ರಾಸಾಯನಿಕಮುಕ್ತ, ಗುಣಮಟ್ಟದ ಸಾವಯವ ಬೆಲ್ಲ ಖರೀದಿಸುವ ಉದ್ದೇಶದಿಂದ ರಷ್ಯಾದ ವ್ಯಾಪಾರಿ ಸಂಸ್ಥೆಯ ಪ್ರತಿನಿಧಿಯೊಬ್ಬರು ಕೆಲವು ದಿನಗಳ ಹಿಂದೆ ಬಾಗಲಕೋಟೆಗೆ ಬಂದಿದ್ದರು. ಈ ಭಾಗದಲ್ಲಿ ಸಾವಯವ ಬೆಲ್ಲ ಉತ್ಪಾದಿಸುವ ಘಟಕಗಳ ಮಾಹಿತಿಯನ್ನು ಅವರು ಸಂಗ್ರಹಿಸಿದ್ದರು. ನನ್ನಿಂದಲೂ ಕೆಲವು ವಿಳಾಸಗಳನ್ನು ಪಡೆದುಕೊಂಡಿದ್ದರು. ಬೆಲ್ಲ ಉತ್ಪಾದನಾ ಘಟಕಗಳ ಮಾಲೀಕರು ಬೆಲ್ಲಕ್ಕೆ ಹೆಚ್ಚು ಬೆಲೆ ನಿಗದಿ ಮಾಡಿ, ಉತ್ತಮ ಸಾವಯವ ಬೆಲ್ಲ ಉತ್ಪಾದಿಸಿ ಪೂರೈಸುವ ಭರವಸೆಯನ್ನು ಅವರಿಗೆ ನೀಡಿದ್ದರು. ಬೆಲ್ಲಕ್ಕೆ ಒಳ್ಳೆಯ ಮಾರುಕಟ್ಟೆ ದೊರೆಯಿತು, ರೈತರ ಕಬ್ಬಿಗೆ ಹೆಚ್ಚು ಬೆಲೆ ದೊರಕುತ್ತದೆ ಎಂದು ಎಲ್ಲರೂ ಉತ್ಸಾಹದಲ್ಲಿದ್ದೆವು.
ಒಂದು ಮುಂಜಾನೆ ನಮ್ಮ ಮನೆಗೆ ಬಂದ ರಷ್ಯಾದ ಆ ಪ್ರತಿನಿಧಿ, ತಾನು ಮರಳಿ ರಷ್ಯಾಕ್ಕೆ ಹೋಗುತ್ತಿರುವು
ದಾಗಿಯೂ ಬೆಲ್ಲ ಖರೀದಿಯನ್ನು ನಿಲ್ಲಿಸಿರುವುದಾಗಿಯೂ ಹೇಳಿದರು. ವಿಚಾರಿಸಿದಾಗ, ಪ್ರಥಮ ಬಾರಿಗೆ ಕಳಿಸಿದ ಬೆಲ್ಲ ಗುಣಮಟ್ಟದ್ದಾಗಿದ್ದು, ಸ್ವೀಕೃತವಾಯಿತು. ಮುಂದಿನ ಎರಡು ಹಂತಗಳಲ್ಲಿ ಕಳಿಸಿದ ಬೆಲ್ಲದಲ್ಲಿ ಬಹಳ ರಾಸಾಯನಿಕಗಳನ್ನು ಬಳಸಿದ್ದುದು ದೃಢಪಟ್ಟಿದ್ದರಿಂದ ಅದು ತಿರಸ್ಕೃತಗೊಂಡಿತು. ಹೀಗಾಗಿ, ಈ ಭಾಗದ ಬೆಲ್ಲ ಖರೀದಿ ನಿಲ್ಲಿಸಲು ತಮ್ಮ ಸಂಸ್ಥೆ ನಿರ್ಧರಿಸಿದೆ ಎಂದು ಅವರು ಕಳವಳದಿಂದ ಹೇಳಿದರು. ಕೃಷಿ ಮತ್ತು ಆರ್ಥಿಕ ಅಭಿವೃದ್ಧಿಯ ಒಂದು ಉತ್ತಮ ಅವಕಾಶವನ್ನು ಕಳೆದುಕೊಂಡದ್ದಕ್ಕೆ ಮನಸ್ಸು ಹಳಹಳಿಸಿತು.
ಆಹಾರ ಪದಾರ್ಥಗಳಲ್ಲಿ ರಾಸಾಯನಿಕಗಳು ಹಾಗೂ ಇತರ ಹಾನಿಕಾರಕ ವಸ್ತುಗಳನ್ನು ಸೇರಿಸುತ್ತಿರು ವುದು ಬಹುದೊಡ್ಡ ಅಪಾಯಕಾರಿ ಬೆಳವಣಿಗೆಯಾ
ಗಿದೆ. ಕಲಬೆರಕೆ ಆಹಾರ ಪದಾರ್ಥಗಳನ್ನು ಆಕರ್ಷಕವಾಗಿ ಪ್ಯಾಕ್ ಮಾಡಿ, ಬಾಟಲಿಗಳಲ್ಲಿ ಸಂಗ್ರಹಿಸಿ, ಸುಂದರವಾದ ಲೇಬಲ್ ಅಂಟಿಸಿ, ‘ಗುಣಮಟ್ಟದ ಆಹಾರ’ ಎಂದು ಬರೆದು ಮಾರಾಟ ಮಾಡುವ ಹೊಸ ಕೈಗಾರಿಕೆಗಳು ಅಸ್ತಿತ್ವಕ್ಕೆ ಬರತೊಡಗಿವೆ. ಇಂಥ ವಸ್ತುಗಳನ್ನು ಮಾರಾಟ ಮಾಡುವ ಮಳಿಗೆಗಳು ಗಲ್ಲಿ ಗಲ್ಲಿಗಳಲ್ಲಿ ಹುಟ್ಟಿಕೊಂಡಿವೆ. ಸಾವಯವ ಉತ್ಪನ್ನಗಳು, ಶುದ್ಧ ಖಾದ್ಯ ತೈಲಗಳನ್ನು ‘ಸಾವಯವ ಕೃಷಿ ಪದ್ಧತಿಯಲ್ಲಿ ಉತ್ಪಾದಿಸಿದವು’ ಎಂದು ಪ್ರಚಾರ ಮಾಡಲಾಗುತ್ತದೆ. ಹಣ ಮಾಡುವ ದಾಹದಿಂದ ಕೆಲವರು ಇಂತಹ ಆಹಾರ ಪದಾರ್ಥಗಳನ್ನು ಸಾವಯವದ ಹೆಸರಿನಲ್ಲಿ ಮಾರಾಟ ಮಾಡುತ್ತಿರುವುದು ನೋವಿನ ಸಂಗತಿಯಾಗಿದೆ.
ಇತ್ತೀಚೆಗೆ ನಾನು ಉತ್ತರಪ್ರದೇಶದ ಕಾನ್ಪುರದ ರಾಷ್ಟ್ರೀಯ ಸಕ್ಕರೆ ಸಂಶೋಧನಾ ಸಂಸ್ಥೆಗೆ ಹೋಗಿದ್ದೆ. ಅಲ್ಲಿ ಜೇನುತುಪ್ಪ ಸಂಶೋಧನೆಯ ವಿಭಾಗವೂ ಇದೆ. ಕೃತಕವಾಗಿ ಜೇನುತುಪ್ಪವನ್ನೇ ಶುದ್ಧ ಎಂದು ಬಿಂಬಿಸಿ ಮಾರಾಟ ಮಾಡುವ ಉದ್ದಿಮೆಗಳ ದೊಡ್ಡ ಪಟ್ಟಿ ಅಲ್ಲಿಯ ಕಡತಗಳಲ್ಲಿ ಇತ್ತು. ಈ ಉದ್ದಿಮೆಗಳು ಜೇನುತುಪ್ಪ ಉತ್ಪಾದನೆಗೆ ಉಪಯೋಗಿಸುವ ಭೂಮಿಯ ಕ್ಷೇತ್ರದ ವಿವರ, ಜೇನುಹುಳುಗಳ ತಳಿಯ ವಿವರ, ಈ ಹುಳುಗಳು ಆಹಾರಕ್ಕಾಗಿ ಸಂಪರ್ಕಿಸುವ ಹೂವುಗಳ ವಿವರ ಕೇಳಿ, ಜೇನುತುಪ್ಪ ಉತ್ಪಾದಕರಿಗೆ ಸಂಸ್ಥೆ ಹಲವು ಬಾರಿ ಪತ್ರಗಳನ್ನು ಬರೆದು ವಿಚಾರಿಸಿದೆ. ಯಾವ ಉದ್ದಿಮೆಯೂ ಈ ಪತ್ರಗಳಿಗೆ ಉತ್ತರ ಕೊಟ್ಟಿಲ್ಲ. ಇನ್ನೂ ಅಚ್ಚರಿಯ ಸಂಗತಿ ಎಂದರೆ, ಈ ಸಂಸ್ಥೆಗಳಲ್ಲಿ ದಿನಕ್ಕೆ ಸರಾಸರಿ 3 ಸಾವಿರದಿಂದ 4 ಸಾವಿರ ಟನ್ ಜೇನುತುಪ್ಪ ಉತ್ಪಾದಿಸುವ ಘಟಕಗಳಿವೆ. ಜೇನುತುಪ್ಪವನ್ನು ಸಕ್ಕರೆ ಪಾಕದೊಂದಿಗೆ ಕಲಬೆರಕೆ ಮಾಡಲಾಗುತ್ತದೆ. ಅದನ್ನು ಸುಲಭವಾಗಿ ಕಂಡುಹಿಡಿಯಲು ಸಾಧ್ಯವಾಗದಂತೆ ಸಕ್ಕರೆ ಪಾಕವನ್ನು ತಯಾರಿಸಲಾಗುತ್ತದೆ. ಅವುಗಳಿಗೆ ಹಾನಿಕಾರಕ ರಾಸಾಯನಿಕಗಳನ್ನು ಸೇರಿಸುತ್ತಾರೆ. ಇಂಥ ಜೇನುತುಪ್ಪ ಆರೋಗ್ಯಕ್ಕೆ ಬಹಳ ಹಾನಿಕರ. ಕೋವಿಡ್– 19 ಸಂಕಷ್ಟದ ದಿನಗಳಲ್ಲಿ ನಕಲಿ ಜೇನುತುಪ್ಪದ ಉತ್ಪಾದನೆ ಹೆಚ್ಚಾಗಿತ್ತು. ಕೋವಿಡ್ ಸಂಕಟದ ಸಂದರ್ಭವನ್ನು ನಕಲಿ ಜೇನುತುಪ್ಪ ತಯಾರಿಸುವವರು ತಮ್ಮ ಲಾಭಕ್ಕೆ ಬಳಸಿಕೊಂಡದ್ದು ಒಂದು ಕ್ರೂರ ವ್ಯಂಗ್ಯ ಎನಿಸುತ್ತದೆ.
ಗುಣಮಟ್ಟದ ಆಹಾರ ಸೇವಿಸಬೇಕು, ಆರೋಗ್ಯ ಕಾಪಾಡಿಕೊಳ್ಳಬೇಕು ಎಂದು ಎಲ್ಲರೂ ಬಯಸುತ್ತಾರೆ. ನೋವಿನ ಸಂಗತಿ ಎಂದರೆ, ಖಾದ್ಯ ತೈಲಗಳು, ಹಾಲು ಮತ್ತು ಹಾಲಿನ ಉತ್ಪನ್ನಗಳು, ವಿವಿಧ ಧಾನ್ಯಗಳು ಮತ್ತು ಧಾನ್ಯಗಳ ಹಿಟ್ಟು, ಚಹಾ, ಕಾಫಿ, ಮಿಠಾಯಿ, ಮದ್ಯ, ಪಾನೀಯಗಳಲ್ಲಿ ಕಲಬೆರಕೆ ಮಾಡಿ ಧಾರಾಳವಾಗಿ ಮಾರಾಟ ಮಾಡಲಾಗುತ್ತಿದೆ.
ಬೆಳಗಾವಿಯ ಕುಂದಾ ತುಂಬಾ ಪ್ರಸಿದ್ಧ. ಬೆಳಗಾವಿಯನ್ನು ಕುಂದಾನಗರ ಎಂದೇ ಕರೆಯುತ್ತಾರೆ. ಇಲ್ಲಿಗೆ ಬಂದವರೆಲ್ಲ ಕುಂದಾ ಖರೀದಿಸದೆ ಮರಳುವುದಿಲ್ಲ. ಕುಂದಾದಲ್ಲಿಯೂ ಕೆಲವೆಡೆ ಕಲಬೆರಕೆ ನಡೆಯುತ್ತಿದೆ ಎಂಬ ಕೂಗು ಕೇಳಿಬರುತ್ತಿದೆ. ಗೋಕಾಕ್ ನಗರದ ಕರದಂಟಿನ ಕಥೆಯೂ ಇದೇ ಆಗಿದೆ. ಹಣ್ಣು, ತರಕಾರಿ ಬೇಗನೇ ಮಾಗುವಂತೆ ಮಾಡಲು ಮತ್ತು ಅವುಗಳ ಮೈಬಣ್ಣ ಆಕರ್ಷಕವಾಗಿ ಕಾಣುವಂತೆ ಪರಿವರ್ತಿಸಲು ರಾಸಾಯನಿಕಗಳನ್ನು ಬಳಸಲಾಗುತ್ತದೆ.
ಕಲಬೆರಕೆ ನಿಯಂತ್ರಣ ಕಾನೂನು ಜಾರಿಗೆ ಬಂದು ನೂರು ವರ್ಷಗಳು ಕಳೆದಿವೆ. ಕಲಬೆರಕೆಯ ನಿಯಂತ್ರಣ ಕಾನೂನು ಮೊದಲು 1923ರಲ್ಲಿ ಬ್ರಿಟಿಷ್ ಆಡಳಿತದಲ್ಲಿ ಜಾರಿಯಾಯಿತು. 1954ರಲ್ಲಿ ಭಾರತ ಸರ್ಕಾರವು ಕಾನೂನು ರಚಿಸಿತು. ಕಟ್ಟುನಿಟ್ಟಿನ ಕ್ರಮಗಳಿಲ್ಲದ್ದರಿಂದ ಕಲಬೆರಕೆ ಅತಿಯಾಗಿ ನಡೆಯುತ್ತಿದೆ. ಇದು ಹೊಟ್ಟೆ, ಹೃದಯ, ಕಿಡ್ನಿ ರೋಗಗಳಿಗೆ ಕಾರಣವಾಗಿದೆ.
ಕಲಬೆರಕೆಯ ವಿರುದ್ಧ ಸಂಘಟಿತ ಹೋರಾಟ ಗಳು ನಡೆಯುತ್ತಿಲ್ಲ. ಪ್ರಶ್ನಿಸುವ ಮನೋಭಾವ ಕ್ಷೀಣ
ವಾಗುತ್ತಿದೆ. ಜನರು ಎಚ್ಚೆತ್ತುಕೊಂಡು ನಕಲಿ ಆಹಾರ ವಸ್ತುಗಳ ಬಗ್ಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಬೇಕು ಮತ್ತು ಸಂಘಟಿತರಾಗಿ ಹೋರಾಟ ನಡೆಸಬೇಕು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.