ADVERTISEMENT

ಸಂಗತ | ಮಕ್ಕಳ ಪತ್ರಿಕೆಗಳಿಗೆ ಗ್ರಹಣ?

ಟಿ.ಎ.ಎನ್.ಖಂಡಿಗೆ
Published 12 ಮಾರ್ಚ್ 2023, 22:26 IST
Last Updated 12 ಮಾರ್ಚ್ 2023, 22:26 IST
   

ನಾನು ದಿನಾ ದಿನಪತ್ರಿಕೆಗಳನ್ನು ತೆಗೆದುಕೊಂಡು ಮನೆಗೆ ಹೋದಾಗ ನನ್ನ ಹನ್ನೊಂದು ವರ್ಷದ ಮಗ ‘ಅಪ್ಪ, ಬಾಲಮಂಗಳ, ತುಂತುರು ತಂದಿದ್ದೀರಾ?’ ಎಂದು ಬೆರಗುಗಣ್ಣುಗಳಿಂದ ಕೇಳುತ್ತಾನೆ. ಅವನು ಆ ಪತ್ರಿಕೆಗಳನ್ನು ಓದಿ ಅದರ ಕತೆಗಳನ್ನು ನಮಗೆ, ಆತನ ಗೆಳೆಯರಿಗೆ ಹೇಳಿ ಸಂಭ್ರಮಿಸುತ್ತಿದ್ದ. ಬಾಲ ಮಂಗಳದಂತಹ ಮಕ್ಕಳ ಕೆಲವು ಪತ್ರಿಕೆಗಳು ಕೊರೊನಾ ನಂತರ ಸರಿಯಾಗಿ ಬರುತ್ತಿಲ್ಲ. ಪತ್ರಿಕೆಯ ಅಂಗಡಿಯಲ್ಲಿ ವಿಚಾರಿಸಿದರೆ, ಅವು ಬರುತ್ತಿಲ್ಲ ಎಂದು ಹೇಳುತ್ತಾರೆ.

ಆ ಪತ್ರಿಕೆಗಳು ಬರುತ್ತಿದ್ದಾಗ, ಮಕ್ಕಳ ಕೈಗಳಿಂದ ಮೊಬೈಲ್‍ಗಳಿಗೆ ವಿಶ್ರಾಂತಿ ಸಿಗುತ್ತಿತ್ತು. ಎಷ್ಟೋ ಮಕ್ಕಳು ನಕ್ಷತ್ರಗಳನ್ನು ಕೈಯಲ್ಲಿ ಹಿಡಿದುಕೊಂಡು ಸಂಭ್ರಮಿಸುವಂತೆ ಆ ಪತ್ರಿಕೆಗಳನ್ನು ಸಂಭ್ರಮಿಸುತ್ತಿದ್ದರು. ಇದಕ್ಕೆ ಕಾರಣ ಇಲ್ಲದಿಲ್ಲ. ಆ ಪತ್ರಿಕೆಗಳಲ್ಲಿ ಪದಬಂಧ, ಚಿತ್ರ ಬಿಡಿಸುವುದು, ಬಣ್ಣ ಹಾಕುವುದು, ಸಂಖ್ಯೆಗಳನ್ನು ಜೋಡಿಸಿ ಚಿತ್ರ ಬಿಡಿಸುವುದು, ಸಂಭಾಷಣೆ ಪೂರ್ಣಗೊಳಿಸುವಂಥ ಚಟುವಟಿಕೆಗಳು ಇರುತ್ತಿದ್ದವು. ಮಕ್ಕಳೆಲ್ಲ ಗುಂಪು ಸೇರಿಕೊಂಡು ಅವನ್ನು ಮಾಡುತ್ತಿದ್ದರು. ಇದು ಅವರ ಭಾವಕೋಶ ವಿಕಾಸವಾಗಲು ನೆರವಾಗುತ್ತಿತ್ತು. ಈಗ ಕನ್ನಡದ ಮಕ್ಕಳಿಗೆ ಇದು ಇಲ್ಲದಂತಾಗಿದೆ.

ಮನಸ್ಸನ್ನು ಅರಳಿಸುವ, ಕುತೂಹಲವನ್ನು ಕೆರಳಿಸುವ, ಕಲ್ಪನೆಯನ್ನು ರೂಪಿಸುವ, ಭಾವಸಾಗರದಲ್ಲಿ ಅದ್ದುವ ಇಂಥ ಅನುಭವಗಳು ಈಗ ಅವರಿಗೆ ಇಲ್ಲ. ಆದ್ದರಿಂದಲೇ ಮಕ್ಕಳು ಈಗ ಟಿ.ವಿ.ಯಲ್ಲಿ ಬರುವ ಮಕ್ಕಳ ಚಾನೆಲ್‌ಗಳಿಗೆ ಹೆಚ್ಚು ಶರಣಾಗಿದ್ದಾರೆ.

ADVERTISEMENT

ನಮ್ಮ ನೆರೆಯ ರಾಜ್ಯವಾದ ಕೇರಳದಲ್ಲಿ ಮಕ್ಕಳ ಪತ್ರಿಕೆಗಳ ಸ್ಥಿತಿಗತಿ ಕುರಿತು ನನ್ನ ಮಿತ್ರರಾದ ಮಲಯಾಳಿ ಶಿಕ್ಷಕರೊಬ್ಬರಲ್ಲಿ ಕೇಳಿದೆ. ಯುರೇಕ, ಬಾಲರಮ, ಮಿನ್ನಾಮಿನ್ನಿ, ಬಾಲಭೂಮಿ, ಬಾಲಮಂಗಳ, ಕಳಿಕುಡುಕ್ಕ, ಚಿತ್ರಭೂಮಿ, ಮಲರ್‌ ವಾಡಿ, ಪೂಂಬಾಟ, ಮಯಿಲ್‍ಪೀಲಿ, ತಳಿರ್‌ನಂತಹ ಹನ್ನೆರಡು ಪತ್ರಿಕೆಗಳು ಬರುತ್ತಿವೆ ಎಂದು ಅವರು ಹೇಳಿದ್ದನ್ನು ಕೇಳಿ, ಆ ಮಕ್ಕಳ ಭಾಗ್ಯ ನೆನೆದು ಆನಂದವಾಯಿತು. ಆದರೆ ಇಂತಹ ಭಾಗ್ಯ ನಮ್ಮ ಕನ್ನಡದ ಮಕ್ಕಳಿಗೆ ಇಲ್ಲದಂತಾಗಿದೆ.

ಕನ್ನಡದಲ್ಲಿ ಮಕ್ಕಳ ಪತ್ರಿಕೆಗಳು ಬರದಿರುವುದಕ್ಕೆ ಇರುವ ತಾಂತ್ರಿಕ, ಆರ್ಥಿಕ, ಆಡಳಿತಾತ್ಮಕದಂತಹ ಯಾವುದೇ ಕಾರಣಗಳಿದ್ದರೂ ಇದು ಮಕ್ಕಳಿಗೆ ಮಾಡುತ್ತಿರುವ ಬಹುದೊಡ್ಡ ಅನ್ಯಾಯವೇ ಸರಿ.

ಮಕ್ಕಳ ಸಾಹಿತಿಯೊಬ್ಬರಲ್ಲಿ ಚರ್ಚಿಸಿದಾಗ ಅವರು, ‘ಮಕ್ಕಳಿಗೆ ಮಕ್ಕಳ ಪತ್ರಿಕೆಗಳೇ ಯಾಕೆ ಬೇಕು? ಮಕ್ಕಳ ಸಾಹಿತ್ಯವಿದೆಯಲ್ಲ, ಅದು ಸಾಲದೇ?’ ಎಂದರು. ಹೌದು ಇದೆ, ಆದರೆ ಅದು ಎಷ್ಟು ಮಕ್ಕಳಿಗೆ ದೊರೆಯುತ್ತದೆ? ಮಕ್ಕಳ ಹೆತ್ತವರಲ್ಲಿ ಅಂಥ ಅಭಿರುಚಿ ಇದ್ದರೆ ಮಾತ್ರ ದೊರೆಯಬಹುದು. ಅಂಥ ಪುಸ್ತಕವನ್ನು ಹುಡುಕಿಕೊಂಡು ಪುಸ್ತಕದ ಅಂಗಡಿಗೆ ಹೋಗಬೇಕು ಅಥವಾ ಪ್ರದರ್ಶನವೋ ಸಮ್ಮೇಳನವೋ ಯಾವುದು ಬರುತ್ತದೆ ಎಂದು ಕಾಯಬೇಕು. ಅಲ್ಲಿ ಮಕ್ಕಳು ತಾವು ಓದುವ ಪುಸ್ತಕವನ್ನು ಆಯ್ಕೆ ಮಾಡುವುದು ಹೇಗೆ? ಇಂಥ ಸಮಸ್ಯೆಗಳಿಗೆ ಸುಲಭದ ದಾರಿ ಮಕ್ಕಳ ಪತ್ರಿಕೆಗಳು. ಎಂಥ ಕುಗ್ರಾಮದಲ್ಲಿಯೂ ಪುಸ್ತಕದ ಅಂಗಡಿ ಇಲ್ಲದೇ ಇದ್ದರೂ ಪತ್ರಿಕೆ ಮಾರುವ ಅಂಗಡಿಯಂತೂ ಇದ್ದೇ ಇರುತ್ತದೆ. ಅಲ್ಲಿ ಮಕ್ಕಳ ಪುಸ್ತಕ ಯಾವುದು ಎಂದು ಹುಡುಕುವ ಅಗತ್ಯ ಇರುವುದಿಲ್ಲ. ಇದಲ್ಲದೆ ಮಕ್ಕಳ ಸಾಹಿತ್ಯ ಪುಸ್ತಕಕ್ಕೆ ಈಗ ನೂರಕ್ಕಿಂತ ಕಡಿಮೆ ಬೆಲೆ ಇರುವುದು ಅಪರೂಪ. ಆದರೆ ಮಕ್ಕಳ ಪತ್ರಿಕೆ ಇಪ್ಪತ್ತು ರೂಪಾಯಿಯ ಒಳಗೆ ದೊರೆಯುತ್ತದೆ.

ಅನೇಕ ಹಿರಿಯ ವಿದ್ವಾಂಸರು, ಸಾಹಿತಿಗಳ ಓದಿನ ಹವ್ಯಾಸದ ಹಿಂದೆ ಪತ್ರಿಕೆಗಳ ಪಾತ್ರ ಬಹುದೊಡ್ಡದಿದೆ. ಒಂದು ಮಗುವಿನ ಒಳ ಹೊರ ಜಗತ್ತನ್ನು ಜೋಡಿಸುವ ಕೆಲಸವನ್ನು ಪತ್ರಿಕೆಗಳು ಮಾಡುತ್ತವೆ. ಸದಾಕಾಲ ಗನ್ ಹಿಡಿದುಕೊಂಡು ಆಟವಾಡುವ ಮಗು ಕ್ರೌರ್ಯಕ್ಕೆ ಆದ್ಯತೆ ನೀಡುವ ಸಾಧ್ಯತೆ ಇರುತ್ತದೆ. ಪುಸ್ತಕ ಹಿಡಿದ ಮಗು ಲೋಕದ ಮಾತುಗಳಿಗೆ ಬೆರಗುಗೊಂಡು ಅದರ ಜೊತೆ ಸಂವೇದನಾಶೀಲವಾಗುವ ಸಾಧ್ಯತೆ ಇದೆ. ಪುಸ್ತಕ ಪ್ರೀತಿಯ ಬೀಜ ಮಕ್ಕಳಲ್ಲಿ ಮೊಳಕೆಯೊಡೆಯಬೇಕಾದರೆ ಅವರು ಓದುವ ಪತ್ರಿಕೆಗಳು ಬೇಕು. ಆಗ ‘ಪುಸ್ತಕ ಸಂಸ್ಕೃತಿ’ಯ ಬಗೆಗಿನ ನಮ್ಮ ಮಾತುಗಳಿಗೆ ಅರ್ಥ ಬರುತ್ತದೆ.

ಮಕ್ಕಳಲ್ಲಿ ಓದುವ ಹವ್ಯಾಸ ಕಡಿಮೆಯಾಗುತ್ತಿದೆ ಎಂದು ಎಲ್ಲರೂ ಬೊಬ್ಬಿಡುತ್ತಾರೆ. ಆದರೆ ನಾವು ಅವರಿಗೆ ಓದುವ ಪರಿಸರವನ್ನು ಎಷ್ಟರ ಮಟ್ಟಿಗೆ ಒದಗಿಸಿದ್ದೇವೆ ಎಂದು ಕೇಳಿಕೊಳ್ಳಬೇಕಾಗಿದೆ. ಯಾವುದೇ ಹವ್ಯಾಸವನ್ನು ಮಕ್ಕಳಿಗೆ ಉಪದೇಶಾತ್ಮಕವಾಗಿ ಕಲಿಸುವುದಕ್ಕಿಂತ ಪ್ರಾಯೋಗಿಕವಾಗಿ ಕಲಿಸುವುದು ಉತ್ತಮ. ಅಪ್ಪ, ಅಮ್ಮ ಓದುತ್ತಾ ‘ನೀನು ಓದು’ ಎಂದು ಮಕ್ಕಳಿಗೆ ಹೇಳಿದರೆ ಅವರು ಓದುತ್ತಾರೆ. ಅಪ್ಪ, ಅಮ್ಮ ಗಿಡಗಳಿಗೆ ನೀರು ಹಾಕುತ್ತಾ ‘ನೀನು ಇದನ್ನು ಮಾಡು’ ಎಂದರೆ ಅವರು ಅದನ್ನು ಮಾಡುತ್ತಾರೆ. ‘ನಾವು ಹೇಳಿದ್ದನ್ನು ಯಾರೂ ಕೇಳುವುದಿಲ್ಲ. ಆದರೆ ನಾವು ಮಾಡುವುದನ್ನು ಎಲ್ಲರೂ ಮಾಡುತ್ತಾರೆ’ ಎಂಬ ರಾಮಕೃಷ್ಣ ಪರಮಹಂಸರ ಮಾತಿನಂತೆ, ಓದುವ ಹವ್ಯಾಸ ಬೆಳೆಸುವುದಕ್ಕೆ ನಾವು ಓದುವುದು ಮತ್ತು ಓದುವ ಪರಿಸರ ನಿರ್ಮಾಣ ಮಾಡುವುದು ಆದ್ಯತೆ ಆಗಬೇಕು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.