ADVERTISEMENT

ಅಧಿಕಾರಶಾಹಿ ಮತ್ತು ಇಚ್ಛಾಶಕ್ತಿ ಕೊರತೆ

ಶಿಕ್ಷಣ ಇಲಾಖೆಯಲ್ಲಿನ ನ್ಯೂನತೆಗಳನ್ನು ಸಿಎಜಿ ವರದಿ ಬಹಿರಂಗಪಡಿಸಿದೆ

ಚಂದ್ರಶೇಖರ ದಾಮ್ಲೆ
Published 11 ನವೆಂಬರ್ 2019, 19:41 IST
Last Updated 11 ನವೆಂಬರ್ 2019, 19:41 IST
Sangatha 12-11-2019
Sangatha 12-11-2019   

ಜೆಡಿಎಸ್‌–ಕಾಂಗ್ರೆಸ್‌ ಮೈತ್ರಿಕೂಟ ಸರ್ಕಾರದ ಅವಧಿಯಲ್ಲಿ ಕೆಲಕಾಲ ಶಿಕ್ಷಣ ಸಚಿವರಾಗಿದ್ದ ಎನ್.ಮಹೇಶ್ ಅವರು ಮಂತ್ರಿ ಪದವಿಯನ್ನು ತ್ಯಜಿಸಿದ ಬಳಿಕ, ಆ ಖಾತೆಗೆ ಬಹಳ ದಿನ ಸಚಿವರೇ ಇರಲಿಲ್ಲ. ಆ ಅವಧಿಯಲ್ಲಿ ಶಿಕ್ಷಣ ಇಲಾಖೆಯು ಒಂದು ರೀತಿ ಮುಖ್ಯೋಪಾಧ್ಯಾಯರಿಲ್ಲದ ಶಾಲೆಯಂತೆ ನಡೆಯಿತು. ಇಲಾಖೆಯಲ್ಲಿ ಹೆಸರಿಗೆ ಪ್ರಧಾನ ಕಾರ್ಯದರ್ಶಿಯಿಂದ ತೊಡಗಿ ಎಲ್ಲಾ ಹಂತಗಳಲ್ಲಿ ಅಧಿಕಾರಿಗಳಿದ್ದರು. ಆದರೆ ನಡೆಯಬೇಕಾಗಿದ್ದ ಅನೇಕ ಕೆಲಸಗಳೇ ನಡೆಯಲಿಲ್ಲವೆಂಬುದು ಈಗ ಮಹಾಲೇಖಪಾಲರ (ಸಿಎಜಿ) ವರದಿಯಿಂದ ಬಹಿರಂಗವಾಗಿದೆ.

ಕೇಂದ್ರ ಸರ್ಕಾರದಿಂದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನದಡಿ ಹಣ ಬಂದಿದ್ದರೂ ರಾಜ್ಯದಲ್ಲಿ ಇಲಾಖಾಧಿಕಾರಿಗಳು ಪ್ರಗತಿ ಸಾಧಿಸುವಲ್ಲಿ ಹಿಂದುಳಿದಿದ್ದಾರೆ. ಇದಕ್ಕೆ ಇಚ್ಛಾಶಕ್ತಿ ಇಲ್ಲದ್ದೇ ಕಾರಣ ಎಂಬುದು ಸ್ಪಷ್ಟ.

ರಾಜ್ಯದ ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಅಭಿಯಾನ ಸಮಿತಿಯು 2013- 14ರಿಂದ 2017- 18ರ ಅವಧಿಯಲ್ಲಿ ವಿವಿಧ ಯೋಜನೆಗಳಲ್ಲಿ ತೊಡಗಿಸಬೇಕಿದ್ದ ಹಣದಲ್ಲಿ ಶೇ 30ರಿಂದ 55ರಷ್ಟನ್ನು ಉಪಯೋಗಿಸದೆ ಬಾಕಿ ಉಳಿಸಿದೆ. ಅಲ್ಲದೆ ಶಾಲೆಗಳ ಉನ್ನತೀಕರಣದ ಹೆಸರಿನಲ್ಲಿ ಶೇ 56ರಷ್ಟು ಹಣ ನೀಡಲಾಗಿದ್ದು ಕಂಪ್ಯೂಟರ್, ಲ್ಯಾಬೊರೇಟರಿ ಹಾಗೂ ಪೀಠೋಪಕರಣ ಸೌಕರ್ಯ ಕಲ್ಪಿಸಲು ಅವಕಾಶ ಇತ್ತು. ಅದನ್ನೂ ಸಮರ್ಪಕವಾಗಿ ಬಳಸಿಕೊಳ್ಳಲು ಆಗಿಲ್ಲ. ಇದಲ್ಲದೆ, 2018ರ ಮಾರ್ಚ್ ಹೊತ್ತಿಗೆ 4,361 ವಸತಿ ಪ್ರದೇಶಗಳಿಗೆ ಸೆಕೆಂಡರಿ ಹಂತದ ಶಿಕ್ಷಣ ಲಭ್ಯವಿರಲಿಲ್ಲವೆಂದು ಹೇಳಲಾಗಿದೆ. ಈ ದಿಸೆಯಲ್ಲಿ ರಾಜ್ಯವು ಸರ್ವರಿಗೂ ಸೆಕೆಂಡರಿ ಶಿಕ್ಷಣ ಲಭಿಸುವಂತೆ ಮಾಡಬೇಕೆಂದು ವರದಿ ಸಲಹೆ ನೀಡಿದೆ.

ADVERTISEMENT

2010- 18ರ ಅವಧಿಯಲ್ಲಿ 2,396 ಶಾಲೆಗಳ ಉನ್ನತೀಕರಣದ ಯೋಜನೆ ಇದ್ದರೂ ಸಿವಿಲ್ ಕಾಮಗಾರಿ ನಿರ್ವಹಣೆಯಲ್ಲಿ ತಡಮಾಡಿದ್ದರಿಂದಾಗಿ ಕೇವಲ 1,740 ಶಾಲೆಗಳ ಕಾಮಗಾರಿ ನಡೆದಿದೆ. ಇನ್ನು, ಶಿಕ್ಷಕರ ನೇಮಕಾತಿಯ ಕೊರತೆಯಿಂದಾಗಿ ಶಿಕ್ಷಕ– ವಿದ್ಯಾರ್ಥಿ ಅನುಪಾತವು 1:69ರ ತನಕ ಇದ್ದ ಬಗ್ಗೆ ವರದಿಯು ಕಳವಳ ವ್ಯಕ್ತಪಡಿಸಿದೆ. ಇದಕ್ಕಿಂತ ದೊಡ್ಡ ಸಮಸ್ಯೆ ಎಂದರೆ, 1,633 ಶಾಲೆಗಳಲ್ಲಿ ವಿಜ್ಞಾನ, ಗಣಿತ ಮತ್ತು ಸಮಾಜವಿಜ್ಞಾನದ ವಿಷಯಗಳಲ್ಲಿ ಶಿಕ್ಷಕರೇ ಇರಲಿಲ್ಲವೆಂಬುದು ಬೆಳಕಿಗೆ ಬಂದಿದೆ.

ಸರ್ಕಾರಿ ಶಾಲೆಗಳ ಉನ್ನತೀಕರಣ ಉದ್ದೇಶವು ಕಾಗದದಲ್ಲೇ ಉಳಿದಿದ್ದು, ಅಧಿಕಾರಿಗಳ ಉದಾಸೀನ ಹಾಗೂ ವಿಳಂಬ ಧೋರಣೆಗೆ ರಾಜ್ಯ ಸರ್ಕಾರ ಭಾರಿ ಬೆಲೆ ತೆರಬೇಕಾಗಿ ಬಂದಿದೆ. ಏಕೆಂದರೆ, ಶಾಲೆಗಳ ಮೂಲ ಸೌಕರ್ಯ ಅಭಿವೃದ್ಧಿಗಾಗಿ ಕೇಂದ್ರದಿಂದ ಬಂದಿದ್ದ ಬೃಹತ್ ಮೊತ್ತದ ಅನುದಾನ ವಾಪಸ್ ಹೋಗಿದೆ. ಟೆಂಡರ್‌ಗಳಲ್ಲಿ ತಪ್ಪುಗಳು ಹಾಗೂ ಕಾಮಗಾರಿಗಳ ಜಾರಿಯಲ್ಲಿನ ವಿಳಂಬದಿಂದಾಗಿ ಅಧಿಕ ಹಣ ಕೈಬಿಟ್ಟುಹೋಗಿದೆ. ಅನೇಕ ಅನುಮೋದಿತ ಕಾಮಗಾರಿಗಳನ್ನು ಪೂರ್ಣಗೊಳಿಸದಿದ್ದುದರಿಂದ, ನಂತರ ಸಲ್ಲಿಸಿದ ಪ್ರಸ್ತಾವಗಳನ್ನು ಯೋಜನಾ ಅನುಮೋದನಾ ಮಂಡಳಿಯು ಪರಿಗಣಿಸಲೇ ಇಲ್ಲ. ಅಧಿಕಾರಿಗಳ ಅಸಡ್ಡೆಗೆ ಶಿಕ್ಷೆಯೋ ಎಂಬಂತೆ, 2017-18ರ ಅವಧಿಯಲ್ಲಿ 410 ಕಾಮಗಾರಿಗಳಿಗೆ ಟೆಂಡರ್ ಕರೆಯುವಲ್ಲಿ ಮಂಡಳಿಯು ವಿಳಂಬ ಮಾಡಿತು. ಇದರಿಂದ ರಾಷ್ಟ್ರೀಯ ಮಾಧ್ಯಮಿಕ ಅಭಿಯಾನದ ಬಾಬತ್ತಿನಲ್ಲಿ ಸರ್ಕಾರವು ₹ 189 ಕೋಟಿ ಅನುದಾನ ಕಳೆದುಕೊಂಡಿದೆ.

ಆಡಳಿತದಲ್ಲಿ ಮೂಗು ತೂರಿಸುವ ಮಂತ್ರಿಗಳಿಲ್ಲದೆ ಮುಕ್ತ ಪರಿಸರವಿದ್ದಾಗ ಅಧಿಕಾರಿಗಳಿಂದ ಸ್ವಚ್ಛ ಆಡಳಿತ ನಡೆಸಲು ಏಕೆ ಆಗಲಿಲ್ಲ? ಮಾರ್ಗಸೂಚಿ ಅನುಸರಿಸದಿರುವುದು, ಟೆಂಡರ್‌ ಗೋಪ್ಯತೆ ಕಾಪಾಡದಿರುವುದು, ಟೆಂಡರ್ ತೆರೆದ ಬಳಿಕ ಬೆಲೆಯಲ್ಲಿ ಹೊಂದಾಣಿಕೆ ಮಾಡಿರುವುದಕ್ಕೆಲ್ಲ ಯಾರು ಹೊಣೆ?

ಹಿಂದಿನ ಮುಖ್ಯಮಂತ್ರಿ, ಪೂರ್ಣ ಇಂಗ್ಲಿಷ್ ಮೀಡಿಯಮ್ಮಿನ ಕರ್ನಾಟಕ ಪಬ್ಲಿಕ್ ಸ್ಕೂಲ್ (ಕೆಪಿಎಸ್) ಯೋಜನೆ ಪ್ರಕಟಿಸಿದಾಗ, ಅದರ ಸಾಧಕ– ಬಾಧಕಗಳ ಬಗ್ಗೆ ಅಧಿಕಾರಿಗಳು ತಲೆಕೆಡಿಸಿಕೊಳ್ಳಲೇ ಇಲ್ಲ. ಇಂತಹ ಒಂದು ಅದ್ಭುತ ಯೋಜನೆಯ ಜಾರಿಗೆ ಸಾಕಷ್ಟು ಪೂರ್ವಸಿದ್ಧತೆ ಆಗಬೇಕೆಂದು ಇಲಾಖಾಧಿಕಾರಿಗಳು ಮುಖ್ಯಮಂತ್ರಿಗೆ ಏಕೆ ಹೇಳಲಿಲ್ಲ? ಏಕೆಂದರೆ, ಅಧಿಕಾರಿಗಳಿಗೂ ಮುಖ್ಯಮಂತ್ರಿಗೂ ಮಧ್ಯೆ ಒಬ್ಬ ಶಿಕ್ಷಣ ಮಂತ್ರಿ ಇರಲಿಲ್ಲ. ಇದ್ದಿದ್ದರೆ ಹೊಸ ಪರಿಕಲ್ಪನೆಯಡಿ ಸಾವಿರ ಶಾಲೆಗಳನ್ನು ಏಕಕಾಲದಲ್ಲಿ ಆರಂಭಿಸಲು ಸಮಯಾವಕಾಶದ ಅಗತ್ಯ ಮನಗಾಣಿಸಬಹುದಿತ್ತು.

ಒಂದೇ ಆವರಣದೊಳಗೆ ಪ್ರಾಥಮಿಕ, ಪ್ರೌಢ ಹಾಗೂ ಪದವಿಪೂರ್ವ ಕಾಲೇಜುಗಳಿದ್ದರೆ ಸಾಲದು. ಅವುಗಳೊಳಗೆ ಈ ತನಕ ಇದ್ದ ನಿರ್ದಿಷ್ಟ ಅಂತರವನ್ನು ಅಳಿಸುವುದು ಸವಾಲಿನ ಕೆಲಸ. ಇಲ್ಲಿ ಗಮನಿಸಬೇಕಾದ್ದೆಂದರೆ, ಶಿಕ್ಷಕರು ಮತ್ತು ವಿದ್ಯಾರ್ಥಿಗಳ ಮಟ್ಟದಲ್ಲಿ ಆಗಬೇಕಾದ ಸಂಯೋಜನೆಗಳ ನಡುವೆ ಸೂಕ್ಷ್ಮವಾದ ಭಿನ್ನತೆಗಳಿವೆ. ಏಕೆಂದರೆ ಕಿರಿಯ ವಿದ್ಯಾರ್ಥಿಗಳಿಗೆ ಹಿರಿಯ ವಿದ್ಯಾರ್ಥಿಗಳು ಅನುಕರಣೆಗೆ ಸಿಗುತ್ತಾರೆ. ಈ ಅನುಕರಣೆಯು ಅಧ್ಯಯನದ ಮಾದರಿಗಳಲ್ಲಿ ನಡೆದರೆ ಉತ್ತಮವೇ. ಆದರೆ ಪ್ರೌಢ ಮತ್ತು ಪದವಿಪೂರ್ವ ಹಂತದವರಿಗೆ ಅಧ್ಯಯನದಲ್ಲಿ ಪೂರ್ಣವಾಗಿ ತೊಡಗಿಕೊಳ್ಳುವಂತಹ ಮಾರ್ಗದರ್ಶನ ವಿದ್ಯಾಸಂಸ್ಥೆಗಳಿಂದ ಸಿಗದಿದ್ದಾಗ ಅವರ ಆಸಕ್ತಿ, ವರ್ತನೆಗಳು ಆರೋಗ್ಯಕರ ಮಾದರಿಗಳಲ್ಲಿ ಇರುವುದಿಲ್ಲ. ಹಾಗಾಗಿ ಕೆಪಿಎಸ್ ಆರಂಭಿಸುವ ಮೊದಲು ಸೂಕ್ಷ್ಮ ಸಮಸ್ಯೆಗಳ ಕುರಿತಾದ ಚರ್ಚೆ ನಡೆಯಬೇಕಿತ್ತು. ಈ ಕೆಲಸಕ್ಕೆ ವೇದಿಕೆ ಸೃಷ್ಟಿಯಾಗದೇ ಹೋದದ್ದು ವಿಪರ್ಯಾಸ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.