ADVERTISEMENT

ಸಂಗತ | ಅಂಗನವಾಡಿ: ಯಾಕೀ ಭಾನಗಡಿ?

ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ದಿಸೆಯಲ್ಲಿ ಭದ್ರ ಬುನಾದಿಯಾದ ಶಾಲಾಪೂರ್ವ ಶಿಕ್ಷಣದ ಮಹತ್ವವನ್ನು ಅರಿಯಬೇಕಾಗಿದೆ

ಪ್ರಕಾಶ ನಡಹಳ್ಳಿ
Published 15 ಮೇ 2022, 19:31 IST
Last Updated 15 ಮೇ 2022, 19:31 IST
 ಅಂಗನವಾಡಿ: ಯಾಕೀ ಭಾನಗಡಿ?
ಅಂಗನವಾಡಿ: ಯಾಕೀ ಭಾನಗಡಿ?   

ಮಕ್ಕಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ದಿಸೆಯಲ್ಲಿ ಭದ್ರ ಬುನಾದಿಯಾದ ಶಾಲಾಪೂರ್ವ ಶಿಕ್ಷಣದ ಮಹತ್ವವನ್ನು ಅರಿಯಬೇಕಾಗಿದೆ

ಜೀವನದ ಮೂಲ ಕೌಶಲವನ್ನು ಸೃಜನಾತ್ಮಕ ಆಟ ಮತ್ತು ಓರಗೆಯವರ ಸಂಪರ್ಕದಿಂದ ಮಕ್ಕಳಿಗೆ ಕಲಿಸು ವುದೇ ಶಾಲಾಪೂರ್ವ ಶಿಕ್ಷಣ. ಎರಡರಿಂದ ಏಳು ವರ್ಷ ವಯೋಮಾನದಲ್ಲಿ ಅನೌಪಚಾರಿಕ ವಾತಾವರಣದಲ್ಲಿ ಈ ಶಿಕ್ಷಣವನ್ನು ನೀಡಬೇಕಾದುದು ಅತ್ಯಗತ್ಯ.

ಇಲ್ಲಿ ಮಗು ಸಮವಯಸ್ಕರೊಂದಿಗೆ ಬೆರೆಯುವ ಬಗೆ, ಚಟುವಟಿಕೆಗಳು, ಆಟಿಕೆಗಳಿಗೆ ಕೊಡುವ ಪ್ರತಿಕ್ರಿಯೆಗಳಿಂದ ಅದರ ಸ್ವಭಾವ, ಕಲಿಕೆ, ಭಾಷಾಜ್ಞಾನ, ಗ್ರಹಣಶಕ್ತಿ, ಸನ್ನಿವೇಶವನ್ನು ಸಂಭಾಳಿ ಸುವ ಶೈಲಿ ಎಲ್ಲವನ್ನೂ ಅರ್ಥಮಾಡಿಕೊಳ್ಳಬಹುದು. ಬಾಲ್ಯದ ಅನೇಕ ತೊಂದರೆಗಳನ್ನು ಪತ್ತೆ ಹಚ್ಚಿ, ತತ್ಕಾಲದಲ್ಲಿಯೇ ಸೂಕ್ತ ಪರಿಹಾರ ದೊರಕಿಸಲು ಸಾಧ್ಯವಾಗುತ್ತದೆ.

ADVERTISEMENT

ಉತ್ತಮವಾದ ಶಾಲಾಪೂರ್ವ ಶಿಕ್ಷಣವು ಮಕ್ಕ ಳನ್ನು ಜವಾಬ್ದಾರಿಯುತ ನಾಗರಿಕರನ್ನಾಗಿ ಮಾಡುವ ಭದ್ರ ಬುನಾದಿ. ಇದರಿಂದಾಗಿ ಮುಂದೆ ಮಕ್ಕಳಲ್ಲಿ ಕ್ರೌರ್ಯದ ಮನೋಭಾವ ಕಡಿಮೆಯಾಗುತ್ತದೆ.

ಕೇಂದ್ರ ಸರ್ಕಾರವು 1975ರಲ್ಲಿ ಚಿಣ್ಣರ ಅಭಿವೃದ್ಧಿ ಗಾಗಿ ‘ಇಂಟಿಗ್ರೇಟೆಡ್ ಚೈಲ್ಡ್‌ ಡೆವಲಪ್‌ಮೆಂಟ್ ಸರ್ವೀಸಸ್ (ಐಸಿಡಿಎಸ್‌)’ ಎಂಬ ಯೋಜನೆಯನ್ನು ಹುಟ್ಟುಹಾಕಿತು. ಚಿಕ್ಕ ಮಕ್ಕಳಿಗೆ ಪೌಷ್ಟಿಕ ಆಹಾರದ ಪೂರೈಕೆ, ಮಗುವಿನ ದೈಹಿಕ, ಮಾನಸಿಕ, ಸಾಮಾಜಿಕ ಸ್ಥಿತಿಯನ್ನು ಉತ್ತಮಗೊಳಿಸುವುದು ಮತ್ತು ಶಿಶು ಮರಣ ಪ್ರಮಾಣ ಕಡಿಮೆ ಮಾಡುವುದು ಈ ಯೋಜ ನೆಯ ಮೂಲ ಉದ್ದೇಶಗಳು. ಅಂಗನವಾಡಿ ಎನ್ನುವ ಪರಿಕಲ್ಪನೆಯು ಈ ಐಸಿಡಿಎಸ್‌ ಯೋಜನೆಯ ಭಾಗ.

ಇಂದು 1,000 ಜನಸಂಖ್ಯೆಗೊಂದು ಅಂಗನವಾಡಿ ಇದೆ. ಈ ಕೇಂದ್ರದಲ್ಲಿ ಒಬ್ಬ ಶಿಕ್ಷಕಿ ಹಾಗೂ ಸಹಾಯಕಿ ಇರುತ್ತಾರೆ. ಮೂರು ವರ್ಷದೊಳಗಿನ ಮಕ್ಕಳಿಗೆ ಪೌಷ್ಟಿಕಾಂಶಯುಕ್ತ ಆಹಾರ ಸಾಮಗ್ರಿಗಳನ್ನು ಅಂಗನ ವಾಡಿಗಳ ಮೂಲಕ ಮನೆಗೆ ಪೂರೈಸಲಾಗುತ್ತದೆ. ಮೂರರಿಂದ ಆರು ವರ್ಷದ ಒಳಗಿನವರಿಗೆ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆವರೆಗೆ ಅಂಗನವಾಡಿಯಲ್ಲಿ ಶಾಲಾಪೂರ್ವ ಶಿಕ್ಷಣದ ವ್ಯವಸ್ಥೆಯಿದೆ. ಅಲ್ಲಿನ ಚಟುವಟಿಕೆಗಳನ್ನು ಕ್ರಮಬದ್ಧವಾಗಿ ನಡೆಸಲು ಅಗತ್ಯವಾದ ಕಾರ್ಯವಿಧಾನಗಳನ್ನು ಸಹ ರೂಪಿಸ ಲಾಗಿದೆ. ಆದರೆ ಯೋಜನೆ ಆರಂಭವಾಗಿ 47 ವರ್ಷ ಗಳಾದರೂ ಅನುಷ್ಠಾನದಲ್ಲಿ ಹಲವಾರು ನ್ಯೂನತೆಗಳು ಕಾಣಿಸುತ್ತಿವೆ. ಅವುಗಳ ಕುರಿತು ವಿಮರ್ಶೆ ಅಗತ್ಯ. ಹಲವು ಅಂಗನವಾಡಿಗಳು ಕಚ್ಚಾ ಕಟ್ಟಡಗಳಲ್ಲಿದ್ದರೆ, ಕೆಲವು ಶಾಲಾ ಕಟ್ಟಡಗಳಲ್ಲಿವೆ. ಇನ್ನು ಕೆಲವು ಬಾಡಿಗೆ ಕಟ್ಟಡಗಳಲ್ಲಿವೆ. ಮತ್ತೆ ಕೆಲವು ಅಂಗನವಾಡಿಗಳು ಸಿಬ್ಬಂದಿಯ ಮನೆಗಳಲ್ಲಿಯೂ ನಡೆಯುತ್ತಿವೆ. ಸ್ಥಳಾವಕಾಶ ಕೂಡ ಮಕ್ಕಳ ಸಂಖ್ಯಾ ಬಲಕ್ಕೆ ತಕ್ಕನಾಗಿಲ್ಲ. ಕೆಲವು ಕಡೆ ಸಮರ್ಪಕ ಶೌಚಾಲಯಗಳಿಲ್ಲ, ಶೌಚಾಲಯಗಳಿದ್ದರೆ ನೀರಿನ ವ್ಯವಸ್ಥೆಯಿಲ್ಲ. ಶುದ್ಧ ಕುಡಿಯುವ ನೀರಿಲ್ಲದ ಅಂಗನವಾಡಿಗಳಿವೆ.

ಪ್ರತಿವರ್ಷವೂ ಆಟಿಕೆಗಳ ಪೂರೈಕೆಯಾಗುತ್ತಿದೆಯಾದರೂ ಕಲಿಕಾ ಪೂರಕ, ವೈವಿಧ್ಯಮಯ ಆಟಿಕೆಗಳ ಕೊರತೆಯಿದೆ. ಶಾಲಾಪೂರ್ವ ಶಿಕ್ಷಣದ ಅಸಲಿ ಬಂಡವಾಳವೇ ಆಟಿಕೆ, ಆಟದಿಂದ ಕಲಿಕೆ!

ಇನ್ನು ಅಂಗನವಾಡಿಯ ಒಳನೋಟ ಹೇಗಿರ ಬಹುದು? ಸರಾಸರಿ 25- 30 ಮಕ್ಕಳ ಪಾಲನೆಯನ್ನು ಒಬ್ಬ ಶಿಕ್ಷಕಿ ಮತ್ತು ಸಹಾಯಕಿಯು ದಿನದ 6 ಗಂಟೆಗಳ ಕಾಲ ಮಾಡಬೇಕು. ಶಿಕ್ಷಕಿಗೆ ಮಕ್ಕಳ ಹಾಜ ರಾತಿಯಿಂದ ಆರಂಭವಾಗಿ ಅನೇಕ ಮಾಹಿತಿಗಳ ದಾಖಲಾತಿಯ ಕೆಲಸವಿದೆ. ಅಂಗನವಾಡಿ ವ್ಯಾಪ್ತಿಯಲ್ಲಿನ ಗರ್ಭಿಣಿಯರು, ಬಾಣಂತಿಯರ ಯೋಗಕ್ಷೇಮದಲ್ಲೂ ಕೈ ಜೋಡಿಸುವ ಕೆಲಸ ಕೂಡ ಇವರದ್ದೇ. ಇಬ್ಬರು ಸಿಬ್ಬಂದಿಯಲ್ಲಿ ಯಾರೊಬ್ಬರು ರಜೆ ಹಾಕಿ ದರೂ ಇನ್ನೊಬ್ಬರಿಗೆ ಹೊರೆ. ಆಯಾ ಪ್ರದೇಶದ ಜನನ– ಮರಣ ದಾಖಲೆ, ಮತದಾರರ ಪಟ್ಟಿ ತಪಾಸಣೆ, ಇವೆಲ್ಲವುಗಳ ದಾಖಲಾತಿ ಕೆಲಸವನ್ನೂ ಅಂಗನವಾಡಿ ಕಾರ್ಯಕರ್ತರಿಗೆ ವಹಿಸಲಾಗಿದೆ.

ಈ ಪರಿಸ್ಥಿತಿಯಲ್ಲಿ ಒಬ್ಬ ಶಿಕ್ಷಕಿಯು ಎಷ್ಟು ಮಕ್ಕಳನ್ನು ನೋಡಿಕೊಳ್ಳಬಹುದು? ಪ್ರತಿಯೊಂದು ಮಗುವಿನ ಸ್ವಭಾವವನ್ನು ಅರ್ಥಮಾಡಿಕೊಂಡು, ತಿದ್ದಿ, ಅದರ ವರ್ತನೆಗಳಿಗೆ ಹೊಸರೂಪ ಕೊಡುವ ಸಾಧ್ಯತೆಯಿದೆಯೇ? ಅಂಗನವಾಡಿಗಳು ಮಕ್ಕಳ ಅಭಿವೃದ್ಧಿಗಾಗಿ ಮೀಸಲಾಗಿರುವಾಗ, ಕಾರ್ಯಕರ್ತರಿಗೆ ಇದರ ಹೊರತಾದ ಕೆಲಸ ಕೊಡುವುದು ಎಷ್ಟು ಸಮಂಜಸ?

ಇಲ್ಲಿ ಕಾರ್ಯಕರ್ತರು ಕಾಯಂ ಸರ್ಕಾರಿ ನೌಕರರಿಗೆ ಸರಿಸಮಾನವಾಗಿ ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಸರ್ಕಾರಿ ನೌಕರರಿಗೆ ಸಿಗುವ ಸವಲತ್ತು ಗಳಿಗೆ ಅವರು ಅರ್ಹರಲ್ಲವೇ? ತಾತ್ಕಾಲಿಕ ಕೆಲಸ, ಸರ್ಕಾರಿ ನೌಕರರಲ್ಲ, ಸಾಮಾಜಿಕ ಕಾರ್ಯಕರ್ತರೆಂಬ ಧೋರಣೆ. ಇಲ್ಲಿ ಹೆಚ್ಚಿನ ಕಾರ್ಯಕರ್ತರು ಮಹಿಳೆ ಯರೇ ಆಗಿದ್ದಾರೆ. ಇವರಿಗೆ ಕೊಡುವುದು ಸಂಭಾವನೆ, ವೇತನವಲ್ಲ. ನಮ್ಮ ಸಮಾಜದಲ್ಲಿ ಹಾಸುಹೊಕ್ಕಾಗಿರುವ ಲಿಂಗ ತಾರತಮ್ಯಕ್ಕೆ ಇದಕ್ಕಿಂತ ಬೇರೆ ನಿದರ್ಶನ ಬೇಕೆ? ಸಕಾಲಕ್ಕೆ ಸಂಭಾವನೆ ನೀಡುವಂತೆ ಮತ್ತು ಅದರ ಹೆಚ್ಚಳಕ್ಕಾಗಿಕಾರ್ಯಕರ್ತೆಯರು ಪದೇ ಪದೇ ಮುಷ್ಕರ ಹೂಡುವುದು ಇಂಥ ಕಾರಣಗಳಿಗಾಗಿಯೇ.

ಈ ಕಾರ್ಯಕರ್ತರು ಕೂಡ ಗ್ರಾಚ್ಯುಯಿಟಿಗೆ ಅರ್ಹರು ಎಂದು ಸುಪ್ರೀಂ ಕೋರ್ಟ್‌ ಇತ್ತೀಚೆಗೆ ಹೇಳಿರು ವುದು ಸ್ವಾಗತಾರ್ಹ. ಸಿಬ್ಬಂದಿಯ ಸಂಖ್ಯೆಯನ್ನು ಹೆಚ್ಚಿಸಬೇಕಾಗಿದೆ. ಹೊಸ ಸವಾಲುಗಳನ್ನು ಎದುರಿಸಲು ಅಂಗನವಾಡಿ ಕಾರ್ಯಕರ್ತರಿಗೆ ಕಾಲಕಾಲಕ್ಕೆ ತಕ್ಕ ತರಬೇತಿ ಕೊಟ್ಟು, ಅವರ ಕಾರ್ಯಕ್ಷಮತೆಯನ್ನು ವೃದ್ಧಿಸಬೇಕಾಗಿದೆ.

21ನೇ ಶತಮಾನದಲ್ಲಿ ಸಮಾಜ ಸುಸ್ಥಿರವಾಗಲು ಶಾಲಾಪೂರ್ವ ಶಿಕ್ಷಣ ಅತ್ಯಂತ ಮುಖ್ಯವಾದುದು. ಈ ದಿಸೆಯಲ್ಲಿ ಸರ್ಕಾರದ ಧೋರಣೆಯಲ್ಲಿ ಬದಲಾವಣೆಯಾದರೆ ಮಾತ್ರ ಮಕ್ಕಳ ಭವಿಷ್ಯ ಉಜ್ವಲವಾದೀತು. ಇಲ್ಲದಿದ್ದರೆ ಘನೋದ್ದೇಶಗಳು ಘೋಷಣೆಗಳಾಗಿಯೇ ಉಳಿಯುತ್ತವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.