ಹೆಸರು ಅಂಬಿಕಾಪುರ. ರಾಜ್ಯ ಛತ್ತೀಸಗಡ. ಊರಿನ ಕಸ ಸಂಗ್ರಹಿಸುವ ಐನೂರು ಮಹಿಳೆಯರನ್ನು ಜನ ಪ್ರೀತಿಯಿಂದ ‘ದೀದಿ’ (ಅಕ್ಕ) ಎಂದೇ ಕರೆಯುತ್ತಾರೆ. ಪ್ರತಿದಿನ ಬೆಳಿಗ್ಗೆ ಅಂಬಿಕಾಪುರದ 200 ಮನೆಗಳಿಗೆ ಭೇಟಿ ನೀಡಿ, ಬೇರ್ಪಡಿಸಿದ ಹಸಿ ಮತ್ತು ಒಣ ಕಸವನ್ನು ಸಂಗ್ರಹಿಸುವ ಇವರು, ಅದನ್ನು ಸೈಕಲ್ ರಿಕ್ಷಾಗಳಿಗೆ ಏರಿಸಿ, ಊರಿನಿಂದಾಚೆ ಸ್ಥಾಪಿಸಿರುವ ‘ಗಾರ್ಬೇಜ್ ಕ್ಲಿನಿಕ್’ಗಳಿಗೆ ತಲುಪಿಸುತ್ತಾರೆ. ಊರಿನ ಕಸಕ್ಕೆ ಮೋಕ್ಷ ನೀಡುತ್ತಾರೆ.
ಮನೆಬಾಗಿಲಿಗೆ ಬರುವ ದೀದಿಯರನ್ನು ಹಸನ್ಮುಖರಾಗಿ ಸ್ವಾಗತಿಸುವ ಮನೆಯ ಜನ, ಅವರ ಆರೋಗ್ಯ, ಸಂಬಳ, ಮಕ್ಕಳ ಕುರಿತು ವಿಚಾರಿಸಿಕೊಳ್ಳುತ್ತಾರೆ. ಬೇಕೆಂದಾಗ ಕೈಸಾಲ ನೀಡುತ್ತಾರೆ. ತಮ್ಮ ಮಕ್ಕಳ ಪುಸ್ತಕಗಳನ್ನು ದೀದಿಯರ ಮಕ್ಕಳಿಗೆ ಕೊಡುತ್ತಾರೆ. ದೀದಿಯರ ತಂಡದ ಮುಖ್ಯಸ್ಥೆ ಶಶಿ ತಂಗನ್‍ಪಾರ, ಎಲ್ಲ ಸಹೋದ್ಯೋಗಿಗಳಿಗೆ ಆರೋಗ್ಯ ವಿಮೆ ಮಾಡಿಸಿರುವುದಾಗಿ ಹೆಮ್ಮೆಯಿಂದ ಹೇಳುತ್ತಾರೆ.
ಹತ್ತು ವರ್ಷಗಳಿಂದ ಅಂಬಿಕಾಪುರದಲ್ಲಿ ಕಸ ವಿಲೇವಾರಿಯ ಸಮಸ್ಯೆ ತೀವ್ರವಾಗಿತ್ತು. ಕಸ ವಿಂಗಡಣೆಗೆ ಜನ ಸಹಕರಿಸುತ್ತಿರಲಿಲ್ಲ. ಬೀದಿ ಬದಿಯ ಕಸದ ತೊಟ್ಟಿಗೆ ಹಾಕುವಷ್ಟೂ ಶ್ರಮಪಡದೆ, ಕಸದ ಗಾಡಿ ಮನೆಯ ಬಳಿಯೇ ಬರಲಿ ಎಂದೇ ಕಾಯುತ್ತಿದ್ದರು. ನಗರದ 48 ವಾರ್ಡುಗಳಲ್ಲೂ ಖಾಸಗಿ ಸಂಸ್ಥೆಯವರು ಕಸ ಸಂಗ್ರಹ ಮಾಡುತ್ತಿದ್ದರೂ ಜನರ ಸಹಭಾಗಿತ್ವ ಇರಲಿಲ್ಲ. ಕಸ ಸುರಿಯಲು ಊರಿನಿಂದ ಹೊರಗೆ ಸ್ಥಾಪಿಸಿರುವ 15 ಎಕರೆ ಪ್ರತ್ಯೇಕ ಜಾಗವೇನೋ ಇತ್ತು. ಆದರೆ ವಿವಿಧ ಕಸಗಳಿಗೆ ಬೇಕಾದ ಸಾಲುಗಳಾಗಲೀ ಗುರುತಿಸಿದ ಜಾಗಗಳಾಗಲೀ ಇರಲಿಲ್ಲ ಎನ್ನುವ ಮುನಿಸಿಪಲ್ ಕಾರ್ಪೊರೇಷನ್‍ನ ಅಧಿಕಾರಿ ರಿತೇಶ್ ಸೈನಿ, ‘ತ್ಯಾಜ್ಯ ವಿಲೇವಾರಿಗೆ ಸಂಬಂಧಿಸಿದಂತೆ ವೈಜ್ಞಾನಿಕ ವಿಧಾನಗಳ ಕೊರತೆ ಇತ್ತು. ದೀದಿಯರು ಅಖಾಡಕ್ಕಿಳಿದ ಮೇಲೆ ಎಲ್ಲವೂ ಹದಕ್ಕೆ ಬಂತು’ ಎನ್ನುತ್ತಾರೆ.
2015ರಲ್ಲಿ ಸುರುಗುಜ ಜಿಲ್ಲೆಗೆ ಜಿಲ್ಲಾಧಿಕಾರಿಯಾಗಿ ಬಂದ ರಿತು ಸೇನ್, ಅಂಬಿಕಾಪುರ ಮುನಿಸಿಪಲ್ ಕಾರ್ಪೊರೇಷನ್‍ನ ಉಸ್ತುವಾರಿಯಲ್ಲಿ ‘ಕ್ಲೀನ್ ಅಂಬಿಕಾಪುರ್’ ಅಭಿಯಾನ ಪ್ರಾರಂಭಿಸಿಯೇ ಬಿಟ್ಟರು. ಅಭಿಯಾನದ ಅಂಗವಾಗಿ ಪ್ರತೀ ನಾಲ್ಕು ವಾರ್ಡಿಗೊಂದರಂತೆ ತಲೆ ಎತ್ತಿದ ಗಾರ್ಬೇಜ್ ಕ್ಲಿನಿಕ್‌ಗಳು (ಕಸ ಚಿಕಿತ್ಸಾಲಯ) ದೆಹಲಿಯ ಕಸ ವಿಲೇವಾರಿ ತಜ್ಞ ಶ್ರೀನಿವಾಸನ್ ಅವರ ನೇತೃತ್ವದಲ್ಲಿ ಘನ ಮತ್ತು ದ್ರವ ಕಸವನ್ನು ವ್ಯವಸ್ಥಿತವಾಗಿ ಸಂಗ್ರಹಿಸುವ ಯೋಜನೆ ರೂಪಿಸಿ ಜವಾಬ್ದಾರಿಯನ್ನು ಮಹಿಳಾ ತಂಡಕ್ಕೆ ವಹಿಸಿದವು.
ದೀದಿಯರ ಸೈಕಲ್‍ರಿಕ್ಷಾಗಳು ಬೆಳಿಗ್ಗೆ ಆರಕ್ಕೇ ರಸ್ತೆಗಿಳಿಯುತ್ತಿದ್ದಂತೆ ಕಸ ಸಂಗ್ರಹ– ವಿಲೇವಾರಿಯ ಹೊಸ ಚಕ್ರ ಸುತ್ತತೊಡಗಿ ಊರಿನ ಚಹರೆಯೇ ಬದಲಾಗತೊಡಗಿತು. ದುರ್ವಾಸನೆ ಬೀರುತ್ತಿದ್ದ ತಿಪ್ಪೆಗುಂಡಿಗಳು, ಕಸದ ತೊಟ್ಟಿಗಳು ಅಂದಂದೇ ಖಾಲಿಯಾಗತೊಡಗಿದವು. ಕೆಲಸ ಪ್ರಾರಂಭಿಸಿದ ಮೂರೇ ವರ್ಷಗಳಲ್ಲಿ ಕಸದ ಸರಿಯಾದ ನಿರ್ವಹಣೆಗಾಗಿ ಅಂಬಿಕಾಪುರವು ಫೈವ್ ಸ್ಟಾರ್ ರೇಟಿಂಗ್ ಪಡೆಯುವಲ್ಲಿ ಯಶಸ್ವಿಯಾಯಿತು. ರೇಟಿಂಗ್‍ಗಿಂತ ಹೆಚ್ಚಾಗಿ ನಗರದ ಜನರ ಗೌರವಕ್ಕೆ ಪಾತ್ರವಾಗುತ್ತಿರುವ ದೀದಿಯರ ಪ್ರಯತ್ನ ಊರಿನ ಸಮಸ್ತರಲ್ಲಿ ನೈರ್ಮಲ್ಯ ಮತ್ತು ಸೂಕ್ತ ಕಸ ವಿಲೇವಾರಿಯ ಬಗ್ಗೆ ಆಸ್ಥೆ ಮೂಡಿಸುವಲ್ಲಿ ಸಫಲವಾಗಿದೆ.
ವರ್ಷಕ್ಕೆ 18,000 ಮೆಟ್ರಿಕ್ ಟನ್ ಕಸ ಸಂಗ್ರಹಿಸುವ ದೀದಿಯರು ಪ್ರತೀ ತಿಂಗಳು ₹ 7 ಸಾವಿರದಿಂದ 8 ಸಾವಿರ ಆದಾಯ ಗಳಿಸುತ್ತಿದ್ದಾರೆ. ಅಂಬಿಕಾಪುರದ ಮಾದರಿಯನ್ನು ಅನುಸರಿಸಿದ ನಮ್ಮ ಹೆಮ್ಮೆಯ ಮೈಸೂರು, ರಾಜ್‍ಕೋಟ್, ಸೂರತ್, ಇಂದೋರ್ ಮತ್ತು ನವಿ ಮುಂಬೈಗಳು ಈಗಾಗಲೇ ಫೈವ್‍ಸ್ಟಾರ್ ರೇಟಿಂಗ್ ಗಳಿಸಿ ಇತರ ನಗರಗಳಿಗೆ ಮಾದರಿಯಾಗಿವೆ. ದೇಶದ ಇತರ 65 ನಗರಗಳು 3 ನಕ್ಷತ್ರದ ಶ್ರೇಣಿ ಗಳಿಸಿವೆ ಮತ್ತು 70 ನಗರಗಳು ಸಿಂಗಲ್ ಸ್ಟಾರ್ ಗಳಿಸಿ ಮುಂದಿನ ದಿನಗಳಲ್ಲಿ ಹೆಚ್ಚಿನ ಕೆಲಸ ಮಾಡುವ ನಿರೀಕ್ಷೆ ಹುಟ್ಟಿಸಿವೆ.
ದೇಶದ ಎಲ್ಲಾ ಮಹಾನಗರಗಳಲ್ಲಿ ಕಸ ಸಂಗ್ರಹ ಮತ್ತು ವಿಲೇವಾರಿಯದ್ದೇ ದೊಡ್ಡ ಸಮಸ್ಯೆ. ಹಸಿ ಕಸ, ಒಣ ಕಸ, ಪ್ಲಾಸ್ಟಿಕ್, ಇ-ತ್ಯಾಜ್ಯ, ಹಳೆಯ ಕಟ್ಟಡಗಳ ಧ್ವಂಸದ ಘನ ಕಸ, ಚರಂಡಿ, ಗಟಾರಗಳಿಂದ ತೆಗೆದದ್ದು, ಪೇಪರ್, ಬೀಡಿ, ಸಿಗರೇಟು, ಪ್ಯಾಕಿಂಗ್ ಮೆಟೀರಿಯಲ್ ಹೀಗೆ ಹತ್ತು ಹಲವು ಬಗೆಯ ಕಸವನ್ನು ವಿಂಗಡಿಸಿ, ವಿಲೇವಾರಿ ಮಾಡುವುದು, ಆಸ್ಪತ್ರೆ– ರೈಲು ನಿಲ್ದಾಣ, ಬಸ್ ನಿಲ್ದಾಣಗಳಲ್ಲಿ ಸಂಗ್ರಹವಾಗುವುದನ್ನು ಇನ್ಸಿನರೇಟರ್‌ಗೆ ಹಾಕಿ ಸುಡುವುದು ಎಲ್ಲವನ್ನೂ ನಿರ್ವಹಿಸುವ ಜವಾಬ್ದಾರಿಯನ್ನು ಮುನಿಸಿಪಲ್ ಸಂಸ್ಥೆಗಳಿಗೆ ವಹಿಸಲಾಗಿದೆ.
ಕೆಲವು ನಗರಗಳಲ್ಲಿ ಸಾರ್ವಜನಿಕರು, ಸಂಘ ಸಂಸ್ಥೆಗಳ ಸಹಭಾಗಿತ್ವದಿಂದ ಕಸದ ವಿಲೇವಾರಿ ಸಮರ್ಪಕವಾಗಿ ಜರುಗುತ್ತಿದೆ. ಸಂಗ್ರಹಿಸಿದ ಘನ ಕಸವನ್ನು ಭೂಭರ್ತಿ ಮಾಡದೆ ಮರುಬಳಕೆಗೆ ಯೋಗ್ಯವೆನಿಸುವಂತೆ ಮಾಡುವುದೇ ಸದ್ಯದ ಸವಾಲು.
ಅದಕ್ಕೆ ಪರಿಹಾರವೆಂಬಂತೆ, ಮದ್ರಾಸ್ ಐಐಟಿ ದಿನಕ್ಕೆ ಒಂದು ಟನ್ ಘನ ಕಸವನ್ನು ಆವಿ ರೂಪದ ಶಕ್ತಿಯನ್ನಾಗಿ ಪರಿವರ್ತಿಸುವ ರೋಟರಿ ಫರ್ನೇಸ್ ಘಟಕವನ್ನು ಸಿದ್ಧಪಡಿಸಿ ಇತ್ತೀಚೆಗೆ ತಿರುಚಿರಾಪಳ್ಳಿ ನಗರದ ಬಿಎಚ್‍ಇಎಲ್ ಕ್ಯಾಂಪಸ್‍ನಲ್ಲಿ ಸ್ಥಾಪಿಸಿ ಯಶಸ್ವಿ ಕಾರ್ಯಾರಂಭ ಮಾಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.