‘ಸೂಪರ್’, ‘ಸಖತ್ತಾಗಿದೆ’, ‘ಪೈಸಾ ವಸೂಲ್’, ‘ಒಂದ್ಸಲ ಖಂಡಿತ ನೋಡಬಹುದು’ ಅಂತ ಸಿನಿಮಾಗಳಿಗೂ ‘ಚೆನ್ನಾಗಿದೆ’, ‘ಅದ್ಭುತವಾಗಿದೆ’, ‘ಸರಾಗವಾಗಿ ಓದಿಸಿಕೊಂಡು ಹೋಗುತ್ತೆ’ ಅಂತ ಪುಸ್ತಕಗಳಿಗೂ ಹೇಳುವುದನ್ನೇ ವಿಮರ್ಶೆ ಎಂದು ಭಾವಿಸಬೇಕೆ? ನೋಡಿದ ಸಿನಿಮಾ ಅಥವಾ ಓದಿದ ಪುಸ್ತಕದ ಕುರಿತು ತಮಗೆ ಅನಿಸಿದ್ದನ್ನು ಮುಕ್ತವಾಗಿ ಹೇಳಿಕೊಳ್ಳುವ, ಬರೆಯುವ ಸ್ವಾತಂತ್ರ್ಯ ನೋಡುಗರು ಹಾಗೂ ಓದುಗರಿಗೆ ಇರಬೇಕಲ್ಲವೇ?
ವಿಮರ್ಶಾ ಮಾನದಂಡಗಳನ್ನು ಇಟ್ಟುಕೊಂಡು ‘ಇದು ಚೆನ್ನಾಗಿದೆ’, ‘ಚೆನ್ನಾಗಿಲ್ಲ’, ‘ಹೀಗಿರಬೇಕಿತ್ತು’, ‘ಹೀಗಿರಬಾರದಿತ್ತು’ ಅಂತೆಲ್ಲ ಅಭಿಪ್ರಾಯ ಮಂಡಿಸುವ ಮುಕ್ತ ಸ್ವಾತಂತ್ರ್ಯ ವಿಮರ್ಶಕರಿಗೆ ಇರಬೇಕಿರುವುದು ಅಪೇಕ್ಷಣೀಯ. ವಿಮರ್ಶಾ ಮೀಮಾಂಸೆಗಳ ಕುರಿತು ಅರಿವಿಲ್ಲದ ಸಾಮಾನ್ಯ ನೋಡುಗ, ಓದುಗನಿಗೆ ಕೂಡ ತನಗೆ ಅನಿಸಿದ್ದನ್ನು ಹೇಳುವ ಮುಕ್ತ ಅವಕಾಶ ಇರಬೇಕಾಗುತ್ತದೆ. ವಿಮರ್ಶಾ ದನಿಗಳನ್ನು ನಿಗ್ರಹಿಸುವ ಮೂಲಕ ಸಾಧಿಸುವುದಾದರೂ ಏನನ್ನು?
ವಿಮರ್ಶಕರಾದವರು ಎಲ್ಲದಕ್ಕೂ ‘ಚೆನ್ನಾಗಿದೆ’ ಎಂಬ ಮುದ್ರೆ ಒತ್ತುತ್ತಾ ಹೋದ ಮಾತ್ರಕ್ಕೆ, ಜನ ಮುಗಿಬಿದ್ದು ಸಿನಿಮಾ ನೋಡುವರೇ ಅಥವಾ ಪುಸ್ತಕ ಕೊಳ್ಳುವರೇ?
‘ಟೋಬಿ’ ಹೆಸರಿನ ಕನ್ನಡ ಸಿನಿಮಾ ಕುರಿತು ನಕಾರಾತ್ಮಕ ಅಭಿಪ್ರಾಯ ವ್ಯಕ್ತಪಡಿಸಿದ ಮಹಿಳೆಯೊಬ್ಬರೊಂದಿಗೆ ಕೆಲವರು ನಡೆದುಕೊಂಡ ರೀತಿ ಇತ್ತೀಚೆಗೆ ಬಹಳಷ್ಟು ಚರ್ಚೆಗೆ ಗ್ರಾಸವಾಯಿತು. ಆನಂತರ, ಚಿತ್ರತಂಡದ ಭಾಗವಾಗಿದ್ದ ಕೆಲವರು ಕ್ಷಮೆ ಕೋರಿದ್ದೂ ನಡೆಯಿತು.
ಕೆಲವೊಮ್ಮೆ ಸಿನಿಮಾಗೆ ಹೂಡುವ ಕೋಟಿಗಳ ಲೆಕ್ಕದ ಬಂಡವಾಳವನ್ನೇ ಗುರಾಣಿಯಾಗಿಸಿಕೊಂಡು ವಿಮರ್ಶಾ ದನಿಗಳನ್ನು ಅಡಗಿಸುವ ಪ್ರಯತ್ನ ಮಾಡಲಾಗುತ್ತದೆ. ಅದರಲ್ಲೂ ಪ್ರಯೋಗಾತ್ಮಕವೆಂದು ಗುರುತಿಸಿಕೊಳ್ಳುವ, ಮೆಚ್ಚುಗೆ ಪಡೆಯುವ ಸಿನಿಮಾಗಳಲ್ಲಿನ ಸಮಸ್ಯಾತ್ಮಕ ಅಂಶಗಳ ಕುರಿತು ಯಾರಾದರೂ ಬೆಟ್ಟು ಮಾಡತೊಡಗಿದರೆ, ‘ಕೂದಲು ಸೀಳುವ ವಿಮರ್ಶೆ ಮಾಡುವುದು ಸದ್ಯಕ್ಕೆ ಬೇಡ. ಚಿತ್ರತಂಡ ತುಂಬಾ ಕಷ್ಟಪಟ್ಟು ಸಿನಿಮಾ ಮಾಡಿದೆ. ಚಿತ್ರಮಂದಿರಗಳಲ್ಲಿ ಸಿನಿಮಾ ಪ್ರದರ್ಶನ ಕಾಣುವುದು ನಿಂತ ಮೇಲೆ ಬೇಕಿದ್ದರೆ ವಿಮರ್ಶೆ ಮಾಡೋಣ’ ಎನ್ನುವ ಸಲಹೆ ಅವರಿಗೆ ದೊರೆಯುವುದು ಅಪರೂಪವೇನಲ್ಲ.
ಟೀಕೆ-ಟಿಪ್ಪಣಿ, ವಿಮರ್ಶೆ-ವಿಶ್ಲೇಷಣೆಗಳನ್ನು ಸಹಜವೆಂದು ಭಾವಿಸುವ ಮನೋಭಾವದ ಅನುಪಸ್ಥಿತಿ ಚಿತ್ರರಂಗದಂತೆ ಸಾಹಿತ್ಯ ವಲಯದಲ್ಲೂ ಗಾಢವಾಗಿಯೇ ಇದೆ. ಸಾಹಿತ್ಯಕ ನಿಯತಕಾಲಿಕವೊಂದಕ್ಕೆ ಪುಸ್ತಕ ವಿಮರ್ಶೆ ಬರೆದುಕೊಡಲು ಸಮ್ಮತಿ ಸೂಚಿಸಿದ್ದ ಪರಿಚಿತರೊಬ್ಬರು, ಹೋದ ವರ್ಷ ಪ್ರಕಟವಾದ ಕಾದಂಬರಿಯೊಂದನ್ನು ವಿಮರ್ಶಿಸಲು ನಿರ್ಧರಿಸಿ ಓದತೊಡಗಿದರು. ಆರಂಭದ ಕೆಲ ಅಧ್ಯಾಯಗಳನ್ನು ಓದಿದ ಅವರಿಗೆ, ಪುಸ್ತಕ ಇಷ್ಟವಾಗಲಿಲ್ಲ. ಅದಾಗಲೇ ಹಲವರು ಆ ಪುಸ್ತಕದ ಕುರಿತು ಮೆಚ್ಚುಗೆ ವ್ಯಕ್ತಪಡಿಸಿ ಅಲ್ಲಲ್ಲಿ ಟಿಪ್ಪಣಿಗಳನ್ನು ಬರೆದಿದ್ದರು. ಅದಾಗಲೇ ಹಲವರ ಹೊಗಳಿಕೆಗೆ ಪಾತ್ರವಾಗಿದ್ದ ಪುಸ್ತಕದಲ್ಲಿನ ಸವಕಲು ಹಾಗೂ ನಕಾರಾತ್ಮಕ ಅಂಶಗಳನ್ನು ಉಲ್ಲೇಖಿಸಿ ವಿಮರ್ಶೆ ಬರೆದರೆ, ಅದಕ್ಕೆ ವ್ಯಕ್ತವಾಗಬಹುದಾದ ಟೀಕೆ ಹಾಗೂ ವ್ಯಕ್ತಿಗತ ದಾಳಿಗಳನ್ನು ಅಂದಾಜಿಸಿ ಅವರು ಬರೆಯದೆ ಸುಮ್ಮನಾದರು.
ತಮ್ಮ ಪುಸ್ತಕಗಳಿಗೆ ಬರೆಸಿಕೊಳ್ಳುವ ಮುನ್ನುಡಿ ಹಾಗೂ ಬೆನ್ನುಡಿಗಳಲ್ಲಿ ಏನಾದರೂ ನಕಾರಾತ್ಮಕ ಅಂಶಗಳಿದ್ದರೆ, ಅವನ್ನು ಕತ್ತರಿಸಿ ಪ್ರಕಟಿಸುವ ಪರಿಪಾಟವೂ ಇದೆ. ಏಳು ವರ್ಷಗಳ ಹಿಂದೆ, ಆಗಷ್ಟೇ ಪ್ರಾರಂಭವಾದ ಪ್ರಕಾಶನವೊಂದು ಕಥಾಸ್ಪರ್ಧೆ ಏರ್ಪಡಿಸಿ, ಸ್ಪರ್ಧೆಗೆ ಬಂದ ಕಥೆಗಳ ಪೈಕಿ ಕೆಲವನ್ನು ಆರಿಸಿ ಪುಸ್ತಕ ರೂಪದಲ್ಲಿ ಹೊರತರಲು ಮುಂದಾಗಿತ್ತು. ಈ ಕಥಾ ಸಂಕಲನಕ್ಕೆ ಮುನ್ನುಡಿ ಬರೆದುಕೊಟ್ಟಿದ್ದ ಹಿರಿಯ ಕಥೆಗಾರರೊಬ್ಬರು ‘ಲೇಖಕರು ತುಸುವಾದರೂ ಇನ್‍ಕ್ಲೂಸಿವ್ ಆಗಿ ಆಲೋಚಿಸುತ್ತಾರೆ ಎಂಬ ನನ್ನ ನಂಬಿಕೆಯನ್ನೇ ಈ ಕಥೆಯ (ಮತ್ತು ಇಂತಹ ಕೆಲವು ಕಥೆಗಳ) ಇಂತಹ ಹಲವಾರು ಪದಪ್ರಯೋಗಗಳು ಬುಡಮೇಲು ಮಾಡಿದವು’ ಎಂದು ಅಭಿಪ್ರಾಯಪಟ್ಟಿದ್ದರು.
ಪುಸ್ತಕವನ್ನು ಮುದ್ರಣಕ್ಕೆ ಕಳಿಸುವ ಮುನ್ನ ಮುನ್ನುಡಿಯನ್ನು ಪ್ರಕಾಶಕರು ಕಥೆಗಾರರಿಗೆ ಕಳಿಸಿಕೊಟ್ಟರು. ಮುನ್ನುಡಿಯಲ್ಲಿನ ಟೀಕೆ ಟಿಪ್ಪಣಿ ಓದಿ ಆಕ್ರೋಶಗೊಂಡ ಇಬ್ಬರು ಕಥೆಗಾರರು, ಯಾವುದೇ ಕಾರಣಕ್ಕೂ ಆ ಮುನ್ನುಡಿಯನ್ನು ಯಥಾವತ್ತಾಗಿ ಪ್ರಕಟಿಸಬಾರದೆಂದು ಪ್ರಕಾಶಕರ ಮೇಲೆ ಒತ್ತಡ ಹೇರಿದರು. ಕೊನೆಗೆ, ಪ್ರಕಾಶಕರು ಮುನ್ನುಡಿಯ ಕೆಲ ಭಾಗಗಳಿಗೆ ಕತ್ತರಿ ಪ್ರಯೋಗಿಸಿ ಪ್ರಕಟಿಸಿದರು.
ವಿಮರ್ಶೆಗೆ ಮುಕ್ತ ಅವಕಾಶವಿರದ ವಾತಾವರಣ ನಿರ್ಮಿಸುವುದರಿಂದ ದೀರ್ಘಾವಧಿಯಲ್ಲಿ ಯಾರಿಗೂ ಒಳಿತಾಗಲಾರದು. ಕಡೆಗೂ ನೋಡುಗನಿಗೆ, ಓದುಗನಿಗೆ ಆಯಾ ಸಿನಿಮಾ ಅಥವಾ ಪುಸ್ತಕದ ಗುಣಮಟ್ಟ ಹಾಗೂ ಹೂರಣ ಎಂತಹದ್ದು ಎಂಬುದರ ಅರಿವಾಗುತ್ತದೆ. ವಿಮರ್ಶೆಯಲ್ಲಿ ಕಾಣಸಿಗದ ಮಿತಿಗಳು ಓದುಗರು, ನೋಡುಗರ ಅನುಭವಕ್ಕೆ ಬರತೊಡಗಿದರೆ, ವಿಮರ್ಶೆಗಳು ಬಹುಬೇಗನೆ ವಿಶ್ವಾಸಾರ್ಹತೆ ಕಳೆದುಕೊಳ್ಳುತ್ತವೆ. ಒಂದಷ್ಟು ಜನ ‘ಚೆನ್ನಾಗಿದೆ, ಅದ್ಭುತವಾಗಿದೆ’ ಅಂತೆಲ್ಲ ಹೊಗಳಿದ ಮಾತ್ರಕ್ಕೆ ಅದನ್ನು ನಂಬಿ ಸಿನಿಮಾ ನೋಡುವ, ಪುಸ್ತಕ ಕೊಂಡು ಓದುವ ಉಮೇದು ಕೂಡ ಕರಗುತ್ತದೆ.
ಮಿತಿಗಳು ಇದ್ದರೂ, ಆ ಕುರಿತು ಇತರರು ಮಾತನಾಡುತ್ತಿದ್ದರೂ ನೋಡಿ ಅಥವಾ ಓದಿಯೇ ನಿರ್ಧರಿಸೋಣ ಎನ್ನುವ ವಿವೇಕ ಸಾಮಾನ್ಯ ಓದುಗ, ನೋಡುಗನಲ್ಲಿ ಇರುವುದಿಲ್ಲವೇ? ವಿಮರ್ಶೆಗೆ ಒಡ್ಡಿಕೊಳ್ಳದೆ, ಹೊಗಳಿಕೆಗಳಿಗೆ ಪುಳಕಗೊಳ್ಳುತ್ತಾ ಮೈಮರೆಯುವ ಸೃಜನಶೀಲ ವ್ಯಕ್ತಿತ್ವಗಳು ಬಹುಬೇಗನೆ ಜಡ್ಡುಗಟ್ಟಲಾರವೇ? ತಮ್ಮ ನೋಟಕ್ರಮದಲ್ಲಿನ ಮಿತಿಗಳನ್ನು ಮೀರಲು ನೆರವಾಗಬಹುದಾದ ವಿಮರ್ಶೆಗೆ ಬೆನ್ನು ತೋರಲು ಸೃಜನಶೀಲ ವ್ಯಕ್ತಿತ್ವಗಳು ಏಕೆ ಮುತುವರ್ಜಿ ತೋರುತ್ತಿವೆ?
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.