ADVERTISEMENT

ಸಂಗತ | ಸಂಶೋಧನೆ: ಲಾಭದಾಸೆಯೇ ಮುಳುವು?

ಡಾ.ಬಿ.ಆರ್.‌ ಸತ್ಯನಾರಾಯಣ
Published 9 ಅಕ್ಟೋಬರ್ 2024, 23:30 IST
Last Updated 9 ಅಕ್ಟೋಬರ್ 2024, 23:30 IST
   

‘ವಿ.ವಿ.ಗಳಲ್ಲಿ ಸಂಶೋಧನೆ: ನಿಂತ ನೀರು?’ ಎಂಬ ರಾಜಕುಮಾರ ಕುಲಕರ್ಣಿ ಅವರ ಲೇಖನ (ಸಂಗತ, ಅ. 4) ಸಕಾಲಿಕವಾಗಿದೆ. ಈ ವಿಷಯದ ಬಗ್ಗೆ ಶೈಕ್ಷಣಿಕ ವಲಯದಲ್ಲಿ ವ್ಯಾಪಕ ಚರ್ಚೆ ನಡೆದು, ಆಮೂಲಾಗ್ರ ಬದಲಾವಣೆ ಆಗಬೇಕಿದೆ. ಮನುಷ್ಯನ ಹಲವಾರು ಆಸಕ್ತಿಗಳಲ್ಲಿ ಕಲೆ,ನೃತ್ಯ, ಸಂಗೀತದಂತಹವುಗಳಂತೆ
ಸಂಶೋಧನೆ ಎಂಬುದೂ ಆಸಕ್ತಿಯಿಂದ ಕೆಲಸ ಮಾಡಬೇಕಾದ ಒಂದು ಕ್ಷೇತ್ರ. ಆಸಕ್ತಿ ಎಂಬುದು ವೈಯಕ್ತಿಕವಾಗಿರುತ್ತದೆ. ಅದನ್ನು ಸಾರ್ವತ್ರಿಕಗೊಳಿಸುವುದು, ಎಲ್ಲರಿಗೂ ಕಡ್ಡಾಯಗೊಳಿಸುವುದು ಆಗಬಾರದು. ಆದರೆ ಸಂಶೋಧನೆ, ಅದರಲ್ಲೂ ಶೈಕ್ಷಣಿಕ ವಲಯದಲ್ಲಿನ ಸಂಶೋಧನೆಯನ್ನು ವ್ಯವಸ್ಥೆಯೇ ಒಂದು ರೀತಿಯಲ್ಲಿ ಕಡ್ಡಾಯಗೊಳಿಸಿ ಬಿಟ್ಟಿದೆ ಎಂದರೆ ಅತಿಶಯೋಕ್ತಿಯೇನಲ್ಲ!

ಮೊದಲಿಗೆ, ನ್ಯಾಕ್‌ನಂತಹ ಮಾನ್ಯತಾ ಸಂಸ್ಥೆಗಳು ಒಂದು ಕಾಲೇಜಿನ ಅಧ್ಯಾಪಕರು ಎಷ್ಟು ಪ್ರಬಂಧ
ಗಳನ್ನು ಮಂಡಿಸಿದ್ದಾರೆ, ಎಷ್ಟನ್ನು ಪ್ರಕಟಿಸಿದ್ದಾರೆ ಎಂಬ ಸಂಖ್ಯೆಯನ್ನಷ್ಟೇ ನೋಡುತ್ತವೆ. ಅದರ ಗುಣಮಟ್ಟ ಪರಿಶೀಲನೆಯನ್ನು ಮಾಡುವುದಿಲ್ಲ. ಆದರೆ, ಯುಜಿಸಿ ನಿಗಾಪಟ್ಟಿಯಲ್ಲಿರುವ ನಿಯತಕಾಲಿಕಗಳಾಗಿರಬೇಕು
ಅಷ್ಟೆ. ಪ್ರಕಟವಾದ ಲೇಖನಗಳನ್ನು ಬೇರೆ ಎಷ್ಟು ಜನ ಪರಾಮರ್ಶಿಸಿದ್ದಾರೆ ಅಥವಾ ಸಂಶೋಧನಾ ಲೇಖನಗಳಿಗೆ ಬಳಸಿಕೊಂಡಿದ್ದಾರೆ ಎಂಬುದಕ್ಕೆ ಬೇರೆ ಬೇರೆ ಮಾನದಂಡಗಳ ಸೂಚ್ಯಂಕಗಳಿವೆ. ಆದರೆ, ಈ ಮಾನದಂಡಗಳ ವಿಶ್ವಾಸಾರ್ಹತೆ ಪ್ರಶ್ನಾರ್ಹ. ಅದಕ್ಕಿಂತ ಹೆಚ್ಚಾಗಿ ಆ ಬಳಕೆಯ ಸೂಚ್ಯಂಕಗಳನ್ನೇ ಅಪಮಾರ್ಗದಲ್ಲಿ ಹೆಚ್ಚಿಸಿಕೊಳ್ಳುವವರು, ಹೆಚ್ಚಿಸಿಕೊಡುವವರು ಇಂದು ಶೈಕ್ಷಣಿಕ ವಲಯದ ತೆರೆಮರೆಯಲ್ಲಿ ಕೆಲಸ ಮಾಡುತ್ತಿದ್ದಾರೆ.

ಎರಡನೆಯದಾಗಿ, ಮಂಡಿತ ಅಥವಾ ಪ್ರಕಟಿತ ಸಂಶೋಧನಾ ಲೇಖನಗಳನ್ನು ಆಧರಿಸಿ ಸಂಬಳ, ಸಾರಿಗೆ
ಯಂತಹ ಆರ್ಥಿಕ ಸವಲತ್ತುಗಳನ್ನು ನೀಡುತ್ತಿರುವುದೂ ಸಂಶೋಧನಾ ಲೇಖನಗಳು ಹೆಚ್ಚಾಗಲು ಹಾಗೂ
ಗುಣಮಟ್ಟದಲ್ಲಿ ರಾಜಿಯಾಗಲು ಕಾರಣವಾಗಿದೆ. ಯಾವುದೇ ವಿಷಯವನ್ನು ಕಡ್ಡಾಯಗೊಳಿಸುವುದರಿಂದ
ಸುಸ್ಥಿರ ಗುಣಮಟ್ಟವನ್ನು ಕಾಯ್ದುಕೊಳ್ಳಲು ಸಾಧ್ಯವಿಲ್ಲ. ಅದರಲ್ಲೂ, ಆರ್ಥಿಕ ಲಾಭ ಇದ್ದರಂತೂ ನಮ್ಮ ದೇಶದಲ್ಲಿ ಯಾರು ಬೇಕಾದರೂ ಸಂಶೋಧಕರಾಗಿ, ಪ್ರಬಂಧ, ಮಹಾಪ್ರಬಂಧಗಳನ್ನೇ ಮಂಡಿಸಿ ಮಾನ್ಯತೆ ಪಡೆಯುತ್ತಾರೆ. ಸಂಶೋಧನಾ ಪ್ರಬಂಧಗಳಿಗೂ ಸಂಬಳಕ್ಕೂ ಸಂಬಂಧವಿಲ್ಲ ಎಂದರೆ ಈಗ ಬರುತ್ತಿರುವ ಮುಕ್ಕಾಲು ಪಾಲು ಪ್ರಕಟಣೆಗಳು ಬರುವುದೇ ಇಲ್ಲ! ಸಂಶೋಧನೆಗೆ ಬೇಕಾದ ಮೂಲ ಸೌಲಭ್ಯಗಳಿಗೆ ಮಾತ್ರ ಆರ್ಥಿಕ ಸವಲತ್ತು ಕೊಟ್ಟರೆ ಸಾಕು.

ADVERTISEMENT

ಸಂಶೋಧನಾ ವಿದ್ಯಾರ್ಥಿಗಳ ಮೇಲೆ ಲೇಖನಗಳನ್ನು ಪ್ರಕಟಿಸುವಂತೆ ಮಾರ್ಗದರ್ಶಕರು ಒತ್ತಡ ತರುತ್ತಿದ್ದಾರೆ ಎಂಬುದು ಅರ್ಧ ಸತ್ಯದ ಮಾತು. ಏಕೆಂದರೆ ನಿಯಮಗಳಲ್ಲೇ ಸಂಶೋಧನಾ ವಿದ್ಯಾರ್ಥಿ ಇಂತಿಷ್ಟು ಲೇಖನಗಳನ್ನು ಪ್ರಕಟಿಸಿರಬೇಕು ಎಂಬ ಕಟ್ಟುಪಾಡುಗಳಿವೆ. ಈ ಕಟ್ಟುಪಾಡು ಕೂಡ ಅವರು ಅಡ್ಡಮಾರ್ಗ ಹಿಡಿಯಲು ಪ್ರೇರೇಪಿಸುವಂತಿದೆ.

ಇನ್ನು ಗ್ರಂಥಪಾಲಕರ ಪಾತ್ರದ ಬಗ್ಗೆ ಹೇಳುವುದಾದರೆ, ಈಗಿನ ಕೃತಕ ಬುದ್ಧಿಮತ್ತೆಯ ಕಾಲದಲ್ಲಿ ಅದು ತೀರಾ ನಾಜೂಕಿನ ಕೆಲಸವಾಗಿದೆ. ಬಳಕೆದಾರ ಕೇಳಿದ ಮಾಹಿತಿಯನ್ನು ಲಭ್ಯ ಮೂಲಗಳಿಂದ, ಅತ್ಯಂತ
ಕಡಿಮೆ ಸಮಯದಲ್ಲಿ, ಕಡಿಮೆ ಖರ್ಚಿನಲ್ಲಿ ಒದಗಿಸುವುದು ಗ್ರಂಥಪಾಲಕ ಮಾಡಬಹುದಾದ ಕೆಲಸ. ಆದರೆ ಸಂಶೋಧಕರೇ ಉಚಿತ ಮೂಲಗಳನ್ನು ಹೆಚ್ಚು ಬಯಸುತ್ತಿದ್ದಾರೆ ಎಂದರೆ ಅದಕ್ಕೆ ಕಾರಣ, ಹಕ್ಕುಗಳನ್ನು
ಹೊಂದಿರುವ ಪ್ರಕಾಶಕರು ವಿಧಿಸುತ್ತಿರುವ ದುಬಾರಿ ಶುಲ್ಕ. ಇದಕ್ಕೆ ಸರ್ಕಾರಿ ಹಾಗೂ ಸಂಸ್ಥೆಗಳ ಮಟ್ಟದಲ್ಲಿ ಇ-ಕನ್ಸೋರ್ಷಿಯಾಗಳ ಮೂಲಕ ಪರಿಹಾರ ಇದೆ. ಯುಜಿಸಿ ಪ್ರಾಯೋಜಕತ್ವದಲ್ಲಿಯೇ ಇನ್‌ಫ್ಲಿಬ್‌ನೆಟ್‌ (INFLIBNET), ಪದವಿ ತರಗತಿಯ ಅಧ್ಯಾಪಕರಿಗಾಗಿ ಎನ್‌ಲಿಸ್ಟ್‌ (NLIST) ಇ-ಕನ್ಸೋರ್ಷಿಯಾ ಇದೆ. ವೃತ್ತಿಪರ ಕೋರ್ಸುಗಳ ಸಂಶೋಧಕರಿಗಾಗಿ ಇ-ಶೋಧಸಿಂಧು, ಶೋಧಗಂಗಾದಂತಹ ಸೇವೆಗಳಿವೆ. ಅಲ್ಪಪ್ರಮಾಣದ ಶುಲ್ಕ ಪಾವತಿಸಿ ಈ ಸೇವೆ ಪಡೆಯಬಹುದು. ರಾಷ್ಟ್ರೀಯ ಡಿಜಿಟಲ್‌ ಗ್ರಂಥಾಲಯ, ಇ.ಪಿ.ಜಿ. ಪಾಠಶಾಲದಂತಹ ಉಚಿತ ವೇದಿಕೆಗಳಿವೆ. ಆದರೆ, ಇವುಗಳಲ್ಲಿರುವ ಸಂಪನ್ಮೂಲಗಳ ವಿಶ್ವಾಸಾರ್ಹತೆ ಮತ್ತೆ ಪ್ರಶ್ನಾರ್ಹ.

ಉತ್ತಮ ಸಂಶೋಧನಾ ಸಂಪನ್ಮೂಲಗಳು ಇಂದು ಬಹುಮಟ್ಟಿಗೆ ಖಾಸಗಿ ಪ್ರಕಾಶಕರು, ಹಕ್ಕುದಾರರ ಕೈಯಲ್ಲಿವೆ. ಅದು ಅವರ ವ್ಯವಹಾರವಾದ್ದರಿಂದ ಅವರು ಅದನ್ನು ಹಣ ಮಾಡಲು ಬಳಸುತ್ತಿದ್ದಾರೆ. ಅದರಲ್ಲಿ ತಪ್ಪೇನಿಲ್ಲ. ಏಕೆಂದರೆ ನಮ್ಮ ಸರ್ಕಾರಗಳ ನೀತಿ ನಿರೂಪಣೆಗಳೇ ಹಾಗಿವೆ. ಅದಕ್ಕಿರುವ ಪರಿಹಾರವೆಂದರೆ ಮುಕ್ತ ವೇದಿಕೆ (ಓಪನ್‌ ಸೋರ್ಸ್).‌ ಒಂದು ದೇಶ, ಸಮಾಜದ ಭಾಗವಾಗಿ ಶೈಕ್ಷಣಿಕ ವಲಯದಲ್ಲಿ ಉತ್ಪನ್ನ ವಾಗುವ ಜ್ಞಾನದ ಹಕ್ಕು ಯಾರದ್ದಾಗಿರಬೇಕು? ಇದು ಮುಖ್ಯ ಪ್ರಶ್ನೆ. ಆ ಹಕ್ಕು ಇಡೀ ಮನುಕುಲಕ್ಕೆ ಸೇರಿದ್ದು ಎಂದಾದರೆ, ಬಹುತೇಕ ಸಮಸ್ಯೆಗಳು ಬಗೆಹರಿಯುತ್ತವೆ.

ಸಂಶೋಧಕರೂ ಒಮ್ಮೆ ಪಾವತಿ ಆಧಾರದ ಮೇಲಾದರೂ ತಮ್ಮ ಸಂಶೋಧನೆಯ ಫಲವನ್ನು ಸಾರ್ವಜನಿಕಗೊಳಿಸುವುದು ಒಳ್ಳೆಯದು. ಈ ಹಿನ್ನೆಲೆಯಲ್ಲಿಯೇ, ಓಪನ್‌ ಆ್ಯಕ್ಸೆಸ್‌ ಜರ್ನಲ್ಸ್‌, ಸ್ವಿಟ್ಜರ್ಲೆಂಡಿನ ಎಂಡಿಪಿಐ ಮತ್ತು ಡಿಒಎಜೆ ಅಂತಹ ನೂರಾರು ಮುಕ್ತ ವೇದಿಕೆಗಳು, ಸಂಸ್ಥೆಗಳು ಪ್ರಪಂಚದಾದ್ಯಂತ ಕೆಲಸ ಮಾಡುತ್ತಿವೆ. ಆದರೆ ನಡೆಯಬೇಕಾದ ದೂರ ಬಹಳವಿದೆ. ಈ ದಿಸೆಯಲ್ಲಿ ಗಂಭೀರವಾದ ಚರ್ಚೆಗಳು ನಡೆಯಬೇಕಿರುವುದು ಇಂದಿನ ತುರ್ತು ಅಗತ್ಯವಾಗಿದೆ.

ಲೇಖಕ: ಮುಖ್ಯ ಗ್ರಂಥಪಾಲಕ, ಸುರಾನಾ ಕಾಲೇಜು ಬಸವನಗುಡಿ, ಬೆಂಗಳೂರು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.