ಆಕೆ ಒಡಿಶಾದ ಕೋಯ ಬುಡಕಟ್ಟು ಸಮುದಾಯದ ಯುವತಿ. ಹಲವಾರು ಕಷ್ಟಗಳನ್ನು ಎದುರಿಸಿ ವಿದ್ಯೆ ಗಳಿಸಿ ತನ್ನಂತಹ ಸಾವಿರಾರು ಜನರಿಗೆ ದನಿಯಾದವರು. ಪತ್ರಿಕೋದ್ಯಮಕ್ಕೆ ಕಾಲಿಟ್ಟು ತನ್ನವರ ಕಷ್ಟನಷ್ಟ
ಗಳಿಗೆ ಸ್ಪಂದಿಸುತ್ತ, ಮಹಿಳಾ ಸಬಲೀಕರಣ ಎಂದರೆ ಹೇಗಿರಬೇಕು ಎಂಬುದಕ್ಕೆ ಮಾದರಿಯಂತಿರುವ ಆಕೆಯ ಹೆಸರು ಜಯಂತಿ ಬುರುಡ. ರಾಜಧಾನಿ ಭುವನೇಶ್ವರದ ಕಳಿಂಗ ಟಿ.ವಿ. ವಾಹಿನಿಯಲ್ಲಿ ಕೆಲಸ ಮಾಡುತ್ತ, ರಾಜ್ಯದ ಅತ್ಯಂತ ಹಿಂದುಳಿದ ಪ್ರದೇಶಗಳ ಜನರ ನೋವಿಗೆ ದನಿಯಾಗುತ್ತ, ಅವರನ್ನೆಲ್ಲ ಮುಖ್ಯ ವಾಹಿನಿಗೆ ತರಬೇಕೆನ್ನುವ ಆಕಾಂಕ್ಷೆಯಿಂದ ಅವಿರತ ಪ್ರಯತ್ನ ಮಾಡುತ್ತಿದ್ದಾರೆ.
ಬಾಲ್ಯದಲ್ಲಿಯೇ ‘ಜನರ ನೋವಿಗೆ ಮಿಡಿಯುವ ಕೆಲಸ ಹಿಡಿಯುತ್ತೇನೆ. ಅದಕ್ಕಾಗಿ ನಾನು ಪತ್ರಿಕೋದ್ಯಮ ಕೋರ್ಸ್ ಓದಬೇಕು’ ಎಂದಾಗ, ಬಡವರಾದ ತಂದೆ ತಾಯಿ ‘ಅದೆಲ್ಲಿಂದ ಸಾಧ್ಯ, ಸಾವಿರಾರು ರೂಪಾಯಿ ಖರ್ಚಾಗುತ್ತದೆ. ಅದನ್ನೆಲ್ಲ ಬಿಟ್ಟು ಮದುವೆ ಮಾಡಿಕೊಂಡು ಕಣ್ಣ ಮುಂದೆಯೇ ಇರು’ ಎಂದು ಗದರಿದರು. ಇವರ ಮಾತು ಕೇಳಿದರೆ ತನ್ನ ಜನರಿಗೆ ನೆರವಾಗುವ ದಿನ ಜೀವನದಲ್ಲಿ ಬರುವುದೇ ಇಲ್ಲ ಎಂದು ನಿರ್ಧರಿಸಿ, ರಾತ್ರೋರಾತ್ರಿ ಮನೆ ಬಿಟ್ಟು ಜಿಲ್ಲಾ ಕೇಂದ್ರದ ಬುಡಕಟ್ಟು ಯುವತಿಯರ ವಸತಿ ಕೇಂದ್ರದಲ್ಲಿ ಆಶ್ರಯ ಪಡೆದ ಆಕೆ, ಕೊರಾಪುಟ್‍ನ ಕೇಂದ್ರೀಯ ವಿಶ್ವವಿದ್ಯಾಲಯಕ್ಕೆ ದಾಖಲಾದರು. ಹಾಸ್ಟೆಲ್‍ನ ದೀದಿಯರು ಅವರ ಶುಲ್ಕ ಭರಿಸಿದರು. ಮಲಕನಗಿರಿ ಜಿಲ್ಲೆಯ ಪುಟ್ಟಹಳ್ಳಿ ಸೆರ್ಪಾಲಿಯ ಜಯಂತಿ, ‘ನೆಟ್‍ವರ್ಕ್ ಆಫ್ ವಿಮೆನ್ ಇನ್ ಮೀಡಿಯಾ, ಇಂಡಿಯಾ’ದ ಪ್ರಪ್ರಥಮ ಫೆಲೋಶಿಪ್ ಪಡೆದು, ಪತ್ರಿಕೋದ್ಯಮದಲ್ಲಿ ಪದವಿ ಗಳಿಸಿ ಕೆಲಸಕ್ಕೂ ಸೇರಿಕೊಂಡರು.
ಮುಖ್ಯವಾಹಿನಿಯ ಪತ್ರಿಕೆ, ದೃಶ್ಯವಾಹಿನಿಗಳು ಬುಡಕಟ್ಟು ಜನರ ಸ್ಥಿತಿಗತಿಗಳ ಬಗ್ಗೆ ಅಷ್ಟಾಗಿ ತಲೆ
ಕೆಡಿಸಿಕೊಳ್ಳುವುದಿಲ್ಲ ಎಂಬುದು ಕೆಲಸ ಶುರುಮಾಡಿದ ಕೆಲವೇ ತಿಂಗಳುಗಳಲ್ಲಿ ಜಯಂತಿಗೆ ಅರಿವಾಯಿತು. ಮಾಧ್ಯಮಗಳಿಗೆ ಏನಿದ್ದರೂ ರೋಚಕ ಸುದ್ದಿ ಬೇಕು, ಅಂತೆಯೇ ಮಲಕನಗಿರಿ ಜಿಲ್ಲೆಯ ಮಾವೊವಾದಿಗಳ ಕುರಿತಾದ ಸುದ್ದಿ, ಕತೆಗಳ ಬಗ್ಗೆ ತೀವ್ರ ಆಸಕ್ತಿ ಇತ್ತೇ ವಿನಾ ಬುಡಕಟ್ಟು ಜನರ ಸಂಕಷ್ಟಗಳ ಬಗ್ಗೆ ಕಿಂಚಿತ್ತೂ
ಗಮನವಿರಲಿಲ್ಲ.
ವರದಿಗಾರಿಕೆಗೆಂದು ಊರೂರು ಸುತ್ತುತ್ತಿದ್ದ ಜಯಂತಿಗೆ ಬಡಜನರು ಹೇಗೆ ವಿದ್ಯೆ ಮತ್ತು ಆರೋಗ್ಯ ವ್ಯವಸ್ಥೆಗಳಿಂದ ವಂಚಿತರಾಗುತ್ತಾರೆ ಎಂಬುದು ತಿಳಿಯಿತು. ಮುಖ್ಯವಾಗಿ ಹೆಣ್ಣುಮಕ್ಕಳು ವಿದ್ಯೆಯಿಂದ ವಂಚಿತರಾಗಬಾರದೆಂಬ ನಿರ್ಧಾರದಿಂದ 2018ರಲ್ಲಿ ‘ಬಡಾದೀದಿ ಯೂನಿಯನ್’ (ದೊಡ್ಡಕ್ಕನ ಸಂಘಟನೆ) ಸ್ಥಾಪಿಸಿದರು. ಹದಿಹರೆಯದ ಹೆಣ್ಣುಮಕ್ಕಳ ಮಾನಸಿಕ, ದೈಹಿಕ ತೊಂದರೆಗಳು, ಮುಟ್ಟಿನ ದಿನಗಳಲ್ಲಿ ವಹಿಸ ಬೇಕಾದ ಸ್ವಚ್ಛತಾ ಕ್ರಮಗಳ ಕುರಿತ ತರಬೇತಿ, ಹದಿ ಹರೆಯದಲ್ಲೇ ತಾಯ್ತನದ ಸಮಸ್ಯೆಗೆ ಸಂಬಂಧಿಸಿ ದಂತೆಯೂ ಈ ಸಂಘಟನೆ ಕೆಲಸ ಮಾಡುತ್ತದೆ.
‘ಬುಡಕಟ್ಟು ವಿದ್ಯಾರ್ಥಿನಿಯರ ವಸತಿ ಶಾಲೆಗಳಲ್ಲಿ ಚಿಕ್ಕ ವಯಸ್ಸಿಗೇ ಗರ್ಭ ಧರಿಸುತ್ತಿದ್ದ ಅನೇಕ ಪ್ರಕರಣಗ ಳನ್ನು ನಾನು ನೋಡಿದ್ದೆ. ಅದನ್ನು ತಡೆಯಲೆಂದೇ ಬಡಾದೀದಿ ಸಂಘಟನೆ ಸ್ಥಾಪಿಸಿದ್ದೇನೆ’ ಎಂದು ಹೆಮ್ಮೆಯಿಂದ ಹೇಳುವ ಜಯಂತಿ, ಮಲಕನಗಿರಿ ಜಿಲ್ಲೆಯ ಎಲ್ಲ ಆಶ್ರಮ ಶಾಲೆಗಳ ವಿದ್ಯಾರ್ಥಿನಿಯರಿಗೂ ನೆರವಾಗುತ್ತಿದ್ದಾರೆ. ಬುಡಕಟ್ಟು ಯುವತಿಯರೇ ಇರುವ ಸಂಘಟನೆಯು ವಿದ್ಯಾರ್ಥಿನಿಯರ ಸಮಗ್ರ ಬೆಳವಣಿಗೆಗೆ ಏನೇನು ಅನುಕೂಲ ಬೇಕೊ ಅದನ್ನೆಲ್ಲ ಸರ್ಕಾರ ಮತ್ತು ಖಾಸಗಿಯವರ ಸಹಾಯ ಪಡೆದು ಕಲ್ಪಿಸುತ್ತಿದೆ.
ಅಷ್ಟಾದರೂ ಬುಡಕಟ್ಟು ಮಹಿಳೆಯರು ತಮ್ಮ ಸಮಸ್ಯೆಗಳನ್ನು ಹೇಳಿಕೊಳ್ಳದಿರುವುದನ್ನು ಕಂಡ ಜಯಂತಿ 2022ರಲ್ಲಿ ‘ಜಂಗಲ್‍ರಾಣಿ’ ಎಂಬ ಸಾಮಾಜಿಕ ಜಾಲತಾಣದ ಸುದ್ದಿಮಾಧ್ಯಮ ಪ್ರಾರಂಭಿಸಿದರು. ಅದರ ಅಡಿಬರಹ ‘ಅಮ ಕಹಾನಿ, ಅಮ ದ್ವಾರಾ, ಅಮಪೇನ್’ ಅಂದರೆ ‘ನಮ್ಮ ಕತೆ, ನಮ್ಮ ನೋವಿನ ಮೂಲಕ’ ಎಂದು. ಮಲಕನಗಿರಿ ಜಿಲ್ಲೆಯ ಸಮಸ್ತ ಚಟುವಟಿಕೆಗಳನ್ದು ಜಂಗಲ್‍ರಾಣಿ ವೇದಿಕೆಯ 50 ಮಂದಿ ಬುಡಕಟ್ಟಿನ ಮಹಿಳೆಯರೇ ನೋಡಿಕೊಳ್ಳುತ್ತಾರೆ. ಇವರೆಲ್ಲರಿಗೂ ಪತ್ರಿಕೋದ್ಯಮದ ತರಬೇತಿ ನೀಡಿರುವ ಹೈದರಾಬಾದ್‍ನ ಇಂಡಿಯನ್ ಸ್ಕೂಲ್ ಆಫ್ ಬ್ಯುಸಿನೆಸ್‍ನ ಸದಸ್ಯರು, ವರದಿಗಾರಿಕೆ, ವಿಡಿಯೊ ಚಿತ್ರೀಕರಣ, ಕತೆ ರಚನೆ ಮತ್ತು ಕ್ಷೇತ್ರ ಕಾರ್ಯ ವರದಿ ಹೇಗೆ ಬರೆಯಬೇಕು ಎಂಬುದರ ಬಗ್ಗೆ 15 ದಿನಗಳ ತರಬೇತಿ ನೀಡಿದ್ದಾರೆ. ಇದು, ಮೊಬೈಲ್ ಫೋನ್ ಆಧಾರಿತ ತರಬೇತಿ.
ಸದಸ್ಯರು ತಮ್ಮಲ್ಲಿರುವ ಮೊಬೈಲ್ ಫೋನ್ ಬಳಸಿ, ಪ್ರಮುಖವಾಗಿ 2006ರ ಅರಣ್ಯ ಹಕ್ಕು ಕಾಯ್ದೆ ಬಗೆಗಿನ ತಿಳಿವಳಿಕೆ, ಜೀವಿವೈವಿಧ್ಯ ರಕ್ಷಣೆ, ಅರಣ್ಯ ಪಾಲನೆ, ಸಂರಕ್ಷಣೆಯೂ ಸೇರಿದಂತೆ ಬುಡಕಟ್ಟಿನ ಸಾಂಸ್ಕೃತಿಕ ಬದುಕಿಗೆ ಸಂಬಂಧಿಸಿದ, ವಿಶೇಷವೆನ್ನಿಸುವ ಅಡುಗೆ, ಕಸೂತಿ, ಟೈಲರಿಂಗ್, ಬುಟ್ಟಿ ಹೆಣೆಯುವುದು, ಸುತ್ತಲೂ ಜರುಗುವ ವಿದ್ಯಮಾನಗಳ ವಿಡಿಯೊ ರೆಕಾರ್ಡ್ ಮಾಡಿ ಫೇಸ್‍ಬುಕ್‍ನಲ್ಲಿ ಅಪ್‌ಲೋಡ್ ಮಾಡುವುದನ್ನು ಕಲಿತಿದ್ದಾರೆ.
ಬುಡಕಟ್ಟು ಜನರ ಜೀವನ ಹೇಗೆ ಅರಣ್ಯಗಳನ್ನು ಅವಲಂಬಿಸಿದೆ ಮತ್ತು ಅವರು ಹೇಗೆ ಅದನ್ನು ಸಂರಕ್ಷಿಸಿಕೊಂಡು ಬಂದಿದ್ದಾರೆ ಎಂಬುದರ ಕುರಿತು ಕಿರುಚಿತ್ರಗಳನ್ನು ನಿರ್ಮಿಸಿರುವ ಲಕ್ಷ್ಮಿ ಕಿಸಾನಿ ಎಂಬ ಯುವತಿ, ರೈತರು ಬೆಳೆಗಾಗಿ ಹೇಗೆ ತಮ್ಮ ಗದ್ದೆ, ಹೊಲಗಳನ್ನು ಸಿದ್ಧಪಡಿಸುತ್ತಾರೆ ಎಂಬುದನ್ನು ದೃಶ್ಯಗಳಲ್ಲಿ ಅದ್ಭುತವಾಗಿ ಸೆರೆ ಹಿಡಿದಿದ್ದಾಳೆ.
ಮಲಕನಗಿರಿಯ ಯಶಸ್ಸಿನಿಂದ ಉತ್ತೇಜಿತರಾಗಿರುವ ಜಯಂತಿ, ‘ಜಂಗಲ್‍ರಾಣಿ’ ಮಾದರಿಯನ್ನು ಬುಡಕಟ್ಟು ಜನರೇ ಹೆಚ್ಚಾಗಿರುವ ಬಲಂಗಿರ್ ಮತ್ತು ಮಯೂರ್‌ಭಾಂಜ್ ಜಿಲ್ಲೆಗಳಿಗೂ ವಿಸ್ತರಿಸುವ ಯೋಜನೆ ಹಾಕಿಕೊಂಡಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.