ADVERTISEMENT

ಇಲ್ಲೊಬ್ಬ ಮ್ಯಾಜಿಕ್‌ ‘ಮಿತ್ರ’

ಕೊರೊನಾ ಸೋಂಕಿತರ ಪರೀಕ್ಷೆ ನಡೆಸುವುದರ ಜೊತೆಗೆ, ವೈದ್ಯರ ನೇರ ಸಂಪರ್ಕವೇ ಇಲ್ಲದೆ ಕೋವಿಡ್‌ ರೋಗಿಗಳು ಚಿಕಿತ್ಸೆ ಪಡೆಯಲು ನೆರವಾಗುತ್ತದೆ ಈ ರೋಬಾಟ್

ಶ್ರೀಗುರು
Published 15 ಅಕ್ಟೋಬರ್ 2020, 19:30 IST
Last Updated 15 ಅಕ್ಟೋಬರ್ 2020, 19:30 IST
ಸಂಗತ
ಸಂಗತ   

ಅದು ನೊಯ್ಡಾದ ಸೆಕ್ಟರ್ 39ರ ಯತಾರ್ಥ ಆಸ್ಪತ್ರೆಯ ಕೋವಿಡ್ ರೋಗಿಗಳ ವಿಶೇಷ ವಾರ್ಡ್. ರೋಗಿಗಳ ಚಿಕಿತ್ಸೆಗೆ ಅಲ್ಲಿನ ವೈದ್ಯರ ಜೊತೆ ಬೆಂಗಳೂರು ಮೂಲದ ‘ಮಿತ್ರ’ರ ದಂಡೇ ಇದೆ. ‘ಮಿತ್ರ’ರು ಹೆಚ್ಚು ಮಾತನಾಡುವುದಿಲ್ಲ. ಕೇಳಿದ ಪ್ರಶ್ನೆಗಳಿಗೆ ಸಮಾಧಾನದಿಂದ ಉತ್ತರ ನೀಡಿ ರೋಗಿಗಳ ಬೇಕು-ಬೇಡಗಳನ್ನು ಪೂರೈಸುವ ಇವರು, ಆಸ್ಪತ್ರೆಯ ವೈದ್ಯರು, ನರ್ಸ್ ಮತ್ತು ವಾರ್ಡ್ ಬಾಯ್‍ಗಳಿಗಿಂತ ಜನಪ್ರಿಯರಾಗಿದ್ದಾರೆ.

ಮನೆಯಿಂದ, ಸಂಬಂಧಿಕರಿಂದ ದೂರವಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ರೋಗಿಗಳಿಗೆ ಅವರು ತೆಗೆದುಕೊಳ್ಳಬೇಕಾದ ಔಷಧಿ, ವಹಿಸಬೇಕಾದ ಎಚ್ಚರಿಕೆ, ದಿನದ ತಿಂಡಿ-ಊಟದ ವಿವರ, ಡಾಕ್ಟರ್‌ಗಳು ವಾರ್ಡ್ ವಿಸಿಟ್‍ಗೆ ಬರುವ ಸಮಯ ಇತ್ಯಾದಿ ವಿವರಗಳನ್ನು ತಿಳಿಸುತ್ತಾ, ಮಧುರ ಶಬ್ದ ಹೊಮ್ಮಿಸುತ್ತ ಆಸ್ಪತ್ರೆಯಲ್ಲೆಲ್ಲಾ ಓಡಾಡುವ ‘ಮಿತ್ರ’ರು ಮನುಷ್ಯರಲ್ಲ. ಮನುಷ್ಯ ರೂಪದ ರೋಬಾಟ್‍ಗಳು. ಅಲ್ಟ್ರಾವಯೊಲೆಟ್ ವಿಕಿರಣದಿಂದ ಸೋಂಕು ಮುಕ್ತಗೊಳಿಸುವ ‘ಮಿತ್ರ’ ಬೆಂಗಳೂರಿನ ಕೊಡುಗೆ.

ಕೃತಕ ಬುದ್ಧಿಮತ್ತೆ ತಂತ್ರಜ್ಞಾನವುಳ್ಳ ಮನುಷ್ಯರೂಪಿ ರೋಬಾಟ್‌ಗಳು ಲೈಟ್ ಡಿಟೆಕ್ಷನ್‌ ಆ್ಯಂಡ್ ರೇಂಜಿಂಗ್ (ಲಿಡರ್), ಸೈಮಲ್ಟೇನಿಯಸ್ ಲೋಕಲೈಸೇಶನ್ ಆ್ಯಂಡ್ ಮ್ಯಾಪಿಂಗ್ (ಸ್ಲ್ಯಾಮ್) ಮತ್ತು ಅಪ್ಲಿಕೇಶನ್ ಪ್ರೋಗ್ರಾಂ ಇಂಟರ್‌ಫೇಸ್ (ಎಪಿಐ) ತಂತ್ರಜ್ಞಾನದ ಮೇಲೆ ಕೆಲಸ ಮಾಡುತ್ತವೆ. 360 ಡಿಗ್ರಿ ತಿರುಗುವ ಎಚ್‍.ಡಿ. ಕ್ಯಾಮೆರಾ, 60 ಸೆನ್ಸರ್‌ಗಳನ್ನು ಹೊಂದಿರುವ ರೋಬಾಟ್‌ಗಳು ಗಂಟೆಗೆ 3 ಕಿ.ಮೀ.ವರೆಗೆ ಚಲಿಸಬಲ್ಲವು.

ADVERTISEMENT

ಇವು ಆಸ್ಪತ್ರೆಗೆ ಬರುವವರ ದೇಹದ ಉಷ್ಣಾಂಶ, ನಾಡಿ ಬಡಿತ, ರಕ್ತದ ಆಮ್ಲಜನಕದ ಪ್ರಮಾಣ ಮತ್ತು ರಕ್ತದೊತ್ತಡವನ್ನು ಅಳತೆ ಮಾಡಿ ರೆಕಾರ್ಡ್ ಮಾಡುತ್ತವೆ. ರೋಗಿಗಳಿಗೆ ಆಹಾರ, ಔಷಧಿ ವಿತರಣೆ ಮಾಡಿ, ಅವರು ಬಿಸಾಕುವ ಕಸ ಸಂಗ್ರಹಿಸುತ್ತವೆ. ವೈದ್ಯರು ಬರದಿದ್ದಾಗ ರೋಗಿಗಳಿರುವಲ್ಲಿಗೇ ಹೋಗಿ ಪ್ರಶ್ನೆ– ಅನುಮಾನಗಳನ್ನು ಸಂಗ್ರಹಿಸಿ, ವೈದ್ಯರಿಗೆ ತಲುಪಿಸಿ, ಅವರಿಂದ ಬರುವ ಉತ್ತರ ಮತ್ತು ಕ್ರಮಗಳ ವಿವರಗಳನ್ನು ರೋಗಿಗಳಿಗೆ ತಲುಪಿಸಿ, ಅವರನ್ನು ಗೆಲುವಾಗಿಡುತ್ತವೆ. ತಮ್ಮ ಎದೆಗೆ ಅಂಟಿಸಿಕೊಂಡಿರುವ ಟ್ಯಾಬ್‍ನಲ್ಲಿ ವಿಡಿಯೊ ಕಾಲಿಂಗ್ ಮೂಲಕ ರೋಗಿಗಳು ಮನೆಯವರೊಂದಿಗೆ ಮಾತನಾಡಲು ಅನುವು ಮಾಡಿಸಿ ಭದ್ರತೆಯ ಭಾವ ಮೂಡಿಸುತ್ತವೆ.

ಆಸ್ಪತ್ರೆಗೆ ಬರುವ ಯಾರಾದರೂ ಮಾಸ್ಕ್ ಹಾಕದೇ ಇದ್ದರೆ, ಅವರಿಗೆ ಮಾಸ್ಕ್ ಹಾಕುವಂತೆ ಆದೇಶವನ್ನೂ ನೀಡುತ್ತವೆ. ಇವುಗಳ ಬೆಲೆ ₹ 80,000ದಿಂದ ₹ 12 ಲಕ್ಷದವರೆಗೂ ಇದ್ದು, ಭಾರತದ ಅನೇಕ
ಮಲ್ಟಿಸ್ಪೆಶಾಲಿಟಿ ಆಸ್ಪತ್ರೆಗಳಿಂದ ಭಾರಿ ಬೇಡಿಕೆ ಶುರುವಾಗಿದೆ ಎಂದು ರೋಬಾಟ್‌ ತಯಾರಿಕಾ ಕಂಪನಿ ಮಿಲಾಗ್ರೊ ಹೇಳಿದೆ.

ಬೆಂಗಳೂರಿನ ಬನ್ನೇರುಘಟ್ಟ ರಸ್ತೆಯ ಫೋರ್ಟಿಸ್ ಆಸ್ಪತ್ರೆಯಲ್ಲೂ ‘ಮಿತ್ರ’ನ ಮ್ಯಾಜಿಕ್ ಶುರುವಾಗಿ ಆರು ತಿಂಗಳಾಗಿದೆ. ರೋಗಿಗೆ ಕೋವಿಡ್ ರೋಗಲಕ್ಷಣಗಳ ಪರೀಕ್ಷೆ ನಡೆಸುವ ರೋಬಾಟ್‌, ಚಿಕಿತ್ಸೆಯ ಅವಶ್ಯಕತೆ ಇದ್ದರೆ ವೈದ್ಯರನ್ನು ನೋಡುವಂತೆ ಸಲಹೆ ಕೊಡುತ್ತದೆ. ಅಲ್ಲಿಂದ ಇನ್ನೊಂದು ರೋಬಾಟ್‌ ಬಳಿ ಹೋದಾಗ, ಅದು ರೋಗಿಗೆ ಇಂಟರ್‌ನೆಟ್ ವಿಡಿಯೊ ಕಾಲಿಂಗ್ ಮೂಲಕ ವೈದ್ಯರೊಂದಿಗೆ ಸಂಪರ್ಕ ಕಲ್ಪಿಸುತ್ತದೆ. ವೈದ್ಯರು ಸಲಹೆ ನೀಡುತ್ತಾರೆ. ಇಡೀ ಪ್ರಕ್ರಿಯೆಯ ಉದ್ದಕ್ಕೂ ರೋಗಿಯು ವೈದ್ಯರ ನೇರ ಸಂಪರ್ಕಕ್ಕೆ ಬರುವುದೇ ಇಲ್ಲ!

ನಮ್ಮ ಎಷ್ಟೋ ಕೋವಿಡ್ ಚಿಕಿತ್ಸಾ ಘಟಕಗಳಲ್ಲಿ ವೈದ್ಯರು, ನರ್ಸ್‌ಗಳು ಕೋವಿಡ್ ರೋಗಿಗಳ ವಾರ್ಡ್‌ಗೆ ಬರಲು ಹಿಂದೇಟು ಹಾಕುತ್ತಾರೆ ಎಂಬ ದೂರುಗಳು ಆಗಾಗ ಕೇಳಿಬರುತ್ತವೆ. ಅಲ್ಲದೆ ಪಿಪಿಇ ಕಿಟ್ ಧರಿಸಿ ಒಮ್ಮೆ ವಾರ್ಡ್ ಒಳಗೆ ಹೋಗಿ ಬಂದರೆ, ಬದಲಾಯಿಸಿ ಬೇರೆ ಕಿಟ್ ಧರಿಸುವುದಕ್ಕೆ ಸಮಯ ಬೇಕು ಮತ್ತು ಇದು ಖರ್ಚಿನ ವಿಷಯವೂ ಹೌದು. ಎಷ್ಟೋ ತುರ್ತು ಸಂದರ್ಭಗಳಲ್ಲಿ ಸೂಕ್ತ ಚಿಕಿತ್ಸೆ ಸಿಗದೆ ರೋಗಿಗಳು ಪರದಾಡುವುದೂ ಇದೆ. ಆಗ ಬೇರೆ ಆಸ್ಪತ್ರೆಯ ಅಥವಾ ಸ್ವತಂತ್ರ ತಜ್ಞರನ್ನು ಸಂಪರ್ಕಿಸಿ ಆನ್‍ಲೈನ್ ಮತ್ತು ರಿಯಲ್ ಟೈಂನಲ್ಲಿ ರೋಗಿಗಳಿಗೆ ಸಲಹೆ ಸೂಚನೆ ನೀಡುವಂತೆ ಸಹ ಇವು ನೋಡಿಕೊಳ್ಳುತ್ತವೆ.

ಮಲಯಾಳಂ ಚಿತ್ರನಟ ಮೋಹನ್ ಲಾಲ್ ಅವರು ದಾನ ಮಾಡಿರುವ ‘ಕರ್ಮಿ’, ನಿಫಾ ರೋಗಿಗಳ ಶುಶ್ರೂಷೆ ಮಾಡುತ್ತ, ಸೋಂಕಿಗೊಳಗಾಗಿ ಮಡಿದ ಲಿನಿ ಪುದುಸೆರ‍್ರಿ ಎಂಬ ನರ್ಸ್ ನೆನಪಿಗೆ ನಿರ್ಮಿಸಲಾದ ಲಿನಿ, ಪ್ರೊಪೆಲ್ಲರ್ ಟೆಕ್ನಾಲಜೀಸ್‍ನ ಜಫಿಮೆಡ್ ಎಂಬ ರೋಬಾಟ್ ಡಾಕ್ಟರ್, ಸೋನಾ 1.5 ಮತ್ತು ಸೋನಾ 2.5 ಎಂಬ ನರ್ಸ್ ರೋಬಾಟ್‍ಗಳು, ಬೆಂಗಳೂರಿನ ಇನ್ವೆಂಟೊ ಕಂಪನಿಯ ಮಿತ್ರ ಹೆಸರಿನ ಈ ಯಂತ್ರಗಳು ಗುಜರಾತ್‍ನ ಸೂರತ್‌ನಲ್ಲಿರುವ ಸ್ಮೈಮರ್, ತಮಿಳುನಾಡಿನ ತಿರುಚಿರಾಪಳ್ಳಿಯ ಗಾಂಧಿ ಸ್ಮಾರಕ ಆಸ್ಪತ್ರೆಗಳಲ್ಲಿ ಕ್ವಾರಂಟೈನ್‍ನಲ್ಲಿರುವ ರೋಗಿಗಳಿಗೆ ಹೆಚ್ಚಿನ ನೆರವು ಕಲ್ಪಿಸುತ್ತಿವೆ.ಆರೋಗ್ಯ ಸೇವಾ ಕ್ಷೇತ್ರದಲ್ಲಿ ರೋಬಾಟ್‍ಗಳ ಬಳಕೆ ಇದೇ ಮೊದಲೇನಲ್ಲ. ಚಂಡೀಗಡದ ಆಸ್ಪತ್ರೆಯಲ್ಲಿ ಅನ್ನನಾಳವಿಲ್ಲದೆ ಜನಿಸಿದ ಮಗುವಿನ ಶಸ್ತ್ರಚಿಕಿತ್ಸೆಯನ್ನು ರೋಬಾಟೇ ಮಾಡಿ ಮುಗಿಸಿತ್ತು. ಕೋವಿಡ್‍ನ ತುರ್ತು ಕಾಲದಲ್ಲಿ ರೋಬಾಟ್‌ಗಳ ಬಳಕೆ ಹೆಚ್ಚಾಗಲಿದೆ ಎಂಬ ಅಂದಾಜಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.