ರಾಜ್ಯದ ಮೂರು ವಿಧಾನಸಭಾ ಕ್ಷೇತ್ರಗಳಿಗೆ ನಡೆಯುತ್ತಿರುವ ಉಪಚುನಾವಣೆಯ ಅಂತಿಮ ಫಲಿತಾಂಶ ಏನೇ ಆಗಬಹುದು, ಆದರೆ ಈ ಕ್ಷೇತ್ರಗಳ ಅಭ್ಯರ್ಥಿಗಳ ಪರವಾಗಿ ನಡೆಯುತ್ತಿರುವ ಪ್ರಚಾರದ ವೈಖರಿಯನ್ನು ಸೂಕ್ಷ್ಮವಾಗಿ ಗಮನಿಸಿದರೆ, ಕರ್ನಾಟಕದ ರಾಜಕೀಯವು ತನ್ನ ಪಾರಂಪರಿಕ ಮೌಲ್ಯಗಳನ್ನು ಕಳೆದುಕೊಂಡಿರುವುದು ಸ್ಪಷ್ಟವಾಗಿ ಗೋಚರಿಸುತ್ತದೆ. ಕುಟುಂಬ ರಾಜಕಾರಣ ಮತ್ತು ವಂಶಾಡಳಿತದ ಕಲ್ಪನೆಗಳನ್ನು ರಾಜಕೀಯ ಪಕ್ಷಗಳು ತಮಗೆ ಬೇಕಾದಂತೆ ಹಿಗ್ಗಿಸಿಕೊಳ್ಳುವ ನಡೆಯು ಮೌಲ್ಯಗಳ ಅಧಃಪತನದ ಸಂಕೇತವಾಗಿ ಕಾಣುತ್ತದೆ. ರಾಜ್ಯ ಹಾಗೂ ರಾಷ್ಟ್ರದ ರಾಜಕಾರಣವನ್ನು ಹತ್ತಿರದಿಂದ ಅವಲೋಕಿಸಿದವರಿಗೆ, ಇಂತಹ ಸ್ಥಿತಿಯು ಸ್ಪಷ್ಟವಾಗಿ ತಿಳಿಯುತ್ತದೆ.
ಅಜ್ಜ- ಅಪ್ಪ- ಮಗ- ಹೆಂಡತಿ- ಸೊಸೆ- ಮೊಮ್ಮಗ- ಮರಿಮಗ ಹೀಗೆ ವಿಸ್ತರಿಸುತ್ತಲೇ ಹೋಗುವ ಊಳಿಗಮಾನ್ಯ ಧೋರಣೆಯ ರಾಜಕಾರಣವು ಪ್ರಜಾಪ್ರಭುತ್ವದ ಮುನ್ನಡೆಯ ಹಾದಿಯಲ್ಲಿ ಸೃಷ್ಟಿಸುತ್ತಿರುವ ಹೊಂಡಗಳನ್ನು ವರ್ತಮಾನದ ಯುವಪೀಳಿಗೆಯಾದರೂ ಗುರುತಿಸಬೇಕಾದದ್ದು ಅನಿವಾರ್ಯ. ಈ ಸರಪಳಿಯನ್ನು ಪ್ರಜಾಸತ್ತಾತ್ಮಕ ಭಾರತ ಎಂದೋ ತುಂಡರಿಸಬೇಕಿತ್ತು. ಆದರೆ ಮುಖ್ಯವಾಹಿನಿಯ ಯಾವುದೇ ರಾಜಕೀಯ ಪಕ್ಷದಲ್ಲೂ ಈ ರೀತಿಯ ಆಲೋಚನೆ ಸಹ ಸುಳಿಯದಿರುವುದು ವರ್ತಮಾನದ ದುರಂತಗಳಲ್ಲಿ ಒಂದು.
ರಾಜಕೀಯ ಪ್ರವೇಶವು ಪ್ರತಿ ವ್ಯಕ್ತಿಯ ಸಾಂವಿಧಾನಿಕ ಹಕ್ಕು. ಅಧಿಕಾರ ಪಡೆಯುವುದು ಸಹ ಪ್ರಜಾಸತ್ತಾತ್ಮಕ ಹಕ್ಕು. ಆದರೆ ಅಧಿಕಾರ ರಾಜಕಾರಣವನ್ನು ಎಂಟೂ ದಿಕ್ಕುಗಳಿಂದ ಆವರಿಸಿಕೊಳ್ಳುವ ಸ್ವಹಿತಾಸಕ್ತಿಯ ರಾಜಕೀಯ ತಂತ್ರಗಾರಿಕೆಯು ಈ ಸಾಂವಿಧಾನಿಕ ಹಕ್ಕುಗಳ ಪಾವಿತ್ರ್ಯವನ್ನು ಹಾಳುಗೆಡವುತ್ತದೆ. ಈ ಸೂಕ್ಷ್ಮವನ್ನು ಯುವ ತಲೆಮಾರು ಗ್ರಹಿಸಬೇಕಿದೆ.
ಸಂಡೂರು, ಚನ್ನಪಟ್ಟಣ ಮತ್ತು ಶಿಗ್ಗಾವಿಯಲ್ಲಿ ನಡೆಯುತ್ತಿರುವ ಉಪಚುನಾವಣೆಯಲ್ಲಿ ರಾಜಕೀಯ ನಾಯಕರ ಅಟಾಟೋಪವನ್ನು ಗಮನಿಸಿದರೆ, ಅಲ್ಲಿ ‘ಮತದಾರ’ ಎಂದು ಕರೆಯಲಾಗುವ ಬಡಪಾಯಿಯ ಅಸ್ತಿತ್ವವೇ ಮಾಯವಾಗಿರುವುದನ್ನು ಕಾಣಬಹುದು. ಮೂರೂ ಕ್ಷೇತ್ರಗಳು ‘ಪ್ರತಿಷ್ಠಿತ’ ಎನಿಸಿಕೊಂಡಿರುವುದು ಅಲ್ಲಿನ ಸಮಾಜಗಳು, ಸಮುದಾಯಗಳು ಎದುರಿಸುತ್ತಿರುವ ಜ್ವಲಂತ ಸಮಸ್ಯೆಗಳ ಕಾರಣಕ್ಕಲ್ಲ. ಬದಲಾಗಿ, ಈ ಮೂರೂ ಕ್ಷೇತ್ರಗಳಲ್ಲಿ ಒಂದೊಂದು ಪ್ರಭಾವಿ ಕುಟುಂಬದ ಭವಿಷ್ಯ ಅಡಗಿದೆ. ಇಲ್ಲಿ ಮತದಾರರ ಕೃಪೆಯಿಂದ ಒಂದು ಅಡಿಗಲ್ಲು ಇಡುವುದಕ್ಕೆ ಸಾಧ್ಯವಾದರೂ, ಅದು ಮುಂದಿನ ಎರಡು– ಮೂರು ದಶಕಗಳ ಕಾಲ ಕುಟುಂಬಗಳ ರಾಜಕೀಯ ಸಾಮ್ರಾಜ್ಯದ ವಿಸ್ತರಣೆಗೆ ತಳಹದಿಯಾಗಲಿದೆ. ಇದರ ಮತ್ತೊಂದು ಆಯಾಮವನ್ನು ಗಮನಿಸುವುದಾದರೆ, ಈ ವಿಸ್ತರಿಸಲ್ಪಡುವ ಸಾಮ್ರಾಜ್ಯದಲ್ಲಿ ಒಂದು ಹೊಸ ಪೀಳಿಗೆಯು ರಾಜಕೀಯ ಅಸ್ತಿತ್ವವನ್ನೇ ಕಾಣಲಾಗುವುದಿಲ್ಲ ಎನ್ನುವುದೂ ಅಷ್ಟೇ ಮುಖ್ಯವಾಗುತ್ತದೆ.
ಈ ಕ್ಷೇತ್ರಗಳ ಪ್ರಚಾರದಲ್ಲಿ ಢಾಳಾಗಿ ಕಾಣುವ ವಾಸ್ತವ ಎಂದರೆ, ರಾಜಕೀಯ ನಾಯಕರ ಭಾಷಣಗಳಲ್ಲಿ ‘ಜನ’ ಎಂದು ಕರೆಯಲಾಗುವ ಮತದಾರ ಮಾಯವಾಗಿರುವುದು. ಈ ಜನರ ಪೈಕಿ ಸಮಾಜದ ಕಟ್ಟಕಡೆಯ ವ್ಯಕ್ತಿಯ ಸುಳಿವೂ ಕಾಣದಂತೆ, ಈ ಸಮಾಜವು ನಿತ್ಯ ಎದುರಿಸುತ್ತಿರುವ ನಿರುದ್ಯೋಗ, ಬೆಲೆ ಏರಿಕೆ, ಅಭದ್ರತೆ, ಅಪೌಷ್ಟಿಕತೆಯಂತಹ ಅಸಮಾನತೆಯ ವಾಸ್ತವಗಳನ್ನು ಮರೆತು ರಾಜಕೀಯ ನಾಯಕರು ವ್ಯಕ್ತಿಕೇಂದ್ರಿತ ರಾಜಕಾರಣದಲ್ಲಿ ತೊಡಗಿರುವುದು ದುರಂತವೇ ಸರಿ.
‘ನನ್ನ ಕಟ್ಟಕಡೆಯ ಉಸಿರಿರುವವರೆಗೂ ಈ ಕ್ಷೇತ್ರದ ಜನರ ಏಳಿಗೆಗಾಗಿ ಶ್ರಮಿಸುತ್ತೇನೆ’ ಎಂಬ ಭಾವನಾತ್ಮಕ ಘೋಷಣೆಗಳು ವರ್ತಮಾನದ ಪ್ರಜಾಪ್ರಭುತ್ವದಲ್ಲಿ ಕ್ಲೀಷೆಗಳಾಗಿ ಪರಿಣಮಿಸಿವೆ. ಏಕೆಂದರೆ ಮತದಾರರು ಮಹತ್ವಾಕಾಂಕ್ಷೆಗಳೊಂದಿಗೆ ಚಲಾಯಿಸುವ ಮತಗಳನ್ನು ಪಕ್ಷಾಂತರದ ಮೂಲಕ ಅಪಮೌಲ್ಯಗೊಳಿಸಲಾಗುತ್ತದೆ.
ಈ ಅಪಮೌಲ್ಯೀಕರಣಕ್ಕೆ ಪಕ್ಷಾಂತರ ಎಂಬ ಪಿಡುಗು ಕಾರಣವಾದರೂ, ಇಂದಿನ ರಾಜಕೀಯ ಪರಿಭಾಷೆಯಲ್ಲಿ ಇದನ್ನು ‘ಮರಳಿ ತವರಿಗೆ’ ಎಂದು ವ್ಯಾಖ್ಯಾನಿಸಬಹುದಾಗಿದೆ. ತಮ್ಮ ರಾಜಕೀಯ ಅಸ್ತಿತ್ವವನ್ನು ಕಾಪಾಡಿಕೊಳ್ಳುವ ಸಲುವಾಗಿ ತತ್ವ, ಸಿದ್ಧಾಂತ ಮತ್ತು ರಾಜಕೀಯ ಮೌಲ್ಯಗಳಿಗೆ ತಿಲಾಂಜಲಿ ನೀಡಿರುವ ರಾಜಕೀಯ ನಾಯಕರು, ಸ್ವ-ಹಿತಾಸಕ್ತಿಯ ರಾಜಕೀಯ ನಡೆಯನ್ನು ವೈಭವೀಕರಿಸುವ ಸಲುವಾಗಿ ‘ಜನಸೇವೆ’ ಎಂಬ ಉದಾತ್ತ ಪರಿಕಲ್ಪನೆಯನ್ನೂ ಅಪಭ್ರಂಶಗೊಳಿಸಿದ್ದಾರೆ.
ಶಾಸನಸಭೆಯನ್ನು ಪ್ರವೇಶಿಸುವ ಆತುರದಲ್ಲಿ ಇತರ ಎಲ್ಲ ಪ್ರಜಾಸತ್ತಾತ್ಮಕ ಮೌಲ್ಯಗಳನ್ನೂ ಕಡೆಗಣಿಸುತ್ತಾ ಮುನ್ನಡೆಯುವ ಈ ರಾಜಕೀಯ ಗಜನಡೆಗೆ ಸಿಲುಕಿ ನಲುಗುತ್ತಿರುವುದು ಕರ್ನಾಟಕದ ಪೇಟೆಂಟ್ ಎನ್ನಬಹುದಾದ ‘ಮೌಲ್ಯಾಧಾರಿತ ರಾಜಕೀಯ’. ಈ ಬಲಿಪೀಠವನ್ನೇ ಅಧಿಕಾರ ಪೀಠವನ್ನಾಗಿ ಪರಿಭಾವಿಸಲು ಕೌಟುಂಬಿಕ ಸಂಬಂಧಗಳು ನೆರವಾಗುತ್ತಿರುವುದು ಇನ್ನೂ ದೊಡ್ಡ ದುರಂತ.
ತನ್ನ ಈ ವಿಕೃತ ಸ್ವರೂಪವನ್ನು ಉಳಿಸಿಕೊಳ್ಳುವ ಸಲುವಾಗಿಯೇ ಅಧಿಕಾರ ರಾಜಕಾರಣವು ವ್ಯಕ್ತಿನಿಂದನೆ ಮತ್ತು ದೂಷಣೆಗಳನ್ನೇ ಪ್ರಚಾರ ಸಾಮಗ್ರಿಯಾಗಿ ಬಳಸಿಕೊಳ್ಳುವ ಹೊಸ ಪರಂಪರೆಗೆ ಎಡೆಮಾಡಿ
ಕೊಟ್ಟಿರುವಂತಿದೆ. ಇಲ್ಲಿ ಕಡೆಗಣಿಸಲಾಗುವ ‘ಜನಪರ ಕಾಳಜಿ’ ಎಂಬ ಉದಾತ್ತ ಕಲ್ಪನೆಗೆ ಮರುಹುಟ್ಟು ನೀಡುವುದಾದರೂ ಹೇಗೆ? ಈ ಪ್ರಶ್ನೆಗೆ ಉತ್ತರ ಶೋಧಿಸುತ್ತಲೇ, ಮೌಲ್ಯದ ಅವನತಿಯನ್ನು ತಡೆಗಟ್ಟುವ ದಿಸೆಯಲ್ಲಿ ಗಂಭೀರವಾಗಿ ಆಲೋಚನೆ ಮಾಡಬೇಕಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.