ADVERTISEMENT

ಸಂಗತ: ಅಂಟಾರ್ಕ್ಟಿಕಾದ ಹಿಮಕ್ಕೇ ಡ್ರಿಲ್

ವಾಯುಗುಣದ ಚರಿತ್ರೆ ಜಾಲಾಡಲು ಚರಿತ್ರೆಯಲ್ಲೇ ಮೊದಲ ಪ್ರಯತ್ನ ಆರಂಭವಾಗಿದೆ

ಶ್ರೀಗುರು
Published 4 ಮಾರ್ಚ್ 2021, 19:30 IST
Last Updated 4 ಮಾರ್ಚ್ 2021, 19:30 IST
Sangata 05.03.2021
Sangata 05.03.2021   

ಭೂಮಿಯ ಹಿಮಖಂಡಗಳು ರಾಕೆಟ್ ವೇಗದಲ್ಲಿ ಕರಗುತ್ತಿವೆ. ವಾಯುಗುಣ ಎರ‍್ರಾಬಿರ‍್ರಿ ಬದಲಾಗುತ್ತಿರುವ ಈ ದಿನಮಾನಗಳಲ್ಲಿ ಜಗತ್ತಿನಾದ್ಯಂತ ನೈಸರ್ಗಿಕ ಪ್ರಕೋಪಗಳ ಸಂಖ್ಯೆ ಹೆಚ್ಚಿದ್ದು, ಕಾರಣ ಹುಡುಕಲು ವಾಯುಗುಣ ತಜ್ಞರು ಹಗಲಿರುಳೂ ಶ್ರಮಿಸುತ್ತಿದ್ದಾರೆ.

ಸಮಸ್ಯೆಗಳಿಗೆ ಉತ್ತರವು ಭೂಮಿಯ ದಕ್ಷಿಣ ಮತ್ತು ಉತ್ತರ ಧ್ರುವಗಳಲ್ಲಿರುವ ಹಿಮದಲ್ಲೂ ಇದೆ ಎಂಬ ಸತ್ಯ ಗೊತ್ತಾದಾಗಿನಿಂದ ವಿಜ್ಞಾನಿಗಳ ಚಿತ್ತವೆಲ್ಲ ಹಿಮಖಂಡಗಳ ಮೇಲೆ ಬಿದ್ದಿದೆ. ಆಸ್ಟ್ರೇಲಿಯಾದ ವಿಜ್ಞಾನಿಗಳು ಅಂಟಾರ್ಕ್ಟಿಕಾದ ಹಿಮಗಟ್ಟಿಯನ್ನು 3,000 ಮೀಟರ್ ಆಳದವರೆಗೆ ಕೊರೆದು, 15 ಲಕ್ಷ ವರ್ಷಗಳಿಂದ ಸತತವಾಗಿ ರೂಪುಗೊಂಡ ಹಿಮದ ಗಟ್ಟಿಯನ್ನು ಹೊರತೆಗೆದು, ಅದರಲ್ಲಿ ಸಿಕ್ಕಿಕೊಂಡಿರುವ ಗಾಳಿಯನ್ನು ಪರೀಕ್ಷಿಸಿ, ಆಗ ಭೂಮಿಯ ವಾಯುಗುಣ ಹೇಗಿತ್ತು ಎಂಬ ಡೇಟಾ ಸಂಗ್ರಹಿಸಿ, ಇದುವರೆಗೆ ಭೂಮಿಯ ವಾತಾವರಣದಲ್ಲಾದ ಬದಲಾವಣೆಗೆ ಕಾರಣ ಹುಡುಕುವ ತಮ್ಮ ಪ್ರಯತ್ನ ಫಲ ನೀಡುತ್ತದೆಂಬ ವಿಶ್ವಾಸದಲ್ಲಿದ್ದಾರೆ.

ಕೊರೆಯಲು ಹುಡುಕಿರುವ ಜಾಗ ಸಮುದ್ರ ಮಟ್ಟದಿಂದ 3,000 ಮೀಟರ್‌ ಎತ್ತರದಲ್ಲಿದೆ. ಸುಮಾರು 300 ಟನ್ ತೂಕದ ಕೊರೆಯುವ ಯಂತ್ರಗಳನ್ನು ಅಷ್ಟು ಎತ್ತರಕ್ಕೆ ಸಾಗಿಸಿ 2,800 ಮೀಟರ್ ಆಳಕ್ಕೆ ಕೊರೆದು, ಭೂಮಿಯ ತಾಪಮಾನದ ಏರಿಕೆಗೆ ಸ್ಪಷ್ಟ ಕಾರಣಗಳನ್ನು ಕಂಡುಕೊಳ್ಳುವ ಪ್ರಯತ್ನಕ್ಕೆ ಸುಮಾರು ವರ್ಷಗಳೇ ಬೇಕು. ಕೊರೆತದ ನೇತೃತ್ವ ವಹಿಸಿರುವ ವಿಜ್ಞಾನಿ ಜೋಯೆಲ್ ಪೆಡ್ರೋ ಅವರಿಗೆ ಭೂಮಿಯ ಹಳೆಯ ವಾಯುಗುಣದ ವಿವರ ಚೆನ್ನಾಗಿ ಗೊತ್ತಿದೆ. ಆಸ್ಟ್ರೇಲಿಯಾದ ಕೇಸಿ ಸಂಶೋಧನಾ ನೆಲೆಯಿಂದ 1,100 ಕಿ.ಮೀ. ದೂರದ ಲಿಟಲ್ ಡೋಮ್‍ಸಿ ಎಂಬ ತಾಣದಲ್ಲಿ ಡ್ರಿಲ್ಲಿಂಗ್ ಮಶೀನ್‍ಗಳು ಸದ್ದು ಮಾಡಲಿವೆ. ಮಂಜುಗಡ್ಡೆಯ ಹಲವು ಪದರಗಳನ್ನು ಕೊರೆಯುತ್ತ ಹೋದಂತೆ ಏನೆಲ್ಲ ಹೊಸ ಮಾಹಿತಿ ಸಿಗಬಹುದೆಂಬ ಕುತೂಹಲ ನಮ್ಮದು ಎಂದಿರುವ ಪೆಡ್ರೋ, ಲಭ್ಯವಿರುವ ಎಲ್ಲ ತಂತ್ರಜ್ಞಾನ ಬಳಸಿಕೊಂಡು, 12 ಲಕ್ಷದಿಂದ 15 ಲಕ್ಷ ವರ್ಷದಷ್ಟು ಹಳೆಯದಾದ ಹಿಮಪದರಗಳಲ್ಲಿ ಏನಿದೆ ಎಂಬುದನ್ನು ಕಂಡುಕೊಳ್ಳಲು ನಾವು ನಡೆಸುತ್ತಿರುವ ಈ ವಿಶೇಷ ಪ್ರಯತ್ನ ಇತಿಹಾಸದಲ್ಲೇ ಮೊದಲು ಎಂದಿದ್ದಾರೆ.

ADVERTISEMENT

ಪ್ರಯತ್ನ ವಿಶೇಷದ್ದು ಎನ್ನಲು ಕಾರಣವಿದೆ. ಈಗಾಗಲೇ ಅಂಟಾರ್ಕ್ಟಿಕಾದಿಂದ 27 ಲಕ್ಷ ವರ್ಷಗಳಷ್ಟು ಹಳೆಯದಾದ ಹಿಮವನ್ನು ಸಂಗ್ರಹಿಸಿ ಅಭ್ಯಸಿಸಲಾಗಿದೆ. ಆದರೆ ಈ ಹಿಮ ಒತ್ತೊತ್ತಾಗಿ ನಿರಂತರವಾಗಿ ರೂಪುಗೊಂಡ ಹಿಮಖಂಡದ್ದಲ್ಲ. ಪೆಡ್ರೋ ಮತ್ತು ತಂಡ ಹೊರತೆಗೆಯಲು ಪ್ರಯತ್ನಿಸುತ್ತಿರುವ ಹಿಮದಗಡ್ಡೆ ಕಳೆದ 20 ಲಕ್ಷ ವರ್ಷಗಳಿಂದ ನಿರಂತರವಾಗಿ ಸುರಿದ ಹಿಮದಿಂದ ರೂಪುಗೊಂಡಿದೆ. ಸದ್ಯಕ್ಕೆ ನಮಗೆ 8 ಲಕ್ಷ ವರ್ಷ ಹಳೆಯ ನಿರಂತರ ಹಿಮಗಟ್ಟಿಯ ತಲೆಬುಡಗಳ ಬಗ್ಗೆ ಸ್ಪಷ್ಟ ಮಾಹಿತಿ ಇದೆ. ಈಗಿನ ಕೊರೆತದಲ್ಲಿ ಹದಿನೈದು ಲಕ್ಷ ವರ್ಷಗಳ ಹಿಂದಿನ ಹಿಮಗಟ್ಟಿಯ ಆಳಕ್ಕೆ ಭೈರಿಗೆ ಹಾಕಿ, ಆಗ ಶಾಖವರ್ಧಕ ಅನಿಲ (ಗ್ರೀನ್ ಹೌಸ್‍ಗ್ಯಾಸ್) ಮತ್ತು ಇಂಗಾಲದ ಪ್ರಮಾಣ ಎಷ್ಟಿತ್ತು ಮತ್ತು ವಾಯುಗುಣ ಹೇಗಿತ್ತು ಎಂದು ಹುಡುಕುವ ಪ್ರಯತ್ನವಿದು. ಕೊರೆದು ತಂದ ಹಿಮದ ತುಂಡುಗಳ ಪೈಕಿ ಪರೀಕ್ಷೆಗೆಂದು ಆಯ್ದುಕೊಂಡ ತುಂಡನ್ನು ನಿರ್ವಾತದ ಫ್ಲಾಸ್ಕ್‌ಗೆ ಹಾಕಿ, ಅಲ್ಲಿ ಮೊದಲೇ ಇರುವ ಗಾಳಿಯನ್ನು ಸಂಪೂರ್ಣವಾಗಿ ಹೊರಹಾಕಿ ನಂತರ ಹಿಮವನ್ನು ಬಿಸಿ ಮಾಡಿ ಕರಗಿಸಿ, ಪದರಗಳಲ್ಲಿ ಸಿಕ್ಕಿಹಾಕಿಕೊಂಡಿರುವ ಗಾಳಿಯನ್ನು ಆವಿ ರೂಪದಲ್ಲಿ ಹೊಮ್ಮಿಸಿ, ಅತ್ಯಾಧುನಿಕ ಲ್ಯಾಬ್‍ಗಳ ಮಾಸ್ ಸ್ಪೆಕ್ಟ್ರೋಮೀಟರ್‌ನ ಹೈವೋಲ್ಟೇಜ್ ನಳಿಕೆಯಲ್ಲಿ ಹಾಯಿಸಿ, ಮೂಲವಸ್ತುಗಳ ಐಸೊಟೋಪುಗಳ ನೆರವಿನಿಂದ ಅದರಲ್ಲಿ ಎಷ್ಟು ಪ್ರಮಾಣದ ಇಂಗಾಲ ಮತ್ತು ಇಂಗಾಲದ ಡೈ ಆಕ್ಸೈಡ್ ಇತ್ತು ಎಂಬುದನ್ನು ಪತ್ತೆ ಮಾಡಲಾಗುತ್ತದೆ.

ಅಂಟಾರ್ಕ್ಟಿಕಾದಲ್ಲಿ ನಾಲ್ಕು ಕೋಟಿ ವರ್ಷಗಳಿಂದಲೂ ಹಿಮದ ಸ್ತರಗಳು ಬೆಳೆಯುತ್ತಿವೆ. ಅಧ್ಯಯನದ ಪ್ರಕಾರ, ಅಂಟಾರ್ಕ್ಟಿಕಾದಲ್ಲಿ 3 ಕೋಟಿ ಘನ ಕಿ.ಮೀ.ನಷ್ಟು ಹಿಮವಿದೆ. ಜಗತ್ತಿನ ಶೇ 90ರಷ್ಟು ಸಿಹಿನೀರು ಮಂಜುಗಡ್ಡೆಯ ರೂಪದಲ್ಲಿ ಅಂಟಾರ್ಕ್ಟಿಕಾದಲ್ಲೇ ಇದೆ. ಒಂದು ಕೋಟಿ ನಲವತ್ತು ಲಕ್ಷ ಚದರ ಕಿ.ಮೀ. ವಿಸ್ತೀರ್ಣದ ಅಂಟಾರ್ಕ್ಟಿಕಾದಲ್ಲಿ ಅತೀ ತಂಪು, ಗಂಟೆಗೆ 250 ಕಿ.ಮೀ. ವೇಗದ ಬೀಸುಗಾಳಿ, ಆರು ತಿಂಗಳು ನಿರಂತರ ಹಗಲು ಮತ್ತಿನ್ನಾರು ತಿಂಗಳು ನಿರಂತರ ರಾತ್ರಿ ಇರುತ್ತದೆ. ಶಾಖವರ್ಧಕ ಅನಿಲಗಳು ಅಂಟಾರ್ಕ್ಟಿಕಾದ ತಾಪಮಾನವನ್ನು ಕಳೆದ ನಲವತ್ತು ವರ್ಷಗಳಲ್ಲಿ ಎರಡೂವರೆ ಡಿಗ್ರಿ ಸೆಲ್ಷಿಯಸ್‍ನಷ್ಟು ಹೆಚ್ಚಿಸಿವೆ. ಪ್ರಖ್ಯಾತ ಲಾರ್ಸೆನ್ ಐಸ್ ಶೆಲ್ಫ್ ಶೇ 40ರಷ್ಟು ಕರಗಿದೆ.

12 ಲಕ್ಷ ವರ್ಷಗಳ ಹಿಂದೆ ಭೂಗೋಳದ ವಾಯುಗುಣ ಪ್ರತೀ 40,000 ವರ್ಷಗಳಿಗೊಮ್ಮೆ ಬದಲಾಗುತ್ತಿತ್ತು. ಈಗ ಒಂದು ಲಕ್ಷ ವರ್ಷಗಳಿಗೊಮ್ಮೆ ಬದಲಾಗುತ್ತಿದೆ ಎಂದು ಪತ್ತೆಯಾಗಿದೆ. ವಾಲಿಕೊಂಡಿರುವ ಭೂಮಿಯ ಕಕ್ಷೆಯಲ್ಲಿ ಸ್ವಲ್ಪ ಕುಲುಕಾಟವಾದಾಗ ಪ್ರತೀ ಲಕ್ಷ ವರ್ಷಕ್ಕೊಮ್ಮೆ ಭೂಮಿಗೆ ಶೀತ ಹಿಡಿದು ಹಿಮಯುಗ ಬರುತ್ತದೆ. ಇದನ್ನು ಮಿಲಂಕೋವಿಚ್ ಸೈಕಲ್ ಎನ್ನುತ್ತಾರೆ. ಭೂಮಿಯ ಮೇಲೆ ವಾಸ ಮಾಡುವ ಜೀವಿಗಳೇ ವಾಯುಗುಣದ ಭವಿಷ್ಯವನ್ನು ನಿರ್ಧರಿಸುತ್ತವೆ ಎಂಬುದು ಗೊತ್ತಾದ ಮೇಲೆ ಪ್ರಾಣಿ ಮತ್ತು ಸಸ್ಯ ಸಂಕುಲಗಳ ನಡುವಿನ ನಿರಂತರ ಯುದ್ಧದ ವೇಗವನ್ನು ಕಡಿಮೆಗೊಳಿಸುವುದು ಮತ್ತು ನಿಯಂತ್ರಣದಲ್ಲಿಡುವುದು ಅನಿವಾರ್ಯವಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.