿಲ್ಲ, ಸಭಾತ್ಯಾಗವಿಲ್ಲ!

ರಾಜಸ್ಥಾನದ ಶಾಲೆಯೊಂದರಲ್ಲಿ ವಿದ್ಯಾರ್ಥಿಗಳ ನೇರ ಉಸ್ತುವಾರಿಯಲ್ಲಿ ನಡೆಯುವ ‘ಜಲ ಸಂಸತ್’, ನಿರೀಕ್ಷೆಗೂ ಮೀರಿ ಜಲ ಸ್ವಾವಲಂಬನೆಯ ಪಾಠವನ್ನು ಕಲಿಸುತ್ತಿದೆ

ಗುರುರಾಜ್ ಎಸ್.ದಾವಣಗೆರೆ
Published 20 ಆಗಸ್ಟ್ 2023, 20:16 IST
Last Updated 20 ಆಗಸ್ಟ್ 2023, 20:16 IST
   

ಲೋಕಸಭೆಯ ಕಾರ್ಯಕಲಾಪಗಳು ಹೇಗೆ ನಡೆಯುತ್ತವೆ ಎಂಬುದನ್ನು ತಿಳಿಸಿಕೊಡುವ ‘ಯುವ ಸಂಸತ್’ ಚಟುವಟಿಕೆಯು ಶಿಕ್ಷಣ ಇಲಾಖೆಯ ಆದೇಶದಂತೆ ರಾಜ್ಯದಲ್ಲಿ ಪ್ರತಿವರ್ಷ ಎಲ್ಲ ಜಿಲ್ಲೆಗಳಲ್ಲೂ ನಡೆಯುತ್ತದೆ. ಅಧ್ಯಾಪಕರ ಮಾರ್ಗದರ್ಶನದಲ್ಲಿ ನೂರಾರು ವಿದ್ಯಾರ್ಥಿಗಳು ಕಾರ್ಯಕ್ರಮ ನಡೆಸಿಕೊಡುತ್ತಾರೆ. ಪಿಯುಸಿ ಮತ್ತು ಪದವಿ ಶಿಕ್ಷಣದ ಕಲಾ ವಿಭಾಗದ ವಿದ್ಯಾರ್ಥಿಗಳು ಹೆಚ್ಚಾಗಿ ಭಾಗವಹಿಸುವ ಈ ಕಾರ್ಯಕ್ರಮ ಬರೀ ಒಂದು ದಿನ ನಡೆಯುತ್ತದೆ. ಮತ್ತೆ ಅದರ ಪ್ರಸ್ತಾಪವಾಗುವುದು ಮುಂದಿನ ವರ್ಷವೆ!

ಆದರೆ ರಾಜಸ್ಥಾನದ ಖಾಸಗಿ ಶಾಲೆಯೊಂದರ ಒಬ್ಬ ಮುಖ್ಯ ಶಿಕ್ಷಕಿಯು ಜನ– ಜಾನುವಾರುಗಳಿಗೆ ಅನುಕೂಲ ಕಲ್ಪಿಸುವ ಜಲ ಸಂಸತ್ ಅಂದರೆ ‘ವಾಟರ್ ಪಾರ್ಲಿಮೆಂಟ್’ ಶುರುಮಾಡಿ ಯಶಸ್ವಿಯಾಗಿದ್ದಾರೆ. ತಾವು ಪ್ರತಿನಿಧಿಸುವ ಶಾಲೆಯಷ್ಟೇ ಅಲ್ಲ, ಜೋಧ್‍ಪುರ ಜಿಲ್ಲೆಯ 150 ಶಾಲೆಗಳಲ್ಲಿ ಜಲ ಸಂಸತ್ ಸ್ಥಾಪನೆಯಾಗಿದ್ದು, ಕೆಲಸ ಯಶಸ್ವಿಯಾಗಿ ನಡೆಯುತ್ತಿದೆ. ವಿದ್ಯಾರ್ಥಿಗಳ ನೇರ ಉಸ್ತುವಾರಿಯಲ್ಲಿ ನಡೆಯುವ ಈ ಚಟುವಟಿಕೆ ನಿರೀಕ್ಷೆಗೂ ಮೀರಿ ಜಲ ಸ್ವಾವಲಂಬನೆಯ ಪಾಠ ಕಲಿಸುತ್ತಿದೆ.

‘ನೀರಿನ ಒಂದು ಹನಿಯೂ ವ್ಯರ್ಥವಾಗದಂತೆ ನೋಡಿಕೊಳ್ಳುವುದು ಹೇಗೆ ಎಂಬುದನ್ನು ನಮಗೆ ಕಲಿಸಲಾಗಿದೆ, ಅದನ್ನು ನಾವು ಜೀವನಪೂರ್ತಿ ನೆನಪಿಟ್ಟುಕೊಂಡು ಅದರಂತೆ ನಡೆಯುತ್ತೇವೆ’ ಎನ್ನುವ ವಿದ್ಯಾರ್ಥಿನಿ ಐಮಾನ್ ಬಾನೊ, ‘ನಮ್ಮ ಶಾಮಸದನ ಶಾಲೆ ದೇಶಕ್ಕೇ ಮಾದರಿ’ ಎನ್ನುತ್ತಾಳೆ. ಪ್ರತಿದಿನ, ವಾರ, ತಿಂಗಳು ಶಾಲೆಯಲ್ಲಿ ಬಳಕೆಯಾಗುವ ನೀರಿನ ಲೆಕ್ಕ ವಿದ್ಯಾರ್ಥಿಗಳ ಬಳಿ ಇದೆ. ಮುಖ್ಯ ಶಿಕ್ಷಕಿ ಶೀಲಾ ಅಸೋಪ್‍ರ ಚಿಂತನೆಯಿಂದ ಕಾರ್ಯರೂಪ ತಳೆದಿರುವ ಜಲ ಸಂಸತ್, ವಿದ್ಯಾರ್ಥಿ ದೆಸೆಯಲ್ಲಿಯೇ ನೀರಿನ ಸಂರಕ್ಷಣೆಯ ಪಾಠ ಕಲಿಸುತ್ತಿದೆ.

ADVERTISEMENT

ನೀರಿನ ಸಂರಕ್ಷಣೆಗಾಗಿ ದೇಶದ ಹಲವು ಶಾಲೆಗಳು ನೀರಿಗಾಗಿ ನಡಿಗೆ, ಓಟ, ಅಭಿಯಾನ, ಚರ್ಚೆ, ಸಂವಾದಗಳನ್ನು ಹಮ್ಮಿಕೊಳ್ಳುತ್ತವೆ. ಆದರೆ ಪ್ರಾಯೋಗಿಕವಾಗಿ ನೀರಿನ ಸಂರಕ್ಷಣೆಯ ಕೆಲಸವನ್ನು ವಿದ್ಯಾರ್ಥಿಗಳಿಗೆ ಕಲಿಸುವ ಶಾಲೆಗಳು ಬೆರಳೆಣಿಕೆಯಷ್ಟು ಮಾತ್ರ. ಅಂಥ ಶಾಲೆಗಳ ಪೈಕಿ ‘ಶಾಮಸದನ’ ಶಾಲೆ ಮೊದಲ ಸ್ಥಾನದಲ್ಲಿ ನಿಲ್ಲುತ್ತದೆ.

ಈ ಶಾಲೆಯಲ್ಲಿ ಸಂಸತ್‍ನಲ್ಲಿ ನಡೆಯುವಂತೆ ಯಾವ ಉದ್ದುದ್ದ ಚರ್ಚೆಯೂ ನಡೆಯುವುದಿಲ್ಲ. ಆರೋಪ, ಪ್ರತ್ಯಾರೋಪಗಳು ಇರುವುದಿಲ್ಲ. ಮಸೂದೆಯ ಪ್ರತಿಗಳನ್ನು ಹರಿದು ತೂರುವುದು, ಗದ್ದಲ ಎಬ್ಬಿಸಿ ಸಭಾತ್ಯಾಗ ಮಾಡುವಂತಹ ಯಾವ ಅತಿರೇಕದ ಚಟುವಟಿಕೆಯೂ ನಡೆಯುವುದಿಲ್ಲ. ಬದಲಿಗೆ, ಪ್ರತಿ ತರಗತಿಯೂ ಬಳಸುವ ನೀರಿನ ಲೆಕ್ಕಾಚಾರವನ್ನು ಡಿಜಿಟಲ್ ಕ್ಯಾಲೆಂಡರಿನಲ್ಲಿ ದಾಖಲಿಸಲಾಗುತ್ತದೆ.

ಸಂಗ್ರಹಗೊಂಡ ನೀರು ಮತ್ತು ಬಳಕೆಯಾದ ನೀರು ಎರಡರ ಬಗ್ಗೆಯೂ ಲೆಕ್ಕವಿರುತ್ತದೆ. ಹೆಚ್ಚು ಅಥವಾ ಕಡಿಮೆ ಬಳಕೆಯಾಗಿದ್ದರೆ ಅದಕ್ಕೆ ಕಾರಣಗಳೇನು ಎಂಬುದನ್ನು ವಿದ್ಯಾರ್ಥಿಗಳೇ ನಡೆಸುವ ಇ- ಮ್ಯಾಗಜಿನ್‌ನಲ್ಲಿ ಪ್ರಕಟಿಸಿ ಶಾಲೆಯ ಎಲ್ಲರ ಗಮನ ಸೆಳೆಯಲಾಗುತ್ತದೆ. ರ್‍ಯಾಲಿ, ಸ್ಪರ್ಧೆ, ಕಾಲ್ನಡಿಗೆ ಜಾಥಾ ಮತ್ತು ಸಾರ್ವಜನಿಕರ ಸಭೆ ನಡೆಸಿ ನೀರಿನ ಸಂರಕ್ಷಣೆ ಕುರಿತು ತಿಳಿವಳಿಕೆ ನೀಡುವ ಕೆಲಸ ಮಾಡುವ ವಿದ್ಯಾರ್ಥಿ- ಶಿಕ್ಷಕರು ನೀರಿನ ಕೊರತೆಯಾಗದಂತೆ ನೀರನ್ನು ಹೇಗೆ ಬಳಸಬೇಕು ಎಂಬುದರ ತರಬೇತಿಯನ್ನೂ ಪ್ರಾತ್ಯಕ್ಷಿಕೆಯ ಮೂಲಕ ನೀಡುತ್ತಿದ್ದಾರೆ.

ವಾಶ್‌ಬೇಸಿನ್‍ಗಳ ನೀರನ್ನು ನೇರ ಕೈತೋಟಕ್ಕೆ ಹಾಯಿಸಿ ಪೋಷಕಾಂಶಭರಿತ ಸೊಪ್ಪು, ತರಕಾರಿಗಳನ್ನು ಬೆಳೆಯಲಾಗುತ್ತಿದೆ. ಮಳೆನೀರನ್ನು ಸಂಗ್ರಹಿಸುವುದರ ಜೊತೆಗೆ ಶಾಲೆಯಲ್ಲಿ ಸೋರುವ ನಲ್ಲಿಗಳನ್ನು ಸರಿಮಾಡುವ ಪ್ಲಂಬಿಂಗ್ ಕೆಲಸವೂ ಮಕ್ಕಳಿಗೆ ಗೊತ್ತಿದೆ. ಈ ಕೆಲಸ ಗೊತ್ತಿದ್ದ ಶಿಕ್ಷಕರೇ ವಿದ್ಯಾರ್ಥಿಗಳಿಗೆ ತರಬೇತಿ ನೀಡಿದ್ದಾರೆ. ವಿದ್ಯಾರ್ಥಿಗಳೇ ಸದಸ್ಯರಾಗಿರುವ ‘ನೀರಿನ ಲೋಕಸಭೆ’ ವರ್ಷಪೂರ್ತಿ ಚಟುವಟಿಕೆಯಿಂದ ಇರುತ್ತದೆ.

2016ರಿಂದಲೂ ತಾವು ಕೆಲಸ ಮಾಡಿದಲ್ಲೆಲ್ಲಾ ಜಲ ಸಂಸತ್ ಪರಿಕಲ್ಪನೆಯನ್ನು ಕಾರ್ಯಗತಗೊಳಿಸಿರುವ ಶೀಲಾ ಅಸೋಪ್‌, 2020ರ ವೇಳೆಗೆ ಜೋಧ್‌ಪುರದ ಬವೋರಿ ಬ್ಲಾಕ್‍ನ ಶಿಕ್ಷಣ ಇಲಾಖೆಯ ಅಧಿಕಾರಿಯಾಗಿ ನಿಯೋಜಿತರಾದರು. ಆನಂತರ 150 ವಿವಿಧ ಶಾಲೆಗಳಲ್ಲಿ ಜಲ ಸಂಸತ್‍ಗಳು ಕಾರ್ಯಾರಂಭ ಮಾಡಿವೆ. ಶೀಲಾ ಅವರ ಕೆಲಸವನ್ನು ಗಮನಿಸಿರುವ ಕೇಂದ್ರ ಸರ್ಕಾರವು ಜಲಸಂರಕ್ಷಣೆಯ ಕೈಂಕರ್ಯ ಮಾಡುವವರಿಗಾಗಿ ಇರುವ ದೇಶಮಟ್ಟದ ‘ಜಲ ಸಂರಕ್ಷಕ’ ಪ್ರಶಸ್ತಿಯನ್ನು ನೀಡಿ ಗೌರವಿಸಿದೆ.

ಶಾಲೆಗಳಲ್ಲಿ ಪ್ರಾರಂಭಿಸಲಾದ ಜಲ ಸಂಸತ್‍ಗಳಿಗೆ ಆರ್ಥಿಕ ಸಹಾಯ ಮಾಡಲು ಸಾರ್ವಜನಿಕ ಸಂಘ–ಸಂಸ್ಥೆಗಳು, ಸಮುದಾಯಗಳು ಮುಂದೆ ಬಂದಿವೆ. ಶಾಲೆಗೆ ಸಂಬಂಧಿಸಿದ ನೀರಿನ ಸಂರಕ್ಷಣೆಯ ಕೆಲಸಗಳಲ್ಲದೆ ಸುತ್ತಲಿನ ಸಾಮಾನ್ಯ ಬಾವಿ ಮತ್ತು ಮೆಟ್ಟಿಲಿನ ಬಾವಿಗಳನ್ನು ಶುದ್ಧಿಗೊಳಿಸುವ ಕೆಲಸವನ್ನೂ ಮಾಡುತ್ತಿರುವ ವಿದ್ಯಾರ್ಥಿ ಹಾಗೂ ಸಾರ್ವಜನಿಕರು ಸಂಭಾವ್ಯ ಜಲಕ್ಷಾಮವನ್ನು ತಡೆಯುತ್ತೇವೆ ಎನ್ನುತ್ತಾರೆ. ಸ್ಥಳೀಯ ಸಂಸ್ಥೆ- ಪಂಚಾಯಿತಿಗಳು ಮಾಡಿರುವ ಜಲ ಸ್ವಾವಲಂಬನೆಯ ಅನೇಕ ಕ್ರಾಂತಿಕಾರಿ ಉದಾಹರಣೆಗಳು ಈಗಾಗಲೇ ನಮ್ಮ ಮುಂದಿವೆ.

ಇದೇ ರಾಜ್ಯದ ರಾಜಸ್‍ಮಂಡ್ ಜಿಲ್ಲೆಯ ಗಂಗಸ್‍ ಗ್ರಾಮದ ಶಾಲಾ ವಿದ್ಯಾರ್ಥಿಗಳು ಫ್ಲೋರೈಡ್‍ಯುಕ್ತ ನೀರಿನ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಶಾಲೆಯ ಆವರಣದಲ್ಲೇ ಮಳೆ ನೀರು ಸಂಗ್ರಹ ವ್ಯವಸ್ಥೆ ಮಾಡಿಕೊಂಡು ಇಡೀ ಗ್ರಾಮದ ಜನರಿಗೆ ನೆರವಾಗಿದ್ದರು. ಈಗ ಅಂಥದ್ದೇ ಶಾಲೆಯ ವಿದ್ಯಾರ್ಥಿಗಳು ಇಡೀ ದೇಶಕ್ಕೇ ನೀರಿನ ಸಂರಕ್ಷಣೆಯ ಪಾಠ ಹೇಳಿಕೊಡುತ್ತಿದ್ದಾರೆ. ಕಲಿಯಲು ನಮಗೇನು ಧಾಡಿ?

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.