ಮೊನ್ನೆ ವಿಜಯದಶಮಿಯ ದಿನ ಹೊನ್ನಾಳಿಯಲ್ಲಿ ದೇವಿಯ ಮೆರವಣಿಗೆ ಇತ್ತು. ಆದರೆ ದೇವಿಗಿಂತ ಹೆಚ್ಚು ವಿಜೃಂಭಿಸಿದ್ದು ಡಿ.ಜೆಯ (ಡಿಸ್ಕ್ ಜಾಕಿ) ಸದ್ದು. ಈ ಸದ್ದು ಉಂಟುಮಾಡಿದ ಹಿಂಸೆ ಇತ್ತಲ್ಲ, ಅದನ್ನು ಆ ದೇವಿಯೂ ಕ್ಷಮಿಸಲಾರಳೇನೊ! ಡಿ.ಜೆ. ಸದ್ದಿಗೆ ಬೆಚ್ಚಿಬಿದ್ದ ಹನ್ನೊಂದು ತಿಂಗಳ ಮಗುವೊಂದು ಸಂಜೆಯಿಂದ ಶುರುವಿಟ್ಟು ಮಧ್ಯರಾತ್ರಿಯವರೆಗೂ ಉಸಿರುಗಟ್ಟಿ ಅತ್ತು ತೀವ್ರ ಗಂಭೀರ ಹಂತಕ್ಕೆ ತಲುಪಿತ್ತು. ಇನ್ನೊಂದು ಮನೆಯವರಿಗೆ ಇದರ ಅರಿವಿತ್ತೋ ಏನೊ, ಡಿ.ಜೆ. ಬರುತ್ತಿದ್ದಂತೆ ತಮ್ಮ ಹಸುಗೂಸನ್ನು ಆಟೊದಲ್ಲಿ ಎತ್ತಿಕೊಂಡು ಸದ್ದು ಬರದ ದೂರದ ಜಾಗಕ್ಕೆ ಹೊರಟುಹೋದರು.
ಜಗಳೂರಿನಲ್ಲಿ ಗಣೇಶ ವಿಸರ್ಜನೆ ವೇಳೆ ಡಿ.ಜೆ. ಸದ್ದಿಗೆ ಹೆಜ್ಜೆ ಹಾಕುತ್ತಿದ್ದ ಯುವಕನೊಬ್ಬ ಸ್ಥಳದಲ್ಲೇ ಕುಸಿದುಬಿದ್ದ. ತಕ್ಷಣ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಹೃದಯಸ್ತಂಭನವಾಗಿ ಸತ್ತೇಹೋದ. ಕೊಪ್ಪಳದಲ್ಲೂ ಇಂತಹದ್ದೇ ಪ್ರಕರಣ ನಡೆದ ಉದಾಹರಣೆ ಇದೆ. ಡಿ.ಜೆ. ಸದ್ದಿಗೆ ರಾಯಚೂರಿನಲ್ಲಿ 19 ದಿನಗಳ ಹಸುಗೂಸು ಮಲಗಿದ್ದಲ್ಲೇ ಮೃತಪಟ್ಟಿದೆ ಎಂದು ದೂರೊಂದು ದಾಖಲಾಗಿದೆ.
ನಿಜಕ್ಕೂ ಅಬ್ಬರದ ಸದ್ದಿಗೆ ಸಾವು ಸಂಭವಿಸುವುದೇ? ನೇರವಾಗಿ ಅಲ್ಲದಿದ್ದರೂ ಪರೋಕ್ಷವಾಗಿ ಕಾರಣವಾಗಬಹುದು ಎನ್ನುತ್ತಾರೆ ವೈದ್ಯರು. ಹೃದಯದ ಅನಾರೋಗ್ಯ ಇದ್ದವರಿಗೆ ಅಬ್ಬರದ ಸದ್ದಿನಿಂದ ಎದೆಬಡಿತ ಒಮ್ಮೆಲೇ ಹೆಚ್ಚಾಗಬಹುದು. ಹೃದಯದ ಬಡಿತ ಏಕಾಏಕಿ ಹೆಚ್ಚಾಗುತ್ತಾ ಹೋದಂತೆ ನಿಂತುಹೋಗುವ ಸಾಧ್ಯತೆಯೂ ಇರುತ್ತದೆ. ಆಗ ಉಸಿರು ನಿಲ್ಲುತ್ತದೆ. ಸದ್ದು ಕೊಲೆಗಾರನಾಗುತ್ತದೆ.
ನಮ್ಮ ಕಿವಿಯ ತಮಟೆ ಎಷ್ಟು ಪ್ರಮಾಣದ ಸದ್ದನ್ನು ಸಹಿಸಿಕೊಳ್ಳಬಹುದು? ಪ್ರಾಥಮಿಕ ಶಾಲೆಯಲ್ಲೇ ಹೇಳಿಕೊಡುವ ಪಾಠ ಇದು. 70 ಡೆಸಿಬಲ್‌ವರೆಗಿನ ಸದ್ದು ನಮ್ಮ ಕಿವಿಗೆ ಹಿತ. ಡಿ.ಜೆಯ ಡೆಸಿಬಲ್ ಕೆಲವೊಮ್ಮೆ 130ಕ್ಕೂ ಮೀರಿರುತ್ತದೆ ಎಂದರೆ ನೀವು ನಂಬಲೇಬೇಕು. ಇಷ್ಟು ಮಟ್ಟದ ಸದ್ದನ್ನು ಕೇಳಿಸಿಕೊಂಡರೆ ಕಿವಿಯ ತಮಟೆ ಹರಿದು ನೂರು ಚೂರಾಗಬಹುದು. ಇದಕ್ಕೆ ಜೊತೆ ಜೊತೆಯಾಗಿ ಬರುವ ತಲೆಸುತ್ತು, ನಿದ್ರಾಹೀನತೆ, ಆತಂಕ, ಉದ್ವೇಗ, ಖಿನ್ನತೆ, ಕಿವಿಯಲ್ಲಿ ಸದಾ ಗುಂಯ್ ಅನ್ನುವ ಶಬ್ದದ ಕಿರಿಕಿರಿಯೂ ನಮಗೆ ಲಭ್ಯವಾಗುತ್ತವೆ.
ಇಷ್ಟೊಂದು ಕರಾಳ ಮುಖವನ್ನು ತೋರಿಸುತ್ತಿದ್ದರೂ ದಿನೇದಿನೇ ಡಿ.ಜೆಯ ಅಬ್ಬರ ಹೆಚ್ಚಾಗುತ್ತಿದೆ. ಡಿ.ಜೆ. ಇಲ್ಲದೆ ಯಾವುದೇ ಕಾರ್ಯಕ್ರಮ, ಉತ್ಸವ ಪೂರ್ಣವಾಗುವುದಿಲ್ಲ. ಆದರೆ ಅದರಿಂದ ಬಾಧಿತರಾಗುವವರ ಕೂಗು ಕೇಳುವವರು ಯಾರು? ಹೋರಿ ಬೆದರಿಸುವುದು, ಜಲ್ಲಿಕಟ್ಟಿನಂತಹ ಆಚರಣೆಗಳಲ್ಲಿ ತನ್ನಿಚ್ಛೆಯಂತೆ ಹೋಗಿ ಅಪಾಯ ತಂದುಕೊಳ್ಳುವವನ ರಕ್ಷಣೆಗೆ ನೀತಿ-ನಿಯಮಗಳಿವೆ. ಇಲ್ಲಿ ತನ್ನ ಪಾಡಿಗೆ ತಾನಿದ್ದಾಗಲೂ ಸದ್ದು ಬಂದು ಕೊಲ್ಲುತ್ತಿರುವಾಗ ವ್ಯವಸ್ಥೆ ಯಾಕೆ ಸುಮ್ಮನಿದೆ ಎಂಬುದು ಅರ್ಥವಾಗುತ್ತಿಲ್ಲ.
ಮೆರವಣಿಗೆ ತಪ್ಪಲ್ಲ. ಹಬ್ಬ, ಅದಕ್ಕೆ ಸಂಬಂಧಿಸಿದ ಆಚರಣೆಗಳು ನಿಜಕ್ಕೂ ನಾವು ಬದುಕನ್ನು ಇನ್ನಷ್ಟು ಸಂಭ್ರಮಿಸಲು ಮಾಡಿಕೊಂಡ ತುಂಬಾ ಸುಂದರವಾದ ವ್ಯವಸ್ಥೆಗಳು. ಹಾಡು-ಹಸೆ, ನೃತ್ಯ, ಹಲಗೆಯಂತಹ ವಾದ್ಯಗಳನ್ನು ಬಳಸಿ ಮಾಡಿದ ಹಬ್ಬಗಳನ್ನು, ಮೆರವಣಿಗೆಗಳನ್ನು, ಶುಭಕಾರ್ಯಗಳನ್ನು ನಾವು ಅನುಭವಿಸಿದ್ದೇವೆ. ಕಣ್ಣಿಗೂ ಮನಸ್ಸಿಗೂ ಅವು ಅದೆಷ್ಟು ಮುದ ಕೊಡುತ್ತಿದ್ದವು ಎಂಬುದನ್ನು ನೋಡಿದ್ದೇವೆ. ಮೆರವಣಿಗೆಯಲ್ಲಿ ಡೊಳ್ಳು, ಕೋಲಾಟ, ಓಲಗದಂತಹವು ಎಷ್ಟೊಂದು ಸೊಗಸು ಅನಿಸುತ್ತಿದ್ದವು. ಮನೆಗಳಲ್ಲಿ ಮದುವೆಯಂತಹ ಶುಭಕಾರ್ಯವಿದ್ದಾಗ ಹೊರಗೆ ತುಸು ಜೋರಾಗಿ ಹಾಡು ಹಾಕುವುದು ತುಂಬಾ ಹಿಂದಿನಿಂದಲೂ ಇದೆ. ಈಗ ನೆನಪಿರುವ ಎಷ್ಟೋ ಹಾಡುಗಳು ಬಾಲ್ಯದಲ್ಲಿ ಇಂತಹ ಕಾರ್ಯಕ್ರಮದಲ್ಲಿ ಕೇಳಿದ ಹಾಡುಗಳೇ ಆಗಿವೆ. ಬೀದಿಯಲ್ಲಿ ಜನ ಆ ಹಾಡುಗಳನ್ನು ತುಂಬಾ ಸಂಭ್ರಮದಿಂದ ಕೇಳಿಸಿಕೊಂಡು ಖುಷಿಪಡುತ್ತಿದ್ದರು. ಈಗ ಆ ಹಿತವಾದ ಹಾಡಿನ ಜಾಗದಲ್ಲಿ ಹಿಂಸಿಸುವ ಸದ್ದೊಂದು ಬಂದು ಕೂತಿದೆ. ಸಂಗೀತ ಒಂದು ಔಷಧಿಯಂತೆ ಎಂದು ಹೇಳುವ ಮಾತಿದೆ. ಆದರೆ ಸಂಗೀತವೇ ಕಾಯಿಲೆ ತಂದರೆ ಈ ಕಾಲಕ್ಕೆ ಏನನ್ನೋಣ?
ನಿಜಕ್ಕೂ ಹಬ್ಬ, ಮೆರವಣಿಗೆಗಳು ನಮ್ಮ ಸಂಭ್ರಮವನ್ನು ಬೇರೆಯವರಿಗೆ ಹಂಚುವ, ಅವರನ್ನೂ ನಮ್ಮ ಸಂಭ್ರಮದೊಳಗೆ ಕರೆತರುವ ಸ್ವರೂಪದವು. ಆದರೆ ಈಗೇನಾಗಿದೆ? ಡಿ.ಜೆ. ಹಾಕಿ ಬೇರೆಯವರಿಗೆ ತೊಂದರೆ ಕೊಟ್ಟು ನಾವು ಸಂಭ್ರಮಿಸುತ್ತಿದ್ದೇವೆ.
ಸಂಬಂಧಿಸಿದ ಇಲಾಖೆಯವರು ಇನ್ನು ಮೇಲಾದರೂ ಇದನ್ನು ಗಂಭೀರವಾಗಿ ಪರಿಗಣಿಸಬೇಕು. ಡಿ.ಜೆ. ಒದಗಿಸುವವರನ್ನು ಒಂದು ಪರವಾನಗಿಯಡಿ ತರಬೇಕು. ಡಿ.ಜೆಯ ಸದ್ದನ್ನು ಕಟ್ಟುನಿಟ್ಟಾಗಿ ಮಿತಿಗೆ ಒಳಪಡಿಸಬೇಕು. ಒಂದು ನಿರ್ದಿಷ್ಟ ಸಮಯ ನಿಗದಿಪಡಿಸಬೇಕು. ಮೆರವಣಿಗೆಯಲ್ಲಿ ಡಿ.ಜೆ. ಇರುವುದರ ಬಗ್ಗೆ ಮೊದಲೇ ಸೂಚನೆ ನೀಡಬೇಕು. ಡಿ.ಜೆ. ಆಯೋಜಿಸುವವರು ನಿರ್ದಿಷ್ಟ ಠೇವಣಿ ಇಡಬೇಕು. ಏನಾದರೂ ಅವಘಡಗಳಾದರೆ ಅದರಿಂದ ಪರಿಹಾರ ಕೊಡುವಂತೆ ಆಗಬೇಕು. ಪೊಲೀಸ್ ಇಲಾಖೆಯ ಕಾವಲು ಬೇಕು. ಈ ಸಂಬಂಧದ ನಿಯಮಗಳನ್ನು ಇನ್ನಷ್ಟು ಬಿಗಿ ಮಾಡಬೇಕು. ಅವು ಕಟ್ಟುನಿಟ್ಟಾಗಿ ಜಾರಿಯಾಗುವಂತೆ ನೋಡಿಕೊಳ್ಳಬೇಕು. ಸಾರ್ವಜನಿಕರಿಗೆ ತೊಂದರೆಯಾಗದಂತೆ, ಅವರ ಆರೋಗ್ಯಕ್ಕೆ ಧಕ್ಕೆಯಾಗದಂತೆ ನಿಗಾ ವಹಿಸಬೇಕು.
ಡಿಸ್ಕ್ ಜಾಕಿ ಎಂದರೆ ರೇಡಿಯೊ ಜಾಕಿ ತರಹದವನು. ಮಾತಿನ ಮಧ್ಯೆ ಹಾಡನ್ನು ತುಸು ಜೋರಾಗಿ ಕೇಳಿಸುತ್ತಿದ್ದವನು. ಎರಡನೇ ಮಹಾಯುದ್ಧದ ನಂತರ ಅಮೆರಿಕದಲ್ಲಿ ಇದಕ್ಕೊಂದು ವಿಶೇಷ ಸ್ಥಾನ ಇತ್ತು. ಇದು ಅಮೆರಿಕದ ಕಾಣಿಕೆ. ಜೋರಾಗಿ ಹಾಕುವ ಹಾಡಿನ ರೂಪದ ಡಿ.ಜೆ. ಈಗ ನಮ್ಮನ್ನು ಕೊಲ್ಲುವಂತಾದದ್ದು ಈ ಕಾಲದ ದೌರ್ಭಾಗ್ಯ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.