ಶ್ರೀಗುರು
ರಾಜ್ಯದ ಬಹುತೇಕ ಕಡೆ ಮುಂಗಾರು ಮಳೆ ಸುರಿಯುತ್ತಿದೆ. ಅದರ ಜೊತೆಗೆ ಮಳೆನೀರಿನ ಸಂಗ್ರಹದ ಪಾಠ-ಪ್ರಾತ್ಯಕ್ಷಿಕೆಗಳು ಜೋರಾಗಿ ನಡೆದಿವೆ. ಶಾಲೆ, ಮಠ, ಸರ್ಕಾರಿ ಕಚೇರಿಗಳು ಮಳೆನೀರು ಸಂಗ್ರಹದ ವಿಚಾರದಲ್ಲಿ ತಮ್ಮ ಯಶೋಗಾಥೆಗಳನ್ನು ಜನರಿಗೆ ತಲುಪಿಸುತ್ತಿವೆ. ಆದರೆ ಹವಾಮಾನ ಇಲಾಖೆಯ ಮಾಹಿತಿ ಪ್ರಕಾರ ಮಳೆನೀರು ಸಂಗ್ರಹದ ವಿಚಾರದಲ್ಲಿ ದೇಶದ ಸಾಧನೆ ದೊಡ್ಡದೇನೂ ಇಲ್ಲ. ಸರಾಸರಿ 1,200 ಮಿ.ಮೀ. ಮಳೆ ಬೀಳುವ ನಮ್ಮ ದೇಶದಲ್ಲಿ ಮಳೆನೀರು ಸಂಗ್ರಹ ಮಾಡುತ್ತಿರುವ ಪ್ರಮಾಣ ಒಟ್ಟು ಮಳೆಯ ಶೇಕಡ 8ರಷ್ಟು ಮಾತ್ರ.
ಬೆಂಗಳೂರಿನಲ್ಲಿ ವಾರ್ಷಿಕ ಸುರಿಯುವ ಮಳೆಯ ಪ್ರಮಾಣದ ಅರ್ಧದಷ್ಟನ್ನು ಸಂಗ್ರಹಿಟ್ಟುಕೊಂಡರೆ ವರ್ಷವಿಡೀ ಬೇಕಾಗುವಷ್ಟು ನೀರು ಪೂರೈಸಬಹುದು ಎಂಬ ಲೆಕ್ಕಾಚಾರ ಇದೆ. ಬೇಸಿಗೆ ಬಂದಾಕ್ಷಣ ನೀರಿನ ಕೊರತೆ ಎದುರಿಸುವ ಬೆಂಗಳೂರಿನಲ್ಲಿ ಮಳೆನೀರಿನ ಸಂಗ್ರಹದ ಅಗತ್ಯ ಹೆಚ್ಚಾಗಿರುವುದರಿಂದ ಈ ವಿಚಾರದಲ್ಲಿ ಕಾನೂನು ರೂಪಿಸಲಾಗಿದೆ. ಕಾನೂನು ಪಾಲಿಸದ ಮನೆಗಳಿಗೆ ದಂಡ ಹಾಕಲಾಗಿದ್ದು ಸಂಗ್ರಹಗೊಂಡಿರುವ ಮೊತ್ತ ಹಲವು ಕೋಟಿಗಳನ್ನು ದಾಟಿದೆ ಎಂದು ವರದಿಗಳು ಹೇಳುತ್ತವೆ.
ನಿಯಮಗಳ ಪ್ರಕಾರ, ಬೆಂಗಳೂರಿನಲ್ಲಿ 2,400 ಚದರ ಅಡಿ ಮತ್ತು ಅದಕ್ಕೂ ಹೆಚ್ಚಿನ ವಿಸ್ತೀರ್ಣವುಳ್ಳ ಪ್ರತಿ ಮನೆಗೆ ಮಳೆನೀರು ಸಂಗ್ರಹದ ವ್ಯವಸ್ಥೆ ಇರಲೇಬೇಕು. ಹೊಸದಾಗಿ ನಿರ್ಮಿಸಲಾಗುತ್ತಿರುವ ಸಾವಿರದ ಇನ್ನೂರು ಚದರ ಅಡಿ ವಿಸ್ತೀರ್ಣದ ಮನೆಗಳಲ್ಲೂ ಮಳೆನೀರು ಸಂಗ್ರಹದ ವ್ಯವಸ್ಥೆ ಇರಲೇಬೇಕೆಂಬ ಕಾನೂನು ಇದೆ. ಆದರೆ ಸರಿಯಾಗಿ ಪಾಲಿಸುವವರು ಇಲ್ಲ. ಬೆಂಗಳೂರು ನಗರದ 20 ಲಕ್ಷ ಮನೆಗಳು ಈ ಕಾನೂನಿನ ವ್ಯಾಪ್ತಿಗೆ ಬರುತ್ತವೆ. ಕಾನೂನು ಜಾರಿಯಾದಾಗಿನಿಂದ ಇಲ್ಲಿಯವರೆಗೆ ಕೇವಲ ಎರಡು ಲಕ್ಷ ಮನೆಗಳು ಮಳೆನೀರು ಸಂಗ್ರಹದ ವ್ಯವಸ್ಥೆ ಅಳವಡಿಸಿಕೊಂಡಿವೆ.
ನಗರಕ್ಕೆ ವರ್ಷಕ್ಕೆ 19 ಟಿಎಂಸಿ ಅಡಿ ಕಾವೇರಿ ನೀರು ದೊರಕುತ್ತಿದೆ. ಬೆಂಗಳೂರಿನಲ್ಲಿ ವಾರ್ಷಿಕ 750ರಿಂದ 800 ಮಿ.ಮೀ. ಮಳೆಯಾಗುತ್ತದೆ. ಮಳೆನೀರು ಸಂಗ್ರಹದ ವ್ಯವಸ್ಥೆಯನ್ನು ಸರಿಯಾಗಿ ಅಳವಡಿಸಿಕೊಂಡರೆ 15 ಟಿಎಂಸಿ ಅಡಿಯಷ್ಟು ನೀರನ್ನು ಸಂಗ್ರಹಿಸಿಟ್ಟುಕೊಳ್ಳುವ ಅವಕಾಶ ಇದೆ. ಆದರೆ ಅಂಥ ವ್ಯವಸ್ಥೆ ಸದ್ಯಕ್ಕೆ ಬೆಂಗಳೂರಿನಲ್ಲಿ ಇಲ್ಲ. ನೀರಿನ ಕೊರತೆ ಎದುರಾದಾಗಲೆಲ್ಲ ನದಿ ತಿರುವಿನ ಸಾವಿರಾರು ಕೋಟಿ ರೂಪಾಯಿ ವೆಚ್ಚದ ಯೋಜನೆಗಳು ಅಥವಾ ಅಣೆಕಟ್ಟು ನಿರ್ಮಿಸುವುದರ ಬಗ್ಗೆ ಮಾತನಾಡುವ ಸರ್ಕಾರ, ಕಡಿಮೆ ಖರ್ಚಿನಲ್ಲಿ ಮುಗಿಯುವ, ಅನಾಯಾಸವಾಗಿ ದೊರಕುವ ಮಳೆನೀರಿನ ಬಗ್ಗೆ ಅಷ್ಟಾಗಿ ತಲೆಕೆಡಿಸಿಕೊಳ್ಳುವುದಿಲ್ಲ.
ನಗರದ ಜನರ ನೀರಿನ ಬವಣೆಯನ್ನು ಕಡಿಮೆ ಮಾಡಲು ನಿರಂತರವಾಗಿ ಪ್ರಯತ್ನಿಸುವ ಜಲಮಂಡಳಿ, ಮಳೆನೀರು ಸಂಗ್ರಹಕ್ಕೆ ಇಂಗು ಗುಂಡಿಗಳನ್ನು ಹೇಗೆ ನಿರ್ಮಾಣ ಮಾಡುವುದು ಎಂಬುದನ್ನು ನಿರ್ಮಿಸಿ ತೋರಿಸುತ್ತಿದೆ. ಬೆಂಗಳೂರಿನಾದ್ಯಂತ ಒಂದು ಸಾವಿರ ಇಂಗು ಗುಂಡಿಗಳನ್ನು ಈಗಾಗಲೇ ನಿರ್ಮಿಸಿರುವ ಬೆಂಗಳೂರು ಜಲಮಂಡಳಿಯು ಮುಂದಿನ ಎರಡು ತಿಂಗಳಲ್ಲಿ ಮತ್ತೊಂದು ಸಾವಿರ ಇಂಗು ಗುಂಡಿಗಳನ್ನು ನಿರ್ಮಿಸುವ ಕೆಲಸಕ್ಕೆ ಕೈಹಾಕಿದೆ.
ಮಳೆ ನೀರಿನ ಸಂಗ್ರಹವನ್ನು ಪರಿಣಾಮಕಾರಿಯಾಗಿ ಮಾಡಬೇಕಾದ ಅನಿವಾರ್ಯ ಎಲ್ಲ ದೊಡ್ಡ ನಗರಗಳಿಗೆ ಇದೆ. ಮಳೆನೀರಿನ ಸಂಗ್ರಹ ಮಾಡದ ಮನೆಗಳ ಮಾಲೀಕರಿಗೆ ಮೊದಲ ಮೂರು ತಿಂಗಳು ನೀರಿನ ಬಿಲ್ ಎಷ್ಟು ಇರುತ್ತದೋ ಅದರ ಶೇಕಡ 50ರಷ್ಟು ಮತ್ತು ನಂತರದ ಮೂರು ತಿಂಗಳಲ್ಲಿ ಶೇಕಡ 100ರಷ್ಟು ದಂಡ ವಿಧಿಸಲು ಅವಕಾಶವಿದೆ. ಇಷ್ಟಾದರೂ ಹೆದರದ ಜನ ತಮ್ಮ ನಿವಾಸಗಳಲ್ಲಿ ಮಳೆನೀರು ಸಂಗ್ರಹಕ್ಕೆ ವ್ಯವಸ್ಥೆಯನ್ನು ಮಾಡಿಕೊಂಡಿಲ್ಲ.
ಪರಿಸ್ಥಿತಿ ಹೀಗಿರುವಾಗ, ಮಳೆನೀರು ಸಂಗ್ರಹಕ್ಕೆ ವ್ಯವಸ್ಥೆ ಮಾಡಿಕೊಳ್ಳಿ ಎಂದು ಅಧಿಕಾರಿಗಳು ಮನೆ ಮಾಲೀಕರಿಗೆ ಹೇಳಿದರೆ ‘ನೀವು ಹಾಕುವ ದಂಡ ಕಟ್ಟಲು ನಾವು ರೆಡಿ ಸರ್. ನಿಮ್ಮ ಕಟ್ಟಡಗಳಲ್ಲೇ ಈ ವ್ಯವಸ್ಥೆ ಇಲ್ಲವಲ್ಲ? ನೀವು ದಂಡ ಕಟ್ಟುತ್ತೀರಾ’ ಎಂದು ಕಿಚಾಯಿಸುವಮಟ್ಟಿಗೆ ಪರಿಸ್ಥಿತಿ ಕೈಮೀರಿದೆ.
ನಮ್ಮಲ್ಲಿ ಮಳೆನೀರು ಸಂಗ್ರಹವನ್ನು ಸಮರ್ಥವಾಗಿ ಅನುಷ್ಠಾನಗೊಳಿಸಲು, ನಿರ್ವಹಿಸಲು ಪ್ರತ್ಯೇಕ ವಿಭಾಗ ಇಲ್ಲ. ಹಳೆಯ ಕಟ್ಟಡಗಳಲ್ಲಿ ವ್ಯವಸ್ಥೆ ಇಲ್ಲದಿದ್ದರೆ ದಂಡ ವಿಧಿಸಬೇಕೆಂಬ ನಿಯಮವಿದೆ. ಆದರೆ ಪ್ರತಿ ಮನೆಯನ್ನೂ ಪರಿಶೀಲಿಸಲು ಮಾನವ ಸಂಪನ್ಮೂಲವಿಲ್ಲ ಎಂಬುದು ಅಧಿಕಾರಿಗಳ ಮಾತು. ಸಾರ್ವಜನಿಕರಿಗೆ ಮಳೆನೀರು ಸಂಗ್ರಹದ ಕುರಿತು ತಿಳಿವಳಿಕೆ ಮೂಡಿಸಲು ಥೀಮ್ ಪಾರ್ಕ್‌ಗಳ ಅವಶ್ಯಕತೆ ಇದೆ. ಬೆಂಗಳೂರು ಜಲಮಂಡಳಿಯು ಜಯನಗರ 5ನೇ ಬ್ಲಾಕ್‌ನಲ್ಲಿ ಸರ್ ಎಂ. ವಿಶ್ವೇಶ್ವರಯ್ಯ ಹೆಸರಿನ ಮಳೆನೀರಿನ ಸಂಗ್ರಹದ ಥೀಮ್ ಪಾರ್ಕನ್ನು 2011ರಲ್ಲಿಯೇ ನಿರ್ಮಿಸಿದೆ. ಮಳೆನೀರು ಸಂಗ್ರಹ ಘಟಕವು ಹೇಗೆ ಕೆಲಸ ಮಾಡುತ್ತದೆ ಎಂಬುದನ್ನು ಇಲ್ಲಿ ಪ್ರಾಯೋಗಿಕವಾಗಿ ನೋಡಬಹುದು.
ಬೆಂಗಳೂರಿನ ಜಲಮಂಡಳಿಯು ನಗರದ ಅಂತರ್ಜಲ ಹೆಚ್ಚಿಸಲು ಕಳೆದ ತಿಂಗಳೊಂದರಲ್ಲಿ ಮಳೆನೀರು ಸಂಗ್ರಹದ 986 ಇಂಗು ಗುಂಡಿಗಳನ್ನು ನಿರ್ಮಿಸಿದೆ. ಗ್ರಾಮೀಣ, ಪಟ್ಟಣ, ಅರೆಪಟ್ಟಣ ಪ್ರದೇಶಗಳಲ್ಲೂ ನೀರಿನ ಕೊರತೆ ಎದುರಾಗುತ್ತಿದೆ. ಮಳೆನೀರಿನ ಸಂಗ್ರಹದ ಕೆಲಸಗಳು ಎಲ್ಲ ಕಡೆ ವ್ಯಾಪಕವಾಗಿ ನಡೆಯಬೇಕು. ನೀರು ಸಿಗಲಿಲ್ಲ ಎಂದು ಕೊಳವೆಬಾವಿಗಳನ್ನು ಮುಚ್ಚುವ ಬದಲು ಅವನ್ನೇ ಇಂಗು ಗುಂಡಿ ರೂಪದಲ್ಲಿ ಬಳಸಿದರೆ ನೀರಿನ ಸಂಗ್ರಹಣೆಯಾಗುತ್ತದೆ.
ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯ ಅಡಿ ಬರಡು ಗುಡ್ಡದ ಮೇಲೆ 40,000 ತೋಡುಗಳನ್ನು ತೋಡಿ ಮಳೆನೀರು ಸಂಗ್ರಹಿಸಿ, ಕೃಷಿ ಮಾಡಿ ಲಕ್ಷಾಧಿಪತಿಗಳಾದ ಮಹಾರಾಷ್ಟ್ರದ ಹಿವರೇ ಬಜಾರ್‌ನ ರೈತರು ಇಡೀ ದೇಶಕ್ಕೆ ಮಾದರಿಯಂತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.